ಮಂಗಳವಾರ, ಜೂನ್ 22, 2021
27 °C

ಮುಖ್ಯಮಂತ್ರಿಗಳಿದ್ದಾರೆ, ಅವರ ಕೈಯಲ್ಲಿ ಅಧಿಕಾರ ಎಲ್ಲಿದೆ?

ದಿನೇಶ್ ಅಮೀನ್ ಮಟ್ಟು Updated:

ಅಕ್ಷರ ಗಾತ್ರ : | |

ಕಳೆದ ತಿಂಗಳ ಎಂಟರಂದು ನಾನು ಉತ್ತರಪ್ರದೇಶದ ಫೈಜಾಬಾದ್‌ನಲ್ಲಿದ್ದೆ. ಆ ದಿನ ನಡೆಯಲಿದ್ದ ಮೊದಲ ಸುತ್ತಿನ ಮತದಾನವನ್ನು ಅಯೋಧ್ಯೆಯಿಂದ ವರದಿ ಮಾಡಲೆಂದು ಬಂದಿದ್ದ ಪತ್ರಕರ್ತರ ದಂಡು ನಾನಿದ್ದ ಹೊಟೇಲ್‌ನಲ್ಲಿಯೇ ಬೀಡುಬಿಟ್ಟಿತ್ತು.

 

ಬೆಳಿಗ್ಗೆ ಇನ್ನೂ ಏಳು ಗಂಟೆ ಆಗಿರಲಿಲ್ಲ, ಅಷ್ಟರಲ್ಲಿ ಯಾರೋ ಬಾಗಿಲು ಬಡಿದಂತಾಯಿತೆಂದು ತೆರೆದು ನೋಡಿದರೆ ಪಕ್ಕದ ಕೋಣೆಯಲ್ಲಿದ್ದ ಟಿವಿ ಚಾನೆಲ್‌ನ ವರದಿಗಾರ ಕೈಯಲ್ಲಿ `ದೈನಿಕ್ ಜಾಗರಣ್~ ಪತ್ರಿಕೆ ಮತ್ತು ಮೈಕ್ ಹಿಡಿದುಕೊಂಡು ನಿಂತಿದ್ದ. ಹಿಂದಿನ ರಾತ್ರಿಯಷ್ಟೇ ಆತನ ಪರಿಚಯವಾಗಿತ್ತು. `ಆಪ್ ಹಿಂದಿ ಮೇ ದೋ ಶಬ್ದ್ ಬೋಲ್ ಸಕ್ತೆ ಹೋ?~ ಎಂದ. `ಯಾಕೆ~ ಎಂದು ಕೇಳಿದೆ.

 

ಆತ ನನ್ನ ಮುಖಕ್ಕೆ ಪತ್ರಿಕೆಯ ಮುಖಪುಟ ಹಿಡಿದ. ಅದರಲ್ಲಿ `ಬಿಜೆಪಿ ಮಂತ್ರಿಯೋಂ ಸದನ್ ಮೇ ಪೊರ್ನ್ ವಿಡಿಯೋ ದೇಖಾ~ (ಬಿಜೆಪಿ ಮಂತ್ರಿಗಳು ಸದನದಲ್ಲಿ ಪೊರ್ನೋ ವಿಡಿಯೋ ನೋಡಿದರು) ಎಂಬ ಸುದ್ದಿ ಎರಡನೇ ಲೀಡ್ ಆಗಿ ಪ್ರಕಟವಾಗಿತ್ತು. ಆತನಿಗೆ ಅರ್ಜೆಂಟಾಗಿ ಒಂದು ಬೈಟ್ ಬೇಕಿತ್ತು. `ಸಾರಿ, ನನ್ನ ಹಿಂದಿ ಅಷ್ಟೊಂದು ಚೆನ್ನಾಗಿಲ್ಲ~ (ಅಷ್ಟೊಂದು ಕೆಟ್ಟದೂ ಆಗಿಲ್ಲ) ಎಂದು ಹೇಳಿ ಬಾಗಿಲು ಮುಚ್ಚಿದೆ.ಅದರ ನಂತರದ ದಿನಗಳಲ್ಲಿ ಯಾರಿಗೆ ನನ್ನನ್ನು ಪರಿಚಯಿಸಿಕೊಂಡರೂ ಅವರು ಮೊದಲು ಕೇಳುತ್ತಿದ್ದದು `ಶಾಸಕರ ಅಶ್ಲೀಲ ವಿಡಿಯೋ ವೀಕ್ಷಣೆ ಮತ್ತು ಯಡಿಯೂರಪ್ಪನವರಿಗೆ ಸಂಬಂಧಿಸಿದ್ದ ಪ್ರಶ್ನೆಗಳನ್ನು. ಉತ್ತರಪ್ರದೇಶದ ಬಹಳ ಮಂದಿ ಪತ್ರಕರ್ತರು ಯಡಿಯೂರಪ್ಪನವರನ್ನು `ವೊ ತೋ ಕರ್ನಾಟಕ್ ಕಾ ಕಲ್ಯಾಣ್‌ಸಿಂಗ್~ ಎನ್ನುತ್ತಿದ್ದರು. ಇಬ್ಬರ ರಾಜಕೀಯ ಮತ್ತು ಖಾಸಗಿ ಜೀವನಗಳಿಗೆ ಬಹಳಷ್ಟು ಹೋಲಿಕೆಯೂ ಇದೆ. ಬಿಜೆಪಿಯ ಒಂದು ಕಾಲದ ಕಣ್ಮಣಿ ಕಲ್ಯಾಣ್‌ಸಿಂಗ್ ಕುಸುಮಾ ರಾಯ್ ಎಂಬ ಹೆಣ್ಣಿನ ಸ್ನೇಹಕ್ಕೆ ಬಿದ್ದು ರಾಜಕೀಯ ಜೀವನವನ್ನೇ ಕಳೆದುಕೊಂಡು ವನವಾಸ ಅನುಭವಿಸುತ್ತಿದ್ದಾರೆ.ಅವರೆಲ್ಲರ ಆಸಕ್ತಿಗೆ ಮುಖ್ಯ ಕಾರಣ ಉತ್ತರ ಭಾರತದ ಮಾಧ್ಯಮಗಳಲ್ಲಿ ಆ ಪ್ರಕರಣಕ್ಕೆ ನೀಡಿದ್ದ ವ್ಯಾಪಕ ಪ್ರಚಾರ. ಸ್ಥಳೀಯ ಕೇಬಲ್ ಚಾನೆಲ್‌ಗಳು ಯಾವುದೋ ಬ್ಲೂಫಿಲಂಗಳ ಕ್ಲಿಪ್ಪಿಂಗ್ಸ್‌ಗಳನ್ನೆಲ್ಲ ಕರ್ನಾಟಕದ ಬಿಜೆಪಿ ಶಾಸಕರು ನೋಡಿದ್ದೆಂದು ಹೇಳಿ ತೋರಿಸಿ ಪ್ರಸಾರ ಮಾಡುತ್ತಿದ್ದವು.  ಹೊರರಾಜ್ಯಗಳಲ್ಲಿ ಈ ರೀತಿ ಕರ್ನಾಟಕದ ಮಾನ ಎಂದೂ ಹರಾಜಾಗಿರಲಿಲ್ಲ. `ಬಿಮಾರು~ ರಾಜ್ಯಗಳೆಂಬ ಕುಖ್ಯಾತಿ ಪಡೆದಿದ್ದ ಬಿಹಾರ, ಮಧ್ಯಪ್ರದೇಶ, ರಾಜಸ್ತಾನ ಮತ್ತು ಉತ್ತರಪ್ರದೇಶಗಳಲ್ಲಿಯಾದರೂ ಕರ್ನಾಟಕದವರೆಂದು ಹೇಳಿಕೊಂಡರೆ ಒಂದಿಷ್ಟು ಮರ್ಯಾದೆ -ಗೌರವ ಇತ್ತು. ಈಗ ಆ ರಾಜ್ಯದ ಜನರೂ ನಮ್ಮನ್ನೂ ಗೇಲಿ ಮಾಡುತ್ತಿರುವವರಂತೆ ನೋಡುತ್ತಿದ್ದಾರೆ. ರೋಗಗ್ರಸ್ತವಾಗಿದ್ದ ಆ ನಾಲ್ಕೂ ರಾಜ್ಯಗಳಲ್ಲಿಯೂ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ.

 

ಕರ್ನಾಟಕ ಮತ್ತೆ ಶಿಲಾಯುಗದ ಕಡೆ ಹೋಗುತ್ತಿದೆ. ಬಹುಶಃ ನಿನ್ನೆಯೂ ಪತ್ರಕರ್ತರಿಗೆ ಕಲ್ಲೆತ್ತಿಕೊಂಡು ಹೊಡೆಯಲು ನಿಂತ ವಕೀಲರು ಮತ್ತು ಪಕ್ಕದಲ್ಲಿ ಕೈಕಟ್ಟಿ ನಿಂತ ಪೊಲೀಸರ ಚಿತ್ರಗಳು ಅಲ್ಲಿನ  ಪತ್ರಿಕೆಗಳ ಮುಖಪುಟಗಳಲ್ಲಿ ಪ್ರಕಟವಾಗಿರಬಹುದು. ಇದು `ಶಿಲಾ~ಯುಗವಲ್ಲದೆ ಮತ್ತೇನು?ಚುನಾಯಿತ ಸರ್ಕಾರವೊಂದು ಕೊನೆಯ ದಿನಗಳಲ್ಲಿ ಇಂತಹ  ಪರಿಸ್ಥಿತಿಯನ್ನು ಎದುರಿಸುತ್ತದೆ. ಆಡಳಿತದ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುವುದು, ಮನೆಗೆ ಹೋಗಲಿರುವ ಸರ್ಕಾರ ಎಂದು ಅಧಿಕಾರಿಗಳು ಕೂಡಾ ಆಡಳಿತಾರೂಢರ ಮಾತಿಗೆ ಬೆಲೆ ಕೊಡದಿರುವುದು, ಅಸಹಾಯಕ ಜನ ಬೀದಿಗಿಳಿಯುವುದು, ಕಾನೂನನ್ನು ಕೈಗೆತ್ತಿಕೊಳ್ಳುವುದು, ಸರ್ಕಾರದ ವಿರುದ್ಧ ಮಾತ್ರವಲ್ಲ, ಪರಸ್ಪರ ಬಡಿದಾಡಿಕೊಳ್ಳುವುದು... ಇವೆಲ್ಲ ಸಾಮಾನ್ಯ. ಆದರೆ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದಲೇ ಇಂತಹ ಪರಿಸ್ಥಿತಿ ಇತ್ತು.ಬಿ.ಎಸ್.ಯಡಿಯೂರಪ್ಪನವರು ವಿಧಾನಸೌಧದ ಒಳಗೆ ಹೋಗಿ ಕೂತದ್ದೇ ಕಡಿಮೆ. ಕೂತಾಗಲೂ ಅವರ ಕೈಯಲ್ಲಿ ಅಧಿಕಾರ ಮಾತ್ರ ಇರಲೇ ಇಲ್ಲ. ಅವರ ಆಡಳಿತದ ಬಗ್ಗೆ ನಾನು ಬರೆದ ಮೊದಲ ಅಂಕಣ ಇದೇ ವಿಷಯಕ್ಕೆ ಸಂಬಂಧಿಸಿದ್ದಾಗಿತ್ತು (`ಮುಖ್ಯಮಂತ್ರಿಗಳೇ, ಅಧಿಕಾರ ನಿಮ್ಮ ಕೈಯಲ್ಲಿಯೇ ಇರಲಿ~- ದೆಹಲಿನೋಟ. ಅಕ್ಟೋಬರ್ 6, 2008). ಪರಿಸ್ಥಿತಿ ಹಾಗೆಯೇ ಮುಂದುವರಿದಿತ್ತು, ಈಗಲೂ ಬದಲಾಗಿಲ್ಲ.ಎರಡು ತಿಂಗಳುಗಳ ಹಿಂದೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಊರಾಗಿರುವ ಸುಳ್ಯದಲ್ಲಿಯೇ ಒಂದು ಘಟನೆ ನಡೆದಿತ್ತು. ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಜೈಲಿನಿಂದ ಬಿಡುಗಡೆಯಾಗಿದ್ದ ನಾಲ್ಕು ಮಂದಿ ಕಾರಿನಲ್ಲಿ ಊರಿಗೆ ಹೋಗುತ್ತಿದ್ದಾಗ ಸುಳ್ಯ ಬಳಿ ಅವರನ್ನು ತಡೆದು ನಿಲ್ಲಿಸಿದ ಹಿಂದು ಸಂಘಟನೆಯ ಸದಸ್ಯರು ಬಲಾತ್ಕಾರವಾಗಿ ಕರೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಿದ್ದರು.ಕಾರಿನಲ್ಲಿ ಜತೆಯಲ್ಲಿ ಹೋಗುವುದನ್ನು ಅಪರಾಧ ಎಂದು ಸಾಬೀತುಪಡಿಸುವುದು ಹೇಗೆ ಎನ್ನುವುದು ಅರ್ಥವಾಗದ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ಅವರನ್ನು ಬಿಟ್ಟುಬಿಟ್ಟಿದ್ದರು. ಇದರಿಂದ ರೊಚ್ಚಿಗೆದ್ದ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಕಲ್ಲೆಸೆದಿದ್ದರು. ಕಲ್ಲಿನೇಟಿನಿಂದ ಮಹಿಳಾ ಕಾನ್‌ಸ್ಟೇಬಲ್ ಸೇರಿದಂತೆ ಹಲವಾರು ಪೊಲೀಸರು ಗಾಯಗೊಂಡಿದ್ದರು. ತಕ್ಷಣ ಪೊಲೀಸರು ದುಷ್ಕೃತ್ಯದಲ್ಲಿ ತೊಡಗಿದ್ದವರನ್ನು ಬಂಧಿಸಿದರು. ಅವರಲ್ಲಿ ಕೆಲವರು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳೂ ಇದ್ದರು.ಮರುದಿನ ಪೊಲೀಸರ ವಿರುದ್ದ ಭಾರಿ ಪ್ರತಿಭಟನೆ ನಡೆಯಿತು. `ಊರಿನ ಮಗ~ನಾದ ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಲಾಯಿತು. ಅದರ ಮರುದಿನ ಆ ಠಾಣೆಯ ಒಬ್ಬ ಸರ್ಕಲ್ ಇನ್‌ಸ್ಪೆಕ್ಟರ್, ಇಬ್ಬರು ಸಬ್‌ಇನ್‌ಸ್ಪೆಕ್ಟರ್ ಮತ್ತು ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ವರ್ಗಾವಣೆ ಮಾಡಲಾಯಿತು. ಕೊನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ವರ್ಗಾವಣೆಯೂ ನಡೆಯಿತು. ತಾವು ಮಾಡಿರುವ ತಪ್ಪೇನು ಎನ್ನುವುದು ಪೊಲೀಸರಿಗೆ ಇನ್ನೂ ಗೊತ್ತಾಗಿಲ್ಲ.ಆದುದರಿಂದ ಕಳೆದ ಶುಕ್ರವಾರ ಬೆಂಗಳೂರಿನಲ್ಲಿ ಟಿವಿ ಚಾನೆಲ್‌ಗಳ ವರದಿಗಾರರು ಮತ್ತು ಕ್ಯಾಮೆರಾಮೆನ್‌ಗಳ ಮೇಲೆ ವಕೀಲರು ನಡೆಸುವಷ್ಟರ ಮಟ್ಟಿಗೆ ತೋರಿದ ದಾರ್ಷ್ಟ್ಯ ಮತ್ತು  ಮೂಕಪ್ರೇಕ್ಷಕರಂತೆ ನಿಂತಿದ್ದ ಪೊಲೀಸರ ವರ್ತನೆ  ಹೊಸತೇನಲ್ಲ. ಈ ಪ್ರಕರಣವನ್ನಷ್ಟೆ ಪ್ರತ್ಯೇಕವಾಗಿಟ್ಟು ನೋಡಿದರೆ ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವೂ ಇಲ್ಲ.ಇದೊಂದು ಸರಣಿ. ಇದನ್ನು ಬಿಜೆಪಿ ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿಯೇ ಹಾವೇರಿಯಲ್ಲಿ ರೈತರ ಮೇಲೆ ನಡೆದ ಗೋಲಿಬಾರ್ ಘಟನೆಯಿಂದ ಪ್ರಾರಂಭಿಸಿ ಅದರ ನಂತರ ನಡೆದ ಚರ್ಚ್‌ಗಳ ಮೇಲೆ ದಾಳಿ, ಮಂಗಳೂರಿನಲ್ಲಿ ಪಬ್‌ಗಳಿಗೆ ನುಗ್ಗಿ ಹುಡುಗಿಯರ ಮೇಲೆ ನಡೆಸಲಾದ ದೌರ್ಜನ್ಯ, ಸಚಿವರೊಬ್ಬರ ವಿರುದ್ದ ನರ್ಸ್ ನೀಡಿರುವ ದೂರು, ಶಾಸಕರೊಬ್ಬರ ಪತ್ನಿಯ ಆತ್ಮಹತ್ಯೆ, ಬೆಂಗಳೂರಿನಲ್ಲಿ ಕಾನೂನು ಉಲ್ಲಂಘನೆ ಮಾಡಿದ್ದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ಹಲ್ಲೆ, ವಿಧಾನಸಭೆಯಲ್ಲಿಯೇ ಶಾಸಕರು ಅಶ್ಲೀಲ ವಿಡಿಯೋ ನೋಡಿದ ಪ್ರಸಂಗದ ವರೆಗಿನ ಎಲ್ಲ ಘಟನೆಗಳೊಂದಿಗೆ ಸೇರಿಸಿ ನೋಡಬೇಕಾಗುತ್ತದೆ. ಇವೆಲ್ಲವುಗಳಲ್ಲಿನ ಒಂದು ಸಾಮಾನ್ಯ ಅಂಶ ಏನೆಂದರೆ ಯಾವ ಪ್ರಕರಣಗಳಲ್ಲಿಯೂ ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆಯಾಗದಿರುವುದು ಮತ್ತು ಎಷ್ಟೋ ಸಂದರ್ಭಗಳಲ್ಲಿ ನಿರಪರಾಧಿಗಳಿಗೆ ಶಿಕ್ಷೆಯಾಗಿರುವುದು. ಚುನಾಯಿತ ಸರ್ಕಾರವೊಂದು ಸಂವಿಧಾನದತ್ತ ಅಧಿಕಾರವನ್ನು ತನ್ನಲ್ಲಿ ಇಟ್ಟುಕೊಳ್ಳದೆ, ಪ್ರಜೆಗಳಿಗಾಗಲಿ, ಸರ್ಕಾರಕ್ಕಾಗಲಿ ಉತ್ತರದಾಯಿ ಅಲ್ಲದ ಸಂವಿಧಾನೇತರ ಶಕ್ತಿಗಳ ಕೈಗೆ ಅದನ್ನು ಕೊಟ್ಟು ಬಿಟ್ಟರೆ ಇಂತಹ ಅನಾಹುತಗಳಲ್ಲದೆ ಬೇರೇನೂ ನಡೆಯಲು ಸಾಧ್ಯ?ಇದರಿಂದಾಗಿಯೇ ಯಡಿಯೂರಪ್ಪನವರು ಹಾದಿ ತಪ್ಪಿದ್ದು. ಮುಖ್ಯಮಂತ್ರಿಯಾಗಿದ್ದಾಗ ಅವರು ಪಕ್ಷದ ಹೈಕಮಾಂಡ್‌ಗಿಂತಲೂ ಹೆಚ್ಚು ನಿಷ್ಠರಾಗಿದ್ದು ಉಳಿದ ಮೂರು ಹೈಕಮಾಂಡ್‌ಗಳಿಗೆ. ಮೊದಲನೆಯದು ಸಂಘ ಪರಿವಾರ, ಎರಡನೆಯದು ವೀರಶೈವ ಮಠಗಳು ಮತ್ತು ಮೂರನೆಯದು ಬಳ್ಳಾರಿಯ ರೆಡ್ಡಿ ಸೋದರರು.ಯಡಿಯೂರಪ್ಪನವರು ರಾಜ್ಯದ ಖಜಾನೆಯ ಕೀಲಿಕೈಯನ್ನಷ್ಟೇ ತಾವಿಟ್ಟುಕೊಂಡು ಆಡಳಿತದ ಕೀಲಿಕೈಯನ್ನು ಮೊದಲಿನ ಮೂರು ಹೈಕಮಾಂಡ್‌ಗಳಿಗೆ ಕೊಟ್ಟು ಬಿಟ್ಟಿದ್ದರು.ತಾವು, ತಮ್ಮ ಕುಟುಂಬದ ಸದಸ್ಯರು ಹಾಗೂ ಕೆಲವು ಆಪ್ತ ಸಚಿವರು ಮಧ್ಯೆ ಪ್ರವೇಶಿಸಿದ ಪ್ರಕರಣಗಳನ್ನು ಹೊರತುಪಡಿಸಿದರೆ ಉಳಿದಂತೆ ಅಧಿಕಾರಿಗಳ ನೇಮಕ, ವರ್ಗಾವಣೆ, ಬಡ್ತಿ ಎಲ್ಲವೂ ಈ ಮೂರು ಹೈಕಮಾಂಡ್‌ಗಳ ಆದೇಶದಂತೆಯೇ ನಡೆಯುತ್ತಿತ್ತು. `ಆಪರೇಷನ್ ಕಮಲ~ವೂ ಸೇರಿದಂತೆ ಎಲ್ಲ ಬಗೆಯ ಅನೈತಿಕ ರಾಜಕಾರಣಕ್ಕೆ ಬೇಕಾದ ದುಡ್ಡನ್ನು ಗಣಿ ಲೂಟಿಕೋರರು ನೀಡಿದರೆ, ಜಾತಿಯ ಬೆಂಬಲವನ್ನು ವೀರಶೈವ ಮಠಗಳು ಧಾರೆ ಎರೆದವು.ಸಂಘ ಪರಿವಾರದ ನಾಯಕರು ತಮ್ಮ ರಹಸ್ಯ ಕಾರ್ಯಸೂಚಿಯ ಅನುಷ್ಠಾನಕ್ಕೆ ಸರ್ಕಾರ ನೀಡುತ್ತಿರುವ ಬೆಂಬಲಕ್ಕೆ ಪ್ರತಿಯಾಗಿ ರಾಜಾರೋಷವಾಗಿ ನಡೆಯುತ್ತಿರುವ ಆರ್ಥಿಕ ಮತ್ತು ನೈತಿಕ ಭ್ರಷ್ಟಾಚಾರವನ್ನು ನೋಡಿಯೂ ನೋಡದಂತೆ ಕಣ್ಣುಮುಚ್ಚಿಕೊಂಡು ಕೂತುಬಿಟ್ಟರು. ಎಷ್ಟೋ ಸಂದರ್ಭಗಳಲ್ಲಿ ಅದರಲ್ಲಿ ಅವರೂ ಪಾಲುದಾರರಾಗಿ ಹೋದರು. ವಿಧಾನಸೌಧದಲ್ಲಿ ಆಡಳಿತ ಎಲ್ಲಿತ್ತು? ಸದ್ಯಕ್ಕೆ ಒಂದಷ್ಟು ವೀರಶೈವ ಮಠಗಳನ್ನು ಹೊರತುಪಡಿಸಿದರೆ ಉಳಿದೆಲ್ಲ `ಹೈಕಮಾಂಡ್~ಗಳು ಯಡಿಯೂರಪ್ಪನವರನ್ನು ಕೈ ಬಿಟ್ಟಿದ್ದರೂ ಅವರು ಪಾಠ ಕಲಿತ ಹಾಗಿಲ್ಲ.ಈಗ ಡಿ.ವಿ.ಸದಾನಂದ ಗೌಡರ ಸರದಿ. ಜನಾರ್ದನ ರೆಡ್ಡಿ ಜೈಲು ಸೇರಿದ್ದಾರೆ, ಶ್ರಿರಾಮುಲು ಪಕ್ಷ ಬಿಟ್ಟಿದ್ದಾರೆ. ಆದುದರಿಂದ ಆ ಹೈಕಮಾಂಡ್ ಈಗ ಇಲ್ಲ. ವೀರಶೈವ ಮಠಗಳು ಯಡಿಯೂರಪ್ಪನವರ ಬೆಂಬಲಕ್ಕೆ ನಿಂತಿರುವ ಕಾರಣ ಆ ಕಡೆಯ ನಿಯಂತ್ರಣವೂ ಇಲ್ಲ. ಹೀಗಿದ್ದರೂ ಅವರದ್ದು ಇನ್ನೂ ದಯನೀಯ ಪರಿಸ್ಥಿತಿ.`ನಿಮ್ಮನ್ನು ನಾನೇ ಮುಖ್ಯಮಂತ್ರಿ ಮಾಡಿದ್ದು~ ಎಂದು ಯಡಿಯೂರಪ್ಪನವರೇನೋ ಆಗಾಗ ಗುಡುಗುತ್ತಾರೆ. ಆದರೆ ಮಾಡಿದ್ದು ಯಾರು ಎನ್ನುವುದು ಅವರಿಗೂ ಗೊತ್ತು, ಸದಾನಂದ ಗೌಡರಿಗೂ ಗೊತ್ತು. ಇವರೆಲ್ಲರಿಗಿಂತಲೂ ಚೆನ್ನಾಗಿ ಕರಾವಳಿ, ಶಿವಮೊಗ್ಗ ಮತ್ತು ಬೆಂಗಳೂರಿನ ರಾಜ್ಯದ ಆರ್‌ಎಸ್‌ಎಸ್ ಮುಖಂಡರಿಗೆ ಗೊತ್ತು.

 

ಸಂಘ ಪರಿವಾರದ ಬೆಂಬಲದಿಂದಲೇ ಮುಖ್ಯಮಂತ್ರಿಯಾಗಿರುವ ಕಾರಣ ಆ `ಹೈಕಮಾಂಡ್~ಗೆ ಗೌಡರು ಸಂಪೂರ್ಣವಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಇದರಿಂದಾಗಿ ತಮ್ಮ ಹುಟ್ಟೂರಿನಲ್ಲಿಯೇ ಒಬ್ಬ ನಿರಪರಾಧಿ ಪೊಲೀಸ್ ಪೇದೆಗೆ ರಕ್ಷಣೆ ಕೊಡುವ ಸ್ಥಿತಿಯಲ್ಲಿಯೂ ಅವರಿಲ್ಲ. ಇದು ಒಂದು ಇಲಾಖೆಯ ಕತೆಯಲ್ಲ, ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ಈ ಸ್ಥಿತಿ ಇದೆ. ಪ್ರಾಮಾಣಿಕತೆ ಮತ್ತು ವೃತ್ತಿನಿಷ್ಠೆಯಿಂದ ಕೆಲಸ ಮಾಡಬೇಕೆಂದು ಬಯಸುವವರ ನೈತಿಕಸ್ಥೈರ್ಯ ಕುಸಿದುಹೋಗುವಂತೆ ಮಾಡಲಾಗುತ್ತಿದೆ. ಭ್ರಷ್ಟರು ತಮಗೆ ಬೇಕಾದವರ `ಪ್ರಭಾವಳಿ~ಯ ರಕ್ಷಣೆಯಲ್ಲಿ ಪ್ರಜಾಪೀಡನೆ ನಡೆಸುತ್ತಾ ನಿಶ್ಚಿಂತೆಯಾಗಿದ್ದಾರೆ. ಆರೋಪಿ ಜನಾರ್ದನ ರೆಡ್ಡಿಯವರನ್ನು ನ್ಯಾಯಾಲಯಕ್ಕೆ ಕರೆತಂದ ದಿನ ಬೆಳಿಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳೊಬ್ಬರು ಪತ್ರಕರ್ತರ ಬಳಿ ಬಂದು `ಇಂದು ನಿಮ್ಮ ಮೇಲೆ ದಾಳಿ ನಡೆಯಬಹುದು, ಎಚ್ಚರಿಕೆಯಿಂದ ಇರಿ~ ಎಂದು ಹೇಳಿ ಹೋಗಿದ್ದರಂತೆ. ಅಂದರೆ ಪೂರ್ವನಿಯೋಜಿತವಾದ ಈ ದಾಳಿಯ ಮುನ್ಸೂಚನೆ ಪೊಲೀಸರಿಗೆ ಇತ್ತು ಎಂದಾಯಿತು. ಹಾಗಿದ್ದರೆ ಗೃಹಸಚಿವರಾದ ಆರ್.ಅಶೋಕ್ ಅವರಿಗೂ ಮಾಹಿತಿ ಇತ್ತೆಂದು ಆಯಿತಲ್ಲ? `ಇಲ್ಲ~ ಎಂದು ಅವರು ಹೇಳಿದರೆ ಅವರ ದಕ್ಷತೆಯನ್ನು ಪ್ರಶ್ನಿಸಬೇಕಾಗುತ್ತದೆ. ಮಾಹಿತಿ ಇದ್ದೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಅವರು ತಿಳಿಸಿಲ್ಲ ಎಂದಾದರೆ ಅವರಿಗೆ ಬೇರೇನೋ ದುರುದ್ದೇಶ ಇದ್ದಿರಬಹುದು ಎಂದಾಗುತ್ತದೆ.ಇಡೀ ಅಪರಾಧದ ಘಟನಾವಳಿಗಳನ್ನು ಚಿತ್ರೀಕರಿಸಿದ ವಿಡಿಯೋ ಕ್ಲಿಪ್ಪಿಂಗ್ಸ್‌ಗಳು ಮತ್ತು ಚಿತ್ರಗಳು ಎದುರಿಗಿದ್ದರೂ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಹೆಚ್ಚು ಕಡಿಮೆ 30 ಗಂಟೆ ಬೇಕಾಗುವಂತಹ ವ್ಯವಸ್ಥೆಯಲ್ಲಿ ಜನರೆಷ್ಟು ಸುರಕ್ಷಿತರು? ಜನರಿಗೆ ಕನಿಷ್ಠ ಭದ್ರತೆಯ ಭಾವನೆಯನ್ನು ನೀಡಲಾಗದಿದ್ದರೆ ಸರ್ಕಾರವಾದರೂ ಯಾಕಿರಬೇಕು? ಮುಖ್ಯಮಂತ್ರಿಗಳು, ಸಚಿವ ಸಂಪುಟ ಯಾಕೆ ಬೇಕು?(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.