ಶುಕ್ರವಾರ, ಏಪ್ರಿಲ್ 16, 2021
30 °C

ಕೌಬಾಯ್ ಕುದುರೆಗಳು

ದ್ವಾರಕೀಶ್ Updated:

ಅಕ್ಷರ ಗಾತ್ರ : | |

`ಮೇಯರ್ ಮುತ್ತಣ್ಣ~ ಸಿನಿಮಾ ಸಾಧ್ಯವಾದದ್ದು ಚಿ.ಉದಯಶಂಕರ್‌ನಿಂದ. ನಾವು ಮೊದಲು ಆ ಚಿತ್ರಕ್ಕೆ ಒಂದು ಚಿತ್ರಕತೆ ಮಾಡಿದ್ದೆವು. ಆ ಕತೆಯಲ್ಲಿ ನಾಯಕ ಕಾಲು ಕಳೆದುಕೊಳ್ಳುವ ಪ್ರಸಂಗವಿತ್ತು. ನಾಯಕನಿಗೇ ಕಾಲು ಇಲ್ಲದಂತಾದರೆ ಸಿನಿಮಾ ಓಡುವುದು ಕಷ್ಟ ಎಂದು ಉದಯಶಂಕರ್ ಬುದ್ಧಿ ಹೇಳಿದ. ಆಮೇಲೆ ಅವನು ಕತೆ ಬದಲಾಯಿಸಿ ಹೇಳಿದ ಬೇರೆ ಚಿತ್ರಕತೆಯೇ `ಮೇಯರ್ ಮುತ್ತಣ್ಣ~ದಲ್ಲಿ ಇದ್ದದ್ದು.



ಚಿ.ಸದಾಶಿವಯ್ಯನವರ ಮಗ ಉದಯಶಂಕರ್ ನನಗೆ ಪರಿಚಿತನಾದದ್ದು ನಾನು `ಮಮತೆಯ ಬಂಧನ~ ಸಿನಿಮಾ ತೆಗೆಯಲು ಹೊರಟಾಗ. ಮದ್ರಾಸ್ ಡ್ರೈವ್ ಇನ್ ಹೋಟೆಲ್‌ನಲ್ಲಿ ಅವನೇ ಬಂದು ಪರಿಚಯ ಮಾಡಿಕೊಂಡ. ತನಗೂ ಒಂದು ಅವಕಾಶ ಕೊಡುವಂತೆ ಕೇಳಿಕೊಂಡ.

 

ಪಂಡರೀಬಾಯಿಯವರ `ಶಾಂತಿನಿವಾಸ~ ಚಿತ್ರದಲ್ಲಿ ಅವನು ದೊಡ್ಡ ಹಾಸ್ಯಪಾತ್ರವನ್ನೂ ಮಾಡಿದ್ದ. `ಲಗ್ನಪತ್ರಿಕೆ~ ಸಿನಿಮಾದಲ್ಲಿ ನಮ್ಮ ಜೊತೆಯೂ ನಟಿಸಿದ್ದ. ಅದರಲ್ಲಿ ಅವನ ಹಾಗೂ ಶಿವರಾಂ ಕಾಂಬಿನೇಷನ್‌ನ ದೃಶ್ಯಗಳು ಜನಪ್ರಿಯವಾಗಿದ್ದವು. ಗಂಟೆಗೆ ಹತ್ತು ದೃಶ್ಯಗಳನ್ನು ಹೇಳುತ್ತಿದ್ದ ಪ್ರವೀಣ, ಹತ್ತು ನಿಮಿಷಕ್ಕೆ ಹತ್ತು ಪಲ್ಲವಿಗಳನ್ನು ಬರೆಯುತ್ತಿದ್ದ ನಿಸ್ಸೀಮ ಉದಯಶಂಕರ್.

 

ಜನರ ನಾಡಿಮಿಡಿತ ಅರಿತು ಅವನಂತೆ ಚಿತ್ರಕತೆಯನ್ನು ರೂಪಿಸುತ್ತಿದ್ದ ಇನ್ನೊಬ್ಬನನ್ನು ನಾನು ಇದುವರೆಗೆ ಕಂಡಿಲ್ಲ. ನನ್ನ ಹೃದಯಕ್ಕೆ ಹತ್ತಿರವಾಗಿದ್ದ ಅವನನ್ನು ನನ್ನ ಚಿತ್ರ ಬದುಕಿನ ಹೃದಯಶಂಕರ ಎಂದೇ ನಾನು ಭಾವಿಸಿದ್ದೇನೆ. ಅವನಿಂದಲೇ ನಾನು ಒಳ್ಳೆಯ ಚಿತ್ರಗಳನ್ನು ಕೊಡಲು ಸಾಧ್ಯವಾಯಿತೆಂಬುದು ಉತ್ಪ್ರೇಕ್ಷೆಯ ಮಾತಲ್ಲ. ಉದಯಶಂಕರ್ ಬಗ್ಗೆ ಮಾತನಾಡುತ್ತಾ ಹೋದರೆ ಒಂದು ಪುಸ್ತಕವೇ ಆಗುತ್ತದೆ.



`ಕುಳ್ಳ ಏಜೆಂಟ್~ ಚಿತ್ರದ ಕತೆ ಮಾಡುವಾಗಲೂ ಜೊತೆಗಿದ್ದ ಉದಯಶಂಕರ್ ಆಮೇಲೆ ನಾವು `ಕೌಬಾಯ್ ಕುಳ್ಳ~ ಮಾಡಹೊರಟಾಗಲೂ ದೃಶ್ಯಗಳ ಯೋಚನೆಯಲ್ಲಿ ತೊಡಗಿದ. ರಾಜ್‌ಕುಮಾರ್ ಅಭಿನಯಿಸಿದ್ದ `ಪ್ರತಿಧ್ವನಿ~ ಹೊರತುಪಡಿಸಿದರೆ `ಕೌಬಾಯ್ ಕುಳ್ಳ~ ಒಂದೇ ಕನ್ನಡದಲ್ಲಿ ಬಂದಿರುವ ಕೌಬಾಯ್ ಸಿನಿಮಾ ಇರಬೇಕು. ಆಮೇಲೆ ಯಾರೂ ಕೌಬಾಯ್ ಸಿನಿಮಾ ಮಾಡಲಿಲ್ಲ.



`ರಂಗಮಹಲ್ ರಹಸ್ಯ~ ಸಿನಿಮಾ ನಿರ್ದೇಶಿಸಿದ್ದ ವಿಜಯಾ ರೆಡ್ಡಿ ಅವರನ್ನು ನನಗೆ ಯಾರೋ ಪರಿಚಯಿಸಿದ್ದರು. ಆ ಚಿತ್ರವನ್ನು ನಾನು ನೋಡಿದ್ದೆ. ಹಲವು ಭಾಷೆಗಳಲ್ಲಿ ಬಂದಿದ್ದ ಅದು ಆ ಕಾಲದಲ್ಲಿ ಸೂಪರ್ ಹಿಟ್. ಅದೇ ನಿರ್ದೇಶಕರಿಂದ `ಕೌಬಾಯ್ ಕುಳ್ಳ~ ಸಿನಿಮಾ ಮಾಡಲು ನಾನು ಮುಂದಾದೆ.

 

ವಿಜಯಾ ರೆಡ್ಡಿಯವರು ಇನ್ನೊಬ್ಬ ಪ್ರತಿಭಾವಂತರನ್ನು ಕರೆದುಕೊಂಡು ಬಂದರು. ಅವರೇ ಎಂ.ಡಿ.ಸುಂದರ್. ಉದಯಶಂಕರ್ ಜೊತೆ ಸೇರಿ ಅದೇ ಸುಂದರ್ ಅನೇಕ ಚಿತ್ರಕತೆಗಳನ್ನು ಮಾಡಿದರು. ಮುಂದೆ ಅವರಿಬ್ಬರ ಜೋಡಿ ಶಂಕರ್-ಸುಂದರ್ ಹೆಸರಿನಲ್ಲಿ ಅನೇಕ ದೊಡ್ಡ ದೊಡ್ಡ ಚಿತ್ರಗಳಿಗೆ ಚಿತ್ರಕತೆಗಳನ್ನು ಒದಗಿಸಿ, ಹೆಸರು ಮಾಡಿತು. ಎಪ್ಪತ್ತರ ದಶಕದಲ್ಲಿ ಹಿಟ್ ಆದ ರಾಜ್‌ಕುಮಾರ್ ಚಿತ್ರಗಳಲ್ಲಿ ಶಂಕರ್-ಸುಂದರ್ ಕೊಡುಗೆ ದೊಡ್ಡದಿದೆ.



`ಕೌಬಾಯ್ ಕುಳ್ಳ~ ಚಿತ್ರಕ್ಕೆ ಜ್ಯೋತಿಲಕ್ಷ್ಮಿಯವರನ್ನು ಕರೆತಂದೆ. ಅವರು ಆ ಕಾಲದಲ್ಲಿ ತೆಲುಗಿನಲ್ಲಿ ಹೀರೋಗಳಷ್ಟೇ ಹೆಸರು ಮಾಡಿದ್ದರು. ಪೊಲೀಸ್, ಸಿಐಡಿ ತರಹದ ನಾಯಕಿ ಪ್ರಧಾನ ಚಿತ್ರಗಳಲ್ಲಿ ಮಿಂಚಿದ್ದರು. ಅವರಂತೆಯೇ ವಿಜಯಲಲಿತಾ ಕೂಡ ಆಂಧ್ರದಲ್ಲಿ ನಾಯಕರಷ್ಟೇ ಜನಪ್ರಿಯರಾಗಿದ್ದ ಕಾಲವದು.



ನಾನು ಕುಳ್ಳ. ಜ್ಯೋತಿಲಕ್ಷ್ಮಿಯವರದ್ದು ನೀಳಕಾಯ. ನಮ್ಮಿಬ್ಬರ ವಿಚಿತ್ರ ಕಾಂಬಿನೇಷನ್ ವರ್ಕ್‌ಔಟ್ ಆಗಬಹುದೆಂಬುದು ಒಂದು ಲೆಕ್ಕಾಚಾರ. ಅವರಿಗೆ ತೆಲುಗಿನಲ್ಲಿ ಹೆಸರಿದ್ದಿದ್ದರಿಂದ ಆ ಭಾಷೆಗೆ ಹಾಗೂ ತಮಿಳಿಗೆ ಡಬ್ ಮಾಡಿದರೂ ವಿತರಕರು ಕೊಳ್ಳುತ್ತಾರೆಂಬುದು ಮಾರುಕಟ್ಟೆಯ ಲೆಕ್ಕಾಚಾರ. ಅದಕ್ಕೇ `ಕುಳ್ಳ ಏಜೆಂಟ್~ ಹಾಗೂ `ಕೌಬಾಯ್ ಕುಳ್ಳ~ ಎರಡೂ ಚಿತ್ರಗಳಿಗೆ ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಿಕೊಂಡೆ.



ಕತೆಗೆ ಕೂತಾಗ ನಾನು ಆಳಕ್ಕಿಳಿಯುತ್ತಿದ್ದೆ. ಅದನ್ನು ನೋಡಿ ವಿಜಯಾ ರೆಡ್ಡಿಗೆ ನನ್ನ ಅಭಿರುಚಿಯ ಬಗ್ಗೆ ಗೌರವ ಮೂಡಿತು. ಪ್ರಕಾಶ್ ಪಿಕ್ಚರ್ಸ್‌ ಎಂಬುವರು ಚಿತ್ರನಿರ್ಮಾಣದಲ್ಲಿ ನಮ್ಮ ಜೊತೆ ಕೈಜೋಡಿಸಿದರು. ವೀರಾಸ್ವಾಮಿಯವರು ಈ ಚಿತ್ರಕ್ಕೂ ಹಣ ನೀಡಲು ಮುಂದೆ ಬಂದರು.



ರಾಮನಗರದಲ್ಲಿ ಒಂದು ಉದ್ದನೆಯ ಹಾಡನ್ನು ತೆಗೆದೆವು. 1972ರಲ್ಲಿ ಕಂಠೀರವ ಸ್ಟುಡಿಯೋದಲ್ಲಿ ದೊಡ್ಡ ಕೌಬಾಯ್ ಸ್ಟ್ರೀಟ್‌ನ ಸೆಟ್ ಹಾಕಿಸಿದ್ದೆ; ಈಗ ರಾಜ್‌ಕುಮಾರ್ ಸಮಾಧಿ ಇದೆಯಲ್ಲ ಆ ಜಾಗದಲ್ಲಿ. ಅದನ್ನು ನೋಡಿ ಬಾಲಕೃಷ್ಣ ಅವರು `ಎಂಥ ಅದ್ಭುತ ಸೆಟ್ ಹಾಕಿಸಿದ್ದೀಯ~ ಎಂದು ನನ್ನ ಬೆನ್ನುತಟ್ಟಿದ್ದರು. ಆಗ ಬೆಂಗಳೂರಿನಲ್ಲಿ ಕುದುರೆಗಳು ಸಿಗುತ್ತಿರಲಿಲ್ಲ. ಮದ್ರಾಸ್‌ನಿಂದ ಲಾರಿಗಳಲ್ಲಿ ಅವನ್ನು ತರಿಸಿದ್ದೆ. ಶಿಂಷಾ, ರಾಮನಗರ, ಕಂಠೀರವ ಸ್ಟುಡಿಯೋಗೆ ಕುದುರೆಗಳನ್ನು ತರಿಸಿ, ಚಿತ್ರೀಕರಣ ಮಾಡಿದ್ದೆವು.



ಜ್ಯೋತಿಲಕ್ಷ್ಮಿ, ನಾನು ಹೊರತುಪಡಿಸಿ ಆ ಚಿತ್ರದಲ್ಲಿ ನಟಿಸಿದ್ದ ಯಾರೊಬ್ಬರೂ ಈಗ ಬದುಕಿಲ್ಲವೆಂಬುದು ದುಃಖದ ಸಂಗತಿ. ವಜ್ರಮುನಿ, ರಂಗ, ತೂಗುದೀಪ ಶ್ರೀನಿವಾಸ್, ಪ್ರಭಾಕರ್, ಶಕ್ತಿಪ್ರಸಾದ್ ಆ ಚಿತ್ರದ ಖಳನಾಯಕರಾಗಿದ್ದರು. ಉದಯಕುಮಾರ್, ಬಾಲಕೃಷ್ಣ ಕೂಡ ನಟಿಸಿದ್ದರು. ಈಗ ಅವರ‌್ಯಾರೂ ಬದುಕಿಲ್ಲ. ಅವರೆಲ್ಲರೂ ನನಗೆ ಆಪ್ತರಾಗಿದ್ದರು.



ರಾಜನ್-ನಾಗೇಂದ್ರ ಸಂಗೀತ ನೀಡಿದ್ದ `ಕೌಬಾಯ್ ಕುಳ್ಳ~ ಚಿತ್ರದಲ್ಲಿ ಕೆಲವು ವಿಚಿತ್ರ ಘಟನೆಗಳೂ ನಡೆದವು. ನಾನು ಖಳನಾಯಕರಿಗೆಂದೇ ಐದು ಕುದುರೆಗಳನ್ನು ತರಿಸಿದ್ದೆ. ಅವುಗಳಲ್ಲಿ ಒಂದು ಕುದುರೆ ತುಂಬಾ `ರಾಂಗ್~ ಆಗಿ ವರ್ತಿಸುತ್ತಿತ್ತು. ಖಳನಾಯಕರ ಪಾತ್ರ ಮಾಡಿದವರಿಗೆ ಮೊದಲು ಬಂದು ತಮ್ಮಿಷ್ಟದ ಕುದುರೆ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿತ್ತು. `ರಾಂಗ್~ ಆಗುತ್ತಿದ್ದ ಕುದುರೆಯನ್ನು ಯಾರೂ ಇಷ್ಟಪಡುತ್ತಿರಲಿಲ್ಲ.



ಶಕ್ತಿಪ್ರಸಾದ್ ಒಮ್ಮೆ ಅಕಸ್ಮಾತ್ತಾಗಿ ಆ ಕುದುರೆ ಹತ್ತಿಬಿಟ್ಟ. ರಾಮನಗರದಲ್ಲಿ ಶೂಟಿಂಗ್ ನಡೆಯುವಾಗ ಅದರಿಂದ ಬಿದ್ದ. ಮೊದಲೇ ಅವನು ಕೋಪಿಷ್ಟ. ಪಿತ್ಥ ನೆತ್ತಿಗೇರಿತು. ಒಂದೇ ಸಮನೆ ನನ್ನನ್ನು ಬಯ್ಯತೊಡಗಿದ. ಕುದುರೆ ಬೀಳಿಸಿದರೆ ನಾನೇನು ಮಾಡೋಕಾಗುತ್ತೆ ಅಂತ ಅವನನ್ನು ಸಮಾಧಾನ ಮಾಡಲೆತ್ನಿಸಿದೆ.

 

ರಾತ್ರಿ ಅವನಿಗೆಂದೇ ಒಂದು ದೊಡ್ಡ ಸ್ಕಾಚ್ ವಿಸ್ಕಿ ಪಾರ್ಟಿ ಕೊಟ್ಟು, ಕೋಪವನ್ನು ತಣ್ಣಗೆ ಮಾಡಿದೆ. ಶಕ್ತಿಪ್ರಸಾದನ ಕೋಪ ಇಳಿಸುವುದೇ ಆಗ ದೊಡ್ಡ ಕೆಲಸವಾಗುತ್ತಿತ್ತು. ಮತ್ತೆ ಅವನು ವಿಗ್ ಹಾಕಿಕೊಂಡು ಪಾತ್ರ ಮಾಡಲು ಒಪ್ಪಿಸಿದ ಮೇಲಷ್ಟೇ ನನಗೆ ನಿರಾಳವಾದದ್ದು.



ರಾಮನಗರದಲ್ಲೇ ಕುದುರೆಗಳ ಮೇಲೆ ಕೂತು ಎಲ್ಲರೂ ಓಡಿಬರುವ ದೃಶ್ಯವೊಂದನ್ನು ಚಿತ್ರೀಕರಿಸಿದೆವು. `ಆ್ಯಕ್ಷನ್~ ಹೇಳಿದ್ದಾಯಿತು. `ಕಟ್~ ಹೇಳುವ ಹೊತ್ತಿಗೆ ಕುದುರೆಗಳಷ್ಟೇ ಬಂದವು. ಅವುಗಳ ಮೇಲೆ ಕೂತಿದ್ದ ಯಾರೂ ಬರಲಿಲ್ಲ. ಎಲ್ಲರೂ ಮಧ್ಯದಲ್ಲೇ ಬಿದ್ದಿದ್ದರು.

 

ಹಾಗೆ ಬಿದ್ದವರಲ್ಲಿ ರಂಗ ಕೂಡ ಒಬ್ಬರು. ಅವರಿಗೆ ಗಂಭೀರವಾಗಿಯೇ ಪೆಟ್ಟಾಗಿತ್ತು. ಎಲ್ಲಿ ಪ್ರಾಣಕ್ಕೇ ಆಪತ್ತು ಬರುವುದೋ ಎಂಬ ಭಯ ನಮ್ಮೆಲ್ಲರಿಗೆ. ಪುಣ್ಯಕ್ಕೆ ಅವರು ಚೇತರಿಸಿಕೊಂಡರು. ಇಷ್ಟೆಲ್ಲಾ ಕಷ್ಟಪಟ್ಟು ಮಾಡಿದ `ಕೌಬಾಯ್ ಕುಳ್ಳ~ ಚಿತ್ರ ಬಿಡುಗಡೆಯಾದ ಮೇಲೆ ತೆಲುಗು, ಹಿಂದಿಗೆ ಡಬ್ ಆಯಿತು.

*

ವೀರಾಸ್ವಾಮಿಯವರು ಹೊಸ ಚಿತ್ರ ಮಾಡಲು ನಿರ್ಧರಿಸಿದ್ದರು. ಅದಕ್ಕೆ ಹೊಸಬರನ್ನೇ ಆಯ್ಕೆ ಮಾಡುವುದು ಅವರ ಉದ್ದೇಶವಾಗಿತ್ತು. ಅದಕ್ಕೂ ಮೊದಲು ಅವರು ನನಗೆ, `ವಂಶವೃಕ್ಷ ಎಂಬ ಸಿನಿಮಾ ಬಂದಿದೆ. ನೋಡಿಬನ್ನಿ~ ಎಂದರು. ನಾನು ಸ್ಟೇಟ್ಸ್ ಚಿತ್ರಮಂದಿರದಲ್ಲಿ ಅದನ್ನು ನೋಡಿದೆ. ಸಣ್ಣ ಪಾತ್ರ ಮಾಡಿದ್ದ ಒಬ್ಬ ಹುಡುಗ ನನ್ನ ಗಮನ ಸೆಳೆದ. ಆಮೇಲೆ ಗೊತ್ತಾಯಿತು, ಅದೇ ಹುಡುಗನನ್ನು ವೀರಾಸ್ವಾಮಿಯವರು ತಮ್ಮ ನಿರ್ಮಾಣದ ಹೊಸ ಚಿತ್ರಕ್ಕೆ ನಾಯಕನಾಗಿ ಆಯ್ಕೆ ಮಾಡಿದ್ದಾರೆ ಎಂದು. ಆ ಹೊಸ ಚಿತ್ರವೇ `ನಾಗರಹಾವು~. ಅದರ ನಾಯಕನಾಗಿ ಆಯ್ಕೆಯಾಗಿದ್ದವನೇ ನಮ್ಮ ಪ್ರೀತಿಯ ವಿಷ್ಣುವರ್ಧನ; ಆ ಕಾಲದ ಕುಮಾರ.



`ನಾಗರಹಾವು~ ಚಿತ್ರವನ್ನು ಮದ್ರಾಸ್‌ನ ಸಫೈರ್ ಚಿತ್ರಮಂದಿರದ ಪ್ರಿವ್ಯೆನಲ್ಲಿ ನೋಡಿದೆ. ಒಂದು ಬದಿಯಲ್ಲಿ ವೀರಾಸ್ವಾಮಿ ಕುಳಿತಿದ್ದರು. ಇನ್ನೊಂದು ಬದಿಯಲ್ಲಿ ಪುಟ್ಟಣ್ಣ. ಇಡೀ ಚಿತ್ರ ನನ್ನನ್ನು ಆವರಿಸಿಕೊಂಡಿತು. `ಕ್ಲಿಯೋಪಾತ್ರ~ ಸಿನಿಮಾ ನೋಡಿದಾಗ ಆದಂಥ ರೋಮಾಂಚನ ಅದನ್ನು ನೋಡಿ ನನಗಾಗಿತ್ತು. ಚಿತ್ರದುರ್ಗವನ್ನು ಪುಟ್ಟಣ್ಣ ತೋರಿಸಿದ್ದ ರೀತಿ, ಚಿತ್ರಕತೆ ಸಾಗುವ ಪರಿ ನನ್ನನ್ನು ಬೆರಗಾಗಿಸಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಆ ಹೊಸ ನಾಯಕ ಕುಮಾರ್ ನನಗೆ ತುಂಬಾ ಹಿಡಿಸಿದ್ದ. ಕನ್ನಡಕ್ಕೆ ಒಬ್ಬ ನಾಯಕನನ್ನು ಕೊಟ್ಟಿರಿ ಎಂದು ಪುಟ್ಟಣ್ಣನವರನ್ನು ಅಭಿನಂದಿಸಿದೆ. ನನಗೂ ಆ ನಾಯಕನನ್ನು ಹಾಕಿಕೊಂಡು ಸಿನಿಮಾ ಮಾಡಬೇಕು ಎಂಬ ಬಯಕೆ ಹುಟ್ಟಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.