ಗುರುವಾರ , ಮೇ 6, 2021
26 °C

ನಾವು ಪಾಲಿಸದ ಬುದ್ಧನ ಮಾತು

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಇದು ಬುದ್ಧನ ಕಥೆಗಳಲ್ಲಿ ಒಂದು. ಇಂದಿಗೆ ಪ್ರಸ್ತುತವಾದ ಕಥೆ.ಅದೊಂದು ದಟ್ಟವಾದ ಕಾಡು. ಕಾಡಿನಂಚಿನಲ್ಲಿ ಅನೇಕ ಕುಟುಂಬಗಳು ವಾಸವಾಗಿದ್ದವು. ಅವರು ಬದುಕಿದ್ದದ್ದು ಕಾಡಿನಲ್ಲಿ ಸಿಗುವ ವಸ್ತುಗಳಿಂದಲೇ.ಮನೆಯ ಹೆಣ್ಣು ಮಕ್ಕಳು ಕಾಡಿನಲ್ಲಿ ಹೋಗಿ ದೊರೆತ ಹಣ್ಣು ಹಂಪಲುಗಳನ್ನು ತಂದರೆ ಗಂಡಸರು ಕಟ್ಟಿಗೆ ತರುತ್ತಿದ್ದರು. ಹುಡುಗರು ಬೇಟೆಯಾಡಿ ತಂದ ಪ್ರಾಣಿಗಳ ಮಾಂಸವನ್ನು ಮಾರುತ್ತಿದ್ದರು.ಇಂಥ ಒಂದು ಕುಟುಂಬದಲ್ಲಿ ಅಣ್ಣ ಕಾಡಿನಲ್ಲಿ ನುಗ್ಗಿಹೋಗಿ ಪ್ರಾಣಿಗಳನ್ನು ಕೊಂದು ತರುತ್ತಿದ್ದ. ತಮ್ಮ, ಮಾಂಸವನ್ನು ಪಟ್ಟಣಕ್ಕೆ ತೆಗೆದುಕೊಂಡು ಹೋಗಿ ಮಾರಿ ಹಣ ತರುತ್ತಿದ್ದ. ಇದೇ ಅವರ ನಿತ್ಯದ ಕೆಲಸ. ಒಂದು ಬಾರಿ ಬುದ್ಧ ಆ ಭಾಗದಲ್ಲಿ ಪ್ರವಾಸ ಕೈಗೊಂಡಾಗ ತಮ್ಮನನ್ನು ನೋಡಿ ಮಾತನಾಡಿಸಿದ.ಬುದ್ಧನ ಶಕ್ತಿಯೇ ಅಂತಹದು. ಹತ್ತಿರಕ್ಕೆ ಬಂದವರನ್ನು ಅವನ ವ್ಯಕ್ತಿತ್ವ, ಮಾತು, ಓಜಸ್ಸು ಅಯಸ್ಕಾಂತದಂತೆ ಸೆಳೆದುಕೊಳ್ಳುತ್ತಿದ್ದವು. ತಮ್ಮನಿಗೆ ಅಹಿಂಸೆಯ ಬಗ್ಗೆ ಸಂಪೂರ್ಣ ಮನವರಿಕೆಯಾಯಿತು. ಇನ್ನು ಮೇಲೆ ಪ್ರಾಣಿ ವಧೆ ಮಾಡುವುದು ಬೇಡವೆಂದು ತೀರ್ಮಾನ ಮಾಡಿದ. ಅಂತೆಯೇ ಅಣ್ಣನಿಗೂ ಹೇಳಿದ.ಅಣ್ಣ ಈ ಮಾತನ್ನು ಒಪ್ಪಲಿಲ್ಲ. ನಮ್ಮ ವೃತ್ತಿಯೇ ಬೇಟೆಯಾಡುವುದು. ಬೇಟೆ ಆಡದಿದ್ದರೆ ಪ್ರಾಣಿಗಳ ಸಂಖ್ಯೆ ಅಪಾರವಾಗಿಬಿಡುತ್ತದೆ ಎಂದು ಏನೇನೋ ಕಾರಣಗಳನ್ನು ಹೇಳಿದ. ಕೊನೆಗೆ ಅಣ್ಣನನ್ನು ಒಪ್ಪಿಸಲು ತಮ್ಮ ಒಂದು ಯೋಜನೆ ಮಾಡಿ ಹೇಳಿದ, `ಅಣ್ಣಾ ನಾನೂ ನಿನ್ನ ಜೊತೆಗೆ ಕಾಡಿಗೆ ಬರುತ್ತೇನೆ. ಅಲ್ಲಿ ನಾನು ಒಂದು ಬಂಗಾರದ ಬಣ್ಣದ ಜಿಂಕೆಯಾಗಿ ಬದಲಾಗುತ್ತೇನೆ. ನೀನು ನನ್ನನ್ನು ಹುಡುಕಿ ಬೇಟೆಯಾಡು.ನೀನು ನನ್ನನ್ನು ಬೇಟೆಯಾಡಿದರೆ ನೀನು ಗೆದ್ದಂತೆ. ನನ್ನನ್ನು ಬೇಟೆಯಾಡಲು ಯಾವುದೇ ಕಾರಣದಿಂದ ಸಾಧ್ಯವಾಗದಿದ್ದರೆ ನೀನು ನನ್ನ ಮಾತಿನಂತೆ, ಭಗವಾನ್ ಬುದ್ಧ ಹೇಳಿದಂತೆ ಪ್ರಾಣಿಹಿಂಸೆಯನ್ನು ಬಿಡಬೇಕು.~ ಅಣ್ಣ ಒಪ್ಪಿದ.ಮರುದಿನ ಕಾಡಿನಲ್ಲಿ ತಮ್ಮ ಅತ್ಯಂತ ಸುಂದರವಾದ ಜಿಂಕೆಯಾಗಿ ಬದಲಾದ. ನಂತರ ಓಡಿ ಕಾಡಿನಲ್ಲಿ ಮರೆಯಾದ. ಅಣ್ಣ ತನ್ನ ಬೇಟೆನಾಯಿಗಳೊಂದಿಗೆ ಜಿಂಕೆಯನ್ನು ಬೆನ್ನಟ್ಟಿದ. ಎಷ್ಟು ಪ್ರಯತ್ನ ಮಾಡಿದರೂ ಜಿಂಕೆ ಸಿಗಲಿಲ್ಲ. ಮಧ್ಯಾಹ್ನವಾಯಿತು. ಕಾಡಿನಲ್ಲಿ ಓಡಾಡಿ ಅಣ್ಣನಿಗೆ ಭಾರೀ ಆಯಾಸವೂ ಆಗಿತ್ತು, ನೀರಡಿಕೆಯೂ ಆಗಿತ್ತು.ಕಾಡಿನ ಮಧ್ಯದಲ್ಲಿ ನೀರಿನ ಕೊಳವೊಂದು ಇದ್ದುದನ್ನು ತಿಳಿದಿದ್ದ ಅಣ್ಣ ಅಲ್ಲಿಗೆ ನಡೆದ. ತಿಳಿ ನೀರಿನಲ್ಲಿ ಮುಖ ತೊಳೆದುಕೊಂಡು ನಂತರ ಕುಡಿಯಲೆಂದು ಬೊಗಸೆಯಲ್ಲಿ ನೀರು ಎತ್ತಿಕೊಂಡ. ಅಷ್ಟರಲ್ಲೇ ಸ್ವಲ್ಪ ದೂರದಲ್ಲಿ ಬಂಗಾರ ಬಣ್ಣದ ಜಿಂಕೆಯು ನೀರು ಕುಡಿಯಲು ಓಡಿಬಂದದ್ದು ಕಂಡಿತು.ಪಾಪ! ಬೇಟೆಗಾರರ ಕೈಯಿಂದ ಪಾರಾಗಲು ಬಿಸಿಲಿನಲ್ಲಿ ಓಡಾಡಿ ಬೆಂಡಾಗಿ ಹೋಗಿದೆ! ನಾಲಿಗೆಯನ್ನು ಹೊರಗೆ ಚಾಚಿಕೊಂಡು ಉಸಿರು ಬಿಡುತ್ತಿದೆ. ಅದಕ್ಕೆ ಬಹಳೇ ನೀರಡಿಕೆಯಾಗಿರಬೇಕು. ಅಣ್ಣನ ಬೊಗಸೆಯಲ್ಲಿಯ ನೀರಿನಲ್ಲಿ ಜಿಂಕೆ ಕಾಣಿಸದೇ ತಮ್ಮನೇ ಕಾಣಿಸಿದ.ಪಾಪ! ತಮ್ಮನಿಗೆ ಅದೆಷ್ಟು ನೀರಡಿಕೆಯಾಗಿರಬೇಕು ಎಂದುಕೊಳ್ಳುವಷ್ಟರಲ್ಲಿ ಅವನ ಬೇಟೆಯ ನಾಯಿ ಛಂಗನೇ ಜಿಂಕೆಯ ಕತ್ತಿಗೆ ಹಾರಿತು. ತಕ್ಷಣ ಅಣ್ಣ ಅದರ ಹಗ್ಗವನ್ನೆಳೆದು ಗದರಿದ. ನಂತರ ಜಿಂಕೆಗೆ ಹೇಳಿದ  `ತಮ್ಮೋ ನೀರು ಕುಡಿ. ನಿನ್ನನ್ನು ಯಾರೂ ಹೊಡೆಯಲಾರರು. ಯಾರಾದರೂ ಬಂದರೆ ನಾನೇ ನಿಂತು ರಕ್ಷಣೆ ಮಾಡುತ್ತೇನೆ.~

ತಕ್ಷಣ ತಮ್ಮ ಮತ್ತೆ ಮನುಷ್ಯನಾಗಿ ನಿಂತ.  `ಅಣ್ಣಾ, ನಾನು ಅಸಹಾಯಕನಾಗಿ ನಿನ್ನ ಮುಂದೆ ಸಿಕ್ಕಾಗಲೂ ನೀನು ನನ್ನನ್ನು ಕೊಲ್ಲಲಿಲ್ಲ. ಯಾಕೆಂದರೆ ನಾವಿಬ್ಬರೂ ಒಂದೇ ಕರುಳಿನಿಂದ ಬಂದವರು, ರಕ್ತ ಹಂಚಿಕೊಂಡವರು ಎಂತಲ್ಲವೇ? ನನಗೆ ಬುದ್ಧದೇವ ಹೇಳಿದ್ದಾನೆ, ಪ್ರಕೃತಿಯಲ್ಲಿರುವ ನಾವೆಲ್ಲರೂ ಎಂದರೆ ಎಲ್ಲ ಪ್ರಾಣಿ, ಪಕ್ಷಿ, ಸಸ್ಯಕುಲ, ನೆಲ, ಮನುಷ್ಯರು ಎಲ್ಲರೂ ಒಂದೇ ಮೂಲಚೈತನ್ಯದಿಂದ ಬಂದವರು.

 

ಆ ರೀತಿಯಲ್ಲಿ ನಾವೆಲ್ಲರೂ ಬಂಧುಗಳೇ. ಹಾಗಿದ್ದಲ್ಲಿ ಹಿಂಸೆ ಎನ್ನುವುದು ನಮ್ಮ ಸಹೋದರರ ಹತ್ಯೆ ಮಾಡಿದಂತೆ ಅಲ್ಲವೇ?~ ಅಣ್ಣನ ಮನಸ್ಸು ತಿಳಿಯಾಯಿತು, ಅಹಿಂಸೆಯತ್ತ ತಿರುಗಿತು. ಅಂದಿನಿಂದ ಪ್ರಾಣಿಹತ್ಯೆ ನಿಲ್ಲಿಸಿಬಿಟ್ಟ.ಎರಡೂವರೆ ಸಾವಿರ ವರ್ಷಗಳಿಗಿಂತಲೂ ಮೊದಲೇ ನಮ್ಮ ಮನಸ್ಸನ್ನು ತಟ್ಟಲು ಹೆಣಗಿದ ಬುದ್ಧನ ಮಾತು ಇನ್ನೂ ನಮ್ಮ ಹೃದಯದ ಆಳವನ್ನು ತಲುಪಲಿಲ್ಲವಲ್ಲ! ಜಾತಿಯ, ಲಿಂಗದ, ದೇಶದ, ಬಣ್ಣದ, ರಾಜಕೀಯದ ಹೆಸರಿನಲ್ಲಿ ಒಬ್ಬರು ಇನ್ನೊಬ್ಬರ ಮೇಲೆ ಎಸಗುವ ಅನ್ಯಾಯಗಳು ಅದೆಷ್ಟು ಇನ್ನೂ ಕಾಣುತ್ತಿವೆ? ಬುದ್ಧನ ಮೂರ್ತಿಗೆ, ಭಾವಚಿತ್ರಕ್ಕೆ ಪೂಜೆ ಮಾಡುವ ನಾವು ಅವನ ಬೋಧನೆಗಳನ್ನು ಆಚರಣೆಗೆ ತಂದಿದ್ದರೆ ಆ ಮಹಾನುಭಾವನಿಗೆ ನಿಜವಾದ ಕೃತಜ್ಞತೆ ಸಲ್ಲಿಸಿದಂತಾಗುತ್ತಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.