ಬುಧವಾರ, ಮೇ 12, 2021
18 °C

ಕೊನೆಗೌಡರಿಲ್ಲದೆ ಅಡಿಕೆ ಕೊಯ್ಲು ಹೇಗೆ?

ಎಂ ನಾಗರಾಜ್ Updated:

ಅಕ್ಷರ ಗಾತ್ರ : | |

ಕೊನೆಗೌಡರಿಲ್ಲದೆ ಅಡಿಕೆ ಕೊಯ್ಲು ಹೇಗೆ?

ಕಳೆದ ವರ್ಷ ಅಡಿಕೆ ನಿಷೇಧದ ಭೀತಿಯಿಂದ ಬೆಳೆ­ಗಾರರು ಕಂಗಾಲಾ­ಗಿದ್ದರು. ಆದರೆ ನಂತ­ರದ ದಿನಗಳಲ್ಲಿ ಏರಲಾರಂಭಿಸಿದ ಧಾರಣೆ ಅವರ ಮೊಗದಲ್ಲಿ ನಗು ಅರಳಿಸಿತ್ತು. ಈ ವರ್ಷ ಕೂಡ ಅಡಿಕೆ ಬೆಳೆವ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ಮಳೆ ಹೆಚ್ಚಾದಾ­ಗಲೆಲ್ಲಾ ಕಾಡುವ ಕೊಳೆರೋಗ ಮಾಮೂಲಿ­ನಂತೆ ಈ ವರ್ಷವೂ ರೈತರನ್ನು ಹಣ್ಣಾಗಿಸಿದೆ.ತಂಪು ವಾತಾವರಣದ ಬೆಳೆಯಾದರೂ ಮಳೆಯ ತೀವ್ರ ಹೊಡೆತವನ್ನು ತಡೆಯುವ ಶಕ್ತಿ ಅಡಿಕೆ ಮರಕ್ಕಿಲ್ಲ. ಆದರೂ ಈ ವಾಣಿಜ್ಯ ಬೆಳೆ ರೈತನಿಗೆ ಆರ್ಥಿಕ ಶಕ್ತಿಯನ್ನು ನೀಡುತ್ತಿದೆ. ಉತ್ತರಕನ್ನಡ ಜಿಲ್ಲೆಯೂ ಸೇರಿದಂತೆ ರಾಜ್ಯದ ಅನೇಕ ಕಡೆ ಅಡಿಕೆ ತೋಟಗಳು ಶತಮಾನಕ್ಕೂ ಹೆಚ್ಚು ಕಾಲದಿಂದಲೂ ಇವೆ. ಇಂಥ ಕಡೆ ಮರಗಳು ಬಹಳ ಎತ್ತರಕ್ಕೆ ಬೆಳೆ­ದಿದ್ದು ಅಡಿಕೆ ಕೊಯ್ಲು ಮತ್ತು ಕೊಳೆ­ರೋಗ ನಿಯಂತ್ರಣಕ್ಕೆ ಔಷಧಿ ಸಿಂಪಡಿಸುವುದು ಹೇಗೆ ಎಂಬುದೇ ಬೆಳೆಗಾರರ ಸದ್ಯದ ಭೀತಿ. ಇದಕ್ಕೆ ಮುಖ್ಯ ಕಾರಣವೆಂದರೆ ಈ ಕಾಯಕ ಮಾಡುವ ಕೊನೆಗೌಡರ ಕೊರತೆ ದಿನೇ ದಿನೇ ಹೆಚ್ಚಾ­ಗುತ್ತಿರುವುದು.ಇನ್ನೇನು ಅಡಿಕೆ ಕೊಯ್ಲು ಹಂಗಾಮು ಆರಂಭವಾಗಲಿದ್ದು, ಬೆಳೆಗಾರರ ಚಿಂತೆಯೂ ಹೆಚ್ಚಾಗುತ್ತಿದೆ. ಕೊನೆಗೌಡರ ಕೆಲಸ ಭಾರಿ ಕಷ್ಟಕರ­ವಾ­ದದು. ಹೊಲ–ಗದ್ದೆಗಳಲ್ಲಿ ಕೆಲಸ ಮಾಡುವ ಮಾಮೂಲು ಕೃಷಿ ಕಾರ್ಮಿಕರು ನಿರ್ವಹಿಸುವ ಕಾಯಕ ಇದಲ್ಲ. ಇದಕ್ಕೆ ಪರಿಣತಿ, ನೈಪುಣ್ಯ, ಏಕಾಗ್ರತೆ ಬಹಳ ಮುಖ್ಯ. ಏಕೆಂದರೆ ಅಡಿಕೆ ತೋಟದಲ್ಲಿ ಒಂದು ಮರ ಏರುವ ಕೊನೆಗೌಡ ಅದರಿಂದ ಕೆಳಗಿಳಿಯದೇ, ಮರದಿಂದ ಮರಕ್ಕೆ ದಾಟುತ್ತಲೇ ದಿನಕ್ಕೆ 300–400 ಗೊನೆ ಕೊಯ್ಯು­ತ್ತಾರೆ.ಅಲ್ಲದೇ, ತನ್ನ ಸೊಂಟಕ್ಕೆ ಕಟ್ಟಿ­ಕೊಂಡಿ­­ರುವ ಹಗ್ಗದ ಸಹಾಯದಿಂದ ನಿಧಾನ­ವಾಗಿ ಕೆಳಕ್ಕೆ ಜಾರಿಸುತ್ತಾರೆ. ಹಾಗಾಗಿಯೇ ಈ ಕೆಲಸ ಹೆಚ್ಚು ಕುಶಲಮತಿಗಳನ್ನು ಬೇಡುತ್ತದೆ. 50–60 ಅಡಿ ಎತ್ತರದಲ್ಲಿ ಮನುಷ್ಯನೊಬ್ಬ ಮರದಿಂದ ಮರಕ್ಕೆ ದಾಟುವ ಪರಿ ಎಂಥವರನ್ನೂ ಬೆರಗಾಗಿಸುತ್ತದೆ. ಆ ಸಂದರ್ಭ­ದಲ್ಲಿ ಗಮನವು ಒಂದು ಕ್ಷಣ ಆಚೀಚೆ­ಯಾ­­ದರೂ ಅಪಾಯ ತಪ್ಪಿದ್ದಲ್ಲ. ಹಲವು ಬಾರಿ ಅಪಾ­ಯ­ಗಳು ಸಂಭವಿಸಿವೆ. ಕೆಳಗೆ ಬಿದ್ದು ಗಾಯ­­­­­­ಗೊಂಡವರ ಬದುಕು ಶೋಚನೀಯ­ವಾಗಿದೆ.ಇದು ಅಪಾಯಕಾರಿ ಕೆಲಸವಾದುದ­­ರಿಂ­ದಲೇ ವರ್ಷದಿಂದ ವರ್ಷಕ್ಕೆ ಆಳುಗಳ ಕೊರತೆ­ಯಾಗುತ್ತಿದೆ.  ಉತ್ತರಕನ್ನಡ ಜಿಲ್ಲೆಯಲ್ಲಿ 18,000 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆ ಇದೆ. ಇಷ್ಟು ಪ್ರದೇಶದ ಅಡಿಕೆ ಸುಮಾರು ಎರಡು ತಿಂಗಳ ಅವಧಿ ಒಳಗೆ ಕಟಾವು ಆಗ­ಬೇಕು. ಆದರೆ ಅಗತ್ಯ ಸಂಖ್ಯೆಯ ಕೊನೆ­ಗೌಡ­ರಿಲ್ಲ. ಜತೆಗೆ ಪ್ರತಿ ವರ್ಷ ವಯಸ್ಸಾದವರು ಅಥವಾ ಅಸಮರ್ಥ­ರಾದವರು ಈ ಕೆಲಸದಿಂದ ಹಿಂದೆ ಸರಿಯುತ್ತಿದ್ದಾರೆ. ಅದಕ್ಕೆ ಅನುಗುಣ­ವಾಗಿ ಹೊಸಬರು ಬರುತ್ತಿಲ್ಲ. ಇದೇ ಈಗ ಅಡಿಕೆ ಬೆಳೆಗಾರರ ಚಿಂತೆಗೆ ಕಾರಣವಾಗಿದೆ.ತೆಂಗು ಅಭಿವೃದ್ಧಿ ಮಂಡಳಿಯು ತೆಂಗಿನ ಮರ ಏರಲು ಸಾಧನ ರೂಪಿಸಿದೆ. ಈಗಾಗಲೇ ಬಹಳ ಕಡೆ ಇದು ಜನಪ್ರಿಯವೂ ಆಗಿದೆ. ಮಹಿಳೆ­ಯರೂ ಇದನ್ನು ಬಳಸಿಕೊಂಡು ಸರಾಗ­ವಾಗಿ ಮರ ಏರಿ ಕಾಯಿ ಕೀಳುತ್ತಾರೆ. ಜತೆಗೆ ತೆಂಗಿನ ತೋಟಗಳಲ್ಲಿನ ಕೆಲಸ ಅಡಿಕೆ ತೋಟದಷ್ಟು ಕಷ್ಟವಲ್ಲ. ಆದರೆ ಅಡಿಕೆ ಮರ ಏರಲು ಇಂತಹ ಯಂತ್ರ­ಗಳು ಈಗಷ್ಟೇ ಕಾಣಸಿಗುತ್ತಿವೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕೊಣಂದೂರಿನ ಅಡಿಕೆ ಬೆಳೆಗಾರ ಎಂ.ಕೆ.ಕಿರಣ್‌ ಇಂತಹ ಒಂದು ಸಾಧನವನ್ನು ಆವಿಷ್ಕರಿಸಿ, ತಮ್ಮ ತೋಟದಲ್ಲಿ ಯಶಸ್ವಿಯಾಗಿ ಬಳಸುತ್ತಿದ್ದಾರೆ. ಅದನ್ನು ನೋಡಿ ಕೇಳಿದವರಿಗೆ ತಯಾರಿಸಿ ಕೊಡುತ್ತಿ­ದ್ದಾರೆ.ಕೊನೆಗೌಡರು ಮರ ಏರುವಷ್ಟು ವೇಗ­ವಾಗಿಯೇ ಈ ಸಾಧನದ ಮೂಲಕವೂ ಏರ­ಬಹುದು ಎಂಬುದು ಕಿರಣ್‌ ಅವರ ವಿಶ್ವಾಸ. ಆದರೆ ಇಲ್ಲಿ ಪ್ರತಿಯೊಂದು ಮರವನ್ನೂ ಹತ್ತಿ ಇಳಿದು, ಇಳಿದು–ಹತ್ತಬೇಕು. ಕೊನೆಗೌಡ­ರಾದರೆ ಮರದಿಂದಲೇ ಮರಕ್ಕೆ ದಾಟಿ ಕೊಯ್ಲು ಮಾಡುತ್ತಾರೆ. ಅವರಷ್ಟು ವೇಗ­ವಾಗಿ ಯಂತ್ರದ ಮೂಲಕ ಕೊಯ್ಲು ಆಗುತ್ತ­ದೆಯೇ ಎಂಬ ಸಂಶಯ ಈ ಭಾಗ­ದಲ್ಲಿದೆ. ಶಿವಮೊಗ್ಗ, ಪುತ್ತೂರು, ಉಡುಪಿಗಳಲ್ಲೂ ಇನ್ನೂ ಕೆಲವರು ಇಂತಹ ಯಂತ್ರವನ್ನು ರೂಪಿಸಿದ್ದಾರೆ ಎಂಬ ಮಾಹಿತಿ ಇದೆ.ಇರಲಿ. ಆದರೂ ಇತ್ತೀಚೆಗೆ ಅಡಿಕೆ ಮರ ಹತ್ತಲು ಯಂತ್ರೋಪಕರಣಗಳನ್ನು ಕಂಡು­ಹಿಡಿ­ಯ­ಬೇಕಾದ ಕುರಿತ ಚರ್ಚೆ ಆರಂಭ­ವಾಗಿರು­ವುದಂತೂ ನಿಜ. ಇಂಥ ಸಾಧನವೊಂದನ್ನು ಅಭಿವೃದ್ಧಿಪಡಿಸಲು ಕ್ರಮ ತೆಗೆದುಕೊಳ್ಳುವಂತೆ ಬಾಗಲಕೋಟೆಯ ತೋಟಗಾರಿಕೆ ಹಾಗೂ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವ­ವಿದ್ಯಾಲಯಗಳ ಸಂಶೋಧನಾ ವಿಭಾಗಗಳಿಗೆ ಕೃಷಿ ಬೆಲೆ ಅಯೋಗದ ಅಧ್ಯಕ್ಷರು ಸೂಚಿಸಿ­ದ್ದಾರೆ ಎಂದು ತೋಟಗಾರಿಕೆ ಇಲಾಖೆ ಅಧಿ­ಕಾರಿ­­ಗಳು ತಿಳಿಸಿದ್ದಾರೆ.ಅಲ್ಲದೇ, ಉಡುಪಿ ಮೂಲ­­ದವರೊಬ್ಬರು ರೂಪಿಸಿದ್ದಾರೆ ಎನ್ನ­ಲಾದ ಮಾದರಿಯ ಮೇಲೆ ಅಧ್ಯಯನ ನಡೆಸಿ, ಅಗತ್ಯವೆನಿಸಿದರೆ ಬದಲಾವಣೆಗಳನ್ನು ಮಾಡಿ, ರೈತರಿಗೆ ಉಪಯೋಗವಂತಹ ಯಂತ್ರಗಳನ್ನು ತಯಾರಿಸಲು ಸೂಚಿಸಿದ್ದಾರೆ ಎಂಬ ಸಂಗ­ತಿಯು ಅಡಿಕೆ ಬೆಳೆಗಾರರಿಗೆ ಆಶಾ­ದಾಯಕ­ವಾಗಿದೆ. ಹೌದು. ಇಂತಹದೊಂದು ಕೆಲಸ ಅತಿ ಜರೂರಾಗಿ ಆಗಬೇಕಿದೆ. ರಾಜ್ಯದಲ್ಲಿ ಸುಮಾರು ನಾಲ್ಕು ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆ ಇದೆ.ಮರ­ಗಳ ಎತ್ತರ ಕಡಿಮೆ ಇರುವ ಕಡೆ ದೋಟಿಗಳನ್ನು (ರೋಟಿ ಪದ ಬಳಕೆಯೂ ಇದೆ) ಬಳಸಿ ಮನೆಯವರೇ ಕೊಯ್ಲು ಮಾಡುತ್ತಾರೆ. ಅಲ್ಲದೇ, ಔಷಧಿ ಸಿಂಪಡಿಸಲು ಲಭ್ಯವಿರುವ ಯಂತ್ರ­ಗಳನ್ನು ಬಳಸುತ್ತಾರೆ. ಯಂತ್ರ ಬಳಕೆ­ಯಿಂದ ಔಷಧಿ ವ್ಯರ್ಥವಾಗಿ, ಖರ್ಚು ಹೆಚ್ಚಾ­ಗುತ್ತದೆ ಎಂಬ ಮಾತುಗಳೂ ಕೇಳಿ­ಬಂದಿವೆ. ಕೊನೆ­ಗೌಡ­ರಿಂದಾದರೆ ಅಷ್ಟು ವ್ಯರ್ಥ­ವಾಗು­ವುದಿಲ್ಲ ಎಂಬ ಭಾವನೆ ಇದೆ. ಹಾಗಾಗಿ, ಮರಗಳು ಬಹಳ ಎತ್ತರವಿರುವ ಕಡೆಗಳಲ್ಲಿ ಕೊನೆಗೌಡರಿಲ್ಲದೇ ಕೆಲಸವೇ ಆಗುವುದಿಲ್ಲ ಎಂಬ ಪರಿಸ್ಥಿತಿ ಇದೆ.ಅಲ್ಲದೇ, ಅವರಿಗೆ ಸ್ಥಿರವಾಗಿ ಒಂದೇ ಕೂಲಿ ದರ­ವನ್ನು ಕೊಡಲು ಬೆಳೆಗಾರರಿಗೂ ಆಗು­ತ್ತಿಲ್ಲ. ಅವರ ಕೂಲಿ ಅಡಿಕೆಯ ಧಾರಣೆ ಮೇಲೆ ನಿಂತಿದೆ. ಹೆಚ್ಚು ಧಾರಣೆ ಸಿಕ್ಕರೆ ಹೆಚ್ಚು ಕೂಲಿ ಕೊಡಲು ಬೆಳೆಗಾರರೂ ಹಿಂದೇಟು ಹಾಕು­ವುದಿಲ್ಲ. ಇದರಲ್ಲಿ ಸರ್ಕಾರದ ತಪ್ಪೂ ಇದೆ. ಸ್ವಾತಂತ್ರ್ಯ ಬಂದು 67 ವರ್ಷ ಕಳೆದಿದ್ದರೂ ರೈತ ಬೆಳೆಯುವ ಯಾವುದೇ ಉತ್ಪನ್ನಕ್ಕೂ ನಿಗದಿತ ದರ ಸಿಗುವ ವ್ಯವಸ್ಥೆ ಆಗಿಲ್ಲ. ಸೂಜಿ ತಯಾ­ರಿಸುವ ಕಾರ್ಖಾನೆ ಮಾಲೀಕ ತನ್ನ ಪದಾರ್ಥಕ್ಕೆ ಬೆಲೆ ನಿಗದಿಪಡಿಸುವ ಹಕ್ಕು ಹೊಂದಿ­ರುತ್ತಾನೆ. ಆದರೆ ಅನ್ನದಾತನ ಉತ್ಪನ್ನಗಳಿಗೆ ದಲ್ಲಾಳಿ ಧಾರಣೆ ನಿಗದಿಪಡಿಸುತ್ತಾನೆ.ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಯಾವ ಸರ್ಕಾರಗಳೂ ಕೃಷಿಕರ ಆರ್ಥಿಕ ಸ್ಥಿತಿ ಸುಧಾರಿ­ಸುವ ನಿಟ್ಟಿನಲ್ಲಿ ಯೋಚಿಸದ ಪರಿಣಾಮ ಇದು. ಅಡಿಕೆಗೆ ಎಷ್ಟು ಬೆಲೆ ಸಿಗುತ್ತದೆ ಎಂಬು­ದರ ಅರಿವೇ ಇಲ್ಲದ ಬೆಳೆಗಾರರು ಇನ್ನು ಕೊನೆಗೌಡರ ಕೂಲಿ ಹೆಚ್ಚಿಸುವುದು ಸಾಧ್ಯವೇ? ಹಾಗಾಗಿಯೇ ಅಲ್ಪಸ್ವಲ್ಪ ಓದಿದ ಕೊನೆಗೌಡರ ಕುಟುಂಬಗಳ ಸದಸ್ಯರು ಹಳ್ಳಿಗಳನ್ನು, ತಮ್ಮ ಅಪ್ಪ–ತಾತಂದಿರು ಮಾಡಿದ ಕಾಯಕವನ್ನು ಬಿಟ್ಟು ಬೆಂಗಳೂರು ಸೇರಿದ್ದಾರೆ. ಇದಕ್ಕೆ ಯಾರನ್ನು ದೂಷಿಸುವುದು? ಕೆನರಾ (ಉತ್ತರಕನ್ನಡ) ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಅವರು ಕದಂಬ ಚಾರಿಟಬಲ್‌ ಟ್ರಸ್ಟ್‌ ಮೂಲಕ ಆರಂಭಿಸಿರುವ ವಿಮಾ ಸೌಲಭ್ಯ ಪಡೆಯಲು, 400 ಮಂದಿ ಕೊನೆಗೌಡರು ಹೆಸರು ನೋಂದಾಯಿಸಿಕೊಂಡಿ­ದ್ದಾರೆ. ಅಪಾಯಕ್ಕೆ ಒಳಗಾದ 10–12 ಮಂದಿಗೆ ವಿಮೆ ಹಣ ಸಿಕ್ಕಿದೆ. ಆದರೆ ಈ ಯೋಜನೆ ಜನಪ್ರಿಯವಾಗುವ ಮೊದಲೇ ಸ್ಥಗಿತವಾಗಿದೆ. ಜಿಲ್ಲೆಯ ಶಿರಸಿ, ಸಿದ್ದಾಪುರ, ಜೋಯಿಡಾ, ಯಲ್ಲಾಪುರ, ಹೊನ್ನಾವರ, ಭಟ್ಕಳ ತಾಲ್ಲೂಕುಗಳಲ್ಲಿ ಅಡಿಕೆ ತೋಟ ಪ್ರದೇಶ ಹೆಚ್ಚು ಇದೆ. ಈ ಭಾಗದ ಎಲ್ಲ ಕೊನೆ­ಗೌಡರಿಗೂ ಸರ್ಕಾರವೇ ಸಂಘ–ಸಂಸ್ಥೆ ಅಥವಾ ಕಾರ್ಮಿಕ ಇಲಾಖೆ ಮೂಲಕ ವಿಮಾ ಯೋಜನೆ­ಯನ್ನು ತಕ್ಷಣ ಅನುಷ್ಠಾನ­ಗೊಳಿಸ­ಬೇಕು.ಈ ಮೊದಲು ಈ ಕಾಯಕವನ್ನು ತಲತಲಾಂ­ತರದಿಂದ ಆ ಕುಟುಂಬದವರೇ ಮಾಡಿ­ಕೊಂಡು ಬರುತ್ತಿದ್ದರು. ಈಗ ಸರ್ಕಾರವೇ ಆಸಕ್ತ ಯುವಕರನ್ನು ಗುರುತಿಸಿ, ಅವರಿಗೆ ಸಮರ್ಪಕ ತರಬೇತಿ ನೀಡುವ ಕಾರ್ಯ­ಕ್ರಮ­ವನ್ನೂ ತೋಟಗಾರಿಕೆ ಇಲಾಖೆ ಮೂಲಕ ಹಮ್ಮಿಕೊಳ್ಳಬೇಕು.ಕೊನೆಗೌಡರ ಕೊರತೆ ನೀಗುವ ಸಂಭವ ಕಡಿಮೆ ಇರುವುದರಿಂದ ರೈತರು ಗಿಡ್ಡ ತಳಿಯ ಅಡಿಕೆ ಬೆಳೆಯಲು ಮುಂದಾಗಬೇಕು. ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿರುವ ಕೇಂದ್ರೀಯ ತೋಟಗಾರಿಕೆ ಬೆಳೆಗಳ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಹೈಬ್ರಿಡ್‌ ಗಿಡ್ಡ ತಳಿ ಲಭ್ಯವಿದೆ. ಎಕರೆಗೆ 1,200 ಗಿಡಗಳನ್ನು ಹಾಕಬಹುದು. ಮುಂದಿನ ದಿನಗಳಲ್ಲಿ ಇದು ಅನುಕೂಲ. ಇಲ್ಲವಾದಲ್ಲಿ ಸಮಸ್ಯೆ ತಪ್ಪಿದ್ದಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.