ಶನಿವಾರ, ಮೇ 28, 2022
31 °C

ಫೋರ್ಡ್ ಕಾರು

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಕಾರುಗಳ ತಯಾರಿಕೆ ಹತ್ತೊಂಬತ್ತನೆ ಶತಮಾನದ ಅಂತ್ಯಭಾಗದಲ್ಲೇ ಪ್ರಾರಂಭವಾಗಿತ್ತು. 1890 ರ ಹೊತ್ತಿಗೆ ಅಮೆರಿಕೆಯಲ್ಲಿಯೇ ಸುಮಾರು ಐದು ನೂರು ಕಂಪನಿಗಳು ಕಾರುಗಳನ್ನು ತಯಾರು ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದವು.ಪ್ರತಿಯೊಂದು ಕಾರನ್ನು ಕುಶಲಿಗಳಾದ ಕೆಲಸಗಾರರು ಕೈಗಳಿಂದಲೇ ಮಾಡಿ ಸಿದ್ಧಪಡಿಸುತ್ತಿದ್ದರು. ಒಂದೊಂದು ಕಾರಿನ ಬೆಲೆ ಸುಮಾರು 1500 ಡಾಲರಗಳಷ್ಟಾಗುತ್ತಿತ್ತು.

 

ಆಗ ಅದೊಂದು ಬಹು ದೊಡ್ಡ ಮೊತ್ತ. ಕೆಲವರು ಕಾರನ್ನು ಸಾಮಾನ್ಯರ ವಿರೋಧಿ ಎಂತಲೋ, ಶ್ರೀಮಂತಿಕೆಯನ್ನು ಅಸಹ್ಯವಾಗಿ ತೋರಿಸುವ ಯಂತ್ರ ಎಂತಲೋ ಕರೆದರು. ಹೀಗಾಗಿ ಕಾರುಗಳು ಸಾಮಾನ್ಯ ಜನರ ಬಿರುಗಣ್ಣಿಗೆ ತುತ್ತಾದವು. ಇದನ್ನು ಸೂಕ್ಷ್ಮವಾಗಿ ಗಮನಿಸಿದರು ಹೆನ್ರಿ ಫೋರ್ಡ್. ಆಗಿನ ಕಾಲಕ್ಕೆ ತುಂಬ ಜನಪ್ರಿಯವಾಗಿದ್ದ ವಾಹನಗಳೆಂದರೆ ಕುದುರೆ ಗಾಡಿಗಳು. ಇವುಗಳಿಗೆ ಎರಡು ವಿಶೇಷ ಅನುಕೂಲಗಳಿದ್ದವು.

 

ಮೊದಲನೆಯದಾಗಿ ಕುದುರೆಗಳು ಕಚ್ಚಾ ರಸ್ತೆಗಳಲ್ಲಿ, ಕೆಸರಿನಲ್ಲಿ ಹಿಮದಲ್ಲಿ ಅನಾಯಾಸವಾಗಿ ಎಳೆದುಕೊಂಡು ಹೋಗುತ್ತಿದ್ದವು. ಮತ್ತೊಂದು ಅನುಕೂಲವೆಂದರೆ ಈ ಗಾಡಿಗಳನ್ನು ಸುಲಭವಾಗಿ ಸ್ವಚ್ಛಮಾಡಬಹುದಾಗಿತ್ತು.ಉಳಿದ ಕಾರು ತಯಾರಕರು ತಮ್ಮ ಕಾರುಗಳನ್ನು ಇನ್ನಷ್ಟು ಸುಂದರವಾಗಿ, ವೈಭವೋಪೇತವಾಗಿ ಮಾಡಲು ಪ್ರಯತ್ನಿಸಿ ಅವುಗಳ ಬೆಲೆ ಹೆಚ್ಚು ಮಾಡುತ್ತ ಹೋದರೆ ಹೆನ್ರಿ ಫೋರ್ಡ್ ಪೂರ್ತಿ ವಿರುದ್ಧವಾಗಿಯೇ ಚಿಂತಿಸಿದರು. ಹೇಗೆ ಆದಷ್ಟು ಮಟ್ಟಿಗೆ ಕಾರನ್ನು ಸರಳಗೊಳಿಸಿ ಅದರ ಬೆಲೆಯನ್ನು ಕಡಿಮೆಮಾಡುವುದು ಎಂಬುದು ಅವರ ಯೋಜನೆ.

 

ಅವರು ಮೊದಲು ಒಂದು ಸುಂದರವಾದ ಆದರೆ, ಗಟ್ಟಿಮುಟ್ಟಾದ ಕುದುರೆಗಾಡಿ ಸಿದ್ಧಗೊಳಿಸಿ ಅದಕ್ಕೆ ಅತ್ಯಂತ ಸಧೃಡವಾದ ಶಕ್ತಿಶಾಲಿಯಾದ ಎಂಜಿನ್ ಅಳವಡಿಸಿದರು. ಆ ಎಂಜಿನ್ ಎರಡು ಕುದುರೆಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿತ್ತು. ಎಂಥ ಹಿಮದಲ್ಲೂ ವಾಹನ ಎಳೆಯುವ ಶಕ್ತಿ ಪಡೆದಿತ್ತು. ಅವರು ಹತ್ತಾರು ಬಣ್ಣಗಳನ್ನು ಬಳಸದೇ ಕೇವಲ ಕಪ್ಪು ಬಣ್ಣದ ಕಾರುಗಳನ್ನು ತಯಾರಿಸಿದರು. ಅದಕ್ಕೆ `ಮಾಡೆಲ್-ಟಿ~ ಎಂದು ಹೆಸರಿಟ್ಟರು. ಅದರ ಬೆಲೆಯನ್ನು 850 ಡಾಲರ್ ಎಂದು ತೀರ್ಮಾನಿಸಿದರು. ಆಗ ಒಳ್ಳೆಯ ಕುದುರೆಗಾಡಿಯ ಬೆಲೆ ಸುಮಾರು 400 ಡಾಲರನಷ್ಟಿತ್ತು.ನಂತರ ಹೆಚ್ಚು ಕಾರುಗಳನ್ನು ಮಾರುಕಟ್ಟೆಗೆ ತಂದಂತೆ ಅವುಗಳ ಬೆಲೆಯನ್ನು ಕಡಿಮೆ ಮಾಡುತ್ತ 1909 ರಲ್ಲಿ ಅದರ ಬೆಲೆ 609 ಡಾಲರ್ ಆಯಿತು. 1924 ರ ಹೊತ್ತಿಗೆ ಕಾರಿನ ಬೆಲೆಯನ್ನು 290 ಡಾಲರಿಗೆ ಇಳಿಸಿದರು. ಈಗ ಕುದುರೆಗಾಡಿಗಳನ್ನು ಇಟ್ಟುಕೊಂಡಿದ್ದವರು ಗಾಬರಿಯಾದರು. ಕಾರು ಕುದುರೆಗಾಡಿಗಿಂತ ಅಗ್ಗ ಮತ್ತು ಕುದುರೆಗಳನ್ನು ಸಾಕುವ ಖರ್ಚು, ತೊಂದರೆ ಇಲ್ಲ.  ಅವರೆಲ್ಲ ಕುದುರೆಗಾಡಿ ಮಾರಿ ಕಾರು ಕೊಂಡರು. 1924 ರಲ್ಲಿ ಅಮೆರಿಕೆಯ ಒಟ್ಟು ಕಾರು ಮಾರುಕಟ್ಟೆಯಲ್ಲಿ ಪ್ರತಿಶತ 61 ರಷ್ಟು ಮಾಡೆಲ್-ಟಿ ಕಾರುಗಳೇ ಇದ್ದವು. ಫೋರ್ಡ್ ಕಾರು ಮನೆ ಮನೆಯ ಅವಶ್ಯಕತೆಯಾಯಿತು.ಹತ್ತಾರು ಕುಶಲಕರ್ಮಿಗಳು ಸೇರಿ ಒಂದು ಕಾರು ಮಾಡುವ ಪದ್ಧತಿ ಅಳಿಸಿಹಾಕಿ ಒಂದೊಂದು ಪುಟ್ಟ ಗುಂಪು ಪ್ರತ್ಯೇಕವಾಗಿ ಒಂದು ಬಿಡಿಭಾಗವನ್ನು ರಚಿಸುವ ವಿಧಾನ  ಏರ್ಪಡಿಸಿದರು. ಕೊನೆಗೆ ಕೆಲವೇ ಜನ ಈ ಬಿಡಿಭಾಗಗಳನ್ನು ಅಸೆಂಬ್ಲಿಲೈನ್‌ನಲ್ಲಿ ಜೋಡಿಸಿ ಕಾರು ತಯಾರಿಸಿದಾಗ ತಯಾರಿಕೆಯ ಸಮಯ ಗಣನೀಯವಾಗಿ ಕಡಿಮೆಯಾಯಿತು. 21 ದಿನಕ್ಕೊಂದು ಕಾರು ತಯಾರಿಸುತ್ತಿದ್ದ ಫೋರ್ಡ್ ಕಂಪನಿ ನಾಲ್ಕು ದಿನಕ್ಕೊಂದು ಕಾರನ್ನು ತಯಾರಿಸಿ ಮಾರುಕಟ್ಟೆಗೆ ತಂದಿತು. ಇದರಿಂದಾಗಿ ಮತ್ತಷ್ಟು ತಯಾರಿಕಾ ವೆಚ್ಚ ಇಳಿಯಿತು.ಸಮಸ್ಯೆಗಳು, ತೊಂದರೆಗಳು ಯಾರನ್ನೂ ಬಿಟ್ಟಿಲ್ಲ. ಬಿಡುವುದೂ ಇಲ್ಲ. ಆದರೆ, ಸಮಸ್ಯೆಗಳ ಗರ್ಭದಲ್ಲಿಯೇ ಪರಿಹಾರಗಳೂ ಇವೆ. ನಾವು ಬರೀ ಸಮಸ್ಯೆಗಳನ್ನು ನೋಡುತ್ತ ಆತಂಕಪಟ್ಟರೆ ಧಾವಂತ ಬಿಟ್ಟು ಇನ್ನೇನೂ ಆಗುವುದಿಲ್ಲ. ಯೋಚನೆಯ ದಾರಿಯನ್ನು ವಿಧಾನವನ್ನು ಬದಲಿಸಿ ನೋಡಿದಾಗ ಅತ್ಯಂತ ಸುಲಭದ, ಅನಾಯಾಸವಾದ ಪರಿಹಾರಗಳು ದೊರೆಯುತ್ತವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.