ಮಂಗಳವಾರ, ಏಪ್ರಿಲ್ 20, 2021
26 °C

ದೇಹಾತೀತವಾದ ಚೈತನ್ಯ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಅದು ೧೯೬೨ ನೇ ಇಸ್ವಿ. ಆಗ ಸ್ಟೀಫನ್ ಹಾಕಿಂಗ್‌ಗೆ ಇಪ್ಪತ್ತೊಂದು ವರ್ಷ. ಅನಾ­ರೋಗ್ಯ­ವೆಂದು ತಪಾಸಣೆಗೆ ಹೋದಾಗ ಬರಸಿಡಿಲಿನಂಥ ವಿಷಯ­ವನ್ನು ವೈದ್ಯರು ತಿಳಿಸಿದರು. ಅದು ಅವರ ಜೀವನದ ಗತಿಯನ್ನೇ ಬದಲಿ­ಸಿತು. ವೈದ್ಯರ ತೀರ್ಮಾ­ನದಂತೆ ಹಾಕಿಂಗ್‌ಗೆ ಆದದ್ದು ಅಮಿಯೋ­ಟ್ರಾಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್. ಅದರ ಹೆಸರು ಎಷ್ಟು ಕ್ಲಿಷ್ಟವೋ ರೋಗವೂ ಅಷ್ಟೇ ಕ್ಲಿಷ್ಟ. ಅದು ನಿಧಾ­­ನ­ವಾಗಿ ದೇಹವನ್ನು ಅಶಕ್ತ ಮಾಡುತ್ತ, ಶಕ್ತಿಯನ್ನು ಹೀರುವ, ಪರಿ­ಹಾರ­ವಿಲ್ಲದ, ಖಚಿತ­ವಾಗಿ ತ್ವರಿತ ಸಾವಿಗೆ ದೂಡುವ ರೋಗ. ವೈದ್ಯರು ಕೇವಲ ಒಂದೆ­ರಡು ವರ್ಷ­ಗಳ ಬದುಕು ಉಳಿದಿದೆ ಎಂದರು. ಆಗ ಸ್ಟೀಫನ್ ಹಾಕಿಂಗ್ ಕೇಂಬ್ರಿಜ್‌ ವಿಶ್ವ­ವಿದ್ಯಾಲ­ಯ­ದಲ್ಲಿ ಡಾಕ್ಟರೇಟ ಸಂಶೋಧನೆ ಮಾಡುತ್ತಿ­ದ್ದರು. ಸಂಶೋಧನೆ ಅಷ್ಟೇನೂ ಚೆನ್ನಾಗಿ ಮುಂದುವರೆದಿರಲಿಲ್ಲ.ಹಾಕಿಂಗ್‌ಗೂ ಅದರಲ್ಲಿ ಅಷ್ಟು ತೀಕ್ಷ್ಣ­ವಾದ ಆಸಕ್ತಿ ಕಂಡಿರ­ಲಿಲ್ಲ. ವೈದ್ಯರ ವರದಿ ಅವರ ಬದುಕಿನಲ್ಲಿ ಬಂದ ಬಹುದೊಡ್ಡ ತಿರುವು. ಆಗ ಅವರ ಮುಂದೆ ಇದ್ದದ್ದು ಎರಡೇ ಹಾದಿಗಳು. ಒಂದು, ದುಃಖದಿಂದ ಕೆಲಸವೆಲ್ಲವನ್ನು ನಿಲ್ಲಿಸಿ ಕೊರಗುತ್ತ ಸಾವಿಗಾಗಿ ಕಾಯವುದು. ಇನ್ನೊಂದು ಉಳಿದ ಸ್ವಲ್ಪವೇ ಸಮಯವನ್ನು ಸರಿ­ಯಾಗಿ ಬಳಸಿ ಸಾಧನೆ ಮಾಡುವುದು. ಹಾಕಿಂಗ್ ಎರ­ಡ­ನೆಯದನ್ನು ಆಯ್ಕೆ ಮಾಡಿ­­ಕೊಂಡರು. ಇವರಿಗೆ ಸ್ಫೂರ್ತಿಯಾಗಿ ನಿಂತವರು, ಇವರ ಜೊತೆಗಾತಿ ಜೇನ್. ಆಕೆಯ ಚೇತೋ­ಹಾರಿಯಾದ ಮಾತು­ಗಳು, ಪ್ರೋತ್ಸಾಹ ಹಾಕಿಂಗ್‌ ಅವರನ್ನು ಬಡಿ­ದೆಬ್ಬಿ­ಸಿ­ದವು. ನಿಜ, ಅವರಿಗೆ ಸಾವಿನ ಭಯ­ವಿತ್ತು.ಆದರೆ, ಅದಕ್ಕಿಂತ ಹೆಚ್ಚಾಗಿ ಸಾವು ಬರುವುದಕ್ಕಿಂತ ಮೊದಲು ಯಾವ ಸಾಧ­ನೆ­ಯನ್ನೂ ಮಾಡದಿ­ರುವುದರ ಭಯ­ವಿತ್ತು. ಮುಂಬರುವ ತಿಂಗಳುಗಳಲ್ಲಿ ಅವರ ಆರೋಗ್ಯ ಎಷ್ಟೆಷ್ಟು ಕುಸಿಯುತ್ತಿತ್ತೋ ಅವರ ಸಾಧನೆಯ ಮಟ್ಟ ಅಷ್ಟಷ್ಟು ಏರು­ತ್ತಿತ್ತು. ೧೯೭೪ ರಲ್ಲಿ ರಾಯಲ್ ಸೊಸೈ­ಟಿಯ ಅತ್ಯಂತ ಕಿರಿಯ ವಯಸ್ಸಿನ ಫೆಲೋ ಆಗಿ ಆಯ್ಕೆಯಾದರು. ೧೯೮೨ರಲ್ಲಿ ಬ್ರಿಟಿಷ್ ಸರಕಾರ, ತಮ್ಮ ಅತ್ಯುಚ್ಛ ಗೌರವ­ವಾದ ‘ಕಮಾಂಡರ್ ಆಫ್ ದ ಆರ್ಡರ್ ಆಫ್ ದ ಬ್ರಿಟಿಷ್ ಎಂಪಾಯರ್‌’  ಇವರಿಗೆ ನೀಡಿ ಗೌರವಿಸಿತು. ಅವರ ತಲ­ಸ್ಪರ್ಶಿ­ಯಾದ ಅಧ್ಯಯನದಿಂದ ಸೈದ್ಧಾಂತಿಕ ಖಗೋ­ಲಶಾಸ್ತ್ರದಲ್ಲಿ ಅದ­ರಲ್ಲೂ ಕಪ್ಪು ರಂಧ್ರ­ಗಳ ಬಗೆ ಅವರು ನೀಡಿದ ಕೊಡುಗೆ ಅನನ್ಯ­ವಾದದ್ದು. ಆಗ ಅವರು ಬರೆದ ಗ್ರಂಥ, ‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’ ವಿಜ್ಞಾನದ ಗ್ರಂಥ­ಗಳಲ್ಲಿ ಒಂದು ವಿಶೇಷ ಮೈಲಿ­ಗಲ್ಲು. ಅದು ಪ್ರಪಂಚದ ಅತ್ಯಂತ ಜನಪ್ರಿಯ ವಿಜ್ಞಾನದ ಪುಸ್ತಕವಾಗಿ ದಾಖಲಾಗಿದೆ.ಈ ಸಾಧನೆಯ ಭರಾಟೆಯಲ್ಲಿ ಇವರೇ ಸಾವನ್ನು ಮರೆತರೋ ಅಥವಾ ಯಮ ಬೆರಗಾಗಿ ಮರೆತು ಹೋದನೋ ತಿಳಿಯದು. ಒಂದೆರಡು ವರ್ಷಗಳೂ ಬದು­ಕು­ವುದು ಸಾಧ್ಯವಿಲ್ಲವೆಂದು ನಲವತ್ತು ವರ್ಷಗಳ ಹಿಂದೆ ಹೇಳಿದ್ದ ವಿಜ್ಞಾನಕ್ಕೆ ಸವಾ­ಲೆಂ­ಬಂತೆ ಇಂದಿಗೂ ಹಾಕಿಂಗ್ ತಮ್ಮ ಸಂಶೋಧನೆಯನ್ನು ನಡೆಸುತ್ತಿದ್ದಾರೆ. ಅವರ ದೇಹ ಸಂಪೂರ್ಣ ನಿಶ್ಚೇಷ್ಟಿತವಾಗಿದೆ, ಅವರು ಸದಾಕಾಲವೂ ಗಾಲಿ­ಕುರ್ಚಿಯ ಮೇಲೆಯೇ ಇರಬೇಕಾಗಿದೆ. ಅವರ ಧ್ವನಿಯನ್ನು ಅರ್ಥೈಸಿಕೊಳ್ಳಲು ಕಂಪ್ಯೂಟರ್‌ ಬಳ­ಸಬೇಕು.ಆದರೆ, ಮಿದುಳು ಮಾತ್ರ ಎಂದಿನ ನಿಖರತೆ  ಕಾಪಾಡಿ­ಕೊಂಡಿದೆ. ಇಂದಿಗೂ ಹಾಕಿಂಗ್‌ ಅವರು ಪ್ರಪಂಚದ ಇಂದಿನ ವಿಜ್ಞಾನಿ­ಗಳಲ್ಲಿ ಮುಂಚೂ­ಣಿ­ಯಲ್ಲಿ ನಿಂತಿ­ದ್ದಾರೆ, ಲಕ್ಷಾಂತರ ಯುವ ವಿಜ್ಞಾನಿಗಳಿಗೆ ಪ್ರೇರಕ ಶಕ್ತಿ­ಯಾ­ಗಿದ್ದಾರೆ. ಕೆಲ­ವೊಮ್ಮೆ ಜೀವನದಲ್ಲಿ ಬರುವ ಆಘಾತಗಳು ಧನಾತ್ಮಕ ಬದ­ಲಾವಣೆ ತರುತ್ತವೆ. ಹೇಡಿಗಳಿಗೆ, ಸಾಧಕರಿಗೆ ಇರುವ ವ್ಯತ್ಯಾಸ ಒಂದೇ. ಹೇಡಿ­ಗಳು ಎಲ್ಲಿ ಸಾವು ಬಂದೀ­ತೋ ಎಂದು ಹೆದರುತ್ತ ಏನನ್ನೂ ಮಾಡದೇ ಸಾವಿನ ಬಾಗಿಲು ತೆಗೆದು ಕಾಯುತ್ತ ಕುಳಿತಿರುತ್ತಾರೆ. ಸಾಧಕರು ದುಡಿದುಡಿದು ಸಾಧಿಸಿ ಸಾವನ್ನು ಹೆದರಿಸುತ್ತಾರೆ. ನಮ್ಮ ಮುಂದೆ ಎರಡೂ ಆಯ್ಕೆಗಳಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.