ಅಹಮದಾಬಾದ್ ನನಗೆ ಚೆನ್ನಾಗಿ ಗೊತ್ತಿರುವ ನಗರ. ಕಳೆದ ಮೂವತ್ತು ವರ್ಷಗಳಲ್ಲಿ ಕನಿಷ್ಠ ಇಪ್ಪತ್ತು ಬಾರಿಯಾದರೂ ನಾನು ಅಲ್ಲಿಗೆ ಹೋಗಿರಬೇಕು. ಕಳೆದ ತಿಂಗಳು ಅಲ್ಲಿಗೆ ಹೋದಾಗ, ‘ಮಹಾತ್ಮ ಮಂದಿರ್’ ಎಂಬಂತಹ ಒಂದು ಸ್ಥಳಕ್ಕೆ ಇರುವ ದೂರವನ್ನು ಸೂಚಿಸುವ ಫಲಕಗಳನ್ನು ಕಂಡೆ. ನೀಲಿ ಬಣ್ಣದ ಬಾಣದ ಗುರುತಿನ ಈ ಸಂಕೇತಗಳು ನಗರದ ಮುಖ್ಯ ರಸ್ತೆಗಳಲ್ಲಿ ಪದೇ ಪದೇ ಕಂಡು ಬಂದವು. ಅದು ಸೂಚಿಸುತ್ತಿದ್ದಂತಹ ಅಂತರ ವಿಚಿತ್ರವಾಗಿರುತ್ತಿತ್ತು. ‘ಮಹಾತ್ಮ ಮಂದಿರ್: 41.7 ಕಿಮೀ’!, ‘ಮಹಾತ್ಮ ಮಂದಿರ್: 40.6 ಕಿಮೀ’ ಇತ್ಯಾದಿ ವಿಷಮ ಸಂಖ್ಯೆಗಳೇ...ಪೂರ್ಣ ಸಂಖ್ಯೆ ಎಲ್ಲೂ ಕಾಣಲೇ ಇಲ್ಲ.

ನನಗೆ ಗಲಿಬಿಲಿಯಾಯಿತು. ಏನಿದು ಒಗಟು ಎನಿಸಿತು. ಈ ಮಹತ್ವದ ಸ್ಥಳ ಯಾವುದು? ನಗರ ರಸ್ತೆಗಳಲ್ಲಿ ಪದೇ ಪದೇ ಜಾಹೀರಾತಿನಂತೆ ಪ್ರದರ್ಶಿಸಬೇಕಾದ ಅಷ್ಟು ಮಹತ್ವದ, ನಾನು ಕೇಳರಿಯದ ಈ ಹೆಗ್ಗುರುತಿನ ಸ್ಥಳವಾದರೂ ಯಾವುದು? ನನ್ನ ಅಹಮದಾಬಾದ್ ಗೆಳೆಯರು ಉತ್ತರ ಒದಗಿಸಿದರು. ಈ ಹೊಸ ‘ದೇವಾಲಯ’ ವಾಸ್ತವವಾಗಿ ರಾಜ್ಯ ರಾಜಧಾನಿಯಲ್ಲಿ ಕಟ್ಟಲಾಗುತ್ತಿರುವ ಸಮಾವೇಶ ಕೇಂದ್ರ. ಜನವರಿ ಆರಂಭದಲ್ಲಿ ನಡೆದ ‘ವೈಬ್ರಂಟ್ ಗುಜರಾತ್’ ಸಮಾವೇಶಕ್ಕೆ ಸಕಾಲಕ್ಕೆ ಮೊದಲ ಪ್ರಮುಖ ಕಟ್ಟಡದ ನಿರ್ಮಾಣವನ್ನು ಪೂರ್ಣಗೊಳಿಸಲಾಗಿತ್ತು. ಈ ಸಮುಚ್ಚಯದ ಉಳಿದ ಭಾಗ ನಿರ್ಮಾಣ ಹಂತದಲ್ಲಿದೆ.

ಈ ಯೋಜನೆಯ ಆರಂಭದ ಅನುಮೋದನೆ ಪ್ರಕಟವಾದದ್ದು ಎಲ್ ಕೆ ಅಡ್ವಾಣಿಯವರ ಬ್ಲಾಗ್ನಲ್ಲಿ. ‘ರೂ. 135 ಕೋಟಿ ಅಂದಾಜು ವೆಚ್ಚದ ಮಹಾತ್ಮ ಮಂದಿರ್ 34 ಎಕರೆಗಳಲ್ಲಿ ಹರಡಿಕೊಂಡಿದೆ’ ಎಂದು ಬರೆಯುತ್ತಾರೆ ಅಡ್ವಾಣಿ. ‘ಈ ಮಂದಿರವನ್ನು ಪ್ರಥಮ ದರ್ಜೆ ಸಮಾವೇಶ ಕೇಂದ್ರವಾಗಿ ರೂಪಿಸುವುದಲ್ಲದೆ, ಮಹಾತ್ಮರ ಬದುಕು ಹಾಗೂ ತತ್ವಗಳಿಗೆ ಸ್ಮಾರಕವಾಗಿ ಮಂದಿರವನ್ನು ಅಭಿವೃದ್ಧಿಪಡಿಸಲಾಗುವುದು’ ಎಂದೂ ಅವರು ಬರೆಯುತ್ತಾರೆ. ‘ಗಾಂಧೀಜಿಯವರ ದಂಡಿ ಯಾತ್ರೆಯ ಬಗ್ಗೆ ಸಂದರ್ಶಕರಿಗೆ ನೆನಪಿಸುವುದಕ್ಕಾಗಿ, ಉಪ್ಪಿನ ಮುದ್ದೆಯಂತಹ ಆಕಾರದ ಗೋಪುರ ಕಟ್ಟಡವು ಮ್ಯೂಸಿಯಂ ಹಾಗೂ ಧ್ಯಾನಕೇಂದ್ರವಾಗಿರುತ್ತದೆ’ ಎಂದೂ ಅಡ್ವಾಣಿ ಬರೆಯುತ್ತಾರೆ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ‘ಕಲ್ಪನಾಶಕ್ತಿಯ ಕಾರ್ಯವಿಧಾನಗಳು’, ಅವರ ‘ಹೊಸತನದ ಪರಿಕಲ್ಪನೆಗಳು, ಆಕರ್ಷಕ ವ್ಯಕ್ತಿತ್ವ ಹಾಗೂ ಕಠಿಣ ಪರಿಶ್ರಮ’ದ ಬಗ್ಗೆಯೂ ಅಡ್ವಾಣಿ ಅದೇ ಬ್ಲಾಗ್ನಲ್ಲಿ ಮೆಚ್ಚುಗೆಯಿಂದ ಬರೆಯುತ್ತಾರೆ. ಈ ಮಾತುಗಳು ಭಾರತದ ರಾಜಕಾರಣದಲ್ಲಿ ಒಂದು ಅತ್ಯಂತ ಕುತೂಹಲಕರ, ಮಾಂತ್ರಿಕ ಮಾರ್ಪಾಡುಗಳನ್ನು ಸೂಚಿಸುತ್ತವೆ. ಗುಜರಾತ್ ಮುಖ್ಯಮಂತ್ರಿಯ ಪೋಷಕರಾಗಿದ್ದ ಅಡ್ವಾಣಿ ಅವರು ಒಂದೇ ದಶಕದಲ್ಲಿ ಈಗ ಅವರ ಗ್ರಾಹಕರು ಹಾಗೂ ಯಾಚಕರಾಗಿ ಬದಲಾಗಿದ್ದಾರೆ. ಒಂದಾನೊಂದು ಕಾಲದಲ್ಲಿ ಅಡ್ವಾಣಿ ಅವರು ಹಿಂದುತ್ವದ ಯೋಜನೆಗಾಗಿ ಎದ್ದು ಕಾಣಿಸುವಂತಹ ಅಧಿಕಾರಯುಕ್ತ ನೆಲೆಯಾಗಿದ್ದರು. ಭಾರತದ ಉಪ ಪ್ರಧಾನಿ ಹಾಗೂ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ಅಡ್ವಾಣಿಯವರು ತಮ್ಮ ಪಕ್ಷದ ಸಹೋದ್ಯೋಗಿಗಳಿಂದ ಗೌರವ ನಿರೀಕ್ಷಿಸುತ್ತಿದ್ದರು ಹಾಗೂ ಪಡೆದುಕೊಳ್ಳುತ್ತಿದ್ದರು ಕೂಡ. ಈಗ ಅವರಿಬ್ಬರ ಮಧ್ಯೆ ಉಳಿದಿರುವುದು ಎಂದರೆ ಮೋದಿಯವರಿಂದ ಅಡ್ವಾಣಿಗೆ ಗುಜರಾತ್ನಲ್ಲಿ ಸುರಕ್ಷಿತವಾದ ಸಂಸದೀಯ ಸ್ಥಾನದ ಉಡುಗೊರೆ.

ಈ ಅವಧಿಯಲ್ಲಿ, ಮೋದಿಯವರ ರಾಜಕೀಯ ಪಯಣ ಭಿನ್ನ ಹಾದಿ ಹಿಡಿದಿದೆ. ಪ್ರಚಾರದಿಂದ ದೂರ ಉಳಿದ, ಕಷ್ಟಪಟ್ಟು ಕೆಲಸ ಮಾಡುವ ಆರ್ಎಸ್ಎಸ್ ಪ್ರಚಾರಕನ ಹಂತದಿಂದ, ಈಗ ಮೋದಿಯವರು ಹೆಚ್ಚು ಆತ್ಮವಿಶ್ವಾಸದ ಹಾಗೂ ಪ್ರಚಾರ ಬಯಸುವ ಆಧುನಿಕ ರಾಜಕಾರಣಿ ಆಗಿದ್ದಾರೆ. ಅವರ ಇಂದಿನ ಈ ನಿಲುವನ್ನು ಕಂಡಾಗ, ಅವರು ಇದ್ದಂತಹ ಕೊಠಡಿಯಲ್ಲೇ ನಾನೂ ಇದ್ದಂತಹ ಹನ್ನೆರಡು ವರ್ಷಗಳ ಹಿಂದಿನ ಸಂದರ್ಭ ನೆನಪಾಗುತ್ತಿದೆ. ನವದೆಹಲಿಯಲ್ಲಿ ಟೆಲಿವಿಷನ್ ಸ್ಟುಡಿಯೊ ಅದು. ಅಲ್ಲಿ, ಕಾಂಗ್ರೆಸ್ನ ಮಾಧವರಾವ್ ಸಿಂಧಿಯಾ, ಬಿಜೆಪಿಯ ಪ್ರಮೋದ್ ಮಹಾಜನ್ ಹಾಗೂ ನಾನು (ಯಾವುದೇ ಪಕ್ಷವನ್ನು ಪ್ರತಿನಿಧಿಸದವ) ಇದ್ದೆವು. ಅಂದು ಮಹಾಜನ್ರ ಸಹಾಯಕರಾಗಿದ್ದವರು ಮೋದಿ. ಆಗ ಅವರು ತಮ್ಮ ಪಾಡಿಗೆ ತಾವಿರುವಂತಹ ತೆರೆಮರೆಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸಚಿವರ ಜೊತೆಗೆ ಹೋಗಲು ನಿಯುಕ್ತರಾಗಿದ್ದಂತಹ ತಮ್ಮ ಕೆಲಸದಲ್ಲಿ, ಆ ಶಕ್ತಿವಂತ ಸಚಿವರಿಗೆ ಚಹಾ ಬೆರೆಸಿ ನೀಡುವ ಸೇವೆಯಲ್ಲಿ ಅವರು ತೃಪ್ತರಾಗಿದ್ದರು.

ಆದರೆ ಈಗ ಮೋದಿಯವರು ಅಹಮ್ಮಿನ ಅಪರಾವತಾರ. ‘ಗವರ್ನೆನ್ಸ್ ನೌ’ ಪತ್ರಿಕೆಯ ಇತ್ತೀಚಿನ ಸಂಚಿಕೆಯಲ್ಲಿ ಅವರ ಸಂದರ್ಶನವನ್ನೇ ಗಮನಿಸಿ. ಅಲ್ಲಿ ಅವರು ತಮ್ಮನ್ನು ತಾವು ಆಧುನಿಕ ಕಾಲದ ‘ಉನ್ನತ ರಾಜಕೀಯದ ಉತ್ಕೃಷ್ಠ ಮಾದರಿ’ ಎಂದು ಗುರುತಿಸಿಕೊಳ್ಳುತ್ತಾರೆ. ಗುಜರಾತ್ನ ಅಭಿವೃದ್ಧಿ ಮಾದರಿ ಕುರಿತ ಪ್ರಶ್ನೆಗೆ, ಮೋದಿಯವರು ಸ್ವಾತಂತ್ರ್ಯ ಹೋರಾಟದ ಜೊತೆಗೆ ಹೋಲಿಕೆಯೊಂದನ್ನು ನೀಡಿದ್ದಾರೆ. ‘19ನೇ ಶತಮಾನದ ಉತ್ತರಾರ್ಧದಿಂದ ಬ್ರಿಟಿಷರು ದೇಶ ತೊರೆಯುವಂತೆ ಅನೇಕ ಸಾಹಸಿ ದೇಶಭಕ್ತರು ಪ್ರಯತ್ನಿಸಿದ್ದರೂ ವಿಫಲವಾಗಿದ್ದರು. ಆದರೆ ಆ ಎಲ್ಲಾ ಹುತಾತ್ಮತೆ ಮಹಾತ್ಮ ಗಾಂಧಿಯವರು ರಂಗಕ್ಕೆ ಬಂದಾಗ ಮಾತ್ರ ಫಲಿಸಿತು ಎಂದು ಮೋದಿಯವರು ಹೇಳುತ್ತಾರೆ. ನಿಜಕ್ಕೂ ಸ್ವಾತಂತ್ರ್ಯ ಹೋರಾಟವನ್ನು ಸಾಮೂಹಿಕ ಚಳವಳಿಯಾಗಿ ಪರಿವರ್ತಿಸುವ ಮೂಲಕ ಗಾಂಧೀಜಿಯವರು ಹೊಸ ಮಾದರಿಯನ್ನೇ ಹುಟ್ಟುಹಾಕಿದರು. ಇದೇ ರೀತಿ, ಸ್ವಾತಂತ್ರ್ಯೋತ್ತರ ಹಂತದಲ್ಲಿ, ಅಭಿವೃದ್ಧಿಗಾಗಿ ಪ್ರಯತ್ನಗಳು ಸರ್ಕಾರದ್ದೇ ಸ್ವತ್ತಾಗಿತ್ತು. ಅಭಿವೃದ್ಧಿ ಕಾರ್ಯತಂತ್ರದಲ್ಲಿ ನಾನು ಮೂಲಭೂತ ಬದಲಾವಣೆಗಳನ್ನು ತಂದು ಅದನ್ನು ಸಾಮೂಹಿಕ ಆಂದೋಲನವಾಗಿ ಪರಿವರ್ತಿಸಿದ್ದೇನೆ’ ಎಂದಿದ್ದಾರೆ.

ನರೇಂದ್ರ ಮೋದಿಯವರು ತಮ್ಮನ್ನು ಮಹಾತ್ಮ ಗಾಂಧಿಗೆ ಹೋಲಿಸಿಕೊಳ್ಳಲು ಬಯಸಬಹುದು. ಆದರೆ ಈ ಇತಿಹಾಸಕಾರನಿಗೆ ಅವರು ಮತ್ತೊಬ್ಬ ಗಾಂಧಿ ಇಂದಿರಾಗೆ ಹೆಚ್ಚು ಹೋಲುತ್ತಾರೆ. 1970ರ ದಶಕದ ಆರಂಭದಲ್ಲಿ, ಚುನಾವಣೆಗಳು ಹಾಗೂ ಯುದ್ಧರಂಗದಲ್ಲಿ ಭಾರಿ ವಿಜಯಗಳ ಹಿನ್ನೆಲೆಯಲ್ಲಿ, ಮುನ್ನಡೆಯಲ್ಲಿರುವ ರಾಷ್ಟ್ರದ ಸಾಮುದಾಯಿಕ ಚೈತನ್ಯವೇ ತಾನೆಂದು ಇಂದಿರಾ ಗಾಂಧಿ ತಮ್ಮನ್ನು ಪರಿಭಾವಿಸಿಕೊಳ್ಳತೊಡಗಿದರು. ಅವರು ತಮ್ಮ ತಂದೆ ಜವಾಹರಲಾಲ್ ನೆಹರೂ ಅವರಿಗಿಂತ ಸಂಸತ್ನಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಿದ್ದರು. ಚೀನಾ ವಿರುದ್ಧ ಸೋಲಿನಲ್ಲಿ ನೆಹರೂ ಕಳೆದುಕೊಂಡಿದ್ದನ್ನು, ಪಾಕಿಸ್ತಾನದ ವಿರುದ್ಧ ತಮ್ಮದೇ ಮಿಲಿಟರಿ ವಿಜಯದಿಂದ ಮತ್ತೆ ಗಳಿಸಿಕೊಂಡಿದ್ದರು. ಆರ್ಥಿಕ ರಂಗದಲ್ಲಿ ಅವರ ಸಮಾಜವಾದ ಹೊಸತಾಗಿತ್ತು ಹಾಗೂ ಸ್ಫೂರ್ತಿದಾಯಕವಾಗಿತ್ತು. ಆರ್ಥಿಕತೆಯ ಉನ್ನತ ಸ್ಥಾನಗಳಲ್ಲಿ ಕುಳಿತವರ ಸರ್ಕಾರದ ಹಳಸಲು ಆಚರಣೆಗಳಿಗಿಂತ ‘ಗರೀಬಿ ಹಠಾವೊ’ ಘೋಷಣೆ ಹೆಚ್ಚು ಆಪ್ತವಾಗಿ, ಜನಪರವಾಗಿತ್ತು.

1971 ಹಾಗೂ 1977ರ ನಡುವೆ ಇಂದಿರಾ ತಾವೇ ಇಂಡಿಯಾ ಹಾಗೂ ಇಂಡಿಯಾನೇ ಇಂದಿರಾ ಎಂದು ಭಾವಿಸಿದರು. ಮೋದಿಯವರೂ ತಾವೇ ಗುಜರಾತ್ ಎಂದಷ್ಟೇ ಭಾವಿಸುತ್ತಾರೆ. 2002ರ ಕಾರ್ಯಾಚರಣೆ ‘ಗವರ್ನೆನ್ಸ್ ನೌ’ಗೆ (ಈ ಮನುಷ್ಯನ ಎಲ್ಲಾ ಸಂದರ್ಶಕರು ಭಾವಿಸುವಂತೆ) ನಿಷಿದ್ಧ. ಹೀಗಿದ್ದೂ ಈ ಪತ್ರಿಕೆ ಒಂದು ಹರಿತವಾದ ಪ್ರಶ್ನೆಯನ್ನು ಕೇಳುತ್ತದೆ. ‘ಗುಜರಾತ್ನಲ್ಲಿ ಸಾಮಾಜಿಕ ಒಮ್ಮತವೆಂಬುದನ್ನು ಆಗಮಾಡಲಾಗುತ್ತದೆ ಅಥವಾ ತಯಾರಿಸಲಾಗುತ್ತದೆ... ನೀವು ಈ ಒಮ್ಮತವನ್ನು ತಯಾರಿಸುತ್ತಿದ್ದೀರಿ’. ಇದಕ್ಕೆ ಮೋದಿ ಉತ್ತರ ಹೀಗಿದೆ: ‘ಪ್ರತಿಪಕ್ಷದ ನಾಯಕರನ್ನು ಜೈಲಿಗೆ ಹಾಕುವುದಾಗಲಿ ಅಥವಾ ಅವರು ಸೊಲ್ಲೆತ್ತದಿರುವಂತೆ ಮಾಡಿರುವುದನ್ನಾಗಲಿ ಗುಜರಾತ್ನಲ್ಲಿ ನೀವು ನೋಡಿದ್ದೀರಾ? ಬದಲಿಗೆ ಗುಜರಾತ್ ಹಾಗೂ ನಿರ್ದಿಷ್ಟವಾಗಿ ನನ್ನ ಮೇಲೆ ಸಿಬಿಐ ಹಾಗೂ ಎಲ್ಲಾ ತರಹದ ಸಂಸ್ಥೆಗಳನ್ನೂ ಕೇಂದ್ರ ಸರ್ಕಾರ ಛೂ ಬಿಡುತ್ತಿರುವುದರ ಬಗ್ಗೆ ನಾನು ದೂರಬೇಕು. ಹಾಗಾದಾಗ ಯಾವುದಿದು ‘ತಯಾರಿಸಿದ ಒಮ್ಮತ’? ಎಲ್ಲರೂ ಅಭಿವೃದ್ದಿಗೆ ಸಹಮತ ವ್ಯಕ್ತಪಡಿಸಿದಲ್ಲಿ ತಪ್ಪೇನು? 60/40 ಅಥವಾ 80/20 ಒಮ್ಮತ/ವಿರೋಧ ಇದ್ದಲ್ಲಿ ಅದು ಸರಿ, ಆದರೆ ಅದೇ ನಾವು 100/0 ಇದ್ದಾಗ ಅದು ತಪ್ಪು ಎಂದು ಹೇಳಲು ಬಯಸಿದ್ದೀರಾ?’

ಅಹಂ ಸರಿ..ಅರ್ಥ ಮಾಡಿಕೊಳ್ಳಬಹುದು. ಆದರೆ, ಇನ್ನೊಬ್ಬರಿಂದ ಪೀಡನೆಗೆ ಒಳಗಾಗಿರುವೆನೆಂಬ ಭ್ರಾಂತಿಯ ಆತ್ಮವೈಭವ ಎಂಬುದು ದೊಡ್ಡ ಹಾಗೂ ಸಣ್ಣ ನಿರಂಕುಶ ದೊರೆಗಳಲ್ಲಿ ಕಂಡು ಬರುವ ವಿಚಿತ್ರ ಗುಣ ಲಕ್ಷಣ. ಟೀಕೆಗಳನ್ನು ಮಾಡಿದಾಗ ಇಂದಿರಾಗಾಂಧಿ ಅವರೂ ಕೂಡ ‘ವಿದೇಶಿ ಕೈವಾಡ’ದ ಬಗ್ಗೆ ಮಾತನಾಡುತ್ತಿದ್ದರು. ತನ್ನ ನೀತಿಗಳಲ್ಲಿ ತಪ್ಪು ಕಂಡವರನ್ನು ಪಾಶ್ಚಿಮಾತ್ಯ ಅಧಿಕಾರ ಸ್ಥಾನಗಳ ಏಜೆಂಟರು, ಅದರಲ್ಲೂ ಸಿಐಎ ಏಜೆಂಟರು ಎಂದು ಹೀಯಾಳಿಸುತ್ತಿದ್ದರು.

ಮೋದಿಯವರೂ ತಮ್ಮ ಟೀಕಾಕಾರರು ದುರುದ್ದೇಶಹೊಂದಿದವರು ಅಥವಾ ಅಪಪ್ರಚಾರ ಮಾಡುವಂತಹವರು ಎಂದೇ ಭಾವಿಸುತ್ತಾರೆ. ಮೊದಲನೆಯವರು ಕೇಂದ್ರದ ಅಣತಿ ಮೇರೆಗೆ ವರ್ತಿಸುವವರು, ಎರಡನೆಯವರು ಐಎಸ್ಐ ಸೂಚನೆಗಳನ್ನು ಪಾಲಿಸುವಂತಹವರು ಎಂಬುದು ಮೋದಿ ಅವರ ವ್ಯಾಖ್ಯಾನ. ಒಂದೇ ವಿಚಾರದ ಮೇಲಿನ ಭಿನ್ನ ರೂಪಾಂತರಗಳು ಇವು. ಆಗ ಇಂದಿರಾಗಾಂಧಿಯಾಗಲಿ, ಈಗ ಮೋದಿಯಾಗಲಿ, ತಮ್ಮ ಟೀಕಾಕಾರರು ಪ್ರಾಮಾಣಿಕ ಅಥವಾ ಸಮಂಜಸ ಅಂಶಗಳನ್ನು ಹೊಂದಿರಬಹುದೆಂಬುದಕ್ಕೆ ಅವಕಾಶವನ್ನೇ ನೀಡದಂತಹವರು. ಈ ಸಿದ್ಧಾಂತದ ಪ್ರಕಾರ, ಎಲ್ಲಾ ದೇಶಪ್ರೇಮಿ ಭಾರತೀಯರು ಇಂದಿರಾಗಾಂಧಿ ಹಿಂದೆ ಇರಬೇಕು. ಎಲ್ಲಾ ಗುಜರಾತಿಗಳೂ ಮೋದಿ ಸುತ್ತ ಇರಬೇಕು.

ಅಹಮದಾಬಾದ್ನಲ್ಲಿ ನಾನು ತಂಗಿದ್ದ ಹೋಟೆಲ್ನಿಂದ 37.9 ಕಿ.ಮೀ. ದೂರದಲ್ಲಿದ್ದ ‘ಮಂದಿರ್’ ಮಹಾತ್ಮ ಗಾಂಧಿಯವರಿಗೆ ನಿಜಕ್ಕೂ ಸ್ಮಾರಕವಲ್ಲ; ಆದರದು ನರೇಂದ್ರ ಮೋದಿಯವರ ಮಹತ್ವೋನ್ಮಾದದ ಫಲ. ಅಭಿರುಚಿ, ಸೌಂದರ್ಯಪ್ರಜ್ಞೆ ಅಥವಾ ಕಲಾರಸಿಕತೆಯ ಬಗ್ಗೆ ಹೆಚ್ಚೇನೂ ಖ್ಯಾತಿ ಇಲ್ಲದ ನಿರ್ಮಾಣ ಸಂಸ್ಥೆಯ ನೇತೃತ್ವದಡಿ ಅಲ್ಲಿ ರಾಶಿ ರಾಶಿ ಕಾಂಕ್ರೀಟ್ ಗುಡ್ಡಗಳನ್ನು ಜೋಡಿಸಿರುವ ಕಥೆಗಳನ್ನು ಅಂತರ್ಜಾಲ ನಿರೂಪಿಸುತ್ತದೆ. ನಿಜ ಹೇಳಬೇಕೆಂದರೆ, ಈ ಕಟ್ಟಡ ಬಿಸಿನೆಸ್ ಒಪ್ಪಂದಗಳನ್ನು ನಡೆಸಲು ಹೇಳಿ ಮಾಡಿಸಿದ ಜಾಗ (ಅಂತರರಾಷ್ಟ್ರೀಯ ಮಟ್ಟದ ಸಮಾವೇಶ ಸಭಾಂಗಣ. ಮೂರು ದೊಡ್ಡ ಪ್ರದರ್ಶನ ಸಭಾಂಗಣಗಳು ಹಾಗೂ ಖರೀದಿದಾರ - ಮಾರಾಟಗಾರ ಸಮಾವೇಶಗಳನ್ನು ನಡೆಸಲು ಅನುಕೂಲವಾಗುವಂತೆ ಸೌಲಭ್ಯಗಳಿರುವ ಚಿಕ್ಕ ಸಭಾಂಗಣಗಳನ್ನು ‘ಮಂದಿರ’ ಹೊಂದಿದೆ ಎಂದು ಒಂದು ಅಧಿಕೃತ ಸರ್ಕಾರಿ ಪ್ರಕಟಣೆಯೂ ತಿಳಿಸಿದೆ). ಆದರೆ ಇದು ಸೌಂದರ್ಯ ಪ್ರಜ್ಞೆ, ನೈತಿಕತೆ ಅಥವಾ ತಾನು ಗೌರವಿಸುವುದಾಗಿ ಪ್ರತಿಪಾದಿಸಿಕೊಳ್ಳುವ ಮಹಾತ್ಮರ ಪ್ರಜಾಸತ್ತಾತ್ಮಕ ಚೈತನ್ಯವನ್ನಂತೂ ಪ್ರತಿನಿಧಿಸುತ್ತಿರಬಹುದೆಂಬುದನ್ನು ಚಿಂತಿಸಲೂ ಆಗದು. ಹೀಗಾಗಿಯೇ ಈ ಸ್ಥಳಕ್ಕೆ ಭೇಟಿ ನೀಡಿದ್ದ ಅನಿವಾಸಿ ಗುಜರಾತಿಯೊಬ್ಬರು ನಂತರ ಬ್ಲಾಗ್ನಲ್ಲಿ ಬರೆದಿರುವುದು ಹೀಗೆ: ‘ಎಲ್ಲೆಲ್ಲೂ ತುಂಬಾ ಪೊಲೀಸರಿದ್ದಾರೆ. ಹೀಗಾಗಿ ಈ ಸ್ಥಳ ಕೆಲ ಗಂಟೆಗಳು ವಾಣಿಜ್ಯ ಶೃಂಗಸಭೆಯ ತಾಣದಂತೆ ಕಾಣಿಸುತ್ತದೆ. ನಂತರ ಉಳಿದ ಸಮಯದಲ್ಲಿ ಈ ಸ್ಥಳ ಪೊಲೀಸ್ ನೆಲೆಯಂತೆ ಕಾಣುತ್ತದೆ’.

ಅಹಮದಾಬಾದ್ಗೆ ಮೊದಲ ಬಾರಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಇಲ್ಲೊಂದಿಷ್ಟು ಕಿವಿಮಾತು. ಮಹಾತ್ಮನನ್ನು ಹುಡುಕಿ ಹೋದಿರಾದರೆ ರಸ್ತೆಗಳಲ್ಲಿನ ನೀಲಿ ಚಿಹ್ನೆಗಳನ್ನು ಕಡೆಗಣಿಸಿ. ಬದಲಾಗಿ ಸಬರಮತಿ ಆಶ್ರಮಕ್ಕೆ ಕರೆದೊಯ್ಯಿರೆಂದು ಆಟೊರಿಕ್ಷಾವಾಲಾನನ್ನು ಕೇಳಿರಿ. ಈ ಅನುಭವ ನಿಜಕ್ಕೂ ಬಲ ಕೊಡುವಂತಹದ್ದು. ಬಹುಶಃ ನಿಮ್ಮಲ್ಲಿ ಪರಿವರ್ತನೆಯನ್ನೂ ತರುವಂತಹದ್ದು. ಆ ‘ಮಂದಿರ’ದಂತಲ್ಲದೆ ಈ ಆಶ್ರಮ, ಮೊದಲನೆಯದಾಗಿ ಮಾನವೀಯ ನೆಲೆಯದು; ಸುತ್ತುವರಿದ ಹಸಿರು ಮರಗಳ ನಡುವೆ ಸರಳವಾದ ಕಟ್ಟಡಗಳು. ಎರಡನೆಯದಾಗಿ, ಈ ಸ್ಥಳದ ಒಳಗಾಗಲಿ, ಹೊರಗಾಗಲಿ ಪೊಲೀಸರೂ ಇಲ್ಲ. ಮೂರನೆಯದಾಗಿ ಅಲ್ಲಿ ಗಾಂಧಿ ನಿಜಕ್ಕೂ ಜೀವಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.