ಭಾನುವಾರ, ಮೇ 22, 2022
21 °C

ಓವನ್ ಕೊಳ್ಳುವ ಮುನ್ನ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಕರಿಗೆ ಹೋಗಿ ಸಮೋಸ ಅಥವಾ ಪಫ್ ಬೇಕೆಂದು ಕೇಳಿ ನೋಡಿ. ಆತ ಸಮೋಸ ಅಥವಾ ಪಫ್ ಅನ್ನು ಕಪಾಟಿನಿಂದ ಹೊರತೆಗೆದು ಮೈಕ್ರೋವೇವ್ ಓವನ್‌ನಲ್ಲಿ ಇಟ್ಟು ಒಂದೇ ನಿಮಿಷದಲ್ಲಿ ಬಿಸಿ ಮಾಡಿ ನೀಡುತ್ತಾನೆ. ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವವರಾದರೆ ಮನೆಯಲ್ಲಿ ಅರ್ಧದಷ್ಟು ಅಡುಗೆಗಳು ಅವಸರದ ಮೈಕ್ರೋವೇವ್ ಅಡುಗೆಗಳಾಗಿರುತ್ತವೆ. ಈಗಂತೂ ಮಾರುಕಟ್ಟೆಯಲ್ಲಿ ರೆಡಿ-ಟು-ಈಟ್ ಹೆಸರಿನಲ್ಲಿ ಬಿಸಿಬೇಳೆಬಾತ್, ಪೊಂಗಲ್ ಎಲ್ಲ ದೊರೆಯುತ್ತವೆ. ಅವನ್ನು ಮೈಕ್ರೋವೇವ್ ಓವನ್‌ನಲ್ಲಿ ಎರಡು ನಿಮಿಷ ಇಟ್ಟರೆ ಊಟ ಸಿದ್ಧ.ಏನಿದು ಮೈಕ್ರೋವೇವ್ ಓವನ್? ಅದನ್ನು ಕೊಳ್ಳಬೇಕೇ? ಅದನ್ನು ಕೊಳ್ಳಬೇಕಿದ್ದರೆ ಮೊದಲು ಅದು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಳ್ಳುವುದು ಒಳ್ಳೆಯದಲ್ಲವೇ? ಗ್ಯಾಜೆಟ್‌ಲೋಕ ಅಂಕಣದಲ್ಲಿ ಮೈಕ್ರೋವೇವ್ ಓವನ್ ಬಗ್ಗೆ ಪರಿಚಯಾತ್ಮಕ ಲೇಖನ, ನಂತರ ಹಲವು ನಮೂನೆಯ ಓವನ್‌ಗಳ ಪರಿಚಯ ಹಾಗೂ ಮೈಕ್ರೋವೇವ್ ಓವನ್ ಕೊಳ್ಳುವಾಗ ಏನೇನನ್ನೆಲ್ಲ ಗಮನಿಸಬೇಕು - ಈ ಎಲ್ಲ ವಿಷಯಗಳ ಬಗ್ಗೆ ಹಲವು ಕಂತುಗಳಲ್ಲಿ ತಿಳಿದುಕೊಳ್ಳೋಣ. ಈ ಮಾಲಿಕೆಯಲ್ಲಿ ಮೊದಲನೆಯದಾಗಿ ಮೈಕ್ರೋವೇವ್ ಓವನ್ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಳ್ಳೋಣ.  ನಾವು ನೋಡುವ ಬೆಳಕು ಒಂದು ವಿದ್ಯುತ್ಕಾಂತೀಯ ವಿಕಿರಣ ಅಥವಾ ತರಂಗ. ಈ ವಿದ್ಯುತ್ಕಾಂತೀಯ ರೋಹಿತ (electromagnetic spectrum) ತುಂಬ ದೊಡ್ಡದಿದೆ. ಅದರ ಒಂದು ತುದಿಯಲ್ಲಿ ಅತಿ ಶಕ್ತಿಶಾಲಿಯಾದ ಗಾಮಾ ಅಲೆಗಳಿವೆ. ಇನ್ನೊಂದು ತುದಿಯಲ್ಲಿ ಕಡಿಮೆ ಶಕ್ತಿಯ ರೇಡಿಯೊ ಅಲೆಗಳಿವೆ. ಮಧ್ಯದಲ್ಲಿ ನಮ್ಮ ಕಣ್ಣಿಗೆ ಕಾಣಿಸುವ ಬೆಳಕು ಇದೆ. ರೇಡಿಯೊ ಅಲೆಯ ನಂತರ ಬರುವುದೇ ಮೈಕ್ರೋವೇವ್. ಯಾವುದೇ ವಸ್ತು ಈ ವಿದ್ಯುತ್ಕಾಂತೀಯ ಅಲೆಯನ್ನು ಹೀರಿಕೊಳ್ಳಬೇಕಾದರೆ ಆ ಅಲೆಯ ಶಕ್ತಿಗೆ ಸರಿಹೊಂದುವಂತಹ ಆಂತರಿಕ ಬದಲಾವಣೆ ಅದರಲ್ಲಿ ಆಗುವುದು ಅಗತ್ಯ. ಮೈಕ್ರೋವೇವ್ ಅರ್ಥಾತ್ ಸೂಕ್ಷ್ಮತರಂಗ ಶಕ್ತಿಯನ್ನು ಹೀರಿಕೊಂಡಾಗ ಅಡುಗೆ ಹೇಗಾಗುತ್ತದೆ?ಸಾಮಾನ್ಯ ಅಡುಗೆಯಲ್ಲಿ ಪಾತ್ರೆಯಲ್ಲಿ ನೀರಿಟ್ಟು ಅದರಲ್ಲಿ ಅಕ್ಕಿ, ಬೇಳೆ, ತರಕಾರಿ, ಇತ್ಯಾದಿ ಇಟ್ಟು ಕುದಿಸುತ್ತೇವೆ ತಾನೆ? ಪಾತ್ರೆಗೆ ಹೊರಗಡೆಯಿಂದ ಉಷ್ಣ, ಅಂದರೆ ಶಕ್ತಿ ನೀಡಿದಾಗ ಅದು ಪಾತ್ರೆಯ ಗೋಡೆಯ ಮೂಲಕ ಅದರೊಳಗಿನ ನೀರಿನ ಅಣುಗಳಿಗೆ ದಾಟಿಸಲ್ಪಡುತ್ತದೆ. ಈ ಶಕ್ತಿಯನ್ನು ಹೀರಿಕೊಂಡ ನೀರಿನ ಅಣುಗಳು ಆ ಶಕ್ತಿಯಿಂದಾಗಿ ವೇಗವಾಗಿ ಚಲಿಸತೊಡಗಿ ನಂತರ ಆಹಾರದ ಅಣುಗಳಿಗೆ ಡಿಕ್ಕಿ ಹೊಡೆದು ತನ್ನಲ್ಲಿರುವ ಶಕ್ತಿಯನ್ನು ಆಹಾರದ ಅಣುಗಳಿಗೆ ದಾಟಿಸುತ್ತವೆ. ಈ ಶಕ್ತಿಯನ್ನು ಹೀರಿಕೊಂಡ ಆಹಾರದ ಅಣುಗಳು ಬೇಯುತ್ತವೆ.ಸೂಕ್ಷ್ಮ ತರಂಗಗಳು ಎಲ್ಲ ವಿದ್ಯುತ್ಕಾಂತೀಯ ತರಂಗಗಳಂತೆ ತಮ್ಮಲ್ಲೂ ಶಕ್ತಿಯನ್ನು ಒಳಗೊಂಡಿರುತ್ತವೆ. ಈ ಅಲೆಯನ್ನು ಹೀರಿಕೊಂಡ ಆಹಾರದ ಅಣುಗಳು ವೇಗವಾಗಿ ತಿರುಗತೊಡಗುತ್ತವೆ. ವೇಗವಾಗಿ ಹೊರಳುತ್ತ ಇತರೆ ಅಣುಗಳಿಗೆ ಡಿಕ್ಕಿ ಹೊಡೆಯುತ್ತವೆ, ಶಕ್ತಿಯನ್ನು ಇತರೆ ಅಣುಗಳಿಗೂ ದಾಟಿಸುತ್ತವೆ. ಹೀಗೆ ಶಕ್ತಿಯನ್ನು ಹೀರಿಕೊಂಡ ಆಹಾರದ ಅಣುಗಳು ಬೇಯುತ್ತವೆ. ಹಾಗಿದ್ದರೆ ಯಾವುದೇ ವಿದ್ಯುತ್ಕಾಂತೀಯ ತರಂಗಗಳು ಆಹಾರವನ್ನು ಬೇಯಿಸಬಲ್ಲವೇ? ಇಲ್ಲ. ಅಣುಗಳಿಗೆ ಹಲವು ನಮೂನೆಯ ಬದಲಾವಣೆ ಸಾಧ್ಯವಿದೆ. ಸೂಕ್ಷ್ಮ ತರಂಗಗಳ ಶಕ್ತಿಗೂ ಅಣುಗಳ ಹೊರಳಾಟಕ್ಕೆ ಬೇಕಾದ ಶಕ್ತಿಗೂ ತಾಳೆಯಾಗುವುದರಿಂದ ಸೂಕ್ಷ್ಮ ತರಂಗಗಳನ್ನು ಹೀರಿಕೊಂಡ ಆಹಾರದ ಅಣುಗಳು ವೇಗವಾಗಿ ಹೊರಳಾಡಿ ಬೇಯುತ್ತವೆ. ಅತಿ ಶಕ್ತಿಯ ಅತಿನೇರಳೆ (ಅಲ್ಟ್ರಾವೈಲೆಟ್) ತರಂಗಗಳಿಂದಾಗಿ ಇನ್ನೇನೋ ಬದಲಾವಣೆಗಳಾಗುತ್ತವೆ. ಈ ಲೇಖನಕ್ಕೆ ಅದು ಅಗತ್ಯವಿಲ್ಲ.ಮೈಕ್ರೋವೇವ್ ಓವನ್‌ನಲ್ಲಿ ಮ್ಯಾಗ್ನೆಟ್ರಾನ್ ಎಂಬ ಒಂದು ಅಂಗವಿದೆ. ಅದು ಸೂಕ್ಷ್ಮತರಂಗಗಳನ್ನು ಸೃಷ್ಟಿ ಮಾಡುತ್ತದೆ. ಈ ಅಲೆಗಳನ್ನು ಓವನ್‌ನ ಮಧ್ಯದಲ್ಲಿಟ್ಟಿರುವ ಆಹಾರದ ಮೇಲೆ ಪ್ರತಿಫಲಿಸುವಂತೆ ನಾಲ್ಕೂ ಕಡೆ ಲೋಹದ ಗೋಡೆಗಳಿರುತ್ತವೆ. ಸೂಕ್ಷ್ಮತರಂಗಗಳನ್ನು ಲೋಹ ಪ್ರತಿಫಲಿಸುತ್ತದೆ. ಆದರೆ ಪ್ಲಾಸ್ಟಿಕ್, ಪಿಂಗಾಣಿ, ಕಾಗದ ಇತ್ಯಾದಿಗಳು ತಮ್ಮ  ಮೂಲಕ ಹಾದುಹೋಗಲು ಬಿಡುತ್ತವೆ. ಅದಕ್ಕೆಂದೇ ಮೈಕ್ರೋವೇವ್ ಓವನ್‌ನಲ್ಲಿ ಅಡುಗೆ ಮಾಡಲು ಲೋಹದ ಪಾತ್ರೆ ನಿಷಿದ್ಧ. ಮೈಕ್ರೋವೇವ್ ಓವನ್‌ನಿಂದ ಶಕ್ತಿ ಹೊರಹೋಗದಂತೆ ಅದಕ್ಕ ಈ ಲೋಹದ ಗೋಡೆಗಳಿವೆ. ಒಂದು ಗಾಜಿನ ಬಾಗಿಲು ಇದ್ದರೂ ಅದಕ್ಕೆ ಲೋಹದ ತೆಳುವಾದ ಬಲೆಯ ರೂಪದ ಪದರ ಅಂಟಿಸಿರುತ್ತಾರೆ. ಆದುದರಿಂದ ಶಕ್ತಿ ಸೋರುವುದಿಲ್ಲ. ಸೂಕ್ಷ್ಮತರಂಗಗಳು ಮೈಮೇಲೆ ಬೀಳುವುದು, ಅದರಲ್ಲೂ ಮುಖ್ಯವಾಗಿ ಮೃದು ಭಾಗಗಳಿಗೆ, ಉದಾಹರಣೆಗೆ ಕಣ್ಣು, ಮೂಗು ಇತ್ಯಾದಿಗಳಿಗೆ ನೇರವಾಗಿ ಬೀಳುವುದು ಒಳ್ಳೆಯದಲ್ಲ. ಆದುದರಿಂದ ಮೈಕ್ರೋವೇವ್ ಓವನ್‌ನ ಬಾಗಿಲು ಸರಿಯಾಗಿ ಮುಚ್ಚಿಕೊಳ್ಳುವುದು ಅತೀ ಅಗತ್ಯ.ಮೈಕ್ರೋವೇವ್ ಓವನ್‌ನಲ್ಲಿ ಆಹಾರವು ಒಳಗಿನಿಂದ ಬೇಯುತ್ತದೆ. ಸಾಮಾನ್ಯ ಅಡುಗೆಯಲ್ಲಿ ತಾಪವನ್ನು ಹೊರಗಿನಿಂದ ನೀಡಲಾಗುತ್ತದೆ. ಆದರೆ ಮೈಕ್ರೋವೇವ್ ಓವನ್‌ನಲ್ಲಿ ಶಕ್ತಿಯು ಒಳಗಿನಿಂದ ಸೃಷ್ಟಿಯಾಗಿ ಆಹಾರ ಬೇಯುತ್ತದೆ. ರೆಫ್ರಿಜರೇಟರಿನಲ್ಲಿ ಇಟ್ಟ ಆಹಾರವನ್ನು ನಿಮಿಷದಲ್ಲೇ ಬಿಸಿ ಮಾಡಲು ಮೈಕ್ರೋವೇವ್ ಓವನ್ ಅತ್ಯಧಿಕ ಬಳಕೆಯಾಗುತ್ತಿದೆ. ಮೈಕ್ರೋವೇವ್ ಓವನ್‌ನಲ್ಲಿ ಅಡುಗೆ ಮಾಡುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಎಂಬ ದೂರಿದೆ. ಆಹಾರ ಬೆಂದ ನಂತರವೂ ಅದರಲ್ಲಿ ವಿಕಿರಣ ಇರುತ್ತದೆ ಆದುದರಿಂದ ಅದರ ಸೇವನೆ ಒಳ್ಳೆಯದಲ್ಲ ಎಂಬುದು ಅವರ ವಾದ. ಆದರೆ ಇದು ವೈಜ್ಞಾನಿಕವಾಗಿ ಸಾಧ್ಯವಿಲ್ಲ.ಸೂಕ್ಷ್ಮತರಂಗಗಳು ಬೆಳಕಿನಂತೆಯೇ ವಿದ್ಯುತ್ಕಾಂತೀಯ ತರಂಗಗಳು. ಹೇಗೆ ಬೆಳಕಿನ ಆಕರವನ್ನು ತೆಗೆದ ನಂತರ ಅಲ್ಲಿ ಬೆಳಕು ಇರಲು ಸಾಧ್ಯವಿಲ್ಲವೋ ಅದೇ ರೀತಿ ಸೂಕ್ಷ್ಮತರಂಗಗಳೂ ಆಹಾರವನ್ನು ಓವನ್‌ನಿಂದ ಹೊರತೆಗೆದ ನಂತರ ಅದರಲ್ಲಿ ಇರಲು ಸಾಧ್ಯವಿಲ್ಲ. ಮೈಕ್ರೋವೇವ್ ಓವನ್‌ನಲ್ಲಿ ಎಲ್ಲೂ ಸೋರಿಕೆ ಇರಬಾರದು. ಸೋರಿಕೆ ಇದ್ದರೆ ಸೂಕ್ಷ್ಮತರಂಗಗಳು ಮೈಮೇಲೆ ಬಿದ್ದು ದುಷ್ಪರಿಣಾಮಗಳು ಆಗುವ ಸಾಧ್ಯತೆ ಇದೆ. ಓವನ್ ಹಳತಾದಾಗ ಎಲ್ಲಾದರೂ ಸೋರಿಕೆ ಯಾಗುವ ಸಾಧ್ಯತೆ ಇದ್ದಾಗ ಕೂಡಲೆ ಅದನ್ನು ದುರಸ್ತಿ ಮಾಡಿಸಿಕೊಳ್ಳುವುದು ಅತೀ ಅಗತ್ಯ.ಸೂಚನೆ: ಹಲವು ನಮೂನೆಯ ಮೈಕ್ರೋವೇವ್ ಓವನ್ ಮತ್ತು ಅವುಗಳನ್ನು ಕೊಳ್ಳುವ ಬಗ್ಗೆ ಮುಂದಿನ ಹಲವು ಸಂಚಿಕೆಗಳಲ್ಲಿ ವಿವರಿಸಲಾಗುವುದು. ಆದರೆ ಮಧ್ಯೆ ಮಧ್ಯೆ ಇತರೆ ಗ್ಯಾಜೆಟ್‌ಗಳ ಬಗ್ಗೆ ವಿವರಣೆ ಮುಂದುವರೆಯುತ್ತದೆ. 

ವಾರದ ಆಪ್ (app)

ಬ್ಲೂಟೂತ್ ಫೈಲ್ ಟ್ರಾನ್ಸ್‌ಫರ್  


ಈ ಆಂಡ್ರಾಯಿಡ್ ಕಿರುತಂತ್ರಾಂಶ, Bluetooth File Transfer ಬಳಸಿ ಒಂದು ಫೋನಿನಿಂದ ಇನ್ನೊಂದು ಫೋನಿಗೆ ಬ್ಲೂಟೂತ್ ಮೂಲಕ ಫೈಲ್ ವರ್ಗಾವಣೆ ಮಾಡಬಹುದು. ಇದರ ವೈಶಿಷ್ಟ್ಯವೆಂದರೆ ಸಾಮಾನ್ಯ ಫೈಲ್‌ಗಳಲ್ಲದೆ .apk ಫೈಲ್‌ಗಳನ್ನೂ ವರ್ಗಾವಣೆ ಮಾಡಬಹುದು. ಸಾಮಾನ್ಯವಾಗಿ ಚಿತ್ರ, ಸಂಗೀತ, ವೀಡಿಯೊ ಇತ್ಯಾದಿ ಫೈಲ್‌ಗಳನ್ನು ವರ್ಗಾವಣೆ ಮಾಡುವುದು ಏನೂ ವಿಶೇಷವಲ್ಲ. ಆದರೆ ನಿಮ್ಮ ಆಂಡ್ರಾಯಿಡ್ ಫೋನಿನಲ್ಲಿ ಒಂದು ಕಿರುತಂತ್ರಾಂಶ ಈಗಾಗಲೆ ಇನ್ಸ್‌ಟಾಲ್ ಆಗಿದೆ ಎಂದಿಟ್ಟುಕೊಳ್ಳಿ. ಅದರ .apk ಫೈಲ್ ಅನ್ನು ಈ ಕಿರುತಂತ್ರಾಂಶ ಬಳಸಿ ನಿಮ್ಮ ಸ್ನೇಹಿತರ ಫೋನಿಗೆ ವರ್ಗಾವಣೆ ಮಾಡಬಹುದು. ಇದು ನಿಜಕ್ಕೂ ಒಂದು ಉತ್ತಮ ಸೌಲಭ್ಯ.

ಗ್ಯಾಜೆಟ್ ಸುದ್ದಿ

ಬ್ರೈಲ್ ಫೋನ್


ದೃಷ್ಟಿವಂಚಿತರಿಗಾಗಿ ಒಂದು ಬ್ರೈಲ್ ಫೋನ್ ತಯಾರಾಗಿದೆ. ಈ ಫೋನಿನ ಬಟನ್‌ಗಳಲ್ಲಿ ಸಾಮಾನ್ಯ ಅಂಕಿಗಳ ಬದಲಿಗೆ ಬ್ರೈಲ್ ಲಿಪಿಯಲ್ಲಿ ಅಂಕಿಗಳನ್ನು ಮೂಡಿಸಲಾಗಿದೆ. ಬೆರಳನ್ನು ಇಟ್ಟಾಗ ಬ್ರೈಲ್ ಅಕ್ಷರಗಳು ಉಬ್ಬಿದ್ದು, ಬೆರಳಿಗೆ ಅಂಕಿ ಮತ್ತು ಅಕ್ಷರಗಳ ಅನುಭವವಾಗುತ್ತದೆ. ಬ್ರೈಲ್ ಕಲಿತವರಿಗೆ ಅದನ್ನು ಬಳಸಲು ಸುಲಭ. ದೃಷ್ಟಿವಂಚಿತರು ಇತರರೊಂದಿಗೆ ಫೋನ್ ಮೂಲಕ ವ್ಯವಹರಿಸಲು ಇದು ಸಹಾಯಕಾರಿ. ಈ ಫೋನನ್ನು ಮೂರು ಆಯಾಮದ ಮುದ್ರಣ ತಂತ್ರಜ್ಞಾನದ ಮೂಲಕ ತಯಾರಿಸಲಾಗುತ್ತಿದೆ. ಇದರ ಬೆಲೆ ಸುಮಾರು 60 ಪೌಂಡ್. ಇದು ಸದ್ಯ ಇಂಗ್ಲೆಂಡಿನಲ್ಲಿ ಮಾತ್ರ ದೊರೆಯುತ್ತಿದೆ. ಫೋನ್ ಕೊಳ್ಳುವವರು ಅದರ ತಯಾರಕರ ಜಾಲತಾಣಕ್ಕೆ ಭೇಟಿ ನೀಡಿ ಕೀಲಿಮಣೆಯನ್ನು ತಮಗೆ ಬೇಕಾದ ರೀತಿಯಲ್ಲಿ ವೈಯಕ್ತೀಕರಿಸಬಹುದಾಗಿದೆ.

ಗ್ಯಾಜೆಟ್ ತರ್ಲೆ

ಕೆಲಸ ಮಾಡುತ್ತಿರುವ ಹಳೆಯ ಸ್ಮಾರ್ಟ್‌ಫೋನಿನ ಉಪಯೋಗಗಳು:


ಅಲಾರ್ಮ್ ಗಡಿಯಾರವಾಗಿ ಬಳಸಿ

ಡಿಜಿಟಲ್ ಫೋಟೊಫ್ರೇಂ ಆಗಿ ಬಳಸಿ

ಎಂಪಿ3 ಪ್ಲೇಯರ್ ಆಗಿ ಬಳಸಿ

ಹೊಸ ಫೋನ್ ಕೊಳ್ಳುವಾಗ ವಾಪಾಸು ಕೊಟ್ಟು ರಿಯಾಯಿತಿ ಪಡೆಯಿರಿ

ಯಾರಿಗಾದರೂ ದಾನ ಮಾಡಿ

ಡಾಟಾ ಕಾರ್ಡಿನಲ್ಲಿರುವ ಸಿಮ್ ಕಾರ್ಡ್ ಕೆಲಸ ಮಾಡುತ್ತಿದೆಯೇ ಎಂದು ಪರಿಶೀಲಿಸಲು ಬಳಸಿ.

ಗ್ಯಾಜೆಟ್ ಸಲಹೆ

ಪ್ರವೀಣ ಕಾರಿಗರ್ ಅವರ ಪ್ರಶ್ನೆ:
ನನ್ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ ಮೊಬೈಲ್ ಫೋನ್ ಇದೆ. ಸುಮಾರು ₹800 -1,000 ವ್ಯಾಪ್ತಿಯಲ್ಲಿ ಒಂದು ಉತ್ತಮ ಇಯರ್‌ಬಡ್ (ಇಯರ್‌ಫೋನ್) ತಿಳಿಸುತ್ತೀರಾ?

ಉ: ಕ್ರಿಯೇಟಿವ್ EP630 ಅಥವಾ ಕೋವೋನ್ EM1.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.