ಮಂಗಳವಾರ, ಮೇ 11, 2021
28 °C

ಕಲಿಯಬೇಕು ಎಂದರೆ ಬೇಕಾದಷ್ಟು ಪಾಠಗಳು ಇವೆ...

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ಕಲಿಯಬೇಕು ಎಂದರೆ ಬೇಕಾದಷ್ಟು ಪಾಠಗಳು ಇವೆ...

ಒಂದು ತಿಂಗಳ ಅವಧಿ ದೊಡ್ಡದೇನಲ್ಲ. ಇಂದಿಗೆ ಅಧಿಕಾರದ ಗದ್ದುಗೆಯಲ್ಲಿ ಮೂವತ್ತೈದು ದಿನಗಳನ್ನು ಕಳೆದಿರುವ ಒಂದು ಸರ್ಕಾರದ ದಿಕ್ಕು ದೆಸೆಗಳನ್ನು ನಿರ್ಧರಿಸಲು, ಅಂದಾಜು ಮಾಡಲು ಈ ಅವಧಿ ಏನೇನೂ ಸಾಲದು. ಆದರೂ ಬೆಳೆಯ ಸಿರಿ (!) ಮೊಳಕೆಯಲ್ಲಿ ಎನ್ನುವ ಹಾಗೆ ಕೆಲವು ಬೆಳವಣಿಗೆಗಳು ಎದ್ದು ಕಾಣುವಂತೆ ನಡೆದಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಧಾವಂತದಲ್ಲಿ ಇರುವಂತೆ ಕಾಣುತ್ತದೆ. ನಿಜ, ಅವರಿಗೆ ಮುಖ್ಯಮಂತ್ರಿ ಆಗಬೇಕು ಎಂಬ ಕನಸು ಇತ್ತು. ಅದು ಎಲ್ಲರಿಗೂ ಇರುವಂಥ ಕೇವಲ ಅಧಿಕಾರದ ಕನಸು ಮಾತ್ರ ಆಗಿರಲಿಲ್ಲ. ಮೇಲುನೋಟಕ್ಕೆ ಒರಟನಂತೆ ಕಾಣುವ ಆದರೆ, ಆಳದಲ್ಲಿ ತುಂಬ ಜನಪರ ಕಾಳಜಿ ಇರುವ ಈ ಮನುಷ್ಯನಿಗೆ ಮುಖ್ಯಮಂತ್ರಿಯಾಗಿ ನಾಡಿಗೆ ಏನಾದರೂ ಒಳ್ಳೆಯದು ಮಾಡಬೇಕು ಎಂಬ ಆಸೆ ಇತ್ತು.

ಒಂದು ಸಾರಿ ಅಧಿಕಾರ ಸಿಕ್ಕರೆ ಏನೇನೋ ಮಾಡಬೇಕು ಎಂದು ಅವರು ಕನಸು ಕಂಡವರು. ಇವೆಲ್ಲ ಅಸಾಧ್ಯ ಕನಸು; ನ್ಯಾಯವಾಗಿ ನೋಡಿದರೆ ಈಡೇರಬಾರದ, ಈಡೇರಲಾಗದ ಕನಸು. ಕೇವಲ ಏಳು ವರ್ಷಗಳ ಹಿಂದೆ ಒಂದು ಪಕ್ಷವನ್ನು ಸೇರಿ ಆ ಪಕ್ಷದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಕುಳಿತುಕೊಳ್ಳಲು ಆಸೆ ಪಡುವುದು ಎಂದರೆ ಯಾರಾದರೂ ಜೋರಾಗಿ ನಕ್ಕು ಬಿಡುವಂಥ ಸಮಾಚಾರ. ಅದರರ್ಥ ಅವರಿಗೆ ಅರ್ಹತೆಯಿಲ್ಲ ಎಂದು ಅಲ್ಲ.

ರಾಜಕೀಯವಾಗಿ ಇವೆಲ್ಲ ಅಸಾಧ್ಯ ಸಂಗತಿಗಳು. ಕಾಂಗ್ರೆಸ್ ಪಕ್ಷದಲ್ಲಿಯೇ ಹುಟ್ಟಿ ಬೆಳೆದವರ ಹಿರಿತನದ ಲೆಕ್ಕದಲ್ಲಿ ಸಿದ್ದರಾಮಯ್ಯ ಕಿರಿಯರಲ್ಲಿ ಕಿರಿಯರು. ಆದರೂ ಅವರು ಈಗ ಮುಖ್ಯಮಂತ್ರಿ ಆಗಿದ್ದಾರೆ. ಇದು ಅವರ ಮೊದಲ ಸಮಸ್ಯೆ.

ಅವರಿಗೆ ಇಷ್ಟ ಇರಲಿಕ್ಕಿಲ್ಲ. ಆದರೆ, ಅವರ ಮೂಲವನ್ನು ಸ್ನೇಹಿತರು, ಹಿತಶತ್ರುಗಳು ಮತ್ತೆ ಮತ್ತೆ ಕೆದಕುತ್ತಾರೆ. ಸಂಪುಟದಲ್ಲಿ ಹಳೆಯ `ಆಶ್ರಮ'ದ ವಾಸನೆ ಇದೆ ಎಂದು ಎತ್ತಿ ತೋರಿಸುತ್ತಾರೆ. ಆಗದವರು ಅದನ್ನು ನಂಬಲು ತೊಡಗುತ್ತಾರೆ. ಪಕ್ಷದಲ್ಲಿ, ಸರ್ಕಾರದಲ್ಲಿ ನಿಧಾನವಾಗಿ ಅಪಶ್ರುತಿಯ ಗಾನಗಳು ಶುರುವಾಗುತ್ತವೆ. ಹಿಂದಿನ ಸರ್ಕಾರದಲ್ಲಿ ಅಧಿಕಾರ ಮುಗಿಯುವವರೆಗೂ ಇದೇ ಅಪಶ್ರುತಿ ಇತ್ತು. ಕೆಲವರು ಒಳಗಿನವರು, ಬಹುಪಾಲು ಹೊರಗಿನವರು. ಅಧಿಕಾರದಿಂದ ಹೊರಗೆ ಇರುವವರನ್ನು ಸಮಾಧಾನ ಮಾಡುವುದು ಬಹುಕಷ್ಟ.

ಸಿದ್ದರಾಮಯ್ಯ ಅವರಿಗೆ ಇದೂ ಇಷ್ಟ ಇರಲಿಕ್ಕಿಲ್ಲ : ಅವರು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಸರ್ಕಾರದಿಂದ ಹೊರಗೆ ಉಳಿಯಲು ಬಿಡಬಾರದಿತ್ತು. ಪರಮೇಶ್ವರ್ ತಮ್ಮ ಆಸೆ ಏನು ಎಂದು ಮುಚ್ಚಿಯೇನೂ ಇಟ್ಟಿರಲಿಲ್ಲ. ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಬೇಕಾಗಿತ್ತು; ಜತೆಗೆ ಒಂದು ಒಳ್ಳೆಯ ಖಾತೆಯೂ ಬೇಕಿತ್ತು. ಅವರು ಹಿಂದೆ ಯಾರೂ ನಿರ್ವಹಿಸದಂಥ ಹುದ್ದೆಯನ್ನೇನೂ ಕೇಳಿರಲಿಲ್ಲ. ಎರಡು ಸಾರಿ ಸಿದ್ದರಾಮಯ್ಯ ಹೊಂದಿದ್ದ ಉಪಮುಖ್ಯಮಂತ್ರಿ ಹುದ್ದೆಯನ್ನಷ್ಟೇ ಅವರು ಬಯಸಿದ್ದರು. ಅವರು ಹೇಗೂ ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿ ಇರಲಿಲ್ಲ. ಒಂದು ಪಕ್ಷ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಅದರ ಅಧ್ಯಕ್ಷರಾಗಿದ್ದವರೇ ಸಹಜವಾಗಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಬೇಕಾದವರು.

ಅವರು ದಲಿತರು; ಇದುವರೆಗೆ ಕರ್ನಾಟಕದಲ್ಲಿ ಒಂದು ಸಾರಿಯೂ ಅಧಿಕಾರದ ಗದ್ದುಗೆ ಹಿಡಿಯದ ಸಮುದಾಯಕ್ಕೆ ಸೇರಿದವರು. ಆದರೆ, ತಮ್ಮ ಕ್ಷೇತ್ರದಲ್ಲಿಯೇ ಸೋತ ಅವರು ಆರಂಭದಲ್ಲಿಯೇ ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಿಂದ ಹಿಂದೆ ಸರಿದರು. ತಮ್ಮ ಸೋಲಿಗೆ ಯಾರು ಕಾರಣ ಎಂದು ಅವರಿಗೇನು ಗೊತ್ತಿಲ್ಲವೇ? ಸ್ವತಃ ಅವರೂ ತಮ್ಮ ಸೋಲಿಗೆ ಕೆಲಮಟ್ಟಿಗೆ ಕಾರಣ ಇದ್ದರೂ, ದೂರಬೇಕು ಎಂದು ಬಯಸಿದರೆ ಅನ್ಯರ ಕಡೆಗೆ ಬೆರಳು ತೋರಿಸಲು ಯಾರ ಅಡ್ಡಿ?

ಹಾಗೆ ನೋಡಿದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರದ ಪ್ರಮಾಣ ವಚನ ತೆಗೆದುಕೊಳ್ಳುವಾಗ ತಮ್ಮ ಪಕ್ಕದಲ್ಲಿ ಪರಮೇಶ್ವರ್ ಅವರೂ ಇರಲಿ ಎಂದು ಬಯಸಬೇಕಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ತಮ್ಮಷ್ಟೇ ಪರಮೇಶ್ವರ್ ಅವರೂ ಕಾರಣಕರ್ತರು ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತಿರಬೇಕಿತ್ತು. ಅವರಿಬ್ಬರೂ ಜತೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರೆ ಇಡೀ ರಾಜ್ಯಕ್ಕೆ, ದೇಶಕ್ಕೆ ಒಂದು ಅಪರೂಪದ ಸಂದೇಶವನ್ನು ಕೊಟ್ಟಂತಾಗುತ್ತಿತ್ತು; ಮಾದರಿಯನ್ನು ಹಾಕಿದಂತೆ ಆಗುತ್ತಿತ್ತು.

ಸಿದ್ದರಾಮಯ್ಯ ಅವರು ಒಂದು ಸಾರಿ ನೇತೃತ್ವ ವಹಿಸಿದ್ದ ಅಹಿಂದ ಚಳವಳಿಯಲ್ಲಿ ದಲಿತರೂ ಇದ್ದರಲ್ಲ? ಪರಮೇಶ್ವರ್‌ಗೆ ಉಪಮುಖ್ಯಮಂತ್ರಿ ಹುದ್ದೆ ಕೊಡೋಣ ಎಂದು ಅವರೇ ಹೈಕಮಾಂಡ್‌ನ ನಾಯಕರ ಮುಂದೆ ವಾದಿಸಬೇಕಿತ್ತು. ಅದು ಆಗಲಿಲ್ಲ. ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ಒಪ್ಪದೇ ಇರಲು ಸಿದ್ದರಾಮಯ್ಯ ಅವರಿಗೆ ತಮ್ಮದೇ ಆದ ಕಾರಣಗಳು ಇದ್ದರೂ ಇರಬಹುದು. ಅವರಿಗೆ ಎರಡು ಅಧಿಕಾರ ಕೇಂದ್ರಗಳು ಇದ್ದರೆ ಎತ್ತು ಏರಿಗೆ ಎಳೆಯಿತು, ಕೋಣ ನೀರಿಗೆ ಎಳೆಯಿತು ಎನ್ನುವಂತೆ ಆದೀತು ಎಂದು ಅವರು ಅಂದುಕೊಂಡಿದ್ದಿರಬಹುದು. ಆದರೆ, ಈಗ ಪರಮೇಶ್ವರ್ ಹೊರಗೆ ಉಳಿದಿದ್ದಾರೆ.

ಎರಡು ಸಾರಿಯೂ ಅವರು ಶಾಸಕಾಂಗ ಪಕ್ಷದ ಸಭೆಗೆ ಬಂದಿಲ್ಲ. ಹೊರಗಡೆ ಏನು ಸಂದೇಶ ಹೋಗುತ್ತದೆ? ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷರಿಗೆ ಸರಿಯಿಲ್ಲ ಎಂದೇ ಅಲ್ಲವೇ? ಇದನ್ನು ಸಿದ್ದರಾಮಯ್ಯ ಅವರು ಬಯಸುತ್ತಾರೆಯೇ? ಇನ್ನು ಸ್ವಲ್ಪ ಸಮಯ ಆದ ಮೇಲೆ ಹೋಗಿ ಬಂದಲ್ಲೆಲ್ಲ ಅವರಿಗೆ ಇದೇ ಪ್ರಶ್ನೆ ಎದುರಾದರೆ ಅಚ್ಚರಿಯಿಲ್ಲ. ತಾಳ್ಮೆಯಿಲ್ಲದ ಸಿದ್ದರಾಮಯ್ಯ ಎದುರಿಸಲು ಬಯಸುವ ಪ್ರಶ್ನೆಯೇ ಅದು?

ಅಳೆದು ಸುರಿದು ಅವರೇ ರಚಿಸಿದ ಸಂಪುಟದಲ್ಲಿ ಎಲ್ಲವೂ ಸರಿ ಇದೆಯೇ? ಎಲ್ಲರಿಗೂ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಖಾತೆಗಳು ಹಂಚಿಕೆ ಆಗಿವೆಯೇ? ಇಲ್ಲ ಎನಿಸುತ್ತದೆ. ಇಬ್ಬರು ಮೂವರಿಗೆ ಭಾರಿ ಅಸಮಾಧಾನ ಇದೆ. ಖಾತೆ ಹಂಚಿಕೆಯಾದ ಕೂಡಲೇ ಅವರು ತಮ್ಮ ಅಸಮಾಧಾನವನ್ನೇನೂ ಬಚ್ಚಿಟ್ಟುಕೊಳ್ಳದೇ ಕೂಗಾಡಿದ್ದಾರೆ. ಸಿದ್ದರಾಮಯ್ಯ ಅವರ ಜತೆಗೆ ಸಂಪುಟದಲ್ಲಿ ಇರುವವರು ಅನೇಕ ವರ್ಷ ಕೂಡಿ ಕೆಲಸ ಮಾಡಿದವರು. ಏಕವಚನದ ಗೆಳೆಯರು. ಈಗ ಮಂತ್ರಿಗಳಾಗಿರುವ ಹಿರಿಯರನ್ನು ಮುಖ್ಯಮಂತ್ರಿ ವಿಶ್ವಾಸಕ್ಕೆ ತೆಗೆದುಕೊಂಡು `ನಿಮಗೆ ಯಾವ ಖಾತೆ ಬೇಕು' ಎಂದು ಕೇಳಬಹುದಿತ್ತು.

ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆದ ಕೂಡಲೇ ಪ್ರಮುಖ ಖಾತೆಗಳನ್ನೆಲ್ಲ ಹಿರಿಯ ಸಹೋದ್ಯೋಗಿಗಳಿಗೆ ಹಂಚಲು ಹೇಳಿದ್ದರಂತೆ. ಕೃಷ್ಣ ಅವರ ಕಾರ್ಯದರ್ಶಿ ಸಚಿವರಾಗಬೇಕಿದ್ದವರನ್ನೆಲ್ಲ ಸಂಪರ್ಕಿಸಿ ಅವರ ಆಸೆ, ಆಕಾಂಕ್ಷೆಗಳನ್ನು ಅರಿತಿದ್ದರಂತೆ. ಸಂಪುಟ ಸಭೆಯಲ್ಲಿ ಕೆ.ಎಚ್.ರಂಗನಾಥ ಅವರ ಮಾತೇ ಕಡೆಯದಾಗಿರುತ್ತಿತ್ತಂತೆ. ನಾನು ಉದ್ದೇಶಪೂರ್ವಕವಾಗಿ ತೀರಾ ಈಚಿನ ಒಂದು ಕಾಂಗ್ರೆಸ್ ಸರ್ಕಾರದ ಉದಾಹರಣೆ ಕೊಡುತ್ತಿದ್ದೇನೆ.

ಈಗ ಸಿದ್ದರಾಮಯ್ಯ ಅವರು ಪ್ರಮುಖ ಖಾತೆಗಳನ್ನೆಲ್ಲ ತಮ್ಮ ಬಳಿಯೇ ಇಟ್ಟುಕೊಂಡಂತೆ ಭಾಸವಾಗುತ್ತದೆ. ಅವರಿಗೆ ಆ ಖಾತೆಗಳಲ್ಲಿ ಸುಧಾರಣೆ ತರಬೇಕು ಎಂಬ ನೈಜ ಉದ್ದೇಶ ಇದ್ದಿರಬಹುದು. ಆದರೆ, ಈಗ ಮುಖ್ಯಮಂತ್ರಿಗಳು ಹಣಕಾಸು ಇಲಾಖೆಯಲ್ಲಿ ತರಬೇಕಾದ ಶಿಸ್ತೇ ಬೇಕಾದಷ್ಟು ಇದೆಯಲ್ಲ? ಅನೇಕ ಖಾತೆಗಳನ್ನು ಒಬ್ಬೊಬ್ಬರೇ ನಿರ್ವಹಿಸಲು ಆಗುತ್ತದೆಯೇ? ಮುಖ್ಯಮಂತ್ರಿ ಕೂಡ ಸಚಿವ ಸಂಪುಟದಲ್ಲಿ ಒಬ್ಬ ಸದಸ್ಯ ಅಷ್ಟೇ. ಸಂಪುಟ ಎಂದರೆ ಅದು ಯಾವಾಗಲೂ ಸಾಮೂಹಿಕ ಜವಾಬ್ದಾರಿಯನ್ನು ಪ್ರತಿನಿಧಿಸುವ ಒಂದು ವ್ಯವಸ್ಥೆ. ಅವರವರ ಅರ್ಹತೆಗೆ ತಕ್ಕಂತೆ ಕಾರ್ಯಭಾರ ಸಿಗದೇ ಇದ್ದಾಗ ಸಾಮೂಹಿಕ ಹೊಣೆಗಾರಿಕೆ ಎಂಬುದು ಹೊರಟು ಹೋಗುತ್ತದೆ.

`ಯಾರ ಕಡೆಯಿಂದ ಮಾಡಿಸಿಕೊಳ್ಳುತ್ತಾರೆಯೋ ಮಾಡಿಸಿಕೊಳ್ಳಲಿ, ನನಗೆ ಎಷ್ಟು ಕೆಲಸ ಕೊಟ್ಟಿದ್ದಾರೆಯೋ ಅಷ್ಟನ್ನು ಮಾತ್ರ ಮಾಡುತ್ತೇನೆ' ಎಂಬ ನಿರಾಕರಣೆ ಪ್ರವೃತ್ತಿ ಶುರುವಾಗುತ್ತದೆ. ಈಗ ಕೆಲವು ಸಚಿವರ ವರ್ತನೆಯಲ್ಲಿ ಅದು ಕಾಣುತ್ತಿದೆ.

ಸಿದ್ದರಾಮಯ್ಯ ಅವರಿಗೆ ಸಂಪುಟ ರಚಿಸುವಾಗ ಏನೇನು ಒತ್ತಡಗಳು ಇದ್ದುವೋ ಏನೋ? ಅವರ ಈಗಿನ ಸಂಪುಟವನ್ನು ಗಮನಿಸಿದರೆ ಅದರಲ್ಲಿ ಪ್ರತಿಭೆ ಮತ್ತು ಪ್ರತಿಫಲನ ಚಿಂತನೆಯ ಕೊರತೆ ಕಾಣುತ್ತದೆ; ಸಾಮೂಹಿಕ ಜವಾಬ್ದಾರಿಯ ಅರಕೆ ಕಾಣುತ್ತದೆ. ಈ ಸರ್ಕಾರ ತಮ್ಮದು ಎಂದು ಅವರಿಗೆಲ್ಲ ಅನಿಸಿದ್ದರೆ ರಾಜ್ಯಪಾಲರಿಗೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯ ಆರಂಭದ ದಿನವೇ ವಿಧಾನಸಭೆಯಲ್ಲಿ ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಒಬ್ಬರೇ ಕುಳಿತುಕೊಂಡಿರಬೇಕಿರಲಿಲ್ಲ.

ಸದನ ಆರಂಭವಾದ ಮೊದಲ ದಿನವೇ ಇದು ನಡೆದುದು ಸರ್ಕಾರಕ್ಕೂ ಮರ್ಯಾದೆ ತರುವುದಿಲ್ಲ. ಸದನಕ್ಕೂ ತರುವುದಿಲ್ಲ. ಹಾಗಾದರೆ ಸಮಸ್ಯೆ ಏನು? ಸಿದ್ದರಾಮಯ್ಯ ಸಮಾಜವಾದಿ ಹಿನ್ನೆಲೆಯಿಂದ ಬಂದವರು. ಉದ್ದಕ್ಕೂ ಸ್ವತಂತ್ರವಾಗಿ ಬದುಕಿದವರು. ಕಾಂಗ್ರೆಸ್‌ನ `ಜೀ ಹುಜೂರ್' ಸಂಸ್ಕೃತಿಗೆ ಒಗ್ಗುವುದು ಅವರಿಗೆ ಕಡುಕಷ್ಟ. ಈಗಲೂ ಅವರ ಮಾತಿನಲ್ಲಿ `ನಾವು ಮತ್ತು ಕಾಂಗ್ರೆಸ್ಸಿಗರು' ಎಂದು ಬರುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಹೊಂದಿಕೊಳ್ಳುವುದು ಅವರಿಗೆ ಮಾನಸಿಕವಾಗಿ ಎಷ್ಟು ಕಷ್ಟವಾಗುತ್ತಿದೆ ಎಂಬುದರ ಒಂದು ಸಣ್ಣ ಸೂಚನೆ ಇರಬಹುದು.

ಸಿದ್ದರಾಮಯ್ಯ ಅವರ ಆಳದ ಮನಸ್ಸಿನಲ್ಲಿ ಏನೇ ಇರಲಿ, ಇಲ್ಲದಿರಲಿ. ಕಾಂಗ್ರೆಸ್ ಪಕ್ಷ ಮಾತ್ರ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನೇ ಕೊಟ್ಟಿದೆ. ಅದು ಸಣ್ಣ ಮಾತೇನೂ ಅಲ್ಲ. ಸಿದ್ದರಾಮಯ್ಯನವರ ಜೀವನದ ಮಹತ್ವಾಕಾಂಕ್ಷೆಯಾಗಿದ್ದ ಒಂದು ಹುದ್ದೆಯನ್ನು ಕೊಡಲು ಹೈಕಮಾಂಡ್‌ನಲ್ಲಿ ಕುಳಿತವರು ದಡ್ಡರೇನೂ ಅಲ್ಲ. ಅವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ `ಮಧ್ಯಮ ಜಾತಿ'ಯ ಸಿದ್ದರಾಮಯ್ಯ ಅಧಿಕಾರದ ಗದ್ದುಗೆಯಲ್ಲಿ ಇದ್ದರೆ ಉಳಿದ `ಮೇಲು, ಕೆಳಗಿನ' ಸಮುದಾಯಗಳನ್ನೂ ತಮ್ಮ ಜತೆಗೆ ತೆಗೆದುಕೊಂಡು ಹೋಗಲು ಅನುಕೂಲ ಎಂದು ಅವರು ಲೆಕ್ಕ ಹಾಕಿದಂತಿದೆ.

ಹಾಗೆಂದ ಕೂಡಲೇ ಲೋಕಸಭೆ ಚುನಾವಣೆ ಆದ ಕೂಡಲೇ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳಬೇಕಿಲ್ಲ. ಆದರೆ, ಅವರು ಲೋಕಸಭೆ ಚುನಾವಣೆ ಆದ ಕೂಡಲೇ ಮುಖ್ಯಮಂತ್ರಿಯಾಗಿ ಉಳಿಯುವುದಿಲ್ಲ ಎಂದು ಈಗಲೇ ಅನೇಕರು ಭವಿಷ್ಯ ನುಡಿಯುತ್ತಿದ್ದಾರೆ. ಇಷ್ಟ ಇರಲಿ, ಇಲ್ಲದೇ ಇರಲಿ ತಾನು ಐದು ವರ್ಷ ಅಧಿಕಾರದಲ್ಲಿ ಇರುತ್ತೇನೆ ಎಂದು ಅವರು ಮತ್ತೆ ಮತ್ತೆ ಸ್ಪಷ್ಟೀಕರಣ ಕೊಡಬೇಕಾಗಿದೆ.

ಸಿದ್ದರಾಮಯ್ಯ ಸ್ವಭಾವತಃ ಒಬ್ಬ ನಿರಂಕುಶ ವ್ಯಕ್ತಿ. ಅದು ಅವರು ಬೆಳೆದು ಬಂದ ರೀತಿ. ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ತೆಗೆದುಕೊಂಡ ಕೂಡಲೇ ಸೀದಾ ವಿಧಾನಸೌಧಕ್ಕೆ ಹೋಗಿ ಒಂದು ರೂಪಾಯಿಗೆ ಒಂದು ಕಿಲೊದಂತೆ ಮೂವತ್ತು ಕಿಲೊ ಅಕ್ಕಿ ಕೊಡುವುದಾಗಿ ಪ್ರಕಟಿಸಿಬಿಟ್ಟರು. ಅಂಥ ತುರ್ತು ಏನಿತ್ತು? ಒಂದು ಪಕ್ಷದ ಪ್ರಣಾಳಿಕೆ ಎಂಬುದು ಐದು ವರ್ಷದ ಅವಧಿಯದು. ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಅದನ್ನು ಜಾರಿ ಮಾಡಬೇಕಾದ ಅಗತ್ಯವೇನೂ ಇರಲಿಲ್ಲ. ಆದ್ಯತೆಯ ಸಂಗತಿಗಳು ಇನ್ನೂ ಬೇಕಾದಷ್ಟು ಇದ್ದುವು.

ಒಂದು ರೂಪಾಯಿಗೆ ಒಂದು ಕಿಲೊ ಅಕ್ಕಿ ಈಗಲೇ ಕೊಡಿ ಎಂದು ಅವರಿಗೆ ಯಾರು ಕೇಳಿದ್ದರು? ಲೋಕಸಭೆ ಚುನಾವಣೆ ಬರುವುದಕ್ಕಿಂತ ಮುಂಚೆ ಅದನ್ನು ಜಾರಿ ಮಾಡಬಹುದಿತ್ತು. ಆ ಮೂಲಕ ಪಕ್ಷಕ್ಕೆ ಒಂದಿಷ್ಟು ಲಾಭವನ್ನೂ ಮಾಡಿಕೊಳ್ಳಬಹುದಿತ್ತು. ಸಂಪುಟ ರಚನೆ ಮಾಡಿ, ಅಲ್ಲಿ ಈ ವಿಷಯ ಇಟ್ಟು ಅದರ ಸಾಧಕ-ಬಾಧಕ ಕುರಿತು ಚರ್ಚೆ ಮಾಡಬಹುದಿತ್ತು. ಆಗ ಅದು ಸರ್ಕಾರದ ತೀರ್ಮಾನ ಆಗುತ್ತಿತ್ತು, ಪಕ್ಷದ ತೀರ್ಮಾನ ಆಗುತ್ತಿತ್ತು. ಅದು ಅವರಿಗೆ ಬೇಡವಾಗಿತ್ತೇ? `ನಾನು ಅದನ್ನು ಮಾಡಿದೆ' ಎಂದು ಅವರಿಗೆ ಹೇಳಿಕೊಳ್ಳಬೇಕಿತ್ತೇ?

`ನಾನು' ಎಂಬುದು ಒಂದು ಸಮಸ್ಯೆ. ಅದನ್ನು ಸಿದ್ದರಾಮಯ್ಯ ಗೆಲ್ಲಬೇಕು. ಕಾಂಗ್ರೆಸ್ಸಿನಲ್ಲಿ `ನಾನು' ಎಂಬುದಕ್ಕೆ ಜಾಗವೇ ಇಲ್ಲ. ಆ ಅರ್ಥದಲ್ಲಿ ಅವರು ಆರಂಭದಲ್ಲಿಯೇ ಎಡವಿದ್ದಾರೆ. ಮುಂದಿನ ದಾರಿಯಲ್ಲಿ ಅವರಿಗೆ ತೊಡರುಗಾಲು ಹೊಡೆಯಲು ಬೇಕಾದಷ್ಟು ಮಂದಿ ಕಾದಿದ್ದಾರೆ; ಪಾಠ ಕಲಿಯಬೇಕು ಎಂದರೆ ಮೂವತ್ಮೂರು ದಿನಗಳು ಖಂಡಿತ ಚಿಕ್ಕ ಅವಧಿಯಲ್ಲ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.