ಭಾನುವಾರ, ಮೇ 16, 2021
22 °C

ಕಾಗಾವಾ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ತೊಯೋಹಿಕೋ ಕಾಗಾವಾ (1888-1960) ಜಪಾನಿನ ಗಾಂಧಿ ಎಂದೇ ಖ್ಯಾತರಾದವರು. ಇವರು ಮಾಡಿದ ಸಾಧನೆಗಳನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ.ಕಾಗಾವಾ ಬಾಲ್ಯದಲ್ಲೇ ತಂದೆ-ತಾಯಿಯರನ್ನು ಕಳೆದುಕೊಂಡು ದೂರದ ಶಾಲೆ ಸೇರಿದರು. ಅಲ್ಲಿ ಮೇಯರ್ಸ್ ಮತ್ತು ಲೋಗನ್ ಎಂಬ ಇಬ್ಬರು ಅಮೆರಿಕೆಯ ಶಿಕ್ಷಕರ ಪ್ರಭಾವಕ್ಕೆ ಒಳಗಾಗಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದರು. ಮಾನವರ ಸೇವೆಯನ್ನೇ ಗುರಿಯಾಗಿಟ್ಟುಕೊಂಡು ತಮ್ಮದೆಲ್ಲವನ್ನೂ ತೊರೆದು ಕೋಬೆ ಪ್ರಾಂತದ ಅತ್ಯಂತ ದರಿದ್ರವಾದ ಕೊಳೆಗೇರಿಯನ್ನು ಸೇರಿ ಅಲ್ಲಿಯೇ ಒಂದು ಗುಡಿಸಲಿನಲ್ಲಿ ಇದ್ದು ಬಿಟ್ಟರು.

 

ಅಲ್ಲಿ ಬದುಕಿದ್ದ ಜನರ ಬವಣೆ ಹೃದಯ ತಟ್ಟಿತು. ಅನಾರೋಗ್ಯದ ಗೂಡಾಗಿದ್ದ ಹಿರಿಯರು, ಮರುದಿನದ ಊಟ ಗಳಿಸುವುದನ್ನು ಬಿಟ್ಟು ಬೇರೇನೂ ಧ್ಯೇಯವನ್ನರಿಯದೇ ಪಶುಗಳಂತೆ ಬದುಕುತ್ತಿದ್ದ ತರುಣರು, ದೇಹ ಮಾರಿ ಬದುಕುತ್ತಿದ್ದ ಪುಟ್ಟ ಪುಟ್ಟ ಹುಡುಗಿಯರು, ಬಾಲ್ಯವನ್ನೇ ಕಾಣದ ಮಕ್ಕಳು, ಇವರ ಜೀವನವನ್ನು ಕಂಡ ಕಾಗಾವಾ ತಮ್ಮ ಉಳಿದ ಜೀವನವನ್ನು ಅವರಿಗಾಗಿ ಕಳೆಯಲು ನಿರ್ಧರಿಸಿದರು.ಜನರನ್ನು ಒಗ್ಗೂಡಿಸಿದರು, ಅವರಿಗೊಂದು ಸರಿಯಾದ ಕೂಲಿ ದೊರೆಯುವಂತೆ ಹೋರಾಟ ಮಾಡಿದರು. ಅನೇಕ ಬಾರಿ ಅವರನ್ನು ಬಂಧಿಸಿ ಜೈಲಿನಲ್ಲಿಡಲಾಯಿತು. ಅವರು ಜೈಲಿನಲ್ಲೇ ಪುಸ್ತಕ ಬರೆದು ಜನರನ್ನು ಪ್ರಚೋದಿಸಿದರು. 1923 ರಲ್ಲಿ ಭಾರಿ ಭೂಕಂಪವಾದಾಗ ಮನೆ ಮನೆಗೆ, ಊರಿಂದ ಊರಿಗೆ ತಿರುಗಿ ಹಣ ಸಂಗ್ರಹಿಸಿ ಜನರಿಗೆ ಸಹಾಯ ಮಾಡಿದರು.ರಾಷ್ಟ್ರೀಯ ಕಾರ್ಮಿಕ ಸಂಘಟನೆಯನ್ನು ಕಟ್ಟಿ ಬೆಳೆಸಿದರು. ಹಿಂಸೆಯನ್ನು ಬಲವಾಗಿ ಪ್ರತಿಭಟಿಸಿದರು. ಯುದ್ಧಗಳನ್ನು ತಡೆಯಲು ಬಹುವಾಗಿ ಪ್ರಯತ್ನಿಸಿದರು. ಈ ಪ್ರಯತ್ನಕ್ಕಾಗಿ ಮತ್ತೆ ಜೈಲಿಗೆ ಹೋದರು.ತಮ್ಮ ಜೀವಮಾನದಲ್ಲಿ ನೂರೈವತ್ತಕ್ಕಿಂತ ಹೆಚ್ಚು ಗ್ರಂಥಗಳನ್ನು ಬರೆದರು. ಅವರ ಹೆಸರನ್ನು ಸಾಹಿತ್ಯ ವಿಭಾಗದಲ್ಲಿ ನೊಬೆಲ್ ಪಾರಿತೋಷಕಕ್ಕಾಗಿ 1947, 1948 ರಲ್ಲಿ ಸೂಚಿಸಲಾಗಿತ್ತು, ಅಂತೆಯೇ 1954 ಮತ್ತು 1955 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಗೂ ಹೆಸರಿಸಲಾಗಿತ್ತು. ಆದರೆ ಗಾಂಧೀಜಿಗೆ ಆದಂತೆ ಅವರಿಗದು ದೊರಕಲಿಲ್ಲ. ನೊಬೆಲ್ ಪ್ರಶಸ್ತಿಗೆ ಈ ಇಬ್ಬರು ಮಹಾನ್ ವ್ಯಕ್ತಿಗಳನ್ನು ಗೌರವಿಸುವ ಭಾಗ್ಯವಿಲ್ಲದಾಯಿತು, ಪ್ರಶಸ್ತಿ ಬಡವಾಯಿತು.  ಕೊಳೆಗೇರಿಯಲ್ಲಿ ಇದ್ದಾಗ ವಿಚಿತ್ರವಾದ ಕಣ್ಣುಬೇನೆಗೆ ತುತ್ತಾಗಿ ದೃಷ್ಟಿ ಕಳೆದುಕೊಳ್ಳುವ ಪ್ರಸಂಗ ಬಂತು. ತಿಂಗಳುಗಳ ಕಾಲ ಕಣ್ಣುಗಳ ಮೇಲೆ ಕಪ್ಪು ಬಟ್ಟೆಗಳನ್ನು ಹಾಕಿಕೊಂಡು ಕೂಡ್ರಬೇಕಿತ್ತು, ಆಗ ಅವರನ್ನು ಯಾರೋ ಕೇಳಿದರು, `ನಿಮ್ಮ ಆರೋಗ್ಯ ಕಳೆದುಹೋಗಿದೆ, ಸ್ವಾತಂತ್ರ್ಯ ಕಳೆದು ಹೋಗಿದೆ, ಈಗ ನಿಮ್ಮ ಕಣ್ಣುಗಳು ಹೋಗುತ್ತಲಿವೆ.ನಿಮಗೆ ಈಗ ಸಾವು ಹತ್ತಿರ ಬರುತ್ತಿದೆ ಎಂಬ ಭಯವಾಗುತ್ತದೆಯೇ?~  ಕಾಗಾವಾ ಹೇಳಿದರು. `ಭಗವಂತನೇ ತುಂಬಿಕೊಂಡಿರುವ ಈ ಪ್ರಪಂಚದಲ್ಲಿ ಭಯವೇಕೆ? ಅವನ ಪ್ರೀತಿಯ ಪಿಸುಮಾತು ಸದಾ ಕಿವಿಯನ್ನು ತುಂಬಿದಾಗ ನನಗೆ ಆರೋಗ್ಯದ, ಸ್ವಾತಂತ್ರ್ಯದ, ಸಾವಿನ ಭಯವೇ ಬರುವುದಿಲ್ಲ.~`ಆದರೆ ಕಣ್ಣು ಕಾಣಿಸದಿರುವುದು ಅನನುಕೂಲವಲ್ಲವೇ?~ ಎಂದು ಮತ್ತೆ ಕೇಳಿದಾಗ, `ಹೌದು ಅನನುಕೂಲವೇ. ಮನುಷ್ಯನಿಗೆ ಹಾರಲು ಬರದಿರುವುದು ಅನನುಕೂಲವಲ್ಲವೇ? ಅದಕ್ಕೇ ಮನುಷ್ಯ ವಿಮಾನಗಳನ್ನು ಕಂಡು ಹಿಡಿದು ಪರಿಹಾರ ಕಂಡುಕೊಂಡಿದ್ದಾನೆ. ಈ ಮಾತು ಕಣ್ಣುಗಳಿಗೂ ಸರಿ. ಹೊರಗಿನ ಕಣ್ಣುಗಳು ಮರೆಯಾದರೆ ಭಗವಂತ ಒಳಗಣ್ಣು ತೆರೆಯುತ್ತಾನೆ, ಅವನೇ ಬೆಳಕಾಗಿ ಒಳಗೆ ಇಳಿಯುತ್ತಾನೆ. ಆ ಬೆಳಕಿನಲ್ಲಿ ಎಲ್ಲ ನಿಚ್ಚಳವಾಗಿ ಕಾಣುತ್ತದೆ.~ಹೊರಗಣ್ಣುಗಳನ್ನು ಕಳೆದುಕೊಂಡೂ ತನ್ನ ಸುತ್ತ ಮುತ್ತಲಿನ ಅನೇಕರಿಗೆ ಜೀವನದರ್ಶನ ಮಾಡಿಸಿದ ಕಾಗಾವಾನಂಥ ಮಹಾನ್ ವ್ಯಕ್ತಿಗಳು ನಮ್ಮ ಸಮಾಜಕ್ಕೆ ಮಾರ್ಗದರ್ಶಕರಾಗಿ ನಿಲ್ಲುತ್ತಾರೆ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.