ಶನಿವಾರ, ಜನವರಿ 18, 2020
21 °C

ಒಂದೂರ ಭಾಷೆಯೊಂದೂರಲಿಲ್ಲ

ಓ.ಎಲ್. ನಾಗಭೂಷಣಸ್ವಾಮಿ Updated:

ಅಕ್ಷರ ಗಾತ್ರ : | |

ಇದು ಅಕ್ಕನ ವಚನವೊಂದರ ಮಾತು. ಒಂದು ಊರಿನ ಭಾಷೆ ಇನ್ನೊಂದು ಊರಿನಲಿಲ್ಲ. ಹಾಗೆಯೇ ಒಂದೂರಿನ ಭಾಷೆ ಒಂದೇ ಊರಿನಲ್ಲೂ ಇರುವುದಿಲ್ಲ. ಜಗತ್ತಿನಲ್ಲಿ ಎಷ್ಟು ಭಾಷೆಗಳಿವೆ ಅನ್ನುವುದು ಹೊರ ನೋಟದ ಕುತೂಹಲ.ಇರುವ ಒಂದೊಂದು ಭಾಷೆಯೂ ಒಂದೊಂದು ಜಗತ್ತನ್ನು ಸೃಷ್ಟಿಮಾಡಿಕೊಂಡಿದೆ ಅನ್ನುವುದು ಒಳನೋಟದ ಸತ್ಯ.ಊರೂರಿನ ಪರಿಸರಕ್ಕೆ ಅಪಾಯ ಬಂದಿರುವ ಹಾಗೆಯೇ ಊರ ಭಾಷೆಗಳಿಗೂ ಅಪಾಯ ಬಂದಿದೆ. ಭಾಷೆಗಳ ವೈವಿಧ್ಯವೂ ಮಿಲಿಯಗಟ್ಟಲೆ ವರ್ಷಗಳಿಂದ ಬೆಳೆದು ಬಂದದ್ದು. ಭಾಷೆಯೊಂದು ಇಲ್ಲವಾದಾಗ ಅದು ಕಟ್ಟಿಕೊಂಡ ಇಡೀ ಜಗತ್ತು ಇಲ್ಲವಾಗುತ್ತದೆ. ಹಾಗಾಗಿ ಕಾಣುವ ಜಗತ್ತಿನಲ್ಲಿ ಎಷ್ಟು ಭಾಷೆಗಳಿವೆ ಅನ್ನುವುದನ್ನು ತಿಳಿಯುವುದು ಮುಖ್ಯ.ಪರಿಸರದ ಬಗ್ಗೆ ಇರುವಂತೆಯೇ ಜಗತ್ತಿನಲ್ಲಿ ಭಾಷೆಗಳ ಬಗ್ಗೆಯೂ ಅಪಾರವಾದ ಅಜ್ಞಾನವೂ ಉದಾಸೀನವೂ ಇದೆ. ಎಷ್ಟು ಭಾಷೆಗಳ ಹೆಸರು, ಅವು ಇರುವ ಪ್ರದೇಶಗಳ ಹೆಸರು ನಮಗೆ ಗೊತ್ತು? ವಿದ್ಯಾವಂತರನ್ನು ಕೇಳಿದರೂ `ಇದ್ದಾವು ನೂರಾರು~ ಅಂದಾರು. ಸುಮಾರು ಒಂದು ಸಾವಿರ ಭಾಷೆಗಳು ಇರಬಹುದು ಎಂದು 1911ರಲ್ಲಿ `ಬ್ರಿಟಾನಿಕಾ ವಿಶ್ವಕೋಶ~ ಅಂದಾಜುಮಾಡಿತ್ತು. ಇಪ್ಪತ್ತನೆಯ ಶತಮಾನದಲ್ಲಿ ಈ ಸಂಖ್ಯೆ ಬೆಳೆಯುತ್ತ ಹೋಯಿತು.ಭಾಷೆಗಳನ್ನು ಎಣಿಸಲು ಮೊದಲು ಮುಂದಾದ್ದು ಮಿಶನರಿ ಸಂಸ್ಥೆಗಳು. ಬೈಬಲನ್ನು ಇನ್ನೂ ಎಷ್ಟು ಭಾಷೆಗಳಿಗೆ ಅನುವಾದ ಮಾಡಬೇಕು ಅನ್ನುವುದು ಅವರಿಗೆ ಗೊತ್ತಾಗಬೇಕಾಗಿತ್ತು. 1997ರ ಹೊತ್ತಿಗೆ ಬೈಬಲಿನ ಕನಿಷ್ಠ ಕೆಲವು ಭಾಗಗಳಾದರೂ 2197 ಭಾಷೆಗಳಿಗೆ ಅನುವಾದವಾಗಿತ್ತು.ಜಗತ್ತಿನ ಭಾಷೆಗಳ ಅತ್ಯಂತ ವ್ಯಾಪಕ ಎಣಿಕೆ ನಡೆದದ್ದು ಎತ್ನೊಲಾಗ್ ಅನ್ನುವ ಸಂಸ್ಥೆಯಿಂದ (http://www.ethnologue.com)ಅದು ನಡೆಸಿರುವ ಸಮೀಕ್ಷೆಯಂತೆ ಈಗ 6809 ಪ್ರತ್ಯೇಕ ಭಾಷೆಗಳಿವೆ, ಸುಮಾರು 250 ಭಾಷಾ ವರ್ಗಗಳಿವೆ; ಏಶಿಯಾದಲ್ಲಿ 2197 ಭಾಷೆಗಳು, ಯೂರೋಪಿನಲ್ಲಿ 230 ಭಾಷೆಗಳು ಬಳಕೆಯಲ್ಲಿವೆ; ಪಪುವಾ ನ್ಯೂಗಿನಿಯಲ್ಲಿ 40-50 ಭಾಷಾ ವರ್ಗಗಳಿಗೆ ಸೇರಿದ 832 ಭಾಷೆಗಳನ್ನು 3.9 ಮಿಲಿಯನ್ ಜನ ಬಳಸುತ್ತಾರೆ ಅನ್ನುವಂಥ ವಿವರಗಳು ಸಿಕ್ಕಿವೆ.ಆದರೂ ಜಗತ್ತಿನಲ್ಲಿ ಎಷ್ಟು ಭಾಷೆಗಳಿವೆ ಅನ್ನುವುದು ನಿಖರವಾಗಿ ಗೊತ್ತಿಲ್ಲ, ಗೊತ್ತಾಗಲು ಸಾಧ್ಯವೂ ಇಲ್ಲ.ಕಾವೇರಿ ನದಿ ಯಾವಾಗ, ಎಲ್ಲಿ ಕಾವೇರಿಯಾಗುತ್ತದೆ ಅನ್ನುವಷ್ಟೇ ಕಷ್ಟದ ಪ್ರಶ್ನೆ ಇದು. ಕಾವೇರಿಯು ತಲಕಾವೇರಿಯಿಂದ ಕಡಲಿಗೆ ಸೇರುವವರೆಗೂ `ಒಂದೇ~ ನದಿಯೋ `ಹಲವು~ ನದಿಗಳೋ? ಕಾವೇರಿಗೆ ಉಪನದಿಗಳು ಸೇರುತ್ತವೋ ಅಥವ ಕಡಲಿನೆಡೆಗೆ ಹರಿಯುತ್ತಿರುವ ಹಲವು ಉಪನದಿಗಳೊಂದಿಗೆ ಕಾವೇರಿ ಸೇರಿಕೊಳ್ಳುತ್ತದೋ? ಎಲ್ಲಿ ಒಂದು ಭಾಷೆ ಮುಗಿದು ಇನ್ನೊಂದು ತೊಡಗುತ್ತದೆ? ಭಾಷೆ ಅಂದರೇನು ಅನ್ನುವ ಖಚಿತವಾದ, ಸಮರ್ಪಕವಾದ ವಿವರಣೆ ಅಸಾಧ್ಯ.`ಕವಿರಾಜಮಾರ್ಗ~ದಲ್ಲಿಯೇ ಕನ್ನಡಂಗಳ್ ಅನ್ನುವ ಮಾತು, ಕನ್ನಡದ ವೈವಿಧ್ಯಗಳನ್ನು ಹೆಸರಿಸಲು ತೊಡಗಿದರೆ ಸಾವಿರ ಹೆಡೆಯ ವಾಸುಕಿಗೂ ಬೇಸರವಾಗುತ್ತದೆ ಅನ್ನುವ ಮಾತು ಇದೆ. ಭಾಷೆಗಳ ಭಿನ್ನತೆಯನ್ನು ಸಮರ್ಪಕವಾಗಿ ವಿವರಿಸುವ ಕಷ್ಟ ಕವಿರಾಜಮಾರ್ಗದ ಲೇಖಕನಿಗೆ ಇತ್ತು. ಸಂಪರ್ಕ, ಸಂವಹನದ ನಿರಂತರತೆಯನ್ನು ಗುರುತಿಸಬಹುದೇ ಹೊರತು ಅದರ ಭಿನ್ನತೆಗಳನ್ನು ಖಚಿತವಾಗಿ ಗುರುತಿಸಲು ಆಗುವುದಿಲ್ಲ.ಯಾವ ಎರಡು ಬಗೆಯ ಸಂಪರ್ಕ, ಸಂವಹನದ ರೂಪಗಳನ್ನು ಬೇರೆ ಬೇರೆ ಭಾಷೆ ಎಂದು ಗುರುತಿಸಬೇಕು, ಯಾವ ರೂಪಗಳನ್ನು ಒಂದೇ ಭಾಷೆಯ ಭಿನ್ನ ರೂಪ ಎಂದು ಗುರುತಿಸಬೇಕು ಅನ್ನುವದಕ್ಕೆ ನಿಸ್ಸಂದಿಗ್ಧವಾದ ಮಾಪಕವಿಲ್ಲ. ಭೌಗೋಳಿಕ, ಸಾಮಾಜಿಕ ಸ್ತರಗಳು, ಲಿಂಗಾಧಾರಿತ ವ್ಯತ್ಯಾಸಗಳು, ಆಡುವವರ ವಯೋಮಾನ, ಸಂದರ್ಭ, ಶೈಲಿಗಳ ಸಂಸ್ಕೃತಿಯ ಹಿನ್ನಲೆ ಈ ಕಾರಣಗಳಿಂದ ಭಾಷೆಯ ಭಿನ್ನತೆ ಎದುರಾಗಬಹುದು. ಇವು ಬೇರೆ ಭಾಷೆಗಳು. ಇವು ಒಂದೇ ಭಾಷೆಯ ಭಿನ್ನರೂಪಗಳು ಎಂದು ಬೇರ್ಪಡಿಸುವುದು ಕಷ್ಟ.ಭಾಷೆಗಳ ನಡುವೆ ರಾಚನಿಕವಾದ ಹೋಲಿಕೆ ವ್ಯತ್ಯಾಸಗಳು ಇರುತ್ತವೆ, ನಿಜ. ಚೀನೀಸ್-ಕನ್ನಡ, ಟರ್ಕಿಶ್-ತಮಿಳು ಇಂಥವು ಬೇರೆ ಬೇರೆ ಅನ್ನುವುದಕ್ಕೆ ಯಾವ ಭಾಷಾಶಾಸ್ತ್ರಿಯ ನೆರವೂ ಬೇಡ. ಆದರೆ ರಾಚನಿಕವಾಗಿ ತೀರ ನಿಕಟವಾಗಿರುವ ಸ್ವೀಡಿಶ್, ಡೇನಿಶ್ ಮತ್ತು ನಾರ್ವೇಜಿಯನ್‌ಗಳನ್ನು ಭಿನ್ನ ಭಾಷೆಗಳೆಂದು ಕರೆಯುವುದೇಕೆ? ಹಿಂದಿ, ಉರ್ದು ಮತ್ತು ಪಂಜಾಬಿ ಭಾಷೆಗಳು ರಚನೆಯ ವಿಷಯದಲ್ಲಿ ಮತ್ತು ಪದಕೋಶದ ವಿಚಾರದಲ್ಲಿ ತೀರ ನಿಕಟ, ಅವನ್ನು ಭಿನ್ನ ಭಾಷೆಗಳು ಅನ್ನುವುದು ಯಾಕೆ? ಕನ್ನಡ ಮತ್ತು ಮರಾಠಿ ರಚನೆಯ ವಿಷಯದಲ್ಲಿ ಪರಸ್ಪರ ಹತ್ತಿರ ಪದಗಳ ವಿಚಾರದಲ್ಲಿ ದೂರ. ಹಾಗಾದರೆ ಭಾಷೆಗಳ ಭಿನ್ನತೆಯನ್ನು ಗುರುತಿಸಲು ಪದಕೋಶದ ವ್ಯತ್ಯಾಸ ಕಾರಣವೋ ರಚನೆಯ ವ್ಯತ್ಯಾಸಗಳು ಕಾರಣವೋ?ಭೌಗೋಳಿಕ ವ್ಯಾಪ್ತಿಯನ್ನು ಆಧಾರವಾಗಿಟ್ಟುಕೊಂಡು ಭಾಷೆಗಳ ಪ್ರತ್ಯೇಕತೆಯನ್ನು ಗುರುತಿಸುವುದೂ ಸಮಸ್ಯೆಯೇ. ಸಂಪರ್ಕದ ಧಾರೆ ನಿರಂತರವಾಗಿದ್ದರೂ ಭಾಷೆ ಬೇರೆಯಾಗಿರುತ್ತದೆ. ಬೀದರ್‌ನಿಂದ ಹೈದರಾಬಾದಿಗೆ ನಡೆದು ಹೋಗುತ್ತೀರಿ ಅಂದುಕೊಳ್ಳಿ. ಬೆಳಗಿನ ನಾಷ್ಟಾ ಕೊಟ್ಟವರು ರಾತ್ರಿ ನಿಮಗೆ ಊಟ ಕೊಟ್ಟವರ ಮಾತನ್ನು ಖಂಡಿತ ಅರ್ಥಮಾಡಿಕೊಳ್ಳಬಲ್ಲರು. ಆದರೆ ಪಯಣದ ಕೊನೆಗೆ ನೀವು ತೆಲುಗಿನಲ್ಲಿರುತ್ತೀರಿ.

 

ದಾರಿಯುದ್ದಕ್ಕೂ ನಿಮಗೆ ಸಿಕ್ಕ ಜನ ತಮ್ಮನ್ನು ತಾವು ಪರಸ್ಪರ ಅರ್ಥಮಾಡಿಕೊಳ್ಳುತಿದ್ದರೂ ಕನ್ನಡ ಎಲ್ಲಿ ಮುಗಿದು ತೆಲುಗು ಎಲ್ಲಿ ಶುರುವಾಯಿತು ಅನ್ನುವುದನ್ನು ಹೇಳುವುದು ಹೇಗೆ? ಕಾವೇರಿಯಿಂದ ಗೋದಾವರಿಯವರೆಗೆ ಯಾವ ಭಾಷೆ ಎಲ್ಲಿ ಮುಗಿದು ಎಲ್ಲಿ ಹೊಸ ಭಾಷೆ ತೊಡಗುತ್ತದೆ ಅನ್ನುವುದನ್ನು ಭೌಗೋಳಿಕವಾಗಿ ಗುರುತಿಸಲು ಆಗುವುದೇ ಇಲ್ಲ. ಆಸ್ಟ್ರೇಲಿಯದಲ್ಲಿ ಈ ನಿರಂತರತೆ ಸಾವಿರಾರು ಮೈಲು ವ್ಯಾಪ್ತಿಯದು. ಸಾವಿರ ಮೈಲಿನ ಎರಡು ತುದಿಗಳಲ್ಲಿ ಇರುವ ಭಾಷೆ ಪರಸ್ಪರರಿಗೆ ಅರ್ಥವಾಗಲಾರದು.ಎಷ್ಟು ಭಾಷೆಗಳಿವೆ ಈ ಅಂತರದಲ್ಲಿ ಎಂದು ಪತ್ತೆ ಹಚ್ಚುವುದು ಹೇಗೆ?

ಪರಸ್ಪರ ಅರ್ಥವಾಗುವಂತೆ ಇರುವುದು ಒಂದು ಭಾಷೆ, ಅರ್ಥವಾಗದಿರುವಂಥವು ಬೇರೆ ಭಾಷೆಗಳು ಅನ್ನುವ ನಿಲುವೂ ಉಪಯೋಗಕ್ಕೆ ಬರುವುದಿಲ್ಲ. ಭಾಲ್ಕಿಯ ಒಬ್ಬ ವ್ಯಕ್ತಿ ಗೌರೀಬಿದನೂರಿನ ವ್ಯಕ್ತಿಯ ಮಾತು ಅರ್ಥಮಾಡಿಕೊಳ್ಳಬಲ್ಲ, ಆದರೆ ಗೌರೀಬಿದನೂರಿನವನಿಗೆ ಭಾಲ್ಕಿಯವನ ಮಾತು ತಿಳಿಯುವುದಿಲ್ಲ, ಚಿಕ್ಕಮಗಳೂರಿನ ಮತ್ತೊಬ್ಬ ವ್ಯಕ್ತಿಗೆ ಅವರಿಬ್ಬರ ಮಾತೂ ತಿಳಿಯುವುದಿಲ್ಲ ಅನ್ನುವ ಸನ್ನಿವೇಶವಿದ್ದರೆ ಇವನ್ನೆಲ್ಲ ಕನ್ನಡದ ಉಪಭಾಷೆಗಳೆನ್ನಬೇಕೋ, ಬೇರೆ ಬೇರೆ ಅನ್ನಬೇಕೋ ಅನ್ನುವಂಥ ಪ್ರಶ್ನೆ ಇದು.ವ್ಯಕ್ತಿಯ ವಯಸ್ಸು, ದೊರೆತಿರುವ ಶಾಲಾಶಿಕ್ಷಣದ ಗುಣಮಟ್ಟ, ಇತರ ಭಾಷೆಗಳಿಗೆ ತೆರೆದುಕೊಳ್ಳಲು ಇರುವ ಅವಕಾಶ, ಕಲಿಕೆಯ ಶೈಲಿ, ಉತ್ಸಾಹ, ಧೈರ್ಯ, ಪ್ರಚೋದನೆ, ದಣಿವು ಇವೆಲ್ಲ ಅಂಶಗಳೂ ಮತ್ತೊಂದು ಭಾಷೆಯೋ ಉಪಭಾಷೆಯೋ ಅರ್ಥವಾಗುವುದೋ ಇಲ್ಲವೋ ಅನ್ನುವುದನ್ನು ನಿರ್ಧರಿಸುವ ಅಂಶಗಳು.ಅಕ್ಷರಸ್ಥಗೊಂಡು ಪ್ರಮಾಣೀಕೃತವಾಗಿರುವಂಥವು ಮಾತ್ರ ಭಾಷೆಗಳು, ಲಿಪಿಯಿಲ್ಲದೆ, ಸಾಹಿತ್ಯದ ಬರವಣಿಗೆಯ ಪರಂಪರೆ ಇಲ್ಲದೆ ಇರುವಂಥವು ಉಪಭಾಷೆ, ಸ್ಥಳೀಯ ಭಾಷೆ, ಗ್ರಾಮ್ಯ, ಇತ್ಯಾದಿ ಅನ್ನುವುದು ಭಾಷೆಯ ಎಣಿಕೆಯನ್ನು ಸುಲಭಗೊಳಿಸಬಹುದಾದರೂ ಸರಿಯಾದ ಮಾನದಂಡವಲ್ಲ.ಆಗ ಲಿಪಿ ಇಲ್ಲದ ಅಸಂಖ್ಯಾತ ಭಾಷೆಗಳ ಗತಿ ಏನು? ಲಿಪಿ ಇದ್ದರೂ ಪ್ರಮಾಣೀಕರಣಗೊಳ್ಳುವ ಭಾಷಾ ರೂಪ ನಿರ್ಧಾರವಾಗುವುದು ಅದನ್ನು ಬಳಸುವ ಶಿಕ್ಷಣ ಪಡೆದ, ಅಧಿಕಾರವುಳ್ಳ, ಹಣಬಲ ಉಳ್ಳ ಕಡಿಮೆ ಸಂಖ್ಯೆಯ ಜನಸಮೂಹದ ಕಾರಣದಿಂದ. ಪ್ರಮಾಣೀಕೃತ ಭಾಷಾ ರೂಪವೆನ್ನುವುದು ರಾಜಕೀಯ ಅಧಿಕಾರದ ವಲಯದಲ್ಲಿರುವ ಜನಸಮೂಹ ಬಳಸುವ ಭಾಷಾರೂಪವಷ್ಟೇ. ಹಾಗಾಗಿ ಲಿಪಿ ಇದ್ದರೂ ಅಧಿಕಾರ ವಂಚಿತ, ಶಿಕ್ಷಣವಂಚಿತ ಜನಸಮೂಹಗಳು ಬಳಸುವ ಭಾಷಾ ರೂಪಗಳು ಉದಾಸೀನಕ್ಕೆ ಗುರಿಯಾಗಿರುತ್ತವೆ.ತಾತ್ಪರ್ಯವಿಷ್ಟೇ: ಭಾಷೆಯೊಂದು ಇತರ ಭಾಷೆಗಳಿಗಿಂತ ಪ್ರತ್ಯೇಕವಾದ, ಭಿನ್ನವಾದ ಭಾಷೆ ಎಂದು ಗುರುತಿಸುವುದಕ್ಕೆ ಭಾಷಾಶಾಸ್ತ್ರೀಯವಾದ ಕಾರಣಗಳಿಗಿಂತ ಅದನ್ನು ಬಳಸುವ ಜನರ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಬಲ್ಯ ಮುಖ್ಯ ಕಾರಣವಾಗಿರುತ್ತದೆ. ಯೂರೋಪಿನ `ಭಾಷೆ~ಗಳು ಮತ್ತು ಆಫ್ರಿಕದ `ಉಪಭಾಷೆ~ಗಳನ್ನು ಕುರಿತು ಹೇಳುವಾಗಲೂ ಇದೇ ಧೋರಣೆ ಗುಪ್ತವಾಗಿರುತ್ತದೆ.ಯಿಡ್ಡಿಶ್ ಭಾಷೆಗೆ ದೀರ್ಘಕಾಲ ಯಾವುದೇ ರಾಜಕೀಯ ಚಹರೆ ಇಲ್ಲದಿದ್ದ ಕಾರಣ ಅದನ್ನು ಉಪಭಾಷೆ ಎಂದೇ ಕರೆಯಲಾಗುತ್ತಿತ್ತು. ಭಾಷೆಗೆ ರಾಜ್ಯದ ಸೀಮೆ ಇದೆಯೇ, ಆರ್ಥಿಕ ಬಲ ಇದೆಯೇ, ಸಾಹಿತ್ಯಕ ಸಂಪ್ರದಾಯ ಇದೆಯೇ, ಬರವಣಿಗೆಯ ಲಿಪಿ ಇದೆಯೇ, ಇತ್ಯಾದಿ ಅಧಿಕಾರ, ಅಧಿಕೃತತೆ ಮತ್ತು ಸಂಸ್ಕೃತಿಯ ಪ್ರಭಾವಳಿಗಳ ಆಧಾರದ ಮೇಲೆ ಯಾವುದು ಭಾಷೆ, ಯಾವುದು ಉಪಭಾಷೆ ಅನ್ನುವುದು ನಿರ್ಧಾರವಾಗುತ್ತದೆ.ಚೀನೀ ಭಾಷೆಯ ಉಪಭಾಷೆಗಳೆನ್ನಲಾಗುವ ಕಾಂಟೊನೀಸ್, ಹಕ್ಕಾ, ಶಾಂಘೈನೀಸ್ ಇತ್ಯಾದಿಗಳು ಪರಸ್ಪರ ಭಿನ್ನ, ಅಲ್ಲಿ ಪ್ರಬಲವಾಗಿರುವ ಮಾಂಡ್ರಿಯನ್‌ಗಿಂತ ತೀರ ಭಿನ್ನ. ಅವು ಪರಸ್ಪರ ಅರ್ಥವಾಗುವ ನುಡಿಗಳೂ ಅಲ್ಲ. ಆದರೂ ಅವೆಲ್ಲವೂ ಒಂದೇ ರಾಷ್ಟ್ರಕ್ಕೆ, ಒಂದೇ ಬರವಣಿಗೆಯ ವ್ಯವಸ್ಥೆಯನ್ನು ಹಂಚಿಕೊಂಡು, ಒಂದೇ ಸರ್ಕಾರದ ಧೋರಣೆಗಳಿಗೆ ಒಳಪಟ್ಟಿವೆಯೆಂದೇ ಅವನ್ನೆಲ್ಲ ಉಪಭಾಷೆ ಎಂದು ಗುರುತಿಸುವುದಕ್ಕೆ ಕಾರಣ.ಆದರೆ ಬಲು ಮಟ್ಟಿಗೆ ಒಂದೇ ಥರದ ರಚನೆಯುಳ್ಳ ಹಿಂದಿ ಮತ್ತು ಉರ್ದು, ಎರಡು ಬೇರೆ ರಾಷ್ಟ್ರಗಳೊಡನೆ ಗುರುತಿಸಿಕೊಂಡು, ಎರಡು ಬೇರೆಯ ಬರವಣಿಗೆಯ ವ್ಯವಸ್ಥೆಗಳನ್ನು ಹೊಂದಿದ್ದು, ಭಿನ್ನ ಭಾಷೆಗಳೆನಿಸಿಕೊಂಡಿವೆ. ಯುಗೋಸ್ಲಾವಿಯಾ ಛಿದ್ರವಾದ ಮೇಲೆ ಅಲ್ಲಿ ಬಳಕೆಯಲ್ಲಿದ್ದ ಸೆರ್ಬೊ ಕ್ರೊಯೇಶಿಯನ್ ಭಾಷೆ ಈಗ ಸೆರ್ಬಿಯನ್, ಕ್ರೋಯೇಶಿಯನ್ ಮತ್ತು ಬೋಸ್ನಿಯನ್ ಎಂದು ಮೂರಾಗಿ ತಲೆ ಎತ್ತಿದೆ.ವಾಕ್ಯ ನಿರ್ಮಾಣ ಮತ್ತು ಅರ್ಥನಿರ್ಮಾಣದ ಸಾಮರ್ಥ್ಯವನ್ನು ವಿವರಿಸುವ ವ್ಯಾಕರಣವನ್ನು ಗಮನಿಸಿ ಭಾಷೆಗಳ ಭಿನ್ನತೆ ಗುರುತಿಸಬಹುದೇ? ವ್ಯಾಕರಣ ಕೆಲವು ಅಂಶಗಳ ಮಟ್ಟಿಗೆ ಎಲ್ಲ ಭಾಷೆಗಳಿಗೂ ಸಾಮಾನ್ಯ, ಕೆಲವು ಮಟ್ಟಿಗೆ ವಿಶಿಷ್ಟ. ನಿಷೇಧ ಹೇಳುವುದು ಹೇಗೆ, ಗುಣವಾಚಕಗಳ ಬಳಕೆ ಹೇಗೆ, ಸ್ತ್ರೀಲಿಂಗ ಪುಲ್ಲಿಂಗಗಳ ವ್ಯತ್ಯಾಸ ಇತ್ಯಾದಿ ಹತ್ತು ಮಾಪಕಗಳನ್ನು ಇಟ್ಟುಕೊಂಡು ಕನಿಷ್ಠ ಎರಡಾದರೂ ಮಾಪಕಗಳು ಬೇರೆಯಾಗಿದ್ದರೆ ಅದು ಭಿನ್ನ ಭಾಷೆ ಅಂದುಕೊಂಡರೆ ಆಗ ಉತ್ತರ ಇಟಲಿಯ ಒಂದು ಪ್ರದೇಶದಲ್ಲೇ 300ರಿಂದ 500 ಭಿನ್ನ ವ್ಯಾಕರಣ ಸಾಧ್ಯತೆಗಳನ್ನು ಗುರುತಿಸಬಹುದಂತೆ.

 

ಇನ್ನು ಜಗತ್ತಿನ ಎಲ್ಲ ಭಾಷೆಗಳ ವ್ಯಾಕರಣ ಮಾಪಕಗಳನ್ನು ಸುಮಾರು 25-30 ಎಂದು ಇಟ್ಟುಕೊಂಡರೆ ಆಗ ಈ ಅರ್ಥದಲ್ಲಿ ಭಿನ್ನ ಭಾಷೆಗಳ ಸಂಖ್ಯೆ ಒಂದು ಬಿಲಿಯನ್ ದಾಟುತ್ತದೆ. ನಮಗೆ ಈಗ ಶೇ 5ರಷ್ಟು ಭಾಷೆಗಳ ವ್ಯಾಕರಣ ವಿವರಗಳು ಮಾತ್ರ ಗೊತ್ತಿವೆ ಅನ್ನುವ ಅಂದಾಜಿದೆ.ಭಾಷೆಗಳ ಪ್ರತ್ಯೇಕತೆಯನ್ನು ಗುರುತಿಸಲು ಇರುವ ತಾತ್ವಿಕವಾದ ಕಷ್ಟ, ಅದಕ್ಕಿಂತ ಮಿಗಿಲಾಗಿ ನಮ್ಮದಲ್ಲದ ಇತರ ಭಾಷೆಗಳ ಬಗ್ಗೆ ಸಾಮಾನ್ಯರಲ್ಲೂ ಆಡಳಿತಗಾರರಲ್ಲೂ ಇರುವ ಉದಾಸೀನ, ಆಧುನಿಕತೆಯ ಒತ್ತಡ ಇವೆಲ್ಲ ಸೇರಿ ಒಂದೊಂದು ಊರಿನ ಭಾಷೆಗೂ ಅಪಾಯ ಬಂದಿದೆ. 

ಪ್ರತಿಕ್ರಿಯಿಸಿ (+)