ಭಾನುವಾರ, ಮಾರ್ಚ್ 29, 2020
19 °C

ಜಾತಿ ರಾಜಕೀಯದ ಕರಾಳ ಮುಖ

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ರಾಜಕಾರಣದಲ್ಲಿ ಜಾತೀಯತೆಯನ್ನು ತೀವ್ರವಾಗಿ ವಿರೋಧಿಸುವುದಾಗಿ  ದೇಶದ ಎಲ್ಲ ರಾಷ್ಟ್ರೀಯ ಪಕ್ಷಗಳು ಎದೆತಟ್ಟಿಕೊಂಡು ಹೇಳಿಕೊಳ್ಳುತ್ತವೆ. ಆದರೆ, ಅವುಗಳ ನಡವಳಿಕೆ ಮಾತ್ರ ಈ ಹೇಳಿಕೆಗೆ ಸಂಪೂರ್ಣ ವ್ಯತಿರಿಕ್ತವಾಗಿದ್ದು, ಜಾತೀಯತೆಯ ರಾಜಕಾರಣದಲ್ಲಿಯೇ ಸದಾ ಮುಳುಗಿ ಏಳುತ್ತಿರುತ್ತವೆ. ಪಕ್ಷದ ನಾಯಕತ್ವ ಮತ್ತು  ಧೋರಣೆಯಲ್ಲಿಯೂ ಜಾತಿ ಸಮೀಕರಣವನ್ನು ಸಮರ್ಪಕವಾಗಿ ಪಾಲಿಸಿಕೊಂಡು ಬಂದಿರುವುದೂ ಕಂಡು ಬರುವುದಿಲ್ಲ.ಈ ಬಗ್ಗೆಯೇ ಪ್ರತ್ಯೇಕವಾಗಿ ಮಾತನಾಡುವುದಾದರೆ, ಜಾತಿ ರಾಜಕೀಯದ ಇತಿಹಾಸವು 1987ರಿಂದ ಆರಂಭಗೊಳ್ಳುತ್ತದೆ ಎನ್ನಬಹುದು. ಆ ಸಂದರ್ಭದಲ್ಲಿ ಜಾತಿ ರಾಜಕಾರಣ ಚಿಗುರೊಡೆಯಲು ಕಾಂಗ್ರೆಸ್‌ ಪಕ್ಷವೇ ಕಾರಣವಾಗಿತ್ತು. ನಂತರ ನಡೆದ ಚುನಾವಣೆಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳು ಇದನ್ನು ನೀರೆರೆದು ಪೋಷಿಸಿಕೊಂಡು ಬಂದಿವೆ. ದೇಶದ ಇತರ ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ, ಜಾತೀಯತೆ ಬಗ್ಗೆ ಅತಿಯಾಗಿ ಗೊಂದಲ ಮೂಡಿಸಿರುವ ಹೆಗ್ಗಳಿಕೆ ಮಾತ್ರ ಬಿಜೆಪಿಗೆ ಸೇರುತ್ತದೆ.1984ರಿಂದೀಚೆಗೆ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಬಹುಮತ ಗಳಿಸಿ ಸ್ವಂತದ ಬಲ ಆಧರಿಸಿ ಕೇಂದ್ರದಲ್ಲಿ ಸರ್ಕಾರ ರಚಿಸಿರುವ ಬಿಜೆಪಿಯು ಹಿಂದುಳಿದ ವರ್ಗಕ್ಕೆ ಸೇರಿದ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ, ಮತ್ತಿಬ್ಬರನ್ನು ರಾಜ್ಯಗಳ ಮುಖ್ಯಮಂತ್ರಿಗಳನ್ನಾಗಿ ನೇಮಿಸಿದೆ. ಪರಿಶಿಷ್ಟ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಸಾಕಷ್ಟು ಸಂಖ್ಯೆಯ ಸಂಸದರು ಪಕ್ಷದ ಟಿಕೆಟ್‌ನಿಂದ ಲೋಕಸಭೆಗೆ ಆಯ್ಕೆಯಾಗಿ ಬಂದಿದ್ದಾರೆ.ಕಾಂಗ್ರೆಸ್‌ 40 ವರ್ಷಗಳಲ್ಲಿ ಬೆಳೆಸಿದ ಮುಖಂಡರಿಗೆ ಹೋಲಿಸಿದರೆ, ಬಿಜೆಪಿ ಎರಡು ದಶಕಗಳಲ್ಲಿ ಅದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ವರ್ಗಗಳ ಸಶಕ್ತ ಮುಖಂಡರನ್ನು ಬೆಳೆಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ದಲಿತರೊಬ್ಬರು ಪಕ್ಷದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ ಖ್ಯಾತಿಯೂ ಬಿಜೆಪಿಗೆ ಇದೆ.ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ, ರಾಜಕಾರಣದಲ್ಲಿ ಜಾತೀಯತೆಯ ವಿರುದ್ಧ ಮಾತನಾಡುತ್ತಲೇ ಇರುವುದನ್ನೂ ನಾವಿಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲೇಬೇಕು. ನಾನು ಈ ವಾರದ ಅಂಕಣ ಬರೆಯುವ ಹೊತ್ತಿನಲ್ಲಿಯೇ, ಗೋರಖ್‌ಪುರದಲ್ಲಿ ನಡೆದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುವಾಗಲೂ ಮೋದಿ ಇಂತಹದ್ದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.ದೇಶದಾದ್ಯಂತ ಯಶಸ್ವಿಯಾಗಿ ಅಶ್ವಮೇಧ ನಡೆಸಿ, 2014ರಲ್ಲಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದ ದಿನದಿಂದ ಬಿಜೆಪಿ ಎದುರಿಸಿದ ಬೆದರಿಕೆ ಅಥವಾ ಸವಾಲುಗಳ ಪೈಕಿ ಈಗ ಎದುರಾಗಿರುವುದು ಅತಿದೊಡ್ಡದು ಎನ್ನಬಹುದು. ಈ ಬೆದರಿಕೆ ಎದುರಾಗಿರುವುದು ಆಮ್‌ ಆದ್ಮಿ ಪಕ್ಷದಿಂದಾಗಲಿ, ಸಿಟ್ಟು, ಅಸಹನೆಯಿಂದ ಕುದಿಯುತ್ತಿರುವ, ಏಕಾಂಗಿಯಾಗಿರುವ, ಭಯಭೀತ ಅಲ್ಪಸಂಖ್ಯಾತರಿಂದಾಗಲಿ ಅಲ್ಲ. ಅತಿದೊಡ್ಡ ವೋಟ್‌ ಬ್ಯಾಂಕ್‌ ಆಗಿರುವ ಹಿಂದೂಗಳಿಂದಲೇ ಬೆದರಿಕೆ ಎದುರಿಸುತ್ತಿದೆ ಎನ್ನುವುದೇ ವಿಶೇಷವಾಗಿದೆ.ಗುಜರಾತ್‌ನಲ್ಲಿ ಕೆಲ ದಲಿತ ಬಾಲಕರನ್ನು ವಾಹನಕ್ಕೆ ಕಟ್ಟಿ ಥಳಿಸಿರುವುದನ್ನು ಚಿತ್ರೀಕರಣ ಮಾಡಿರುವ ವಿಡಿಯೊ ಮತ್ತು ಪಕ್ಷದ ಉತ್ತರ ಪ್ರದೇಶ ಘಟಕದ ಉಪಾಧ್ಯಕ್ಷ, ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರನ್ನು  ‘ವೇಶ್ಯೆಗಿಂತ ಕಡೆ’ ಎಂದು ಜರಿದಿರುವುದು ಕಾಶ್ಮೀರದಲ್ಲಿ ಉದ್ಭವಿಸಿರುವ ಅಶಾಂತ ಪರಿಸ್ಥಿತಿಯನ್ನು ಮರೆಯುವಂತೆ ಮಾಡಿವೆ. ಸದ್ಯಕ್ಕೆ ಟೆಲಿವಿಷನ್‌ನಲ್ಲೂ ಈ ಎರಡೇ ಸುದ್ದಿಗಳಿಗೆ ಹೆಚ್ಚು ಪ್ರಚಾರ ಸಿಗುತ್ತಿದೆ. ಕಾಶ್ಮೀರದಲ್ಲಿ ಸಡಿಲಗೊಳ್ಳದ ಕರ್ಫ್ಯೂ, 44 ಜನರ ಸಾವು, 2 ಸಾವಿರ ಜನರು ಗಾಯಗೊಂಡಿರುವುದು, ದುರದೃಷ್ಟದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಕಣ್ಣೀರು ಸುರಿಸುತ್ತಿರುವುದು ನೇಪಥ್ಯಕ್ಕೆ ಸರಿದಿವೆ.ಮುಂಬರುವ ದಿನಗಳಲ್ಲಿ ಹಲವಾರು  ಕೃತ್ಯಗಳನ್ನು ಮನ್ನಿಸುವುದನ್ನು ನಾವು ಕಾಣಬಹುದು. ಸತ್ತ  ಹಸುವಿನ ಚರ್ಮ ಬೇರ್ಪಡಿಸುತ್ತಿದ್ದ ಗುಜರಾತ್‌ ದಲಿತರನ್ನು ಅವಮಾನಿಸಿ ಹಿಂಸಿಸಿದ ಕೃತ್ಯ ಎಸಗಿದ ತಂಡದಲ್ಲಿ ಒಬ್ಬ ಮುಸ್ಲಿಂ ಬಾಲಕನೂ ಇರುವುದು ಕೆಲ ಸ್ಥಾಪಿತ ಹಿತಾಸಕ್ತಿಗಳ ಸಂಚಿನ ಭಾಗವಾಗಿರಲೂಬಹುದು. ಸದ್ಯಕ್ಕೆ ಬಿಜೆಪಿಯಿಂದ ಅಮಾನತುಗೊಂಡಿರುವ ಪಕ್ಷದ ಮುಖಂಡ ದಯಾಶಂಕರ್‌ ಸಿಂಗ್‌ ಅವರು ಆಡಿದ ಮಾತು ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಈ ಕಳಂಕ ಬಹುಕಾಲ ಉಳಿಯಲಿದೆ. ಬಿಜೆಪಿಯು ಚಾಣಾಕ್ಷತೆಯಿಂದ ಈ ಬಿಕ್ಕಟ್ಟನ್ನು ಬಗೆಹರಿಸದಿದ್ದರೆ ಪಕ್ಷದ ವಿರುದ್ಧದ ಆಕ್ರೋಶ ಇನ್ನಷ್ಟು ಹೆಚ್ಚಲಿದೆ.ದೇಶಿ ರಾಜಕಾರಣದಲ್ಲಿ ಜಾತಿಗೆ ಹೆಚ್ಚಿನ ಮಹತ್ವ ದೊರೆಯುತ್ತಿರುವುದಕ್ಕೆ ಹಲವಾರು ಪ್ರಮುಖ ಕಾರಣಗಳೂ ಇವೆ. ಆದರೂ ಬಿಜೆಪಿ ಪಾಲಿಗೆ ಜಾತಿ ಈಗಲೂ ಹೆಚ್ಚು ಗೊಂದಲಕಾರಿಯಾಗಿದೆ.ಕಾಂಗ್ರೆಸ್‌ ಹೊರತುಪಡಿಸಿ ಹೇಳುವುದಾದರೆ, ಬಿಜೆಪಿಯ ಪ್ರಮುಖ ರಾಷ್ಟ್ರೀಯ ಪ್ರತಿಸ್ಪರ್ಧಿ ಅಥವಾ ಪ್ರಾದೇಶಿಕ ಎದುರಾಳಿಗಳಾದ ಸಮಾಜವಾದಿ ಪಕ್ಷ (ಎಸ್‌ಪಿ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಜೆಡಿಯು ಅಥವಾ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ (ಟಿಎಂಸಿ), ಕೇಜ್ರಿವಾಲ್‌ ಅವರ ಆಮ್‌ ಆದ್ಮಿ (ಎಎಪಿ) ಪಕ್ಷಗಳ  ಸ್ಪರ್ಧೆ ಹೊರತುಪಡಿಸಿದರೆ ಬಿಜೆಪಿಯು ಅಲ್ಪಸಂಖ್ಯಾತರ ವೋಟುಗಳನ್ನು ಅತಿಯಾಗಿ ನೆಚ್ಚಿಕೊಂಡಿಲ್ಲ.ಅಟಲ್‌ ಬಿಹಾರಿ ವಾಜಪೇಯಿ ಅವರ ಅಧಿಕಾರಾವಧಿಯಲ್ಲಿ ಮಾತ್ರ ಮುಸ್ಲಿಮರಲ್ಲಿ ಬಿಜೆಪಿ ಬಗೆಗಿನ ಆತಂಕ  ಕೆಲ ಮಟ್ಟಿಗೆ ಕಡಿಮೆಯಾಗಿತ್ತು. ವಾಜಪೇಯಿ ಅವರ ನಂತರದ ದಿನಗಳಲ್ಲಿ ಬಿಜೆಪಿ ಮತ್ತೆ ತನ್ನ ಮೂಲ ತತ್ವ, ಸಿದ್ಧಾಂತಕ್ಕೆ ಮರಳಿದೆ. 2014ರಿಂದೀಚೆಗೆ ಬಿಜೆಪಿಯು ಮತ್ತೆ ಗರ್ವದಿಂದ ಬೀಗುವುದನ್ನು ಮುಂದುವರೆಸಿದೆ.ಪ್ರಧಾನಿ ತಮ್ಮ ಅಧಿಕೃತ ನಿವಾಸದಲ್ಲಿ ಆಯೋಜಿಸುತ್ತಿದ್ದ ಇಫ್ತಾರ್‌ ಅನ್ನು ನರೇಂದ್ರ ಮೋದಿ ಕೈಬಿಟ್ಟಿದ್ದಾರೆ. ರಾಷ್ಟ್ರಪತಿ ಭವನದಲ್ಲಿಯೂ ಸತತ ಮೂರನೆ ವರ್ಷವೂ ಇಂತಹ ಸಂಪ್ರದಾಯ ಪಾಲನೆಯಾಗಿಲ್ಲ. ಬಿಜೆಪಿಯ ಇಂಥ ಧೋರಣೆಗಳನ್ನು ಮುಸ್ಲಿಂ ವ್ಯಕ್ತಿಯೊಬ್ಬ ಹೇಗೆ ಗ್ರಹಿಸಬಲ್ಲ ಎನ್ನುವುದೂ ಇಲ್ಲಿ ಮುಖ್ಯವಾಗುತ್ತದೆ. ಬಿಜೆಪಿಯ ಚಿಂತಕರ ಚಾವಡಿಯು, ಧರ್ಮ ನಿರಪೇಕ್ಷತೆ ಬಗ್ಗೆ ತನ್ನದೇ ಆದ ವ್ಯಾಖ್ಯಾನವನ್ನು ಪಾಲಿಸಿಕೊಂಡು ಬರಲು ನಿರ್ಧರಿಸಿದೆ. ಮುಸ್ಲಿಮರ ಬಗ್ಗೆ ಏನಾದರೂ ಹೊಸ ನಿಲುವು ತಳೆದರೆ ಅದು ಹಳೆಯ ಓಲೈಕೆ ನೀತಿ ಆಗಲಿದೆ ಎಂದೇ ಬಿಜೆಪಿ ಭಾವಿಸಿರುವಂತಿದೆ.ಭಾರತವು ಮೂಲತಃ ಹಿಂದೂ ದೇಶವಾಗಿರುವುದರಿಂದಲೇ ಜಾತ್ಯತೀತ ದೇಶವಾಗಿದೆ. ಎಲ್ಲರನ್ನೂ ಒಳಗೊಂಡಿರುವುದು ಮತ್ತು ಸಹನೆಯ ತತ್ವ ಹಿಂದುತ್ವದ ಅವಿಭಾಜ್ಯ ಅಂಗವಾಗಿದೆ ಎಂದು ಬಿಜೆಪಿ ಭಾವಿಸಿದೆ. ಇದೇ ಕಾರಣಕ್ಕಾಗಿಯೇ ಪಕ್ಷವು ಉದ್ದೇಶಪೂರ್ವಕವಾಗಿ ಅಥವಾ ಅನಿವಾರ್ಯವಾಗಿ ಒಟ್ಟು ಮತದಾರರ ಪೈಕಿ ಶೇ 80ರಷ್ಟು ಜನರನ್ನಷ್ಟೇ ನೆಚ್ಚಿಕೊಂಡರೆ ಸಾಕು ಎನ್ನುವ ತೀರ್ಮಾನಕ್ಕೆ ಬಂದಂತೆ ಕಾಣಿಸುತ್ತದೆ.ಮೋದಿ ಅವರು ಹಿಂದುಳಿದ ಜಾತಿಗೆ ಸೇರಿದವರು ಎಂದು ಬಿಜೆಪಿ ಇತ್ತೀಚಿನ ಹಲವಾರು ಚುನಾವಣೆಗಳಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲು ಸಾಕಷ್ಟು ಶ್ರಮ ವಹಿಸಿದೆ. ಉತ್ತರ ಪ್ರದೇಶದಲ್ಲಿನ 80 ಲೋಕಸಭಾ ಸ್ಥಾನಗಳ ಪೈಕಿ 73ರಲ್ಲಿ ಗೆದ್ದಿರುವುದು, ದಲಿತರು ಮಾಯಾವತಿ ಅವರ ಪ್ರಭಾವದಿಂದ ಹೊರ ಬಂದು ಪಕ್ಷದ ಜತೆ ಗುರುತಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ ಎನ್ನುವುದು ಪಕ್ಷದ ಚಿಂತಕರ ಚಾವಡಿ ಪ್ರಮುಖರಿಗೆ ಮನದಟ್ಟಾಗಿರುವಂತಿದೆ. ಕಳೆದ ವಾರ ನಡೆದ ಘಟನೆಗಳು ಈಗ ಗಡಿಯಾರವನ್ನು ಮತ್ತೆ 2014ರ ಮುಂಚಿನ ದಿನಗಳಿಗೆ ತಂದಿವೆ.ಇದಕ್ಕೆ ಪಕ್ಷದ ಹಲವು ಮುಖಂಡರ ಅವಿವೇಕತನದ ಕೃತ್ಯಗಳಾಗಲಿ ಅಥವಾ ಮಾಯಾವತಿ ಅವರ ವಿರುದ್ಧದ ನಿಂದನಾ ಭಾಷೆಯಾಗಲಿ ಕಾರಣವಲ್ಲ. ಬಿಜೆಪಿಯು   ಹಿಂದೂ ಮೇಲ್ವರ್ಗದವರಿಗೆ ಸೇರಿದ ಪಕ್ಷ ಎನ್ನುವ ಹಣೆಪಟ್ಟಿಯಿಂದ ಹೊರ ಬರಲು ಕಳೆದ ದಶಕದಿಂದ ನಡೆಸುತ್ತಿರುವ ಜಾಣತನದ ಪ್ರಯತ್ನದ ಗೋಜಲನ್ನು ಇದು ಬಹಿರಂಗಗೊಳಿಸಿದೆ. ಜತೆಗೆ, ಬಿಜೆಪಿಯು ಈಗಲೂ ರಾಜಕೀಯ ಲಾಭ ಪಡೆಯಲು ಜಾತಿ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವ ಪಕ್ಷದ ಸಿದ್ಧಾಂತವನ್ನು ಮತ್ತೊಮ್ಮೆ ಬಯಲುಗೊಳಿಸಿದೆ.ನಿರ್ದಿಷ್ಟ ಜಾತಿಗಳಿಗೆ ಸೀಮಿತವಾಗಿರುವ ವೃತ್ತಿ ಕೌಶಲಗಳಿಗೆ ಸಮಾಜದಲ್ಲಿ ಅದರದ್ದೇ ಮಹತ್ವ ಇದೆ. ಭಂಗಿ ಅಥವಾ ಚರ್ಮ ಹದ ಮಾಡುವವನೂ ಬ್ರಾಹ್ಮಣನಷ್ಟೇ ಮಹತ್ವದ ಪಾತ್ರ ಹೊಂದಿದ್ದಾನೆ. ಶೌಚಾಲಯ ಸ್ವಚ್ಛಗೊಳಿಸುವ ಅಥವಾ ಮೃತ ಜಾನುವಾರುಗಳ ಚರ್ಮ ಬೇರ್ಪಡಿಸಲು ಈ ಹಿಂದುಳಿದ ಜಾತಿಗಳ ಜನರೇ ಬೇಕಾಗುತ್ತಾರೆ. ಇಂತಹ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಬದಲಾವಣೆ ಬಯಸುವವರು, ಅದರಲ್ಲೂ ರಾಜಕೀಯ ಅಧಿಕಾರ ಪಡೆಯಲು ಇಚ್ಛಿಸುವವರು ರಾಜಕಾರಣದಲ್ಲಿ ಜಾತಿಯನ್ನು ದುರ್ಬಳಕೆ ಮಾಡಿಕೊಳ್ಳಲು ಮುಂದಾಗುತ್ತಾರೆ.ಮನು ಮತ್ತು ಆತನ ತತ್ವಜ್ಞಾನವನ್ನೇ ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್‌ಎಸ್‌ಎಸ್‌) ಪಾಲಿಸುತ್ತ ಬಂದಿರುವುದರಿಂದ ಅದು ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕವಾಗಿ ಇರುವವರೆಗೆ ಪಕ್ಷಕ್ಕೆ ಜಾತಿಯ ತರ್ಕವನ್ನು ತಿರಸ್ಕರಿಸಲು ಸಾಧ್ಯವೇ ಇಲ್ಲ. ಗ್ರೀಸ್‌ ಮತ್ತು ರೋಮ್‌ನಲ್ಲಿ ಆಧುನಿಕ ಸರ್ಕಾರದ ತತ್ವಗಳನ್ನು ಜಾರಿಗೆ ತಂದ  ರಾಜಕೀಯ ಪಂಡಿತರಿಗೆ ಹೋಲಿಸಿದರೆ ನಮ್ಮ ಸೀಮಿತ ದೃಷ್ಟಿಕೋನದ ಕೌಟಿಲ್ಯನ ರಾಜಕೀಯ ತಂತ್ರಗಾರಿಕೆಯೇ ಕೇಂದ್ರದಲ್ಲಿನ ಆಡಳಿತಾರೂಢ ಪಕ್ಷಕ್ಕೆ ಆದರ್ಶಪ್ರಾಯವಾಗಿದೆ.ಒಂದೊಮ್ಮೆ ನೀವು ಜಾತಿ ಪ್ರಧಾನದ ಕೌಶಲಗಳ, ಜಾತಿ ಮತ್ತು ವೃತ್ತಿಗೆ ತಳಕು ಹಾಕಿರುವ ಪರಿಕಲ್ಪನೆಯನ್ನು ಒಪ್ಪಿಕೊಂಡರೆ, ಕೆಳ ಜಾತಿ ಜನರ ಬಗ್ಗೆ ಬರೀ ತೋರಿಕೆಯ ಕಾಳಜಿ ಪ್ರದರ್ಶಿಸಲು ಮತ್ತು ಅವರ ಉದ್ಧಾರದ ಬಗ್ಗೆ ಹಳಸಲು ಮಾತುಗಳನ್ನಷ್ಟೇ ಆಡಲು ಸಾಧ್ಯವಾಗುತ್ತದೆ. ಕೆಳಜಾತಿ ಜನರ ಮನೆಗಳಲ್ಲಿ ನೀರು ಕುಡಿಯುವುದನ್ನು ಎಲ್ಲ ರಾಜಕೀಯ ಪಕ್ಷಗಳ ಜನರು ಬರೀ ಪ್ರಚಾರಕ್ಕಾಗಿ  ಮಾಡುತ್ತಾರಷ್ಟೆ.ಈ ಜಾತಿ  ರಾಜಕಾರಣದ ವಿಷಯದಲ್ಲಿ, ಅಣ್ಣಾ ಹಜಾರೆ ಅವರ ಚಳವಳಿಯೂ ಸೇರಿದಂತೆ ಪ್ರತಿ ರಾಜಕೀಯ ಪಕ್ಷವೂ ದೋಷಗಳಿಂದ ಮುಕ್ತವಾಗಿಲ್ಲ. ಅಣ್ಣಾ  ಹಜಾರೆ ಅವರು ತಮ್ಮ ಉಪವಾಸ ಸತ್ಯಾಗ್ರಹ ಕೊನೆಗೊಳಿಸುವಾಗ ಮುಸ್ಲಿಂ ಮತ್ತು ದಲಿತ ಬಾಲಕರಿಬ್ಬರಿಂದ ಅವರಿಗೆ ಹಣ್ಣಿನ ರಸ ಕುಡಿಸುವ ಮೂಲಕ ಜಾತಿಯನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿತ್ತು. ಬಾಲಕರನ್ನು ರಾಜಕೀಯ ವೇದಿಕೆ ಮೇಲೆ ದುರುದ್ದೇಶಕ್ಕೆ ಬಳಸಿಕೊಂಡದ್ದು ಬಹುಶಃ ಅದೇ ಮೊದಲ ಬಾರಿಗೆ ಇದ್ದಿರಬಹುದು.ಬಾಬು  ಜಗಜೀವನರಾಂ ಅವರ ನಂತರ ಕಾಂಗ್ರೆಸ್‌ ಕೂಡ ಯಾವುದೇ ದಲಿತ  ಮುಖಂಡನನ್ನು ಬೆಳೆಸುವಲ್ಲಿ ವಿಫಲಗೊಂಡಿತು. ಕಾಂಗ್ರೆಸ್‌ನ ಈ ವೈಫಲ್ಯಕ್ಕೆ ಹೋಲಿಸಿದರೆ, ಈ ವಿಷಯದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ದೊಡ್ಡ ಸವಾಲನ್ನೇ  ಎದುರಿಸುತ್ತ ಬಂದಿವೆ. ಪ್ರೊ. ರಾಜೇಂದ್ರಸಿಂಗ್‌ (ರಜಪೂತ್‌) ಅವರನ್ನು ಹೊರತುಪಡಿಸಿದರೆ, 1925ರಲ್ಲಿ ಅಸ್ತಿತ್ವಕ್ಕೆ ಬಂದ ದಿನದಿಂದ ಹಿಡಿದು ಇಲ್ಲಿಯವರೆಗೆ ಆರ್‌ಎಸ್‌ಎಸ್‌ನ ಮುಖ್ಯಸ್ಥರೆಲ್ಲ  ಮೇಲ್ವರ್ಗದ ಬ್ರಾಹ್ಮಣರೇ ಆಗಿದ್ದಾರೆ. ಸಂಘಟನೆಯ ಆಯಕಟ್ಟಿನ ಸ್ಥಾನಗಳನ್ನೂ  ಬ್ರಾಹ್ಮಣರೇ ಅತಿಕ್ರಮಿಸಿದ್ದಾರೆ. ಈ ಸಂಘ ಪರಿವಾರವು ಮನುಸ್ಮೃತಿಯಲ್ಲಿ  ಬರೆದಿರುವಂತೆಯೇ ಜಾತಿ ಶ್ರೇಣಿಯನ್ನು ಸಂಪೂರ್ಣವಾಗಿ ಸ್ವೀಕರಿಸಿ ಅಳವಡಿಸಿಕೊಂಡಿದೆ.ಇನ್ನೊಂದೆಡೆ ಬಿಜೆಪಿಯ ಮುಂಚೂಣಿ ನಾಯಕತ್ವದಲ್ಲಿಯೂ ಉಚ್ಚ ಜಾತಿಗಳ ಪ್ರಭಾವವೇ ಎದ್ದು ಕಾಣುತ್ತದೆ. ಬಂಗಾರು ಲಕ್ಷ್ಮಣ್‌ ಮಾತ್ರ ಪಕ್ಷದ ಏಕೈಕ ದಲಿತ  ಅಧ್ಯಕ್ಷರಾಗಿದ್ದರು. ಎರಡು ಲಕ್ಷ ರೂಪಾಯಿ ಲಂಚ ಪಡೆಯುವ ತೆಹೆಲ್ಕಾ ಚುಟುಕು ಕಾರ್ಯಾಚರಣೆಯಲ್ಲಿ ಸಿಕ್ಕಿ ಹಾಕಿಕೊಂಡ ಅವರನ್ನು ಪಕ್ಷವು ಸಂಪೂರ್ಣವಾಗಿ ನಿರ್ಲಕ್ಷಿಸಿತು. ಪಕ್ಷವು ಅವರ ಬೆಂಬಲಕ್ಕೂ ನಿಲ್ಲಲಿಲ್ಲ. ಕೊನೆವರೆಗೂ ಅವರು ಏಕಾಂಗಿಯಾಗಿಯೇ ಉಳಿದರು.ಆನಂತರ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಪರಿಸರ ಮತ್ತು ಅರಣ್ಯ ಖಾತೆ ರಾಜ್ಯ ಸಚಿವರಾಗಿದ್ದ ದಿಲೀಪ್‌ ಸಿಂಗ್‌ ಜುದೇವ್‌ ಅವರು ಐದು ಲಕ್ಷ ರೂಪಾಯಿಗಳ ಲಂಚ ಪಡೆಯುವಾಗ ದಾಖಲೆ ಸಮೇತ ಸಿಕ್ಕಿ ಹಾಕಿಕೊಂಡರು. ಆ ಸಂದರ್ಭದಲ್ಲಿ ಅವರು ಆಡಿದ ಮಾತು ‘ಹಣ ದೇವರಲ್ಲ ಎಂದು ದೇವರಾಣೆ ಮಾಡಿ ಹೇಳುವೆ. ಆದರೆ ಹಣವು ದೇವರಿಗಿಂತ ಕಡಿಮೆ ಮಹತ್ವದ್ದೂ ಅಲ್ಲ’ ಎಂದೂ ಅವರು ಹೇಳಿದ್ದರು. ಕ್ಯಾಮೆರಾ ಎದುರು ಹೀಗೆ ಹೇಳಿಕೆ ನೀಡಿದ್ದ ಇವರನ್ನು ಕ್ಷಮಿಸಲಾಯಿತಷ್ಟೇ ಅಲ್ಲ, ಅವರಿಗೆ ರಾಜಕೀಯ ಪುನರ್ವಸತಿಯನ್ನೂ ಒದಗಿಸಲಾಗಿತ್ತು. ಇಲ್ಲಿ ವ್ಯತ್ಯಾಸ ಏನೆಂದರೆ  ಬಂಗಾರು ಲಕ್ಷ್ಮಣ್ ದಲಿತರಾಗಿದ್ದರೆ, ಜುದೇವ್‌ ಪ್ರಭಾವಿ ರಜಪೂತ ಮನೆತನಕ್ಕೆ ಸೇರಿದವರಾಗಿದ್ದರು.ಜಾತಿಗೆ ಸಂಬಂಧಿಸಿದಂತೆ ಆರ್‌ಎಸ್‌ಎಸ್‌ನ ವಿಚಾರಧಾರೆ ಏನು ಎಂಬುದನ್ನು ನೀವು ಇನ್ನಷ್ಟು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಿದ್ದರೆ, ಆರ್‌ಎಸ್‌ಎಸ್‌ನ ಮಾಜಿ ಮುಖ್ಯಸ್ಥ ಕೆ.ಎಸ್‌.ಸುದರ್ಶನ್‌ ಅವರ ಜತೆ ನಾನು ನಡೆಸಿದ್ದ ‘ವಾಕ್‌ ದ ಟಾಕ್‌’ ಸಂದರ್ಶನವನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸಬಹುದು.ಹಿಂದುಳಿದ ವರ್ಗಗಳ ನಾಯಕಿ ಉಮಾ ಭಾರತಿ ಅವರ ಬಂಡಾಯ ಪ್ರವೃತ್ತಿ ಬಗ್ಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಎದುರಿಸುತ್ತಿರುವ ಸಮಸ್ಯೆಗಳೇನು ಎಂದು ನಾನು ಅವರನ್ನು ಪ್ರಶ್ನಿಸಿದ್ದೆ. ಅದಕ್ಕೆ ಅವರು ನೀಡಿದ್ದ ಉತ್ತರ ಹೀಗಿತ್ತು– ‘ಉಮಾ ಭಾರತಿ ಅವರಲ್ಲಿ ಎರಡು ವ್ಯಕ್ತಿತ್ವಗಳಿವೆ. ಅವರು ಹಿಂದಿನ ಜನ್ಮದಲ್ಲಿ ಯೋಗಿಯಾಗಿ ಹುಟ್ಟಿದ್ದಿರಬೇಕು, ಹೀಗಾಗಿ ಅವರು ಈಗ ಅಸಾಮಾನ್ಯ ಧರ್ಮ ಬೋಧಕಿ, ಉತ್ತಮ ವಾಗ್ಮಿ ಆಗಿದ್ದಾರೆ. ಈ ಜನ್ಮದಲ್ಲಿ ಅವರು ಜನಿಸಿದ ಕುಟುಂಬದಲ್ಲಿ ಸುಸಂಸ್ಕೃತರು ಇದ್ದಿರಲಿಲ್ಲ. ಹೀಗಾಗಿ ಅವರು ಹಟ ಹಿಡಿಯುವ ಮಕ್ಕಳಂತೆ ವರ್ತಿಸುತ್ತಾರೆ. ಈ ಮಾತನ್ನು ಉಮಾ ಅವರಿಗೂ ಹೇಳಿರುವೆ’ ಎಂದೂ  ಸುದರ್ಶನ್‌ ಹೇಳಿದ್ದರು.ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗಳಲ್ಲಿ ಇರುವ ಇಂತಹ ಮೂಲಭೂತ  ವಿರೋಧಾಭಾಸಗಳೇ, ಸಂಸ್ಕೃತಿ ಜತೆ ಜನರನ್ನು ಒಗ್ಗೂಡಿಸುವ ಈ ಎರಡೂ ಸಂಘಟನೆಗಳ ಹಳೆಯ ಕನಸನ್ನು ನನಸಾಗಿಸಲು ಅಡ್ಡಿಯಾಗಿ ಪರಿಣಮಿಸಿವೆ. ಈಗಲೂ ಸಮಾಜದಲ್ಲಿ ಒಡಕು ಮೂಡಿಸಲು ಜಾತಿ ವ್ಯವಸ್ಥೆಯು ನೆರವಾಗುತ್ತಿದೆ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)