ಗುರುವಾರ , ಮೇ 6, 2021
25 °C

ಮಾತಿನ ಬಲದಿಂದ, ಮಾತಿನಲ್ಲೇ ಮನೆ ಕಟ್ಟುತ್ತಾ...

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಮಾತು ಮಾನವಸಮಾಜದ ಜೊತೆಗೇ ಸುರುವಾಯಿತೆನ್ನುತ್ತಾರೆ ಬಲ್ಲವರು. ಅಕ್ಷರವಿಲ್ಲದ ಸಮಾಜಗಳು ಇಂದಿಗೂ ಹಲವಿವೆ. ಆದರೆ ಮಾತಿಲ್ಲದ ಸಮಾಜಗಳು ಎಲ್ಲಿಯೂ ಇಲ್ಲ. ಅಕ್ಷರಸ್ಥ ಸಮಾಜಗಳಲ್ಲೂ ಬರವಣಿಗೆಗಿಂತಾ ಮಾತಿನದೇ ಮೇಲುಗೈ.ನಾವೆಲ್ಲರೂ ಒಂದು ದ್ವೀಪವಾದರೆ ಮಾತು ನಮ್ಮನ್ನು ಒಂದು ಸಾಗರದೋಪಾದಿಯಲ್ಲಿ ಆವರಿಸಿದೆ. ಮಾತು ಗಾಳಿಯಲ್ಲಿ ತೇಲಿಹೋಗಬಾರದೆಂಬ ಇಚ್ಛೆಯಿಂದ ಜನ ಬರವಣಿಗೆಗೆ ಶುರು ಹಚ್ಚಿಕೊಂಡರು. ಬರವಣಿಗೆಗೆ ಶಾಸನದ ಶಕ್ತಿ ಬಂದಾಗ ಅದು ಬಲಿಷ್ಠ ವರ್ಗದ ಪಾಲಾಯಿತು. ಅಕ್ಷರಜ್ಞಾನ ತಿಳಿವಿನ ಹಾದಿಯನ್ನು ತೆರೆಯಿತು, ನಿಜ.ಆದರೆ ಅದು ಅಧಿಕಾರದ, ಅಹಂಕಾರದ ಬುನಾದಿಯೂ ಆಯಿತು. ಇತಿಹಾಸದಲ್ಲಿ ಬಹಳ ಸಲ ಅಕ್ಷರವಿಲ್ಲದ ಜನಾಂಗಗಳು ಅಕ್ಷರಬಲ್ಲ ಜನಾಂಗಗಳ, ವರ್ಗಗಳ ದಬ್ಬಾಳಿಕೆಗೊಳಗಾಗಬೇಕಾಗಿ ಬಂತು.ಆದರೆ ಬರವಣಿಗೆಗೂ ನಿಜಕ್ಕೂ ಅಂಥಾ ಆಳವಾದ ನಂಟೇನೂ ಇಲ್ಲ. ನಮ್ಮ ಶಾಸನಗಳನ್ನು ನೋಡಿ. ಹತ್ತು ಹಳ್ಳಿಗಳನ್ನಾಳುತ್ತಿದ್ದ ಹೈದನೊಬ್ಬ ಒಂದೊಂದು ಶಾಸನಗಳಲ್ಲಿ ತಾನು ತ್ರಿಭುವನಮಲ್ಲನೆಂದು ಕೊಚ್ಚಿಕೊಳ್ಳುತ್ತಾನೆ.ಪ್ರತಿಷ್ಠಿತ ವರ್ಗಗಳ ಬರವಣಿಗೆ ಆಯಾ ಸಮಾಜದ ಕಾನೂನಾಗುತ್ತದೆ. ಅದು ನಿಜವಾಗಿ ಇರಬೇಕೆಂಬ ನಿಯಮವಿಲ್ಲ. ಧರ್ಮಗ್ರಂಥಗಳಾಗಲೀ ಕಾನೂನು ಪುಸ್ತಕಗಳಾಗಲೀ ಶಾಶ್ವತ ಸತ್ಯಗಳಲ್ಲ. ಆಯಾ ಕಾಲಕ್ಕೆ, ಆಯಾ ಸಮಾಜಕ್ಕೆ ಬೇಕಾದಂತೆ ಮಾಡಿಕೊಂಡ ಒಡಂಬಡಿಕೆಗಳು.ನಮ್ಮ ಜಾಹಿರಾತು ಯುಗದಲ್ಲಿ ನೂರಾರು ಸುಳ್ಳುಗಳು ಜಾಹಿರಾತಿಗೆ ಸಂಬಂಧಿಸಿದ ಬರವಣಿಗೆಗಳಲ್ಲಿ ಚಾಲ್ತಿಯಲ್ಲಿವೆ.ಮಾತು ಮನುಷ್ಯರಿಗೆ ಸಹಜ, ಸ್ವಾಭಾವಿಕ. ಪ್ರಾಣಿಗಳು ಮಾತಾಡುವುದಿಲ್ಲ, ಕೂಗುತ್ತವೆ. ಗಿಡ-ಮರಗಳು ಮಾತಾಡುವುದಿಲ್ಲ. ಬೆಟ್ಟ-ಗುಡ್ಡ-ನದಿ-ಸಮುದ್ರಗಳು ಮಾತಾಡುವುದಿಲ್ಲ. ನಾವು ಮನುಷ್ಯ ಪ್ರಾಣಿಗಳು ಮಾತ್ರ ಮಾತಾಡುತ್ತೇವೆ.

 

ಪ್ರಾಣಿ-ಪಕ್ಷಿಗಳು ಮಾತಾಡುವುದು ಅಡಗೂಲಜ್ಜಿಯ ಕತೆಗಳಲ್ಲಿ, ಜನಪದದಲ್ಲಿ, ಪುರಾಣಗಳಲ್ಲಿ ಮಾತ್ರ. ನಮ್ಮ ಜಗತ್ತನ್ನು ನಮ್ಮ ಅನುಕೂಲಕ್ಕೆ ಹೊಂದಿಸಿ ಕೊಳ್ಳುವ ಉದ್ದೇಶಗಳಿಂದ ನಾವು ನಮ್ಮ ಸ್ವಭಾವವನ್ನು ಜೀವ-ಜಡಗಳಿಗೆ ಕಲ್ಪನೆಯಲ್ಲಿ ಆರೋಪಿಸುತ್ತೇವೆ.ನಮ್ಮ ಮಾತಿನ ಅಂಗಗಳು--ಉಸಿರು, ನಾಲಗೆ, ಹಲ್ಲುಗಳೂ, ತುಟಿಗಳು ಇತ್ಯಾದಿ--ಮಾತಿಗೇ ಹೇಳಿ ಮಾಡಿಸಿದಂತಿವೆ. ಅಳುವಿನಿಂದ ಶುರುವಾದ ನಮ್ಮ ಬದುಕು ಸುತ್ತಮುತ್ತಲ ಪ್ರಭಾವದಿಂದ ಮಾತು ಕಲಿಯುತ್ತಾ ಹೋಗುತ್ತೇವೆ. ಯಾವ ಭಾಷೆ ಅನ್ನುವುದು ನಮ್ಮ ಪರಿಸರದ ಮೇಲೆ ನಿಂತಿದೆ.ಮಾತಾಡುವ ಶಕ್ತಿ ಸ್ವಾಭಾವಿಕವಾದರೂ ಅದು ಕಲೆಯೂ ಹೌದು. ಆದ್ದರಿಂದ ಎಲ್ಲ ಕಲೆಗಳಲ್ಲಿರುವಂತೆ ಇಲ್ಲಿಯೂ ಕಲಿಕೆಯೆಂಬುದುಂಟು. ಎಲ್ಲ ಸಮಾಜಗಳಲ್ಲಿ ದೊಡ್ಡವರು ಮಕ್ಕಳಿಗೆ ಮಾತಿನ ಸರಿ-ತಪ್ಪುಗಳನ್ನು ಕಲಿಸುತ್ತಾರೆ.ಯಾರ ಜೊತೆ ಹೇಗೆ ಮಾತಾಡಬೇಕು, ಎಲ್ಲಿ ಯಾವ ತರದ ಮಾತಾಡಬೇಕು ಇತ್ಯಾದಿಗಳು ನಾವು ಸಮಾಜದಿಂದ ಕಲಿಯುವುದರ ಮುಖ್ಯ ಭಾಗ. ಈ ವಿವರಗಳ ಆಧಾರದ ಮೇಲೆ ಸಂಬೋಧನೆಗಳು, ಬಳಸಬೇಕಾದ ಶಬ್ದಗಳು ಬದಲಾಗುತ್ತಾ ಹೋಗುತ್ತವೆ. ಉದಾಹರಣೆಗೆ ಮಾಮೂಲಿ ಸಂದರ್ಭಗಳಲ್ಲಿ ಹೆಂಗಸು, ಗಂಡಸು ಶಬ್ದಗಳನ್ನು ಬಳಸುತ್ತೇವೆ.

 

ಆದರೆ ಹೆಚ್ಚು ಗಂಭೀರ ಸಂದರ್ಭಗಳಲ್ಲಿ ಮಹಿಳೆಯರು, ಪುರುಷರು ಅನ್ನುತ್ತೇವೆ. ಕನ್ನಡಭಾಷೆಯ ಬಳಕೆಯಲ್ಲಿ ಮಾಮೂಲಿ ಸನ್ನಿವೇಶಗಳಲ್ಲಿ  ದ್ರಾವಿಡಮೂಲದ ಪದಗಳನ್ನು, ಗಂಭೀರ ಸನ್ನಿವೇಶದಲ್ಲಿ  ಸಂಸ್ಕೃತಮೂಲ ಪದಗಳನ್ನು ಬಳಸುವುದು ವಾಡಿಕೆ. ಇದೇನೂ ಮೇಲು-ಕೀಳುಗಳ ಪ್ರಶ್ನೆಯಲ್ಲ; ಬಳಕೆಯ ವಿಚಾರ. ಈ ರೀತಿಯ ತಿಳಿವಳಿಕೆಯನ್ನು, ರಿವಾಜುಗಳನ್ನು ಆಯಾ ಭಾಷಿಕರು ನೇರ ಪಾಠಕ್ಕಿಂತ ಹೆಚ್ಚಾಗಿ ಅನುಭವದ, ಅನುಕರಣೆಯ ಮೂಲಕ ತಮ್ಮಳಗಿಳಿಸಿಕೊಳ್ಳುತ್ತಾರೆ.ಮಾತಿನ ಬಗೆಗಿನ ಹಲವು ಉಪಯುಕ್ತ ತಾಕೀತುಗಳು, ಎಚ್ಚರಿಕೆಗಳು, ಸಲಹೆ-ಸೂಚನೆಗಳು ಗಾದೆ, ನಾಣ್ನುಡಿಗಳ ಮೂಲಕ ನಮ್ಮನ್ನು ಪ್ರಭಾವಿಸುತ್ತವೆ. `ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ~ ಅನ್ನುತ್ತಾನೆ ನಾಣ್ನುಡಿಗಳ ಪಿತಾಮಹ ಸರ್ವಜ್ಞ.ತಾನು ವಿದ್ಯೆಯ ಪರ್ವತವಾದದ್ದು ಮಾತಿನ ಬಲದಿಂದ ಎಂದು ಬೇರೆ ಹೇಳುತ್ತಾನೆ:  ಸರ್ವರೊಳಗೊಂದೊಂದು ನುಡಿಗಲಿತು ವಿದ್ಯೆಯ ಪರ್ವತವೆ ಆದ ಸರ್ವಜ್ಞ.  ಅತಿಯಾಗಿ ಮಾತಾಡುವವರ ಬಗ್ಗೆ ಎಚ್ಚರಿಸುವ ನಾಣ್ನುಡಿಗಳಿವೆ: ಕೆಲವರು ಮಾತಿನಲ್ಲೇ ಮನೆಕಟ್ಟುತ್ತಾರೆ; ಇನ್ಯಾರೋ ಮಾತುಗಾತಿ  ಮಲ್ಲಮ್ಮನಂತೆ. ಬಂಡಲ್ ಹೊಡೆಯುವ ಗಂಡಸನ್ನು  ಮಾತಿನ ಮಲ್ಲ  ಎಂದು ಕರೆಯಲಾಗಿದೆ.

 

ಇಂಥವರು ಮಾತಿನಲ್ಲೇ  ಮರುಳು ಮಾಡುತ್ತಾರೆ.  ಮಾತಿನಲ್ಲೇ ಮೋಡಿ ಹಾಕುತ್ತಾರೆ.  ತೀರಾ ಮಾತಾಡದವನನ್ನೂ ನಂಬಲಾಗದಂತೆ:  ಮಾತಾಡಲ್ಲ, ಮನೆ ಉಳಿಯಲ್ಲ.  ನಿಜಕ್ಕೆ ತೀರಾ ಹತ್ತಿರವಾಗಿ ಮಾತಾಡುವ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ: `ಇದ್ದಿದ್ದು ಇದ್ದಂಗ್ಹೇಳುದ್ರೆ ಎದ್ ಬಂದು ಎದೆಗೊದೀತಾರಂತೆ.~

 

ಭಾಷಿಕರ ಸಾಮೂಹಿಕ ಮನಸ್ಸು ಮಾತಿನ ಬಗ್ಗೆ ಇಂಥ ಹಲವು ನಿರ್ಮಿತಿಗಳನ್ನು ಮಾಡಿದಂತೆ ಮಾತಿನ ಕಲಾವಿದರಾದ ಕವಿಗಳೂ ಮಾತಿನ ಬಗ್ಗೆ ತಮ್ಮ ಒಳನೋಟಗಳನ್ನು ಮಾತಿನ್ಲ್ಲಲಿ  ಕಟ್ಟುತ್ತಾರೆ. `ಮಾತೆಂಬುದು ಜ್ಯೋತಿರ್ಲಿಂಗ `ಅನ್ನುತ್ತಾನೆ ಅಲ್ಲಮ. `ಮತ್ತಿನಂಥ ಮಾತು~ ಎಂಬಲ್ಲಿ ಮಾತು ಮಧುರವಾಗಿರಬೇಕನ್ನುವ ಸಲಹೆಯಿದೆ.  ನುಡಿದರೆ ಮುತ್ತಿನ ಹಾರದಂತಿರಬೇಕೆನ್ನುತ್ತಾರೆ ಬಸವಣ್ಣನವರು.ಬರೀ ಮಾತಿನಲ್ಲಿ ಹೊಟ್ಟೆ ತುಂಬುವುದಿಲ್ಲ ಅನ್ನೋದು ಎಲ್ಲರಿಗೂ ಗೊತ್ತು. ವಸ್ತುನಿಷ್ಟವಾಗಿ ನೋಡಿದಾಗ ಮಾತು ನಿಜದ ಕನ್ನಡಿಯೇ ಹೊರತು ನಿಜವೇ ತಾನಲ್ಲ. ಇದು ನಮ್ಮೆಲ್ಲರಿಗೂ ಗೊತ್ತು. ಆದರೂ ಹಲವು ಸಲ ಮಾತು ನಿಜಕ್ಕಿಂತಲೂ ನಿಜವಾಗಿಬಿಡುತ್ತದೆ. ಈ ಅರ್ಥದಲ್ಲೆೀ ಹಿಟ್ಲರನ ಪ್ರಚಾರ ಮಂತ್ರಿಯಾಗಿದ್ದ ದಾ. ಗೊಬೆಲ್ಸ್ ಹೇಳುತ್ತಿದ್ದ:  ಒಂದು ಸುಳ್ಳನ್ನು ನೂರು ಸಲ ಹೇಳಿದರೆ  ಅದೇ ನಿಜವಾಗುತ್ತದೆ.  ಇದೇ ಎಲ್ಲ ಸುಳ್ಳು ಪ್ರಚಾರಕರ ಮಂತ್ರ.

 

ಹಿಟ್ಲರನ ಕಾಲದಲ್ಲಿ  ಬ್ರೆಕ್ಟ್ ಬರೆದ ಆಲೂಗಡ್ಡೆಯ ಬಗೆಗಿನ ಒಂದು ಕವಿತೆಯಿದೆ. ಹಿಟ್ಲರ್ ದೊಡ್ಡದೊಡ್ಡ ಮಾತುಗಳಲ್ಲಿ ಮಂತ್ರಮುಗ್ಧ ಜರ್ಮನರ ಮುಂದೆ ಭಾಷಣ ಹೊಡೆಯುತ್ತಿದ್ದಾಗ ಆಲೂಗಡ್ಡೆ ಚಿಕ್ಕದಾಗುತ್ತಾ ಹೋಗಿ ಕೊನೆಗೆ ಮಾಯವಾಗಿಬಿಡುತ್ತದೆ. ಆಲೂಗಡ್ಡೆ ಜರ್ಮನಿಯಲ್ಲಿ ಊಟದ ಮುಖ್ಯ ವಸ್ತು. ಮಾಯವಾಗುವ ಮೊದಲು ಅದು ಜರ್ಮನರಿಗೆ ಎಚ್ಚರಿಕೆ ಕೊಡುತ್ತದೆ:  ಅವನಿದ್ದರೆ ನಾನಿಲ್ಲ; ನಾನಿದ್ದರೆ ಅವನಿಲ್ಲ.ಅವನಿಲ್ಲದೆ ಬಾಳಬಲ್ಲಿರಿ; ನಾನಿಲ್ಲದೆ ಬಾಳಲಾರಿರಿ. ಹೀಗೆ ಮಾತು ನಿಜದ ನೆರಳಾಗುವಂತೆ, ಸುಳ್ಳಿನ ಸಾರಾಯಿಯೂ ಆಗಬಲ್ಲುದು. ಸುಳ್ಳನ್ನೇ ಸಾವಿರಾರು ವರ್ಷ ನಿಜವೆಂದು ನಂಬಿದ ಉದಾಹರಣೆಗಳು ರಿತ್ರೆಯಲ್ಲಿ ಹೇರಳವಾಗಿ ಸಿಗುತ್ತವೆ.

 

ಕೆಲವು ಜನಾಂಗಗಳು, ಧರ್ಮೀಯರು, ಜಾತಿಯವರು, ಪ್ರದೇಶೀಯರು ತಾವು ಸವಾಲೆತ್ತದೆ ಕೇಳಿಸಿಕೊಳ್ಳುತ್ತಾ ಬಂದದ್ದನ್ನೇ ನಿಜವೆಂದು ನಂಬುವುದು ಮಾತ್ರವಲ್ಲದೆ ಕತ್ತಿ, ಬಂದೂಕು, ಆಮಿಷಗಳ ಬಲದಿಂದ ಇತರರನ್ನೂ ನಂಬಿಸಹೋಗಿ ಅಸಂಖ್ಯಾತ ರಕ್ತಪಾತ, ಸಾಮೂಹಿಕ ಹತ್ಯೆ, ದಬ್ಬಾಳಿಕೆಗಳನ್ನು ಮಾಡಿದ್ದಾರೆ.ನಿಜದ ಆಧಾರದ ಮೇಲೆ ಸಾಮೂಹಿಕ ಭ್ರಮೆಗಳನ್ನು ಎದುರಿಸಿದವರನ್ನು ನಿರ್ನಾಮ ಮಾಡಿದ್ದಾರೆ. ಆದರೆ ನಿಜದ ಆಕರ್ಷಣೆಯೂ ಅದಮ್ಯ. ಸುಳ್ಳಿಗೆ ಸವಾಲು ಹಾಕುವ ಗಿಯರ್ದಾನೋ ಬ್ರೂನೋಗಳೂ, ಕೋಪರ್ನಿಕಸ್, ಗೆಲಿಲಿಯೋಗಳು ಹುಟ್ಟುತ್ತಲೇ ಇರುತ್ತಾರೆ. ಅಡಿಗರ ಮಾತಿನಲ್ಲಿ ಹೇಳುವುದಾದರೆ ಅಂಥವರು  ಉದ್ದುದ್ದ ಮಾತುಗಳ ಬಲೂನಿಗೆ ನಿಜದ ಸೂಜಿಮೊನೆಯನ್ನು  ಮುಟ್ಟಿಸುತ್ತಿರುತ್ತಾರೆ.ದಿಟ್ಟನುಡಿಯ ವಚನಕಾರ ಅಂಬಿಗರ ಚೌಡಯ್ಯ ಹೀಗೆನ್ನುತ್ತಾನೆ: ಮಾತಿನ ಬಲದಿಂದ ವೇದಂಗಳಾದುವಲ್ಲದೆವೇದ ಸ್ವಯಂಭುವಲ್ಲ ನಿಲ್ಲು;ಮಾತಿನ ಬಲದಿಂದ ಶಾಸ್ತ್ರಂಗಳಾದುವಲ್ಲದೆಶಾಸ್ತ್ರ ಸ್ವಯಂಭುವಲ್ಲ ನಿಲ್ಲುಹೀಗೆ ಪವಿತ್ರವೆಂದು ತಿಳಿಯಲಾದ ಯಾವುದೂ ಪರೀಕ್ಷೆಗೆ ಹೊರತಲ್ಲವೆಂಬ ಎಚ್ಚರಿಕೆ ನೀಡುತ್ತಾನೆ.ಭಗವಾನ್ ಬುದ್ಧ ತನ್ನ ಧರ್ಮವನ್ನು ` ತಹಸ್ಸುಖಿ ಧಮ್ಮ ` ಎಂದು ಕರೆದ. ಇದರರ್ಥ `ಬಂದು ಮುಟ್ಟಿ ನೋಡಿ ` ಎಂದು. ತನ್ನ ಅಥವಾ ಯಾವುದೇ ಗುರುವಿನ ಮಾತನ್ನು ಪರೀಕ್ಷೆಯ ಒರೆಗಲ್ಲಿಗೊಡ್ಡಬೇಕೆಂದೂ ಸೂಚಿಸುತ್ತಾನೆ: “ಪರೀಖ್ಖಾತ್ ಗಾಹ್ಯಂ ಭಿಖ್ಖವೇ.” ಒಮ್ಮೆ ಬುದ್ಧನ ಶಿಷ್ಯನೊಬ್ಬ ಕೇಳುತ್ತಾನೆ: `ಭಂತೆ, ನೀವೊಂದು ಧರ್ಮವನ್ನು ಬೋಧಿಸುತ್ತೀರ. ಆ ನಾಥಪುತ್ತ (ಮಹಾವೀರ) ಇನ್ನೊಂದು ಧರ್ಮವನ್ನು ಬೋಧಿಸುತ್ತಾನೆ. ಮಖ್ಖಲಿ ಗೋಸಲ ಇನ್ನೊಂದು ಧರ್ಮ ಬೋಧಿಸುತ್ತಾನೆ. ನಾವು ಯಾವುದನ್ನು ನಿಜವೆಂದು ತಿಳಿಯಬೇಕು?~  ಅದಕ್ಕೆ ಬುದ್ಧಗುರು ಹೀಗೆ ಉತ್ತರಿಸುತ್ತಾನೆ:  `ನನ್ನ ಮಾತನ್ನು ನಾನು ಹೇಳಿದನೆಂಬ ಕಾರಣಕ್ಕೆ ನಂಬಬೇಡ. ಇತರರ ಮಾತುಗಳನ್ನು ಇತರರು ಹೇಳಿದ ಕಾರಣಕ್ಕೆ ನಂಬಬೇಡ. ನನ್ನ ಮತ್ತು ಅವರ ಮಾತುಗಳನ್ನು ನಿನ್ನ ಅನುಭವದಲ್ಲಿ ಪರೀಕ್ಷಿಸಿ ಯಾವುದು ನಿಜವೆಂದು ನೋಡಿಕೊ.~ಬುದ್ಧಗುರುವಿಗೆ ತನ್ನ ವಿಚಾರಗಳ ಬಗೆ ಇದ್ದ ಪ್ರಶಾಂತ ಆತ್ಮವಿಶ್ವಾಸ ಮತ್ತು ಮುಕ್ತತೆ ಬಹಳ ಜನ ಗುರುಗಳಿಗಿರುವುದಿಲ್ಲ. ತಾವಂದ ಮಾತ್ರಕ್ಕೇ ಅದು ಸತ್ಯ ಎಂದು ನಂಬಿಸುತ್ತಾರೆ. ನಂಬದವರನ್ನು ಶಪಿಸುತ್ತಾರೆ, ಹಿಂಸಿಸುತ್ತಾರೆ. ಯಾಕೆಂದರೆ ಅವರಿಗೂ ಅನುಭವವಿರುವುದಿಲ್ಲ. ಅಥವಾ ತಮ್ಮ ಅನುಭವಕ್ಕಿಂತ ಮಾತೇ ದೊಡ್ಡದೆಂದು ನಂಬಿರುತ್ತಾರೆ.ಕಾಶ್ಮೀರದ ಹಿರಿಯ ಸಂತ-ದಾರ್ಶನಿಕ ಅಭಿನವ ಗುಪ್ತರೂ ಈ ಬಗ್ಗೆ ಮಾತಾಡುತ್ತಾರೆ. ಅವರು ಹಲವು ಶಾಸ್ತ್ರಗಳನ್ನು ಹಲವು ಗುರುಗಳಿಂದ ಕಲಿತರಂತೆ. ಅವರೆಲ್ಲರಿಗೂ ತಾವು ಕೃತಜ್ಞರಾಗಿರುವೆನೆಂದು ಹೇಳುತ್ತಾರೆ. ಆದರೆ ಆ ಗುರುಗಳು ತಾವು ಹೇಳಿದ್ದನ್ನುಳಿದು ಇನ್ನೆಲ್ಲವೂ ಮಿಥ್ಯೆಯೆಂದು ಹೇಳಿದಾಗ ಅವರಿಗೆ ನಮಸ್ಕರಿಸಿ ಮುಂದೆ ನಡೆದೆ ಎನ್ನುತ್ತಾರೆ.ಮಾತು ನಮ್ಮ ಒಳಹೊರಗುಗಳೆಲ್ಲೆಲ್ಲೂ ವ್ಯಾಪಿಸಿರುವುರಿಂದ ಅದರ ಬಗ್ಗೆ ಗಮನ ಕೊಡುವುದು ಸುಲಭವಲ್ಲ. ಮಾನವರಿಗೆ ಮಾತು ಉಸಿರಾಟದಷ್ಟೇ ಸಹಜ. ಉಸಿರಾಟದ ಬಗ್ಗೆ ಎಷ್ಟು ಜನ ನಿಗಾ ಮಾಡುತ್ತಾರೆ? ಇತರರೊಂದಿಗೆ ಮಾತಾಡದಿದ್ದಾಗ ನಮ್ಮ ಜೊತೆ ನಾವೇ ಒಳಗೊಳಗೆ ಮಾತಾಡಿಕೊಳ್ಳುತ್ತಿರುತ್ತೇವೆ. ಎಚ್ಚರದ ಗಳಿಗೆಗಳನ್ನು ದಾಟಿ ಕನಸಿನಲ್ಲೂ ಮಾತಾಡುತ್ತೇವೆ ಕೇಳಿಸಿಕೊಳ್ಳುತ್ತೇವೆ.

 

ಮಾತಿನ ಸರ್ವವ್ಯಾಪಕತೆಯ ಬಗ್ಗೆ ಹಿಂದಿನ ನಿಗಮಾಮಗಳು ಇಂದಿನ ದರ್ಶನಶಾಸ್ತ್ರಗಳು ಹೇಳುತ್ತವೆ. ಪಡುವಣದ ವಿದ್ವಾಂಸ ಲಕಾನ್ ನಮ್ಮ ಸುಪ್ತಪ್ರಜ್ಞೆಯೂ ಮಾತಿನ ಹಾಗೆ ರಚಿತವಾಗಿದೆಯೆನ್ನುತ್ತಾನೆ. ತಂತ್ರಗಳಾದರೋ ಮಾತಿನ ನಾಕು ನೆಲೆಗಳನ್ನು ಬಿಚ್ಚಿಡುತ್ತವೆ.ಕಿವಿಗೆ ಕೇಳುವ ಮಾತನ್ನು~ ವೈಖರಿವಾಕ್~ ಎಂದು ಕರೆದಿವೆ. ಇದರಾಚೆಗೆ ನಮಗೆ ನಾವೇ ಪಿಸುಗುಟ್ಟುಕೊಳ್ಳುವ ಮಾತಿನ ಬಗೆಯೊಂದಿದೆ. ಇದನ್ನು ಪಶ್ಯಂತಿ ಎಂದು ಕರೆಯಲಾಗಿದೆ. ಕಿವಿಗೆ ಕೇಳದಷ್ಟು ಸೂಕ್ಷ್ಮವಾದ ಮಾತಿನ ಬಗೆಯನ್ನು `ಪರಾ~ ಎನ್ನಲಾಗಿದೆ. ಇವೆಲ್ಲಕ್ಕೂ ತಳದಲ್ಲಿ ಪರಾತ್ಪರವೆಂಬುದೊಂದಿದೆ. ಎಚ್ಚರದಿಂದ ಸುಪ್ತಪ್ರಜ್ಞೆಯ ವರೆಗೆ ಮಾತಿನ ನಾಕು ಪದರಗಳಿವೆ.ವಿಚಾರವಂತರು, ವಿಜ್ಞಾನಿಗಳು ಮಾತುಗಳನ್ನು ನಿಜದ ಒರೆಗಲ್ಲಿಗೊಡ್ಡಿನೋಡುತ್ತಾರೆ. ಮಾತಿನ ಮಿತಿಗಳನ್ನರಿತು ಅದನ್ನು ಸಮೀಪವಾಗಿಸಲು ಶ್ರಮಿಸುತ್ತಾರೆ. ಆದರೆ ಅನುಭಾವಿಗಳು ಮಾತಿನಾಚೆಗಿನ ಮೌನದಲ್ಲಿ ನಿಜವನ್ನರಸುತ್ತಾರೆ. `ಬೊಮ್ಮವನು ಅರಿತವವನು ಸುಮ್ಮನಾಗಿರಬೇಕು~ ಅನ್ನುತ್ತಾನೆ ಮಹಲಿಂಗ ರಂಗ. ನಿಜಗುಣ ಶಿವಯೋಗಿಗಳು ಕೊಂಡಾಡುವ ನಿರ್ಮಲ ಜ್ಯೋತಿ  ಮಾತು ಮನಂಗಳಿಂದತ್ತತ್ತ. ಆದರೆ ಮೌನದ ಕೊಂಡಾಟ ನಡೆಯುವುದೂ ಮಾತಿನಲ್ಲೆೀ ಆದ್ದರಿಂದ ಅನುಭಾವಿಗಳಿಗೆ, ಮುನಿಗಳಿಗೆ, ಸಿದ್ಧರಿಗೆ, ಬುದ್ಧರಿಗೆ ಯಾರಿಗೂ ಮಾತಿನಿಂದ ಪೂರ್ತಿ ಬಿಡುಗಡೆಯಿಲ್ಲ. ನಂಬಿಗಸ್ತರು ಆರಾಧಿಸುವ ದೇವ-ದೇವಿಯರೂ ಮಾತಿಗೊಳಗು. ಕಾಳಿದಾಸ ಮಾತನ್ನು ಶಕ್ತಿಯೆಂದೂ ಅರ್ಥವನ್ನು ಶಿವನೆಂದೂ ಕೀರ್ತಿಸುತ್ತಾನೆ. ಯೋಗದ ಪ್ರಕಾರ ಮಾತನ್ನು ಮಂತ್ರವಾಗಿಸಿ ಮಂತ್ರವನ್ನು ಮೌನದಲ್ಲಿ ಮುಳುಗಿಸಬೇಕು. ಹಾಗೆ ಮುಳುಗಿದ ಮೇಲೆ ಯೋಗಿಗಳೂ ಮಾತಿನ ದಂಡೆಗೆ ವಾಪಸಾಗುತ್ತಾರೆ.ಸತ್ಯಗಳೂ ಸಾಪೇಕ್ಷವಾಗಿರುವ ಜಗತ್ತಿನಲ್ಲಿ ಮಾತಿನೊಳಗೆ ಹರಳುಗಟ್ಟಿರುವ ನಿಜಗಳೂ ಸಾಪೇಕ್ಷವೇ. ಸಮಾಜ ಬದಲಾದಂತೆ ಮಾತುಗಳ, ಶಬ್ದಗಳ ಪುನರ್ಮೌಲ್ವೀಕರಣ ನಡೆಯುತ್ತಲೇ ಇರುತ್ತದೆ. ಕೆಲವು ದಶಕಗಳ ಹಿಂದೆ  ಸಮಾಜವಾದ ಎನ್ನುವ ಪದ ಸಾರ್ವಜನಿಕವಲಯದಲ್ಲಿ ಮತ್ತೆ ಮತ್ತೆ ಕೇಳಿ ಬರುತ್ತಿತ್ತು. ಗೋಳೀಕರಣದ ಭರಾಟೆಯಲ್ಲಿ ಅದೀಗ ಕ್ಷೀಣವಾಗಿದೆ.ಆಗ ಪ್ರಗತಿಯ ಅರ್ಥ ಸಮಾಜವಾದಿಯಾಗಿ ತೋರುತ್ತಿತ್ತು. ಈಗ ಪ್ರಗತಿಯೆಂದರೆ ಹಣಹೂಡಿಕೆಯ ಹೆಚ್ಚಳ. ಗೋಳೀಕರಣ, ಗೋಳೀಕರಣ ಎಂಬ ಗೋಳೀಕರಣದ ಏಜೆಂಟುಗಳ ಡಂಗೂರ ಮತ್ತೆಮತ್ತೆ ಕೇಳಿಸಿಕೊಂಡು ಅದೇ ಪರಮಸತ್ಯವೆಂದು ಗೋಳೀಕರಣದ ಮಿಕಗಳೂ ನಂಬಹತ್ತಿವೆ.ಶಬ್ದಗಳು, ಅರ್ಥಗಳು ಬದಲಾದಾಗ ಆಗುವ ಉತ್ಪಾತಗಳ ಬಗ್ಗೆ ಯೋಚಿಸಿದಾಗ ತಮಿಳು ಬರಹಗಾರ್ತಿ ಭಾಮಾ ಅವರ ಕತೆಯ ಘಟನೆಯೊಂದು ನೆನಪಾಗುತ್ತಿದೆ. ಒಬ್ಬ ದಲಿತ ಬಾಲಕ ಸಂತೆಗೆ ಹೋಗುತ್ತಿರುವಾಗ ಬಸ್ಸಿನಲ್ಲಿ ಒಬ್ಬ ಸವರ್ಣೀಯ ಯಜಮಾನನ್ನು `ಹೇಗಿದ್ದೀರಿ ಮಾಮಾ~  ಎಂದು ಕೇಳಿಬಿಡುತ್ತಾನೆ.ಇದನ್ನು ಕೇಳಿ ಆ ಯಜಮಾನಪ್ಪ ಸಿಡಿದುಹೋಗುತ್ತಾನೆ. ಊರ ಪಂಚಾಯಿತಿ ಕರೆಸುತ್ತಾನೆ. ನನ್ನನ್ನು ಮಾವ ಎಂದು ಕರೆಯುವ ದಾರ್ಷ್ಟ್ಯ ಇವನಿಗೆ ಹೇಗೆ ಬಂತೆಂದು ಕೇಳುತ್ತಾನೆ.ತಾನು ಇವನ ಮಾಮನಾಗಬೇಕಾದರೆ ಇವನ ತಾಯಿಯ ಅಣ್ಣನಾಗಿರಬೇಕು, ಅಂದರೆ ಇವರ ಜಾತಿಯವನೇ ಆಗಿರಬೇಕು. ತನ್ನ ಜಾತಿಯನ್ನು ಈ ಬಾಲಕ ಅಪಮೌಲ್ಯಗೊಳಿಸದನೆಂದು ಅದಕ್ಕಾಗಿ ಇವನಿಗೆ ದಂಡ ಹಾಕಬೇಕೆಂದು ರಗಳೆಮಾಡುತ್ತಾನೆ. ಹಾಗಾದರೆ ನಿನ್ನನ್ನು ಏನೆಂದು ಕರೆಯಬೇಕಾಗಿತ್ತು ಅಂತ ಆ ಬಾಲಕ ಕೇಳಿದಾಗ ಯಜಮಾನಪ್ಪ ನಿರುತ್ತರನಾಗುತ್ತಾನೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.