ಶುಕ್ರವಾರ, ಏಪ್ರಿಲ್ 3, 2020
19 °C

ಓಲೈಕೆ ರಾಜಕಾರಣದ ಸುತ್ತಮುತ್ತ

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ಓಲೈಕೆ ರಾಜಕಾರಣದ ಸುತ್ತಮುತ್ತ

ಇತ್ತೀಚೆಗೆ ದೆಹಲಿಯಲ್ಲಿ ನಡೆದಿದ್ದ ‘ಇಂಡಿಯಾ ಟುಡೆ’ ಸಮಾವೇಶದಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ನ ವರಿಷ್ಠ ನಾಯಕಿ ಸೋನಿಯಾ ಗಾಂಧಿ ಅವರು ಆಡಿದ ಮಾತೊಂದು ತೀವ್ರ ಚರ್ಚೆಗೆ ಆಸ್ಪದ ನೀಡಿದೆ. ‘ಕಾಂಗ್ರೆಸ್‌ ಪಕ್ಷವು ಮುಸ್ಲಿಮರ ಪರವಾಗಿದೆ ಎನ್ನುವ ಕಾರಣಕ್ಕೆ ಸಾಕಷ್ಟು ಬೆಲೆ ತೆತ್ತಿದೆ’ ಎಂದು ಅವರು ನೀಡಿರುವ ಹೇಳಿಕೆಯು ಭಾರತದ ಮುಸ್ಲಿಮರು, ಅವರ ಸಂಸ್ಕೃತಿ ಮತ್ತು ರಾಜಕೀಯದ ಬಗೆಗಿನ ಚರ್ಚೆಗೆ ಹೊಸ ವೇದಿಕೆ ನಿರ್ಮಿಸಿದೆ. ಖ್ಯಾತ ಅಂಕಣಕಾರರೂ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಹರ್ಷ ಮಂದರ್‌ ಮತ್ತು ರಾಮಚಂದ್ರ ಗುಹಾ ಅವರು ಈ ಬಗ್ಗೆ ತಮ್ಮ ಪತ್ರಿಕಾ ಅಂಕಣಗಳಲ್ಲಿ ಚರ್ಚಿಸಿದ್ದಾರೆ. ಸೋನಿಯಾ ಹೇಳಿಕೆಯ ರಾಜಕೀಯ ಅರ್ಥವನ್ನು ವಿವರವಾಗಿ ಚರ್ಚಿಸುವ ಅಗತ್ಯವೂ ಇದೆ.

ಈ ಚರ್ಚೆಯನ್ನು ಮುಸ್ಲಿಮರ ಸಂಸ್ಕೃತಿ, ಜೀವನಶೈಲಿ, ಸಂಕೇತಗಳಿಗೆ ಮಾತ್ರ ಸೀಮಿತಗೊಳಿಸುವುದು ಸಮರ್ಥನೀಯವಲ್ಲ. ಮುಸ್ಲಿಮರು ಅಥವಾ ಇತರ ಯಾವುದೇ ನಂಬಿಕೆಯವರು ಇರಲಿ, ಅವರು ತಮಗೆ ಇಷ್ಟವಾಗುವ ಸಂಕೇತಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇಂತಹ ಸಂಕೇತಗಳು ಅವರನ್ನು ರಾಜಕೀಯವಾಗಿ ಸಬಲರನ್ನಾಗಿಸಬಹುದೇ ಎನ್ನುವುದು ಪ್ರಶ್ನಾರ್ಹವಾಗಿದೆ.

ತಮ್ಮ ಪಕ್ಷದ ಕಾರ್ಯಕ್ರಮಗಳು ಮುಸ್ಲಿಮರ ಓಲೈಕೆಯ ರೂಪದಲ್ಲಿ ಇವೆ ಎನ್ನುವ ಬಿಜೆಪಿಯ ಪ್ರಚಾರವು ಬಹುಸಂಖ್ಯಾತ ಹಿಂದುಗಳಲ್ಲಿ ಇಂತಹ ಓಲೈಕೆ ರಾಜಕಾರಣದ ಬಗ್ಗೆ ತೀವ್ರ ಆತಂಕ ಮೂಡಿಸಿದೆ. ಇದರಿಂದ ‘ಹಿಂದುಗಳು ದುರ್ಬಲರಾಗುತ್ತಾರೆ. ಭಯೋತ್ಪಾದನೆ ಹೆಚ್ಚುತ್ತಿದೆ’ ಎನ್ನುವ ಆತಂಕ ಸೃಷ್ಟಿಸಲಾಗುತ್ತಿದೆ. ಇಂತಹ ಭಾವನೆ ನಿಜವೇ ಅಥವಾ ಅದೊಂದು ತಪ್ಪು ನಂಬಿಕೆಯೇ ಎನ್ನುವ ಪ್ರಶ್ನೆಗಳು ಹಲವಾರು ವರ್ಷಗಳವರೆಗೆ ಕಾಡುತ್ತಿದ್ದವು. ಆದರೆ, 2014ರ ವೇಳೆಗೆ ಇದು ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿದೆ.

1989ರಿಂದ ಈಚೆಗಿನ ಮಂಡಲ್‌– ಮಂದಿರ ವಿವಾದದ ಕಾಲಘಟ್ಟದಲ್ಲಿ ಬಹುಸಂಖ್ಯಾತರಲ್ಲಿಯೂ ‘ಅಲ್ಪಸಂಖ್ಯಾತ ಕೀಳರಿಮೆ’ಯ ಭಾವನೆ ಹೆಚ್ಚುತ್ತಿರುವ ವಿರೋಧಾಭಾಸವನ್ನು ನಾವು ಕಾಣುತ್ತಿದ್ದೇವೆ. ಇಂತಹ ಭಾವನೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್‌) ಮತ್ತು ಬಿಜೆಪಿ ತುಪ್ಪ ಸುರಿಯುತ್ತಿವೆ ಎಂದು ಕೆಲವರು ವಿರೋಧಿಸುತ್ತಾರೆ. ಈ ಪ್ರತಿಭಟನೆಯ ಸ್ವರೂಪವೂ ಅತಿಯಾಗಿರುತ್ತದೆ. ಇದೇ ರಾಜಕೀಯ.

ಒಂದು ಬಣದವರು ಅಲ್ಪಸಂಖ್ಯಾತರಲ್ಲಿ ಮನೆ ಮಾಡಿರುವ ಅಭದ್ರತೆಯ ಭಾವನೆಯನ್ನು ಬಂಡವಾಳ ಮಾಡಿಕೊಳ್ಳಲು ಮುಂದಾಗಿದ್ದಾರೆ. ಬಹುಸಂಖ್ಯಾತರೂ ಅಂತಹದ್ದೇ ಭಾವನೆಯಿಂದ ನರಳುವಂತೆ ಮನವೊಲಿಸುವಿಕೆಯಲ್ಲಿ ಇತರರು ತೊಡಗಿದ್ದಾರೆ.

ಕಾಂಗ್ರೆಸ್‌ ಈ ಆಟವನ್ನು ಏಕಪಕ್ಷೀಯವಾಗಿ ಬಹಳ ವರ್ಷಗಳವರೆಗೆ ತುಂಬ ಚಾಣಾಕ್ಷತೆಯಿಂದಲೇ ನಿಭಾಯಿಸುತ್ತ ಬಂದಿತ್ತು. 1985ರಲ್ಲಿ ಶಾ ಬಾನೊ ಪ್ರಕರಣವು ಅದರ ಇಂತಹ ರಾಜಕೀಯ ಆಟದ ರಭಸಕ್ಕೆ ತಡೆ ಒಡ್ಡಿತು. ಅಲ್ಲಿಯವರೆಗೆ ಕಾಂಗ್ರೆಸ್‌ಅನ್ನು ಬೆಂಬಲಿಸುತ್ತಾ ಬಂದಿದ್ದ ಹಿಂದುಗಳಲ್ಲಿನ ಬಹುಸಂಖ್ಯಾತರ ಮೇಲೆ ಪ್ರಭಾವ ಬೀರಲು ಆರೆಸ್ಸೆಸ್‌ ಮತ್ತು ಬಿಜೆಪಿಗೆ ಕಾಂಗ್ರೆಸ್‌ ಪಕ್ಷವೇ ಸದವಕಾಶ ಒದಗಿಸಿಕೊಟ್ಟಿತು. ಆನಂತರದ ದಿನಗಳಲ್ಲಿ ಕಾಂಗ್ರೆಸ್‌ ಯಾವತ್ತೂ ತನ್ನ ಸ್ವಂತ ಬಲದ ಮೇಲೆ ಕೇಂದ್ರದಲ್ಲಿ ಸಂಪೂರ್ಣ ಬಹುಮತ ಹೊಂದಲು ಸಾಧ್ಯವಾಗಿಲ್ಲ. ಇಷ್ಟೇ ಅಲ್ಲ, ಶೇ 10 ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಮರು ಇರುವ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಲು ಭಾರಿ ಬೆವರು ಸುರಿಸಬೇಕಾದ ಪರಿಸ್ಥಿತಿ ಉದ್ಭವಿಸಿದೆ.

ತಾನೇನು ಮಾತನಾಡುತ್ತಿದ್ದೇನೆ ಎನ್ನುವುದು ಸೋನಿಯಾ ಅವರಿಗೆ ಚೆನ್ನಾಗಿ ಗೊತ್ತಿತ್ತು. ಅಲ್ಪಸಂಖ್ಯಾತರ ಓಲೈಕೆಗಾಗಿ ತಮ್ಮ ಪಕ್ಷವು ಭಾರಿ ಬೆಲೆ ತೆತ್ತಿದೆ ಎಂದು ಕಾಂಗ್ರೆಸ್‌ ಏನೆಲ್ಲಾ ಬಡಾಯಿ ಕೊಚ್ಚಿಕೊಂಡರೂ ಸತ್ಯ ಸಂಗತಿ ಬೇರೆಯೇ ಇದೆ. ಪಕ್ಷವು ಮುಸ್ಲಿಮರಿಗಾಗಿ ಹೆಚ್ಚಿನದನ್ನೇನೂ ಮಾಡಿಲ್ಲ. ಮುಸ್ಲಿಮರಿಗೆ ನೀಡಿದ ಕೊಡುಗೆಗಳ ಕುರಿತು ಕಾಂಗ್ರೆಸಿಗರು ಉದ್ದಕ್ಕೂ ಆಷಾಢಭೂತಿತನ ಧೋರಣೆಯನ್ನು ಪ್ರದರ್ಶಿಸುತ್ತಲೇ ಬಂದಿದ್ದಾರೆ.

ಕೆಲ ಘಟನೆಗಳನ್ನು ಮುಸ್ಲಿಮರ ದೃಷ್ಟಿಕೋನದಿಂದ ನೋಡಿದರೆ ವಾಸ್ತವ ಏನು ಎನ್ನುವುದು ಅನುಭವಕ್ಕೆ ಬರುತ್ತದೆ. ಕಾಂಗ್ರೆಸ್‌ ಸರ್ಕಾರವು ಬಾಟ್ಲಾ ಹೌಸ್‌ ಎನ್‌ಕೌಂಟರ್‌ ನಡೆಸುತ್ತದೆ. ಇದರ ನೇತೃತ್ವ ವಹಿಸಿದ್ದ ಅಧಿಕಾರಿಗೆ ಮರಣೋತ್ತರವಾಗಿ ಅಶೋಕ ಚಕ್ರವನ್ನೂ ಪ್ರದಾನ ಮಾಡಲಾಗುತ್ತದೆ. ಆದರೆ, ಅದೇ ಪಕ್ಷದ ಪ್ರಧಾನ ಕಾರ್ಯದರ್ಶಿಯೊಬ್ಬರು ಈ ಎನ್‌ಕೌಂಟರ್‌ ನಕಲಿ ಎಂದು ಟೀಕಿಸುತ್ತಾರೆ. ‘ಈ ಘಟನೆ ಸೋನಿಯಾ ಗಾಂಧಿ ಅವರ ಕಣ್ಣಲ್ಲಿ ನೀರು ತರಿಸಿತ್ತು’ ಎಂದೂ ಹೇಳಿಕೊಳ್ಳುತ್ತಾರೆ.

‘ಯುಪಿಎ–1’ ಅಧಿಕಾರಕ್ಕೆ ಬಂದಾಗ ಪಕ್ಷವು ಭಯೋತ್ಪಾದನೆ ತಡೆ ಕಾಯ್ದೆ (ಪೋಟಾ) ರದ್ದುಪಡಿಸಿತ್ತು. ಈ ಕಾಯ್ದೆ ದುರ್ಬಳಕೆ ಮಾಡಿಕೊಂಡು ಮುಸ್ಲಿಮರನ್ನು ಬಲಿಪಶು ಮಾಡುವುದು ಅದರ ಗಮನಕ್ಕೆ ಬಂದಿತ್ತು. ಆದರೆ, ಹೊಸ ನಿಯಮಗಳನ್ನು ರೂಪಿಸಿ ಕಾರ್ಯರೂಪಕ್ಕೆ ತಂದಿದ್ದರಿಂದ ‘ಪೋಟಾ’ ರದ್ದತಿಯು ಬರೀ ತೋರಿಕೆಯ, ಕಣ್ಣೊರೆಸುವ ತಂತ್ರವಾಗಿತ್ತು ಎನ್ನುವುದು ದೃಢಪಟ್ಟಿತ್ತು. ಮುಸ್ಲಿಮರ ಸ್ಥಿತಿಗತಿ ಅಧ್ಯಯನ ಮಾಡಿ ವರದಿ ನೀಡಲು ಸಾಚಾರ್‌ ಸಮಿತಿಯನ್ನೂ ರಚಿಸಿತ್ತು. ಆದರೆ, ಸಮಿತಿಯು ನೀಡಿದ ಶಿಫಾರಸುಗಳನ್ನು ಸಂಪೂರ್ಣವಾಗಿ ಜಾರಿಗೆ ತರಲು ವಿಫಲಗೊಂಡಿತ್ತು.

‘ರಾಷ್ಟ್ರೀಯ ಸಂಪನ್ಮೂಲಗಳ ಮೇಲೆ ಅಲ್ಪಸಂಖ್ಯಾತರು ಮೊದಲ ಹಕ್ಕು ಹೊಂದಿದ್ದಾರೆ’ ಎಂದು ಮನಮೋಹನ್‌ ಸಿಂಗ್‌ ಅವರು ಹೇಳಿಕೆ ನೀಡಿದ್ದರು. ಆದರ್ಶದ ಮಾತನಾಡಲು ಇಂತಹ ಹೇಳಿಕೆ ನೀಡುವುದು ತುಂಬ ಸುಲಭ. ಆದರೆ, ರಾಜಕೀಯವಾಗಿ ಇಂತಹ ನಿಲುವು ತಳೆಯುವುದು ತಪ್ಪು ಹೆಜ್ಜೆಯಾಗಿರುತ್ತದೆ. ರಾಜಕಾರಣಿಗಳು ಯಾವತ್ತೂ ಚಳವಳಿಗಾರರಂತೆ ಮಾತನಾಡಬಾರದು ಮತ್ತು ನಡೆದುಕೊಳ್ಳಬಾರದು. ಈ ವಿಷಯದಲ್ಲಿಯೂ ಯಾವುದೇ ರಚನಾತ್ಮಕ ಕಾರ್ಯಕ್ರಮಗಳು ಜಾರಿಗೆ ಬರಲಿಲ್ಲ. ಹೀಗಾಗಿ ಮುಸ್ಲಿಮರು ಸಹಜವಾಗಿಯೇ ಇದು ಕೂಡ ಇನ್ನೊಂದು ಸುಳ್ಳು ಭರವಸೆ ಎಂಬ ತೀರ್ಮಾನಕ್ಕೆ ಬಂದರು.

ಇದೂ ಸೇರಿದಂತೆ ಹಲವಾರು ಕಾರಣಗಳಿಗಾಗಿ ಮುಸ್ಲಿಮರು ರಾಜ್ಯಮಟ್ಟದ ಮುಸ್ಲಿಂ ಮುಖಂಡರತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ತಮ್ಮದು ಮುಸ್ಲಿಮರ ಪಕ್ಷ ಎಂದು ಸೋನಿಯಾ ಅವರೇ ಸರಿಯಾಗಿ ಹೇಳಿರುವ ಕಾರಣಕ್ಕೆ ಹಿಂದುಗಳೂ ಸಹ ಕಾಂಗ್ರೆಸ್‌ನಿಂದ ದೂರವಾದರು.

ಹೀಗೆ ಕಾಂಗ್ರೆಸ್ ತನ್ನ ಅವನತಿಗೆ ತಾನೇ ಹೊಣೆ ಹೊರಬೇಕಾಗುತ್ತದೆ. ಜತೆಗೆ ಇಂತಹ ದೋಷಪೂರಿತ ರಾಜಕಾರಣದಿಂದಾಗಿ ಮುಸ್ಲಿಮರಿಗೆ ರಾಜಕೀಯವಾಗಿ ನ್ಯಾಯಯುತವಾಗಿ ಸಿಗಬೇಕಾದ ಮಹತ್ವ ಮತ್ತು ಪ್ರಾತಿನಿಧ್ಯವನ್ನೂ ನಿರಾಕರಿಸುತ್ತ ಬರಲಾಗಿದೆ.

ಯಾವುದೇ ಪಕ್ಷದಲ್ಲೂ ಮುಸ್ಲಿಂ ಸಂಸದರು ಬಹುಸಂಖ್ಯಾತರಾಗಿಲ್ಲ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರನ್ನು ಹೊರತುಪಡಿಸಿದರೆ, ಕೇಂದ್ರ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್‌ ದರ್ಜೆ ಸಚಿವರಾಗಿ ಮುಸ್ಲಿಮರಿಗೆ ಮಹತ್ವದ ಖಾತೆ ನೀಡಲಾಗುತ್ತಿಲ್ಲ. ಪ್ರಮುಖ ಸಚಿವಾಲಯಗಳಲ್ಲಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು, ಸೇನೆಯ ಉನ್ನತ ಹುದ್ದೆ ಮತ್ತು ಬೇಹುಗಾರಿಕಾ ಪಡೆಗಳ ಮುಖ್ಯಸ್ಥರ ಹುದ್ದೆಗಳಲ್ಲಿ ಮುಸ್ಲಿಮರಿಗೆ ಸೂಕ್ತ ಪ್ರಾತಿನಿಧ್ಯ ಇಲ್ಲ. ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಶೇ 20ರಷ್ಟಿದ್ದರೂ ಬಿಜೆಪಿಯು ಅವರನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಲೋಕಸಭೆಯ ಗಮನಾರ್ಹ ಸಂಖ್ಯೆಯ ಸೀಟುಗಳಲ್ಲಿ ಗೆಲುವು ಸಾಧಿಸಿತ್ತು.

ಮುಸ್ಲಿಮರು ಈಗ, ಅಸಾದುದ್ದೀನ್‌ ಓವೈಸಿ ಮತ್ತು ಬದ್ರುದ್ದೀನ್‌ ಅಜ್ಮಲ್‌ ಅವರಂತಹ ರಾಜಕೀಯವಾಗಿ ಗಮನ ಸೆಳೆಯುತ್ತಿರುವ ನಾಯಕರತ್ತ ಆಕರ್ಷಿತರಾಗುತ್ತಿದ್ದಾರೆ. ದೇಶ ವಿಭಜನೆಯ ನಂತರ ನಡೆದ ವಿದ್ಯಮಾನಗಳಿಗೆ ಇದು ವ್ಯತಿರಿಕ್ತವಾಗಿದೆ. ಜಿನ್ನಾ ಅವರ ನಂತರ ಭಾರತದ ಮುಸ್ಲಿಮರು, ತಮ್ಮವರನ್ನು ನಾಯಕರನ್ನಾಗಿ ಅನುಸರಿಸಲು ಹಿಂದೇಟು ಹಾಕುತ್ತಿದ್ದಾರೆ. ಮುಸ್ಲಿಂ ನಾಯಕರ ಹಿಂಬಾಲಕರಾಗುವುದರ ಬದಲು ಹಿಂದೂ ಮುಖಂಡರನ್ನು ಹೆಚ್ಚಾಗಿ ನೆಚ್ಚಿಕೊಳ್ಳುತ್ತಾರೆ.

2014ರ ನಂತರದ ದೇಶಿ ರಾಜಕೀಯವು ಅಲ್ಪಸಂಖ್ಯಾತರ ವೋಟ್‌ಗಳ ಮಿತಿ ಏನು ಎಂಬುದನ್ನು ಸ್ಪಷ್ಟಪಡಿಸಿದೆ. ಇದನ್ನು ಜಾತ್ಯತೀತ ವೋಟ್‌ ಎಂದು ಪರಿಗಣಿಸುವುದು ಕೂಡ ಅವಿವೇಕತನದ ನಿರ್ಧಾರವಾಗಿದೆ. ‘ಮುಸ್ಲಿಂ ವೋಟುಗಳನ್ನಷ್ಟೇ ನೆಚ್ಚಿಕೊಂಡಿದ್ದರೆ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ. ಪ್ರಮುಖ ಜಾತಿ ಮತ್ತು ಸಾಮಾಜಿಕ ಪಂಗಡಗಳ ಜತೆ ವಿಶಾಲ ತಳಹದಿಯ ಮೈತ್ರಿಕೂಟ ಮಾಡಿಕೊಂಡು ಮುನ್ನಡೆಯಬೇಕು’ ಎನ್ನುವ ಸತ್ಯವನ್ನು ಕಾಂಗ್ರೆಸ್‌ನ ಹಿಂದಿನ ಮುಖಂಡರು ಬಹಳ ಹಿಂದೆಯೇ ಮನವರಿಕೆ ಮಾಡಿಕೊಂಡಿದ್ದರು.

ಅನೇಕ ವರ್ಷಗಳವರೆಗೆ ಈ ವೋಟ್‌ನ ಕೋಟೆ ಅಭೇದ್ಯವಾಗಿಯೇ ಉಳಿದಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಕೋಟೆಯಲ್ಲಿ ಬಿರುಕುಗಳು ಕಂಡು ಬಂದವು. ದೇಶದ ಹೃದಯಭಾಗ ಮತ್ತು ಪಶ್ಚಿಮದ ರಾಜ್ಯಗಳಲ್ಲಿನ ಮೇಲ್ಜಾತಿಯವರನ್ನು ಬಿಜೆಪಿಯು ತನ್ನತ್ತ ಸೆಳೆಯುವಲ್ಲಿ ಸಫಲವಾಗಿದೆ. ಇನ್ನೊಂದೆಡೆ ಮುಸ್ಲಿಮರು ಇತರ ಹಿಂದುಳಿದ ವರ್ಗಗಳ (ಒಬಿಸಿ) ಮುಖಂಡರತ್ತ ಆಕರ್ಷಿತರಾಗತೊಡಗಿದ್ದಾರೆ.

‘ತಮ್ಮ ವೋಟ್‌ ಬ್ಯಾಂಕ್‌ನಿಂದಾಗಿ ಭಾರತವನ್ನು ಯಾರು ಆಳಬೇಕು ಎನ್ನುವುದನ್ನು ನಿರ್ಧರಿಸುವಲ್ಲಿ ಮುಸ್ಲಿಮರು ವಿಶೇಷ ಅಧಿಕಾರ ಹೊಂದಿದ್ದಾರೆ’ ಎಂದು ಬಿಜೆಪಿಯು ಈ ಹಿಂದೆ ದೂರುತ್ತಿತ್ತು. ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಜೋಡಿ ಈ ಪರಿಸ್ಥಿತಿಯನ್ನು ಈಗ ಸಂಪೂರ್ಣವಾಗಿ ತಿರುವು ಮುರುವು ಮಾಡಿದೆ. ಹಿಂದುಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಒಟ್ಟುಗೂಡಿಸುವಲ್ಲಿ ಸಫಲರಾದರೆ ಅವರು ಮುಸ್ಲಿಮರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬಹುದು.

ಜಾತ್ಯತೀತವಾದ ಮತ್ತು ಅಲ್ಪಸಂಖ್ಯಾತರ ವೋಟುಗಳು ಸೇರಿಕೊಂಡು ರಾಜಕೀಯಕ್ಕೆ ಹೊಸ ದಿಕ್ಕು ನೀಡುವವರೆಗೆ ಈ ಪರಿಸ್ಥಿತಿ ಬದಲಾಗುವುದಿಲ್ಲ. ಈ ಗುಂಪಿನಿಂದ ಹೊರ ಹೋದವರು ದೊಡ್ಡ ಸಂಖ್ಯೆಯಲ್ಲಿ ಮರಳಿ ಬರುವವರೆಗೆ ಯಾರೊಬ್ಬರೂ ಅಂತಹ ನಿರೀಕ್ಷೆಯನ್ನೂ ಇಟ್ಟುಕೊಳ್ಳಬಾರದು. ಹೀಗಾಗಿ ಈ ಚರ್ಚೆಯು ಬುರ್ಕಾ, ಗಡ್ಡ, ಟೊಪ್ಪಿಗೆ, ತ್ರಿವಳಿ ತಲಾಕ್‌ ಅಥವಾ ಹಜ್‌ ಸಬ್ಸಿಡಿಗೆ ಸಂಬಂಧಿಸಿಲ್ಲ. ಅಂತಹ ಚರ್ಚೆಯು ಮೂಲ ಉದ್ದೇಶವನ್ನೂ ಈಡೇರಿಸುವುದಿಲ್ಲ. ಇದರಿಂದ ಮುಸ್ಲಿಮರಲ್ಲಿ ಮನೆಮಾಡಿರುವ ಶೋಷಣೆಗೆ ಒಳಗಾಗಿರುವ ಭಾವನೆಯನ್ನು ಹೆಚ್ಚಿಸುತ್ತದೆ. ಜತೆಗೆ ಜಾತ್ಯತೀತ ಪಕ್ಷಗಳ ಸ್ವಾನುಕಂಪ ಮತ್ತು ಗೊಂದಲವನ್ನೂ ಹೆಚ್ಚಿಸುತ್ತದೆ. ಈ ಪಕ್ಷಗಳು ತಮ್ಮ ರಾಜಕೀಯದಲ್ಲಿ ಮೂಲಭೂತ ಬದಲಾವಣೆ ತರುವವರೆಗೆ ಅವುಗಳು ರಾಷ್ಟ್ರ ರಾಜಕಾರಣದಲ್ಲಿ ಹೆಚ್ಚು ಪ್ರಸ್ತುತವಾಗಲಾರವು.

ಉದಾರ ಧೋರಣೆಯ ಕೆಲ ಕ್ಯಾಂಪಸ್‌ಗಳು, ವಿಚಾರ ಸಂಕಿರಣ ಆಯೋಜಿಸುವ ಸಂಘಟನೆಗಳು ಮತ್ತು ಅಭಿಪ್ರಾಯ ಮೂಡಿಸುವವರು ಮಾತ್ರ ಈ ವಿಷಯದಲ್ಲಿ ಭರವಸೆ ಮೂಡಿಸುತ್ತಾರೆ. ಆದರೆ, ರಾಷ್ಟ್ರ ರಾಜಕಾರಣ ವಿಷಯದಲ್ಲಿ ಮೋದಿ – ಶಾ ಅವರ ನಿಯಂತ್ರಣದಲ್ಲಿ ಇರುವ ಬಿಜೆಪಿಯು ಜಾತ್ಯತೀತವಾದಕ್ಕೆ ಯಶಸ್ವಿಯಾಗಿ ಹೊಸ ವ್ಯಾಖ್ಯಾನ ನೀಡುವಲ್ಲಿ ಸಫಲವಾಗಿದೆ.

‘ಕಾಂಗ್ರೆಸ್‌ ಪಕ್ಷವನ್ನು ಮುಸ್ಲಿಮರ ಪರ ಇರುವ ಪಕ್ಷ ಎಂದೇ ಪರಿಗಣಿಸಲಾಗುತ್ತಿದೆ’ ಎಂದು ಸೋನಿಯಾ ಅವರು ಗೋಳಾಡಿದ್ದಾರೆ ಎಂದು ಹೇಳಲು ಹಲವಾರು ಕಾರಣಗಳಿವೆ. ಕಾಂಗ್ರೆಸ್‌ನಂತಹ ಪಕ್ಷವು ಭವಿಷ್ಯದ ಬಗ್ಗೆ ಚಿಂತಿತವಾಗಿದ್ದರೆ, ಎಡಪಂಥೀಯ ಚಿಂತನೆಯ ವ್ಯಾಮೋಹ ಕಳಚಿಕೊಂಡು ಜಾತ್ಯತೀತ ಮಧ್ಯಮ ಮಾರ್ಗ ತುಳಿಯುವುದರತ್ತ ಗಮನ ಹರಿಸಬೇಕು. ನೀವು ಇಷ್ಟಪಡಿ ಅಥವಾ ಬಿಡಿ, ರಾಹುಲ್‌ ಗಾಂಧಿ ಅವರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವುದು ಇದೇ ಸಂದೇಶವನ್ನು ನೀಡುತ್ತಿದೆ.

(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)