ಸೋಮವಾರ, ಜನವರಿ 20, 2020
29 °C

ಪಂಚರಾಜ್ಯ ಫಲಿತಾಂಶದತ್ತ ಎಲ್ಲರ ಕಣ್ಣು

ಹೊನಕೆರೆ ನಂಜುಂಡೇಗೌಡ Updated:

ಅಕ್ಷರ ಗಾತ್ರ : | |

ಪಂಚರಾಜ್ಯ ಫಲಿತಾಂಶದತ್ತ ಎಲ್ಲರ ಕಣ್ಣು

‘ಸೆಮಿಫೈನಲ್‌ ಚುನಾವಣೆ’ ಬಹುತೇಕ ಅಂತಿಮ ಘಟ್ಟ ತಲುಪಿದೆ. ಛತ್ತೀಸ­ಗಡ, ಮಧ್ಯಪ್ರದೇಶ, ರಾಜಸ್ತಾನದಲ್ಲಿ ಮತ­ದಾನ ಮುಗಿದಿದೆ. ದೆಹಲಿ, ಮಿಜೋರಾಂ ಚುನಾ­ವಣೆ ಮಾತ್ರ ಉಳಿದಿದೆ. ಡಿಸೆಂಬರ್‌ 8ರಂದು ಹೊರ ಬರುವ ಫಲಿತಾಂಶ ರಾಜ­ಕೀಯ ಪಕ್ಷಗಳ ಎದೆ ಬಡಿತ ಹೆಚ್ಚಿಸಿದೆ.ರಾಜಸ್ತಾನ, ದೆಹಲಿ ಮತ್ತು ಮಿಜೋರಾಂ­ನಲ್ಲಿ ಇರುವುದು ಕಾಂಗ್ರೆಸ್‌ ಸರ್ಕಾರ. ಛತ್ತೀಸಗಡ ಹಾಗೂ ಮಧ್ಯಪ್ರದೇಶ ಬಿಜೆಪಿ ಹಿಡಿತದಲ್ಲಿದೆ. ಉಭಯ ಪಕ್ಷಗಳಿಗೂ ಇದು ಅತ್ಯಂತ ಮಹತ್ವದ ಚುನಾವಣೆ. ನಾಲ್ಕೈದು ತಿಂಗಳಲ್ಲಿ ಲೋಕಸಭೆ ಚುನಾವಣೆ ಬರಲಿದೆ. ಸೆಮಿಫೈನಲ್‌ನಲ್ಲಿ ಹೆಚ್ಚು ರಾಜ್ಯಗಳನ್ನು ಗೆದ್ದವರ ನೈತಿಕ ಶಕ್ತಿ ಸಹಜವಾಗೇ ಇಮ್ಮಡಿಗೊಳ್ಳಲಿದೆ.ಪ್ರಮುಖ ಪಕ್ಷಗಳ ಮುಂದೆ ಈಗಿರುವುದು ಎರಡು ವಿಚಾರ ಮಾತ್ರ. ಒಂದು, ತಮ್ಮ ಪಕ್ಷದ ಆಡಳಿತ ಇರುವ ರಾಜ್ಯಗಳನ್ನು  ಉಳಿಸಿಕೊಳ್ಳು­ವುದು. ಮತ್ತೊಂದು, ವಿರೋಧಿಗಳ ‘ಸಾಮ್ರಾಜ್ಯ’­ಕ್ಕೆ ಮುತ್ತಿಗೆ ಹಾಕುವುದು. ಈ ಕೆಲಸವನ್ನು ಎರಡೂ ಪಕ್ಷಗಳು ಮೂರು ರಾಜ್ಯಗಳಲ್ಲಿ ಭರ್ಜರಿಯಾಗಿ ಮಾಡಿವೆ. ಆದರೆ, ಮತದಾರರ ಒಲವು– ನಿಲುವು ಏನೆಂದು ಮತಯಂತ್ರದಲ್ಲಿ ನಿಗೂಢವಾಗಿದೆ.ಬಿಜೆಪಿ ಛತ್ತೀಸಗಡದಲ್ಲಿ ರಮಣ್‌ ಸಿಂಗ್‌, ಮಧ್ಯ ಪ್ರದೇಶದಲ್ಲಿ ಶಿವರಾಜ್‌ ಸಿಂಗ್‌ ಚೌಹಾಣ್‌, ರಾಜಸ್ತಾನದಲ್ಲಿ ಮಾಜಿ ಮುಖ್ಯ­ಮಂತ್ರಿ ವಸುಂಧರಾ ರಾಜೆ ಹಾಗೂ ದೆಹಲಿ­ಯಲ್ಲಿ ಹರ್ಷವರ್ಧನ್‌  ಅವರನ್ನು ಮುಖ್ಯ­ಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿದೆ. ಕಾಂಗ್ರೆಸ್‌ ಈ ಐದೂ ರಾಜ್ಯಗಳಲ್ಲಿ ಯಾರನ್ನೂ ಮುಖ್ಯ­ಮಂತ್ರಿ ಅಭ್ಯರ್ಥಿ ಎಂದು ಹೆಸರಿಸಿಲ್ಲ. ಮೊದ­ಲಿಂದಲೂ ಇದನ್ನು ಕಾಂಗ್ರೆಸ್‌ ಹೈಕಮಾಂಡ್‌ ಪಾಲಿಸಿಕೊಂಡು ಬಂದಿದೆ.ಚುನಾವಣೆಗೆ ಮೊದಲು ಕಾಂಗ್ರೆಸ್‌ ಯಾರ­ನ್ನಾದರೂ ಮುಖ್ಯಮಂತ್ರಿ ಎಂದು ಬಿಂಬಿಸಿದರೆ ಅದರ ಕಥೆ ಮುಗಿದಂತೆ. ಈ ಪಕ್ಷವನ್ನು ಸೋಲಿಸಲು ಹೊರಗಿನವರು ಬೇಕಾಗುವುದಿಲ್ಲ. ಒಳಗಿನವರೇ ಸಾಕು. ಹೀಗಾಗಿ ಚುನಾವಣೆ ಬಳಿಕ ಶಾಸಕಾಂಗ ಪಕ್ಷವೇ ನಾಯಕರನ್ನು ಆಯ್ಕೆ ಮಾಡುವುದು. ಅಲ್ಲಿಯವರೆಗೂ ಪಕ್ಷ ಸೇಫ್‌.ರಾಜಸ್ತಾನದಲ್ಲಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ದೆಹಲಿಯಲ್ಲಿ ಶೀಲಾ ದೀಕ್ಷಿತ್‌ ಅವರೇ ಚುನಾವಣೆ ನೇತೃತ್ವ ವಹಿಸಿದ್ದಾರೆ. ಇವೆರಡೂ ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೂ ಅವರೇ ಮುಖ್ಯಮಂತ್ರಿ ಆಗುತ್ತಾ­ರೆಂಬ ಗ್ಯಾರಂಟಿ ಇಲ್ಲ. ಆಗಬಹುದು ಅಥವಾ ಬಿಡಬಹುದು. ಆಗಿನ ಪರಿಸ್ಥಿತಿ ಹೇಗಿರುತ್ತದೋ ಏನೋ. ಹೈಕಮಾಂಡ್‌ ಚಿತ್ತ ಯಾರ ಮೇಲೆ ಇರುವುದೋ...ರಾಜಸ್ತಾನದಲ್ಲಿ ಗೆಹ್ಲೋಟ್‌ ಅವರ ಜತೆ ಕೇಂದ್ರ ಸಚಿವ ಸಿ.ಪಿ.ಜೋಷಿ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಿಸಲಾಗಿದೆ. ಮುಖ್ಯ­ಮಂತ್ರಿ ಅವರನ್ನು  ರಾಜ್ಯದಲ್ಲಿ ಟೀಕಿಸುವವರ ಸಂಖ್ಯೆ ಕಡಿಮೆ.  ಹಿಂದುಳಿದ ಮಾಲಿ (ಸೈನಿ) ಸಮಾಜಕ್ಕೆ ಸೇರಿದ ಗೆಹ್ಲೋಟ್‌ ಅವರನ್ನು ಮೇಲ್ವರ್ಗದ ಜಾಟರು, ರಜಪೂತರು ಇಷ್ಟ­ಪಡು­ವುದಿಲ್ಲ. ಅದಕ್ಕೆ ಪ್ರಬಲವಾದ ಕಾರಣವಿದೆ. 1998ರಲ್ಲಿ ಗೆಹ್ಲೋಟ್‌ ಮೊದಲ ಸಲ ಮುಖ್ಯ­ಮಂತ್ರಿ ಆದಾಗ ಜಾಟರ ಅವಕಾಶ ಕಿತ್ತು­ಕೊಂಡರೆಂಬ ಆರೋಪವಿದೆ. ಈ ಕಾರಣಕ್ಕೆ ಮುಖ್ಯಮಂತ್ರಿ, ಜಾಟ್‌ ಸಮಾಜದ ಚಂದ್ರಭಾನ್‌ ಅವರಿಗೆ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಕೊಟ್ಟು ಪಕ್ಕದಲ್ಲೇ ಇಟ್ಟುಕೊಂಡಿರುವುದು.ಚಂದ್ರಭಾನ್‌ ಜಾಟ್‌ ಸಮುದಾಯದ ಪ್ರಬಲ ನಾಯಕರಲ್ಲ. ಝುಂಝುನು ಜಿಲ್ಲೆ­ಯಲ್ಲಿ ಅವರೇ ಗೆಲ್ಲುವುದು ಕಷ್ಟ ಎನ್ನುವ ವಾತಾವರಣವಿದೆ. ಗೆಲುವು ಕಷ್ಟ ಎನ್ನುವ ಸತ್ಯ ಅವರಿಗೂ ಗೊತ್ತಿರುವಂತಿದೆ. ಇದರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತಾವು ಮುಖ್ಯಮಂತ್ರಿ ಆಗುವ ಅವಕಾಶವಿದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅವರ ಮಾತನ್ನು ಜನ ನಂಬುವ ಸ್ಥಿತಿಯಲ್ಲಿ ಇಲ್ಲ.ಗೆಹ್ಲೋಟ್‌ ಸಜ್ಜನ. ಮೃದು ಸ್ವಭಾವ­ದವರು. ಜನರಿಗೆ ಸುಲಭವಾಗಿ ಸಿಗುತ್ತಾರೆ. ಅಧಿಕಾರ ನೆತ್ತಿಗೇರಿಲ್ಲ. ಹೆಸರು ಕೆಡಿಸಿಕೊಂಡಿಲ್ಲ. ಆದರೆ, ರಾಜ್ಯದಲ್ಲಿ ಇರುವ ಆಡಳಿತ ವಿರೋಧಿ ಅಲೆ ಕಾಂಗ್ರೆಸ್‌ ಓಟಕ್ಕೆ ಕಡಿವಾಣ ಹಾಕಿದೆ. ಮುಖ್ಯಮಂತ್ರಿ ಅವರಿಗೆ ಆಡಳಿತದ ಮೇಲೆ ಹಿಡಿತವಿಲ್ಲ. ಅಧಿಕಾರಿಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಬದಲು ಅವರ ಮೇಲೆ ಹೆಚ್ಚು ಅವಲಂಬಿತವಾಗಿದ್ದಾರೆ ಎಂದು ರಾಜಕೀಯ ವಿರೋಧಿಗಳು ಪ್ರಚಾರ ಮಾಡಿದ್ದಾರೆ.ರಾಜ್ಯ ಕಾಂಗ್ರೆಸ್‌ ಸರ್ಕಾರ ಅನೇಕ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿದೆ. ಕೆಲವು ಕಡೆ ಅವುಗಳ ಅನುಷ್ಠಾನ ಸರಿಯಾಗಿ ಆಗಿಲ್ಲ. ಜನ, ಜಾನುವಾರಿಗೆ ಉಚಿತ ಔಷಧ, ವೃದ್ಧಾಪ್ಯ ವೇತನ, ಕಡಿಮೆ ದರದಲ್ಲಿ ಅಕ್ಕಿ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದೆ. ಮೊದಲ ಮೂರ್ನಾಲ್ಕು ವರ್ಷ ಸುಮ್ಮನಿದ್ದ ಸರ್ಕಾರ ಕಡೇ ಗಳಿಗೆಯಲ್ಲಿ ಸಕ್ರಿಯವಾಗಿದೆ. ಈ ಜನಪರ ಕಾರ್ಯಕ್ರಮಗಳು ಗೆಹ್ಲೋಟ್‌ ಅವರ ಬೆಂಬಲಕ್ಕೆ ಬರುವ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸುತ್ತಾರೆ.ಮಾಜಿ ಮುಖ್ಯಮಂತ್ರಿ ವಸುಂಧರಾ  ಸಂಪೂರ್ಣ ತದ್ವಿರುದ್ಧ. ಅಧಿಕಾರಿಗಳನ್ನು ಹದ್ದು­ಬಸ್ತಿನಲ್ಲಿಡುತ್ತಾರೆ. ಇವರು ಹೇಳಿದಂತೆ ಅವರು ಕೇಳಬೇಕೇ ವಿನಾ ಅವರು ಹೇಳಿದಂತೆ ಕೇಳುವು­ದಿಲ್ಲ. ವಸುಂಧರಾ ರಾಜೆ ಅವರಿಗೆ ‘ಕ್ಲೀನ್‌ ಇಮೇಜ್‌’ ಇರದಿದ್ದರೂ ಜನ ಅವರ ಆಡಳಿತ ನೆನಪಿಸಿಕೊಳ್ಳುತ್ತಾರೆ. ರಾಜಮನೆತನದ  ಮಹಿಳೆ     ಎಂಬ ಭಕ್ತಿ– ಗೌರವ ಬೇರೆ. ಅವರೊಬ್ಬರೇ ಅಲ್ಲ, ಎಲ್ಲ ರಾಜಮನೆತನದ ಜನರ ಬಗೆಗೂ ನಮ್ಮ ಜನ ಇದೇ ಭಾವನೆ ಹೊಂದಿದ್ದಾರೆ.ರಾಜಸ್ತಾನದಲ್ಲಿ ಜಾಟರು ಪ್ರಬಲರು. ರಜಪೂತರು ಹೆಚ್ಚಿದ್ದಾರೆ. ಹಿಂದುಳಿದವರು, ಮುಸ್ಲಿಮರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿದ್ದಾರೆ. ಇಲ್ಲಿ ಪಕ್ಷಕ್ಕಿಂತ ಜಾತಿ ಮುಖ್ಯ. ಚುನಾವಣೆ ವಿಷಯಾಧಾರಿತ ಆಗಿರುವುದಕ್ಕಿಂತ ವ್ಯಕ್ತಿ ಆಧಾರಿತವಾಗೇ ನಡೆಯುವುದು. ಹೀಗಾ­ಗಿಯೇ ಕೇಂದ್ರ ಸರ್ಕಾರದ ಭ್ರಷ್ಟಾಚಾರ ಹಗ­ರಣ ಮತ್ತು ಬೆಲೆ ಏರಿಕೆ ಸಮಸ್ಯೆ ಇಲ್ಲಿ ಗೌಣ.ಮಧ್ಯ ಪ್ರದೇಶದಲ್ಲಿ ಗುಂಪುಗಾರಿಕೆಗೆ ಸಿಕ್ಕಿ ತತ್ತರಿಸಿರುವ ಕಾಂಗ್ರೆಸ್‌,  ಗ್ವಾಲಿಯರ್‌ ರಾಜ­ಮನೆ­ತನದ ಜೋತಿರಾದಿತ್ಯ ಸಿಂಧಿಯಾ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ವಹಿಸಿದೆ.  ದಿಗ್ವಿಜಯ್‌ ಸಿಂಗ್‌, ಕಮಲನಾಥ್‌, ಅಜಯ್‌ ಸಿಂಗ್‌, ಸುರೇಶ್‌ ಪಚೌರಿ ಹಾಗೂ ಕಾಂತಿ­ಲಾಲ್‌ ಭುರಿಯಾ ಗುಂಪುಗಳು ಅವರ­ವರ ಪ್ರಾಂತ್ಯ­ಗಳಲ್ಲಿ ಸಕ್ರಿಯವಾಗಿವೆ. ಕಡಿ­ವಾಣ ಹಾಕಲು ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ ಜ್ಯೋತಿ­ರಾದಿತ್ಯ ಅವರಿಗೆ ಹೊಣೆಗಾರಿಕೆ ವಹಿಸಿದೆ.ಹೈಕಮಾಂಡ್‌ ಕಿವಿಮಾತು ಹೇಳಿರುವುದ­ರಿಂದ ಕಳೆದ ಕೆಲವು ದಿನಗಳಿಂದ ಮಧ್ಯ ಪ್ರದೇಶದಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಿರುವಂತೆ ಮೇಲ್ನೋಟಕ್ಕೆ ಕಂಡು­ಬಂದರೂ ಒಳಗೊಳಗೆ ಪರಸ್ಪರರ ಮೇಲೆ ಕತ್ತಿ ಮಸೆಯುತ್ತಿದ್ದಾರೆ. ರಾಜ್ಯದ ಜನ ಮಾತ್ರ ಜ್ಯೋತಿರಾದಿತ್ಯ ಅವರ ಮೇಲೆ ಬಹಳಷ್ಟು ಭರವಸೆ ಹೊಂದಿದ್ದಾರೆ.ಹಿರಿಯ ನಾಯಕ ದಿವಂಗತ ಮಾಧವರಾವ್‌ ಸಿಂಧಿಯಾ ಅವರ  ಪುತ್ರ ಜ್ಯೋತಿರಾದಿತ್ಯ ಗ್ವಾಲಿ­ಯರ್‌ ಭಾಗದಲ್ಲಿ ಮಾತ್ರವಲ್ಲ, ಇಡೀ ರಾಜ್ಯ­ದಲ್ಲಿ ಓಡಾಡಿದ್ದಾರೆ. ಸಿಂಧಿಯಾ ಕುಟುಂಬ ರಾಜ್ಯಕ್ಕೆ ಸಾಕಷ್ಟು ಕೆಲಸ ಮಾಡಿದೆ ಎಂಬ ಅಭಿಪ್ರಾಯವಿದೆ. ಕಾಂಗ್ರೆಸ್‌ ಮೊದಲೇ  ಜ್ಯೋತಿರಾದಿತ್ಯ ಅವರನ್ನು ಬಿಂಬಿಸುವ ಕೆಲಸ ಮಾಡಬೇಕಿತ್ತು. ಆಗ ಪಕ್ಷಕ್ಕೆ ಹೆಚ್ಚು ಅನುಕೂಲವಾಗುತ್ತಿತ್ತು ಎಂಬ ಮಾತು  ಕೇಳಿ ಬರುತ್ತಿದೆ. ಸಿಂಧಿಯಾ ಅವ­ರಿಂದಾಗಿ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‌ ಸೀಟುಗಳನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ.ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ನೆರಳಿನಲ್ಲೇ ಬಿಜೆಪಿ ಹೆಜ್ಜೆ ಹಾಕಿದೆ. ಮುಖ್ಯಮಂತ್ರಿ ಮೇಲೆ ವೈಯಕ್ತಿಕವಾಗಿ ಆರೋಪಗಳಿಲ್ಲ. ಕುಟುಂಬದ ಸದಸ್ಯರು ಮರಳು ಮತ್ತು ರಿಯಲ್‌ ಎಸ್ಟೇಟ್‌ ಮಾಫಿಯಾ ಜತೆ ಸಂಬಂಧ ಹೊಂದಿದ್ದಾರೆಂಬ ಆರೋಪವಿದೆ. ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಪದೇ ಪದೇ ಈ ಆರೋಪ ಮಾಡಿದ್ದಾರೆ. ಚೌಹಾಣ್‌ ಅವರ ಸಂಪುಟ ಸಚಿವರ ಮೇಲೂ ಭ್ರಷ್ಟಾಚಾರ ದೂರುಗಳಿವೆ. ದೂರು ಕುರಿತು ಲೋಕಾಯುಕ್ತ  ತನಿಖೆ ನಡೆಸುತ್ತಿದೆ.ಮಧ್ಯಪ್ರದೇಶ ಬಿಜೆಪಿಯೊಳಗೂ ಬಂಡಾಯ­ವಿದೆ. 43 ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕ­ರಿಸಲಾಗಿದೆ. ಈ ಶಾಸಕರು ಬಿಜೆಪಿಗೆ ತಲೆ­ನೋವು ಉಂಟು ಮಾಡಿದ್ದಾರೆ.  ಆದರೂ ಮಧ್ಯಪ್ರದೇಶದಲ್ಲಿ ಚೌಹಾಣ್‌ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಿದ್ದಾರೆ. ಅವರಿಗಿರುವ ಒಂದೇ ಒಂದು ಪ್ರತಿಕೂಲ ಅಂಶ ಆಡಳಿತ ವಿರೋಧಿ ಅಲೆ. ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳು ಬೆನ್ನಿಗಿವೆ. ಭೇದಭಾವವಿಲ್ಲದೆ ಎಲ್ಲ ಜಾತಿ, ಧರ್ಮದ ಜನರಿಗೂ ಯೋಜನೆ­ಗಳನ್ನು ಜಾರಿ ಮಾಡಿದ್ದಾರೆ.ಛತ್ತೀಸಗಡ ರಮಣ್‌ ಸಿಂಗ್‌ ಮತ್ತು ಶಿವರಾಜ್‌ ಸಿಂಗ್‌ ನಡುವೆ ಹೆಚ್ಚು ವ್ಯತ್ಯಾಸವಿಲ್ಲ. ರಮಣ್‌ ಸಿಂಗ್‌ ಕೂಡಾ ಛತ್ತೀಸಗಡದ ಜನಪ್ರಿಯ ನಾಯಕ. ಅನೇಕ ಜನಪರ ಕಾರ್ಯ­ಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಅವರು ಮುಖ್ಯಮಂತ್ರಿ ಆದ ಮೇಲೆ ಒಂದೇ ಒಂದು ಸಲವೂ ಬಹಿರಂಗವಾಗಿ ಹಿಂದುತ್ವದ ಬಗ್ಗೆ ಮಾತನಾಡಿಲ್ಲ. ಮುಸ್ಲಿಮರ ವಿರುದ್ಧ ಟೀಕೆ ಮಾಡಿಲ್ಲ. ರಾಜ್ಯದ ಜನ ಕೂಡಾ ಜಾತ್ಯತೀತ­ವಾಗಿ ಆಲೋಚಿಸುವವರು. 1984ರ ಬಳಿಕ ಮತೀಯ ಘರ್ಷಣೆ ನಡೆದಿಲ್ಲ. ಬಿಜೆಪಿ ಆಡಳಿತದ ಉಳಿದ  ರಾಜ್ಯಗಳಂತೆ ಛತ್ತೀಸ­ಗಡ­ದಲ್ಲೂ ಬಂಡಾಯ ಇದೆ. ಈ ಬಂಡಾಯ ಕಾಂಗ್ರೆಸ್‌ ಗೆಲುವಿಗೆ ದಾರಿಯಾಗಬಹುದೆಂಬ ಲೆಕ್ಕಾಚಾರ ರಾಜಕೀಯ ವಲಯ­ದಲ್ಲಿದೆ.ಛತ್ತೀಸಗಡದ ಜೀರಂ ಘಾಟಿಯಲ್ಲಿ ಮೇ 25ರಂದು ನಕ್ಸಲರು ಕಾಂಗ್ರೆಸ್‌ ನಾಯಕರನ್ನು ಹತ್ಯೆ ಮಾಡಿದ ಬಳಿಕ ರಾಜ್ಯದಲ್ಲಿ ಒಂದು ರೀತಿ ಶೂನ್ಯತೆ ಆವರಿಸಿದೆ. ಮಾಜಿ ಮುಖ್ಯಮಂತ್ರಿ ಅಜಿತ್‌ ಜೋಗಿ, ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಚರಣದಾಸ್‌ ಮಹಾಂತ. ಎಐಸಿಸಿ ಖಜಾಂಚಿ ಮೋತಿಲಾಲ್‌ ವೋರ ಸೇರಿದಂತೆ ರಾಜ್ಯ ಕಾಂಗ್ರೆಸ್‌ನಲ್ಲಿ  ಬೆರಳೆಣಿಕೆ ನಾಯಕರು ಮಾತ್ರ ಉಳಿದುಕೊಂಡಿದ್ದಾರೆ.

ಈ ಮೂರ್‍ ನಾಲ್ಕು ನಾಯಕರಿಗೆ ಮೂರ್‍ ನಾಲ್ಕು ಗುಂಪು. ಕಾಂಗ್ರೆಸ್‌ ಹೈಕಮಾಂಡ್‌ಗೆ ಅತೀ ಹೆಚ್ಚು ತಲೆ ನೋವಾಗಿ­ರುವುದು ಅಜಿತ್‌ ಜೋಗಿ. ಮಾಜಿ ಮುಖ್ಯ­ಮಂತ್ರಿ ಜೋಗಿ 12 ಕಡೆಗಳಲ್ಲಿ ಬಂಡಾಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಸೋನಿಯಾ, ರಾಹುಲ್‌ ಅವರಿಗೆ ನುಂಗ­ಲಾಗದ ಬಿಸಿ ತುಪ್ಪ. ಅವರನ್ನು ಹದ್ದುಬಸ್ತಿನ­ಲ್ಲಿಡಲು ಕಾಂಗ್ರೆಸ್‌ ಪ್ರಯತ್ನಿಸಿದೆ.ಛತ್ತೀಸಗಡ, ರಾಜಸ್ತಾನ, ಮಧ್ಯ ಪ್ರದೇಶ­ದಲ್ಲಿ ಕಾಂಗ್ರೆಸ್‌ ವೋಟ್‌ ಬ್ಯಾಂಕ್‌ ಅಲುಗಾ­ಡುತ್ತಿದೆ. ಒಂದು ಕಾಲಕ್ಕೆ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರು, ಅಲ್ಪ­ಸಂಖ್ಯಾತರು, ಆದಿವಾಸಿಗಳು ಕಾಂಗ್ರೆಸ್‌ ಪಕ್ಷದ ನಂಬಿಕಸ್ಥ ಮತದಾರರು ಎನ್ನುವ ವಾದವಿತ್ತು. ಈಗದು ಸುಳ್ಳಾಗುತ್ತಿದೆ. ಛತ್ತೀಸಗಡ ಬಸ್ತರ್‌ ಪ್ರಾಂತ್ಯ­ದಲ್ಲಿ ಕಳೆದೆರಡು ಚುನಾವಣೆಯಲ್ಲಿ ಆದಿವಾಸಿ­ಗಳು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಆದಿವಾಸಿ ಸಮುದಾ­ಯದ ಪಾಲು ಶೇಕಡ 33. ಬಸ್ತರ್‌ ಭಾಗದ ಒಟ್ಟು 12 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 2003ರಲ್ಲಿ ಎರಡು ಸ್ಥಾನ ಗೆದ್ದಿತ್ತು.

2008ರಲ್ಲಿ ಕೇವಲ ಒಂದು ಸ್ಥಾನ ಮಾತ್ರ ಸಿಕ್ಕಿತು. ಉಳಿದೆಲ್ಲ ಸ್ಥಾನ ಬಿಜೆಪಿ ಪಾಲಾಯಿತು. ರಾಜಸ್ತಾನದ ಮೇವಾಡ್‌ ಭಾಗದಲ್ಲೂ ಆದಿವಾಸಿಗಳದ್ದೇ ಪ್ರಾಬಲ್ಯ. ಅಲ್ಲೂ ಎರಡು ದಶಕ­ದಿಂದ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಮತ­ದಾ­ರರು ನಿಷ್ಠೆ ಬದಲಿಸುತ್ತಿದ್ದಾರೆ. ಕಾರಣ ಪತ್ತೆ ಹಚ್ಚಿ ಮನೆಯನ್ನು ಭದ್ರಪಡಿಸ­ಬೇಕಾದ ಹೊಣೆ ಕಾಂಗ್ರೆಸ್‌ ನಾಯಕರ ಮೇಲಿದೆ.ರಾಜಸ್ತಾನ, ಛತ್ತೀಸಗಡ ಹಾಗೂ ಮಧ್ಯ ಪ್ರದೇಶದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಅಲೆ ಏನಿಲ್ಲ. ಶಿವ­ರಾಜ್‌ ಸಿಂಗ್‌ ಹಾಗೂ ರಮಣ್‌ ಸಿಂಗ್‌ ಪ್ರಜ್ಞಾ­ಪೂರ್ವಕವಾಗೇ ಮೋದಿ ಅವರಿಗೆ ಹೆಚ್ಚು ಮಹತ್ವ ನೀಡಿಲ್ಲ. ಸಂಘ ಪರಿವಾರ ನಾಯಕರ ಸೂಚನೆ ಹಿನ್ನೆಲೆಯಲ್ಲಿ ಕಾಟಾಚಾರಕ್ಕೆ ಕೆಲವು ಕಡೆ ಮೋದಿ ಅವರಿಗೆ ವೇದಿಕೆ ಕೊಟ್ಟಿದ್ದಾರೆ ಎನ್ನುವ ಸಂಗತಿ ಬಿಜೆಪಿಯೊಳಗೇ ಚರ್ಚೆ ಆಗುತ್ತಿದೆ.ಮೋದಿ ಅವರಿಗೆ ಹೋಲಿಸಿದರೆ ಅವರವರ ರಾಜ್ಯಗಳಲ್ಲಿ ಶಿವರಾಜ್‌ ಸಿಂಗ್‌ ಮತ್ತು ರಮಣ್‌ ಸಿಂಗ್‌ ಅವರೇ ಹೆಚ್ಚು ಜನ­ಪ್ರಿಯರು. ಮಧ್ಯ ಪ್ರದೇಶದಲ್ಲಿ ಶಿವರಾಜ್‌ ಸಿಂಗ್‌ ಚೌಹಾಣ್‌, ಛತ್ತೀಸಗಡದಲ್ಲಿ ರಮಣ್‌ ಸಿಂಗ್‌ ಹ್ಯಾಟ್ರಿಕ್‌ ಬಾರಿಸಿದರೆ ಮೋದಿ ವರ್ಚಸ್ಸು ಕಡಿಮೆ ಆಗಬಹುದೇನೋ ಎನ್ನುವ ಸಣ್ಣ ನಿರೀಕ್ಷೆ, ಆತಂಕವೂ ಬಿಜೆಪಿಯಲ್ಲಿದೆ.ದೆಹಲಿಯಲ್ಲಿ ಕಾಂಗ್ರೆಸ್‌, ಬಿಜೆಪಿ ಹಾದಿಗೆ ಅರವಿಂದ ಕೇಜ್ರಿವಾಲ್‌ ಅವರ ‘ಆಮ್‌ ಆದ್ಮಿ ಪಕ್ಷ’ ಅಡ್ಡಿಯಾಗಿದೆ. ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಹೆಸರು ಕಾಮನ್‌ವೆಲ್ತ್ ಕ್ರೀಡಾಕೂಟದ ಹಗರಣದಲ್ಲಿ ಕೇಳಿಬಂದಿತ್ತು. ಆದರೆ, ಅದು ಗಂಭೀರ ಸ್ವರೂಪ ಪಡೆಯಲಿಲ್ಲ. ಆರೋಪ ಕೇಳಿ ಬಂದಾಗ ತನಿಖೆ ಎದುರಿಸಲು ಸಿದ್ಧ ಎಂದು ಶೀಲಾ ದೀಕ್ಷಿತ್‌ ಹೇಳಿದ್ದರು. ಈಗದು ಇತಿಹಾಸ.ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ  ಕೇಜ್ರಿ­ವಾಲ್‌ ಅವರ ಪಕ್ಷ ಎಷ್ಟು ಸ್ಥಾನ ಪಡೆಯಲಿದೆ. ಯಾವ ಪಕ್ಷಕ್ಕೆ ಹೆಚ್ಚು ಹಾನಿ ಮಾಡಲಿದೆ ಎನ್ನುವುದರ ಮೇಲೆ ಕಾಂಗ್ರೆಸ್‌, ಬಿಜೆಪಿ ಭವಿಷ್ಯ ನಿಂತಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರತಿಕ್ರಿಯಿಸಿ (+)