ಅವನೊಬ್ಬ ಪ್ರವಾಸಿ. ದೇಶ ನೋಡಲೆಂದು ಹೊರಟು ಊರು ಊರು ಅಲೆದ. ಒಂದು ಬಾರಿ ಆತ ನಡೆಯುತ್ತ ಹೊರಟಾಗ ದಾರಿಯಲ್ಲಿ ಯಾವ ಊರೂ ಕಾಣಲಿಲ್ಲ. ಬಿಸಿಲಿನಲ್ಲಿ ನಡೆದದ್ದರಿಂದ ಆಯಾಸವಾಗಿದೆ, ಗಂಟಲು ಒಣಗಿದೆ. ತುಂಬ ಹಸಿವಾಗಿ ಕಣ್ಣಿಗೆ ಕತ್ತಲು ಕವಿಯುತ್ತಿದೆ. ಹಾಗೆಯೇ ಒದ್ದಾಡಿಕೊಂಡು ಎರಡು ಮೈಲಿ ನಡೆದ ಮೇಲೆ ಇನ್ನು ನಡೆಯುವುದೇ ಸಾಧ್ಯವಿಲ್ಲವೆನ್ನಿಸಿ ರಸ್ತೆಯ ಪಕ್ಕದಲ್ಲಿ ವಿಶಾಲವಾಗಿ ಹರಡಿಕೊಂಡಿದ್ದ ಮರದ ನೆರಳಿನಲ್ಲಿ ಕುಳಿತುಕೊಂಡ.
ಸ್ವಲ್ಪ ಹಾಯೆನಿಸಿತು.

ಆದರೆ, ನೆರಳಿನಲ್ಲಿ ಕುಳಿತರೆ ಹಸಿವು, ನೀರಡಿಕೆ ತಪ್ಪುವುವೇ? ಆತ ಕೊರಗಿದ. ಇದೆಲ್ಲಿ ಸಿಕ್ಕಿ ಹಾಕಿಕೊಂಡೆ? ಹತ್ತಿರದಲ್ಲಿ ಯಾವುದಾದರೂ ಊರು ಇದೆಯೇ ಅಥವಾ ಯಾವುದಾದರೂ ಹೋಟೆಲ್ ಇದೆಯೇ ಎಂದು ಕೇಳೋಣವೆಂದರೆ ಯಾರೂ ಇಲ್ಲವಲ್ಲ. ಯಾರಾದರೂ ಈಗ ಸಿಕ್ಕಿದ್ದರೆ ಎಷ್ಟು ಚೆನ್ನಾಗಿತ್ತು ಎಂದುಕೊಂಡ. ಅವನ ಯೋಚನೆ ಮುಗಿಯುವಷ್ಟರಲ್ಲಿ ಅವನ ಮುಂದೆ ಒಬ್ಬ ವ್ಯಕ್ತಿ ನಿಂತಿದ್ದ. ಅವನಿಗೆ ಬಲು ಆಶ್ಚರ್ಯ. ಎಲ್ಲಿಂದ ಬಂದ ಈತ? ಈಗ ಹತ್ತು ಸೆಕೆಂಡಿನ ಹಿಂದೆ ಯಾರೂ ಇರಲಿಲ್ಲವಲ್ಲ? ಇವನೇನು ಮಾಯಾವಿಯೋ ಏನೋ! ಹೊಟ್ಟೆ ಹಸಿದು ಕಂಗಾಲಾಗಿದೆ.

ಈಗ ಊಟ ಸಿಕ್ಕರೆ ಎಷ್ಟು ಸಂತೋಷ. ಇವನನ್ನು ಹತ್ತಿರದಲ್ಲಿ ಯಾವುದಾದರೂ ವ್ಯವಸ್ಥೆ ಇದೆಯೇ ಎಂದು ಕೇಳಬೇಕು ಎನ್ನವಷ್ಟರಲ್ಲಿ ಮನುಷ್ಯ ಮಾಯವಾಗಿದ್ದ. ಬದಲಾಗಿ ಅವನ ಮುಂದೆ ದೊಡ್ಡ ತಟ್ಟೆ ಬಂದು ಕುಳಿತಿದೆ. ಅದರ ತುಂಬ ಸಮೀಚೀನವಾದ ಆಹಾರ! ಈ ಪ್ರವಾಸಿ ಗಾಬರಿಯಾದ. ಏನೇನೋ ಆಗುತ್ತಿದೆಯಲ್ಲವೇ? ಊಟ ಅಪೇಕ್ಷಿಸಿದ ತಕ್ಷಣ ಊಟ ಬಂದಿದೆ. ಚಿಂತೆ ಆಮೇಲೆ ಮಾಡಿದರಾಯಿತು ಎಂದುಕೊಂಡು ಊಟ ಮುಗಿಸಿದ. ಹೊಟ್ಟೆ ತುಂಬಿದ ತೃಪ್ತಿಯ ತೇಗು ಬಂದಿತು. ಹತ್ತು ನಿಮಿಷದಲ್ಲಿ ಕಣ್ಣು ಎಳೆಯತೊಡಗಿದವು. ಮಲಗಬೇಕೆಂದರೆ ಸುತ್ತ ಮುತ್ತ ದೂಳು, ಒಣಗಿದ ಎಲೆಗಳು, ಮುಳ್ಳುಗಳು.

ತಕ್ಷಣ ಅವನಿಗೊಂದು ಆಲೋಚನೆ ಬಂತು. ಈಗ ಇಲ್ಲೊಂದು ಸೊಗಸಾದ ಮಂಚ, ಮಂಚದ ಮೇಲೊಂದು ಮೃದುವಾದ ಹಾಸಿಗೆ ಇದ್ದರೆ ಎಷ್ಟು ಚೆನ್ನಾಗಿರುತ್ತದಲ್ಲವೇ? ಮರುಕ್ಷಣವೇ ಅಲ್ಲೊಂದು ಅತ್ಯಂತ ಸುಂದರವಾದ ಮಂಚ ಮತ್ತು ಅದರ ಮೇಲೊಂದು ತುಂಬ ಮೃದುವಾದ ಹಾಸಿಗೆ ಬಂದು ಕುಳಿತಿತ್ತು. ಆಗ ಅವನಿಗೆ ಅರ್ಥವಾಯಿತು. ಬಹುಶಃ ತಾನು ಕುಳಿತಿದ್ದು ಕಲ್ಪವೃಕ್ಷದ ಕೆಳಗೆ. ಅದಕ್ಕೇ ಬಯಸಿದ್ದೆಲ್ಲ ಬಂದು ಬೀಳುತ್ತಿದೆ. ಇಂಥ ಅವಕಾಶ ಮೇಲಿಂದ ಮೇಲೆ ಬರುತ್ತದೆಯೇ? ಆರಾಮವಾಗಿ ಕಾಲು ಚಾಚಿ ಮಲಗಿಕೊಂಡ. ಗಾಢವಾದ ನಿದ್ರೆ ಬಂದಿತು. ಎರಡು ಗಂಟೆ ನಿದ್ರೆ ಮಾಡಿ ಎದ್ದ ಮೇಲೆ ಬಿಸಿಬಿಸಿ ಚಹಾ ಬೇಕೆನ್ನಿಸಿತು. ಅದೂ ಬಂದೇ ಕುಳಿತಿತು.

ಚಹಾ ಕುಡಿದ ಮೇಲೆ ಸ್ವಲ್ಪ ಬುದ್ಧಿ ಚುರುಕಾಯಿತು. ಆತ ಮತ್ತೆ ಚಿಂತೆ ಮಾಡತೊಡಗಿದ. ನಾನು ಈ ಮರವನ್ನು ಕಲ್ಪವೃಕ್ಷ ಎಂದು ಭಾವಿಸಿದ್ದೇನೆ. ಅದು ಹಾಗಲ್ಲದೇ ಭೂತಗಳ ಕಾಟವೂ ಇರಬಹುದಲ್ಲವೇ? ಅವೂ ಕೂಡ ಹೀಗೆಯೇ ಕೇಳಿದ್ದನ್ನೆಲ್ಲ ಕೊಡುತ್ತವಂತೆ. ಹೀಗೆ ಎಂದುಕೊಳ್ಳುವುದರೊಳಗೆ ನಾಲ್ಕಾರು ಭೂತಗಳು ಬಂದು ನಿಂತೇ ಬಿಟ್ಟವು! ಈತ ವಿಪರೀತ ಗಾಬರಿಯಾದ. ಮತ್ತೆ ಚಿಂತೆ ಪ್ರಾರಂಭವಾಯಿತು, ಭೂತಗಳು ಮೊದ ಮೊದಲು ಬೇಡಿದ್ದನ್ನೆಲ್ಲ ಕೊಟ್ಟು ತೃಪ್ತಿಪಡಿಸಿ ನಂತರ ಕೊಂದೇ ಬಿಡುತ್ತವಂತೆ.

ಈಗ ನನಗೂ ಹಾಗೆಯೇ ಕೇಳಿದ್ದನ್ನೆಲ್ಲ ನೀಡಿವೆ. ಹಾಗಾದರೆ ನನ್ನನ್ನು ಕೊಂದೇ ಬಿಡುತ್ತವೆಯೇ? ಈ ಪ್ರಶ್ನೆ ಮನಸ್ಸಿನಲ್ಲಿ ಸ್ಥಿರವಾಗಿ ನಿಲ್ಲುವ ಮೊದಲೇ ಆತ ಹೃದಯಾಘಾತವಾಗಿ ಸತ್ತು ಬಿದ್ದಿದ್ದ. ಅವನ ಚಿಂತೆಗಳೆಲ್ಲ ಸತ್ಯವಾಗಿದ್ದವು. ಜೀವನವೂ ಒಂದು ಕಲ್ಪವೃಕ್ಷ. ನಾವು ಚಿಂತಿಸಿದ್ದನ್ನೆಲ್ಲ ಕೊಡುತ್ತದೆ. ಆದರೆ ನಾವು ಹೇಗೆ ಚಿಂತಿಸುತ್ತೇವೆ ಎನ್ನುವುದು ಮುಖ್ಯ.

ನಾವು ಸದಾಕಾಲ ಧನಾತ್ಮಕವಾಗಿ ಚಿಂತಿಸುತ್ತ, ಪ್ರಯತ್ನಿಸುತ್ತ ಇದ್ದರೆ ಅವು ನಮ್ಮಲ್ಲಿ ಶಕ್ತಿಯನ್ನು ತುಂಬಿ ಅಸಾಧ್ಯವೆನ್ನಿಸಿದ್ದನ್ನೆಲ್ಲ ಸಾಧ್ಯವಾಗಿಸುತ್ತವೆ. ಅದೇ ನಾವು ಸದಾ ಹೆದರಿಕೆಯಲ್ಲಿ, ನಾನು ಸೋತೆ, ನನ್ನಿಂದ ಇನ್ನು ಸಾಧ್ಯವಿಲ್ಲ, ಮುಗಿದೇ ಹೋಯಿತು ಎಂದುಕೊಳ್ಳುತ್ತಿದ್ದರೆ ಸುಲಭ ಸಾಧ್ಯವಾದ ಕಾರ್ಯಕೂಡ ಅಸಾಧ್ಯವಾಗಿ ನಿಂತು ನಮ್ಮ ಶಕ್ತಿಯ ಹರಣ ಮಾಡುತ್ತವೆ. ನಿಮ್ಮ ಸಾಧನೆಯನ್ನು ನಿಮ್ಮ ಆಲೋಚನೆಗಳು ತೀರ್ಮಾನಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.