ಮಂಗಳವಾರ, ಮೇ 11, 2021
25 °C

ಜೇಮ್ಸಬಾಂಡ್ ನಕ್ಕರು, ಮೋಟಾಶ್ರೀ ಅತ್ತರು

ಜಿಎಮ್ಮಾರ್ Updated:

ಅಕ್ಷರ ಗಾತ್ರ : | |

ಜೇಮ್ಸಬಾಂಡ್ ನಕ್ಕರು, ಮೋಟಾಶ್ರೀ ಅತ್ತರು

ಪೆಕರ ವಿಧಾನಸೌಧದ ಬಾಗಿಲ ಬಳಿ ಬರುತ್ತಿದ್ದಂತೆಯೇ ಮಾರ್ಷಲ್‌ಗಳು ಓಡಿಬಂದು ಕೈಗೆ ಹೂಗುಚ್ಛ ಕೊಟ್ಟು, ಮತ್ತೊಂದು ಕೈಗೆ ನೀರಿನ ಬಾಟಲ್ ಕೊಟ್ಟು `ಬನ್ನಿ ಸಾರ್, ಬನ್ನಿ ಸಾರ್' ಹೊಸದಾಗಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ನಿಮಗೆ ಸ್ವಾಗತ ಸಾರ್' ಎಂದರು.`ನಾನು ಅವರಲ್ಲಪ್ಪ, ಗುರುತಿನ ಚೀಟಿ ತೋರಿಸ್ತೀನಿ ತಡೀರಿ' ಎಂದು ಪೆಕರ ಜೇಬಿಗೆ ಕೈ ಹಾಕುತ್ತಿದ್ದಂತೆಯೇ, ಅದೆಲ್ಲಾ ಬ್ಯಾಡಿ ಸಾರ್, ನಿಮ್ಮ ಫೋಟೋ ಪೇಪರ್‌ನಲ್ಲಿ ನೋಡಿದ್ದೀವಿ, ಫಲಿತಾಂಶ ಬಂದ ದಿನ, ಗೆದ್ದ ಅಷ್ಟೂ ಶಾಸಕರ ಫೋಟೋ ಪ್ರಕಟವಾಗಿರುವ ಪೇಪರ್ ಕಟಿಂಗ್ ಇಟ್ಟುಕೊಂಡಿದ್ದೀವಿ ನೋಡಿಸಾರ್, ಎಂದು ಪೆಕರನ ಫೋಟೋ ಇದ್ದ ಕಟಿಂಗನ್ನು ತೋರಿಸಿದರು.ಅದು ಚುನಾವಣೆ ಯಾತ್ರೆ ಸಮಯದಲ್ಲಿ ನಾನು ಬರೆದ ಸಮೀಕ್ಷೆ ಜೊತೆ ಪ್ರಕಟವಾಗಿರೋ ಫೋಟೋ ಕಣಪ್ಪ. ನಾನು ಶಾಸಕನಲ್ಲ.. ಎಂದು ಪೆಕರ ಹೇಳಲಾರಂಭಿಸಿದಂತೆಯೇ ಮಾರ್ಷಲ್‌ಗಳೆಲ್ಲಾ ಅದನ್ನು ಕಿವಿಗೇ ಹಾಕಿಕೊಳ್ಳದೆ, ಸಂಭ್ರಮದಿಂದ ವಿಧಾನಸೌಧದ ಬಾಗಿಲ ಬಳಿ ಬಂದು ಇಳಿಯುತ್ತಿದ್ದ ಮತ್ತಷ್ಟು ಶಾಸಕರನ್ನು ಬರಮಾಡಿಕೊಳ್ಳಲು ದೌಡಾಯಿಸಿದರು.ರಾಹುಕಾಲದಲ್ಲಿ ವಿಧಾನಸೌಧ ಪ್ರವೇಶಿಸಿದರೂ ಒಳ್ಳೆಯದೇ ಆಯಿತು ಎಂದುಕೊಂಡು ಪೆಕರ ಸದನದೊಳಗೆ ಪ್ರವೇಶಿಸುತ್ತಿದ್ದಂತೆಯೇ ಈಶಕುಮಾರ್ ಅವರು ದುಮದುಮಗುಡುತ್ತಾ ಹೊರಬರುತ್ತಿದ್ದರು. ಪೆಕರ ಒಳಪ್ರವೇಶಿಸುತ್ತಿದ್ದಂತೆಯೇ ಸದನದೊಳಗೆ ಗದ್ದಲವೊ ಗದ್ದಲ. ಪ್ರತಿಯೊಬ್ಬರೂ ಕೈಯಲ್ಲಿ ಪತ್ರವೊಂದನ್ನು ಹಿಡಿದುಕೊಂಡು ಅವರವರ ಪಾಡಿಗೆ, ಅವರವರ ಭಾಷೆಯಲ್ಲಿ ಒಂದೇ ಸಮನೆ ಅರಚುತ್ತಿದ್ದರು. ಅವ್ವಾ, ಅಮ್ಮಾ, ಅಯ್ಯಾ, ಭಗವಂತಾ, ಬಸವಣ್ಣಾ ಎಂದೆಲ್ಲಾ ಶಬ್ದಗಳು ರಾಶಿರಾಶಿಯಾಗಿ ಸದನದಲ್ಲಿ ಇಟ್ಟಾಡಿ, ನಿಗದಿಪಡಿಸಿರುವ ಪ್ರಕಾರವೇ ಪ್ರಮಾಣವಚನ ಸ್ವೀಕರಿಸಬೇಕು ಎಂಬ ಹಂಗಾಮಿ ಸಭಾಧ್ಯಕ್ಷರ ಕೂಗು ಅರಣ್ಯರೋದನವಾಗಿತ್ತು. ಶಾಸಕ ಈಶಕುಮಾರ್ ಅವರು ಸಭಾತ್ಯಾಗ ಮಾಡಿದರು, ಬ್ರೇಕಿಂಗ್ ನ್ಯೂಸ್ ಇದೆ ಎಂದು ಯಾರೋ ಹೇಳಿದ್ದರಿಂದ, ಪೆಕರ ಅವರನ್ನು ಮೊಗಸಾಲೆಗೆ ಬಂದು ಭೇಟಿಯಾದ.`ತಾವು ಪ್ರಮಾಣವಚನ ಸ್ವೀಕರಿಸದೇ ಹೊರಬಂದದ್ದು ಏಕೆ?'

`ನಾನು ರಾಹುಕಾಲದಲ್ಲಿ ಏನೂ ಕೆಲಸ ಮಾಡಲ್ಲ. ನಾನು ಸಾಹೇಬರ ಕಾರು ಡ್ರೈವ್ ಮಾಡೋ ಕಾಲಕ್ಕೂ ಹೀಗೇ ಮಾಡ್ತಿದ್ದೆ. ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ನಮ್ಮ ಕಟ್ಟೂರು ಸುಬ್ರಾಯಸ್ವಾಮಿಗಳು ರಾಹುಕಾಲದಲ್ಲಿ ಪ್ರಮಾಣವಚನ ಸ್ವೀಕರಿಸಿ ಕೆಟ್ಟರು. ಅವರ ತರಾನೇ ಜೈಲಿಗೆ ಹೋಗೋಕೆ ನನಗೆ ತಲೆ ಕೆಟ್ಟಿದೆಯೇ?'

ತುಳು, ಕೊಂಕಣಿ, ಲಂಬಾಣಿ, ಇಂಗ್ಲಿಷ್, ಕನ್ನಡ, ಮರಾಠಿ ಹೀಗೆ ಭಾಷಾ ವೈವಿಧ್ಯ ಪ್ರಮಾಣ ವಚನದ ಸಂದರ್ಭದಲ್ಲಿ ನಲಿದಾಡಿದವು. ತಂದೆ, ತಾಯಿ, ಹೆಂಡತಿಯರು, ಅಣ್ಣ ತಮ್ಮ ಹೀಗೆ ಇಷ್ಟಬಂದವರ ಹೆಸರಿನಲ್ಲಿ ಶಾಸಕರು ಪ್ರಮಾಣವಚನ ಸ್ವೀಕರಿಸಿದರು. ಎದುರಿಗೇ ಸಿಕ್ಕ ಶಾಸಕರೊಬ್ಬರನ್ನು ಪೆಕರ ಪ್ರಶ್ನಿಸಿಯೇಬಿಟ್ಟ:“ನೀವು ಯಾರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದಿರಿ?”

“ಮುದಗಪ್ಪ”

`ಅದ್ಯಾರು?'

`ನಮ್ಮ ಮನೆ ನಾಯಿ. ಬಹಳ ನಿಷ್ಠೆ. ನಾನು ಚುನಾವಣೆಗೆ ನಿಲ್ಲಲೋ ಬೇಡವೊ ಎಂದು ಕೇಳಿದೆ ನೋಡ್ರಿ, ತಕ್ಷಣ ಬಾಲ ಅಲ್ಲಾಡಿಸಿ ಪರ್ಮಿಷನ್ ಕೊಟ್ಟುಬಿಡ್ತು. ಆ ಘಳಿಗೆ ಚೆನ್ನಾಗಿತ್ತು. ನಾನು ಗೆದ್ದೇಬಿಟ್ಟೆ. ಅದಕ್ಕೆ ಮುದಗಪ್ಪನ ಹೆಸ್ರಲ್ಲೇ ನಾನು ಪ್ರಮಾಣವಚನ ಸ್ವೀಕಾರ ಮಾಡಿದ್ದೇನೆ'

ಪೆಕರ ಸುಸ್ತಾಗಿ ಮುಂದೆ ಹೋದ.ದೊಡ್ಡಕೆರೂರಿನ ಅಪ್ಪಣ್ಣ, ತಿಪ್ಪಣ್ಣ ಶರಣ ಬಸಣ್ಣ ಅವರನ್ನು ಪತ್ತೆಹಚ್ಚಿದ ಪೆಕರ, ಅವರನ್ನು ಕೇಳಿಯೇ ಬಿಟ್ಟ. ಸ್ವಾಮಿ, ನೀವು ಪ್ರಮಾಣವಚನ ಸ್ವೀಕರಿಸಿದ್ದನ್ನ ನೋಡಿದೆ. ತಾವು ಯಾವ ಭಾಷೆಯಲ್ಲಿ ಪ್ರಮಾಣವಚನ ತಕೊಂಡ್ರಿ ಅಂತ ಗೊತ್ತಾಗಲಿಲ್ಲ. “ಹೂಹಾ ಕಕವರುನಿಂಕೋಂ ದೋಮೇ” ಎಂದು ನೀವು ಹೇಳಿದ್ದು ಕೇಳಲು ಹಿತವಾಗಿತ್ತು ಕರ್ನಾಟಕದಲ್ಲಿ ಎಷ್ಟೊಂದು ಭಾಷೆಗಳಿವೆ ಎನ್ನುವುದು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಚೆನ್ನಾಗಿಯೇ ಗೊತ್ತಾಯ್ತು. ಎಷ್ಟೊಂದು ಭಾಷೆಗಳು ಹಿಂದುಳಿದು ಬಿಟ್ಟಿವೆ ನೋಡಿ. ಇದನ್ನು ಕೇಳಿ ಅಯ್ಯಾ ಅವರಿಗೆ ಖುಷಿಯಾಗಿರುತ್ತೆ. ನಿಮ್ಮ ಭಾಷೆ ಬಗ್ಗೆ ಕನ್ನಡ ಯೂನಿವರ್ಸಿಟಿಯವರು ಅಧ್ಯಯನ ಮಾಡಲೇಬೇಕು'`ನಮ್ಮದು ಯಾವ ಭಾಷೆ ಬಿಡ್ರಿ, ನಾವು ಉತ್ತರ ಕರ್ನಾಟಕದ ಮಂದಿ ಹಿಂದುಳಿದ ಜನಾ ರೀ, ಸೌಕರ್ಯ ಇಲ್ಲ, ಏನೂ ಇಲ್ಲ',

ಅಯ್ಯೋ ನೀವು ಕನ್ನಡದಲ್ಲೇ ಮಾತನಾಡ್ತಾ ಇದೀರಿ,

ಮತ್ತೆ ನೀವು ಹೇಳಿದ `ಹುಹೂ......ಕಕವರುನಿಂಕೋ.....`ಅದು ನಮ್ಮ ಅವ್ವನ ಹೆಸರು. ಹುಣಸೆಹಾಡಿ ಕಲ್ಲವ್ವ ಕಳಕವ್ವ ರುದ್ರಪ್ಪ ನಿಂಗಪ್ಪಯ್ಯ ಕೋಂ ದೊಡ್ಡಮೇಟಿ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದೇರಿ. ಎಂದು ಹೊಸ ಶಾಸಕರು ಉತ್ಸಾಹದಿಂದ ಹೇಳುತ್ತಿರುವಂತೆಯೇ ಪೆಕರ ಅಲ್ಲಿಂದ ಎಸ್ಕೇಪ್.

ಎದುರುಗಡೆ ಇದೇ ಮೊದಲಬಾರಿಗೆ ವಿಧಾನಸೌಧ ಪ್ರವೇಶಿಸಿರುವ ಆಕಾಶ್‌ಪೇಣಿಯವರು ಪೆಕರನಿಗೆ ಎದುರಾದರು.`ನಮಸ್ಕಾರ ಸಾರ್, ಕರ್ನಾಟಕದಲ್ಲಿ ಇದುವರೆಗೆ ಅಪ್ಪ-ಮಕ್ಕಳ ಪಕ್ಷ ಮಾತ್ರ ಇತ್ತು. ನೀವು ಈಗ ಬರೀ ಮಕ್ಕಳ ಪಕ್ಷ ಕಟ್ಟಿದ್ದೀರಿ, ಹೀಗೇ ಮಕ್ಕಳ ಸಂತತಿ ಬೆಳೆಯಬೇಕಲ್ವಾ ಸಾರ್.`ಯಸ್, ನಾನೀಗ ಜೇಮ್ಸ ಬಾಂಡ್. ನನಗೆ ಕಲಾಪದ ನಿಯಮಾವಳಿಗಳ ಪುಸ್ತಕ ಕೊಟ್ಟಿದ್ದಾರೆ. ಅದು ನೈಸ್ ರಸ್ತೆಯಷ್ಟೇ ಉದ್ದವಿದೆ. ನಾನು ಅದನ್ನು ಓದೋ ಅಷ್ಟರಲ್ಲಿ ಟರ್ಮ್ ಮುಗಿದಿರುತ್ತೆ. ಆದರೂ, ವಿಧಾನಸೌಧದ ಸುತ್ತ ನಾಲ್ಕೂ ಕಡೆ ನೈಸ್ ರಸ್ತೆ ವಿಸ್ತರಣೆ ಮಾಡಿ ಟೋಲ್ ಕಲೆಕ್ಟ್ ಮಾಡೋಣ ಅನ್ನುವ ಯೋಜನೆ ಇದೆ. ಜೇಮ್ಸಬಾಂಡ್‌ಗೆ ಕೊಲ್ಲುವ ಅಧಿಕಾರ ಕೊಟ್ಟಿದ್ದಾರೆ, ನನಗೆ ತಿನ್ನುವ ಅಧಿಕಾರ ಕೊಟ್ಟಿದ್ದಾರೆ. ದೊಡ್ಡಗೌಡರಿಗೆ ಇದೆಲ್ಲಾ ಏನು ಗೊತ್ತಿದೆ?' ಎಂದು ಪೇಣಿಯವರು ಇಂಗ್ಲೀಷಿನಲ್ಲಿ ವಿವರಿಸಲಾರಂಭಿಸಿದರು.ಮೊಗಸಾಲೆಯ ಮತ್ತೊಂದು ಮೂಲೆಯಲ್ಲಿ ಶಾಸಕಿ ಮಾಟಮ್ಮ ಅವರು ತೋಡಿರಾಗದಲ್ಲಿ ಬಿಕ್ಕಳಿಸುತ್ತಿದ್ದರು. ನಾನು ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಬೇಕಿತ್ತು. ತಪ್ಪಿಸಿಬಿಟ್ರು, ನಿಜವಾಗ್ಲೂ ನೋಡಿದ್ರೆ ನಾನೇ ರಾಜ್ಯದ ಮೊದಲ ಅಹಿಂದ ಲೇಡಿ, ಹಿಂದುಳಿದ ವರ್ಗದ ಹೆಣ್ಮಕ್ಕಳಿಗೆ ಇದೇನಾ ಪ್ರೋತ್ಸಾಹ? ಊಡಿಗೆರೇಲಿ ಅಭ್ಯರ್ಥಿ ಸೋತ್ರೆ, ನನಗೆ ಬರೆ ಹಾಕೋದು ನ್ಯಾಯಾನಾ?' ಎಂದು ಒಂದೇ ಸಮನೆ ದುಃಖ `ತೋಡಿ'ಕೊಳ್ಳಲಾರಂಭಿಸಿದರು.“ಇದನ್ನೆಲ್ಲಾ ನೀವು ದೆಹಲಿ ಮೇಡಂಗೆ ಹೇಳಬೇಕಿತ್ತು” ಎಂದು ಪೆಕರ ಮಾಟಮ್ಮನವರನ್ನು ಸಮಾಧಾನಪಡಿಸಲು ಯತ್ನಿಸಿದ.

ದೆಹಲಿ ಮೇಡಂ, ನನ್ನ ಪರವಾಗೇ ಇದ್ದಾರೆ, ಕೆಳಮನೆಯವರಿಗೆ ಪ್ರಾಶಸ್ತ್ಯ, ಹೊಸಬರಿಗೆ ಅವಕಾಶ, ಯುವಕರಿಗೆ ಆದ್ಯತೆ ಅಂತ ಮಿಡಲ್  ಮ್ಯಾನ್‌ಗಳು ನನಗೆ ಅರ್ಥವಾಗದ್ದನ್ನೆಲ್ಲಾ ಹೇಳ್ತಿದ್ದಾರೆ. ನೀವೂ ಓಲ್ಡ್, ನಿಮ್ಮ ಹೆಸರೂ ಓಲ್ಡ್ ಆದ್ದರಿಂದ ನಿಮಗೆ ಛಾನ್ಸ್ ಕಡಿಮೆ. ನಿಮ್ಮ ಹೆಸರನ್ನು ಮಾಟಮ್ಮ ಎನ್ನುವ ಬದಲು ಲೇಟೆಸ್ಟಾಗಿ ಮೋಟಾಶ್ರೀ ಎಂದು ಇಟ್ಟುಕೊಂಡಿದ್ದರೆ, ನಿಮಗೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಕೊಡಬಹುದಾಗಿತ್ತು. ಈಗ ಟೂಲೇಟ್ ಎಂದು ಹೇಳ್ತಿದ್ದಾರೆ' ಮಾಟಮ್ಮನವರು ಕಣ್ಣೊರೆಸಿಕೊಂಡರು.ಮುಂದಿನ ಮುಖ್ಯಮಂತ್ರಿ ಎಂದು ಸ್ವಯಂಘೋಷಿತರಾಗಿರುವ ಡೀಕುಶಿ ಮಾರ್ ಅವರು ಇನ್ನೂ ಬಂದಿಲ್ವಲ್ಲ, ಪ್ರಮಾಣ ವಚನ ಸ್ವೀಕರಿಸಿಲ್ವಲ್ಲಾ..ಎಂದು ಪೆಕರ ಪೇಚಾಡಲಾರಂಭಿಸಿದ. ಪರವಾಗಿಲ್ಲಾ ಅವರ ಮನೆಗೇ ಹೋಗಿ ನೋಡೋಣ ಎಂದು ಸಮಾಧಾನಮಾಡಿಕೊಂಡು, ಸದನದಲ್ಲಿ ಏನು ನಡೀತಿದೆ ಎನ್ನುವುದನ್ನು ನೋಡಲು ಮತ್ತೆ ಒಳಗೆ ನುಗ್ಗಿದ. ಮೂವರು ಮಾಜಿ ಮು.ಮ.ಗಳಾದ ರಪ್ಪ, ಮಾರಸ್ವಾಮಿ ಮತ್ತು ಈಶಶೆಟ್ರು ಅಯ್ಯ ಅವರನ್ನು ಅಭಿನಂದಿಸಲು ಅವರ ಸುತ್ತ ನಿಂತು ಕೈ ಹಿಡಿಯಲು ಯತ್ನಿಸುತ್ತಿದ್ದರು. ಆದರೆ ಅಯ್ಯ ಅವರು ಕೂತಲ್ಲೇ ನಿದ್ದೆಗೆ ಜಾರಿದ್ದರು.

-ಜಿಎಮ್ಮಾರ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.