ಮಂಗಳವಾರ, ಏಪ್ರಿಲ್ 20, 2021
32 °C

ಬೂದಿ ಮುಚ್ಚಿದ ಕೆಂಡದಂತೆ ಸುಡುತ್ತಿರುವ ವಲಸೆ ಸಮಸ್ಯೆ

ದಿನೇಶ್ ಅಮೀನ್ ಮಟ್ಟು Updated:

ಅಕ್ಷರ ಗಾತ್ರ : | |

ಯಾರೋ ಕಿಡಿಗೇಡಿಗಳು ಹಚ್ಚಿದ ಗಾಳಿಮಾತಿನ ಕಿಡಿಗಳಲ್ಲಿ ತಮ್ಮನ್ನು ಸುಟ್ಟುಬಿಡುವ ಬೆಂಕಿಯನ್ನು ಕಂಡು ಬೆದರಿ ಬೆಂಗಳೂರು ಬಿಟ್ಟು ಓಡಿಹೋಗಿರುವ ಈಶಾನ್ಯ ರಾಜ್ಯದ ಜನರು ಮುಂದಿನ ದಿನಗಳಲ್ಲಿ ಮರಳಿ ಬರಬಹುದು. ತಾವು ಊರು ಬಿಟ್ಟು ಹೋಗುವಂತಹ ಭಯಾನಕ ಪರಿಸ್ಥಿತಿ ಬೆಂಗಳೂರಿನಲ್ಲಿ ಇಲ್ಲ ಎನ್ನುವುದು ನಿಧಾನವಾಗಿ ಅರಿವಾಗಿ ಅವರು ಪಶ್ಚಾತಾಪಪಡಲೂ ಬಹುದು.

 

ಈ ಭಯಭೀತ ವಾತಾವರಣದ ನಿರ್ಮಾಣಕ್ಕೆ ಕಾರಣರಾದವರನ್ನು ಪೊಲೀಸರು ಬಂಧಿಸಿ ಸಂಚನ್ನು ಬಯಲುಮಾಡಿದರೆ ಮುಖ್ಯಮಂತ್ರಿಗಳು ಮತ್ತು ಅವರ ಸಹೊದ್ಯೋಗಿಗಳು ನೀಡಿರುವ ಆಶ್ವಾಸನೆಯನ್ನು ಅವರು ನಂಬಲೂಬಹುದು. ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸದೆ ಇದ್ದರೆ ತಮ್ಮನ್ನು ತಾವೇ ಸಮಾಧಾನಪಡಿಸಿಕೊಂಡು ಇದೊಂದು ದುಃಸ್ವಪ್ನ ಎಂದು ಅವರು ಮರೆತುಬಿಡಬಹುದು. ಇಷ್ಟಕ್ಕೆ ಎಲ್ಲ ಸಮಸ್ಯೆಗಳು ಶಾಶ್ವತ ಪರಿಹಾರ ಕಂಡು ವಲಸೆ ಬಂದವರು ಮತ್ತು ಸ್ಥಳೀಯರು ಹಾಲುಜೇನಿನಂತೆ ಒಂದಾಗಿ ನೂರುಕಾಲ ನೆಮ್ಮದಿಯಿಂದ ಬಾಳ್ವೆಮಾಡಬಹುದೇ?ಪೊಲೀಸರ ತನಿಖೆ, ಅಪರಾಧಿಗಳ ಪತ್ತೆ, ರಾಜ್ಯದ ರಾಜಕಾರಣಿಗಳೆಲ್ಲ ಕೂಡಿ ನೀಡಿರುವ ಭದ್ರತೆಯ ಆಶ್ವಾಸನೆ ...ಇವೆಲ್ಲವೂ ಮೊನ್ನೆ ನಡೆದ ನಿರ್ದಿಷ್ಟ ದುರ್ಘಟನೆಗೆ ತಾತ್ಕಾಲಿಕ ರೂಪದ ಪರಿಹಾರ ಅಷ್ಟೆ. ಇದಕ್ಕೆ ಕಾರಣವಾದ ಸಮಸ್ಯೆಯ ಬೇರುಗಳು ಇನ್ನೂ ಆಳದಲ್ಲಿವೆ.ಅವುಗಳನ್ನು ಹುಡುಕಿತೆಗೆದು ಪರಿಹಾರ ಕಂಡುಕೊಳ್ಳದೆ ಇದ್ದಲ್ಲಿ ಇಂತಹ ಸಂಘರ್ಷಗಳು ಪುನರಾವರ್ತನೆಯಾಗುವುದನ್ನು ತಡೆಯುವುದು ಸಾಧ್ಯವಾಗಲಾರದು. ಆ ಸಮಸ್ಯೆಯ ಹೆಸರು ವಲಸೆ. ಬೆಂಗಳೂರನ್ನು ಮಾತ್ರವಲ್ಲ ದೇಶದ ಎಲ್ಲ ಮಹಾನಗರಗಳನ್ನೂ ಕಾಡುತ್ತಿರುವ ಮತ್ತು ಭವಿಷ್ಯದಲ್ಲಿ ಭೂತಾಕಾರವಾಗಿ ಬೆಳೆದು ಕಾಡಲಿರುವ ಸಮಸ್ಯೆ ಇದು. ಕೇಂದ್ರ ಯೋಜನಾ ಆಯೋಗದ ಮಟ್ಟದಲ್ಲಿ ಈ ಬಗ್ಗೆ ಅಧ್ಯಯನಗಳು ನಡೆಯುತ್ತಲೇ ಇದ್ದರೂ ಪರಿಹಾರವನ್ನು ಮಾತ್ರ ಕಂಡುಕೊಳ್ಳಲಾಗಿಲ್ಲ.ಬಹುಶಃ ಹುಟ್ಟಿದ ಊರಿನಲ್ಲಿಯೇ ಬಯಸಿದ್ದೆಲ್ಲವೂ ಸಿಕ್ಕಿಬಿಟ್ಟರೆ ಯಾರೂ ಊರು ಬಿಡಲಾರರೇನೋ? ವಲಸೆ ಬಂದವರಲ್ಲಿ ಯಾರೂ ಕೂಡಾ ಬಹಳ ಸಂತೋಷದಿಂದ ಊರು ಬಿಟ್ಟು ಬಂದಿರುವುದಿಲ್ಲ, ವಲಸೆ ಬಂದವರೆಲ್ಲರೂ ಬಹಳ ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂದು ಹೇಳುವುದೂ ಸಾಧ್ಯ ಇಲ್ಲ.

 

ವಲಸೆಕೋರರ ಮನಸ್ಸು ಇರುವುದೇ ಹಾಗೆ. ಹುಟ್ಟೂರಿನ ಬೇರು ಕಳಚಿಕೊಂಡು ಬೇರೆ ಊರುಗಳಲ್ಲಿ ನೆಲೆ ಕಂಡುಕೊಂಡಿರುವ ಈ ಜನ ಸದಾ ಅಸುರಕ್ಷತೆಯಿಂದ ಬಳಲುತ್ತಾ ಇರುತ್ತಾರೆ. ಬೀದಿಯಲ್ಲಿ ಅಪರಿಚಿತರು ಸುಮ್ಮನೆ ದಿಟ್ಟಿಸಿ ನೋಡಿದರೂ ಅವರ ಎದೆ ಬಡಿದುಕೊಳ್ಳುತ್ತದೆ. ಒಂಟಿಯಾಗಿ ಹೊರಟಾಗ ಪಕ್ಕದಲ್ಲಿ ನೆರಳೊಂದು ಹಾದುಹೋದರೂ ಅವರು ಬೆಚ್ಚಿಬೀಳುತ್ತಾರೆ.ಸಣ್ಣಪುಟ್ಟ ಕಾಯಿಲೆಗಳು ಕೂಡಾ ಅವರನ್ನು ಮಾನಸಿಕವಾಗಿ ಇನ್ನಷ್ಟು ದುರ್ಬಲರನ್ನಾಗಿ ಮಾಡುತ್ತದೆ.  ಮನೆಯಿಂದ ಹೊರಗೆಹೋದವರು ಹಿಂದಿರುಗುವುದು ವಿಳಂಬವಾದ ಕೂಡಲೇ ಕೆಟ್ಟಯೋಚನೆಗಳು ಸುಳಿದಾಡುತ್ತಿರುತ್ತವೆ.

 

ಇದರ ಜತೆಗೆ ಊರಲ್ಲಿರುವ ವಯಸ್ಸಾದ ತಂದೆ-ತಾಯಿ, ಜತೆಯಲ್ಲಿ ಆಡಿ ಬೆಳೆದ ಸೋದರ - ಸೋದರಿಯರು, ಸಲಿಗೆಯಿಂದ ಎಲ್ಲವನ್ನೂ ಹಂಚಿಕೊಳ್ಳಲು ಸಾಧ್ಯ ಇರುವಂತಹ ಗೆಳೆಯ-ಗೆಳತಿಯರು..ಹೀಗೆ ಎಲ್ಲರ ನೆನಪುಗಳು ಕಾಡಲಾರಂಭಿಸುತ್ತವೆ. ಇವೆಲ್ಲ ಹೇಳಿ ಅರ್ಥವಾಗುವಂತಹದ್ದಲ್ಲ, ಅನುಭವಿಸಿ ತಿಳಿದುಕೊಳ್ಳಬೇಕು.ನೂರಾರು ಬಗೆಯ ವಲಸೆಗಳಿದ್ದರೂ ಇದರಲ್ಲಿ ಪ್ರಧಾನವಾಗಿ ಎರಡು ಗುಂಪುಗಳಿವೆ. ಮೊದಲನೆಯದು ದೈಹಿಕಶ್ರಮದ ಉದ್ಯೋಗ ಮಾಡುತ್ತಿರುವವರ ಗುಂಪು, ಎರಡನೆಯದು ಕಚೇರಿಗಳಲ್ಲಿ ಬಿಳಿ ಕಾಲರ್ ಉದ್ಯೋಗದಲ್ಲಿರುವವರ ಗುಂಪು. ಬರಗಾಲ, ನೆರೆಹಾವಳಿ, ಭೂಕಂಪ ಮೊದಲಾದ ಪ್ರಾಕೃತಿಕ ವಿಕೋಪಗಳಿಂದಾಗಿ ನಿರ್ಗತಿಕರಾದವರು, ಜಮೀನ್ದಾರಿ ವ್ಯವಸ್ಥೆಯ ಶೋಷಣೆಗೆ ಸಿಕ್ಕವರು, ಜಾತಿ-ಧರ್ಮ ಆಧಾರಿತ ದ್ವೇಷ ಭುಗಿಲೆದ್ದಾಗ ಪ್ರಾಣಬೆದರಿಕೆಯಿಂದ ಓಡಿ ಬಂದವರೆಲ್ಲ ಮೊದಲ ಗುಂಪಿಗೆ ಸೇರಿದವರು.ಇದಕ್ಕೆ ಉತ್ತಮ ಉದಾಹರಣೆ `ಬಿಮಾರು~ ಎಂಬ ಹಣೆಪಟ್ಟಿಹಚ್ಚಿಕೊಂಡಿರುವ ಬಿಹಾರ, ಮಧ್ಯಪ್ರದೇಶ, ರಾಜಸ್ತಾನ ಮತ್ತು ಉತ್ತರಪ್ರದೇಶಗಳದ್ದು. ಭಾರತದಲ್ಲಿ ಈಗಲೂ ಅತಿಹೆಚ್ಚಿನ ಪ್ರಮಾಣದಲ್ಲಿ ವಲಸೆ ನಡೆಯುತ್ತಿರುವುದು ರಾಜ್ಯಗಳಿಂದ. ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳು ಉಳಿದೆರಡು ರಾಜ್ಯಗಳಷ್ಟು ಬರಪೀಡಿತ ಅಲ್ಲದೆ ಇದ್ದರೂ ಅಲ್ಲಿ ಈಗಲೂ ಜೀವಂತವಾಗಿರುವ ಊಳಿಗಮಾನ್ಯ ವ್ಯವಸ್ಥೆಯಿಂದಾಗಿ ಸಮಾನವಾಗಿ ಭೂಮಿ ಹಂಚಿಕೆ ಆಗಿಲ್ಲ.ಶೇಕಡಾ 80ರಷ್ಟು ಜನರ ಕೈಯಲ್ಲಿ ಒಟ್ಟು ಭೂಮಿಯ ಶೇಕಡಾ 20ರಷ್ಟಿದ್ದರೆ, ಶೇಕಡಾ 20ರಷ್ಟು ಜನರ ಕೈಯಲ್ಲಿ ಒಟ್ಟುಭೂಮಿಯ ಶೇಕಡಾ 80ರಷ್ಟು ಭೂಮಿ ಇದೆ. ಮೊದಲು ಡಕಾಯಿತರು, ನಂತರದ ದಿನಗಳಲ್ಲಿ ಮಾವೋವಾದಿಗಳು ಹುಟ್ಟಿಕೊಂಡದ್ದಕ್ಕೆ ಇದೂ ಕಾರಣ. ಬಿಹಾರಿಗಳ ರೀತಿಯಲ್ಲಿಯೇ ಇತ್ತೀಚೆಗೆ ಹೆಚ್ಚು ಸಂಖ್ಯೆಯಲ್ಲಿ ವಲಸೆ ಹೋಗುತ್ತಿರುವವರು ಈಶಾನ್ಯ ರಾಜ್ಯದ ಜನರು. ದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ, ಹೈದರಾಬಾದ್ ಮತ್ತು ಕೊಲ್ಕೊತ್ತಾಗಳಂತಹ ಮಹಾನಗರಗಳಲ್ಲಿ ಇವರ ಸಂಖ್ಯೆ ಹೆಚ್ಚುತ್ತಲೇ ಇದೆ. ರಾಷ್ಟ್ರ ಮತ್ತು ರಾಜ್ಯಗಳನ್ನು ಆಳಿದವರ ನಿರಂತರ ರಾಜಕೀಯ ನಿರ್ಲಕ್ಷ, ಕರ್ತವ್ಯಲೋಪ ಮತ್ತು ಆಂತರಿಕವಾದ ಸಾಮಾಜಿಕ ಬಿಕ್ಕಟ್ಟಿನಿಂದಾಗಿ ಕಳೆದ ನಾಲ್ಕೈದು ದಶಕಗಳಿಂದ ಆ ರಾಜ್ಯಗಳಲ್ಲಿನ ಸಾಮಾನ್ಯ ಜನ ಅನೇಕ ಬಗೆಯ ಕಷ್ಟ-ನಷ್ಟಗಳಿಗೆ ಈಡಾಗುತ್ತಾ ಬಂದಿದ್ದಾರೆ.

 

ಕೇಂದ್ರ ಯೋಜನಾ ಆಯೋಗ ನಡೆಸಿರುವ ಸಾಮಾಜಿಕ-ಆರ್ಥಿಕ ಅಧ್ಯಯನಗಳು ಕೂಡಾ ಇದನ್ನೆ ಹೇಳುತ್ತಿವೆ. ಇದರ ಪ್ರಕಾರ  ಕಳೆದ 1996-97ರಿಂದ 2007-2008ರ ಅವಧಿಯ ಹತ್ತುವರ್ಷಗಳಲ್ಲಿ ಕೃಷಿ ಕ್ಷೇತ್ರದ ಸರಾಸರಿ ಅಭಿವೃದ್ಧಿ ದರ ಕರ್ನಾಟಕದಲ್ಲಿ ಶೇಕಡಾ 7.16, ಆಂಧ್ರ ಪ್ರದೇಶದಲ್ಲಿ ಶೇಕಡಾ 6.82 ಮತ್ತು ಗುಜರಾತ್‌ನಲ್ಲಿ ಶೇಕಡಾ 7.46 ಆಗಿದ್ದರೆ, ಅದು ಅಸ್ಸಾಂನಲ್ಲಿ ಶೇಕಡಾ 1.51, ಮಣಿಪುರದಲ್ಲಿ ಶೇಕಡಾ 1.31, ಅರುಣಾಚಲ ಪ್ರದೇಶದಲ್ಲಿ ಶೇಕಡಾ 4.49, ನಾಗಲ್ಯಾಂಡ್‌ನಲ್ಲಿ ಶೇಕಡಾ 4.92, ತ್ರಿಪುರದಲ್ಲಿ ಶೇಕಡಾ 3.74, ಮಿಜೋರಾಂನಲ್ಲಿ ಶೇಕಡಾ 2.85, ಮತ್ತು ಮೇಘಾಲಯದಲ್ಲಿ ಶೇಕಡಾ 5.06 ಆಗಿದೆ. ಈ ರಾಜ್ಯಗಳ ಜತೆ ಸೇರಿಸಬಹುದಾದ ಇನ್ನೊಂದು ರಾಜ್ಯ ಒರಿಸ್ಸಾ.ಹತ್ತು ವರ್ಷಗಳ ಅವಧಿಯಲ್ಲಿ ಆ ರಾಜ್ಯದ ಕೃಷಿಕ್ಷೇತ್ರದ ಅಭಿವೃದ್ಧಿ ದರ ಶೇಕಡಾ 2.93ರಲ್ಲಿಯೇ ಇದೆ. ಕೃಷಿಕ್ಷೇತ್ರದ ಜತೆಯಲ್ಲಿ ದುಡಿಯುವ ಕೈಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ನೀಡುವ ಕೈಗಾರಿಕಾ ಕ್ಷೇತ್ರದ ಸ್ಥಿತಿ ಭಿನ್ನವಾಗಿಲ್ಲ. 1997-98ರಿಂದ 2007-08ರ ಅವಧಿಯ ಹತ್ತು ವರ್ಷಗಳಲ್ಲಿ ಕೈಗಾರಿಕಾ ಕ್ಷೇತ್ರದ ಸರಾಸರಿ ಅಭಿವೃದ್ಧಿ ದರ ಕರ್ನಾಟಕದಲ್ಲಿ ಶೇಕಡಾ 8.36 ಮತ್ತು ಆಂಧ್ರಪ್ರದೇಶದಲ್ಲಿ ಶೇಕಡಾ 6.61 ಆಗಿದ್ದರೆ, ಇದು ಅಸ್ಸಾಂನಲ್ಲಿ ಶೇಕಡಾ 1.51, ಅರುಣಾಚಲಪ್ರದೇಶದಲ್ಲಿ ಶೇಕಡಾ 4.49, ಮಣಿಪುರದಲ್ಲಿ ಶೇಕಡಾ 1.31,ಮೇಘಾಲಯದಲ್ಲಿ ಶೇಕಡಾ 5.06, ಮಿಜೋರಾಂನಲ್ಲಿ ಶೇಕಡಾ 2.85, ನಾಗಲ್ಯಾಂಡ್‌ನಲ್ಲಿ ಶೇಕಡಾ 4.92 ಮತ್ತು ತ್ರಿಪುರದಲ್ಲಿ ಶೇಕಡಾ 3.74 ಆಗಿದೆ. ಬಡತನದ ರೇಖೆಗಿಂತ ಕೆಳಗಿರುವವರ ಪ್ರಮಾಣ ಕರ್ನಾಟಕದಲ್ಲಿ ಶೇಕಡಾ 23.6 ಮತ್ತು ಆಂಧ್ರಪ್ರದೇಶದಲ್ಲಿ ಶೇಕಡಾ 21.1 ಆಗಿದ್ದರೆ, ಮಣಿಪುರದಲ್ಲಿ ಶೇಕಡಾ 47.1,ಅಸ್ಸಾಂನಲ್ಲಿ ಶೇಕಡಾ 40, ಅರುಣಾಚಲ ಪ್ರದೇಶದಲ್ಲಿ ಶೇಕಡಾ 26 ಆಗಿದೆ. ಆರೋಗ್ಯ, ಕುಡಿಯುವ ನೀರಿನ ಪೂರೈಕೆ, ಮೂಲಸೌಕರ್ಯ ಇತ್ಯಾದಿ ಮಾನವ ಸಂಪನ್ಮೂಲ ಅಭಿವೃದ್ಧಿಯ ಇತರಸೂಚ್ಯಂಕಗಳಲ್ಲಿಯೂ ಈಶಾನ್ಯ ರಾಜ್ಯಗಳು ದಕ್ಷಿಣದ ರಾಜ್ಯಗಳಿಂದ ಹಿಂದೆ ಉಳಿದಿವೆ.

ಸಾಮಾನ್ಯ ಓದು-ಬರಹಗಳಿಗಷ್ಟೇ ಸೀಮಿತಗೊಳಿಸಿ ಲೆಕ್ಕಹಾಕುವ ಸಾಕ್ಷರತೆಯ ಪ್ರಮಾಣದಲ್ಲಿ ಮಾತ್ರ ಈಶಾನ್ಯರಾಜ್ಯಗಳ ಸಾಧನೆ ಇತರ ಹಲವಾರು ರಾಜ್ಯಗಳಿಗಿಂತ ಉತ್ತಮವಾಗಿದೆ. ಸಾಕ್ಷರರ ಪ್ರಮಾಣ ರಾಷ್ಟ್ರಮಟ್ಟದಲ್ಲಿ ಶೇಕಡಾ 74.4 ಮತ್ತು ಕರ್ನಾಟಕದಲ್ಲಿ ಶೇಕಡಾ 75.60 ಆಗಿದೆ. ಅಸ್ಸಾಂ (ಶೇಕಡಾ 73.18) ರಾಜ್ಯವೊಂದನ್ನು ಹೊರತುಪಡಿಸಿ ಮಣಿಪುರ ( ಶೇಕಡಾ 80) ಮಿಜೋರಾಂ (ಶೇಕಡಾ 91.58)ನಾಗಲ್ಯಾಂಡ್ (ಶೇಕಡಾ 80.4),ಮೇಘಾಲಯ (ಶೇಕಡಾ 75.58) ಮತ್ತು ತ್ರಿಪುರ (ಶೇಕಡಾ 87.75) ರಾಜ್ಯಗಳು ದಕ್ಷಿಣದ ಕೆಲವು ರಾಜ್ಯಗಳಿಗಿಂತಲೂ ಮುಂದೆ ಇವೆ. ಆದರೆ ಉನ್ನತ ಶಿಕ್ಷಣದ ಕ್ಷೇತ್ರಗಳಲ್ಲಿ ಈಶಾನ್ಯರಾಜ್ಯಗಳು ಹಿಂದೆ ಉಳಿದಿವೆ. ಇದರಿಂದಾಗಿ ಆ ರಾಜ್ಯಗಳಲ್ಲಿ ವೈದ್ಯರು, ಎಂಜಿನಿಯರ್‌ಗಳು, ವಿಜ್ಞಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲ. ಈ ಕಾರಣದಿಂದಾಗಿಯೇ ಉನ್ನತ ಶಿಕ್ಷಣವನ್ನರಸಿಕೊಂಡು ಆ ರಾಜ್ಯಗಳ ವಿದ್ಯಾರ್ಥಿಗಳು ದೆಹಲಿ, ಬೆಂಗಳೂರು, ಹೈದರಾಬಾದ್, ಪುಣೆಯಂತಹ ಮಹಾನಗರಗಳಿಗೆ ಬರುತ್ತಿದ್ದಾರೆ.ಸಾಮಾನ್ಯವಾಗಿ ದೈಹಿಕ ಶ್ರಮದ ಉದ್ಯೋಗ ಮಾಡಲು ವಲಸೆ ಬರುವವರನ್ನು ಮಹಾನಗರಗಳು ತೆರೆದ ಬಾಹುಗಳಿಂದ ಸ್ವಾಗತಿಸುತ್ತವೆ. ನಗರವಾಸಿಗಳ ಚಾಕರಿ ಮಾಡಲು ಕೂಲಿಕಾರ್ಮಿಕರು ಬೇಕಾಗುತ್ತಾರೆ. ಈಗಲೂ ಬಿಹಾರ,ರಾಜಸ್ತಾನ, ಉತ್ತರಪ್ರದೇಶ, ಜಾರ್ಖಂಡ್ ಮೊದಲಾದ ರಾಜ್ಯಗಳಿಂದ ಬರುವ ಕೂಲಿಕಾರ್ಮಿಕರಿಲ್ಲದೆ ಹೋದರೆ ಮಹಾನಗರಗಳಲ್ಲಿನ ಕಟ್ಟಡ ನಿರ್ಮಾಣ ಕೆಲಸ ನಡೆಯಲಾರದು.

 

ವಲಸೆ ಸಮಸ್ಯೆ ಉಲ್ಬಣಗೊಂಡಿರುವುದು  ಆರ್ಥಿಕ ಉದಾರೀಕರಣದ ನಂತರದ ದಿನಗಳಲ್ಲಿ ಬಿಳಿಕಾಲರ್ ಉದ್ಯೋಗಗಳನ್ನು ಅರಸುತ್ತಾ  ನಗರಗಳಿಗೆ ವಲಸೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗತೊಡಗಿದಾಗ. ಮುಂಬೈ, ಕೊಲ್ಕೊತ್ತಾ, ದೆಹಲಿಗಳಿಗೆ ಸೀಮಿತವಾಗಿದ್ದ ಈ ಸಂಘರ್ಷ ಈಗ ಬೆಂಗಳೂರು ಮಹಾನಗರದಲ್ಲಿಯೂ ಕಾಣಿಸಿಕೊಂಡಿದೆ.

 

ಬಿಳಿ ಬಣ್ಣದ, ನೋಡಲು ವಿದೇಶಿಯರಂತೆ ಕಾಣುವ, ಇಂಗ್ಲಿಷ್ ಮಾತನಾಡಬಲ್ಲ ಈಶಾನ್ಯ ರಾಜ್ಯಗಳ ಯುವಕ-ಯುವತಿಯರು ಮಹಾನಗರಗಳ ಆತಿಥ್ಯ, ವೈದ್ಯಕೀಯ, ಪ್ರವಾಸೋದ್ಯಮ, ಸೌಂದರ್ಯವರ್ಧನೆ ಮೊದಲಾದ ಕ್ಷೇತ್ರಗಳ ಅವಶ್ಯಕತೆಗಳಿಗೆ ಹೇಳಿ ಮಾಡಿಸಿದಂತಿದ್ದಾರೆ.

 

ಉದ್ಯೋಗಾವಕಾಶ ಹೆಚ್ಚುತ್ತಿದ್ದಂತೆ ಆ ರಾಜ್ಯಗಳ ವಲಸೆಯ ಪ್ರಮಾಣ ಕೂಡಾ ಹೆಚ್ಚಾಗತೊಡಗಿದೆ. ಈಶಾನ್ಯರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಕೂಡಾ ವಲಸೆಹೋಗಲು ಜನರನ್ನು ದೂಡುತ್ತಿರುವ ಹಾಗೆ ಕಾಣುತ್ತಿದೆ. ಇಲ್ಲಿಯವರೆಗೆ ಪೊಲೀಸರು ನಡೆಸಿರುವ ತನಿಖೆಯ ಪ್ರಕಾರ ಕಳೆದ ವಾರ ಇಲ್ಲಿ ನಡೆದ ಘಟನೆಗಳಿಗೆ ವಲಸೆಯ ಸಮಸ್ಯೆ ನೇರವಾಗಿ ಕಾರಣ ಆಗಿರಲಾರದೆಂದು ಅನಿಸಿದರೂ ಎಚ್ಚರಿಕೆಯ ಗಂಟೆಗಳಂತಿರುವ ಇಂತಹ ಘಟನೆಗಳನ್ನು ನಿರ್ಲಕ್ಷಿಸಲಾಗದು.ಭಾರತದ ಯಾವ ಮೂಲೆಯಲ್ಲಿಯಾದರೂ ಬದುಕುವ ಹಕ್ಕನ್ನು ಸಂವಿಧಾನ ನೀಡಿರುವುದು ನಿಜ. ಈ ಅಸ್ತ್ರವನ್ನೇ ಎತ್ತಿಕೊಂಡು ವಲಸೆಯನ್ನು ಸಮರ್ಥಿಸುವ ರೀತಿಯಲ್ಲಿಯೇ ಭಾಷಾವಾರು ಪ್ರಾಂತ್ಯ ರಚನೆಯ ಆಶಯವನ್ನು ಮುಂದಿಟ್ಟುಕೊಂಡು ವಲಸೆಯನ್ನು ಪ್ರಶ್ನಿಸಲು ಕೂಡಾ ಸಾಧ್ಯ. ಆದರೆ ಇಂತಹ ತರ್ಕ-ಕುತರ್ಕಗಳ ಮೂಲಕ ವಲಸೆಯಿಂದಾಗಿ ಹುಟ್ಟಿಕೊಳ್ಳುವ ನೂರಾರು ಬಗೆಯ ಸಂಘರ್ಷಗಳನ್ನು ತಡೆಯಲಿಕ್ಕಾಗದು.ವಲಸೆಯ ಮೂಲ ಕಾರಣ ರಾಜ್ಯಗಳ ಅಸಮಾನ ಅಭಿವೃದ್ಧಿಯಲ್ಲಿದೆ. ಹಿಂದುಳಿದ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಮತ್ತು ಅಭಿವೃದ್ಧಿಯ ಪ್ಯಾಕೇಜ್‌ಗಳನ್ನು ನೀಡಿದರಷ್ಟೇ ಸಾಲದು. ಆ ರಾಜ್ಯಗಳ ಆಡಳಿತ ಸೂತ್ರ ಹಿಡಿದವರು ಪ್ರಜೆಗಳ ಮೂಲಭೂತಅವಶ್ಯಕತೆಗಳನ್ನು ಮೂಲ ಸೌಕರ್ಯಗಳನ್ನು ಒದಗಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು, ಇಲ್ಲದೆ ಹೋದರೆ ಹಿಂದುಳಿದ ರಾಜ್ಯಗಳನ್ನು ಆಳುವವರು ಮಾಡಿದ ತಪ್ಪಿಗೆ ನಾವು ಯಾಕೆ ಬೆಲೆ ಕೊಡಬೇಕು ಎಂದು ಅಭಿವೃದ್ಧಿಹೊಂದುತ್ತಿರುವ ರಾಜ್ಯಗಳ ಜನರ ಪ್ರಶ್ನೆಗೆ ಉತ್ತರಿಸುವುದು ಕಷ್ಟವಾಗಬಹುದು.ವಲಸೆ ಎನ್ನುವುದು ಸದ್ಯಕ್ಕೆ ಬೂದಿಮುಚ್ಚಿದ ಕೆಂಡದಂತಿದೆ, ನಿರ್ಲಕ್ಷಿಸಿದರೆ ಅದು ಬೆಂಕಿಯಾಗಿ ಹೊತ್ತಿಕೊಳ್ಳುವ ಅಪಾಯ ಇದೆ.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.