ಮಂಗಳವಾರ, ಮಾರ್ಚ್ 2, 2021
31 °C

ದೇವ ಭೂಮಿಯಲ್ಲಿ ವರದಕ್ಷಿಣೆಯ ವರ್ಷ ಧಾರೆ

ಆರ್. ಇಂದಿರಾ Updated:

ಅಕ್ಷರ ಗಾತ್ರ : | |

ದೇವ ಭೂಮಿಯಲ್ಲಿ ವರದಕ್ಷಿಣೆಯ ವರ್ಷ ಧಾರೆ

ಕೇರಳ ರಾಜ್ಯ ಎಂಬ ಹೆಸರು ಕೇಳಿದೊಡನೆ ನಮ್ಮ ಕಣ್ಣ ಮುಂದೆ ಬರುವ ಚಿತ್ರಗಳೆಂದರೆ ಸಂಪದ್ಭರಿತ ಪ್ರಕೃತಿ, ಸೊಬಗಿನ ಜಲರಾಶಿ, ಅಪೂರ್ವ ಜೀವ ವೈವಿಧ್ಯದಿಂದ ಕೂಡಿರುವ ವನಗಳು, ಗಿರಿಶಿಖರಗಳು, ಅಲ್ಲಿನ ತೆಂಗು, ಟೀ ಮತ್ತು ರಬ್ಬರ್ ತೋಟಗಳು-ಹೀಗೆ ಹೇಳುತ್ತಾ ಹೋದರೆ ಅದಕ್ಕೆ ಕೊನೆಯೇ ಇರಲಾರದು.ಒಟ್ಟಿನಲ್ಲಿ ಇದೊಂದು ಹೃನ್ಮನಗಳನ್ನು ತಣಿಸುವ ಚೆಲುವಿನ ನಾಡು. ಪ್ರಾಯಶಃ ಈ ಕಾರಣಕ್ಕೆಂದೇ ರಾಜ್ಯದ ಪ್ರವಾಸೋದ್ಯಮ ಇಲಾಖೆ ತನ್ನ ಎಲ್ಲ ಪ್ರಚಾರ ಮಾಧ್ಯಮಗಳಲ್ಲೂ ಕೇರಳ ಒಂದು ದೇವ ಭೂಮಿ (ಗಾಡ್ಸ್ ಓನ್ ಕಂಟ್ರಿ) ಎಂಬ ಪದವನ್ನು ಬಳಸಿ ಪ್ರವಾಸಿಗರನ್ನು ತನ್ನತ್ತ ಸೆಳೆಯಲೆತ್ನಿಸುತ್ತದೆ.ವಿಶ್ವದ ಹತ್ತು  `ಸ್ವರ್ಗ ಸದೃಶ್ಯ~  ತಾಣಗಳಲ್ಲಿ ಒಂದು, ಜಗತ್ತಿನ ಐವತ್ತು  ನೋಡಲೇಬೇಕಾದ  ಪ್ರವಾಸಿ ಸ್ಧಾನಗಳಲ್ಲಿ ಒಂದು ಎಂದೆಲ್ಲಾ ಬಣ್ಣಿಸಲ್ಪಟ್ಟಿರುವ ಕೇರಳ ರಾಜ್ಯಕ್ಕೆ ಭಾರತದ ಪ್ರವಾಸೋದ್ಯಮ ಭೂಪಟದಲ್ಲಿ ಒಂದು ವಿಶಿಷ್ಟ ಸ್ಧಾನವಿರುವುದಂತೂ ಸತ್ಯ.ಕೇರಳದ ಖ್ಯಾತಿ ಕೇವಲ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಭಾರತದ ಅಭಿವೃದ್ಧಿ ನಕ್ಷೆಯಲ್ಲಿಯೂ ಈ ರಾಜ್ಯಕ್ಕೆ ಅಗ್ರ ಸ್ಧಾನವಿದೆ. ಮಾನವಾಭಿವೃದ್ಧಿ ಸೂಚ್ಯಂಕಗಳಾದ ಲಿಂಗ ಅನುಪಾತ, ಜೀವಿತಾವಧಿ, ಫಲಿತತೆಯ ದರ, ಸಾಕ್ಷರತೆ, ಶಾಲಾ ದಾಖಲಾತಿ ಮತ್ತು ಶಿಕ್ಷಣವನ್ನು ಪೂರ್ಣಗೊಳಿಸುವವರ ಪ್ರಮಾಣ ಇವುಗಳೆಲ್ಲದರಲ್ಲೂ ಈ ರಾಜ್ಯ ಮುಂಚೂಣಿಯಲ್ಲಿದ್ದು ಭಾರತದ ಜನಸಂಖ್ಯಾ ಅಂಕಿ-ಅಂಶಗಳ ಪಟ್ಟಿಯಿಂದ ಕೇರಳವನ್ನು ಹೊರತೆಗೆದು ಬಿಟ್ಟರೆ ಇಡೀ ಚಿತ್ರವೇ ಏರು ಪೇರಾಗಿ ಬಿಡುತ್ತದೆ ಎನ್ನುವಷ್ಟು ಮಟ್ಟಿಗೆ ಈ ರಾಜ್ಯವನ್ನು ವೈಭವೀಕರಿಸಲಾಗಿದೆ.ಮಹಿಳಾ ಸಮಾನತೆ ಮತ್ತು ಸಬಲೀಕರಣದ ವಿಚಾರದಲ್ಲಂತೂ ಕೇರಳ, ಕೇವಲ ಭಾರತದಲ್ಲೇಕೆ, ಇಡೀ ದಕ್ಷಿಣ ಏಷಿಯಾದಲ್ಲೇ ಮಾದರಿ ರಾಜ್ಯವೆಂಬಂತೆ ಬಿಂಬಿತವಾಗುತ್ತಿದ್ದು, ಮಹಿಳೆಯರ ಪಾಲಿಗೆ ಈ ದೇವ ಭೂಮಿ ಒಂದು ಸ್ವರ್ಗದಂತೆ ಎಂದು ಅನೇಕರು ತಿಳಿದಿದ್ದಾರೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ.ದೇಶದ ಜನಸಂಖ್ಯೆಯಲ್ಲಿ ಸ್ತ್ರೀಯರ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದ್ದರೆ, ಕೇರಳದಲ್ಲಿ ಅವರ ಸಂಖ್ಯೆಯೇ ಹೆಚ್ಚು. ಈ ರಾಜ್ಯದಲ್ಲಿ ಪ್ರತಿ 1000 ಪುರುಷರಿಗೆ 1084 ಸ್ತ್ರೀಯರಿದ್ದಾರೆ.ಇಡೀ ದೇಶದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ (0-6 ವಯೋಗುಂಪು) ಹಿಂದೆಂದೂ ಕಾಣದಷ್ಟು ಕೆಳ ಮಟ್ಟಕ್ಕೆ ಇಳಿದಿದ್ದು, ಪ್ರತಿ 1000 ಗಂಡು ಮಕ್ಕಳಿಗೆ ಕೇವಲ 914 ಹೆಣ್ಣು ಮಕ್ಕಳು ಮಾತ್ರ ಇದ್ದಾರೆ. ಆದರೆ ಕೇರಳದಲ್ಲಿ ಮಾತ್ರ ಈ ಸಂಖ್ಯೆ ಏರಿಕೆಯಾಗಿದ್ದು, ಗಂಡು-ಹೆಣ್ಣು ಮಕ್ಕಳ ಅನುಪಾತ 1000ಕ್ಕೆ 960 ರಷ್ಟಿದೆ.ಸ್ತ್ರೀ ಸಾಕ್ಷರತೆಯ ವಿಚಾರದಲ್ಲಂತೂ ಕೇರಳ ಒಂದು ಆದರ್ಶ ಮಾದರಿಯಾಗಿ ನಮ್ಮ ಕಣ್ಣಿಗೆ ಕಾಣುತ್ತದೆ. ಭಾರತದ ಒಟ್ಟು ಸ್ತ್ರೀ ಸಾಕ್ಷರತೆಯ ಪ್ರಮಾಣ ಶೇಕಡ 65.46 ರಷ್ಟಿದ್ದರೆ, ಕೇರಳದಲ್ಲಿ ಈ ಪ್ರಮಾಣ 92% ರಷ್ಟಿದ್ದು, ದೇಶದಲ್ಲೇ ಅತ್ಯಂತ ಹೆಚ್ಚಿನ ಸ್ತ್ರೀ ಸಾಕ್ಷರತೆಯನ್ನು ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆಗೆ ರಾಜ್ಯ ಪಾತ್ರವಾಗಿದೆ.ಜನಸಂಖ್ಯೆ ಮತ್ತು ಸ್ತ್ರೀ ಸಾಕ್ಷರತೆಗಳಂಥ ಸೂಚ್ಯಂಕಗಳೇ ಅಲ್ಲದೆ, ಮಹಿಳೆಯರ ಆರೋಗ್ಯ ಸ್ಧಿತಿಯ ವಿಚಾರದಲ್ಲೂ ಕೇರಳ ಅಭಿವೃದ್ಧಿ ಮಾದರಿಗಳ ಅಧ್ಯಯನಾಸಕ್ತರ ವಿಶೇಷ ಗಮನವನ್ನು ಸೆಳೆದಿದೆ. ಇಡೀ ದೇಶವನ್ನು ಒಂದು ಘಟಕವನ್ನಾಗಿ ತೆಗೆದುಕೊಂಡಾಗ ಸ್ತ್ರೀಯರ ಜೀವಿತಾವಧಿ ಸರಾಸರಿ 68 ವರುಷಗಳಾದರೆ ಕೇರಳದಲ್ಲಿ 75 ವರುಷಗಳು.ಈ ರಾಜ್ಯದಲ್ಲಿ ಪ್ರತಿ 1,00,000 ಶಿಶು ಜನನಗಳ ಸಂದರ್ಭದಲ್ಲಿ ಮರಣವನ್ನಪ್ಪುವ ತಾಯಂದಿರ ಸಂಖ್ಯೆ 81, ಆದರೆ ಇಡೀ ದೇಶದಲ್ಲಿ ಮಾತೃ ಮೃತ್ಯತೆಯ ಪ್ರಮಾಣ 230 ರಷ್ಟಿದೆ. ದೇಶದ ಇತರ ಭಾಗಗಳಲ್ಲಿ ಸ್ತ್ರೀಯರನ್ನು ಕಾಡುವ ಬಾಲ್ಯ ವಿವಾಹ, ನಿರಂತರ ಸಂತಾನೋತ್ಪತ್ತಿ ಹಾಗೂ ಶಿಶುಗಳ ಲಾಲನೆ-ಪಾಲನೆಯ ಭಾರ, ಆರೋಗ್ಯ ಸೇವೆಗಳಿಂದ ವಂಚಿತವಾಗಿರುವುದು ಮುಂತಾದ ಪರಿಸ್ಧಿತಿಗಳಿಂದ ಈ ರಾಜ್ಯದ ಬಹುತೇಕ ಸ್ತ್ರೀಯರು ಮುಕ್ತವಾಗಿರುವುದರಿಂದ ಹೊರ ನೋಟಕ್ಕೆ ಕೇರಳ ಮಹಿಳಾ ಅಭಿವೃದ್ಧಿಯ ಅತ್ಯಂತ ಉತ್ಕೃಷ್ಟ ಮಾದರಿಯಂತೆ ಭಾಸವಾಗುವುದು ಸಹಜವೇ.ಈ ಅಂಕಿ-ಅಂಶಗಳನ್ನು ಬದಿಗಿಟ್ಟು ಕೇರಳದ ಮಹಿಳೆಯರ ಬದುಕಿನ ವಾಸ್ತವಗಳನ್ನು ಒಳಹೊಕ್ಕು ನೋಡಲಾರಂಭಿಸಿದರೆ ನಮ್ಮ ಮುಂದೆ ಹೊರಹೊಮ್ಮುವ ಚಿತ್ರವೇ ಬೇರೆ. ಸಂಪೂರ್ಣ ಸಾಕ್ಷರತೆಯಾಗಲಿ, ಮಾತೃವಂಶೀಯ ಕುಟುಂಬಗಳಾಗಲಿ, ಸ್ತ್ರೀ ಪರವಾದ ಲಿಂಗಾನುಪಾತವಾಗಲಿ, ವಾಮ ಪಂಥೀಯ ರಾಜಕೀಯ ನಿಲುವುಗಳಾಗಲಿ, ಪ್ರಗತಿಪರ ಸುಧಾರಣಾ ಚಳವಳಿಗಳಾಗಲಿ, ತಮ್ಮಷ್ಟಕ್ಕೆ ತಾವೇ ಮಹಿಳಾ ಸಮಾನತೆಯನ್ನು ತರಲು ಸಾಧ್ಯವಿಲ್ಲ ಎನ್ನುವುದಕ್ಕೆ ಕೇರಳ ಒಂದು ಸ್ಪಷ್ಟ ನಿದರ್ಶನ.ಇತ್ತೀಚೆಗಷ್ಟೇ ಬಂದ ವರದಿಯೊಂದು ಒಂದು ದಿನದಲ್ಲಿ, ಕೇರಳ ರಾಜ್ಯದಲ್ಲಿ 130ರಷ್ಟು ವರದಕ್ಷಿಣೆ ಸಂಬಂಧಿ ದೌರ್ಜನ್ಯಗಳು ದಾಖಲಾಗುತ್ತವೆ, ವರ್ಷದಿಂದ ವರ್ಷಕ್ಕೆ ಈ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಆಘಾತಕಾರಿ ಸತ್ಯವನ್ನು ಹೊರಹಾಕಿತ್ತು. ಕುಟುಂಬ ಸಂರಕ್ಷಣಾ ಸಮಿತಿ ಎಂಬ ಸಂಸ್ಧೆ ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಪಡೆದ ಮಾಹಿತಿಯ ಅನ್ವಯ ಕಳೆದ ವರುಷವೊಂದರಲ್ಲೇ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿದ್ದ ವರದಕ್ಷಿಣೆ ಪ್ರೇರಿತ ಹಿಂಸಾ ಪ್ರಕರಣಗಳ ಸಂಖ್ಯೆ 47,369.ಸ್ತ್ರೀಯರ ಪಾಲಿಗೆ ಒಂದು ಆದರ್ಶ ತಾಣವೆಂಬಂತೆ ಗೋಚರಿಸುವ ಕೇರಳ ರಾಜ್ಯದಲ್ಲಿಯೂ ವರದಕ್ಷಿಣೆಯಂಥ ಅನಿಷ್ಟ ಪದ್ಧತಿ ಯಿಂದ ಸ್ತ್ರೀಯರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.ವರುಷದಿಂದ ವರುಷಕ್ಕೆ ಈ ರಾಜ್ಯದ ಸ್ತ್ರೀಯರು ಹೆಚ್ಚು-ಹೆಚ್ಚಿನ ಸಂಖ್ಯೆಯಲ್ಲಿ ವರದಕ್ಷಿಣೆಯ ಪಿಡುಗಿಗೆ ಬಲಿಯಾಗುತ್ತಿರುವುದು, ವಿದ್ಯಾರ್ಹತೆ, ಆರ್ಥಿಕ ಸ್ಥಿತಿ, ಉದ್ಯೋಗ ಸ್ಧಾನ ಮತ್ತು ಸ್ತ್ರೀಯರ ಸೀಮಾಂತೀಕರಣದ ನಡುವೆ ಸಂಬಂಧವಿರಬೇಕಿಲ್ಲವೆನ್ನುವುದಕ್ಕೆ ಸಾಕ್ಷಿಯಾಗಿದೆ. ಈ ಹೊತ್ತು ರಾಜ್ಯದಲ್ಲಿ ನಡೆಯುತ್ತಿರುವ ಅನೇಕ ವಿವಾಹಗಳು ಧನ-ಕನಕ-ವಸ್ತು-ವಾಹನಗಳ ನಿರ್ಲಜ್ಜಾ ಪ್ರದರ್ಶನಗಳಾಗಿ, ವರದಕ್ಷಿಣೆಯನ್ನು  ಕೇಳಲಾಗಲಿ,  ಕೊಡಲಾಗಲಿ  ಯಾವುದೇ ಬಗೆಯ ಸಂಕೋಚವಿಲ್ಲದಂಥ ಪರಿಸ್ಥಿತಿ ಸೃಷ್ಟಿಯಾಗಿಬಿಟ್ಟಿದೆ.ಈ ರಾಜ್ಯದಲ್ಲಿ ಇಂದು ಮದುವೆಯೆಂದರೆ ಚಿನ್ನಾಭರಣಗಳ ಕೊಡು-ತೆಗೆದುಕೊಳ್ಳುವಿಕೆಯೇ ಪ್ರಧಾನ ವ್ಯವಹಾರವಾಗಿರುವಂತೆ ಕಾಣುತ್ತದೆ. ವರನ ಕಡೆಯವರಿಗೆ ವಧುವಿನ ಕುಟುಂಬದಿಂದ ವರದಕ್ಷಿಣೆಯ ರೂಪದಲ್ಲಿ ಬಳವಳಿಯಾಗಿ ಬರುವ ಚಿನ್ನ ಮೂಲಭೂತವಾಗಿ ಒಂದು ಬಂಡವಾಳ ಹೂಡಿಕೆ. ಮದುವೆ ಎನ್ನುವುದು ವರನ ಕುಟುಂಬಕ್ಕೆ ಸಂಪತ್ತು ಗಳಿಕೆಯ ಒಂದು ಸುಲಭ ಮಾರ್ಗ.ವಧುವಿನ ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ತಳಮಟ್ಟದಲ್ಲಿದ್ದಾಗ್ಯೂ ಚಿನ್ನವೆಂಬ ಈ ಭೂತದಿಂದ ಬಿಡುಗಡೆಯಿಲ್ಲ. ಶ್ರಿಮಂತರು ಸಾವಿರಾರು ಸವರನ್ನುಗಟ್ಟಲೆ ಚಿನ್ನವನ್ನು ಸುರಿದರೆ, ಬಡವರು ಅವರ ಶಕ್ತ್ಯಾನುಸಾರ ಚಿನ್ನಾಭರಣಗಳನ್ನು ವಧುವಿಗೆ ನೀಡಲೇ ಬೇಕು. ಮಗಳ ವಿವಾಹದ ಸಂದರ್ಭದಲ್ಲಿ ಚಿನ್ನಾಭರಣಗಳ ಖರೀದಿಗಾಗಿ ತಮ್ಮ ಇಡೀ ಜೀವನದ ಗಳಿಕೆ ಹಾಗೂ ಇದ್ದ ಬದ್ದ ಚೂರು ಪಾರು ಭೂಮಿಯನ್ನು ಒತ್ತೆಯಿಟ್ಟಿದೇ ಅಲ್ಲದೆ ವರನ ಕಡೆಯವರ ಇತರ ಬೇಡಿಕೆಗಳ ಪೂರೈಕೆಗಾಗಿ ಸಾಲವನ್ನೂ ಮಾಡಿ ಇನ್ನೆಂದೂ ಚೇತರಿಸಿಕೊಳ್ಳಲಾಗದ ಸ್ಥಿತಿಯನ್ನು ತಲುಪಿರುವ ಕುಟುಂಬಗಳ ಸಂಖ್ಯೆ ದಿನೇ ದಿನೇ ಏರುತ್ತಿದೆ.ಬಡವರ ಮಾತೇ ಹೀಗಾದಾಗ ಶ್ರಿಮಂತರ ವಿಚಾರ ಕೇಳಬೇಕೇ? ಭಾರತದಲ್ಲಿ ವ್ಯಾಪಾರವಾಗುವ ಚಿನ್ನದಲ್ಲಿ ಶೇಕಡ 20 ರಿಂದ 25 ರಷ್ಟು ಪಾಲು ಕೇರಳ ರಾಜ್ಯದ್ದು ಎಂದು ವರದಿಯೊಂದು ತಿಳಿಸಿದೆ.  ಒಂದು ಸಾಪೇಕ್ಷಿಕ ಮಟ್ಟದಲ್ಲಿ ಚಿನ್ನದ ಬೆಲೆ ಕಡಿಮೆಯಿರುವ ಕೊಲ್ಲಿ ದೇಶಗಳಿಗೆ ಈ ರಾಜ್ಯದಿಂದ ಅಪಾರ ಸಂಖ್ಯೆಯಲ್ಲಿ ಜನ ವಲಸೆ ಹೋಗಿರುವುದರಿಂದ ಅಲ್ಲಿ ಕೊಂಡ ಚಿನ್ನವೂ ರಾಜ್ಯದೊಳಗೆ ಪ್ರವೇಶ ಪಡೆಯುತ್ತಿದೆ. ಇಲ್ಲಿನ ಪರಿಸ್ಥಿತಿ ಹೇಗಿದೆಯೆಂದರೆ ರಾಜ್ಯದ ಉದ್ದಗಲಕ್ಕೂ ಹಳ್ಳಿ-ಹಳ್ಳಿಗಳಲ್ಲಿ, ಹೆದ್ದಾರಿಯ ಬದಿಗಳಲ್ಲಿ, ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ದೇಶದ ಎಲ್ಲ ಪ್ರತಿಷ್ಠಿತ ಚಿನ್ನದ ವ್ಯಾಪಾರಿ ಸಂಸ್ಥೆಗಳು ತಮ್ಮ ಮಳಿಗೆಗಳನ್ನು, ಅಂಗಡಿಗಳನ್ನು ತೆರೆದಿವೆ.ಇಡೀ ರಾಜ್ಯವನ್ನೇ ಚಿನ್ನ ಸುತ್ತುವರೆದಿರುವಾಗ ಅದರ ಆಕರ್ಷಣೆಯಿಂದ ದೂರವಿರಲು ಪ್ರಾಯಶಃ ಬಹು ಜನರಿಗೆ ಸಾಧ್ಯವಾಗಿಲ್ಲವೆನಿಸುತ್ತದೆ. ಚಿನ್ನದ ಬೆಲೆ ಎಷ್ಟೇ ದುಬಾರಿಯಾಗಲಿ, ಅದರ ಕೊಡು-ತೆಗೆದುಕೊಳ್ಳುವಿಕೆಯನ್ನು ವಿವಾಹದ ಒಂದು ಅವಿಭಾಜ್ಯ ಅಂಗವನ್ನಾಗಿ ಮಾಡಿರುವುದರಿಂದ ಅನೇಕ ಪೋಷಕರು ಒಂದು ನಿಜವಾದ ಅರ್ಥದಲ್ಲಿ  ಚಿನ್ನದ ಪಂಜರದಲ್ಲಿ ಸಿಲುಕಿ ಹಾಕಿಕೊಂಡು ಬಿಟ್ಟಿದ್ದಾರೆ.ವರದಕ್ಷಿಣೆಯ ರೂಪದಲ್ಲಿ ವಧುವಿಗೆ ನೀಡಬೇಕಾದ ನೂರರಿಂದ ಹಿಡಿದು ಸಾವಿರಾರು ಸವರನ್ನುಗಳ ಚಿನ್ನಾಭರಣಗಳಷ್ಟೇ ಅಲ್ಲದೆ, ದುಬಾರಿ ಹಾಗೂ ಐಷಾರಾಮಿ ಕಾರುಗಳು, ವರನ ಮನೆ-ಮಂದಿಗೆಲ್ಲಾ ಬೆಲೆ ಬಾಳುವ ಉಡುಗೊರೆಗಳು, ಭವಿಷ್ಯದ ಬದುಕಿಗೆ ಭದ್ರ ಬುನಾದಿ ಹಾಕುವಂತೆ ಮನೆ, ಪೀಠೋಪಕರಣಗಳು-ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.ವೈಭವೋಪೇರಿತವಾದ ವಿವಾಹದ ಆಚರಣೆ ತಮ್ಮ ಕುಟುಂಬದ ಸಾಮಾಜಿಕ ಅಂತಸ್ತನ್ನು ಹೆಚ್ಚಿಸಿಕೊಳ್ಳುವ ಸಾಧನ ಎಂದು ಪರಿಗಣಿಸುವ ವರನ ಕುಟುಂಬಗಳು, ವಿವಾಹದ ಸಂದರ್ಭದಲ್ಲೂ ಅಪಾರವಾದ ಹಣವನ್ನು ಖರ್ಚು ಮಾಡುವಂಥ ಸ್ಥಿತಿಗೆ ವಧುವಿನ ಕುಟುಂಬಗಳನ್ನು ತಳ್ಳುತ್ತಾರೆ.ಹವಾನಿಯಂತ್ರಿತ ವಿವಾಹ ಮಂಟಪ, ಈ ಮಂಟಪದ ಪುಷ್ಟಾಲಂಕಾರ, ಬಹು ಬಗೆಯ ಖಾದ್ಯಗಳನ್ನೊಳಗೊಂಡ ಭೂರಿ ಭೋಜನ, ವಧು-ವರರಿಗೆ ವಿಶೇಷ ವಸ್ತ್ರಾಲಂಕಾರ ಮುಂತಾದವುಗಳ ಮೇಲೂ ಲಕ್ಷಾಂತರ ರೂಪಾಯಿಗಳನ್ನು ವಧುವಿನ ಕುಟುಂಬದವರು ಖರ್ಚು ಮಾಡಬೇಕಾಗುತ್ತದೆ. ಕೇರಳದ ಅನೇಕ ಗ್ರಾಮಾಂತರ ಪ್ರದೇಶಗಳಲ್ಲಿಯೂ ಈ ಸೌಲಭ್ಯಗಳೆಲ್ಲ ಸೃಷ್ಟಿಯಾಗಿದ್ದು ಈ ಹೊತ್ತು ವಿವಾಹವೆನ್ನುವುದು ಒಂದು ಬೃಹತ್ ಉದ್ದಿಮೆಯಾಗಿ ಮಾರ್ಪಟ್ಟಿದೆ.ಕೇರಳದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಆ ರಾಜ್ಯಕ್ಕೆ ಮಾತ್ರ ಸೀಮಿತವೆಂದು ಭಾವಿಸಬಾರದು. ಪ್ರಗತಿಪರವಾದ ಮೌಲ್ಯಾಚರಣೆಗಳಿಗೆ, ಅದರಲ್ಲೂ ಮಹಿಳಾ ಶಿಕ್ಷಣದ ಕ್ಷೇತ್ರದಲ್ಲಿ ವಿಶೇಷವಾದ ಹೆಸರನ್ನು ಮಾಡಿರುವ ರಾಜ್ಯವೊಂದರಲ್ಲಿ ವರದಕ್ಷಿಣೆ ಎನ್ನುವ ಪಿಡುಗು ಇಷ್ಟೊಂದು ವ್ಯಾಪಕವಾಗಿ ಹರಡಿದೆ ಎಂಬುದು ವಿಪರ್ಯಾಸ.

 

ಹಾಗೆಂದರೆ ಇದರ ವಿರುದ್ಧ ಹೆಣ್ಣು ಮಕ್ಕಳು ಧ್ವನಿಯೆತ್ತುತ್ತಿಲ್ಲವೇಕೆ? ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಭಿನ್ನ ಧ್ವನಿಗಳು ಕೇಳಿ ಬರುತ್ತವೆ. ಈ ವಿಷಯವನ್ನು ಕುರಿತು ನನ್ನೊಡನೆ ಮಾತನಾಡುತ್ತಿದ್ದ ಸಹೋದ್ಯೋಗಿಯೊಬ್ಬರು ವಿಷಾದದಿಂದ ಹೇಳಿದ್ದು ಹೀಗೆ- `ತರಗತಿಗಳಲ್ಲಿ, ವಿಚಾರಸಂಕಿರಣಗಳಲ್ಲಿ ಲಿಂಗ ಸಮಾನತೆಯ ಬಗ್ಗೆ ಗಟ್ಟಿಯಾಗಿ ಮಾತನಾಡುವ ನನ್ನ ಅನೇಕ ವಿದ್ಯಾರ್ಥಿನಿಯರೂ ಮದುವೆ ಮಂಟಪದಲ್ಲಿ ಚಿನ್ನದ ಭಾರದಿಂದ ಕುಗ್ಗಿ ನಿಂತು ಬಿಡುತ್ತಾರೆ. ಎಲ್ಲೋ ಒಂದೆಡೆ ನಮ್ಮ ಇಡೀ ಶಿಕ್ಷಣ ವ್ಯವಸ್ಥೆಯ ಬಗ್ಗೆಯೇ ಜುಗುಪ್ಸೆ ಬರ‌್ತಾ ಇದೆ~.ವರುಷದಿಂದ ವರುಷಕ್ಕೆ ವರದಕ್ಷಿಣೆಯನ್ನು ನೀಡಿಯೂ ದೈಹಿಕ-ಮಾನಸಿಕ ಹಿಂಸೆಗಳಿಗೆ ಗುರಿಯಾಗುತ್ತಿರುವ ಮಹಿಳೆಯರ ಸಂಖ್ಯೆ ಏರುತ್ತಿರುವುದು ಈಗಾಗಲೇ ಸಾಬೀತಾಗಿದೆ. ಇದರಿಂದ ಎಚ್ಚೆತ್ತ ಯುವ ಜನತೆ ಈಗಲಾದರೂ ವರದಕ್ಷಿಣೆಯನ್ನು ತಿರಸ್ಕರಿಸಿ ಮಾನವೀಯತೆಗೆ ಬೆಲೆ ನೀಡುವಂಥ ವಿವಾಹ ಸಂಬಂಧಗಳನ್ನು ಒಪ್ಪಿಕೊಳ್ಳುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳಬೇಕು.ಕೇರಳದ ಕೆಲ ಗ್ರಾಮಗಳನ್ನು ವರದಕ್ಷಿಣೆ ಮುಕ್ತ ಸಮುದಾಯಗಳನ್ನಾಗಿ ಪರಿವರ್ತಿಸುವಂಥ ಪ್ರಯತ್ನ ಈಗಾಗಲೇ ಪ್ರಾರಂಭವಾಗಿದ್ದು, ಇದು ಇಡೀ ರಾಜ್ಯವನ್ನಾವರಿಸುವಂತಾಗಬೇಕು, ಇಲ್ಲದಿದ್ದಲ್ಲಿ ಮಾನವಾಭಿವೃದ್ಧಿ ಸೂಚ್ಯಂಕಗಳ ಪಟ್ಟಿಯಲ್ಲಿ ಮೇಲಿನ ಸ್ಧಾನದಲ್ಲಿರುವ ಈ  ಮಾದರಿ ರಾಜ್ಯ  ಮಾನವೀಯತೆಯ ಕೊರತೆಗಾಗಿ ಬಹು ಬೇಗ ಕೆಳಸ್ತರಕ್ಕೆ ತಳ್ಳಲ್ಪಡುವ ಸಾಧ್ಯತೆಯನ್ನು ತಳ್ಳಿ ಹಾಕುವ ಹಾಗಿಲ್ಲ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.