ಮಂಗಳವಾರ, ಏಪ್ರಿಲ್ 20, 2021
31 °C

ದೇವರ ಜಾತಿ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಗುಂಡ ಸ್ವರ್ಗಕ್ಕೆ ಹೋದ. ಅದು ಸ್ವರ್ಗದಲ್ಲಿ ಅವನ ಮೊದಲನೆಯ ದಿನ. ಅವನು ಪ್ರವೇಶ ಮಾಡುತ್ತಿದ್ದಂತೆಯೇ ರೋಮಾಂಚನವಾಯಿತು. ಅದೇನು ಅದ್ಭುತ ಸುವಾಸನೆ ಅಲ್ಲಿ! ಅತ್ಯಂತ ಸುಮಧುರವಾದ ಸಂಗೀತ ತೇಲಿ ಬರುತ್ತಿದೆ.ಎಲ್ಲಿ ನೋಡಿದಲ್ಲಿ ಹೂವುಗಳು ಅರಳಿ ನಿಂತಿವೆ. ತರತರಹದ ಬಣ್ಣದ ಬೆಳಕುಗಳು ಆಗಾಗ ಹೊಳೆದು ಮರೆಯಾಗುತ್ತಿವೆ. ಅವನಿಗೆ ಸ್ವರ್ಗ ತುಂಬ ಚೆನ್ನಾಗಿರುತ್ತೆಂದು ತಿಳಿದಿತ್ತು. ಆದರೆ, ಇಷ್ಟು ಅದ್ಭುತವಾಗಿರುತ್ತದೆಂದು ಊಹಿಸಿರಲೂ ಇಲ್ಲ. ಅಲ್ಲಲ್ಲಿ ದೇವದೂತರು ನಗುನಗುತ್ತ ಸುಳಿದಾಡುತ್ತಿದ್ದರು.ಒಬ್ಬರನ್ನು ಗುಂಡ ಕೇಳಿದ,  ಸ್ವರ್ಗ ಯಾವಾಗಲೂ ಇಷ್ಟು ಅದ್ಭುತವಾಗಿಯೇ ಇರುತ್ತದೆಯೇ.  ದೇವದೂತ ಮೆಲ್ಲನೆ ನಕ್ಕು ಹೇಳಿದ,  ಬಹುಶಃ ನೀವು ಇಂದೇ ಸ್ವರ್ಗಕ್ಕೆ ಬಂದಿರಬೇಕು. ನಿತ್ಯವೂ ಸ್ವರ್ಗ ಸುಂದರವಾಗಿಯೇ ಇರುತ್ತದೆ. ಇಂದು ವಿಶೇಷ ದಿನವಲ್ಲವೇ. ಇಂದು ಭಗವಂತನ ಹುಟ್ಟಿದ ದಿನ, ಅದಕ್ಕೇ ವಿಶೇಷ ಅಲಂಕಾರ.ಇನ್ನು ಸ್ವಲ್ಪ ಹೊತ್ತಿಗೆ ಮೆರವಣಿಗೆಗಳು ಪ್ರಾರಂಭವಾಗುತ್ತವೆ. ನೀವು ತಡವಾಗಿ ಬಂದಿದ್ದಕ್ಕೆ ದುಃಖ ಬೇಡ. ನೀವು ಕೂಡ ಮೆರವಣಿಗೆಯಲ್ಲಿ ಭಾಗವಹಿಸಬಹುದು. ಗುಂಡನಿಗೆ ತುಂಬ ಸಂತೋಷವಾಯಿತು. ತಾನು ಎಂಥ ಸರಿಯಾದ ಸಮಯಕ್ಕೆ ಸ್ವರ್ಗ ಸೇರಿದ್ದೇನೆ.ಇಂಥ ದಿವ್ಯ ಮೆರವಣಿಗೆ ನೋಡುವುದು, ಭಗವಂತನ ಹುಟ್ಟುಹಬ್ಬದಲ್ಲಿ ಪಾಲುಗೊಳ್ಳುವುದು ಸುಲಭವೇ. ಹೀಗೆ ಚಿಂತಿಸುವುದರಲ್ಲಿ ಮೆರವಣಿಗೆ ಶುರುವಾಯಿತು. ಒಂದು ಬಂಗಾರದ ಕುರ್ಚಿಯ ಮೇಲೆ ಅತ್ಯಂತ ಆಕರ್ಷಕವಾದ ವ್ಯಕ್ತಿಯೊಬ್ಬ ಕುಳಿತಿದ್ದಾನೆ. ಆ ಕುರ್ಚಿಯನ್ನು ಒಂದು ಅಲಂಕೃತವಾದ ವೇದಿಕೆಯ ಮೇಲೆ ಇರಿಸಲಾಗಿದೆ. ಹತ್ತಾರು ಜನ ಆ ವೇದಿಕೆಯನ್ನು ಹೊತ್ತು ನಡೆಯುತ್ತಿದ್ದಾರೆ. ವೇದಿಕೆಯ ಹಿಂದೆ ಸಂತೋಷದಿಂದ ಘೋಷಣೆಗಳನ್ನು ಕೂಗುತ್ತ ಲಕ್ಷಾಂತರ ಜನ ಸಂಭ್ರಮದಿಂದ ನಡೆಯುತ್ತಿದ್ದಾರೆ. ಗುಂಡನಿಗೆ ಆ ವ್ಯಕ್ತಿ ಯಾರು ತಿಳಿಯಲಿಲ್ಲ. ಮೆರವಣಿಗೆಯಲ್ಲಿ ಹೋಗುತ್ತಿದ್ದವನೊಬ್ಬನನ್ನು ಕೇಳಿದ. ಆತ ಇವನನ್ನು ದಿಟ್ಟಿಸಿ ನೋಡಿ,  ಅವರಾರು ತಿಳಿಯಲಿಲ್ಲವೇ.

 

ಆತ ಮಹಾನುಭಾವನಾದ ಏಸು ಕ್ರಿಸ್ತ  ಎಂದು ಹೇಳಿ ನಡೆದ. ಈ ಮೆರವಣಿಗೆ ಮುಗಿಯುತ್ತಿದ್ದಂತೆ ಒಂದು ಬಲಿಷ್ಠವಾದ ಕುದುರೆಯ ಮೇಲೆ ಮತ್ತೊಬ್ಬ ವ್ಯಕ್ತಿ ಬರುತ್ತಿದ್ದುದು ಕಂಡಿತು. ಅವನ ಹಿಂದೆಯೂ ಲಕ್ಷಾಂತರ ಜನ ಸಂತೋಷದಿಂದ ಜೈಕಾರ ಹಾಕುತ್ತ ನಡೆಯುತ್ತಿದ್ದಾರೆ.ಒಬ್ಬ ಹಿಂಬಾಲಕನಿಂದ ವ್ಯಕ್ತಿ ಪ್ರವಾದಿ ಮಹಮ್ಮದ ಎಂದು ತಿಳಿಯಿತು. ಈ ಗುಂಪು ಮರೆಯಾಗುತ್ತಲೇ ಸುಂದರವಾದ ಬಂಗಾರದ ರಥದಲ್ಲಿ ಸ್ವಲ್ಪ ಗೌರವರ್ಣದ ಆಕರ್ಷಕ ವ್ಯಕ್ತಿ ಬಂದ. ಅವನ ಹಿಂದೆಯೂ ಲಕ್ಷಾಂತರ ಜನ! ಅವರು ಹಾಡುತ್ತಿದ್ದಾರೆ! ಕುಣಿಯುತ್ತಿದ್ದಾರೆ ! ಅವರಲ್ಲೊಬ್ಬ ಕೂಗಿದ,  ಶ್ರಿ ಕೃಷ್ಣ ಭಗವಾನ್ ಕೀ ಜೈ . ಓಹೋ ಆತ ಶ್ರಿ ಕೃಷ್ಣ ಎಂದುಕೊಂಡ ಗುಂಡ.ಇದಾದ ನಂತರ ಅನೇಕ ಮೆರವಣಿಗೆಗಳು ನಡೆದವು. ಭಗವಾನ್ ಬುದ್ಧನ, ಪರಮ ಜ್ಞಾನಿ ಮಹಾವೀರನ ಮತ್ತವರ ಹಿಂಬಾಲಕರಾದ ಲಕ್ಷಾಂತರ ಜನರ ಮೆರವಣಿಗೆ ಅದ್ದೂರಿಯಾಗಿತ್ತು. ಅಂತೆಯೇ ಅದೆಷ್ಟು ಮೆರವಣಿಗೆಗಳು ನಡೆದವೋ! ಎಲ್ಲ ಮುಗಿಯಿತು ಎನ್ನುವಾಗ ಕೊನೆಯ ಒಬ್ಬ ನಿಸ್ತೇಜನಾದ ಮನುಷ್ಯನೊಬ್ಬ ಬಸವಳಿದಂತಿದ್ದ ಕುಂಟುವ ಕುದುರೆಯ ಮೇಲೆ ಬರುತ್ತಿದ್ದ.ಅವನ ಹಿಂದೆ ಯಾರೂ ಇಲ್ಲ. ಅದನ್ನು ಕಂಡು ಗುಂಡನಿಗೆ ನಗೆ ಬಂದಿತು.  ಯಾರಪ್ಪಾ ನೀನು. ನಿನ್ನ ಹಿಂದೆ ಯಾರೂ ಬರುತ್ತಿಲ್ಲವಲ್ಲ  ಎಂದು ಅವನನ್ನು ಕೇಳಿದ. ಆಗ ಆತ ನಿಟ್ಟುಸಿರುಬಿಟ್ಟು  ನಾನೇನಪ್ಪ ದೇವರು. ಇಂದು ನನ್ನ ಹುಟ್ಟಿದ ಹಬ್ಬ  ಎಂದ.ಗುಂಡ,  ಇದೇನು ನಿನ್ನ ಅವಸ್ಥೆ, ಹೀಗೇಕಾಯಿತು ಎಂದು ಕೇಳಿದಾಗ ದೇವರು ಹೇಳಿದ,  `ನಾನು ಮನುಷ್ಯ ಜಾತಿಯೊಂದನ್ನೇ ಸೃಷ್ಟಿ ಮಾಡಿದೆ. ಆದರೆ, ಅವರು ತಮ್ಮನ್ನು ಹಿಂದುಗಳು, ಮುಸಲ್ಮಾನರು, ಕ್ರಿಶ್ಚಿಯನ್‌ರು, ಬೌದ್ಧರು, ಜೈನರು, ಜ್ಯೂಗಳು ಎಂದು ಹರಿದು ಹಂಚಾಗಿ ಹೋದರು. ಯಾರೂ ನನ್ನ ಹಿಂದೆ ಬರಲೇ ಇಲ್ಲ. ನಾನೇನು ಮಾಡಲಿ~ ಎಂದ.ಗುಂಡ ತಾನಾದರೂ ದೇವರ ಹಿಂದೆ ಹೋಗಬೇಕೆಂದು ತೀರ್ಮಾನಿಸಿದ. ಅಷ್ಟರಲ್ಲಿ ಎಚ್ಚರವಾಗಿ ಕನಸು ಒಡೆಯಿತು. ಎದ್ದು ಕುಳಿತು ದೇವರ ಪರಿಸ್ಥಿತಿಯನ್ನು ನೆನೆದಾಗ ಗಾಬರಿಯಾಗಿ ಬೆವರು ಕಿತ್ತುಕೊಂಡು ಬಂದಿತು. ದೇವರು ನಮ್ಮನ್ನು ಮನುಷ್ಯರನ್ನಾಗಿ ಸೃಷ್ಟಿಸಿದ.ನಾವು ಅವನ ಅಪೇಕ್ಷೆಯಂತೆ ಒಂದಾಗಿ ಬದುಕದೇ ಗುಂಪುಗಳಾಗಿ ಒಡೆದುಕೊಂಡು ಪರಸ್ಪರ ವಿರುದ್ಧವಾಗಿ ನಿಂತು ಕಿತ್ತಾಡುತ್ತಿದ್ದೇವೆ. ದೇವರಿಗೆ ಮತವಿಲ್ಲ, ಜಾತಿಯಿಲ್ಲ. ಅವನ ಹೆಸರು ಹೇಳಿಕೊಂಡು ನಾವು ಜಾತಿ, ಮತವೆಂದು ಹೊಡೆದಾಡುತ್ತೇವೆ, ರಾಜಕೀಯ ಮಾಡುತ್ತೇವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.