ಮಂಗಳವಾರ, ಜನವರಿ 21, 2020
27 °C

ಮಹಿಳಾ ಅಧ್ಯಯನ ಸಂಸ್ಥೆಗಳಿಗೇ ಬೇಕಾಗಿದೆ ನೀತಿ ಸಂಹಿತೆ

ಆರ್. ಇಂದಿರಾ Updated:

ಅಕ್ಷರ ಗಾತ್ರ : | |

ನೆರೆ ರಾಜ್ಯ ಆಂಧ್ರಪ್ರದೇಶದ ಹಿರಿಯ ಪೊಲಿಸ್ ಅಧಿಕಾರಿಯೊಬ್ಬರು ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಮಹಿಳೆಯರು ಧರಿಸುವ ಪ್ರಚೋದಕ ಉಡುಗೆಗಳೇ ಕಾರಣ ಎಂದು ಹೇಳಿದ ಬೆನ್ನಲ್ಲೇ ನಮ್ಮ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಂತ್ರಿಗಳು ಹೆಣ್ಣು ಮಕ್ಕಳು ಧರಿಸಬೇಕಾದ ಉಡುಗೆ ತೊಡುಗೆಗಳ ಬಗ್ಗೆ ಮಾಡಿದ ನೀತಿ ಬೋಧನೆ ಮಾಧ್ಯಮಗಳಲ್ಲಿ ವರದಿಯಾದಾಗ ಮಹಿಳಾಪರ ಕಾಳಜಿಗಳನ್ನು ಹೊಂದಿದವರಿಗೆ ನೂರಾರು ಹೆಜ್ಜೆಗಳನ್ನು ಹಿಂದಕ್ಕೆ ಹಾಕಿದಂತೆ ಭಾಸವಾಗಿತ್ತು.ಆದರೆ ಇದಕ್ಕೂ ಮಿಗಿಲಾದ ಆಘಾತವೆಂದರೆ ಈ ವಸ್ತ್ರಸಂಹಿತೆಯ ಚರ್ಚೆಯಲ್ಲಿ ಪಾಲ್ಗೊಂಡ ಬೆಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ವಿಭಾಗದ ಹಿಂದಿನ ನಿರ್ದೇಶಕರು ಹಾಗೂ ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟುವ ಸಮಿತಿಯ ಹಾಲಿ ಅಧ್ಯಕ್ಷರಿಂದ ಮೂಡಿ ಬಂದ ಪ್ರತಿಕ್ರಿಯೆ.

 

ಮಹಿಳೆಯರು ಧರಿಸಬೇಕಾದ ಉಡುಗೆಗಳ ಉದ್ದಗಲದ ಬಗ್ಗೆ ಹಾಗೂ ಅವರು ದಾಟಬಹುದಾದ ಹಾಗೂ ದಾಟಕೂಡದ ಮರ್ಯಾದೆಯ ಸೀಮಾರೇಖೆಗಳ ಬಗ್ಗೆ ಇವರು ನೀಡಿದ ವ್ಯಾಖ್ಯಾನ ಮಹಿಳಾ ಅಧ್ಯಯನ ಸಂಸ್ಧೆಗಳ ಉದ್ದೆೀಶಗಳು ಹಾಗೂ ಕಾರ್ಯ ನಿರ್ವಹಣೆಯ ವೈಖರಿಯ ಬಗ್ಗೆಯೇ ಕೆಲ ಮೂಲಭೂತ ಪ್ರಶ್ನೆಗಳನ್ನು ಎತ್ತಲು ಇನ್ನಾದರೂ ಲಿಂಗ ಸೂಕ್ಷ್ಮ ಮನಸ್ಸುಗಳು ಸನ್ನದ್ಧವಾಗಬೇಕು ಎಂಬ ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ.ಪೊಲೀಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಂದ ಲಿಂಗಸೂಕ್ಷ್ಮ ನಿಲುವುಗಳನ್ನು ನಾವು ನಿರೀಕ್ಷಿಸುವುದು ಕಷ್ಟವೇ. ಇದಕ್ಕೆ ಕೆಲ ಅಪವಾದಗಳೂ ಇರಬಹುದು. ಆದರೆ, ಮಹಿಳಾ ಅಧ್ಯಯನ ಕೇಂದ್ರಗಳು ಹಾಗೂ ಮಹಿಳೆಯರ ಸ್ವಾತಂತ್ರ್ಯ, ಸ್ವಾಭಿಮಾನಗಳನ್ನು ರಕ್ಷಣೆ ಮಾಡಲು ಸೃಷ್ಟಿಯಾದಂಥ ಸಂಸ್ಥೆಗಳ ಚುಕ್ಕಾಣಿ ಹಿಡಿದಿರುವ ವ್ಯಕ್ತಿಗಳಿಂದ ನಾವು ನಿರೀಕ್ಷಿಸುವುದು ಲಿಂಗ ಪೂರ್ವಗ್ರಹಗಳು ಹಾಗೂ ಆಚರಣೆಗಳನ್ನು ಪ್ರಶ್ನಿಸುವ ಮನೋಭಾವಗಳು.

 

ಆದರೆ ಇಂದು ಅನೇಕ ಮಹಿಳಾ ಅಧ್ಯಯನ ಕೇಂದ್ರಗಳು, ಮಹಿಳೆಯರ ಸಬಲೀಕರಣಕ್ಕಾಗಿಯೇ ಅಸ್ತಿತ್ವಕ್ಕೆ ಬಂದಿರುವ ಮಹಿಳಾ ವಿಶ್ವವಿದ್ಯಾನಿಲಯಗಳು ಅಥವಾ ಮಹಿಳಾ ಕಾಲೇಜುಗಳು ಸ್ತ್ರೀ ವಿಮೋಚನೆ ಹಾಗೂ ಸ್ತ್ರೀವಾದದಂತಹ ಗಂಭೀರ ವಿಚಾರಗಳನ್ನು ಕುರಿತು ತಳೆದಿರುವ ಧೋರಣೆಗಳು ಒಂದು ರೀತಿಯಲ್ಲಿ ಭಯ ಹುಟ್ಟಿಸುತ್ತಿವೆ.ಹೊಸ ಹಾದಿಯ ಅನ್ವೇಷಣೆಯಲ್ಲಿ ದಾರಿದೀಪಗಳಾಗಬೇಕಾದ ಈ ಸಂಸ್ಧೆಗಳಲ್ಲಿ ಅನೇಕವು ಲಿಂಗ ವ್ಯವಸ್ಥೆಯ ಪಡಿಯಚ್ಚುಗಳನ್ನು ಪೋಷಿಸಿ, ಪುಷ್ಟೀಕರಿಸುತ್ತಿರುವುದು ಒಂದು ದುರಂತವೇ ಸರಿ.ಮಹಿಳಾ ಅಧ್ಯಯನ ಸಂಸ್ಥೆಗಳ ಧ್ಯೇಯೋದ್ದೇಶಗಳ ಬಗ್ಗೆ ಪ್ರಸ್ತಾಪ ಮಾಡುತ್ತಿರುವ ಈ ಸಂದರ್ಭದಲ್ಲಿ ಮನಸ್ಸು ಸಹಜವಾಗಿಯೇ ಎಂಬತ್ತರ ದಶಕಕ್ಕೆ ಜಾರುತ್ತದೆ. ಮಹಿಳಾ ಚಳವಳಿಯ ಕಾವು ದೇಶದಾದ್ಯಂತ ಪಸರಿಸುತ್ತಿದ್ದ ಕಾಲವದು.ಶಿಕ್ಷಣ ಮತ್ತು ಸಮಾಜ-ಈ ಎರಡು ವ್ಯವಸ್ಥೆಗಳಲ್ಲೂ ಮಹಿಳೆಯರ ಸೀಮಾಂತೀಕರಣವನ್ನು ಪ್ರಶ್ನಿಸಿ, ಪ್ರತಿಭಟಿಸಿ ಲಿಂಗ ಸಮಾನತೆಗೆ ಬದ್ಧವಾದ ನವ ಸಮಾಜವನ್ನು ನಿರ್ಮಾಣ ಮಾಡುವ ಕನಸನ್ನು ಕಂಡ ವ್ಯಕ್ತಿಗಳು ಈ ಚಳವಳಿಯ ಮುಂಚೂಣಿಯಲ್ಲಿದ್ದವರು. ಅವರಿಂದ ರೂಪಿತವಾದ ಮಹಿಳಾ ಅಧ್ಯಯನದ ಪರಿಕಲ್ಪನೆ ಕೇವಲ ಒಂದು ಸಿದ್ಧಾಂತವಾಗದೆ, ಬದುಕುವ ವಿಧಾನವೂ ಆಗಿತ್ತು.ಸಮಾಜದ ವಿವಿಧ ಸಂಸ್ಥೆಗಳಲ್ಲಿ ಹಾಸು ಹೊಕ್ಕಾಗಿದ್ದ ಲಿಂಗ ಅಸಮಾನತೆಯ ಎಳೆಗಳನ್ನು ಗುರುತಿಸಿ, ಅವುಗಳನ್ನು ಹೊರಹಾಕಿ ಲಿಂಗ ಪೂರ್ವಗ್ರಹಗಳಿಂದ ಮುಕ್ತವಾದ ಸಾಮಾಜಿಕ ವ್ಯವಸ್ಥೆಯನ್ನು ಸೃಷ್ಟಿಸುವಲ್ಲಿ ಮಹಿಳಾ ಅಧ್ಯಯನಕ್ಕೆ ವಿಶೇಷವಾದ ಸ್ಥಾನವನ್ನು ನೀಡಲಾಗಿದ್ದನ್ನು ಇಲ್ಲಿ ಗಮನಿಸಬೇಕು.

 

ಮೊದಮೊದಲಲ್ಲಿ ಅಸ್ತಿತ್ವಕ್ಕೆ ಬಂದ ಮಹಿಳಾ ಅಧ್ಯಯನ ಕೇಂದ್ರಗಳು ಡಿಗ್ರಿ ತಯಾರಿಕಾ ಘಟಕಗಳಾಗದೆ ಸಾಮಾಜಿಕ ಬದಲಾವಣೆಯ ಹರಿಕಾರರಂತೆ ಕೆಲಸ ಮಾಡುವ ನಿಟ್ಟಿನಲ್ಲಿ ತಮ್ಮ ಆದ್ಯತೆಗಳನ್ನು ಗುರುತಿಸಿಕೊಂಡಿದ್ದವು. ಬೋಧನೆ, ಸಂಶೋಧನೆಗಳ ಜೊತೆಜೊತೆಗೆ ಸಮಾಜಮುಖಿಯಾದ ಕಾರ್ಯಗಳಲ್ಲಿ ತೊಡಗಿಸಿಕೊಂಡ  ಅಧ್ಯಾಪಕ-ವಿದ್ಯಾರ್ಥಿ ವರ್ಗ ಈ ಸಂಸ್ಥೆಗಳ ವೈಶಿಷ್ಟ್ಯವೆನಿಸಿದ್ದವು.1986ರ ಸುತ್ತಮುತ್ತ ದೇಶದ ಕೆಲ ವಿಶ್ವವಿದ್ಯಾನಿಲಯಗಳಲ್ಲಿ ಮಹಿಳಾ ಅಧ್ಯಯನ ಕೇಂದ್ರಗಳು ಪ್ರಾರಂಭವಾದಾಗ ಬಹುತೇಕ ಸಂದರ್ಭಗಳಲ್ಲಿ ಕಟ್ಟಡ, ಕಾರು, ಕಂಪ್ಯೂಟರ್, ಕಚೇರಿ ಸಿಬ್ಬಂದಿ ಮುಂತಾದ ಸಾಧನ ಸಾಮಗ್ರಿಗಳಿರಲಿಲ್ಲ. ಆದರೆ ಕಾಳಜಿ ಇತ್ತು. ಸಂಸ್ಧೆಯನ್ನು ಕಟ್ಟಬೇಕೆಂಬ ಕನಸುಗಳಿದ್ದವು.ಈ ಕೇಂದ್ರಗಳ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡವರು ತಮ್ಮ ಸ್ವಂತ ಖರ್ಚಿನಲ್ಲೇ ಅನೇಕ ದಿನಗಳ ಕಾಲ ಕೇಂದ್ರದ ಎಲ್ಲ ಆಡಳಿತಾತ್ಮಕ ವ್ಯವಹಾರಗಳನ್ನು ನಡೆಸಿದ್ದು, ಎಂಥ ಅಡ್ಡಿಗಳು ಎದುರಾಗಲಿ, ಕೇಂದ್ರಗಳಲ್ಲಿ ನಿರಂತರವಾಗಿ ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದ್ದುದು- ಇವುಗಳೆಲ್ಲ ಅನೇಕ ಸಂಸ್ಥೆಗಳಲ್ಲಿ ಇತಿಹಾಸದ ಪುಟಗಳನ್ನು ಸೇರಿ ಹೋಗುತ್ತಿರುವ ವಿಚಾರಗಳೇ ಎಂಬ ಆತಂಕ ನನ್ನನ್ನು ಕಾಡುತ್ತಿದೆ. ಈ ಹೊತ್ತು ಭಾರತದಲ್ಲಿ ಮಹಿಳಾ ಅಧ್ಯಯನ ಕೇಂದ್ರಗಳ ಸಂಖ್ಯೆ ಹೆಚ್ಚಿದೆ.

 

ಕಾಲೇಜುಗಳಲ್ಲಿರುವ ಮಹಿಳಾ ಅಧ್ಯಯನ ಘಟಕಗಳೂ ಸೇರಿದಂತೆ ಹೆಚ್ಚು-ಕಡಿಮೆ 130 ಮಹಿಳಾ ಅಧ್ಯಯನ ಸಂಸ್ಥೆಗಳು ವಿಶ್ವವಿದ್ಯಾನಿಲಯ ಅನುದಾನ ಆಯೋಗದ ಬೆಂಬಲದಿಂದ ಪ್ರಾರಂಭವಾಗಿವೆ. ಇವುಗಳಲ್ಲದೆ ಆರು (6) ಮಹಿಳಾ ವಿಶ್ವವಿದ್ಯಾಲಯಗಳೂ ದೇಶದಲ್ಲಿ ಕಾರ್ಯ ಪ್ರವೃತ್ತವಾಗಿವೆ.ಮಹಿಳಾ ಅಧ್ಯಯನದಲ್ಲಿ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸುಗಳನ್ನು ವಿಶ್ವವಿದ್ಯಾನಿಲಯಗಳ ಮಹಿಳಾ ಅಧ್ಯಯನ ವಿಭಾಗಗಳಲ್ಲಿ ಮಹಿಳಾ ಅಧ್ಯಯನ ಕೇಂದ್ರಗಳಲ್ಲಿ ಪದವಿ ಕಾಲೇಜುಗಳಲ್ಲಿ ಪ್ರಾರಂಭ ಮಾಡಲಾಗಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಸಂಸ್ಥೆಗಳ ಸಂಖ್ಯೆ ಮಹಿಳಾ ಅಧ್ಯಯನ ವಿಷಯಕ್ಕೆ ಗೋಚರತೆಯನ್ನು ದೊರಕಿಸಿಕೊಡುತ್ತಿದೆ ನಿಜ.ಆದರೆ ಈ ಹೆಚ್ಚಳ ಬಹುಮಟ್ಟಿಗೆ ಸಂಖ್ಯಾತ್ಮಕ ಸಾಧನೆಯೋ ಅಥವಾ ಮಹಿಳೆಯರ ಬದುಕಿನಲ್ಲಿ ಅಥವಾ ಮಹಿಳೆಯರನ್ನು ಕುರಿತ ಸಮಾಜದ ದೃಷ್ಟಿಕೋನದಲ್ಲಿ ಗುಣಾತ್ಮಕ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಎಷ್ಟರಮಟ್ಟಿಗೆ ಕೆಲಸ ಮಾಡಿದೆ ಎಂಬ ಪ್ರಶ್ನೆಗಳಿಗೆ ನಮ್ಮ ಬಳಿ ಒಂದು ಸಮರ್ಪಕ ಉತ್ತರವಿದೆಯೇ?ದೇಶದಲ್ಲಿ ಅಸ್ತಿತ್ವಕ್ಕೆ ಬಂದಿರುವ ಎಲ್ಲ ಮಹಿಳಾ ಅಧ್ಯಯನ ಕೇಂದ್ರಗಳನ್ನಾಗಲಿ, ವಿಶ್ವವಿದ್ಯಾನಿಲಯಗಳನ್ನಾಗಲಿ ಒಂದೇ ತಕ್ಕಡಿಯಲ್ಲಿಟ್ಟು ತೂಗುವ ಹಾಗಿಲ್ಲ.  ಇಂಥ ಸಂಸ್ಥೆಗಳ ಸದಸ್ಯರನೇಕರು ತಾತ್ವಿಕವಾಗಿ ಬಹಳ ಪ್ರಬುದ್ಧತೆಯನ್ನೂ ಗಳಿಸಿದ್ದಾರೆ. "ಸಾಮಾಜಿಕ ಕಾರ್ಯಕರ್ತರಾಗಿ ಲಿಂಗನ್ಯಾಯ ಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಆದರೆ ನಿಸ್ಸಂಶಯವಾಗಿ ಈ ವರ್ಗಕ್ಕೆ ಸೇರಿದ ವ್ಯಕ್ತಿಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದು ತೀರಾ ಕಳವಳಕಾರಿಯಾದ ವಿಚಾರ.ಮತ್ತೊಂದೆಡೆ ಮಹಿಳಾ ಅಧ್ಯಯನಗಳನ್ನು `ಬೋಧನೆಗಾಗಿ-ಬೋಧನೆ, ಸಂಶೋಧನೆಗಾಗಿ-ಸಂಶೋಧನೆ~ ಎಂಬ ಧೋರಣೆಯಿಂದ ನೋಡುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಭಯ ಹುಟ್ಟಿಸುವಂಥ ಬೆಳವಣಿಗೆ.ಮಹಿಳಾ ಅಧ್ಯಯನ ಸಂಸ್ಥೆಗಳು ಆರಂಭವಾದ ದಿನಗಳಲ್ಲಿ ಅವುಗಳ ಕಾರ್ಯಸೂಚಿಗೂ ಮಹಿಳಾ ಚಳವಳಿಯ ಗುರಿಗಳಿಗೂ ನಡುವೆ ಒಂದು ಸಮನ್ವಯವಿತ್ತು. 1980 ಹಾಗೂ 1990ರ ದಶಕಗಳಲ್ಲಿ ಈ ಸಂಸ್ಥೆಗಳು ಮಹಿಳೆಯರ ಆಶೋತ್ತರಗಳ ಧ್ವನಿಗಳಾಗಿದ್ದೂ ನಿಜ. ಅನ್ಯಾಯಗಳ ವಿರುದ್ಧ ಪ್ರತಿಭಟನೆ ಮಾಡಿದ್ದೂ ನಿಜ.ಆದರೆ ಇಂದು ತಮ್ಮ ಸುತ್ತಮುತ್ತ ಮಹಿಳೆಯರ ವಿರುದ್ಧ ಎಂಥ ಘೋರ ಅನ್ಯಾಯವೇ ನಡೆಯುತ್ತಿರಲಿ, ಬಹುತೇಕ ಮಹಿಳಾ ಅಧ್ಯಯನ ಕೇಂದ್ರಗಳು, ಮಹಿಳಾ ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜುಗಳ ಮಹಿಳಾ ಅಧ್ಯಯನ ವಿಭಾಗಗಳು ಯಾವುದೇ ಪ್ರತಿಕ್ರಿಯೆಯನ್ನು ವ್ಯಕ್ತ ಪಡಿಸದೆ ಮೌನ ಸಾಂಗತ್ಯವನ್ನು ಮಾಡಿಕೊಂಡಿವೆ.

 

ಮರ್ಯಾದಾ ಹತ್ಯೆಯಾಗಲಿ, ಉದ್ಯೋಗಸ್ಥ ಮಹಿಳೆಯರ ಮಾನನಷ್ಟವಾಗಲಿ, ವರದಕ್ಷಿಣೆಯಾಗಲಿ, ಭ್ರೂಣ ಹತ್ಯೆಯಾಗಲಿ-ಈ ಸಂಸ್ಥೆಗಳು ವಹಿಸಿರುವ ದಿವ್ಯ ಮೌನವನ್ನು ಗಮನಿಸಿದರೆ `ಏತಕ್ಕೆ ಬೇಕು ಈ ಮಹಿಳಾ ಅಧ್ಯಯನ~ ಎನಿಸದೆ ಹೋಗುವುದಿಲ್ಲ.ಇಂದು ಸಂಭವಿಸುತ್ತಿರುವ ಬಹು ದೊಡ್ಡ ದುರಂತವೆಂದರೆ ಈ ಎಲ್ಲ ವಿಷಯಗಳನ್ನೂ ತಮ್ಮ ಪಠ್ಯಕ್ರಮದೊಳಗೆ ಸೇರಿಸಿಕೊಂಡ ಅನೇಕ ಮಹಿಳಾ ಅಧ್ಯಯನ ಕೋರ್ಸುಗಳಲ್ಲಿ ಎಲ್ಲ ವ್ಯವಹಾರಗಳು ನಡೆಯುವುದೂ ತರಗತಿಯ ನಾಲ್ಕು ಗೋಡೆಗಳ ನಡುವೆಯೇ.

 

ಈ ಅಧ್ಯಯನ ವಿಷಯದ ಸ್ವರೂಪವೇ ಹೇಗಿದೆಯೆಂದರೆ ಬೋಧನೆ-ಸಂಶೋಧನೆಗಳೆರಡೂ ಅಂತರ್‌ಶಿಸ್ತೀಯ ದೃಷ್ಟಿಕೋನದಿಂದಲೇ ನಡೆಯಬೇಕು, ಸೈದ್ಧಾಂತಿಕ ಪರಿಣತಿಯೊಡನೆ ಮಹಿಳೆಯರ ಬದುಕಿನ ವಾಸ್ತವಗಳ ನೇರ ಅನುಭವವನ್ನೂ ಅಧ್ಯಾಪಕರು-ವಿದ್ಯಾರ್ಥಿಗಳು ಪಡೆಯಬೇಕು. ಆದರೆ ಎಷ್ಟು ಸಂಸ್ಥೆಗಳಲ್ಲಿ ಹೀಗಾಗುತ್ತಿದೆ ಎಂಬ ಪ್ರಶ್ನೆಗೆ ನಮ್ಮ ಬಳಿ ಉತ್ತರವಿದೆಯೇ?ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ `ಬೋಧಿಸುವುದು ಮಾತ್ರ ನಮ್ಮ ಕೆಲಸ, ಹೋರಾಟ ನಡೆಸಲು ಮಹಿಳಾ ಸಂಘಟನೆಗಳಿವೆಯಲ್ಲ~ ಎನ್ನುವವರಿಂದ ಹಿಡಿದು `ಸ್ತ್ರೀ-ಪುರುಷ ಸಮಾನತೆಯಲ್ಲಿ ನನಗೆ ನಂಬಿಕೆಯಿದೆ.

 

ಆದರೆ ನಾನು ಮಹಿಳಾ ಹೋರಾಟಗಾರ್ತಿ ಎಂದು ಗುರುತಿಸಿಕೊಳ್ಳಲು ಇಚ್ಛೆಪಡುವುದಿಲ್ಲ~ ಎಂದು ಹೇಳುವವರ ವರೆಗೆ ಬಗೆ ಬಗೆಯ ಧೋರಣೆಗಳನ್ನು ಹೊಂದಿದ್ದವರು ಮಹಿಳಾ ಅಧ್ಯಯನದ ಭವಿಷ್ಯವನ್ನು ಬರೆಯುವ ಸ್ಥಿತಿ ಅನೇಕ ಕಡೆಗಳಲ್ಲಿ ನಿರ್ಮಾಣವಾಗಿದೆ.ಮಹಿಳಾ ಅಧ್ಯಯನವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ಪದವಿಯನ್ನು ಪಡೆದ ವಿದ್ಯಾರ್ಥಿಗಳು ಅನೇಕ ಸಂದರ್ಭಗಳಲ್ಲಿ ಸೂಕ್ತ ಉದ್ಯೋಗ ದೊರೆಯದೆ ಪರದಾಡುವ ಪರಿಸ್ಥಿತಿ ಸೃಷ್ಟಿಯಾಗಿರುವುದಕ್ಕೆ ಕೂಡ ಮಹಿಳಾ ಅಧ್ಯಯನಗಳಲ್ಲಿ ಕಂಡುಬರುತ್ತಿರುವ ಸಮಾಜಮುಖಿ ಚಿಂತನೆಯ ಅಭಾವವೇ ಪ್ರಮುಖ ಕಾರಣ ಎನ್ನುವುದು ನನ್ನ ಭಾವನೆ.ಮಹಿಳಾ ಅಭಿವೃದ್ಧಿಗೆಂದೇ ಮೀಸಲಿರುವ ಅನೇಕ ಸರ್ಕಾರಿ ಅಥವಾ ನಾಗರಿಕ ಸಂಸ್ಥೆಗಳಲ್ಲೂ ಮಹಿಳಾ ಅಧ್ಯಯನ ಪದವಿ ಪಡೆದವರಿಗೆ ಆದ್ಯತೆಯಿಲ್ಲವೆಂದರೆ ಈ ಇಡೀ ವ್ಯವಸ್ಥೆಯ ಬಗ್ಗೆಯೇ ನಾವು ಗಂಭೀರವಾಗಿ ಚಿಂತಿಸಬೇಕಾಗುತ್ತದೆ.ಕೆಲವೆಡೆಗಳಲ್ಲಂತೂ ನಿನ್ನೆ-ಮೊನ್ನೆ ತೆರೆದ ಮಹಿಳಾ ಅಧ್ಯಯನ ಕೋರ್ಸುಗಳನ್ನೇ ಮುಚ್ಚಲಾಗುತ್ತಿದ್ದು ಮಹಿಳಾ ಅಧ್ಯಯನ ಸರಿಯಾದ ಆರಂಭವನ್ನು ಕಾಣುವ ಮೊದಲೇ ಅಪಾಯದ ಅಂಚನ್ನು ತಲುಪುತ್ತಿದೆ.ಬಹು ನಿರೀಕ್ಷೆಗಳಿಂದ ಪ್ರಾರಂಭವಾದ ಅನೇಕ ಮಹಿಳಾ ಅಧ್ಯಯನ ಸಂಸ್ಥೆಗಳು ಎಲ್ಲೋ ಒಂದೆಡೆ ತಮ್ಮ ಮೂಲ ಉದ್ದೇಶದಿಂದಲೇ ದೂರ ಸರಿಯುತ್ತಿರುವ ಪರಿಸ್ಥಿತಿ ಸೃಷ್ಟಿಯಾಗುತ್ತಿರುವುದನ್ನು ನೋಡಿದರೆ ನಿರಾಶೆ, ಆಕ್ರೋಶ, ಅಸಹನೆ ಮುಂತಾದ ಭಾವನೆಗಳೆಲ್ಲ ಏಕಕಾಲದಲ್ಲಿ ಹೊರ ಹೊಮ್ಮುತ್ತವೆ.ಆದರೆ `ಕೈಲಾಗದವರು ಮೈ ಪರಚಿಕೊಂಡಂತಾಗಬಾರದು~ ನಮ್ಮ ಸ್ಥಿತಿ. ಮೊದಲಿಗೆ ಈ ಸಂಸ್ಥೆಗಳ ಆದರ್ಶಗಳು, ಗುರಿಗಳು ಹಾಗೂ ಕಾರ್ಯ ವಿಧಾನಗಳನ್ನು ಕುರಿತಂತೆ ಎಲ್ಲ ಆಸಕ್ತರನ್ನೊಳಗೊಂಡ ಮುಕ್ತ ಚಿಂತನೆ ಹಾಗೂ ಸಂವಾದ ನಡೆಯುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಹಿಳಾ ಚಳವಳಿ ಸಕ್ರಿಯವಾಗಿ ಕಾರ್ಯ ಪ್ರವೃತ್ತವಾಗಬೇಕು.

 

ಎರಡನೆಯದಾಗಿ, ಮಹಿಳಾ ಅಧ್ಯಯನ ಸಂಸ್ಥೆಗಳ ನಾಯಕತ್ವದ ಸ್ಥಾನಗಳಲ್ಲಿರುವವರಿಗೆ ಹಾಗೂ ಅಧ್ಯಾಪಕ-ವಿದ್ಯಾರ್ಥಿಗಳಿಗೆ ತಾವು ಚಲಿಸಬೇಕಾದ ಮಾರ್ಗದ ಬಗ್ಗೆ ಸ್ಪಷ್ಟ ಮಾದರಿಗಳನ್ನು ನೀಡಬೇಕು.

 

ಈ ಸಂಸ್ಥೆಗಳ ದಿಕ್ಸೂಚಿಯಾಗಿ ಒಂದು ಸ್ಪಷ್ಟ ನೀತಿ ಹೊರ ಹೊಮ್ಮದಿದ್ದರೆ ಕೋಟಿಗಟ್ಟಲೆ ಸಾರ್ವಜನಿಕ ಹಣ ಒಂದು ವ್ಯರ್ಥ ಸಂಪನ್ಮೂಲವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ಪ್ರತಿಕ್ರಿಯಿಸಿ (+)