ಬುಧವಾರ, ಮೇ 19, 2021
22 °C

ಪಶ್ಚಿಮದ ಚಿಂತನೆಯಿಂದ ಸುಧಾರಕನಾದ ಗಾಂಧಿ

ರಾಮಚಂದ್ರ ಗುಹಾ Updated:

ಅಕ್ಷರ ಗಾತ್ರ : | |

ಪಶ್ಚಿಮದ ಚಿಂತನೆಯಿಂದ ಸುಧಾರಕನಾದ ಗಾಂಧಿ

ಮಹಾತ್ಮ ಗಾಂಧಿ ಅವರು 1917ರ ಬೇಸಿಗೆಯಲ್ಲಿ ಚಂಪಾರಣ್‌ನಲ್ಲಿ ಕಳೆದ ದಿನಗಳಿಂದ ಕಲಿತ ಪಾಠಗಳು ಮತ್ತು ಗಳಿಸಿದ ಅನುಭವಗಳ ಬಗ್ಗೆ ಹಿಂದೊಂದು ಅಂಕಣದಲ್ಲಿ ಬರೆದಿದ್ದೆ. ಗಾಂಧಿಯ ಕೆಲಸಗಳನ್ನು ಆಗ ವಿರೋಧಿಸಿದ್ದ ಜನರತ್ತ ಈ ಅಂಕಣ ತನ್ನ ನೋಟವನ್ನು ಹರಿಸುತ್ತದೆ. ಚಂಪಾರಣ್‌ನಲ್ಲಿದ್ದ ಬ್ರಿಟಿಷರು ತಮ್ಮ ಜೀವನದಲ್ಲಿ ಅನಗತ್ಯವಾಗಿ ನಡೆದ ಈ ಮಧ್ಯಪ್ರವೇಶವನ್ನು ಹೇಗೆ ಕಂಡರು?

ಚಂಪಾರಣ್‌ನಲ್ಲಿ ಇಂಡಿಗೊ ಸಸ್ಯಗಳ (ನೀಲಿ ಬಣ್ಣದ ಗಿಡಗಳು) ತೋಟಗಳನ್ನು ಹೊಂದಿದ್ದ ಯುರೋಪಿಯನ್ನರು ಗಾಂಧಿಯ ಕೆಲಸದಿಂದ ನಷ್ಟಕ್ಕೆ ಒಳಗಾದರು. ಪೂರ್ವ ಭಾರತದಲ್ಲಿ ತೋಟಗಳನ್ನು ಮಾಡಿಕೊಂಡಿದ್ದವರು ವಕೀಲರು, ಕ್ರೈಸ್ತ ಪುರೋಹಿತರು ಮತ್ತು ಸೇನಾಧಿಕಾರಿಗಳ ಮಕ್ಕಳು. ಅವರು ಸರ್ಕಾರಿ ಶಾಲೆಗಳಿಗೆ ಹೋದವರು (ವಿಶ್ವವಿದ್ಯಾಲಯ ಮಟ್ಟದ ಶಿಕ್ಷಣ ಪಡೆದವರು ಕಡಿಮೆ). ಭಾರತೀಯ ಆಡಳಿತ ಸೇವೆಯಲ್ಲಿದ್ದ ಜನರಿಗಿಂತ ಇವರ ಸ್ಥಾನ ಬಹಳ ಕೆಳಗಿತ್ತು. ಆದರೆ ಇವರ ಜೀವನದ ಗುಣಮಟ್ಟ ಬಹಳ ಮೇಲಿತ್ತು. ತೋಟಗಳ ವ್ಯವಸ್ಥಾಪಕರಿಗೆ ಸಂಬಳದ ಜತೆಗೆ ಕಾರ್ಖಾನೆಯ ಲಾಭದಲ್ಲಿ ಪಾಲು ಸಿಗುತ್ತಿತ್ತು. ಅವರಿಗೆ ತೈಲ ಮತ್ತು ಇಂಧನ ಉಚಿತವಾಗಿ ದೊರೆಯುತ್ತಿತ್ತು, ಧಾನ್ಯಗಳು ಮತ್ತು ತರಕಾರಿಗಳೂ ಸಾಮಾನ್ಯವಾಗಿ ಉಚಿತವೇ ಆಗಿರುತ್ತಿದ್ದವು. ಈ ಹಳ್ಳಿಗಾಡುಗಳಲ್ಲಿ ಅಪಾರ ಪ್ರಮಾಣದ ವನ್ಯಜೀವಿಗಳಿದ್ದವು. ಬೇಟೆಯಾಡಿದ ಚಿರತೆ ಮತ್ತು ಹುಲಿಗಳು ಇವರಿಗೆ ಪಾರಿತೋಷಕಗಳಾಗಿ ಸಿಕ್ಕರೆ, ತಿನ್ನಲು ಜಿಂಕೆಗಳು ಮತ್ತು ಕಾಡು ಹಕ್ಕಿಗಳು ದೊರಕುತ್ತಿದ್ದವು.

ಜರ್ಮನಿಯಲ್ಲಿ ಸಿಂಥೆಟಿಕ್ ಬಣ್ಣಗಳ ಅಭಿವೃದ್ಧಿಯಾದ ಕಾರಣ 19ನೇ ಶತಮಾನದ ಕೊನೆಯ ಹೊತ್ತಿಗೆ ನೈಸರ್ಗಿಕವಾದ ಇಂಡಿಗೊ ಬಣ್ಣಕ್ಕೆ ಬೇಡಿಕೆ ಕುಸಿದಿತ್ತು. 1914ರಲ್ಲಿ ಬ್ರಿಟನ್ ಮತ್ತು ಜರ್ಮನಿಯ ನಡುವೆ ಯುದ್ಧವಾಗಿ ಎರಡೂ ದೇಶಗಳು ತಮ್ಮ ನಡುವಣ ಎಲ್ಲ ಆರ್ಥಿಕ ಸಂಬಂಧಗಳನ್ನು ಕಡಿದುಕೊಂಡಿದ್ದವು. ಇದರಿಂದಾಗಿ ಬಿಹಾರದಲ್ಲಿ ಬೆಳೆಯುತ್ತಿದ್ದ ಇಂಡಿಗೊ ಸಸ್ಯಗಳಿಗೆ ಬೇಡಿಕೆ ಮತ್ತೆ ಕುದುರಿತ್ತು. ಬೆಲೆ ಮೂರು ಪಟ್ಟು ಏರಿಕೆಯಾಗಿ ಇಂಡಿಗೊ ಉತ್ಪಾದನೆ ತೀವ್ರವಾಗಿ ಹೆಚ್ಚಲು ಆರಂಭವಾಗಿತ್ತು. ಹೆಚ್ಚುತ್ತಿರುವ ಬೇಡಿಕೆಯ ಲಾಭ ಪಡೆಯಲು ಬಯಸಿದ್ದ ಬ್ರಿಟಿಷರು ರೈತರ ಮೇಲೆ ಭಾರಿ ಒತ್ತಡ ಹೇರಲು ಆರಂಭಿಸಿದ್ದರು. 1914ರಲ್ಲಿ 8,100 ಎಕರೆ ಪ್ರದೇಶದಲ್ಲಿ ಇಂಡಿಗೊ ಬೆಳೆಯಲಾಗುತ್ತಿದ್ದರೆ ಎರಡು ವರ್ಷಗಳ ಬಳಿಕ ಅದು 21,900 ಎಕರೆಗೆ ಏರಿತ್ತು.

1917ರ ಏಪ್ರಿಲ್‌ನಲ್ಲಿ ಗಾಂಧಿ ಚಂಪಾರಣ್‌ಗೆ ಬರುವುದರೊಂದಿಗೆ ತಮ್ಮ ಸಮೃದ್ಧಿ ಎಷ್ಟು ದಿನ ಮುಂದುವರಿಯಬಹುದು ಎಂಬ ಪ್ರಶ್ನೆ ತೋಟದ ಮಾಲೀಕರನ್ನು ಕಾಡಲಾರಂಭಿಸಿತ್ತು. ಇಂಡಿಗೊ ಬೆಳೆಯುವಂತೆ ರೈತರನ್ನು ಬಲವಂತ ಮಾಡುವುದನ್ನು ನಿಲ್ಲಿಸುವುದಕ್ಕಾಗಿಯೇ ಅವರು ಬಂದಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ಗಾಂಧಿ ಅಲ್ಲಿ ತಲುಪಿದ ಕೆಲವೇ ದಿನಗಳಲ್ಲಿ ಬಿಹಾರ ಜಿಲ್ಲಾಧಿಕಾರಿಗೆ ಪತ್ರ ಬರೆದ ಪ್ಲಾಂಟರ್‌ಗಳ ಸಂಘದ ಕಾರ್ಯದರ್ಶಿ ಆಕ್ರೋಶ ವ್ಯಕ್ತಪಡಿಸಿದ್ದರು: ‘ಗಾಂಧಿಯ ನಿಜವಾದ ಗುರಿ ಏನೇ ಆಗಿರಲಿ, ಅವರ ಜತೆಗೆ ರೈಲಿನಲ್ಲಿ ಬಂದ ರಾಜದ್ರೋಹಿ ಮತ್ತು ದೇಶದ್ರೋಹಿ ಪ್ರತಿಭಟನಾಕಾರರ ಉದ್ದೇಶದ ಬಗ್ಗೆ ಯಾವುದೇ ಪ್ರಶ್ನೆ ಏಳದಿರುವುದು ದುರದೃಷ್ಟಕರ’ ಎಂದು ಅವರು ಬರೆದಿದ್ದರು. ಜಿಲ್ಲೆಗೆ ಗಾಂಧಿ ಬರುವುದರ ಜತೆಗೇ ‘ಅರಾಜಕತೆ ಮತ್ತು ಅಪರಾಧವೂ’ ಬಂದಿದೆ ಎಂಬ ನಿರ್ಣಯವೊಂದನ್ನು ಅಲ್ಲಿನ ಐರೋಪ್ಯ ಸೇನಾಧಿಕಾರಿಗಳ ಸಂಘ ಅಂಗೀಕರಿಸಿತ್ತು. ‘ಗಾಂಧಿ ಅಲ್ಲಿಯೇ ನಿಂತರೆ ಅದು ಚಂಪಾರಣ್‌ನಲ್ಲಿರುವ ಯುರೋಪಿಯನ್ನರಿಗೆ ಮತ್ತು ಜಿಲ್ಲೆಯ ಅಭಿವೃದ್ಧಿಗೆ ದೊಡ್ಡ ಆಪತ್ತು ಉಂಟು ಮಾಡಲಿದೆ’ ಎಂದು ಸಂಘ ಹೇಳಿತ್ತು.

ಗಾಂಧಿಯ ಕೆಲಸ ತಮಗೆ ಅಪಾಯ ತರಲಿದೆ ಎಂಬುದನ್ನು ಬೆತಿಯಾ ರಾಜ್‌ ಎಂಬ ದೊಡ್ಡ ತೋಟವೊಂದರ ವ್ಯವಸ್ಥಾಪಕರೊಬ್ಬರು ಗುರುತಿಸಿದ್ದರು. ‘ಬಹುಶಃ ಪ್ರಾಮಾಣಿಕವಾಗಿರುವ’ ಈ ವಕೀಲನಿಗೆ ‘ದಕ್ಷಿಣ ಆಫ್ರಿಕಾದ ಯಶಸ್ಸಿನಿಂದ ಸ್ವಲ್ಪ ತಲೆಭಾರವಾಗಿದೆ’ ಎಂದು ಆ ವ್ಯಕ್ತಿ ಭಾವಿಸಿದ್ದರು. ‘ತಾವು ಭಾವಿಸಿದ್ದನ್ನು ಕಾರ್ಯರೂಪಕ್ಕೆ ತರಲು ಗಾಂಧಿ ಯಾವ ಹಂತದವರೆಗೂ ಹೋಗಬಲ್ಲರು. ಸುಲಭವಾಗಿ ಹುತಾತ್ಮ ಪಟ್ಟಕ್ಕೇರಬಲ್ಲ ಇವರನ್ನು ದಮನ ಮಾಡುವುದು ಸುಲಭವಲ್ಲ’ ಎಂಬುದು ಅವರ ಅಭಿಪ್ರಾಯವಾಗಿತ್ತು.

ಗಾಂಧಿಯನ್ನು ಹೆಚ್ಚು ದೃಢವಾಗಿ ವಿರೋಧಿಸಿದ್ದ ಇನ್ನೊಂದು ದೊಡ್ಡ ತೋಟದ ಮಾಲೀಕನ ಹೆಸರು ಡಬ್ಲ್ಯು. ಎಸ್. ಇರ್ವಿನ್. ಬ್ರಿಟಿಷರ ಪರವಾಗಿದ್ದ ಪತ್ರಿಕೆಗಳಲ್ಲಿ ಅವರು ಸರಣಿ ಲೇಖನಗಳನ್ನು ಬರೆದರು. ಅಪಾಯಕಾರಿಯಾಗಿದ್ದ ಅರಣ್ಯವನ್ನು ಯುರೋಪ್‌ನ ಪ್ಲಾಂಟರ್‌ಗಳು ಸಮೃದ್ಧ ತೋಟಗಳಾಗಿ ಪರಿವರ್ತಿಸಿದ್ದಾರೆ. ಗಾಂಧಿ ಇಲ್ಲಿಗೆ ಬರುವ ತನಕ ಚಂಪಾರಣ್‌ನ ರೈತರಿಗೆ ಯಾವ ಸಮಸ್ಯೆಯೂ ಇರಲಿಲ್ಲ, ಅವರು ಸಂತೃಪ್ತರಾಗಿದ್ದರು ಎಂಬುದು ಅವರ ವಾದವಾಗಿತ್ತು. ಒಂದು ಲೇಖನದಲ್ಲಿ ಗಾಂಧಿಯನ್ನು ಇರ್ವಿನ್ ಹೀಗೆ ನಿಂದಿಸುತ್ತಾರೆ: ‘ಗಾಂಧಿ ಅವರ ವಿಧಾನ ಹೆಚ್ಚು ನಾಟಕೀಯವಾಗಿ ತೋರುವುದಿಲ್ಲವಾದರೂ ಅವರ ಉದ್ದೇಶದ ಪ್ರಾಮಾಣಿಕತೆ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಇಂಗ್ಲೆಂಡ್ ಮತ್ತು ಇತರ ಪ್ರದೇಶಗಳ ಬಗ್ಗೆ ತಿಳಿದಿರುವ ಈ ವ್ಯಕ್ತಿಗೆ ಪಾಶ್ಚಿಮಾತ್ಯ ನಾಗರಿಕತೆಯ ಪರಿಚಯವೂ ಇದೆ. ಹಾಗಿದ್ದರೂ ಅವರು ತಲೆಗೆ ಟೋಪಿಯನ್ನಾಗಲಿ, ಕಾಲಿಗೆ ಬೂಟನ್ನಾಗಲಿ ಧರಿಸುವುದಿಲ್ಲ. ನೆಲದ ಮೇಲೆ ಕುಳಿತುಕೊಳ್ಳುತ್ತಾರೆ, ಆಹಾರವನ್ನು ತಾವೇ ಬೇಯಿಸಿಕೊಳ್ಳುತ್ತಾರೆ;  2,000 ವರ್ಷಗಳ ಹಿಂದಿನ ಬಹುದೊಡ್ಡ ಸಮಾಜ ಸೇವಕರೊಬ್ಬರ (ಬುದ್ಧ) ಹಾದಿಯಲ್ಲಿ ನಡೆಯಲು ಬಯಸುತ್ತಾರೆ... ದಿಟ್ಟತನದಿಂದ ನಿಭಾಯಿಸಿದ್ದರೆ ಈ ಹೋರಾಟ ಸಹಜವಾಗಿಯೇ ಸತ್ತು ಹೋಗುತ್ತಿತ್ತು. ಯುರೋಪ್‌ನಿಂದ ಬಂದಿರುವ ಅಧಿಕಾರೇತರ ವರ್ಗವನ್ನು ಚಂಪಾರಣ್ ಜಿಲ್ಲೆಯಿಂದ ಹೊರಗೆ ಹಾಕುವುದೇ ಈ ಹೋರಾಟದ ಉದ್ದೇಶ. ರೈತರ ಅಭಿವೃದ್ಧಿಯ ಬಗ್ಗೆ ದೊಡ್ಡ ಗಂಟಲಲ್ಲಿ ಮಾತನಾಡುವ ಈ ಹೋರಾಟ, ಯುರೋಪ್‌ನ ಜನರು ಈ ವಕೀಲ ಮತ್ತು ಇಲ್ಲಿನ ಮಹಾಜನರ ಅನುಕಂಪದಲ್ಲಿರುವಂತೆ ಮಾಡುತ್ತದೆ’.

1917ರ ಎರಡನೇ ಭಾಗದಲ್ಲಿ ಗಾಂಧಿಯ ಹೆಂಡತಿ ಕಸ್ತೂರ್‌ಬಾ ಅವರು ಚಂಪಾರಣ್‌ಗೆ ಬಂದರು. ಇದರಿಂದ ಇನ್ನಷ್ಟು ಆಕ್ರೋಶಗೊಂಡ ಇರ್ವಿನ್, ‘ಸ್ಟೇಟ್ಸ್‌ಮನ್’ ಪತ್ರಿಕೆಗೆ ರೋಷದ ಪತ್ರವೊಂದನ್ನು ಬರೆದರು. ಸಾರ್ವಜನಿಕ ಚಟುವಟಿಕೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗೆ ಮಾತು ಕೊಟ್ಟಿರುವ ಗಾಂಧಿ, ಗೋಹತ್ಯೆ ಮತ್ತು ಹಿಂದೂ-ಮುಸ್ಲಿಂ ಸಂಬಂಧದ ಬಗ್ಗೆ ವಿವಾದಾತ್ಮಕ ಭಾಷಣಗಳನ್ನು ಮಾಡುತ್ತಿದ್ದಾರೆ ಎಂಬುದು ಅವರ ಪತ್ರದ ಸಾರವಾಗಿತ್ತು. ಕಸ್ತೂರ್‌ಬಾ ಅವರು ಕೂಡ ಬ್ರಿಟಿಷ್ ಆಡಳಿತದ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಶಾಲೆಯೊಂದನ್ನು ತೆರೆಯುವ ನೆಪದಲ್ಲಿ ಅವರು ಸಂತೆಯೊಂದನ್ನು ಆರಂಭಿಸಿದ್ದಾರೆ. ಇದು ಕಾರ್ಖಾನೆಯು ನಡೆಸುತ್ತಿರುವ ಸಮೀಪದ ಎರಡು ಬಜಾರ್‌ಗಳನ್ನು ಮುಚ್ಚಿಸುವ ಪ್ರಯತ್ನ. ಗಾಂಧಿ, ಸರ್ಕಾರಕ್ಕೆ ನೀಡಿರುವ ಮಾತನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಪ್ರಾಮಾಣಿಕ ಕೆಲಸಗಳು ಇವು ಎಂದು ಭಾವಿಸಬಹುದೇ?

‘ಸ್ಟೇಟ್ಸ್‌ಮನ್‌’ ಪತ್ರಿಕೆಯಲ್ಲಿ ಗಾಂಧಿ ಪ್ರತ್ಯುತ್ತರವೊಂದನ್ನು ನೀಡಿದರು. ತಮ್ಮ ಭಾಷಣಗಳು ಧರ್ಮಗಳ ನಡುವೆ ಸಂಘರ್ಷ ಉಂಟಾಗುವುದನ್ನು ತಡೆಯುವ ಉದ್ದೇಶ ಹೊಂದಿವೆ ಎಂದು ವಿವರಿಸಿದರು. ಈ ‘ಮಹತ್ಕಾರ್ಯ’ದಲ್ಲಿ ತಮಗೆ ನೆರವಾಗಲು ಜತೆಗೂಡುವಂತೆ ಪ್ಲಾಂಟರ್‌ಗಳಿಗೂ ಅವರು ಆಹ್ವಾನ ನೀಡಿದರು. ತಮ್ಮ ಹೆಂಡತಿಯ ಬಗ್ಗೆ ಅವರು ಹೀಗೆ ಬರೆಯುತ್ತಾರೆ: ‘ಮುಗ್ಧೆಯಾದ ನನ್ನ ಹೆಂಡತಿಗೆ ನಿಮ್ಮ ವರದಿಗಾರ ಮಾಡಿರುವ ಅನ್ಯಾಯದ ಬಗ್ಗೆ ಅರಿವೇ ಇಲ್ಲ’. ಇರ್ವಿನ್ ಅವರು ಕಸ್ತೂರಬಾ ಅವರನ್ನು ಪರಿಚಯಿಸಿಕೊಂಡರೆ ‘ಅವರೊಬ್ಬ ಸರಳ ಮಹಿಳೆ ಮತ್ತು ನಿರಕ್ಷರಿ’ ಎಂಬುದು ತಿಳಿಯುತ್ತದೆ. ಅಷ್ಟೇ ಅಲ್ಲ, ಇರ್ವಿನ್ ಅವರು ತಮ್ಮ ಲೇಖನದಲ್ಲಿ ಪ್ರಸ್ತಾಪಿಸಿರುವ ಎರಡು ಅಂಗಡಿಗಳ ಬಗ್ಗೆ ಕಸ್ತೂರಬಾ ಅವರಿಗೆ ಗೊತ್ತೇ ಇಲ್ಲ.

‘ಕಸ್ತೂರ್‌ಬಾ ಅವರು ಭಾಷಣ ಮಾಡುವ ಅಥವಾ ಪತ್ರಿಕೆಗಳಿಗೆ ಲೇಖನ ಬರೆಯುವ ಕಲೆಯನ್ನು ಇನ್ನೂ ಕಲಿತಿಲ್ಲ’ ಎಂದು ಸ್ವಲ್ಪ ವ್ಯಂಗ್ಯವಾಗಿಯೇ ಗಾಂಧಿ ಬರೆಯುತ್ತಾರೆ. ಕಸ್ತೂರಬಾ ಅವರು ಚಂಪಾರಣ್‌ನಲ್ಲಿ ಶಿಕ್ಷಕರಿಗೆ ಅಡುಗೆ ಮಾಡಿ ಹಾಕುವುದು ಮತ್ತು ಮಹಿಳೆಯರಿಗೆ ಔಷಧಗಳನ್ನು ವಿತರಿಸುವ ಕೆಲಸ ಮಾಡುತ್ತಿದ್ದರು.

ಚಂಪಾರಣ್‌ನ ಪ್ಲಾಂಟರ್‌ಗಳಿಗೆ ಗಾಂಧಿಯ ಬಗ್ಗೆ ತಣಿಸಲಾರದಷ್ಟು ಸಿಟ್ಟಿತ್ತು. ಆದರೆ ಅಧಿಕಾರಿಗಳಿಗೆ ಗುಜರಾತಿನಿಂದ ಬಂದ ಈ ಸಂದರ್ಶಕನ ಬಗ್ಗೆ ಹೆಚ್ಚು ಸೂಕ್ಷ್ಮವಾದ ಗ್ರಹಿಕೆ ಇತ್ತು. ‘ಪ್ಲಾಂಟರ್‌ಗಳು ಗಾಂಧಿಯನ್ನು ತಮ್ಮ ನಿಜವಾದ ಶತ್ರು ಎಂದು ಭಾವಿಸಿರುವುದು ಸಹಜವೇ ಆಗಿದೆ’ ಎಂದು ಗಾಂಧಿ ಚಂಪಾರಣ್ ತಲುಪಿ ಎರಡು ವಾರಗಳ ನಂತರ ಬೆತಿಯಾದ ಉಪವಿಭಾಗಾಧಿಕಾರಿ ಹೇಳುತ್ತಾರೆ. ಆದರೆ ಯುರೋಪಿಯನ್ನರು ‘ಗಾಂಧಿಯನ್ನು ಆದರ್ಶವಾದಿ ಅಥವಾ ಧರ್ಮಾಂಧ ಅಥವಾ ಕ್ರಾಂತಿಕಾರಿ ಎಂದು ತಮ್ಮ ಭಾವನೆಗೆ ಅನುಗುಣವಾಗಿ ಗ್ರಹಿಸಬಹುದು’ ಎಂಬುದು ಅವರ ಅಭಿಪ್ರಾಯವಾಗಿತ್ತು. ‘ರೈತರಿಗೆ ಅವರು ತಮ್ಮ ವಿಮೋಚಕ. ಹಾಗಾಗಿ ಅವರು ಗಾಂಧಿಗೆ ಅಸಾಧಾರಣ ಶಕ್ತಿ ಇದೆ ಎಂದು ಭಾವಿಸಿದ್ದಾರೆ. ಹಳ್ಳಿಗಳಲ್ಲಿ ಅಡ್ಡಾಡುವ ಗಾಂಧಿ ಕುಂದುಕೊರತೆಗಳನ್ನು ತಮ್ಮಲ್ಲಿ ಹೇಳಿಕೊಳ್ಳುವಂತೆ ಗ್ರಾಮಸ್ಥರನ್ನು ಕೇಳುತ್ತಾರೆ. ಹೊಸ ಸಹಸ್ರಮಾನದ ದೃಷ್ಟಿಕೋನದೊಂದಿಗೆ ಅನಕ್ಷರಸ್ಥ ಗ್ರಾಮಸ್ಥರ ತಿಳಿವಳಿಕೆಯನ್ನು ಗಾಂಧಿ ಪ್ರತಿದಿನವೂ ಮಾರ್ಪಡಿಸುತ್ತಿದ್ದಾರೆ’ ಎಂಬುದು ಗಾಂಧಿಯ ಬಗ್ಗೆ ಅವರ ಗ್ರಹಿಕೆಯಾಗಿತ್ತು.

1917ರ ಬೇಸಿಗೆಯಲ್ಲಿ ಚಳವಳಿ ಆರಂಭಿಸಿದಾಗಲೇ ಗಾಂಧಿಯನ್ನು ಅತ್ಯುತ್ತಮವಾಗಿ ಅರ್ಥಮಾಡಿಕೊಂಡ ಬ್ರಿಟಿಷರಲ್ಲಿ ಚಂಪಾರಣ್‌ನ  ಜಿಲ್ಲಾಧಿಕಾರಿಯೂ ಒಬ್ಬರು. ಗಾಂಧಿ ಅಲ್ಲಿ ಕೆಲಸ ಆರಂಭಿಸಿದ ನಂತರದ ದಿನಗಳಲ್ಲಿ ಅವರು ಗಾಂಧಿಯತ್ತ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಾರೆ. ಅವರು ಗಾಂಧಿಯ ಜತೆ ಮಾತನಾಡುತ್ತಾರೆ. ಗಾಂಧಿಯ ಬಗ್ಗೆ ಇತರರ ಜತೆ ಮಾತನಾಡುತ್ತಾರೆ. ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮಾಡಿದ್ದ ಕೆಲಸಗಳ ಬಗೆಗಿನ ಮತ್ತು ಗಾಂಧಿಯ ಬಗೆಗಿನ ಕರಪತ್ರಗಳನ್ನು ಜಿಲ್ಲಾಧಿಕಾರಿ ಸಂಗ್ರಹಿಸುತ್ತಾರೆ. ಈ ಎಲ್ಲದರಿಂದ ಗಾಂಧಿಯ ಬಗ್ಗೆ ಅವರು ಕಂಡುಕೊಂಡ ಗ್ರಹಿಕೆ ಹೀಗಿತ್ತು: ‘ಗಾಂಧಿ ಅವರು ಪೂರ್ವ ಮತ್ತು ಪಶ್ಚಿಮದ ಕುತೂಹಲಕಾರಿ ಮಿಶ್ರಣದಂತೆ ಕಾಣಿಸುತ್ತಾರೆ. ತಮ್ಮ ಗ್ರಹಿಕೆಯನ್ನು ಅವರು ರಸ್ಕಿನ್ ಮತ್ತು ಟಾಲ್‌ಸ್ಟಾಯ್ ಅವರಿಂದ ಪಡೆದಿದ್ದಾರೆ. ಅದರಲ್ಲೂ ಹೆಚ್ಚಿನ ಭಾಗ ಟಾಲ್‌ಸ್ಟಾಯ್ ಅವರಿಂದಲೇ ಬಂದಿದೆ. ಯೋಗಿಯೊಬ್ಬರ ವೈರಾಗ್ಯವೂ ಅದರೊಂದಿಗೆ ಸೇರಿದೆ. ಅವರ ಚಿಂತನೆಗಳು ಪೂರ್ವದಿಂದ ಮಾತ್ರ ಪ್ರಭಾವಿತವಾಗಿದ್ದರೆ ಅದನ್ನು ಅವರು ತಮ್ಮ ವೈಯಕ್ತಿಕ ಜೀವನಕ್ಕೆ ಮಾತ್ರ ಅನ್ವಯಿಸಿಕೊಂಡು ಏಕಾಂಗಿಯಾಗಿ  ಧ್ಯಾನ ಮಾಡುತ್ತಾ ತಮ್ಮ ಜೀವನ ಸಾರ್ಥಕವಾಯಿತು ಎಂದು ಸಂತೃಪ್ತರಾಗುತ್ತಿದ್ದರು. ಪಶ್ಚಿಮದ ಬೋಧನೆಗಳೇ ಅವರನ್ನು ಸಕ್ರಿಯ ಸಮಾಜ ಸುಧಾರಕನನ್ನಾಗಿ ಮಾರ್ಪಡಿಸಿವೆ’.

ಇದು ಗಾಂಧಿ ಎಂಬ ವ್ಯಕ್ತಿ, ಅವರ ಉದ್ದೇಶ ಮತ್ತು ಅನುಸರಿಸಿದ ವಿಧಾನಗಳ ಬಗೆಗಿನ ಅತ್ಯಂತ ಗಮನಾರ್ಹವಾದ ಮತ್ತು ಚತುರವಾದ ವಿಶ್ಲೇಷಣೆ. ಈ ಅಧಿಕಾರಿಯನ್ನು ಎಲ್ಲರೂ ಮರೆತು ಬಹಳ ಕಾಲವೇ ಆಗಿದೆ. ಆದರೆ ಈಗ, ಗಾಂಧಿಯ ಚಂಪಾರಣ್ ಸತ್ಯಾಗ್ರಹದ ನೂರನೇ ವರ್ಷದ ಈ ಸಂದರ್ಭದಲ್ಲಾದರೂ ಆತನನ್ನು ಗುರುತಿಸೋಣ. ಅವರ ಹೆಸರು ಡಬ್ಲ್ಯು.ಬಿ. ಹೇಕಾಕ್. ಚಂಪಾರಣ್‌ಗೆ ಬಂದ ಗಾಂಧಿ ಮತ್ತು ಅವರು ಒಡ್ಡಿದ ಸವಾಲನ್ನು ಸಿಟ್ಟು, ಆತ್ಮವೈಭವ ಮತ್ತು ಜನಾಂಗೀಯ ಅಹಂಕಾರದಿಂದ ನೋಡಿದ ಇತರ ಯುರೋಪಿಯನ್ನರಿಗಿಂತ ಈ ವ್ಯಕ್ತಿ ಭಿನ್ನವಾಗಿ ನಿಂತರು ಎಂಬ ಕಾರಣಕ್ಕೆ ಅವರನ್ನು ಸ್ಮರಿಸೋಣ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.