ಗುರುವಾರ , ಮೇ 6, 2021
31 °C

ಮಾದರಿ ನಡತೆ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಇವರ ಹೆಸರು ಪ್ರೊಫೆಸರ್ ಶೋಜಿ ಶೀಬಾ. ಇವರು ಜಪಾನಿನ ಸುಬಾಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅದಲ್ಲದೇ ಅಮೇರಿಕೆಯ ಖ್ಯಾತ ಎಂ.ಐ.ಟಿ. ವಿಶ್ವವಿದ್ಯಾಲಯದ ಸ್ಲೋಅನ್ ಸ್ಕೂಲ್ ಆಫ್ ಮ್ಯೋನೇಜಮೆಂಟಿನಲ್ಲಿ  ಗೌರವ ಅಧ್ಯಾಪಕರು.ಅವರಿಗೆ ಜಪಾನ್ ಚಕ್ರವರ್ತಿ ಇದೇ ಜುಲೈ 5ರಂದು ತಮ್ಮ ದೇಶದ ಸರ್ವಶ್ರೇಷ್ಠ ಪ್ರಶಸ್ತಿಯಾದ  ಆರ್ಡರ್ ಆಫ್ ಸೇಕ್ರೆಡ್ ಟ್ರೆಜರ್‌ನ್ನು ನೀಡಿ ಗೌರವಿಸಿದರು. ಇದು ಶೀಬಾರವರು ಭಾರತ ಮತ್ತು ಜಪಾನುಗಳ ನಡುವೆ ಶೈಕ್ಷಣಿಕ ಸಂಬಂಧಗಳಿಗೆ ನೀಡಿದ ಕಾಣಿಕೆ.ಅವರು ಭಾರತದಲ್ಲಿ  ವಿಷನರಿ ಲೀಡರ್‌ಶಿಪ್ ಇನ್ ಮ್ಯೋನೇಜಮೆಂಟ್ (ಆಡಳಿತದಲ್ಲಿ ದಾರ್ಶನಿಕ ನಾಯಕತ್ವ) ಎಂಬ ವಿಷಯದಲ್ಲಿ ಪಾಠ ಮಾಡುತ್ತಾರೆ.ಈ ಕಾರ್ಯಕ್ರಮ ಐ.ಐ.ಎಂ ಕೋಲ್ಕತ್ತಾ, ಐಐಟಿ ಕಾನ್‌ಪುರ, ಐಐಟಿ ಚೆನ್ನೈ, ಭಾರತದ ಮಾನವ ಸಂಪನ್ಮೂಲ ಇಲಾಖೆ ಮತ್ತು ಜಪಾನಿನ ಅಂತರರಾಷ್ಟ್ರೀಯ ಸಹಕಾರಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ  ನಡೆಯುವ ಮಹತ್ವದ ಕಾರ್ಯಕ್ರಮ. ಈ ಪ್ರಕ್ರಿಯೆಗೆ ಪ್ರೊಫೆೆಸರ್ ಶೀಬಾ ಮುಖ್ಯ ಸಲಹೆಗಾರರು.ಈ ಎಲ್ಲ ಪೀಠಿಕೆ ಅವರು ಎಷ್ಟು ದೊಡ್ಡ ಹುದ್ದೆಯಲ್ಲಿದ್ದಾರೆ ಎಂಬುದನ್ನು ಹೇಳುವುದಕ್ಕಲ್ಲ. ಅವರು ಎಷ್ಟು ದೊಡ್ಡ ವ್ಯಕ್ತಿ, ಅವರ ಕಾರ್ಯಶ್ರದ್ಧೆ ಎಂತಹುದು ಎಂಬುದನ್ನು ತಿಳಿಸುವುದಕ್ಕೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ ಜಪಾನಿನ ಪೂರ್ವಭಾಗದಲ್ಲಿ ಭಾರೀ ಭೂಕಂಪವಾಯಿತು.ಅದು ಸಾಲದೆಂಬಂತೆ ಸುನಾಮಿ ಬಂದು ತೀರವನ್ನು ಅಪ್ಪಳಿಸಿ ಆ ಭಾಗವನ್ನೆಲ್ಲ ನಿರ್ನಾಮಗೊಳಿಸಿತು. ಅಲ್ಲಿ ಜನವಸತಿ ಇತ್ತೆಂಬುದು ಕೂಡ ಅರಿವಾಗದಷ್ಟು ಆ ಪ್ರದೇಶ ನಾಮಾವಶೇಷವಾಗಿತ್ತು. ಈ ತಾಂಡವನೃತ್ಯದಲ್ಲಿ ಪ್ರೊಫೆಸರ್ ಶೀಬಾರ ಮನೆ ಕೊಚ್ಚಿ ಹೋಯಿತು. ತನ್ನದೆನ್ನುವುದು ಏನೂ ಉಳಿಯಲಿಲ್ಲ.ಆದರೂ ಪ್ರತಿವರ್ಷದಂತೆ ಐ.ಐ.ಎಂ ಕೋಲ್ಕತ್ತಕ್ಕೆ ಪಾಠ ಮಾಡಲು ಏಪ್ರಿಲ್ ಮೊದಲನೇ ವಾರದಲ್ಲಿ ಭಾರತಕ್ಕೆ ಬಂದರು. ಮನೆಯಲ್ಲಿ  ಈ ಪರಿಸ್ಥಿತಿ ಇರುವಾಗ ಅವರು ಇಲ್ಲಿಗೆ ಬಂದದ್ದೇ ಆಶ್ಚರ್ಯ.`ಯಾಕೆ ಬಂದಿರಿ ದೇಶದ ನಿಮ್ಮ ಭಾಗದಲ್ಲಿ ಈ ಅನಾಹುತವಾಗಿದ್ದಾಗ~  ಎಂದು ಕೇಳಿದಾಗ,  `ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತೆನೆಂದು ಮಾತು ಕೊಟ್ಟಿದ್ದೆನಲ್ಲವೇ? ಆದ್ದರಿಂದ ಅದನ್ನು ನಡೆಸಲೇ ಬೇಕು~ ಎಂದರು.ಅವರು ತಮ್ಮ ತರಗತಿಗಳನ್ನು ತೆಗೆದುಕೊಳ್ಳುತ್ತಿರುವಾಗ ಜಪಾನಿನಲ್ಲಿ  ಅವರ ತಾಯಿ ತೀರಿಹೋದ ಸಮಾಚಾರ ಬಂದಿತು. ಅವರು ತಕ್ಷಣ ತಮ್ಮ ದೇಶಕ್ಕೆ ತೆರಳದೇ ತಮಗಾಗಿ ಇದ್ದ ತರಗತಿಗಳನ್ನೆಲ್ಲ ಮುಗಿಸಿ ಹೊರಟರು.ಇವರ ಕಾರ್ಯಶ್ರದ್ಧೆಯನ್ನು, ಪ್ರಾಮಾಣಿಕತೆಯನ್ನು ಮೆಚ್ಚಿದ ಈ ಕಾರ್ಯಕ್ರಮದ ಐದನೇ ತಂಡದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಐ.ಐ.ಎಂ ಪ್ರಾಧ್ಯಾಪಕರು ಎದ್ದು ನಿಂತು ಸತತವಾಗಿ ಚಪ್ಪಾಳೆ ತಟ್ಟಿ ತಮ್ಮ ಅಭಿನಂದನೆಗಳನ್ನೂ, ಕೃತಜ್ಞತೆಯನ್ನು ತೋರಿಸಿದರು.ದೊಡ್ಡ ದೊಡ್ಡ ಸ್ಥಾನಗಳು ಜೀವನದಲ್ಲಿ ನಿಮ್ಮ ಶಿಕ್ಷಣ, ಅವಕಾಶಗಳಿಂದಾಗಿ ದೊರೆತಾವು. ಆದರೆ ದೊಡ್ಡತನ ಬರುವುದು ನಮ್ಮ ನಡತೆಯಿಂದ, ಕಷ್ಟದ ಸ್ಥಿತಿಯಲ್ಲಿ ನಾವು ತೋರುವ ತಾಳ್ಮೆ, ಗಂಭೀರತೆ ಇವುಗಳಿಂದ. ಇಂಥ ಗುಣಗಳಿಂದಲೇ ಪ್ರೊಫೆಸರ್ ಶೀಬಾರಂಥವರು ಸರ್ವಮಾನ್ಯರಾಗುತ್ತಾರೆ, ಮತ್ತೊಬ್ಬರಿಗೆ ಮಾದರಿಯಾಗುತ್ತಾರೆ.

(ಈ ಘಟನೆಯನ್ನು ತಿಳಿಸಿದವರು ನನಗೆ ಆತ್ಮೀಯರಾದ ಐ.ಐ.ಎಂ ಕೋಲ್ಕತ್ತಾದ ಪ್ರೊಫೆಸರ್ ಸಿ.ಪಿ. ಭಟ್ಟರವರು)

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.