ಮಂಗಳವಾರ, ಮಾರ್ಚ್ 31, 2020
19 °C

ಡಿಜಿಟಲ್‌ ಪಾವತಿಯೂ, ಟ್ರಂಕ್‌ನ ಚಿಲ್ಲರೆಯೂ...

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ಡಿಜಿಟಲ್‌ ಪಾವತಿಯೂ, ಟ್ರಂಕ್‌ನ ಚಿಲ್ಲರೆಯೂ...

ನೋಟು ಚಲಾವಣೆ ರದ್ದತಿ ಕುರಿತ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮುಂದುವರೆದ ಗೊಂದಲವು ನಮಗೆ ಭಾರತ ಸ್ವತಂತ್ರಗೊಂಡ ಕಾಲಘಟ್ಟದ ಆರಂಭಿಕ ದಿನಗಳ ದೃಷ್ಟಾಂತವೊಂದನ್ನು ನೆನಪಿಸುತ್ತದೆ.

ತಮಾಷೆಯ ಸರಕಾದ ಹಾಸ್ಯ ಜೋಡಿ ಸಂತಾ ಮತ್ತು ಬಂತಾ ಜನಪ್ರಿಯಗೊಳ್ಳುವ ಸಾಕಷ್ಟು ಮೊದಲೇ ಬಲ್ದೇವ್‌ ಸಿಂಗ್‌ ಹೆಸರಿನ ವ್ಯಕ್ತಿಯೊಬ್ಬರು ಹಾಸ್ಯಕ್ಕೆ ಸರಕಾಗಿದ್ದರು.ನಮ್ಮ ದಿವಂಗತ ಮಾಜಿ ರಾಷ್ಟ್ರಪತಿ ಜೇಲ್‌ಸಿಂಗ್‌ ಅವರು ತಮ್ಮ ಹೆಸರಿನ ಹಿಂದೆ ‘ಗ್ಯಾನಿ’ ಉಪನಾಮ ಬಳಸುತ್ತಿದ್ದಂತೆ, ಈ ಬಲ್ದೇವ್‌ ಸಿಂಗ್‌ ಅವರೂ ತಮ್ಮ ಹೆಸರಿನ ಹಿಂದೆ ‘ಸರ್ದಾರ್’ ಉಪನಾಮವನ್ನು ಕಡ್ಡಾಯವಾಗಿ ಬಳಸಿಕೊಳ್ಳುತ್ತಿದ್ದರು.

ನ್ಯಾಯಾಂಗದ ನಿಬಂಧನೆಗಳಿಗೆ ಒಳಪಟ್ಟಿರುವ ಸದ್ಯದ ಹಾಸ್ಯರಹಿತ ಕಾಲದಲ್ಲಿ ಬಲ್ದೇವ್‌ ಸಿಂಗ್‌ ಅವರಿಗೆ ಸಂಬಂಧಿಸಿದ ಕೆಲ ಪ್ರಸಂಗಗಳನ್ನು ಕಳವಳದಿಂದಲೇ ಇಲ್ಲಿ ಹಂಚಿಕೊಳ್ಳಬೇಕಾಗುತ್ತದೆ. ಅರವತ್ತರ ದಶಕದ ಸಂತಾ ಬಂತಾರಾಗಿದ್ದ ಸರ್ದಾರ್‌ ಬಲ್ದೇವ್‌ ಸಿಂಗ್‌ ಮತ್ತು ಜವಾಹರಲಾಲ್‌ ನೆಹರೂ ಅವರಿಗೆ ಸಂಬಂಧಿಸಿದ ಕಟ್ಟುಕತೆಗಳಿಂದ ಯಾವತ್ತೂ ಪಲಾಯನ ಮಾಡದ ಖುಷ್ವಂತ್‌ ಸಿಂಗ್‌ ಅವರ ಕತೆ ಹೇಳುವ ಲೈಸೆನ್ಸೂ ನನಗೆ ಇಲ್ಲ.

ಸ್ವಾತಂತ್ರ್ಯ ಹೋರಾಟಗಾರರೂ ಮತ್ತು ದೇಶದ ಮೊದಲ ರಕ್ಷಣಾ ಸಚಿವರೂ ಆಗಿದ್ದ ಬಲ್ದೇವ್‌ ಸಿಂಗ್‌ (1902–61) ಅವರು ದೇಶ ವಿಭಜನೆಯ ಬಿಕ್ಕಟ್ಟಿನ ಸಂದರ್ಭದಲ್ಲಿ  ನಡೆದ ಹಿಂಸಾಚಾರ, ವಲಸೆ, ಕಾಶ್ಮೀರದಲ್ಲಿನ ಯುದ್ಧಗ್ರಸ್ಥ ಪರಿಸ್ಥಿತಿ ಮುಂತಾದ ಹೊತ್ತಿ ಉರಿಯುತ್ತಿದ್ದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಜಾಣ್ಮೆ ಮೆರೆದಿದ್ದರು.

ಆದರೂ, ಖುಷ್ವಂತ್‌ ಸಿಂಗ್ ಅವರು, ಬಲ್ದೇವ್‌ ಸಿಂಗ್‌ ಅವರಿಗೆ ಸಂಬಂಧಿಸಿದಂತೆ ಈ ಪ್ರಸಂಗವನ್ನು ತಮ್ಮ ಸಹಜ ತುಂಟತನದೊಂದಿಗೆ ಹಂಚಿಕೊಂಡಿದ್ದರು. ರಕ್ಷಣಾ ಸಚಿವರಾಗುತ್ತಿದ್ದಂತೆ ಸರ್ದಾರ್‌ ಬಲ್ದೇವ್‌ ಸಿಂಗ್‌ ಅವರಿಗೆ ಕಿಂಚಿತ್ತೂ ಪುರುಸೊತ್ತು ಸಿಕ್ಕಿರಲಿಲ್ಲ.  ಅನೇಕ ತಿಂಗಳ ನಂತರವೇ ಕೊಂಚ ಬಿಡುವು ಮಾಡಿಕೊಂಡು ತಮ್ಮ ತಾಯಿಯ ಆಶೀರ್ವಾದ ಪಡೆಯಲು ರೋಪರ್‌ಗೆ (ಸದ್ಯದ ರೂಪ್‌ನಗರ್‌) ಭೇಟಿ ನೀಡಿದ್ದರು.

‘ಬ್ರಿಟಿಷರು ದೇಶಬಿಟ್ಟು ತೆರಳಿದ ನಂತರ ನಾಣ್ಯಗಳ ತೀವ್ರ ಕೊರತೆ ಉದ್ಭವಿಸಿದೆ. ಪ್ರತಿಯೊಬ್ಬರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಚಿವನಾಗಿರುವ ನನ್ನ ಮಗನಿಂದ ಇದಕ್ಕೇನಾದರೂ ಪರಿಹಾರ ಸಿಗುವುದೇ’ ಎಂದು ತಾಯಿ ಮಗನನ್ನು ಮೂದಲಿಸುತ್ತಾಳೆ.

ರಕ್ಷಣಾ ಸಚಿವರು ದೆಹಲಿಗೆ ಮರಳಿ ಬಂದ ನಂತರ, ಚಿಲ್ಲರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಮ್ಮಷ್ಟಕ್ಕೆ ತಾವೇ ನಿರ್ದಿಷ್ಟ ಗುರಿಯೊಂದನ್ನು ಹಾಕಿಕೊಳ್ಳುತ್ತಾರೆ. ಅವರು ತಮ್ಮ ಸಂಬಳ ಮತ್ತು ಇತರ ಭತ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನಾಣ್ಯಗಳ ರೂಪದಲ್ಲಿ ಸಂಗ್ರಹಿಸಲು ಅಣಿಯಾಗುತ್ತಾರೆ. ಒಂದೆರಡು ಟ್ರಂಕ್‌ಗಳಷ್ಟು ಚಿಲ್ಲರೆ ನಾಣ್ಯ ಭರ್ತಿಯಾದ ನಂತರ ಅವರು ಅವುಗಳನ್ನು ಮನಿ ಆರ್ಡರ್‌ ಮೂಲಕ ಹೆಮ್ಮೆಯಿಂದ  ತಾಯಿಗೆ ಕಳಿಸಿಕೊಡುತ್ತಾರೆ. ಇದು ಖುಷ್ವಂತ್‌ ಸಿಂಗ್ ನಮ್ಮೊಂದಿಗೆ ಹಂಚಿಕೊಂಡ ತಮಾಷೆಯ ಪ್ರಸಂಗ.

ಇಂತಹ ಕೀಟಲೆ  ಸ್ವಭಾವದ ಖುಷ್ವಂತ್‌ ಸಿಂಗ್‌ ಅವರು ಈಗ ನಮ್ಮೊಂದಿಗೆ ಇಲ್ಲ. ಅಥವಾ ಅವರು ದೇಶದ ಮೊದಲ ರಕ್ಷಣಾ ಸಚಿವರು ಚಿಲ್ಲರೆ ಸಮಸ್ಯೆಯನ್ನು ನಿರ್ವಹಿಸಿದ ಪರಿಯನ್ನು, ಸದ್ಯಕ್ಕೆ ಕಪ್ಪುಹಣ ವಿರುದ್ಧದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಹೋರಾಟಕ್ಕೆ ತಮಾಷೆಯಾಗಿ ಹೋಲಿಕೆ ಮಾಡುವುದನ್ನು  ಕೇಳುವ ಅವಕಾಶವೂ ನಮಗಿಲ್ಲ.  ಈಗ ರದ್ದಾದ ನೋಟುಗಳೆಲ್ಲ ಸರ್ದಾರ್‌ ಬಲ್ದೇವ್‌ ಸಿಂಗ್‌ ಅವರು ಟ್ರಂಕ್‌ಗಳಲ್ಲಿ ಚಿಲ್ಲರೆ ನಾಣ್ಯ ಸಂಗ್ರಹಿಸಿ ಇಟ್ಟಿದ್ದಂತಾಗಿದೆ.

ಸಾರ್ವಭೌಮ ದೇಶದ ಶೇ 86ರಷ್ಟು  ಕರೆನ್ಸಿಗಳನ್ನು ರದ್ದುಪಡಿಸಿರುವ ನಿರ್ಧಾರವನ್ನು  ಈ ಹಿಂದೆ ವಿಶ್ವದ ಯಾವುದೇ ಪ್ರಜಾಪ್ರಭುತ್ವ ಸರ್ಕಾರ ಕೈಗೊಂಡ ನಿದರ್ಶನವೇ ಇತಿಹಾಸದಲ್ಲಿ ಇಲ್ಲ. ಜನರನ್ನು ಡಿಜಿಟಲ್ ಪಾವತಿ ವ್ಯವಸ್ಥೆಗೆ ದೂಡುವುದು, ರಕ್ಷಣಾ ಸಚಿವರು ತಮ್ಮ ತಾಯಿಗೆ ಟ್ರಂಕ್‌ ಭರ್ತಿ ಚಿಲ್ಲರೆ ನಾಣ್ಯಗಳನ್ನು ಮನಿ ಆರ್ಡರ್‌ ಮೂಲಕ ರವಾನೆ ಮಾಡಿದಂತೆ ತಮಾಷೆಯ ವಿಷಯವಲ್ಲ.

ನೋಟುಗಳ ರದ್ದತಿ ನಿರ್ಧಾರವು ಈಗ ಸಂಪೂರ್ಣವಾಗಿ ತಪ್ಪು ಹಾದಿಯಲ್ಲಿ ಸಾಗಿದೆ. ಕೆಟ್ಟ ನಿರ್ಧಾರವೊಂದು ಡಿಜಿಟಲ್‌ ನಗದು ಸ್ವರೂಪ ಪಡೆದುಕೊಂಡಿದೆ. ಪ್ರಧಾನಿಯ ಮನವೊಲಿಸಬಲ್ಲ ಸೋಜಿಗದ ಜಾಣ್ಮೆ ಮತ್ತು ಜನಾಭಿಪ್ರಾಯದ ಮೇಲಿನ ಅವರ ಅಧಿಕಾರಯುತ ನಿಯಂತ್ರಣಕ್ಕೆ  ಶ್ಲಾಘನೆ ರೂಪದಲ್ಲಿ ಡಿಜಿಟಲ್‌ ಪಾವತಿ ವಿಷಯವು ಭರ್ಜರಿ ಪ್ರಚಾರ ಪಡೆಯುತ್ತಿದೆ.

ಜನರೆಲ್ಲ ಡಿಜಿಟಲ್‌ ಪಾವತಿಗೆ ಸಾಮೂಹಿಕವಾಗಿ ವರ್ಗಾವಣೆಗೊಳ್ಳುತ್ತಿರುವಾಗಲೇ, ಕೇಂದ್ರ ಹಣಕಾಸು ಸಚಿವರು ಸೇವಾ ತೆರಿಗೆ ಕಡಿತದ ಆಕರ್ಷಕ ಕೊಡುಗೆಯನ್ನೂ ಪ್ರಕಟಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ವಲಯಗಳಾದ ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತು ಪೆಟ್ರೋಲ್‌ ಪಂಪ್‌ಗಳಲ್ಲಿ ಹಣ ಪಾವತಿಗೆ ಭಾರಿ ರಿಯಾಯಿತಿ ಘೋಷಿಸಲಾಗಿದೆ.

ಈ ಎಲ್ಲ ನಿರ್ಧಾರಗಳಿಂದ ಇಲ್ಲಿ ಎರಡು ಮಹತ್ವದ ಪ್ರಶ್ನೆಗಳು ಏಳುತ್ತವೆ. ಡಿಜಿಟಲ್‌ ಪಾವತಿ ಒಳ್ಳೆಯ ನಿರ್ಧಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ಸರ್ಕಾರಕ್ಕೆ ಇದನ್ನು ಜಾರಿಗೆ ತರುವುದೇ ಮುಖ್ಯವಾಗಿದ್ದರೆ, ದೇಶದ ಇಡೀ ಆರ್ಥಿಕತೆಗೆ 1,100 ವೋಲ್ಟೇಜ್‌ನ ನಗದು ರದ್ದು ಆಘಾತ ನೀಡುವ ಅಗತ್ಯ ಇದೆಯೇ? ಎಲ್ಲ ಬಗೆಯ  ಡಿಜಿಟಲ್ ಪಾವತಿಗೆ ಅಲ್ಪ ಪ್ರಮಾಣದ ತೆರಿಗೆ ಕಡಿತದ ಉತ್ತೇಜನ ಮತ್ತು ರಿಯಾಯಿತಿಗಳನ್ನಷ್ಟೇ ನೀಡಿರುವುದು ಸರಿಯೇ?

ದೇಶದ ಪ್ರಜೆಗಳನ್ನು ನೈತಿಕವಾಗಿ ಅಪಾಯಕ್ಕೆ ಗುರಿ ಮಾಡಿರುವುದು ಎರಡನೇ ಪ್ರಶ್ನೆಯಾಗಿದೆ. ಸದ್ಯದ ಸಂದರ್ಭದಲ್ಲಿ ದೇಶದ ಒಟ್ಟು ಜನಸಂಖ್ಯೆಯ ಶೇ 2.5ರಿಂದ ಶೇ 3ರಷ್ಟು ಜನರು ಮಾತ್ರ ಡೆಬಿಟ್ ಅಥವಾ ಕ್ರೆಡಿಟ್‌ ಕಾರ್ಡ್‌ ಬಳಸುತ್ತಿದ್ದಾರೆ.  ಅತ್ಯಲ್ಪ ಪ್ರಮಾಣದ ಜನರು ಇ–ವಾಲೆಟ್‌ ಬಳಸುತ್ತಿದ್ದಾರೆ. 130 ಕೋಟಿ ಜನಸಂಖ್ಯೆಯಲ್ಲಿನ, ಆರ್ಥಿಕವಾಗಿ ಸಶಕ್ತರಾಗಿರುವ ಕೇವಲ 4ರಿಂದ 6 ಕೋಟಿ ಜನರು ಮಾತ್ರ ಡಿಜಿಟಲ್‌ ಪಾವತಿ ಬಳಸುತ್ತಿದ್ದಾರೆ.

ಆರ್ಥಿಕ ಸೇರ್ಪಡೆಯಿಂದ ಹೊರಗೆ ಉಳಿದಿರುವ ಬಹುಸಂಖ್ಯಾತರಿಗೆ ಹೋಲಿಸಿದರೆ ಈಗಾಗಲೇ ಅನೇಕ ಸೌಲಭ್ಯಗಳಿಗೆ ಅರ್ಹರಾಗಿರುವ ತೆರಿಗೆದಾರರಷ್ಟೇ ಪ್ಲಾಸ್ಟಿಕ್‌ ಆರ್ಥಿಕತೆಯ ಇನ್ನಷ್ಟು ಪ್ರಯೋಜನಗಳನ್ನು ಪಡೆಯಲಿದ್ದಾರೆ.

ಮಡಗಾಂವ್ ಹಡಗುಕಟ್ಟೆಯಲ್ಲಿ 3,800 ಟನ್‌ಗಳಷ್ಟು ತೂಕದ ಯುದ್ಧ ನೌಕೆ  ಬುಡಮೇಲಾಗಿ ಬಿದ್ದ ದಿನವೇ ನಮ್ಮ ರಕ್ಷಣಾ ಸಚಿವರು ತಮ್ಮ ಸಚಿವಾಲಯದ ಮುಖ್ಯಸ್ಥರನ್ನು ಉದ್ದೇಶಿಸಿ, ರಕ್ಷಣಾ ಇಲಾಖೆಯಲ್ಲಿ ಡಿಜಿಟಲ್ ಆರ್ಥಿಕತೆಯ ಪ್ರಯೋಜನಗಳ ಬಗ್ಗೆ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.

ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್‌ ಅವರು ಇತ್ತೀಚೆಗೆ ತೆಲಂಗಾಣದ ಪ್ರವಾಸದಲ್ಲಿ ಇದ್ದಾಗ ತಮಗೆದುರಾದ ಅನುಭವವನ್ನು ತುಂಬ ಸಂಭ್ರಮದಿಂದ ಹಂಚಿಕೊಂಡಿರುವುದೂ ನನಗೆ ಬಹುಕಾಲ ನೆನಪಿನಲ್ಲಿ ಉಳಿಯಲಿದೆ.

ಟೈರ್‌ ಪಂಕ್ಚರ್ ದುರಸ್ತಿ ಮಾಡುವ ಗಂಗಯ್ಯ ತನ್ನ ಸೇವೆಗೆ ಪಡೆಯುವ ಹಣಕ್ಕೆ ಪೇಟಿಎಂ ಬಳಸುತ್ತಿರುವುದನ್ನು ಅವರು ತುಂಬ ಉತ್ಸಾಹದಿಂದ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ತೆಲಂಗಾಣದವರೇ ಆದ ಅವರ ಸಂಪುಟದ ಸದಸ್ಯರೊಬ್ಬರು ಈ ಘಟನೆ ಬಗ್ಗೆ ಟ್ವಿಟರ್‌ನಲ್ಲಿಯೂ ಸಂಭ್ರಮಿಸಿದ್ದರು.

ಕನಿಷ್ಠ ಎರಡು ತ್ರೈಮಾಸಿಕಗಳ ಆರ್ಥಿಕ ವೃದ್ಧಿ ದರದ ಮೇಲೆ ಗಂಭೀರ ಸ್ವರೂಪದ ಪ್ರತಿಕೂಲ ಪರಿಣಾಮ ಬೀರುವ, ಕೋಟ್ಯಂತರ ಜನರಿಗೆ ಸಂಕಷ್ಟ ತಂದೊಡ್ಡಿರುವ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನಂತಹ ಸ್ವಾಯತ್ತ ಸಂಸ್ಥೆಗಳ ಪ್ರತಿಷ್ಠೆ ಹಾಳು ಮಾಡಿರುವ ಈ ನೋಟು ರದ್ದತಿ ಚಿಂತನೆಯು ವರ್ಷಗಳ ಹಿಂದೆಯೇ ಬಾರ್ಬಿ ಬೊಂಬೆಗೆ (ಗರ್ಲ್‌) ಸಂಬಂಧಿಸಿದ ಕವನದಲ್ಲಿ ಹೇಳಿರುವ ಮತ್ತು ಹೆಚ್ಚು ಗಮನ ಸೆಳೆಯದ ಮಾತು ಈಗ ಬಡ ಭಾರತೀಯರಿಗೆ  ಮನದಟ್ಟು ಆಗಿರುವಂತೆ ಕಾಣುತ್ತಿದೆ.

‘ಪ್ಲಾಸ್ಟಿಕ್‌ನಲ್ಲಿನ ಬದುಕು ಅದ್ಭತವಾಗಿರುತ್ತದೆ. ಬಾರ್ಬಿ ಜಗತ್ತಿನಲ್ಲಷ್ಟೇ ಅಲ್ಲ, ವಾಸ್ತವ  ಜಗತ್ತಿನಲ್ಲಿಯೂ ಸುಂದರವಾಗಿರುತ್ತದೆ’ ಎಂದು ಆ ಕವನದಲ್ಲಿ ಬಾರ್ಬಿ ಬೊಂಬೆಯ ಬದುಕಿಗೆ ಕನ್ನಡಿ ಹಿಡಿಯಲಾಗಿತ್ತು. ತಿಂಗಳ ಹಿಂದೆ ಪ್ರಧಾನಿ ಮೋದಿ ಅವರು ಈ ದಿಟ್ಟ ನಿರ್ಧಾರ ಪ್ರಕಟಿಸಿದಾಗ ನಾವೆಲ್ಲ ತುಂಬ ಸಂಭ್ರಮಪಟ್ಟಿದ್ದೆವು. ಈ ನಿರ್ಧಾರಕ್ಕೆ ಬರುವ ಮುನ್ನ ನರೇಂದ್ರ ಮೋದಿ ಅವರು ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಕಪ್ಪುಹಣದ ಬಗ್ಗೆ ಎಲ್ಲ ವಿವರ ಸಂಗ್ರಹಿಸಿದ್ದಾರೆ. ಅಗತ್ಯ ಪ್ರಮಾಣದಲ್ಲಿ ಹೊಸ ನೋಟುಗಳನ್ನು ಮುದ್ರಿಸಿದ್ದಾರೆ ಮತ್ತು ಪರಿಣಾಮಗಳನ್ನೆಲ್ಲ ಎದುರಿಸಲು ಯುದ್ಧೋಪಾದಿ ಸಿದ್ಧತೆಗಳನ್ನೆಲ್ಲ ಮಾಡಿಕೊಂಡಿದ್ದಾರೆ ಎಂದೇ ನಾವೆಲ್ಲ ಭಾವಿಸಿದ್ದೆವು.

ಆ ಎಲ್ಲ ಗೊಂದಲ– ಗೋಜಲು ಸಮಯದಲ್ಲಿ, ಬೇಹುಗಾರಿಕೆ ಸಂಸ್ಥೆಗಳು ಮತ್ತು ಹಣಕಾಸು ಪರಿಣತರು ಚಲಾವಣೆಯಲ್ಲಿದ್ದ ನೋಟುಗಳಲ್ಲಿನ ನಕಲಿ ನೋಟುಗಳ ಪ್ರಮಾಣವನ್ನು ಕರಾರುವಾಕ್ಕಾಗಿ ಲೆಕ್ಕ ಹಾಕಿದ್ದಾರೆ ಎಂದೂ ಊಹಿಸಲಾಗಿತ್ತು. ಕಪ್ಪುಹಣ ಮಟ್ಟಹಾಕುವ ನಿರ್ದಿಷ್ಟ ಉದ್ದೇಶದಿಂದಲೇ ಈ ಕ್ರಮ (ಸರ್ಜಿಕಲ್‌) ಕೈಗೊಳ್ಳಲಾಗಿದೆ ಎಂದೇ ಎಲ್ಲರೂ ಎಣಿಸಿದ್ದರು. ಬಹುಶಃ ಇಲ್ಲಿಯೇ ಅನೇಕರು ತಪ್ಪು ಮಾಡಿದ್ದರು. ಅವರೆಲ್ಲರ ಲೆಕ್ಕಾಚಾರಗಳೆಲ್ಲ ಈಗ ಬುಡಮೇಲು ಆಗಿವೆ. ನಮ್ಮ ಎಣಿಕೆ ತಪ್ಪಾಗಿತ್ತು ಎನ್ನುವುದು ನಾನೂ ಸೇರಿದಂತೆ ಅನೇಕರಿಗೆ ಮನದಟ್ಟಾಗುತ್ತಿದೆ.

ಸರ್ಕಾರವು ಈ ನಿರ್ಧಾರವನ್ನು ಗೋಪ್ಯವಾಗಿಟ್ಟುಕೊಳ್ಳುವಲ್ಲಿ ಸಫಲವಾಗಿತ್ತು. ಒಂದರ್ಥದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರವೇ ಕತ್ತಲಲ್ಲಿ ಇತ್ತು ಎಂದರೆ ಅತಿಶಯೋಕ್ತಿ ಏನಲ್ಲ. ಸಚಿವ ಸಂಪುಟದಲ್ಲಿ ಚರ್ಚಿಸದ ಅಥವಾ ಸಂಪುಟದ ಉನ್ನತ ಮಟ್ಟದ ಸಮಿತಿಗಳಾದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)  ಅಥವಾ ರಾಜಕೀಯ ವ್ಯವಹಾರಗಳ ಸಮಿತಿಗೂ (ಸಿಸಿಪಿಎ) ಮಾಹಿತಿ ಇರಲಿಲ್ಲ.

  ಪ್ರಧಾನಿ ತಮ್ಮ ಈ ಮಹತ್ವದ ನಿರ್ಧಾರವನ್ನು ಘೋಷಿಸಿದ ನಂತರವೇ ಸಚಿವ ಸಂಪುಟಕ್ಕೆ ಮಾಹಿತಿ ನೀಡಿರುವುದನ್ನು ನೋಡಿದರೆ, ಕಪ್ಪುಹಣದ ವಂಚಕರ ವಿರುದ್ಧ ಸರ್ಕಾರ ಹಠಾತ್ತನೆ ದಾಳಿ ನಡೆಸಿರುವುದಷ್ಟೇ ಅಲ್ಲ, ದುರದೃಷ್ಟವಶಾತ್‌ ಪ್ರಧಾನಿ ತಮ್ಮ ಮೇಲೆಯೇ ನಡೆಸಿಕೊಂಡ ದಾಳಿಯೂ ಅದಾಗಿತ್ತು. ನೋಟು ರದ್ದತಿ ನಿರ್ಧಾರವನ್ನು ಸಂಪುಟದ ಸದಸ್ಯರ ಜತೆ ಹಂಚಿಕೊಂಡಿದ್ದರೆ ಮಾಹಿತಿ ಸೋರಿಕೆಯಾಗುತ್ತಿತ್ತು ಎನ್ನುವುದು ಠಕ್ಕಿನ ಮಾತಾಗುತ್ತದೆ.

ಹಾಗಿದ್ದರೆ, ಸಂಪುಟ ಸಚಿವರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನವನ್ನೇಕೆ ಬೋಧಿಸಲಾಗುತ್ತದೆ. ಸಚಿವ ಸಂಪುಟ ವ್ಯವಸ್ಥೆ ಮತ್ತು ಸಾಮೂಹಿಕ ಹೊಣೆಗಾರಿಕೆಯ ವ್ಯವಸ್ಥೆಯಾದರೂ ಏಕೆ ಇರಬೇಕು. ಪ್ರಧಾನಿಗೆ ತಮ್ಮ ಸಹೋದ್ಯೋಗಿಗಳ ಪೈಕಿ ಕನಿಷ್ಠ 10 ಮಂದಿ ಅಥವಾ ನಾಲ್ಕು ಜನರನ್ನಾದರೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲವೆ? ಹಾಗಿದ್ದರೆ ಕಪ್ಪುಹಣದ ವಿರುದ್ಧ ಯುದ್ಧ ಘೋಷಿಸಲು ಪ್ರಧಾನಿ ಮೋದಿ ಅವರು ಯಾರನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡಿದ್ದರು? ಈ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

ನ್ಯಾಯಯುತವಾಗಿ ಹೇಳುವುದಾದರೆ, ಪ್ರಧಾನಿ ಕೈಗೊಂಡ ದಿಟ್ಟ ನಿರ್ಧಾರಕ್ಕೆ ದೇಶದಾದ್ಯಂತ ಈಗಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಕೆಳ ಹಂತದ ಮಧ್ಯಮ ವರ್ಗದವರು ಮತ್ತು ಬಡವರು ಅಥವಾ ವಿಶೇಷವಾಗಿ ಹೇಳುವುದಾದರೆ, ಬ್ಯಾಂಕ್‌ ಮತ್ತು ಎಟಿಎಂಗಳ ಮುಂದೆ ಸರತಿ ಸಾಲಿನಲ್ಲಿ ನಿಂತವರು ಮೋದಿ ನಿರ್ಧಾರವನ್ನು ಹೊಗಳುತ್ತಿದ್ದಾರೆ.

ಒಂದು ತಿಂಗಳ ನಂತರ ಅವರೆಲ್ಲ ಗಲಿಬಿಲಿಗೊಂಡಿದ್ದಾರೆ. ಈ ಕರೆನ್ಸಿ ಸಮರಕ್ಕೆ ನಾಂದಿ ಹಾಡಿರುವುದಕ್ಕೆ ಏನೋ ಬಲವಾದ ಕಾರಣ ಇರಲೇಬೇಕು ಎಂದು ಅವರು ಈಗಲೂ ನಂಬಿದ್ದಾರೆ. ಈ ಗಂಡಾಂತರ ಎದುರು ಹಾಕಿಕೊಂಡಿರುವುದಕ್ಕೆ ಶೀಘ್ರದಲ್ಲಿಯೇ ಸೂಕ್ತ ಪ್ರತಿಫಲ ಸಿಗಲಿದೆ ಎಂದೂ ಅವರೆಲ್ಲ ಎಣಿಕೆ ಹಾಕಿದ್ದಾರೆ.

ಅಂತಹ ಪ್ರತಿಫಲವು ಬರೀ ಡಿಜಿಟಲ್‌ ಪಾವತಿಯೊಂದೇ ಆಗಿರಲಾರದು. ಸಾಮಾಜಿಕ ಶ್ರೇಣಿಯಲ್ಲಿ ಉನ್ನತ ಸ್ಥಾನದಲ್ಲಿ ಇರುವ ಉಳ್ಳವರಿಗೆ ಪೆಟ್ರೋಲ್‌ ಪಂಪ್‌ ಮತ್ತು ಹೆದ್ದಾರಿ ಟೋಲ್‌ಗಳಲ್ಲಿ ಸಾಕಷ್ಟು ರಿಯಾಯಿತಿಗಳನ್ನೂ ಒದಗಿಸಲಿದೆ.  ಕಪ್ಪುಹಣ ನಿರ್ಮೂಲನೆ ಮಾಡುವ ಉದ್ದೇಶದಿಂದ ಆರಂಭವಾಗಿರುವ ನೋಟು ರದ್ದತಿಯು ಈಗ ಡಿಜಿಟಲ್‌ ಪಾವತಿಯ ಪೇಟಿಎಂಗೆ ಮೊರೆ ಹೋಗುವುದನ್ನು ನೋಡಿದರೆ, ಗೃಹ ಸಚಿವರು ನಾಣ್ಯಗಳನ್ನು ಮನಿ ಆರ್ಡರ್‌ ಮೂಲಕ ರವಾನಿಸಿರುವಷ್ಟು ತಮಾಷೆಯಾಗಿರದಿದ್ದರೂ ಅಂತಹ ಪ್ರಯತ್ನದ ಅರ್ಧದಷ್ಟಾದರೂ ಚತುರ ನಡೆಯಾಗಿದೆ.

ವಿನಾಶಕಾರಿ ದುಸ್ಸಾಹಸವು ಧೈರ್ಯ ಮತ್ತು ಘನತೆಯನ್ನು ಒಳಗೊಂಡಿದ್ದರೆ ಕೊನೆಯಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ಇತಿಹಾಸ ಪಾಠ ಹೇಳುತ್ತದೆ. 19ನೇ ಶತಮಾನದಲ್ಲಿ ರಷ್ಯಾದ ದೊರೆ ಮತ್ತು ಫ್ರಾನ್ಸ್‌ ನೇತೃತ್ವದ ಮೈತ್ರಿಕೂಟದ ಮಧ್ಯೆ ನಡೆದ ಕ್ರಿಮಿನ್‌ ಯುದ್ಧದಲ್ಲಿ ಗೆಲುವು ಕಂಡ ಬ್ರಿಟನ್ನಿನ ಸೇನಾ ಅಧಿಕಾರಿ ಕಾರ್ಡಿಗನ್‌ ಪರಾಕ್ರಮ ಕೊಂಡಾಡಿ ಬಡ್ತಿ ನೀಡಲಾಗಿರುತ್ತದೆ. ಕವಿ ಟೆನ್ನಿಸನ್‌, ಅಶ್ವದಳದ ಪರಾಕ್ರಮವನ್ನು ತನ್ನ ಕವನಗಳಲ್ಲಿ ಬಣ್ಣಿಸಿ ಅದನ್ನು ಅಜರಾಮರಗೊಳಿಸಿದ್ದಾರೆ. ಬ್ರಿಟನ್ನಿನ ಮನಃಶಾಸ್ತ್ರಜ್ಞ ನಾರ್ಮನ್‌ ಡಿಕ್ಸನ್‌ ಅವರ ಸೇನಾ ಅಸಾಮರ್ಥ್ಯದ ಮನೋವೈಜ್ಞಾನಿಕ ಕೃತಿಯೂ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಫ್ರಾನ್ಸ್‌ನ ಮಾರ್ಷಲ್‌ ಪಿಯೆರ್ರೆ ಬೊಸ್ಕೆಟ್‌ ಹೇಳಿರುವ ಪ್ರಸಿದ್ಧ ಮಾತು ಇಲ್ಲಿ ಉಲ್ಲೇಖನೀಯ. ‘ಯುದ್ಧದ ಗೆಲುವು ಅದ್ಭುತವಾಗಿರುತ್ತದೆ ಎನ್ನುವುದು ನಿಜ. ಆದರೆ, ಅದು ಯುದ್ಧವಲ್ಲ. ಅದೊಂದು  ಹುಚ್ಚುತನವಷ್ಟೆ’.

ಮಾನವ ನಿರ್ಮಿತ ಸೇನಾ ವಿನಾಶವನ್ನು ಅದೆಷ್ಟರ ಮಟ್ಟಿಗೆ ವ್ಯವಸ್ಥಿತವಾಗಿ ವೈಭವೀಕರಿಸಲಾಗಿತ್ತು ಎಂದರೆ, ಜಾಗತಿಕ ಮೊದಲ ಮಹಾಯುದ್ಧದಲ್ಲಿಯೂ ಬ್ರಿಟನ್ನಿನ ಅಶ್ವಪಡೆಗೆ ಅದೇ ಸ್ಫೂರ್ತಿಯಾಗಿತ್ತು. ಬ್ರಿಟನ್‌ ಮತ್ತು ಫ್ರಾನ್ಸ್‌ ಸೇನಾ ಪಡೆಗಳು ಜರ್ಮನಿ ವಿರುದ್ಧ  ನಡೆಸಿದ್ದ ಈ ಯುದ್ಧದಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಹತರಾಗಿದ್ದರು. ಮಾನವನ ಇತಿಹಾಸದಲ್ಲಿ ಇದು ಗರಿಷ್ಠ ರಕ್ತಪಾತದ ಯುದ್ಧ ಎಂದೇ ದಾಖಲಾಗಿದೆ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)