ಗುರುವಾರ , ಆಗಸ್ಟ್ 6, 2020
24 °C

ಕಾರ್ಯಕ್ರಮ ಅನುಷ್ಠಾನಕ್ಕೆ ಹಣಕ್ಕಿಂತ ಮನಸ್ಸು ಮುಖ್ಯ

ಎಂ ನಾಗರಾಜ್ Updated:

ಅಕ್ಷರ ಗಾತ್ರ : | |

ಕಾರ್ಯಕ್ರಮ ಅನುಷ್ಠಾನಕ್ಕೆ ಹಣಕ್ಕಿಂತ ಮನಸ್ಸು ಮುಖ್ಯ

ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ, ಜನಸಂಖ್ಯಾ ಪ್ರಮಾಣಕ್ಕೆ ಅನುಗುಣವಾಗಿ ವಿವಿಧ ನ್ಯಾಯಾಲಯಗಳಲ್ಲಿರುವ ವ್ಯಾಜ್ಯಗಳ ಸಂಖ್ಯೆಯೂ ಅಷ್ಟೇ ದೊಡ್ಡದಿದೆ. ಈಗಲೂ ಸುಮಾರು 4.5 ಕೋಟಿ ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿವೆ. ಈ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಏನಿಲ್ಲ ಎಂದರೂ ಕನಿಷ್ಠ 300 ವರ್ಷಗಳು ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ. ಅದೂ ಹೊಸದಾಗಿ ಯಾವುದೇ ಕೇಸುಗಳು ದಾಖಲಾಗದಿದ್ದರೆ ಮಾತ್ರ!ನ್ಯಾಯಾಲಯಗಳ ಮುಂದಿರುವ ಸಿವಿಲ್, ಮೋಟಾರ್ ವಾಹನ, ಜೀವನಾಂಶ ಕೋರಿದ ಪ್ರಕರಣಗಳು ಸೇರಿದಂತೆ ಕೆಲವು ಕ್ರಿಮಿನಲ್ ಪ್ರಕರಣಗಳನ್ನು ಸಹ ರಾಜಿ ಮಾಡಿಸುವ ಮೂಲಕ ಸುಲಭವಾಗಿ ಬಗೆಹರಿಸಲು ಸಾಧ್ಯವಿದೆ. ಆದರೆ, ಇಂತಹ ಹಲವಾರು ಪ್ರಕರಣಗಳು ವೈಯಕ್ತಿಕ ಜಿದ್ದು, ಪ್ರತಿಷ್ಠೆಗಳಿಂದ ಇನ್ನೂ ಇತ್ಯರ್ಥವಾಗಿಲ್ಲ. ಇವನ್ನೆಲ್ಲಾ ನೋಡಿಯೇ ಕೋರ್ಟಿನಲ್ಲಿ `ಗೆದ್ದವನು ಸೋತ; ಸೋತವನು ಸತ್ತ' ಎಂಬ ಗಾದೆ ಮಾತು ಚಾಲ್ತಿಗೆ ಬಂದಿದೆ.ಪರಸ್ಪರ ರಾಜಿ ಮಾಡಿಸುವ ಮೂಲಕ ಪ್ರಕರಣ ಇತ್ಯರ್ಥ ಮಾಡುವ ಸಲುವಾಗಿ, ಕರ್ನಾಟಕದಲ್ಲಿ ಎ.ಲಕ್ಷ್ಮೀಸಾಗರ್ ಅವರು ಕಾನೂನು ಸಚಿವರಾಗಿದ್ದಾಗ `ಕಾನೂನು ನೆರವು ಮಂಡಳಿ' ರಚನೆಯಾಯಿತು. ಆಗ ಸಚಿವರೇ ಮಂಡಳಿಯ ಅಧ್ಯಕ್ಷರಾಗಿದ್ದರು. ಕಾನೂನು ಇಲಾಖೆ ಕಾರ್ಯದರ್ಶಿ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದರು. ನಂತರ 1987ರಲ್ಲಿ, ಜನರಿಗೆ ಕಾನೂನಿನ ಜ್ಞಾನ ಒದಗಿಸಲು ಮತ್ತು ಮೊಕದ್ದಮೆಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಸಂಬಂಧ ರಾಷ್ಟ್ರ ಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರ ರಚನೆಯಾಯಿತು. ರಾಷ್ಟ್ರ ಮಟ್ಟದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಹಾ ಪೋಷಕರಾಗಿದ್ದರೆ ಹಿರಿಯ ನ್ಯಾಯಮೂರ್ತಿ ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುತ್ತಾರೆ. ಅದೇ ರೀತಿ ರಾಜ್ಯಗಳಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಹಾ ಪೋಷಕರಾಗಿದ್ದರೆ ಹಿರಿಯ ನ್ಯಾಯ ಮೂರ್ತಿ ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುತ್ತಾರೆ. ಈ ಕಾನೂನು ರಚನೆಯಾದ ನಂತರ ದೇಶದಲ್ಲಿ ಕೋಟ್ಯಂತರ ಪ್ರಕರಣಗಳು ರಾಜಿ ಮೂಲಕ ಇತ್ಯರ್ಥವಾಗಿವೆ.ಈಗ ಜನರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವ ಕಾನೂನು ಸಾಕ್ಷರತಾ ಕಾರ್ಯಕ್ರಮಗಳು ಬಹಳಷ್ಟು ನಡೆಯುತ್ತಿವೆ. ಸರ್ಕಾರ ಈ ಕೆಲಸವನ್ನು ವ್ಯಾಪಕವಾಗಿ ಮಾಡುತ್ತಿದೆ. ಆದರೆ ಸರ್ಕಾರದ ಮಟ್ಟದಲ್ಲಿ ಇಂಥದೊಂದು ಪ್ರಯತ್ನ ನಡೆಯುವ ಮುನ್ನವೇ, ನಾಡಿನಲ್ಲಿ ಕಾನೂನು ಅರಿವು ಮೂಡಿಸುವ ಕೆಲಸವನ್ನು ಉತ್ತರಕರ್ನಾಟಕದ ಒಬ್ಬರು ವಕೀಲರು ಆರಂಭಿಸಿದ್ದರು.ಅವರು ವಿಜಾಪುರ ಮೂಲದ ವೆಂಕಟೇಶ ಕುಲಕರ್ಣಿ. ಧಾರವಾಡದಲ್ಲಿ ನೆಲೆಸಿರುವ ಕುಲಕರ್ಣಿ, ಕಾನೂನು ನೆರವು ಮಂಡಳಿ ಅಥವಾ ಕಾನೂನು ಸೇವಾ ಪ್ರಾಧಿಕಾರ ರಚನೆಯಾಗುವ ಮೊದಲೇ ಅಂದರೆ 1970ರಲ್ಲಿಯೇ ಉತ್ತರ ಕರ್ನಾಟಕ ಭಾಗದ ಜನರಿಗಾಗಿ ಕಾನೂನಿನ ಅರಿವು ಅಭಿಯಾನವನ್ನು ಆರಂಭಿಸಿದ್ದರು.ಸ್ವಯಂ ಆಂದೋಲನ ರೂಪಿಸಿ, ಈ ಕಾರ್ಯದಲ್ಲಿ ದೇಶದ ಹಾಗೂ ರಾಜ್ಯದ ಅನೇಕ ಹಿರಿಯ ನ್ಯಾಯಮೂರ್ತಿಗಳಾದ ವಿ.ಆರ್. ಕೃಷ್ಣ ಅಯ್ಯರ್, ವಿ.ಎಸ್. ಮಳಿಮಠ, ವಿ. ಗೋಪಾಲ ಗೌಡ, ಕೆ. ಶ್ರೀಧರ ರಾವ್, ಕೆ.ಎಲ್. ಮಂಜುನಾಥ್, ಅನೇಕ  ಪ್ರಾಮಾಣಿಕ ವಕೀಲರು, ನ್ಯಾಯಾಲಯ ಸಿಬ್ಬಂದಿಯ ಬೆಂಬಲ, ಸಹಕಾರ ಪಡೆದುಕೊಂಡು 43 ವರ್ಷಗಳಿಂದ ಸತತವಾಗಿ ಕಾರ್ಯನಿರ್ವಹಿಸುತ್ತಿರುವ ಅವರಿಗೆ ಈಗ 77 ವರ್ಷ. ಆದರೂ ಆರಂಭದ ದಿನಗಳ ಉತ್ಸಾಹ ಕಡಿಮೆಯಾಗಿಲ್ಲ; `ನಮ್ಮೂರಿನ ಜನರಿಗೆ ಕಾನೂನಿನ ಮಾಹಿತಿ ನೀಡಬೇಕು, ಅರಿವು ಮೂಡಿಸಬೇಕು' ಎಂಬ ತುಡಿತ ಅವರಲ್ಲಿ ಹಾಗೆಯೇ ಇದೆ.ವೆಂಕಟೇಶ ಕುಲಕರ್ಣಿ ಈ ಕಾರ್ಯಕ್ಕೆ ಸ್ವಂತ ಹಣವನ್ನು ವಿನಿಯೋಗಿಸುತ್ತಾರೆ. ವಕೀಲಿ ವೃತ್ತಿಯಿಂದ ಬಂದ ಹಣವನ್ನೆಲ್ಲಾ ಕಾನೂನಿಗೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡ ಕರಪತ್ರಗಳನ್ನು ಮುದ್ರಿಸಿ ಹಂಚುತ್ತಾರೆ. ಇದಕ್ಕೆ ಬಸ್‌ನಿಲ್ದಾಣ, ರೈಲು ನಿಲ್ದಾಣ ಎಂದೇನೂ ಇಲ್ಲ. ಈ ಕಾರ್ಯದಲ್ಲಿ ಜಿಲ್ಲಾ ಮಟ್ಟದಲ್ಲಿ ಸೆಷನ್ಸ್ ನ್ಯಾಯಾಧೀಶರು, ವಕೀಲರು, ಸಿಬ್ಬಂದಿ, ಕಾನೂನು ಕಾಲೇಜುಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಅಂದರೆ ಈಗ ಲೋಕ ಅದಾಲತ್ ಬಗ್ಗೆ, ಸುಲಭವಾಗಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳುವ ಬಗ್ಗೆ ಜನರಿಗೆ ತಿಳಿಸಿಕೊಡುವ ಕೆಲಸವೂ ವ್ಯಾಪಕವಾಗಿ ಆಗುತ್ತಿದೆ.ವೆಂಕಟೇಶ ಕುಲಕರ್ಣಿ ಸ್ವತಃ ಶಾಲೆಗಳ ಸಮೀಪದಲ್ಲಿ ಸ್ಕೂಟರ್ ನಿಲ್ಲಿಸಿಕೊಂಡು ಕರಪತ್ರಗಳನ್ನು ಹಂಚುತ್ತಾರೆ. ಅಲ್ಲದೇ, ಶಾಲೆಗಳ ಸಮೀಪ ಕಡ್ಲೆಕಾಯಿ ಮಾರುವವರಂತೆಯೇ, ಕಡಿಮೆ ದರದ ಸಣ್ಣ ಸಣ್ಣ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದಾರೆ.ಅಪ್ಪ ಭೀಮರಾವ ಕುಲಕರ್ಣಿ ಮತ್ತು ಸೋದರ ಮಾವ ವಿ.ಎನ್. ಜೋಶಿ ಇಬ್ಬರೂ ವಕೀಲರು. ವೆಂಕಟೇಶ ವಿದ್ಯಾರ್ಥಿಯಾಗಿದ್ದಾಗಲೇ ಶಾಲೆಯ ರಜಾ ದಿನಗಳಲ್ಲಿ ಅಪ್ಪನೊಂದಿಗೆ ಕೋರ್ಟ್‌ಗೆ ಹೋಗಿ ಕಲಾಪಗಳನ್ನು ತದೇಕಚಿತ್ತರಾಗಿ ಆಲಿಸುತ್ತಿದ್ದರು. ಆಗಿನಿಂದಲೇ ಕಾನೂನು ವಿಚಾರದಲ್ಲಿ ಆಸಕ್ತಿ ಮೊಳೆಯಿತು. ಹದಿನೆಂಟನೇ ವಯಸ್ಸಿಗೇ ಪದವೀಧರರಾದರೂ ಅಪ್ಪನ ಆಸೆಯಂತೆ ಐಎಎಸ್ ಪರೀಕ್ಷೆ ಕಟ್ಟದೇ, ಸ್ವಂತ ಕಾಲಿನ ಮೇಲೆ ನಿಲ್ಲುವ ಛಲದೊಂದಿಗೆ 1957ರಲ್ಲಿ ವಿಜಾಪುರದಲ್ಲಿ `ಜಾಗೃತ ಭಾರತ' ಪತ್ರಿಕೆ ಆರಂಭಿಸಿದರು.ಮಲಗಲು ಅಲ್ಲಿಯೇ ವ್ಯವಸ್ಥೆ ಮಾಡಿಕೊಂಡಿದ್ದ ವೆಂಕಟೇಶ ಅವರು ಅತ್ಯಂತ ಸ್ವಾಭಿಮಾನಿ. ಕಾನೂನು ಕಾಲೇಜು ಸೇರಲು ಧಾರವಾಡಕ್ಕೆ ಬಂದಾಗ ಅವರ ಬಳಿ ಇದ್ದುದು ಕೇವಲ 15 ರೂಪಾಯಿ. ಮಗನಿಗೆ ಕಷ್ಟವಾಗಬಹುದು ಎಂದು ತಂದೆ ಕಳುಹಿಸಿದ್ದ ಮನಿಯಾರ್ಡರ್ ಅನ್ನು ವಾಪಸ್ ಕಳುಹಿಸಿದ್ದರು. ಪತ್ರಿಕೆಯ ವರ್ಷದ ಚಂದಾ ಹಣ 8.50 ರೂಪಾಯಿ ಇತ್ತು. ಸಾರ್ವಜನಿಕರು ಕೊಟ್ಟಿದ್ದ ಹಣವನ್ನು, ಧಾರವಾಡಕ್ಕೆ ಬರುವ ಮುನ್ನ ಮನಿಯಾರ್ಡರ್ ಮೂಲಕ ವಾಪಸ್ ಮಾಡಿದ್ದರು. ಒಟ್ಟು 737 ಮನಿಯಾರ್ಡರ್ ಮಾಡಿದ್ದರು. ಅಂದರೆ ಅವರ ಪ್ರಾಮಾಣಿಕತೆ ವ್ಯಕ್ತವಾಗುತ್ತದೆ.ಸ್ನೇಹಿತ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವರಾಗಿದ್ದ ಬಿ.ಎನ್. ದಾತಾರ್ ಅವರ ಸಲಹೆ ಮೇರೆಗೆ ಮಗನನ್ನು ಐಎಎಸ್ ಅಧಿಕಾರಿ ಮಾಡಿಸಬೇಕು ಎಂದು ಭೀಮರಾವ ಬಯಸಿದ್ದರಾದರೂ ವೆಂಕಟೇಶ ಅವರಿಗೆ ಮಾತ್ರ ಶಿಕ್ಷಕ ಅಥವಾ ಪತ್ರಕರ್ತ ಅಥವಾ ವಕೀಲನಾಗಬೇಕು ಎಂಬ ತುಡಿತವಿತ್ತು. ಈ ಮಾತನ್ನು ಅಪ್ಪನ ಮುಂದೆ ಹೇಳಿದಾಗ, `ಹೊಟ್ಟೆಗೇನು ಭಿಕ್ಷೆ ಬೇಡುತ್ತಿಯೋ ಅಥವಾ ಕೂಲಿ ಮಾಡುತ್ತಿಯೋ' ಎಂದು ಅಪ್ಪ ಬೆದರಿಸಿದರೂ ಹೆದರದೇ, `ಕೂಲಿ  ಮಾಡುತ್ತೇನೆಯೇ ಹೊರತು ಭಿಕ್ಷೆ ಬೇಡಲ್ಲ. ಹದಿನೆಂಟು ವರ್ಷ ದಾಟಿರುವ ನಾನು ಸ್ವಂತ ಕಾಲಿನ ಮೇಲೆ ನಿಲ್ಲುತ್ತೇನೆ' ಎಂದು ಮನೆಯಿಂದ ಹೊರಬಿದ್ದರು.ಈ ಹೊತ್ತಿಗೂ ಅವರಿಗೆ ಧೈರ್ಯ ಮತ್ತು ಪುಸ್ತಕಗಳೇ ಆಸ್ತಿ. ಇದನ್ನೇ ನಂಬಿ ಮುಂದುವರಿದ್ದಾರೆ. ಮೋಸ ಮಾಡಿ ಹಣ ಗಳಿಸಬಾರದು. ಸತ್ಯ ಇದ್ದರಷ್ಟೇ ಮೊಕದ್ದಮೆ ನಡೆಸಬೇಕು. ಯಾವುದೇ ಮೊಕದ್ದಮೆಯನ್ನು ಕೈಗೆತ್ತಿಕೊಳ್ಳುವ ಮೊದಲೇ ಆ ಪ್ರಕರಣ ನಿಜವೇ-ಸುಳ್ಳೇ ಎಂದು ಪರಿಶೀಲಿಸಬೇಕು. ಈ ಆದರ್ಶಗಳನ್ನೇ  ನಂಬಿಕೊಂಡು ಅವರು ವೃತ್ತಿ ನಡೆಸುತ್ತಿದ್ದಾರೆ.ಕೆಲ ಪ್ರಕರಣಗಳ ಸಂಬಂಧ ಜನರು ನ್ಯಾಯಾಲಯಕ್ಕೆ ಎಡತಾಕುವುದನ್ನು ಕಂಡು ಮರುಗಿದ ಅವರು, ಜನರಲ್ಲಿ ಕಾನೂನು ಬಗ್ಗೆ ಅರಿವು ಮೂಡಿಸುವ ಕಾರ್ಯಕ್ಕೆ ಕೈ ಹಾಕಿದರು. ಇದಕ್ಕಾಗಿ ಯಾರಿಂದಲೂ ಹಣ ಪಡೆದಿಲ್ಲ. ಕೈಯಲ್ಲಿದ್ದಷ್ಟು ಕಾಸಿಗೆ ಅನುಗುಣವಾಗಿ ಕರಪತ್ರಗಳನ್ನು ಮುದ್ರಿಸಿ ಹಂಚಿದ್ದಾರೆ. ಇದಕ್ಕಾಗಿ ಉತ್ತರ ಕರ್ನಾಟಕದ ನಾನಾ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. 700ಕ್ಕೂ ಹೆಚ್ಚು ಶಿಬಿರಗಳನ್ನು ಏರ್ಪಡಿಸಿದ್ದಾರೆ. ನಾಟಕ ಆಡಿಸಿದ್ದಾರೆ.ಹುಟ್ಟಿನಿಂದ ಸಾಯುವವರೆಗೆ ಪ್ರತಿಯೊಬ್ಬರಿಗೂ ಕಾನೂನು ಅವಶ್ಯ ಎಂಬ ಸಂದೇಶವನ್ನು ಸಾರಲು ವ್ಯಂಗ್ಯಚಿತ್ರವನ್ನು ಬಳಸಿಕೊಂಡಿದ್ದಾರೆ.  ಕಿರುಹೊತ್ತಿಗೆಗಳನ್ನು ಬರೆದು, 10 ರೂಪಾಯಿ ದರದಲ್ಲಿ ಮಾರಾಟ ಮಾಡಿದ್ದಾರೆ. ಇಷ್ಟೆಲ್ಲ ಮಾಡಿದರೂ ಯಾರ ಮನೆಯಲ್ಲೂ, ಶಿಬಿರ ಏರ್ಪಡಿಸಿದ ಕಡೆಯೂ ಒಂದು ಕಪ್ ಚಹಾ ಕುಡಿದಿಲ್ಲ. ಕಾರ್ಯಕ್ರಮಕ್ಕೆ ಹೋಗುವಾಗ ಮನೆಯಿಂದಲೇ ಭಕ್ರಿ (ರೊಟ್ಟಿ)-ಚಟ್ನಿಪುಡಿ ಕೊಂಡೊಯ್ಯುತ್ತಾರೆ.ಮಕ್ಕಳಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಶಿಬಿರಗಳನ್ನು ಏರ್ಪಡಿಸಲು ಹೆಚ್ಚಾಗಿ ಶಾಲೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇತರೆಡೆ ಸಂಘಟಿಸುವ ಕಾರ್ಯಕ್ರಮದಲ್ಲೂ ಯಾರನ್ನೂ ಕಡ್ಡಾಯವಾಗಿ ಕೂರಿಸುವಂತಿಲ್ಲ. ಬೇಸರ ಎಂದೆನಿಸಿದರೆ ಕೇಳುಗರು ಸಲೀಸಾಗಿ ಎದ್ದು ಹೋಗಬಹುದು. ಅವರಿಗೆ ಅರ್ಥವಾಗುವಂತೆ ಹೇಳುವಲ್ಲಿ ಸೋತಿದ್ದೇವೆ ಎಂಬ ಭಾವನೆಯಿಂದ ತಿದ್ದಿಕೊಳ್ಳಲು ಯತ್ನಿಸುವ ದೊಡ್ಡ ಹೃದಯವಂತ ವೆಂಕಟೇಶ ಕುಲಕರ್ಣಿ.ಕಾನೂನು ಪ್ರಚಾರ ಕೆಲಸ ಇನ್ನಷ್ಟು ಹೆಚ್ಚಾಗಬೇಕು. ಈ ಕೆಲಸದಲ್ಲಿ ಆಸಕ್ತಿ ಹೊಂದಿರುವವರಿಗೆ ಹೆಚ್ಚು ಅವಕಾಶವಿದೆ. ಹಣವಿದ್ದರಷ್ಟೇ ಈ ಕೆಲಸ ಮಾಡಬಹುದು ಎಂಬ ಭಾವನೆಯನ್ನು ತೊರೆದು ವೆಂಕಟೇಶ ಕುಲಕರ್ಣಿ ಅವರಂತೆ ತಮ್ಮನ್ನು ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಹಣವಿಲ್ಲದಿದ್ದರೂ ಇಂತಹ ಕಾರ್ಯಕ್ರಮಗಳನ್ನು ಮಾಡಿ ಯಶಗಳಿಸಲು ಸಾಧ್ಯ. ಮುಖ್ಯವಾಗಿ ಇದಕ್ಕೆ ಮನಸ್ಸು ಇರಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.