ಸೋಮವಾರ, ಆಗಸ್ಟ್ 10, 2020
24 °C

ನಾ ಕಂಡ ರಾಜೇಶ್ ಖನ್ನಾ

ದ್ವಾರಕೀಶ್ Updated:

ಅಕ್ಷರ ಗಾತ್ರ : | |

ನಾ ಕಂಡ ರಾಜೇಶ್ ಖನ್ನಾ

ಮೊನ್ನೆ ರಾಜೇಶ್ ಖನ್ನಾ ಅಗಲಿದಾಗ ನನ್ನ ಕಣ್ಣಲ್ಲಿ ತಂತಾನೇ ನೀರು ತುಂಬಿಕೊಂಡಿತು. ಆ ಕ್ಷಣ ಅಳು ತಡೆಯಲಾಗಲಿಲ್ಲ. ನಾನೂ ನಿರ್ಮಾಣದಲ್ಲಿ ಪಾಲುದಾರನಾಗಿದ್ದ ಒಂದು ಹಿಂದಿ ಚಿತ್ರದಲ್ಲಿ ನಟಿಸಿದ್ದ ರಾಜೇಶ್ ಖನ್ನಾ ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ತುಂಬಾ ಹೊತ್ತು ಮಾತನಾಡಿದ್ದೇನೆ. ಅವರ ಬಗೆಗೆ ಇದ್ದ ನನ್ನ ಅಭಿಮಾನವನ್ನು ಹಂಚಿಕೊಂಡಿದ್ದೇನೆ. ಅವರ ಸರಳತೆ ಕಂಡು ಅಚ್ಚರಿಗೊಂಡಿದ್ದೇನೆ.`ಮೇಯರ್ ಮುತ್ತಣ್ಣ~ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲೇ ರಾಜೇಶ್ ಖನ್ನಾ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದರು. ಬಾಲಿವುಡ್ ಕಂಡ ಮೊದಲ ಸೂಪರ್ ಸ್ಟಾರ್ ಅವರು. ಚೆಲುವ. ಸುರಸುಂದರಾಂಗ. `ನಜರಾನಾ~, `ಹಮ್‌ಶಕಲ್~ ಸೇರಿದಂತೆ ಅನೇಕ ಚಿತ್ರಗಳಿಗೆ ಫೈನಾನ್ಸ್ ಮಾಡಿದ್ದ ಪ್ರಭುದಾಸ್ ಗುರುಮುಖ್ ಸಿಂಗ್ ಎಂಬುವರ ತಮ್ಮನ ಮಕ್ಕಳು ನನಗೆ ಪರಿಚಯವಿದ್ದರು.ಬಿಹಾರಿಲಾಲ್ ಎಂಬ ಸಂಸ್ಥೆ ಅವರದ್ದು. ಬೆಂಗಳೂರಿನಲ್ಲಿ ಆ ಕಾಲದಲ್ಲಿ ದೊಡ್ಡ ವಿತರಕ ಎನಿಸಿಕೊಂಡಿದ್ದ ಮಾಂಡ್ರೆ ನನ್ನನ್ನು ಅವರಿಗೆ ಪರಿಚಯಿಸಿದ್ದು. `ಕರ್ನಾಟಕದ ದೊಡ್ಡ ನಿರ್ಮಾಪಕ~ ಎಂದು ಆಗ ಅವರು ನನ್ನನ್ನು ಪರಿಚಯಿಸಿದ್ದರು. ನನ್ನ ಬಗ್ಗೆ ಬಿಹಾರಿಲಾಲ್ ಸಂಸ್ಥೆಯವರು ತುಂಬಾ ಅಭಿಮಾನ ಇಟ್ಟುಕೊಂಡಿದ್ದರು. ನಾನು ಯಾವುದೇ ಚಿತ್ರ ಮಾಡಿದರೂ ಫೈನಾನ್ಸ್‌ಗೆ ಇಲ್ಲ ಎನ್ನಲಿಲ್ಲ. ಯಾವಯಾವ ಹಂತದಲ್ಲಿ ಎಷ್ಟೆಷ್ಟು ಹಣ ಬಿಡುಗಡೆ ಮಾಡಬೇಕು ಎಂದು ನೇರವಾಗಿ ವ್ಯವಹಾರದ ಮಾತನಾಡುತ್ತಿದ್ದರು.ಮದ್ರಾಸ್‌ನಲ್ಲಿ ಅದು ನನ್ನ ಎರಡನೇ ಇನಿಂಗ್ಸ್. 1980ರ ದಶಕದ ಆರೇಳು ವರ್ಷ ಟಿ.ನಗರದ ಮೆಲೋನಿ ರಸ್ತೆಯಲ್ಲಿದ್ದ ನನ್ನ ಭವ್ಯವಾದ ಮನೆಯಲ್ಲಿ ಕಲರವ. 180 ಅಡಿ ಅಗಲ. 120 ಅಡಿ ಉದ್ದದ ಮನೆ ಅದು. ಆರು ಅಂತಸ್ತುಗಳಿದ್ದವು. ದ್ವಾರಕೀಶ್ ಬೋರ್ಡಿಂಗ್ ಅಂಡ್ ಲಾಡ್ಜಿಂಗ್ ಎಂದು ನಿಸ್ಸಂಶಯವಾಗಿ ಕರೆಯಬಹುದಾದಷ್ಟು ವಿಶಾಲವಾಗಿತ್ತು.ಜೀವನದಲ್ಲಿ ಎಲ್ಲಕ್ಕಿಂತ ಶ್ರೇಷ್ಠವಾದದ್ದು ಅನ್ನದಾನವಂತೆ. ನನ್ನ ಹೆಂಡತಿ ಅಂಬುಜಾ ಅದನ್ನು ಪರಿಪಾಲಿಸುತ್ತಿದ್ದಳು.ನಮ್ಮ ಮನೆಯಲ್ಲಿ ಆಗುತ್ತಿದ್ದ ಸಿನಿಮಾ ಚರ್ಚೆಗಳಿಗೆಲ್ಲಾ ಅವಳು ಮಾಡಿದ ಅಡುಗೆಯ ಸಾಥ್. ಹೀಗೇ ನಮ್ಮ ಮನೆಯಲ್ಲಿ ಮಾತನಾಡುವಾಗ ಕೆ.ಸಿ.ಫಿಲ್ಮ್ಸ್ (ಕೋವೆ ಚೆಳಿಯನ್) ಸಂಸ್ಥೆಯವರು `ಶ್ರೀವಾರಿ ಮುಚ್ಚಟಲು~ ಎಂಬ ತೆಲುಗು ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡುವ ಪ್ರಸ್ತಾಪ ಎತ್ತಿದರು. ನಾಗೇಶ್ವರರಾವ್ ಮಾಡಿದ್ದ `ಪ್ರೇಮಾಭಿಷೇಕಂ~ ತೆಲುಗಿನಲ್ಲಿ ಸೂಪರ್ ಡೂಪರ್ ಹಿಟ್ ಆದಮೇಲೆ ಅದು ತಮಿಳಲ್ಲೂ ರೀಮೇಕ್ ಆಗಿತ್ತು. ಅದನ್ನೇ ಹಿಂದಿಯಲ್ಲಿ ರಾಜೇಶ್ ಖನ್ನಾ ಅವರನ್ನು ಹಾಕಿಕೊಂಡು `ಪ್ರೇಮ್ ನಗರ್~ ಎಂಬ ಸಿನಿಮಾ ತೆಗೆಯಲಾಗಿತ್ತು. ಅದು ಕೂಡ ಸೂಪರ್ ಡೂಪರ್ ಹಿಟ್ ಆಗಿತ್ತು. `ಅಪ್ನಾ ದೇಶ್~, `ಹಾಥಿ ಮೇರಾ ಸಾಥಿ~ ಮೊದಲಾದ ಚಿತ್ರಗಳು ದಕ್ಷಿಣ ಭಾರತದಲ್ಲಿಯೂ ಯಶಸ್ಸು ಗಳಿಸಿದ್ದವು.ಹಾಗಾಗಿಯೇ ದಾಸರಿ ನಾರಾಯಣ್ ನಿರ್ದೇಶನದಲ್ಲಿ `ಶ್ರೀವಾರಿ ಮುಚ್ಚಟಲು~ ಚಿತ್ರವನ್ನು ರೀಮೇಕ್ ಮಾಡುವ ಮಾತುಕತೆ ನಡೆದಿತ್ತು. ಕೆ.ಸಿ.ಫಿಲ್ಮ್ಸ್‌ನವರು ನನ್ನನ್ನೂ ಚಿತ್ರದ ಪಾಲುದಾರರನ್ನಾಗಿಸಿಕೊಳ್ಳುವ ಪ್ರಸ್ತಾಪ ಮುಂದಿಟ್ಟರು. ರಾಜೇಶ್ ಖನ್ನಾ ಅವರ ಅಭಿಮಾನಿಯಾಗಿದ್ದ ನಾನು ಹಿಂದುಮುಂದು ಯೋಚಿಸದೆ ಅದಕ್ಕೆ ಒಪ್ಪಿದೆ. ನಾಲ್ವರ ಸಹಭಾಗಿತ್ವದಲ್ಲಿ ಚಿತ್ರ ನಿರ್ಮಾಣವಾಯಿತು. ಚಿತ್ರದ ಹೆಸರು `ಆಶಾ ಜ್ಯೋತಿ~. ಬಪ್ಪಿ ಲಹರಿ ಅದರ ಸಂಗೀತ ನಿರ್ದೇಶಕ. ರಾಜೇಶ್ ಖನ್ನಾ. ರೀನಾ ರಾಯ್, ಟೀನಾ ಮುನಿಮ್ ಮುಖ್ಯ ಭೂಮಿಕೆಯಲ್ಲಿದ್ದರು. 84-85ರ ಮಾತಿದು.ಆಗಲೇ ನನಗೆ ರಾಜೇಶ್ ಖನ್ನಾ ಪರಿಚಯವಾದದ್ದು. ನನ್ನ ಕನ್ನಡ ಚಿತ್ರಗಳ ಚಿತ್ರೀಕರಣದಲ್ಲಿ ತುಂಬಾ ಬ್ಯುಸಿಯಾಗಿದ್ದರಿಂದ ಆ ಚಿತ್ರದ ಶೂಟಿಂಗ್‌ಗೆ ಯಾವಾಗಲೂ ಹೋಗಲು ಆಗುತ್ತಿರಲಿಲ್ಲ. ಆದರೆ, ಪಾರ್ಟಿಗಳಿಗೆ ಮಾತ್ರ ತಪ್ಪಿಸುತ್ತಿರಲಿಲ್ಲ. ಅಲ್ಲೆಲ್ಲಾ ರಾಜೇಶ್ ಖನ್ನಾ ಒಡನಾಟ ನನಗಿತ್ತು.ಅವರು ಎರಡು ಮೂರು ಸಲ ನಮ್ಮ ಮನೆಯಲ್ಲಿ ನಡೆದ ಪಾರ್ಟಿಗಳಿಗೆ ಬಂದಿದ್ದರು. ಟೀನಾ ಮುನಿಮ್ ಕೂಡ ಅವರ ಜೊತೆ ಬಂದಿದ್ದರು. ಎಲ್ಲರೂ ವಿಸ್ಕಿಗೆ ಸೋಡಾ, ನೀರು ಬೆರೆಸಿಕೊಂಡು ಕುಡಿದರೆ, ರಾಜೇಶ್ ಖನ್ನಾ ಸಾರು ಹಾಕಿಕೊಂಡು ಕುಡಿಯುತ್ತಿದ್ದರು. `ಯೇ ಬಹುತ್ ಅಚ್ಛಾ ಟೇಸ್ಟ್ ಹೈ~ (ಇದರ ರುಚಿ ತುಂಬಾ ಚೆನ್ನಾಗಿದೆ) ಎನ್ನುತ್ತಿದ್ದರು. ಅಂಬುಜಾ ಮಾಡಿದ ಸಾರೆಂದರೆ ಅವರಿಗೆ ಅಚ್ಚುಮೆಚ್ಚು.ಕಾಶ್ಮೀರದಲ್ಲಿ ಶೂಟಿಂಗ್ ನಡೆದಾಗ ನನಗೆ ಬಿಡುವಿತ್ತು. ಹಾಗಾಗಿ ನನ್ನ ಮಕ್ಕಳಾದ ಸಂತೋಷ, ಯೋಗೀಶ, ಗಿರೀಶ ಅವರನ್ನೂ ಅಂಬುಜಾಳನ್ನೂ ಕರೆದುಕೊಂಡು ಅಲ್ಲಿಗೆ ಹೋದೆ. ಒಂಬತ್ತು ದಿನ ಅಲ್ಲಿ ಇದ್ದೆವು. ನಿತ್ಯ ಶೂಟಿಂಗ್‌ಗೆ ಹೋಗುತ್ತಿದ್ದೆ. ರಾಜೇಶ್ ಖನ್ನಾ ಜೊತೆ ಹೆಚ್ಚು ಮಾತನಾಡಲು ನನಗೆ ಹೆಚ್ಚು ಅವಕಾಶ ಸಿಕ್ಕಿದ್ದೇ ಆಗ.ಮೊದಮೊದಲು ನಾನು ಅವರ ಅಭಿಮಾನಿಯಂತೆಯೇ ಮಾತನಾಡಿದೆ. ಮೈಸೂರು ವುಡ್‌ಲ್ಯಾಂಡ್ಸ್, ಬೆಂಗಳೂರಿನ ಸಂತೋಷ್- ಸಂಗಮ್‌ನಲ್ಲಿ ಅವರ ಚಿತ್ರಗಳನ್ನು ನೋಡಿದ ನೆನಪುಗಳನ್ನು ಪುಟ್ಟ ಹುಡುಗನಂತೆ ಅವರೆದುರು ಹಂಚಿಕೊಂಡಿದ್ದೆ. ಅವರು ನನ್ನೆಲ್ಲಾ ಮಾತುಗಳನ್ನೂ ಸಂಯಮದಿಂದ ಕೇಳುತ್ತಿದ್ದರು. ಕನ್ನಡ ಚಿತ್ರಗಳ ಸ್ಥಿತಿಗತಿಯ ಕುರಿತು ಚರ್ಚಿಸುತ್ತಿದ್ದರು.ಹಿಂದಿ ಚಿತ್ರಗಳ ಚಿತ್ರೀಕರಣಕ್ಕೆ ಸಾಕಷ್ಟು ತಡವಾಗಿ ಬರುತ್ತಾರೆ ಎಂಬ ಆರೋಪ ರಾಜೇಶ್ ಖನ್ನಾ ಅವರ ಮೇಲಿತ್ತು. ಆದರೆ, ನಮ್ಮ ಸಿನಿಮಾ ವಿಷಯದಲ್ಲಿ ಅವರು ಹಾಗೆ ಮಾಡಲಿಲ್ಲ. ಸರಿಯಾದ ಸಮಯಕ್ಕೇ ಶೂಟಿಂಗ್‌ಗೆ ಬರುತ್ತಿದ್ದರು. ಹಾಡುಗಳನ್ನು ಪ್ರಸ್ತುತಪಡಿಸುವಲ್ಲಿ ಅವರದ್ದು ವಿಭಿನ್ನ ಶೈಲಿ. ಶಮ್ಮಿ ಕಪೂರ್ ಮೈ ಕೈ ಆಡಿಸುತ್ತಾ ಹೆಚ್ಚು ಕುಣಿಯುತ್ತಿದ್ದ ಆ ಸಂದರ್ಭದಲ್ಲಿ ರಾಜೇಶ್ ತಮ್ಮದೇ ಶೈಲಿಯನ್ನು ಕಂಡುಕೊಂಡಿದ್ದರು.ಈಗಿನಂತೆ ಆಗ ಡಾನ್ಸ್ ಮಾಸ್ಟರ್ಸ್‌ ಇರಲಿಲ್ಲ. ಹಾಡುಗಳಲ್ಲಿ ತಮ್ಮ ದೇಹಭಾಷೆಯನ್ನು ನಾಯಕರೇ ತಿದ್ದಿಕೊಳ್ಳಬೇಕಿತ್ತು. ನಿರ್ದೇಶಕರಿಗೆ ಅವರ ಸಾಮರ್ಥ್ಯದ ಅರಿವಿರಬೇಕಿತ್ತು. ಒಂದೊಂದು ಪಲ್ಲವಿಯನ್ನು ಒಂದೇ ಶಾಟ್‌ನಲ್ಲಿ ತೆಗೆಯುತ್ತಿದ್ದರು. ಶಮ್ಮಿ ಕಪೂರ್, ರಾಜೇಶ್ ಖನ್ನಾ ಇಬ್ಬರಿಗೂ ಹಾಡುಗಳನ್ನು ತಮ್ಮದೇ ಶೈಲಿಗೆ ಒಗ್ಗಿಸಿಕೊಳ್ಳುವ ಜಾಣ್ಮೆ ಇತ್ತು. ಹಾಡಿನ ಎಲ್ಲಾ ಭಾವ, ದೇಹಭಾಷೆಯನ್ನು ತಾವೇ ಅಳವಡಿಸಿಕೊಂಡು ಅಭಿನಯಿಸುತ್ತಿದ್ದರು.ರಾಜೇಶ್ ಖನ್ನಾ ಹುಟ್ಟಿದ್ದು 1942ರಲ್ಲಿ. ನಾನು ಹುಟ್ಟಿದ್ದೂ ಅದೇ ಇಸವಿಯಲ್ಲಿ. ಅವರು ಡಿಸೆಂಬರ್‌ನಲ್ಲಿ ಹುಟ್ಟಿದ್ದು, ನಾನು ಆಗಸ್ಟ್‌ನಲ್ಲಿ. ನನಗಿಂತ ಅವರು ಮೂರು ತಿಂಗಳು ಚಿಕ್ಕವರು. ಅವರು 27ನೇ ವಯಸ್ಸಿನಲ್ಲಿ ಸೂಪರ್ ಸ್ಟಾರ್ ಆದರು. ನಾನು ಆ ವಯಸ್ಸಿನಲ್ಲಿ ಸಿನಿಮಾ ನಿರ್ಮಾಣಕ್ಕೆ ಕೈಹಾಕಿದೆ. ರಾಜೇಶ್ ಖನ್ನಾ ಇಲ್ಲದೆ ಆರೇಳು ವರ್ಷ ಬಾಲಿವುಡ್ ಇರಲೇ ಇಲ್ಲ. ಅವರು ಅಷ್ಟೂ ವರ್ಷ ಗೆಲ್ಲುವ ಕುದುರೆಯಾಗಿದ್ದರು. ಸತತವಾಗಿ 15 ಸಿಲ್ವರ್ ಜುಬಿಲಿಗಳನ್ನು ಕೊಟ್ಟ ನಟ ಅವರು.ಯಾರ‌್ಯಾರಿಗೆ ಚಿಕ್ಕ ವಯಸ್ಸಿನಲ್ಲಿ ಯಶಸ್ಸು ಬಂದಿದೆಯೋ ಅವರಿಗೆಲ್ಲಾ ಬದುಕಿನಲ್ಲಿ ಆಮೇಲೆ ತೊಂದರೆಯಾಗಿದೆ ಎಂಬಂಥ ಅನೇಕ ಉದಾಹರಣೆಗಳನ್ನು ನಾನು ಕಂಡಿದ್ದೇನೆ.ಅನೇಕರ ಜೀವನಚರಿತ್ರೆಗಳನ್ನು ಓದಿದಾಗ, ಯಾರಿಂದಲೋ ಕೇಳಿ ತಿಳಿದಾಗ ಈ ವಿಷಯ ಗೊತ್ತಾಗಿದೆ. 1984ರ ನಂತರ 16 ವರ್ಷ ನಾನೂ ಕಷ್ಟಪಟ್ಟೆ. ಒಂದು ರೀತಿಯಲ್ಲಿ ಆಗ ನಾನು `ವಾಶೌಟ್~ ಆದೆ ಎಂದೇ ಹೇಳಬೇಕು. ಅದೇ ಹೊತ್ತಿಗೆ ರಾಜೇಶ್ ಖನ್ನಾ ಚಿತ್ರಬದುಕೂ ಕುಸಿದುಹೋಗಿತ್ತು.

 

85ರ ನಂತರ ಅವರನ್ನು ಕೇಳುವವರೇ ಇರಲಿಲ್ಲ. ಅವರ `ಆಶೀರ್ವಾದ್~ ಮನೆ ಬಿಕೋ ಎನ್ನುತ್ತಿತ್ತು. ಕಾರುಗಳಿಂದ, ನಿರ್ಮಾಪಕರಿಂದ, ಚಿತ್ರೋದ್ಯಮದ ಅನೇಕ ಗಣ್ಯರಿಂದ ತುಂಬಿರುತ್ತಿದ್ದ ಅವರ ಮನೆ ಭಣಗುಡುತ್ತಿತ್ತು.ಹತ್ತು ಸಾವಿರ ಅರ್ಜಿಗಳನ್ನು ಹಾಕಿದ್ದ ನಟನಾ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ರಾಜೇಶ್ ಖನ್ನಾ ಯಾವ ಗಾಡ್‌ಫಾದರ್ ಇಲ್ಲದೆ ಅಷ್ಟೆತ್ತರ ಬೆಳೆದರು. ಯುನೈಟೆಡ್ ಪ್ರೊಡ್ಯೂಸರ್ಸ್‌ ಅಸೋಸಿಯೇಷನ್ ಹೊಸಬರನ್ನು ಹುಡುಕುವ ಪ್ರಕ್ರಿಯೆಯಲ್ಲಿ ಸೋಸಿ ಆರಿಸಿದ ನಟ ಅವರು.

ಹತ್ತು ಸಾವಿರ ಸ್ಪರ್ಧಿಗಳನ್ನು ಹಿಂದಿಕ್ಕಿ ನಟನಾಗುವುದೆಂದರೆ ತಮಾಷೆಯ ಮಾತಲ್ಲ. ಅಂಥ ನಟನ ಬದುಕು ಕೊನೆಕೊನೆಗೆ ಕಷ್ಟಗಳ ಸರಮಾಲೆಯಾಯಿತು. ಅವರು ಮತ್ತೆ ಚಿತ್ರರಂಗಕ್ಕೆ ಬರಲೇ ಇಲ್ಲ. ರಾಘವೇಂದ್ರ ಸ್ವಾಮಿಯ ಕೃಪೆಯಿಂದ ನಾನು ಹದಿನಾರು ವರ್ಷ ಕಷ್ಟ ಅನುಭವಿಸಿದ ಮೇಲೆ ಮತ್ತೆ ಚಿತ್ರಗಳನ್ನು ಮಾಡತೊಡಗಿದೆ. ಬಹುಶಃ ಅವರಿಗೂ ಚಿತ್ರ ನಿರ್ಮಿಸುವ ಶಕ್ತಿಯನ್ನು ಭಗವಂತ ಕೊಟ್ಟಿದ್ದರೆ ಅವರ ಕೊನೆಗಾಲ ಇನ್ನೂ ಚೆನ್ನಾಗಿರುತ್ತಿತ್ತು.ನಮ್ಮ `ಆಶಾಜ್ಯೋತಿ~ ಚಿತ್ರ ಎಂಟು ತಿಂಗಳಲ್ಲಿ ಸಿದ್ಧವಾಯಿತು. ನಾನು ಹಾಕಿದ ದುಡ್ಡಿನ ಎಷ್ಟೋ ಪಾಲು ವಾಪಸ್ ಬರಲಿಲ್ಲವೆಂಬುದು ಬೇರೆ ಮಾತು. ಆದರೆ, ರಾಜೇಶ್ ಖನ್ನಾ ಅವರಂಥ ಮಹಾನ್ ನಟರ ಚಿತ್ರವೊಂದನ್ನು ನಾನೂ ನಿರ್ಮಿಸಿದೆ ಎಂಬ ಹೆಮ್ಮೆಯಂತೂ ನನ್ನದಾಯಿತು.

 

 ಮುಂದಿನ ವಾರ: ನನ್ನ ಮದುವೆ,  ನನ್ನ ಸಿನಿಮಾ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.