ಬುಧವಾರ, ಮೇ 12, 2021
19 °C

ಕೊನೆಗೂ ನ್ಯಾನೊ ಕಾರು ಸಿಕ್ಕಿ ಬಿತ್ತು

ಜಿಎಮ್ಮಾರ್ Updated:

ಅಕ್ಷರ ಗಾತ್ರ : | |

ಕೊನೆಗೂ ನ್ಯಾನೊ ಕಾರು ಸಿಕ್ಕಿ ಬಿತ್ತು

`ಸಾರ್, ನ್ಯಾನೊ ಕಾರಿನಲ್ಲಿ ಭಯೋತ್ಪಾದಕರು ಬೆಂಗಳೂರು ತುಂಬ ಓಡಾಡ್ತಾ ಇದಾರೆ.....' ಎಂದು ತುರ್ತು ಕರೆ ಬಂದ ಕೂಡಲೇ ಪೊಲೀಸ್ ಮೇಲಧಿಕಾರಿಗಳು ಬೆಚ್ಚಿಬಿದ್ದರು.ಅದೆಲ್ಲಾ ವದಂತಿ ಕಣ್ರೀ, ಸುಮ್‌ಸುಮ್ನೆ ಏನೇನೋ ಹೇಳಿ ಭಯ ಹುಟ್ಟಿಸೋದಿಕ್ಕೆ ಪ್ರಯತ್ನಿಸ್ತಿದ್ದಾರೆ, ನಮ್ಮ ಅಯ್ಯ ಅವರ ಸರ್ಕಾರ ಬಂದ ಮೇಲೆ ಲಾ ಅಂಡ್ ಆರ್ಡರ್ ಚೆನ್ನಾಗಿದೆ. ಅಂಥ ಸುದ್ದಿಯೆಲ್ಲಾ ಸುಳ್ಳು ಸುದ್ದಿ ಅಂತ ಪ್ರೆಸ್‌ನೋಟ್ ಕೊಟ್ಟುಬಿಡ್ರಿ ಎಂದು ಜೂನಿಯರ್ ಆಫೀಸರ್‌ಗೆ ಮೇಲಧಿಕಾರಿಗಳು ಆದೇಶ ಕೊಟ್ಟು ಬೆವರೊರೆಸಿಕೊಂಡರು.`ನ್ಯಾನೊ ಕಾರಿನಲ್ಲಿ ಯಾವ ಭಯೋತ್ಪಾದಕರೂ ನಗರಕ್ಕೆ ಬಂದಿಲ್ಲ, ಬಹಳಷ್ಟು ನ್ಯಾನೊ ಕಾರುಗಳನ್ನು ಚೆಕ್ ಮಾಡಿದ್ದೀವಿ, ಅದು ಗುಜರಾತ್ ವ್ಯಾಪಾರಿಗಳ ಕಾರು ಎಂದು ಹೇಳಿದರೂ ಮೀಡಿಯಾ ಮ್ಯಾನ್‌ಗಳು ನಂಬ್ತಾ ಇಲ್ಲಾ ಸಾರ್' ಎಂದು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ತಲೆ ಕೆರೆದುಕೊಂಡರು.`ಇಪ್ಪತ್ಮೂರನೇ ತಾರೀಖು ಡಮಾರ್ ಅನ್ನಿಸ್ತೀವಿ ಅಂತ ಅರೆಬರೆ ಲಾಂಗ್ವೆಜ್‌ನಲ್ಲಿ ಪತ್ರ ಬಂದಿದೆಯಲ್ಲಾ, ಟೇಕ್ ಆ್ಯಕ್ಷನ್' ಎಂದು ಹಿರಿಯ ಅಧಿಕಾರಿಗಳು ಗರ್ಜಿಸುತ್ತಿದ್ದಂತೆಯೇ,

`ಸಾರ್ ದೊಡ್ಡಗೌಡರ ಮನೆ ಮುಂದೆ ನ್ಯಾನೊ ಕಾರು ಓಡಾಡ್ತಾ ಇತ್ತು, ಅದರಲ್ಲಿ ಲ್ಯಾಪ್‌ಟ್ಯಾಪ್, ಇಟ್ಟುಕೊಂಡು, ಕಿವಿಗೆ ಬ್ಲೂಟೂಥ್ ಹಾಕಿಕೊಂಡ ಒಬ್ಬರನ್ನು ಯಾರೋ ಪಬ್ಲಿಕ್ ನೋಡಿ ಫೋನ್ ಮಾಡಿದ್ರು ಸಾರ್' ಎಂದು ಪಿಸಿಯೊಬ್ಬರು ಅರ್ಜೆಂಟ್ ಮೆಸೇಜ್ ಮುಟ್ಟಿಸಿದರು.`ನನಗೆ ಅದೆಲ್ಲಾ ಗೊತ್ತಿಲ್ಲ ಬೆಂಗಳೂರಿನಲ್ಲಿ ಏನೂ ಆಗಬಾರ‌್ದು, ನ್ಯಾನೊ ಕಾರು ಎಲ್ಲೆಲ್ಲಿ ಓಡಾಡಿದೆಯೋ ಅಲ್ಲಲ್ಲಿ ಹೋಗಿ ಭದ್ರತೆ ಮಾಡಿ ರಿಪೋರ್ಟ್ ಮಾಡಿ' ಎಂದು ಹಿರಿಯ ಅಧಿಕಾರಿಗಳು ಗರ್ಜಿಸಿದ್ದೇ ತಡ ಕ್ರೈಮ್ ಪೊಲೀಸ್ ಟೀಮ್, ಕಮಲನಾಭ ನಗರದತ್ತ ದೌಡಾಯಿಸಿತು.

ಪೊಲೀಸ್ ತಂಡ ದೊಡ್ಡಗೌಡರ ಮನೆ ಮುಂದೆ ಹೋಗಿ ನಿಲ್ಲುವುದಕ್ಕೂ ಅವರ ಮನೆಯಿಂದ ರಪ್ಪ ಅವರು ಹೊರಬರುವುದಕ್ಕೂ ಸರಿಹೋಯಿತು. ಪೊಲೀಸ್ ತಂಡದತ್ತ ಒಂದು ನೋಟ ಬೀರಿ ರಪ್ಪ ಅವರು ದಡ, ಬಡ, ಅಂತ ಹೊರಟು ಹೋದರು.“ಸಾರ್, ಭಯೋತ್ಪಾದಕರಿದ್ದ ನ್ಯಾನೊ ಕಾರು ನಿಮ್ಮ ಮನೆಹತ್ರ ಸುಳಿದಾಡ್ತಿದೆ ಅಂತ ವರದಿ ಬಂದಿದೆ. ಅದಕ್ಕೆ ಭದ್ರತೆ ಕೊಡಲು ಬಂದ್ವಿ” ಎಂದು ಪೊಲೀಸರು ಹೇಳುತ್ತಿದ್ದಂತೆಯೇ ರೇಗಿದ ದೊಡ್ಡಗೌಡರು ಯಾವ ಭಯೋತ್ಪಾದನೆಗೂ ಈ ಗೌಡ ಅಂಜುವುದಿಲ್ಲ, ನನ್ನ ರಾಜಕೀಯ ಜೀವನದಲ್ಲಿ ಇಂತಹ ಎಷ್ಟೋ ಭಯೋತ್ಪಾದಕರನ್ನು ನೋಡಿದ್ದೀನಿ. ಸಮಯ ಬಂದಾಗ ಎಲ್ಲಾ ತೆಗೆದಿಡ್ತೀನಿ. ಎಲ್ಲಾ ಫೈಲ್ ನನ್ನ ಹತ್ರ ಇದೆ.....' ಗೌಡರು ಹೇಳುತ್ತಲೇ ಇದ್ದರು.ಅಷ್ಟರಲ್ಲಿ ವಾಕಿಟಾಕಿಯಲ್ಲಿ ಅರ್ಜೆಂಟ್ ಕರೆ ಬಂತು, `ಡೀಕುಶಿ ಮಾರ್ ಅವರ ಮನೆ ಮುಂದೆ ನ್ಯಾನೊ ಕಾರು ಪಾಸ್ ಆಗಿದೆ ಸಾರ್' ಎಂಬ ವಿಷಯ ಬಂದದ್ದೇ ತಡ ಇಡೀ ಪೊಲೀಸ್ ತಂಡ ಡೀಕುಶಿ ಮಾರ್ ಮನೆಯತ್ತ ದೌಡಾಯಿಸಿತು.ಪೊಲೀಸರು ಡೀಕುಶಿ ಮಾರ್ ಅವರ ಮನೆಗೆ ಹೋದಾಗ ಅವರು, ದೊಡ್ಡ ದೊಡ್ಡ ಸೂಟ್‌ಕೇಸ್‌ಗಳಲ್ಲಿ ಫೈಲುಗಳನ್ನು ತುಂಬುತ್ತಾ ಇದ್ದರು.

`ನಿಮ್ಮ ಮನೆ ಮುಂದೆ ಭಯೋತ್ಪಾದಕರಿದ್ದ ನ್ಯಾನೋ ಕಾರು ಪಾಸ್ ಆಯಿತು ಅಂತ ಮೆಸೇಜ್ ಬಂತು. ನಿಮಗೆ ರಕ್ಷಣೆ ಕೊಡಬೇಕು ಅಂತ ಬಂದ್ವಿ ಆದರೆ, ನೀವು ಮನೆ ಖಾಲಿ ಮಾಡ್ತಾ ಇರೋ ಹಾಗಿದೆಯಲ್ಲಾ' ಎಂದು ಪೊಲೀಸರು ನಿವೇದಿಸಿಕೊಂಡರು.`ಮನೆ ಏಕೆ ಖಾಲಿ ಮಾಡ್ಲಿ? ಆರು ಸಲ ಸತತವಾಗಿ ಗೆದ್ದಿದ್ದೇನೆ. ಚೀಪ್ ಮಿನಿಸ್ಟರ್ ಮೆಟಲ್ ನಾನು, ಮಿನಿಸ್ಟ್ರೂ ಆಗಿಲ್ಲ. ಇದನ್ನೆಲ್ಲಾ ತಪ್ಪಿಸಿದ ಭಯೋತ್ಪಾದಕರಿಗಿಂತ ಬೇರೊಬ್ಬ ಭಯೋತ್ಪಾದಕನಿದ್ದಾನೇನ್ರಿ?'

`ಮತ್ತೆ ಇದೇನ್ ಸಾರ್ ಸೂಟ್‌ಕೇಸ್‌ಗೆ ತುಂಬ್ತಾ ಇದ್ದೀರಿ?'`ದೆಹಲಿ ಮೇಡಂಗೆ ನನ್ನ ಮೇಲೆ ಇಲ್ಲಸಲ್ಲದ ಕಂಪ್ಲೇಂಟ್ ಕೊಟ್ಟಿದ್ದಾರೆ. ನನ್ನ ಮೇಲೆ ಇದ್ದ ಎಲ್ಲ ದೂರುಗಳು ಸುಳ್ಳು ಅಂತ ಪ್ರೂವ್ ಆಗಿದೆ. ಅಂತಹ ಡಾಕ್ಯೂಮೆಂಟ್‌ಗಳು ಇವು. ಅವುಗಳನ್ನೆಲ್ಲಾ ದೆಹಲಿಗೆ ತೆಗೆದುಕೊಂಡು ಹೋಗಿ ನಾನು ಕಳಂಕಿತ ಅಲ್ಲ ಅಂತ ನಿರೂಪಿಸ್ತೀನಿ. ಬಿಡಲ್ಲ. ಅದ್ಹೇಗೆ ನನ್ನ ಕ್ಯಾಬಿನೆಟ್‌ಗೆ ಸೇರಿಸಿಕೊಳ್ಳಲ್ಲ ಚಾಲೆಂಜ್ ಮಾಡ್ತೀನಿ' ಎಂದು ಡೀಕುಶಿ ಮಾರ್ ವಿವರಿಸಲಾರಂಭಿಸಿದರು.ಅಷ್ಟರಲ್ಲಿ ಅವರ ಬೆಂಬಲಿಗ ಶಾಸಕರ ದಂಡು ಅಲ್ಲಿಗೆ ಆಗಮಿಸಿತು. ಪೊಲೀಸರು ಜಾಗ ಖಾಲಿ ಮಾಡಿದರು.ಇನ್ಫೋಸಿಸ್ ಬಳಿ ನ್ಯಾನೊ ಕಾರು ನೋಡಿದ್ವಿ ಎಂದು, ಮೆಸೇಜ್ ಬಂದಾಗ ಪೊಲೀಸರು ಮತ್ತಷ್ಟು ಗಾಬರಿಯಾದರು. ಅಲ್ಲಿ ಏನಾದ್ರೂ ಆದ್ರೆ ಇಂಟರ್‌ನ್ಯಾಷನಲ್ ಆಗುತ್ತೆ ಏನಪ್ಪಾ ಮಾಡೋದು ಎಂದು ಎಲ್ಲರೂ ಭಯಬಿದ್ದರು. ಅಷ್ಟರಲ್ಲಿ ಮೆಸೇಜ್ ಮೇಲೆ ಮೆಸೇಜ್. ಕೆಪಿಸಿಸಿ ಅಧ್ಯಕ್ಷರ ಮನೆಮುಂದೆ ಕಾರು ನಿಂತಿತ್ತು ನಾವು ಹೋಗೋ ಅಷ್ಟರಲ್ಲಿ ಗಾಯಬ್ ಆಗೋಯ್ತು ಎಂದು ಪಿಸಿಗಳು ಹೇಳಿದರು. ನಟಿ ಶ್ರುತಿ ಮನೆ ಮುಂದೆ ನಿಂತಿತ್ತು ಎಂದು ಪಿ.ಸಿ ಒಬ್ಬರು ಹೇಳಿದಾಗ, ಅಲ್ಲಿಗ್ಯಾಕೆ ಉಗ್ರರು ಹೋಗ್ತಾರಯ್ಯಾ, ಅವರ ಕೇಸೇ ಕೋರ್ಟ್‌ನಲ್ಲಿದೆಯಲ್ಲಾ ಎಂದು ರೇಗಿದ ಇನ್ಸ್‌ಪೆಕ್ಟರ್, ಗುಬ್ಬಚ್ಚಿ ತರಾ ಇರೋ ಒಂದು ಸಣ್ಣ ಕಾರು ಹಿಡಿಯೋಕೆ ಆಗಲ್ಲ ನಿಮಗೆ,ರಾತ್ರಿ ಹೊತ್ತು ಕುಡಿದು ಹೋಗೋ ಜನರನ್ನು ಮಾತ್ರ ಹಿಡೀತೀರಿ ಕಣ್ರಯ್ಯಾ ಎಂದು ಬೈದರು.ಅಷ್ಟರಲ್ಲಿ ಎಂ.ಜಿ.ರೋಡ್‌ನಲ್ಲಿ ನ್ಯಾನೊ ಕಾರು ಹಿಡಿದ್ವಿ ಸಾರ್ ಎಂಬ ಕರೆ ಬಂತು. ಎಲ್ಲರೂ ನಿಟ್ಟುಸಿರು ಬಿಟ್ಟರು. ಅಬ್ಬಾ ಬ್ರೇಕಿಂಗ್ ನ್ಯೂಸ್ ಆಯ್ತು. ಬೆಂಗಳೂರು ಪೊಲೀಸರಿಗೆ ಇಂಟರ್‌ನ್ಯಾಷನಲ್ ಅವಾರ್ಡ್ ಗ್ಯಾರಂಟಿ. ಕ್ರೈಂ ಟೀಮ್ ಉಬ್ಬಿ ಹೋಯಿತು. ಎಲ್ಲರೂ ಎಂ.ಜಿ.ರೋಡ್‌ಗೆ ಓಡಿದರು.ನ್ಯಾನೊ ಕಾರನ್ನು ನಿಲ್ಲಿಸಿ ಪೊಲೀಸರು, ಬಾಗಿಲು, ಕಿಟಕಿಗಳನ್ನೆಲ್ಲಾ ತಡಕಿದರು. ಇಳೀರಿ ಕೆಳಗೆ ಎಂದು ಗರ್ಜಿಸಿದರು. ಉಗ್ರ ಎಲ್ಲಿ ಮಾನವ ಬಾಂಬ್ ಆಗಿದ್ದಾನೋ ಎಂಬ ಹೆದರಿಕೆ ಬೇರೆ. ಕಾರಿನೊಳಗಿನಿಂದ ನಿಧಾನವಾಗಿ ಪೆಕರ ಇಳಿದ.ಸಬ್ ಇನ್ಸ್‌ಪೆಕ್ಟರ್ ಆಶ್ವರ್ಯದಿಂದ ` ಪೆಕರಾ ಸಾರ್, ನೀವಿಲ್ಲಿ?' ಎಂದು ಪ್ರಶ್ನಿಸಿದ.`ನಾನು ಆಫೀಸಿಗೆ ಹೋಗ್ತಾ ಇದ್ದೇನೆ. ಮೊದಲೆಲ್ಲಾ ರಾತ್ರಿ ಹೊತ್ತು ತಡೆದು ನಿಲ್ಲಿಸ್ತಾ ಇದ್ರಿ, ಇವತ್ತು ಹಗಲೇ ನಿಲ್ಲಿಸಿದ್ದೀರಲ್ಲಾ ಏಕೆ?' ಎಂದು ಪೆಕರ ಏನೂ ಅರಿಯದವನಂತೆ ಪ್ರಶ್ನಿಸಿದ.`ನೀವು ಬೆಳಿಗ್ಗೆ ಇದೇ ಕಾರಲ್ಲಿ ದೊಡ್ಡಗೌಡರ ಮನೆಗೆ ಹೋಗಿದ್ರಾ?'`ಹೌದು, ಅಲ್ಲಿಗೆ ರಪ್ಪ ಅವರು ರಹಸ್ಯವಾಗಿ ಹೋಗಿದ್ದರು, ಕುಟುಕು ಕಾರ್ಯಾಚರಣೆ ಮಾಡಲು ಹೋಗಿದ್ದೆ'

`ಡೀಕುಶಿ ಮಾರ್ ಅವರ ಮನೆಗೂ ಹೋಗಿದ್ರಾ?'`ಹೌದು, ಅವರ ಮನೇಲಿ ಒಂದಷ್ಟು ಶಾಸಕರು ಸಭೆ ಸೇರಿದ್ದಾರೆ ಎಂದು ಗೊತ್ತಾಯ್ತು, ವಿಷಯ ತಿಳಿದುಕೊಳ್ಳೋಕೆ ಹೋಗಿದ್ದೆ'

`ಕೆಪಿಸಿಸಿ ಅಧ್ಯಕ್ಷರ ಮನೆಗೇ ಏಕೆ ಹೋಗಿದ್ರಿ?'`ಅಲ್ಲೂ ಕೆಲವು ಶಾಸಕರು ಸಭೆ ಸೇರಿದ್ರು ಅಂತ ಗೊತ್ತಾಯ್ತು' ಹೋಗಿದ್ದೆ. ಇದೇನು ಭಯೋತ್ಪಾದಕರನ್ನು ಪ್ರಶ್ನಿಸುವಂತೆ ಪ್ರಶ್ನಿಸುತ್ತಿದ್ದೀರಲ್ಲಾ? ನನ್ನನ್ನು ಏಕೆ ಫಾಲೋ ಮಾಡ್ತಾ ಇದ್ದೀರಿ? ಪೆಕರ ಏನೂ ಗೊತ್ತಿಲ್ಲದನಂತೆ ಪೊಲೀಸರನ್ನು ಪ್ರಶ್ನಿಸಿದ.`ಏನಿಲ್ಲಾ ಸಾರ್, ನಗರದಲ್ಲಿ ಶಂಕಿತ ಉಗ್ರರು ನುಸುಳಿದ್ದಾರೆ  ನೀವು ಸ್ವಲ್ಪದಿನ ನಿಮ್ಮ ಕಾರು ಬದಲಿಸಿಕೊಳ್ಳಿ'.ಶಂಕಿತ ಉಗ್ರರು ನಗರಕ್ಕೆ ಬಂದರೆ ನಾನೇಕೆ ಕಾರು ಬದಲಾಯಿಸಬೇಕು? ಎನ್ನುವ ಅರ್ಥವಾಗದ ಪ್ರಶ್ನೆಯೊಂದಿಗೆ ಪೆಕರ ಕಚೇರಿಗೆ ತೆರಳಿದ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.