ಶನಿವಾರ, ಮೇ 8, 2021
26 °C

ಜೀವ ಕೊಡುವ ಜೀವಕ್ಕೇಕೆ ಈ ಹಿಂಸೆ?

ಆರ್. ಇಂದಿರಾ Updated:

ಅಕ್ಷರ ಗಾತ್ರ : | |

ಹೆಣ್ಣು ಶಿಶುಹತ್ಯೆ ಪ್ರಾಚೀನ ಯುಗದಲ್ಲಿ ಅಸ್ತಿತ್ವದಲ್ಲಿದ್ದ ಅನಾಗರಿಕ ಪದ್ಧತಿ. ಇಪ್ಪತ್ತೊಂದನೇ ಶತಮಾನದಲ್ಲಿ ಅದರ ಪ್ರಸ್ತಾಪ ಮಾಡುವುದು ಕೂಡ ಅಸಂಬದ್ಧ ಎಂದು ವಾದ ಮಾಡುವ ಅನೇಕರು ನಮ್ಮಲ್ಲಿದ್ದಾರೆ. ಆದರೆ ಈ ಭಾವನೆ ಹುಸಿಯಾದುದು ಎನ್ನುವುದಕ್ಕೆ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ತಂದೆಯಿಂದಲೇ ಮಾರಣಾಂತಿಕ ಹಲ್ಲೆಗೆ ಒಳಗಾಗಿ  ಪ್ರಾಣವನ್ನೇ ತೆತ್ತ ಮೂರು ತಿಂಗಳ ಹಸುಗೂಸೇ ಸಾಕ್ಷಿ.ಆ ಎಳೆ ಜೀವವನ್ನು ಬೆಳೆದು ಬಾಳುವ ಮೊದಲೇ ಕತ್ತಲೆಯ ಕೂಪಕ್ಕೆ ತಳ್ಳಿದ ದೈತ್ಯಸ್ವರೂಪಿ ತಂದೆ ಕೊಲೆ ಆರೋಪದ ಮೇಲೆ ಸೆರೆಮನೆ ಸೇರಿರಬಹುದು. ಆದರೆ ಈ ಮಗುವಿನ ಸಾವು ಒಂದು  ಒಂಟಿ ಘಟನೆಯಾಗಿರದೆ ಇಂದಿಗೂ ನಮ್ಮ ಸಮಾಜದಲ್ಲಿ ಜೀವಂತವಾಗಿರುವ ಸ್ತ್ರೀ ವಿರೋಧಿ ಮೌಲ್ಯಾಚರಣೆಗೆ ಹಿಡಿದ ಕನ್ನಡಿಯಂತಿದೆ.ದೇಶದ ಸಂವಿಧಾನದಲ್ಲೇ ಲಿಂಗ ಸಮಾನತೆಯ ತತ್ವ ಅಡಕವಾಗಿರುವಾಗ ಸ್ತ್ರೀ ಶೋಷಣೆ, ಮಹಿಳಾ ಹಕ್ಕುಗಳ ದಮನ, ಅವಕಾಶಗಳ ಅಸಮಾನ ಹಂಚಿಕೆ ಮುಂತಾದ ವಿಷಯಗಳ ಬಗ್ಗೆ ಧ್ವನಿ ಎತ್ತುವುದು ಕೂಡ ಅನವಶ್ಯ ಎನ್ನುವವರು ಒಮ್ಮೆಯಾದರೂ ಭಾರತದಲ್ಲಿ ಇಳಿಮುಖವಾಗುತ್ತಿರುವ ಸ್ತ್ರೀಯರ ಸಂಖ್ಯೆಯತ್ತ ಗಮನಹರಿಸಬೇಕು.

 

ಸ್ವಾತಂತ್ರ್ಯ ಬಂದಾಗಿನಿಂದ ಅತ್ಯಂತ ಕಡಿಮೆ ಮಟ್ಟವನ್ನು ಮುಟ್ಟಿರುವ ಶಿಶು (1 ರಿಂದ 6ರ ವಯೋ ಗುಂಪಿನಲ್ಲಿರುವ ಮಕ್ಕಳು) ಲಿಂಗ ಅನುಪಾತವೇ ಇದಕ್ಕೆ ಸಾಕ್ಷಿ. ಈ ಹೊತ್ತು ದೇಶದಲ್ಲಿ ಪ್ರತಿ 1000 ಗಂಡು ಮಕ್ಕಳಿಗೆ, ಕೇವಲ 914 ಹೆಣ್ಣು ಮಕ್ಕಳಿರುವುದು ಸಂವಿಧಾನದತ್ತ ಬದುಕುವ ಹಕ್ಕನ್ನು ಕೂಡ ಅನುಭವಿಸಲಾಗದ ಸ್ಥಿತಿಯಲ್ಲಿ ಕೋಟ್ಯಂತರ ಹೆಣ್ಣು ಜೀವಗಳಿವೆ ಎಂಬ ಕಟು ಸತ್ಯವನ್ನು ನಮ್ಮ ಮುಂದಿಟ್ಟಿದೆ.ಭಾರತವನ್ನು ಇಡೀ ಜಗತ್ತಿನಲ್ಲಿ ಸ್ತ್ರೀ ಜನಸಂಖ್ಯೆಯ ಸುರಕ್ಷತೆಯ ದೃಷ್ಟಿಯಿಂದ ನಾಲ್ಕನೆ ಅತ್ಯಂತ ಅಪಾಯಕಾರಿ ದೇಶ ಎಂದು ಕಳೆದ ವರ್ಷದಲ್ಲಿ ಬಿಡುಗಡೆಯಾದ ವರದಿಯೊಂದು ಗುರುತಿಸಿತ್ತು.

 

ಒಂದೆಡೆ, ಹೆಚ್ಚುತ್ತಿರುವ ಮಹಿಳಾ ಪರ ಕಾನೂನುಗಳು ಹಾಗೂ ಕ್ರಮಗಳು, ಮತ್ತೊಂದೆಡೆ ಏರುತ್ತಿರುವ ಸ್ತ್ರೀ ವಿರೋಧಿ ದೌರ್ಜನ್ಯಗಳು - ಇದು ಸಮಕಾಲೀನ ಭಾರತೀಯ ಸಮಾಜದಲ್ಲಿ ಕಂಡು ಬರುತ್ತಿರುವ ವೈರುಧ್ಯ. ಹೆಣ್ಣು ಮಗು ಹುಟ್ಟುವ ಮೊದಲೇ ಪ್ರಾರಂಭವಾಗುವ ಈ ದೌರ್ಜನ್ಯ, ಮುಂದೆ ವಿವಿಧ ಹಂತಗಳಲ್ಲಿ ಬೇರೆ ಬೇರೆ ಸ್ವರೂಪಗಳಲ್ಲಿ ವ್ಯಕ್ತವಾಗುತ್ತಾ ಹೋಗುತ್ತದೆ.ನಮ್ಮ ಸಮಾಜದಲ್ಲಿ ಇಂದಿಗೂ ಜ್ವಲಂತವಾಗಿರುವ ಗಂಡು ಮಗುವಿನ ವ್ಯಾಮೋಹ ಹಾಗೂ ಪೋಷಕರ ಧನದಾಹ, ವರ್ಷದಿಂದ ವರ್ಷಕ್ಕೆ ಹೆಣ್ಣು ಶಿಶುಗಳ ಸಂಖ್ಯೆ ಇಳಿಮುಖವಾಗುತ್ತಿರುವುದಕ್ಕೆ ಅತ್ಯಂತ ಮುಖ್ಯ ಕಾರಣಗಳು. ಹೆಚ್ಚಿನ ಸಂಖ್ಯೆಯ ಪೋಷಕರು ತಮಗೆ ಬೇಡದ ಹೆಣ್ಣು ಮಗುವನ್ನು ಭ್ರೂಣಾವಸ್ಥೆಯಲ್ಲಿಯೇ ಹೊಸಕಿ ಹಾಕಲು ತಂತ್ರಜ್ಞಾನದ ಮೊರೆ ಹೋಗುತ್ತಾರೆ. ಆದರೆ ಹುಟ್ಟಿದ ಹೆಣ್ಣು ಶಿಶುವನ್ನು ದೈಹಿಕವಾಗಿ ಹಿಂಸಿಸಿ ಅದನ್ನು ಸಾಯಿಸುವ ಕ್ರೂರ ಪ್ರವೃತ್ತಿ - ಪದ್ಧತಿಗಳು ಇಂದಿಗೂ ಜೀವಂತವಾಗಿವೆ ಎನ್ನುವುದಕ್ಕೆ  ಬೆಂಗಳೂರು ಘಟನೆ ಸಾಕ್ಷಿ.ಒಂದೆಡೆ ಪುರುಷ ಪ್ರಾಬಲ್ಯ, ಮತ್ತೊಂದೆಡೆ ದೌರ್ಜನ್ಯವನ್ನು ಪ್ರಶ್ನಿಸಿ - ಪ್ರತಿಭಟಿಸಲಾರದ ಹೆಣ್ಣಿನ ಅಸಹಾಯಕತೆ, ಇವೆರೆಡರ ಸಮ್ಮಿಶ್ರಣವೇ ಹೆಣ್ಣು ಮಕ್ಕಳಿಗೆ ಮುಳುವಾಗಿರುವಂಥ ಪರಿಸ್ಥಿತಿ ಸೃಷ್ಟಿಯಾಗಲು ಮೂಲ ಕಾರಣ. ದುಡ್ಡಿರುವವರಿಗೆ ಭ್ರೂಣಹತ್ಯೆ - ಬಡವರಿಗೆ ಶಿಶುಹತ್ಯೆ ಎನ್ನುವುದು ಹೆಣ್ಣನ್ನು ಕುರಿತ ನಕಾರಾತ್ಮಕ ಧೋರಣೆಗಳಿಗೆ ಯಾವ ವರ್ಗವೂ ಹೊರತಾಗಿಲ್ಲ ಎನ್ನುವುದಕ್ಕೆ ನಿದರ್ಶನ.ಹೆಣ್ಣು ಶಿಶುಗಳ ಮೇಲಿನ ಕ್ರೌರ್ಯದ ಅತ್ಯಂತ ಕರಾಳ ಮುಖದ ದರ್ಶನ ನಮಗಾಗುವುದು ರಾಜಸ್ತಾನ ರಾಜ್ಯದಲ್ಲಿ. ಕೆಲ ವರದಿಗಳ ಪ್ರಕಾರ ಆ ರಾಜ್ಯದಲ್ಲಿ ಪ್ರತಿ ದಿನವೂ 2500 ಶಿಶುಹತ್ಯೆ ಅಥವಾ ಭ್ರೂಣಹತ್ಯೆಗಳು ನಡೆಯುತ್ತಿವೆ. ಸರ್ಕಾರ ಮತ್ತು ಸಮಾಜ ಈ ಘಟನೆಗಳಿಗೆ ಮೌನ ಸಾಕ್ಷಿಯಾಗಿವೆ.

 

`ಜನನಿ ಸುರಕ್ಷಾ~ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ನೀಡುವ ಧನ ಸಹಾಯವನ್ನು ಪಡೆದು ನವಜಾತ ಹೆಣ್ಣು ಶಿಶುಗಳನ್ನು ಸರ್ಕಾರಿ ಆಸ್ಪತ್ರೆಗಳಲೇ ಬಿಟ್ಟು ಹೋಗುವ ತಾಯಂದಿರ ಸಂಖ್ಯೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದು ರಾಜಸ್ತಾನದ ಜೈಸಲ್ಮಾರ್ ಜಿಲ್ಲೆಯಲ್ಲಿ.ಹೆಣ್ಣು ಒಂಟೆ ಜನಿಸಿದರೆ ಸಿಹಿ ಹಂಚಿ ಸಂಭ್ರಮಿಸುವ ಜೈಸಲ್ಮಾರ್ ಜಿಲ್ಲೆಯ ಅನೇಕ ಭಾಗಗಳಲ್ಲಿ, ಹೆಣ್ಣು ಮಕ್ಕಳು  ಹುಟ್ಟಿದಾಕ್ಷಣ ಕಲ್ಲು ಚಪ್ಪಡಿಗಳ ಅಡಿಯಲ್ಲಿ ನೂಕಿ ಸಾಯಿಸಲಾಗುತ್ತದೆ ಎಂಬುದು ವಿಪರ್ಯಾಸ!

 

ಕತ್ತು ಹಿಸುಕುವುದು, ವಿಷಪೂರಿತ ಕಾಳುಗಳನ್ನು ಶಿಶುವಿನ ಗಂಟಲಲ್ಲಿ ತುರುಕುವುದು, ಕಲ್ಲಿನ ಮೇಲೆ ಜಜ್ಜುವುದು, ಹೀಗೆ ಹಿಂಸಾ ಮಾರ್ಗಗಳನ್ನು ಅನುಸರಿಸಿ ಹೆಣ್ಣು ಶಿಶುಗಳನ್ನು ಹತ್ಯೆ ಮಾಡುತ್ತಾರೆ. ಈ ಜಿಲ್ಲೆಯ ಕೆಲ ಗ್ರಾಮಗಳಲ್ಲಿ 25,000 ಗಂಡುಮಕ್ಕಳಿಗೆ 25 ರಷ್ಟು ಸಂಖ್ಯೆಯ ಹೆಣ್ಣು ಮಕ್ಕಳೂ ಇಲ್ಲದಿರುವಂತಹ ಪರಿಸ್ಥಿತಿ ಇದೆ.ಹೆಣ್ಣು ಶಿಶು ಹತ್ಯೆ ಎನ್ನುವುದು ಮೂಲಭೂತವಾಗಿ ಒಂದು ಕೊಲೆ. ಆದಾಗ್ಯೂ ಅದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸದೆ ಶತಮಾನಗಳಿಂದ ಸಹಿಸಿಕೊಂಡು ಬರುತ್ತಿರುವ ಈ ಸಮಾಜದ ಲಿಂಗ ಅಸೂಕ್ಷ್ಮ ನಡವಳಿಕೆಗೆ ನಾವು ತಲೆತಗ್ಗಿಸಬೇಕು.

 

ಕುಟುಂಬದ ವಲಯದಲ್ಲಿ ಹೆಣ್ಣಿನ ಮೇಲೆ ನಡೆಯುವ ಹಲ್ಲೆಗಳನ್ನು ಅಪರಾಧದ ಚೌಕಟ್ಟಿನಲ್ಲಿ ತಂದು, ಅದಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಒತ್ತಾಯವನ್ನು ಬಹುಹಿಂದೆಯೇ ಮಹಿಳಾ ಚಳವಳಿ ತಂದಿದ್ದರೂ ಬಹುತೇಕ ಸಂದರ್ಭಗಳಲ್ಲಿ ಇಂತಹ ಪ್ರಕರಣಗಳು ಕಾನೂನು ಕ್ರಮಕ್ಕೆ ಒಳಗಾಗುವುದಿಲ್ಲ. ವಿಶೇಷವಾಗಿ ತಮ್ಮ ಮಕ್ಕಳ ಮೇಲೆ ದೌರ್ಜನ್ಯವೆಸಗುವ ಪೋಷಕರನ್ನು ಕುರಿತಂತೆ ತೀರಾ ಸಡಿಲ ಎನಿಸುವ ನಿಲುವನ್ನು ಸಮಾಜ ತಳೆಯುತ್ತದೆ.ಭ್ರೂಣ ಹತ್ಯೆಯಾಗಲಿ, ಶಿಶು ಹತ್ಯೆಯಾಗಲಿ, ಅದು ಸಂಬಂಧಿಸಿದ ಪೋಷಕರ ನಿರ್ಧಾರಕ್ಕೆ ಬಿಟ್ಟಿದ್ದು ಎನ್ನುವ ನಿಲುವೇ ಅಪಾಯಕಾರಿ. ತನ್ನ ಮಗುವನ್ನು ಕೊಲೆ ಮಾಡಲು ತಂದೆಗಾಗಲಿ, ತಾಯಿಗಾಗಲಿ ಸ್ವಾತಂತ್ರ್ಯವಿದೆಯೇ? ಬೆಂಗಳೂರಿನ ಘಟನೆಯ ವಿಚಾರದಲ್ಲಿ ಪೊಲಿಸರು ಮಗುವಿನ ಅಸಹಜ ಸಾವನ್ನು  ಕೊಲೆ ಎಂದು ತೀರ್ಮಾನಿಸಿ ಕ್ರಮ ಕೈಗೊಳ್ಳ ಹೊರಟಿರುವುದು ಸ್ವಾಗತಾರ್ಹ.ಯಾವುದೇ ಕಾರಣಕ್ಕೆ ಆತನಿಗೆ ಕ್ಷಮಾದಾನ ಮಾಡದೆ ಕಠಿಣ ಶಿಕ್ಷೆ ವಿಧಿಸಿದರೆ ಅದರಿಂದ ಒಂದು ಸ್ಪಷ್ಟ ಸಂದೇಶವಾದರೂ ಹೊರಹೊಮ್ಮೀತು. ಈ ನಿಟ್ಟಿನಲ್ಲಿ ನಮ್ಮ ರಾಜ್ಯ ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಲಿ.ಹೆಣ್ಣು ಶಿಶು ಹತ್ಯೆ ಅಥವಾ ಮರ್ಯಾದಾ ಹತ್ಯೆ ಹೆಸರಿನಲ್ಲಿ ನಡೆಯುವ ಕೊಲೆಗಳು ಅಮಾನವೀಯ. ಅವು ಉತ್ತರ ಭಾರತಕ್ಕೆ ಸೀಮಿತವಾದಂಥವು, ಕರ್ನಾಟಕದಲ್ಲಿ ಅವುಗಳಿಗೆ ಅವಕಾಶವಿಲ್ಲ ಎಂದು ನಾವು ನಂಬಿದ್ದ ಕಾಲವೊಂದಿತ್ತು. ಆದರೆ ಕಳೆದ ಕೆಲ ತಿಂಗಳುಗಳಿಂದ ರಾಜ್ಯದಲ್ಲಿ ಅಲ್ಲಲ್ಲಿ ಸಂಭವಿಸುತ್ತಿರುವ ಪೋಷಕ ಪ್ರೇರಿತ ಹತ್ಯಾ ಪ್ರಕರಣಗಳ ಜಾಡನ್ನು ಹಿಡಿದು ನಡೆದಾಗ, ರಾಜಸ್ತಾನ ಮಧ್ಯಪ್ರದೇಶ, ಉತ್ತರಪ್ರದೇಶ, ಪಂಜಾಬ್ ರಾಜ್ಯಗಳಲ್ಲಿ ತಾಂಡವವಾಡುತ್ತಿರುವ ಜಾತಿ ಮತ್ತು ಊಳಿಗಮಾನ್ಯ ಸಂಸ್ಕೃತಿಗಳ ಹಿಡಿತದಿಂದ ಇಲ್ಲಿನ ಅನೇಕ ವ್ಯಕ್ತಿ, ವ್ಯವಸ್ಥೆಗಳೂ ಹೊರಬಂದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.ಕೌಟಂಬಿಕ ಸಂಬಂಧಗಳನ್ನು ವೈಭವೀಕರಿಸುವ ಭಾರತೀಯ ಸಮಾಜದಲ್ಲಿ ಜನ್ಮ ನೀಡಿದ ತಂದೆ ಅಥವಾ ಒಡಹುಟ್ಟಿದ ಸೋದರ ಹೆಣ್ಣೊಬ್ಬಳ ಸಾವಿಗೆ ಕಾರಣನಾಗುತ್ತಾನೆ ಎಂದರೆ ನಂಬುವುದು ಕಷ್ಟ. ಅಂತರ್‌ಜಾತಿ ವಿವಾಹ ವಿರೋಧಿ ತಂದೆಯಿಂದಲೇ ಹತಳಾದ ಮಂಡ್ಯ ಜಿಲ್ಲೆಯ ಸುವರ್ಣ ಮತ್ತು ತನ್ನ ಸೋದರನಿಂದ ಕೊಲೆಯಾದ ಮೈಸೂರಿನ ಅಧ್ಯಾಪಕಿ ಸ್ಮೃತಿ  ಈ ಇಬ್ಬರು ಮಹಿಳೆಯರ ಸಾವು ಎರಡು ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ.ಮೊದಲನೆಯದಾಗಿ, ತನ್ನ ಭವಿಷ್ಯದ ಬದುಕಿನ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ವಿದ್ಯಾವಂತರೂ ಸೇರಿದಂತೆ ಹೆಣ್ಣುಗಳಿಗೆ ಈಗಲೂ ದೊರೆಯುತ್ತಿಲ್ಲವೇ ಎನ್ನುವುದು. ಎರಡನೆಯ ಪ್ರಶ್ನೆ, ಇಂಥ ಪ್ರಕರಣಗಳು ನಡೆದಾಗ ಕುಟುಂಬದ ಇತರ ಸ್ತ್ರೀಯರು-ಅಂದರೆ ತಾಯಿ,ಅತ್ತಿಗೆ, ಅಕ್ಕ ತಂಗಿಯರು ಮೌನ ವಹಿಸುವುದೇಕೆ? ಕೆಲ ಸಂದರ್ಭಗಳಲ್ಲಂತೂ ಈ ಸ್ತ್ರೀ ಬಂಧುಗಳು ಹತ್ಯೆಯಲ್ಲಿ ಭಾಗಿಗಳಾಗುವುದೂ ಉಂಟು. ಇದೇನು ಬಲತ್ಕಾರವೋ, ಆಯ್ಕೆಯೋ?ಈ ಶತಮಾನವನ್ನು ಮಹಿಳಾ ಸಬಲೀಕರಣದ ಯುಗವೆಂದು ಗುರುತಿಸಲಾಗಿದೆ. ಸಬಲೀಕರಣವೆಂದರೆ ವ್ಯಕ್ತಿ ತನ್ನ ಬದುಕಿಗೆ ಸಂಬಂಧಿಸಿದ ನಿರ್ಧಾರಗಳನ್ನು ಸ್ವತಃ ತಾನೇ ತೆಗೆದುಕೊಳ್ಳುವಂತಹ ಆಯ್ಕೆಯ ಸ್ವಾತಂತ್ರವನ್ನು ಹೊಂದಿರುವ ಸ್ಥಿತಿ. ಆದರೆ ಬಹುತೇಕ ಮಹಿಳೆಯರು ಹಾಗೂ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯವಿಲ್ಲ.

 

ತಾನೇ ಜನ್ಮವಿತ್ತ ಮಗಳನ್ನೇ ಹತ್ಯೆ ಮಾಡಬೇಕಾದ ಅಥವಾ ಗಂಡ ಆ ಮಗುವನ್ನು ಹಿಂಸಿಸುವಾಗ ಪ್ರತಿಭಟಿಸಲಾರದಂಥ ಸ್ಥಿತಿಯಲ್ಲಿರುವ ತಾಯಿ ಮತ್ತು ತಾನು ಆಯ್ಕೆ ಮಾಡಿಕೊಂಡ ಜೀವನ ಸಂಗಾತಿಯೊಡನೆ ವಿವಾಹವಾಗಲು ಸಾಧ್ಯವಾಗದೆ ಆತ್ಮಹತ್ಯೆ ಅಥವಾ ಮಾರ್ಯಾದೆ ಹತ್ಯೆಯ ಹೆಸರಿನಲ್ಲಿ ಬಲಿಪಶುವಾಗುವ ಹೆಣ್ಣುಗಳಿಗೆ ಎಲ್ಲಿದೆ ಸಬಲೀಕರಣ? ಇಂದಿಗೂ ಬಹು ಸಂಖ್ಯೆಯ ಕುಟುಂಬಗಳಲ್ಲಿ ನಾವು ಕಾಣುವ ಲಿಂಗಭೇದ ನೀತಿಯನ್ನು ಆಧರಿಸಿದ ಸಾಮಾಜೀಕರಣ ಹೆಣ್ಣನ್ನು ಹೊಂದಾಣಿಕೆಯ ಬದುಕಿಗೆ ಸಿದ್ಧಪಡಿಸುತ್ತದೆಯೋ ಹೊರತು ಹೋರಾಟದ ಮಾರ್ಗವರಸಿ ಹೋಗಲಲ್ಲ.ಬಹುಕಾಲದಿಂದ, ಹೆಣ್ಣಿನ ಬದುಕನ್ನು  ಪ್ರಶ್ನೆ ಪ್ರತಿಭಟನೆಗಳಿಗಿಂತ ಹಿರಿಯರು, ಅದರಲ್ಲೂ ಪುರುಷರು ಸೂಚಿಸಿದ ಮಾರ್ಗದಲ್ಲೇ ನಡೆಯುವುದೇ ಮುಖ್ಯ ಎಂಬ ಸಿದ್ಧಾಂತದ ಚೌಕಟ್ಟಿನಲ್ಲಿ ರೂಪಿಸಿಕೊಂಡು ಬಂದಿರುವುದರಿಂದ ಸ್ತ್ರೀ-ಪುರುಷರಾದಿಯಾಗಿ ಇದೇ ಮನಃಸ್ಥಿತಿಯನ್ನು ಮೈಗೂಡಿಸಿಕೊಂಡಿವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಹೆಣ್ಣಿನ ಪರಾವಲಂಬಿತನ, ಪುರುಷ ಪ್ರಧಾನ ವ್ಯವಸ್ಥೆಯ ಹೊಡೆತವನ್ನು ಎದುರಿಸಲು ಅವಶ್ಯವಾದ ಬೆಂಬಲದ ಅಭಾವ ಹಾಗೂ ಕುಟುಂಬಕ್ಕೆ ಪರ್ಯಾಯವಾದ ಸಾಂಸ್ಥಿಕ ವ್ಯವಸ್ಥೆಯ ಕೊರತೆ ಅನೇಕ ಸ್ತ್ರೀಯರನ್ನು ದೌರ್ಜನ್ಯವನ್ನು ವಿರೋಧಿಸಲಾಗದಂತಹ ಸ್ಥಿತಿಗೆ ತಳ್ಳಿದೆ.ಹೆಣ್ಣು ಭ್ರೂಣಹತ್ಯೆ ಶಿಶುಹತ್ಯೆ, ವರದಕ್ಷಿಣೆ ಸಾವು ಹಾಗೂ ಕೌಟಂಬಿಕ ಹಿಂಸೆಗಳ ಪ್ರಕರಣಗಳಲ್ಲಿ ಭಾಗಿಗಳಾಗುವ ಹೆಣ್ಣುಗಳು ಸಮಾಜದ ಕಣ್ಣಿಗೆ ಸುಲಭದಲ್ಲಿ ಬೀಳುವುದರಿಂದ ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ವಾದಕ್ಕೆ ವ್ಯಾಪಕ ಪ್ರಚಾರ ದೊರೆಯುತ್ತದೆ. ಆದರೆ ಇಂಥ ಪ್ರಕರಣಗಳಲ್ಲಿ ಪುರುಷರ ಪಾತ್ರವನ್ನು ಕುರಿತಂತೆ ಅಷ್ಟೇ ಬಿರುಸಾದ ಚರ್ಚೆ ಆಗುತ್ತಿಲ್ಲವೇಕೆ? ಎಷ್ಟು ಮಂದಿ ಸ್ತ್ರೀಯರಿಗೆ ಅವರ ಬಗ್ಗೆ ಅಥವಾ ಅವರ ಹೆಣ್ಣು ಮಕ್ಕಳ ದೇಹ, ಮನಸ್ಸು ಹಾಗೂ ಬದುಕುಗಳನ್ನು ಕುರಿತಂತೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವಿದೆ?

 

ಗರ್ಭವನ್ನು  ಭ್ರೂಣ ಪರೀಕ್ಷೆಗೆ ಒದಗಿಸುವ, ಮಗಳನ್ನು ಹತ್ಯೆ ಮಾಡುವ  ಅಥವಾ ಸೊಸೆಯನ್ನು ಹಿಂಸಿಸುವ ಸ್ತ್ರೀಯರ  ವರ್ತನೆ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ.

 

ಆದರೆ ಕುಟುಂಬ ಪ್ರೇರಿತ ಎಲ್ಲ ದೌರ್ಜನ್ಯ ಪ್ರಕರಣಗಳನ್ನೂ ಒಂದು ಸಮಗ್ರವಾದ ದೃಷ್ಟಿಕೋನದಿಂದ ನೋಡಿ, ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ತಕ್ಕ ಶಿಕ್ಷೆ ವಿಧಿಸುವಂತಹ ವಾತಾವರಣ ನಿರ್ಮಾಣವಾಗಬೇಕು.ಈಗ ಕಾನೂನುಗಳು ಸ್ತ್ರೀಪಕ್ಷ ಪಾತಿಯಾಗಿವೆ.

 

ಇನ್ನು ಮುಂದೆ ರಕ್ಷಣೆಯ ಅಗತ್ಯವಿರುವುದು ಪುರುಷರಿಗೆ ಎಂದು ವಾದ ಮಾಡುತ್ತಿರುವ ಜನರು ಇನ್ನಾದರೂ ತಮ್ಮ ಜೀವನದ ವಿವಿಧ ಹಂತಗಳಲ್ಲಿ ಸ್ತ್ರೀಯರು ಎದುರಿಸುತ್ತಿರುವ ಗೋಚರ-ಅಗೋಚರ ದೌರ್ಜನ್ಯಗಳ ಬಗ್ಗೆ ಗಮನ ಹರಿಸುವಂತಾಗಲಿ.

(ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co.in)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.