ಮಂಗಳವಾರ, ಜನವರಿ 28, 2020
17 °C

ಧನ್ಯತೆಯ ಕ್ಷಣಗಳು

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಅಮೆರಿಕೆಯಲ್ಲಿ ಆಂತರಿಕ ಯುದ್ಧ ನಡೆಯುತ್ತಿತ್ತು. ದಕ್ಷಿಣದ ಹತ್ತಿ ಬೆಳೆಗಾರರು ಹಾಗೂ ಕಪ್ಪು ಜನರು ಉತ್ತರದ ಯಾಂಕಿಗಳೊಡನೆ ಹೋರಾಟ ಮಾಡುತ್ತಿದ್ದರು. ನಾಗರಿಕ ಹಕ್ಕುಗಳ ಸ್ಥಾಪನೆಗೆ ವ್ಯವಸ್ಥೆಯಾಗಬೇಕಿತ್ತು. ಇಂಥ ಅಗ್ನಿಪರೀಕ್ಷೆಯ ಕಾಲದಲ್ಲಿ ಅಬ್ರಹಾಂ ಲಿಂಕನ್ ಅಮೆರಿಕೆಯ ಅಧ್ಯಕ್ಷರಾಗಿದ್ದರು.ಈ ಯುದ್ಧದ ಕೇಂದ್ರಬಿಂದು ಅಟ್ಲಾಂಟಾ ನಗರ. ರಾಷ್ಟ್ರಪತಿಗೆ ದಿನಾಲು ಅಲ್ಲಿಂದ ಯುದ್ಧದ ತಾಜಾ ವಿವರಗಳು ಬರುತ್ತಿದ್ದವು. ಪ್ರತಿನಿತ್ಯ ಜನರ ಸಾವು-ನೋವುಗಳ ವಾರ್ತೆ ಕಠೋರವಾಗಿತ್ತು. ಗಾಯಗೊಂಡ ಸೈನಿಕರಿಂದ ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದವು.ವೈದ್ಯರ, ದಾದಿಯರ ಸಂಖ್ಯೆ ತುಂಬ ಕಡಿಮೆಯಾಗಿತ್ತು. ಈ ನರಹತ್ಯೆಯನ್ನು ಕಂಡು ಲಿಂಕನ್‌ರ ಮನಸ್ಸು ಬಹುವಾಗಿ ನೊಂದಿತ್ತು. ಅವರು ಸ್ವತಃ ಆಸ್ಪತ್ರೆಯಿಂದ ಆಸ್ಪತ್ರೆಗೆ ಹೋಗಿ ಗಾಯಾಳುಗಳಿಗೆ ಉತ್ತೇಜನವನ್ನು, ಸತ್ತ ಸೈನಿಕರ ಸಂಬಂಧಿಗಳಿಗೆ ಸಾಂತ್ವನ ಹೇಳುತ್ತಿದ್ದರು, ಒಂದು ಆಸ್ಪತ್ರೆಗೆ ಹೋದಾಗ ಅಲ್ಲೊಬ್ಬ ಸೈನಿಕನನ್ನು ಕಂಡರು. ಆತ ಕೇವಲ ಇಪ್ಪತ್ತೆರಡು ವರ್ಷದ ಯುವಕ, ತೀವ್ರವಾಗಿ ಗಾಯಗೊಂಡಿದ್ದಾನೆ. ಸಾವಿನ ಅರಮನೆಯ ಹೊಸ್ತಿಲಲ್ಲೇ ನಿಂತಿದ್ದಾನೆ. ಕಣ್ಣುಗಳು ತೇಲುಮೇಲಾಗುತ್ತಿವೆ. ಆಗ ಅಬ್ರಹಾಂ ಲಿಂಕನ್ ಅವನ ಪಕ್ಕದಲ್ಲಿ ಹೋಗಿ ಕುಳಿತರು. ತರುಣನ ತಲೆಯ ಮೇಲೆ ಮೃದುವಾಗಿ, ಪ್ರೀತಿಯಿಂದ ಕೈಯಾಡಿಸಿ,  `ಮಗೂ, ತುಂಬ ನೋವಾಗುತ್ತಿದೆಯೇ? ನಿನಗೆ ನಾನು ಏನಾದರೂ ಸಹಾಯ ಮಾಡಲೇ?~ ಎಂದು ಕೇಳಿದರು. ಆತ ತನ್ನ ದೃಷ್ಟಿಯನ್ನು ಸ್ಥಿರವಾಗಿಡಲು ಪ್ರಯತ್ನಿಸುತ್ತ,  `ನನ್ನ ತಾಯಿಗೆ ನನ್ನ ಪರವಾಗಿ ಒಂದು ಪತ್ರ ಬರೆಯುತ್ತೀರಾ? ನನಗೆ ಬರೆಯಲು ಆಗುತ್ತಿಲ್ಲ~ ಎಂದ.ತಕ್ಷಣ ಲಿಂಕನ್ ಒಂದು ಕಾಗದವನ್ನು ತರಿಸಿಕೊಂಡು, ` ಈಗ ಹೇಳು, ನಾನೇ ಬರೆಯುತ್ತೇನೆ~ ಎಂದರು. ತರುಣ ಹೇಳತೊಡಗಿದ,  `ಅಮ್ಮೋ, ನನಗೆ ತುಂಬ ಗಾಯವಾಗಿದೆ. ಇದರಿಂದ ನಾನು ಬದುಕಿ ಉಳಿಯುವುದು ಅಸಾಧ್ಯ ಎನ್ನಿಸತೊಡಗಿದೆ. ಆದರೆ ದೇಶಕ್ಕಾಗಿ ನಾನು ಹೋರಾಟಮಾಡಿದ ಹೆಮ್ಮೆ ನನಗಿದೆ. ನೀನು ದುಃಖಿಸಬೇಡ, ತಂದೆಗೂ ಸಮಾಧಾನ ಹೇಳು. ನನ್ನ ಆತ್ಮಶಾಂತಿಗೆ ನೀವಿಬ್ಬರೂ ಭಗವಂತನಲ್ಲಿ ಪ್ರಾರ್ಥಿಸಿ.~ಲಿಂಕನ್ ಅ ಕಾಗದವನ್ನು ಬರೆದು ಮುಗಿಸಿ ಕೆಳಗೆ ಒಂದು ಶರಾ ಬರೆದರು,  ಈ ಪತ್ರವನ್ನು ತರುಣ ಸೈನಿಕನ ಪರವಾಗಿ ಬರೆದವರು ಅವನ ಸೇವಕ ಅಬ್ರಹಾಂ ಲಿಂಕನ್, ಅಮೆರಿಕೆಯ ರಾಷ್ಟ್ರಪತಿ. ಅದನ್ನು ತರುಣನ ಕೈಗಿತ್ತರು. ಆತ ಕಷ್ಟಪಟ್ಟು ಅದನ್ನು ಓದಿದ ಕೃತಜ್ಞತೆಯ ಕಣ್ಣೀರು ಕೆನ್ನೆಗಿಳಿದವು.  `ಸರ್, ನೀವು ನಿಜವಾಗಿಯೂ ನಮ್ಮ ರಾಷ್ಟ್ರಪತಿಗಳೇ?~ ಎಂದು ಕಣ್ಣರಳಿಸಿ ಕೇಳಿದ. ಲಿಂಕನ್ ಹೌದೆಂದು ಕತ್ತು ಅಲ್ಲಾಡಿಸಿದಾಗ. ಆಗ ಅವರ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು,  `ದೇವರೇ ನನಗೆಂಥ ಭಾಗ್ಯವನ್ನು ಕೊಟ್ಟೆ! ಮರಣ ಸಮಯದಲ್ಲಿ ಇಂಥ ಮಹಾನುಭಾವರ ಕೈ ಹಿಡಿಯುವ ಅವಕಾಶ ನೀಡಿದೆ~ ಎಂದ. `ನನ್ನಿಂದ ಇನ್ನೇನಾದರೂ ಸಹಾಯ ಬೇಕೇ ಮಗೂ~ ಎಂದು ಲಿಂಕನ್ ಕೇಳಿದಾಗ ಆತ,  `ಸರ್, ನನಗೆ ಬಹಳ ಸಮಯವಿಲ್ಲ. ನಾನು ಈ ಜಗತ್ತಿನಿಂದ ಪಾರಾಗಿ ಹೋಗುವ ತನಕ ದಯವಿಟ್ಟು ನನ್ನ ಕೈ ಹಿಡಿದುಕೊಂಡಿರುತ್ತೀರಾ? ದೇಶದ ಎಲ್ಲ ದೀನರ, ದುಃಖಿಗಳ ಕೈ ಹಿಡಿದ ನೀವು ನಾನು ಭಗವಂತನ ಮನೆ ಸೇರುವಾಗ ಕೈ ಹಿಡಿದು ನಡೆಸಿದರೆ ಧನ್ಯನಾಗುತ್ತೇನೆ~ ಎಂದ.ಲಿಂಕನ್ ಒಪ್ಪಿ ಅವನ ಕೈ ಹಿಡಿದು ಪಕ್ಕದಲ್ಲೇ ಕುಳಿತರು. ಒಂದು ತಾಸಿನ ನಂತರ ತರುಣನ ಚೈತನ್ಯ ದೀಪ ನಂದಿತು. ಅವನ ನಿಶ್ಚಲವಾದ ಕೈಗಳನ್ನು ಅವನ ಎದೆಯ ಮೇಲಿಟ್ಟು ಲಿಂಕನ್ ಕಣ್ಣೊರೆಸಿಕೊಂಡು ಮತ್ತೊಬ್ಬ ಗಾಯಾಳುವಿನ ಕಡೆಗೆ ನಡೆದರು.ಲಿಂಕನ್ನರಿಂದ ಅವನ ಸಾವನ್ನು ತಪ್ಪಿಸುವುದು ಸಾಧ್ಯವಿರಲಿಲ್ಲ. ಆದರೆ ಸಾವಿನ ಮುಖದಲ್ಲಿ ನಿಂತವನಿಗೆ ಸಾಂತ್ವನ ನೀಡುವುದು ಸಾಧ್ಯವಿತ್ತು. ಅದನ್ನವರು ಸಮರ್ಥವಾಗಿ ಮಾಡಿದರು.ನಮ್ಮ ಜೀವನದಲ್ಲಿ ನಮ್ಮಿಂದ ಬಹುದೊಡ್ಡ ಕಾರ್ಯಗಳು ನಡೆಯದೇ ಹೋಗಬಹುದು, ಆದರೆ ದುರ್ಗಮವಾದ ಪಥದಲ್ಲಿ ಜೀವಭಾರವನ್ನು ಹೊತ್ತೊಯ್ಯುವ ಅನೇಕ ಜೀವಗಳಿಗೆ ಒಂದು ಕಿಂಚಿತ್ತಾದರೂ ಸಹಕಾರಿಯಾಗುವ, ಕೊಂಚ ನೆರಳಾಗುವ, ಆಸರೆಯಾಗುವ ಅವಕಾಶಗಳನ್ನು ತಪ್ಪಿಸಿಕೊಳ್ಳುವುದು ಬೇಡ. ನಾವು ಮಾಡುವ ಸಣ್ಣಪುಟ್ಟ ಸಹಾಯಗಳು, ತ್ಯಾಗಗಳು ಪಡೆದವರಿಗೆ ಸ್ವಲ್ಪವಾದರೂ ಅನುಕೂಲವಾದರೆ ನಮ್ಮ ಜೀವನಕ್ಕೆ ಧನ್ಯತೆಯನ್ನು ನೀಡುತ್ತವೆ.

ಪ್ರತಿಕ್ರಿಯಿಸಿ (+)