ಈಚೆಗೆ ಬರ್ಲಿನ್ನಿನ ಕಾನೂನು ಮತ್ತು ಅರ್ಥಶಾಸ್ತ್ರ ಶಾಲೆಯವರು ಅವರ ಹಳೇ ವಿದ್ಯಾರ್ಥಿ ಸಂಘದವರು ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಜರ್ಮನಿಯ ನಾನಾ ಭಾಗಗಳಿಂದ ಬಂದು ಸೇರಿದ್ದ ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡಲು ಆಹ್ವಾನ ನೀಡಿದರು.

ವಿಷಯದ ಆಯ್ಕೆಯನ್ನು ನನಗೇ ಬಿಟ್ಟರು. ನಾನು ಆ ಬಗ್ಗೆ ಸಾಕಷ್ಟು ಯೋಚಿಸಿ, ಕಲೆ ಮತ್ತು ಕಾನೂನು/ಅರ್ಥಶಾಸ್ತ್ರಗಳನ್ನು ಬೆಸೆಯುವ ಒಂದು ವಿಷಯದ ಬಗ್ಗೆ ಮಾತನಾಡಬೇಕೆಂದುಕೊಂಡು ಸಮಕಾಲೀನ ಜಗತ್ತಿನಲ್ಲಿ ಕಲಾಕಾರರ ಬಿಕ್ಕಟ್ಟುಗಳ ಬಗ್ಗೆ ಮಾತಾಡಲು ನಿರ್ಧರಿಸಿದೆ.

ಯಾಕೆಂದರೆ ಕಲಾಕಾರ ಹಲವು ಬಗೆಯ ಬಿಕ್ಕಟ್ಟುಗಳನ್ನು ಎದುರುಗೊಳ್ಳುತ್ತಾನೆ ಅನ್ನುವುದು ನಿಜವಾದರೂ ಕಳೆದೆರಡು ಶತಮಾನಗಳಲ್ಲಿ ಅತ್ಯಂತ ತೀವ್ರಗೊಂಡಿರುವ ಅವನ ಬಿಕ್ಕಟ್ಟು ಆಶ್ರಯದಾತರಿಗೆ ಸಂಬಂಧಿಸಿದ್ದೆಂದು ನನಗೆ ತೋರಿತು.

ಇತಿಹಾಸದ ವಿಕಾಸ ಆಗುತ್ತಾ ಹೋದ ಹಾಗೆ, ಸಮಾಜ ರಚನೆ, ಮಾನವ ಸಂಬಂಧಗಳು ಹೆಚ್ಚು ಜಟಿಲವಾಗುತ್ತಾ ಹೋದ ಹಾಗೆ ಕಲಾಕಾರರ ಮತ್ತು ಆಶ್ರಯದಾತರ ಅಂಟುನಂಟುಗಳು ಗಂಟುಗಂಟಾಗತೊಡಗಿದವು.

ಆದರೆ ಯಾವಾಗಲೂ ಇದು ಹೀಗೇ ಇತ್ತು ಅನ್ನಲು ಬರುವುದಿಲ್ಲ. ಉದಾಹರಣೆಗೆ, ಪ್ರಾಚೀನ ಬುಡಕಟ್ಟು ಸಮಾಜಗಳಲ್ಲಿ ಕಲಾವಿದ ತನ್ನ ಸಮಾಜದ ಸಾಮೂಹಿಕ ಬದುಕಿನ ಅಂಗವಾಗಿರುವುದರಿಂದ ಪ್ರತ್ಯೇಕತೆಯ ವ್ಯಸನ ಅವನಿಗಿರುವುದಿಲ್ಲ.

ಆ ಸಮಾಜವೂ ಕೂಡಾ ಸಾಮೂಹಿಕ ವಿಧಿಗಳ, ಕ್ರಿಯಾಚರಣೆಗಳ ವ್ಯವಸ್ಥಿತ ಏರ್ಪಾಟಿನಿಂದ ನಿಸರ್ಗದ ಚಕ್ರೀಯ ಲಯದ ಜೊತೆಗೆ ತನ್ನ ಕಟ್ಟುಪಾಡು, ಆಚಾರಗಳನ್ನು ಹೊಂದಿಸಿಕೊಂಡಿರುತ್ತದೆ. ಕಲಾ ನಿರ್ಮಿತಿಯೂ ಈ ಚೌಕಟ್ಟಿನಲ್ಲೇ ನಡೆಯುತ್ತದೆ.

ಉದಾಹರಣೆಗಾಗಿ, ಸಮಕಾಲೀನ ಜಗತ್ತಿನಲ್ಲಿ ಇನ್ನೂ ಉಳಿದುಕೊಂಡಿರುವ ಜನಪದ ಹಾಗೂ ಬುಡಕಟ್ಟು ಕಾವ್ಯ-ಕಲೆಗಳನ್ನು ನೋಡಿ. ಅಲ್ಲಿನ ಅಭಿವ್ಯಕ್ತಿ ಒಟ್ಟು ಸಮುದಾಯದ ನಂಬುಗೆಗಳ ಮೇಲೆ ಅರಳುತ್ತದೆ.

ಅಲ್ಲಿನ ಹುಟ್ಟು, ಬೆಳವಣಿಗೆ, ಮದುವೆ, ಸಾವು ಮುಂತಾದ ಚಕ್ರೀಯ ಘಟನೆಗಳಿಗೆ ಸಂಬಂಧಿಸಿದ ಹಾಡುಗಳಾಗಿ ಆಚರಣೆಗಳ ಸಂದರ್ಭದಲ್ಲಿ ರೂಪು ತಾಳುತ್ತವೆ. ಅಲ್ಲಿನ ಕಥನಗಳಲ್ಲಿ ಸಮುದಾಯದ ದೇವತೆಗಳ, ಸಾಂಸ್ಕೃತಿಕ ನಾಯಕರ ಸಾಹಸಗಳು ವರ್ಣಿತವಾಗುತ್ತವೆ.

ಗ್ರೀಕರ ಔದಿಪೋಸ್ ಕತೆಯಲ್ಲಿ, ನೈಜೀರಿಯಾದ ಯೊರೂಬಾ ಬುಡಕಟ್ಟಿನವರ ಓಗುನ್ ದೇವತೆಯ ಕಥಾನಕಗಳಲ್ಲಿ, ಪ್ರಾಚೀನ ಆಂಗ್ಲೋಸ್ಯಾಕಸನ್ನರ ಬೇವೂಲ್ಫ್ ಕಾವ್ಯದಲ್ಲಿ, ಬ್ಯಾಬಿಲೋನಿಯಾದ ಗಿಲ್ಗೆಮಷ್ ಪುರಾಣದಲ್ಲಿ, ಕರ್ನಾಟಕದ ನೀಲಗಾರರ ಮಂಟೇಸ್ವಾಮಿ ಕಾವ್ಯದಲ್ಲಿ ಕೇಂದ್ರಪಾತ್ರಗಳು ಆಯಾ ಸಮುದಾಯದ ವಿಕಾಸದಲ್ಲಿ ಮಹತ್ತರ ಪಾತ್ರ ವಹಿಸಿದ ಪ್ರಭೃತ್ತಿಗಳೇ ಆಗಿರುತ್ತಾರೆ.

ಅವರಿಗೆ ಪ್ರಕೃತಿಯ ಅಪ್ರತಿಹತ ಶಕ್ತಿಗಳು ಎದುರಾಗುತ್ತವಾದರೂ ಆ ನಾಯಕರು ತಮ್ಮ ವಿಶೇಷ ಬಲದಿಂದ ಅವನ್ನು ಗೆಲ್ಲುತ್ತಾರೆ. ಸಂಘರ್ಷಗಳು ಸಮನ್ವಯದಲ್ಲಿ ಕೊನೆಗಾಣುತ್ತವೆ.

ಸಮುದಾಯಗಳ ಚಕ್ರೀಯ ಬದುಕಿಗೆ ಸವಾಲೊಡ್ಡುವ ಸಾವು, ಕ್ಷಾಮ-ಡಾಮರ, ಸಮರ ಮುಂತಾದ ವಿಚ್ಛಿಧ್ರಕಾರಿ ಅನುಭವಗಳನ್ನು ತಮ್ಮ ನಂಬುಗೆಗಳ ಸಾವಯವ ಸಂಬಂಧ ವ್ಯವಸ್ಥೆಯಲ್ಲಿ ಒಳಪಡಿಸಿಕೊಳ್ಳುವ ಕ್ರಿಯೆಯನ್ನು ಇಂಥಾ ಪುರಾಣಗಳಲ್ಲಿ, ಕಾವ್ಯಗಳಲ್ಲಿ ಕಾಣಬಹುದು.

ಉದಾಹರಣೆಗೆ, ಸಿಂದ್ ಮಾದಿಗ ಜನಾಂಗ ಸಾವೆಂಬ ಬದುಕಿನ ನಿಷೇಧವನ್ನು ಹೇಗೆ ಬದುಕಿನ ನಿರಂತರತೆಯ ಚೌಕಟ್ಟಿನೊಳಗೆ ಪುನರಳವಳಿಸಿಕೊಳ್ಳುತ್ತದೆಂಬುದನ್ನು ನೋಡಿ:

ಮರವಾಗಿ ನಾ ಸತ್ತರೆ
ಬೀಜಾಗಿ ನಾ ಬಾರೆನೆ
ಬೀಜಾಗಿ ನಾ ಸತ್ತರೆ
ಗಿಡವಾಗಿ ನಾ ಬೆಳೆಯೆನೆ
ಗಿಡವಾಗಿ ನಾ ಸತ್ತರೆ
ಮರವಾಗಿ ನಾ ಬೆಳೆಯೆನೆ
ಕಾಯಾಗಿ ನಾ ಸತ್ತರೆ
ಹಣ್ಣಾಗಿ ನಾ ಬಾರೆನೆ

ಬ್ಯಾಬಿಲೋನಿಯದ ಗಿಲ್ಗೆಮಿಷ್ ಕತೆಯಲ್ಲಿ ಸಾವನ್ನು ಇನ್ನೊಂದು ಬಗೆಯಾಗಿ ಬದುಕಿನ ನಿರಂತರತೆಯಲ್ಲಿ ಪುನರಳವಡಿಸಿಕೊಳ್ಳಲಾಗಿದೆ. ಎಷ್ಟೋ ರಾಜ್ಯಗಳನ್ನು ಗೆದ್ದು ತನ್ನ ನಾಡನ್ನು ಬಲಪಡಿಸಿಕೊಂಡ ವೀರ ಗಿಲ್ಗಮಿಷ್ನ ಆತ್ಮೀಯ ಗೆಳೆಯ ಸಾವಿಗೀಡಾದಾಗ ಗಿಲ್ಗಿಮಿಷ್ ಅವನನ್ನು ಮರಳಿ ಭೂಲೋಕಕ್ಕೆ ಕರೆ ತರಬಹುದೆಂಬ ಹುಂಬ ಹಟತೊಟ್ಟು ಮೃತ್ಯುಲೋಕದ ಕಡೆಗೆ ಹೊರಡುತ್ತಾನೆ.

ಎಷ್ಟು ಕಡಲುಗಳನ್ನು ದಾಟಿದರೂ ಆ ಮೃತ್ಯುಲೋಕ ತಲುಪಲಾಗುವುದಿಲ್ಲ. ಕೊನೆಗೆ ಸೋತು ಸುಣ್ಣವಾಗಿ ತನ್ನ ನಗರಕ್ಕೆ ವಾಪಸಾಗುತ್ತಾನೆ. ತನ್ನ ನಗರದ ಗೋಡೆಗಳ ಶಿಲ್ಪಸೌಂದರ್ಯವನ್ನು ನೋಡುತ್ತಾ ಸಾವಿನ ಭಯಾನಕತೆಯನ್ನು ಮರೆಯುತ್ತಾನೆ.

ಸಮಷ್ಟಿ-ನಿಸರ್ಗಗಳ ಒಂದುತನದಲ್ಲಿ ಹೀಗೆ ಪ್ರಾಚೀನ ಕಾವ್ಯ-ಕಲೆಗಳಲ್ಲಿ ವಿಪರ್ಯಾಸಗಳು ಕರಗಿ ಹೋಗುತ್ತವೆ. ವಿಪರ್ಯಾಸಗಳನ್ನೇ ಹುರುಳಾಗಿಸಿಕೊಂಡ ಗ್ರೀಕರ ಗಂಭೀರ ನಾಟಕಗಳಲ್ಲೂ ಅಷ್ಟೆ.

ಗಂಭೀರ ನಾಟಕಗಳ ತ್ರಿವಳಿಯ ಕೊನೆಯ ಭಾಗದಲ್ಲಿ ನಿಯಮಭಂಗವು ನಿಯಮದಲ್ಲಿ ಅಡಕಗೊಳ್ಳುತ್ತದೆ. ಏಸ್ಕಲಸ್ನ ಒರೇಸ್ಟನ್ ತ್ರಿವಳಿಯ ಕೊನೆಯ ಭಾಗವಾದ `ಯೂಮೆನೈಡಸ್~ನಲ್ಲಿ ನಾಯಕ ತನ್ನ ತಾಯಿಯನ್ನೇ ಕೊಂದಿರುತ್ತಾನೆ. ಆಕೆಯ ರಕ್ತದ ಪಿಶಾಚಿಗಳು ಅವನನ್ನು ಎಲ್ಲೂ ಬಿಡದೆ ಅಟ್ಟಿಸಿಕೊಂಡು ಬರುತ್ತವೆ.

ಕೊನೆಗೆ ಅವನು ನ್ಯಾಯದೇವತೆಯಾದ ಅಥೀನಾಳ ಮೊರೆ ಹೊಕ್ಕಾಗ ಆಕೆ ಆ ಜಗಳವನ್ನು ಬಿಡಿಸಿ ಮಾತೃಹತ್ಯೆಯ ಘೋರ ಪಾಪವನ್ನು ಕೊನೆಮುಟ್ಟಿಸಿ ನಾಯಕನನನ್ನು ದೋಷಮುಕ್ತನಾಗಿಸುತ್ತಾಳೆ. ಆ ರಕ್ತಪಿಶಾಚಿಗಳು ಪಾತಾಳದಲ್ಲಿ ನೆಲೆಸಿ ತಮಗಾದ ಅನ್ಯಾಯಕ್ಕೆ ಬದಲಾಗಿ ಅಥೀನಿಯನ್ನರಿಂದ ವಾರ್ಷಿಕ ಪೂಜೆಯನ್ನು ಕೈಗೊಂಡು ತೃಪ್ತರಾಗುವಂತೆ ವಿಧಿಸುತ್ತಾಳೆ.

ಹೀಗೆ ಪ್ರಾಚೀನ ಯುಗದಲ್ಲಿ ಚಾಲ್ತಿಯಲ್ಲಿದ್ದ ಕಲಾವಿದ ಮತ್ತು ಸಮಷ್ಟಿಯ ದೃಷ್ಟಿಗಳ ಏಕತೆಗೆ ಮುಂದೆ ಭಂಗ ಬರುವುದನ್ನು ಷೇಕ್ಸ್ಪಿಯರನ ಕಾಲದಲ್ಲಿ ಕಾಣಬಹುದು. ಅದು ಬಂಡವಾಳಶಾಹಿ ಏರ್ಪಾಟಿನ ಉಗಮಕಾಲ.

ಗತಾನುಗತಿಕ ನಿಯಮಗಳಿಗೆ ಹೊಸ ವ್ಯವಸ್ಥೆ ಘೋರ ಸವಾಲೆಸೆದ ಕಾಲ. ಹೀಗಾಗಿ ಷೇಕ್ಸ್ಪಿಯರನ ಯುಗದ ಗಂಭೀರ ನಾಟಕಗಳಲ್ಲಿ ಗ್ರೀಕರಲ್ಲಿ ಕಾಣುವ ಹಾಗೆ ಸಮಷ್ಟಿ-ನಿಸರ್ಗಗಳ ನಿಯಮದ ಅಂತಿಮ ವಿಜಯ ಕಷ್ಟಸಾಧ್ಯವಾಗುತ್ತದೆ. ಔದಿಪೋಸ್, ಆಗಮೆಮ್ನಾನರ ದುರಂತಗಳ ಹಿಂದಣ ತರ್ಕಬದ್ಧತೆ ಲಿಯರ್ ದೊರೆಯ ಅಥವಾ ಒಥೆಲೋನ ದುರಂತದಲ್ಲಿ ಕಾಣುವುದಿಲ್ಲ.

ಇಲ್ಲಿ ಕಾಣುವ ವಿನಾಶದ ದರ್ಶನ ಸೃಷ್ಟಿಯ ಶಕ್ತಿಗಿಂತ ಬಹಳಪಟ್ಟು ಪ್ರಬಲವಾದುದು. ಲಿಯರ್ ನಾಟಕದ ವೇಶ್ಯಾಪುತ್ರ ಎಡ್ಮಂಡ್ ಪಾರಂಪರಿಕ ವಂಶಾವಳಿಯಾಧಾರಿತ ಅಧಿಕಾರ, ಸಂಪತ್ತುಗಳಿಗೆ ಸವಾಲೆಸೆದು ಹಳೆಯ ವ್ಯವಸ್ಥೆಯ ಪ್ರತಿನಿಧಿಗಳಾದ ಲಿಯರ್ ದೊರೆಯಂಥವರ ವಿನಾಶಕ್ಕೆ ಕಾರಣೀಭೂತನಾಗುತ್ತಾನೆ.

ತಾನೂ ನಾಶವಾಗುತ್ತಾನಾದರೂ ಬರುವ ಯುಗದ ಮುನ್ನುಡಿ ಬರೆಯುತ್ತಾನೆ. ಲಿಯರನ ಆದರ್ಶ ವ್ಯವಸ್ಥೆ ಗತದಲ್ಲಿದೆ. ಆದರೆ ಎಡ್ಮಂಡನ ಆದರ್ಶ ತಾನೇ ಸೃಷ್ಟಿಸುತ್ತಿರುವ ಭವಿಷ್ಯದಲ್ಲಿದೆ.

ಪಾರಂಪರಿಕ ರಾಜವಂಶದ ಬುಡಕ್ಕೇ ಕೊಡಲಿಯೇಟು ಕೊಡುವ ಎಡ್ಮಂಡನ ಪಾತ್ರದಲ್ಲಿ, ಸನ್ನಿವೇಶದಲ್ಲಿ ರಾಜಾಡಳಿತಕ್ಕೆ ವಿಜ್ಞಾನದ ಬಲದ ಮೇಲೆ, ಮನುಷ್ಯ ಪ್ರಯತ್ನದ ಬಲದ ಮೇಲೆ ಮೂಡಿದ ಬಂಡವಾಳಶಾಹಿ ಏರ್ಪಾಟು ನೀಡಿದ ಹೊಡೆತದ ಸೂಚನೆಯಿದೆ. ಇದನ್ನು ಷೇಕ್ಸ್ಪಿಯರ್ ತನ್ನ ಟ್ರೊಲಿಯಸ್ ಕ್ರೆಸಿಡಾ ನಾಟಕದ ಸುರುವಿನ ಕೋರಸ್ನ ಮಾತುಗಳಲ್ಲಿ ಹೀಗೆ ಬಣ್ಣಿಸುತ್ತಾನೆ:

ಹೀಗೆ ಸ್ಥಾನಮಾನಗಳು ಕದಲಿ, ನಮ್ಮ ಗುರಿಗಳ ಏಣಿಗಳು
ಕೆಳಗುರುಳಿದಾಗ, ನಮ್ಮ ಯತ್ನಗಳೆಲ್ಲವೂ ಯತ್ನವಿಲ್ಲದಾಗುತ್ತವೆ
ಸಮುದಾಯಗಳು, ವಿದ್ಯಾಲಯಗಳ ಪದವಿಗಳು,

ನಗರವಾಸಿಗಳ ಸೋದರ ಸಂಬಂಧಗಳು, ಎರಡು ದಡಗಳ ನಡುವಣ
ಶಾಂತಿಯುತ ವ್ಯಾಪಾರ-ವ್ಯವಹಾರಗಳು, ವಂಶ-ಜಾತಿಗಳ ಹೆಗ್ಗಳಿಕೆ,
ವಯೋಮಾನದ ವಿಶೇಷ ಹಕ್ಕುಗಳು, ಮಕುಟ, ರಾಜದಂಡ, ಪ್ರಶಸ್ತಿ
ಇವೆಲ್ಲವೂ ಸ್ಥಾನ-ಮಾನಗಳಿಲ್ಲದೆ ಸ್ವಸ್ಥಾನಗಳಲ್ಲಿ
ಹೇಗೆ ಸ್ಥಾಯಿಯಾಗಬಲ್ಲವು?
ಏಸ್ಕಲಸ್ಸನ ಮತ್ತು ಷೇಕ್ಸ್ಪಿಯರನ ಯುಗಗಳ ನಡುವೆ ಆಗಿದ್ದ ಅತ್ಯಂತ ತಲಸ್ಪರ್ಶಿಯಾದ ಪಲ್ಲಟ ಯಾವುದು?

ಅಕ್ತೇವಿಯೋ ಪಾಜನ ಮಾತುಗಳಲ್ಲಿ ಹೇಳಬೇಕೆಂದರೆ ಸಾಂಪ್ರದಾಯಿಕ ಸಮಾಜಗಳಲ್ಲಿ ಗತವು ಇಂದಿನ ಬದುಕಿಗೆ ಮಾದರಿಗಳನ್ನೊದಗಿಸುತ್ತಿತ್ತು.

ಆದರೆ ಯೂರೋಪಿನ ಸಾಂಸ್ಕೃತಿಕ ಕ್ರಾಂತಿಯ ನಂತರದ ಸಮಾಜಗಳು ಇಂದಿನ ಮಾದರಿಗಳನ್ನು ಭವಿಷ್ಯದಲ್ಲಿ ಸ್ಥಾಪಿಸಿದವು. ಈ ಐತಿಹಾಸಿಕ ಮಾದರಿ ಪಲ್ಲಟದ ಪರಿಣಾಮವಾಗಿ ಸಮಾಜದ ಅವಿಭಾಜ್ಯ ಅಂಗವಾಗಿದ್ದ ಕಲಾಕಾರ ಅದರಿಂದ ಬೇರ್ಪಟ್ಟು ಪೂರ್ವಮಾದರಿಗಳಿಲ್ಲದ ಏಕಾಕಿತನವನ್ನು ಅನುಭವಿಸತೊಡಗಿದ.

ಪ್ರಕೃತಿಯ ವ್ಯವಸ್ಥೆಗೆ ಹೊಂದಿಕೊಳ್ಳುವ ಕಲೆಗೆ ಪ್ರಕೃತಿಯ ನಿಯಮಗಳನ್ನು ಬದಲಿಸುವ ವಿಜ್ಞಾನದ ನಿದರ್ಶನ ಎದುರಾಯಿತು.ಈ ಪರಿವರ್ತನಾ ಯುಗದಲ್ಲಿ ನಡೆದ ಇನ್ನೊಂದು ಘಟನೆಯೆಂದರೆ ಕಲೆಗೆ ಹಿಂದೆ ಇದ್ದ ಸಾಂಪ್ರದಾಯಿಕ ಆಸರೆ ಕುಸಿದು ಬಿದ್ದು, ಹೊಸ ಆಸರೆಯ ಅಗತ್ಯ ಬಂತು.

ಈ ಬಿಕ್ಕಟ್ಟನ್ನು ಷೇಕ್ಸ್ಪಿಯರನ ಕಲಾಜೀವನದಲ್ಲೇ ಕಾಣಬಹುದು. ಅವನಿಗೆ ನಿಶ್ಚಿತವಾದ ಆಶ್ರಯ ಇರಲಿಲ್ಲ. ಒಂದೊಂದು ಸಲ ಅರಮನೆಯಲ್ಲಿ, ಒಂದೊಂದು ಸಲ ಮಾಂಡಲಿಕರ ಆಸ್ಥಾನಗಳಲ್ಲಿ, ಒಂದೊಂದು ಸಲ ಜನರ ನಡುವಿನ ರಂಗಮಂಚದಲ್ಲಿ ನಾಟಕ ಪ್ರಯೋಗಿಸಬೇಕಾಗಿ ಬಂತು.

ಇದಕ್ಕೆ ಹೋಲಿಸಿದರೆ ಗ್ರೀಕ್ ನಾಟಕಕಾರರಿಗೆ ದಯೋನಿಸನ್ ಹಬ್ಬದ ಆಚರಣೆಯ ಸಂದರ್ಭದಲ್ಲಿ ಗ್ರೀಕ್ ನಗರ ಪ್ರಭುತ್ವದಿಂದ ಆರ್ಥಿಕ ಬೆಂಬಲ ಸಿಗುತ್ತಿತ್ತು. ಆಧುನಿಕತೆ ಮುನ್ನಡೆ ಸಾಧಿಸಿದ ಹಾಗೆ ನಿಶ್ಚಿತ ಆಶ್ರಯದ ನೆಲೆಗಳು ಮರೆಯಾಗತೊಡಗಿದವು. ಈ ಸಮಸ್ಯೆ ರೊಮ್ಯಾಂಟಿಕ್ ಯುಗದಲ್ಲಿ, ಅಂದರೆ ಹದಿನೆಂಟನೆಯ ಶತಮಾನದಿಂದಾಚೆಗೆ ಇನ್ನೂ ಗಂಭೀರವಾಗತೊಡಗಿತು.

ಮುಂದಿನ ಯುಗದ ಆದರ್ಶ ಕಲಾಕಾರ-ಕಾವ್ಯನಾಯಕ ತನ್ನನ್ನು ಹೊರಗೆಸೆದ ಸಮಾಜದ ಕಟು ವಿಮರ್ಶಕನಾದ ಅಥವಾ ಅದರ ವಿರೋಧಿಯಾದ ಬಂಡುಕೋರನಾದ. ಷೇಕ್ಸ್ಪಿಯರನ ಕಲ್ಪನೆಯಲ್ಲಿ ಬಂಡುಕೋರ ಖಳನಾಯಕ. ಆದರೆ ರೊಮ್ಯಾಂಟಿಕ್ ಮತ್ತು ಆನಂತರದ ಆಧುನಿಕ ಕಲೆಗಳಲ್ಲಿ ಬಂಡುಕೋರನೇ ಕಥಾನಾಯಕ.

ಭವಿಷ್ಯದಲ್ಲಿ ಬರಲಿರುವ ಆದರ್ಶಸಮಾಜದಲ್ಲಿ ತನಗೆ ಯುಕ್ತಸ್ಥಾನ ಸಿಕ್ಕಬಹುದೆಂಬ ಹಂಬಲದಿಂದ ಕೆಲವರು ಪ್ರಜಾಪ್ರಭುತ್ವ ಅಥವಾ ಸಮಾಜವಾದಿ ಮೌಲ್ಯಗಳನ್ನು ಕೊಂಡಾಡತೊಡಗಿದರೆ ಇನ್ನು ಕೆಲವರು ಕಲೆಯನ್ನೇ ಒಂದು ಆದರ್ಶವನ್ನಾಗಿ ನಂಬಿದರು.

ಒಂಟಿತನದ, ಪರಕೀಯತೆಯ, ಪ್ರತ್ಯೇಕತೆಯ, ಸಾವಿನ, ಏಕಾಕಿತನದ, ಅರ್ಥಹೀನತೆಯ ಕರಾಳ ಛಾಯೆ ಕಲೆಯ ಸುಂದರ ಜಗತ್ತನ್ನು ಆವರಿಸತೊಡಗಿತು. ಇನ್ನು ಕೆಲವರು, ವರ್ತಮಾನದ ಅರ್ಥಹೀನತೆಯಿಂದ ಪಾರಾಗಲು ಅಮಾನವೀಯವಾದ ಫ್ಯಾಸಿಸಂನ ಮೊರೆಹೊಕ್ಕರು.

ಫ್ರಾಂಕ್ ಕರ್ಮೋಡ್ ಹೇಳುವ ಪ್ರಕಾರ ಆಧುನಿಕ ಕಲೆಗಳ ಹಿಂದಣ ವಿಚಾರಧಾರೆ, ಸಿದ್ಧಾಂತ ಯಾವುದೇ ಇರಲಿ, ಒಟ್ಟಿನಲ್ಲಿ ಅದು ಮಾರುಕಟ್ಟೆಯ ಜಗತ್ತಿನ ನಿರಾಕರಣೆ. ಆದ್ದರಿಂದಲೇ ಎಕ್ಸ್ಪ್ರೆಷನಿಸಂ, ಕ್ಯೂಬಿಸಂ ಮುಂತಾದ ಚಿತ್ರಕಲೆಗಳ ಶೈಲಿಗಳಾಗಲಿ, ಅಸಂಗತ ನಾಟಕಗಳಾಗಲಿ, ಮಾಧುರ್ಯಬಾಹಿರವಾದ ಸಂಗೀತವಾಗಲಿ, ಒಟ್ಟು ಕತೆಯಿರದ ಕಾದಂಬರಿಗಳಾಗಲಿ, ಜಗತ್ತಿನ ವ್ಯಾಕರಣವನ್ನು ಖಂಡಿಸುವ ಕಾವ್ಯವಾಗಲಿ-ಇವೆಲ್ಲವೂ ಆಧುನಿಕತೆಯ ವಿವಿಧ ರೂಪಗಳು.

ಕಲಾಕಾರ ಮಾರುಕಟ್ಟೆಯ ಮಾಯೆಯನ್ನು ಬಿಟ್ಟೆನೆಂದು ನಂಬಿದರೂ ಮಾರುಕಟ್ಟೆಯ ಮಾಯೆ ಅವನನ್ನು ಬಿಡಲಿಲ್ಲ. ಪಿಕಾಸೋನಂಥ ಮಾರ್ಕ್ಸ್ವಾದಿ ಕಲಾವಿದರಿಗೂ ಮಾರುಕಟ್ಟೆ ಪ್ರತಿಷ್ಠಿತ ಜಾಗ ಕೊಟ್ಟಿತು.

ಇವತ್ತು ಸಮಕಾಲೀನ ಕಲೆ ಬಹುಮಟ್ಟಿಗೆ ಮಾರುಕಟ್ಟೆಯ ಬೆಂಬಲದಿಂದ ಬಾಳುತ್ತಿದೆ. ಆಧುನಿಕ ಸಮಾಜಗಳಲ್ಲಿ ಸಿನಿಮಾದಂಥ ಆಧುನಿಕ ಕಲೆಯಂತೂ ತಾನೇ ಒಂದು ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ಹಿಂದೆ ಬಂಡವಾಳವನ್ನು ವಿರೋಧಿಸಿದ ರಂಗಪಟುಗಳು ತಮ್ಮ ಕಲೆಯ ಉಳಿವಿಗಾಗಿ ಬೃಹತ್ ಉದ್ಯಮದ ಹಣವನ್ನು ಹೇಗೆ ಪಡೆದುಕೊಳ್ಳಬೇಕೆಂಬುದರ ಬಗ್ಗೆ ಪ್ರಗಾಢ ಚಿಂತನೆಗೆ ತೊಡಗಿದ್ದಾರೆ.

ಏಕಾಂತಪ್ರಿಯರಾದ, ಬಂಡುಕೋರರಾದ, ಕ್ರಾಂತಿಕಾರಿಗಳಾದ ಕಥಾನಾಯಕರು ಕಾಣೆಯಾಗುತ್ತಿದ್ದಾರೆ. ಅಥವಾ ಕಂಡರೆ ಜೋಕರ್ಗಳ ಹಾಗೆ ಕಾಣತೊಡಗಿದ್ದಾರೆ.
ಹಿಂದೆ ಗತದ ಆದರ್ಶಗಳನ್ನು ನಂಬಿ ಕೆಟ್ಟವರೆಷ್ಟೋ.

ಆ ಬಳಿಕ ಭವಿಷ್ಯದ ಆದರ್ಶಗಳನ್ನು ನಂಬಿ ಕೆಟ್ಟವರೆಷ್ಟೋ. ಈಗ ಸದ್ಯದ ಆದರ್ಶಗಳನ್ನು ನಂಬಿ ಕೆಡುವವರೂ ಅಷ್ಟೇ ಮಂದಿ. ಹಿಂದೆಯೂ ಆಶ್ರಯದಾತರ ಮತ್ತು ಕಲಾಕಾರರ ಸಂಬಂಧ ಸುಲಭವಾಗಿರಲಿಲ್ಲ. ಇಂದೂ ಆಗುವುದಿಲ್ಲ.

ಆದರೆ ಕಲೆ ಮಾತ್ರ ಹಿಂದಿನಂತೆ, ಇಂದೂ ತನ್ನ ಅತಂತ್ರ ಪರಿಸ್ಥಿತಿಯ ದ್ವಂದ್ವಗಳನ್ನು ಕಲಾತ್ಮಕವಾಗಿ ಚಿತ್ರಿಸುತ್ತಾ ಹೋಗಬೇಕಾಗಿದೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in) )

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.