ಶುಕ್ರವಾರ, ಏಪ್ರಿಲ್ 3, 2020
19 °C

ಮೋದಿ ರಾಜಕೀಯ ದಾಳ ಯಾವುದು?

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ಮೋದಿ ರಾಜಕೀಯ ದಾಳ ಯಾವುದು?

ಈ ವರ್ಷದ ಪ್ರಮುಖ ರಾಜಕೀಯ ವಿದ್ಯಮಾನ ಯಾವುದು ಎನ್ನುವುದರತ್ತ ಗಮನ ಹರಿಸಿದಾಗ ಹಲವು ಚಿತ್ರಗಳು ಕಣ್ಮುಂದೆ ಹಾದು ಹೋಗುತ್ತವೆ. ಗುಜರಾತ್‌ ಚುನಾವಣಾ ಫಲಿತಾಂಶ ಪ್ರಕಟಗೊಂಡಾಗ ಪ್ರಧಾನಿ ನರೇಂದ್ರ ಮೋದಿ ಅವರು ಪ್ರದರ್ಶಿಸಿದ ಗೆಲುವಿನ ಸಂಕೇತ, ಗಾಂಧಿ ಟೊಪ್ಪಿಗೆ ಧರಿಸಿದ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ಧ್ವಜಾರೋಹಣ ನಡೆಸಿದ್ದು, ರಾಮನಾಥ ಕೋವಿಂದ್ ಅವರು ರಾಷ್ಟ್ರಪತಿ ಹುದ್ದೆಗೆ ಏರಿದ್ದು, ಪಂಜಾಬ್‌ನಲ್ಲಿ ಅಮರಿಂದರ್‌ ಸಿಂಗ್‌ ಅವರ ಗೆಲುವು, ಅರವಿಂದ್‌ ಕೇಜ್ರಿವಾಲ್‌ ವಿದ್ಯುನ್ಮಾನ ಮತಯಂತ್ರ ದೂಷಿಸಿದ್ದು, ಯೋಗಿ ಆದಿತ್ಯನಾಥ ಬಿಜೆಪಿಯ ಹೊಸ ಯುವ ನಾಯಕನಾಗಿ ಹೊರ ಹೊಮ್ಮಿದ್ದು, ಮೆಟ್ರೊ ಉದ್ಘಾಟನೆಯಲ್ಲಿ ನೊಯಿಡಾಗೆ ಭೇಟಿ ನೀಡಿ ಅಂಧಶ್ರದ್ಧೆಗೆ ಕೊನೆ ಹಾಡಿದ್ದು ನೆನಪಾಗುತ್ತವೆ.

ನೀವು ಇನ್ನಷ್ಟು ಸಂಕೀರ್ಣತೆ ಇಷ್ಟಪಡುವವರಾಗಿದ್ದರೆ, ವಿಜಯ್‌ ರೂಪಾಣಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿ ಮತ್ತು ಎನ್‌ಡಿಎಗೆ ಸೇರಿದ ಇತರ ಮುಖ್ಯಮಂತ್ರಿಗಳ ಜತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾಗಿಯಾಗಿರುವುದನ್ನೂ ಪ್ರಮುಖ ರಾಜಕೀಯ ಬೆಳವಣಿಗೆ ಎಂದೂ ಪರಿಗಣಿಸಬಹುದು. ಇದೇ ನಿತೀಶ್‌ ಕುಮಾರ್‌ ಅವರು ಈ ಹಿಂದೆ ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮೋದಿ ಅವರು ಭಾಗವಹಿಸುವುದಕ್ಕೂ ಅವಕಾಶ ಮಾಡಿಕೊಟ್ಟಿರಲಿಲ್ಲ. ಲಾಲು ಪ್ರಸಾದ್‌ ಜೈಲಿಗೆ ಮರಳಿರುವುದನ್ನೂ ವರ್ಷದ ಪ್ರಮುಖ ವಿದ್ಯಮಾನ ಎಂದೂ ಆಯ್ಕೆ ಮಾಡಿಕೊಳ್ಳಬಹುದು.

ನನ್ನ ದೃಷ್ಟಿಯಲ್ಲಿ ಇವುಗಳಲ್ಲಿ ಯಾವುದೂ ಈ ವರ್ಷದ ಪ್ರಮುಖ ರಾಜಕೀಯ ವಿದ್ಯಮಾನವಲ್ಲ. ಗುಜರಾತ್ ಗೆಲುವಿನ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡುವಾಗ ಭಾವುಕರಾದದ್ದು ವರ್ಷದ ಪ್ರಮುಖ ರಾಜಕೀಯ ಘಟನೆಯಾಗಿದೆ ಎಂಬುದು ನನ್ನ ಅನಿಸಿಕೆ. 2017ರ ಈ ಪ್ರಮುಖ ಘಟನೆಯು 2018ರ ರಾಜಕೀಯ ವ್ಯಾಖ್ಯಾನಿಸಲಿದೆ. ಜತೆಗೆ, 2019ರ ಚುನಾವಣಾ ಕದನದ ಚಿತ್ರಕಥೆಯನ್ನೂ ಬರೆಯಲಿದೆ ಎನ್ನುವ ಕಾರಣಕ್ಕೆ ನಾನು ಈ ಘಟನೆಯನ್ನು ಆಯ್ಕೆ ಮಾಡಿಕೊಂಡಿರುವೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾವನೆಗಳನ್ನೆಲ್ಲ ತಮ್ಮ ವಿಶಾಲ ಹೃದಯದ ಒಳಗೆ ಅಡಗಿಸಿ ಇಟ್ಟುಕೊಳ್ಳಲು ಸಮರ್ಥರಾಗಿದ್ದಾರೆ. ಅವರ ಸಾರ್ವಜನಿಕ ನಡೆ ನುಡಿಗಳನ್ನು ತುಂಬ ನಾಜೂಕಾಗಿ ನಿಭಾಯಿಸಲಾಗುತ್ತಿದೆ. ಭಾವನೆಗಳನ್ನು ಅಭಿವ್ಯಕ್ತಿಸುವುದನ್ನು ಕಾಳಜಿಯಿಂದ ಆಯ್ಕೆ ಮಾಡಲಾಗುತ್ತದೆ. ಸಂಸದೀಯ ಸಭೆಯಲ್ಲಿ ಮೋದಿ ಅವರು ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದ್ದು ಸ್ವಾಭಾವಿಕವಾಗಿತ್ತು. ಮುಚ್ಚುಮರೆ ಇಲ್ಲದ ಆಕ್ರೋಶವೂ ಅದಾಗಿತ್ತು. ಅದರಲ್ಲಿ ಅತಿಶಯೋಕ್ತಿ ಏನೂ ಇದ್ದಿರಲಿಲ್ಲ.

ಗುಜರಾತ್ ಚುನಾವಣೆ ಪ್ರಚಾರದ ಮಧ್ಯದಲ್ಲಿಯೇ, ಇದೊಂದು ಸುಲಭದ ತುತ್ತಲ್ಲ. ಕಠಿಣ ಹೋರಾಟ ಕಾದಿದೆ ಎನ್ನುವುದು ಮೋದಿ ಅವರಿಗೆ ಮನವರಿಕೆಯಾಗಿತ್ತು. ಪಕ್ಷದ ಹಿಡಿತದಲ್ಲಿದ್ದ ಕೆಲ ಕ್ಷೇತ್ರಗಳು ಕೈಜಾರುವ ಸಾಧ್ಯತೆ ಗೋಚರಿಸಿತ್ತು. ಬಹುಮತ ಬಂದಿರದಿದ್ದರೆ ಅವರ ವರ್ಚಸ್ಸಿಗೆ ಭಾರಿ ಹಾನಿಯಾಗುತ್ತಿತ್ತು. ಬದಲಾವಣೆಯ ಪ್ರಮುಖ ಘಟ್ಟದಲ್ಲಿರುವ ಕಾಂಗ್ರೆಸ್ ಚೇತರಿಕೆಗೆ ಆನೆಬಲ ತಂದುಕೊಡುತ್ತಿತ್ತು. ಬಿಜೆಪಿ ವಿರೋಧಿ ಪಕ್ಷಗಳನ್ನು ಲೋಹಚುಂಬಕದಂತೆ ಸೆಳೆದುಕೊಳ್ಳಲಿತ್ತು. ಬಿಜೆಪಿ ಮೈತ್ರಿಕೂಟವನ್ನೇ ಅಲುಗಾಡಿಸಲಿತ್ತು. ಮೋದಿ ಅವರು ತಮ್ಮ ಸಿಟ್ಟನ್ನು ಅಭಿವ್ಯಕ್ತಪಡಿಸಿರುವುದು ಸಮಾಧಾನದ ನಿಟ್ಟುಸಿರು ಬಿಟ್ಟ ಮತ್ತು ಸಿಟ್ಟಿನ ಅಭಿವ್ಯಕ್ತಿಯಾಗಿದೆ. ಅವರ ಈ ಆಕ್ರೋಶವು ಮುಂಬರುವ ದಿನಗಳಲ್ಲಿನ ಅವರ ರಾಜಕೀಯ ನಡೆಯನ್ನೂ ವ್ಯಾಖ್ಯಾನಿಸಲಿದೆ.

ಮೋದಿ ಅವರು ಪ್ರಧಾನಿಯಾದ ನಂತರ ಗುಜರಾತ್‌ ವಿಧಾನಸಭೆಗೆ ನಡೆದ ಮೊದಲ ಚುನಾವಣೆ ಇದಾಗಿತ್ತು. ಸಾಂಪ್ರದಾಯಿಕವಾದ ಆಡಳಿತ ವಿರೋಧಿ ಅಲೆ ಇಲ್ಲಿ ಈ ಬಾರಿ ಕೆಲಸ ಮಾಡಲಿಲ್ಲ. ಮೂರೂವರೆ ವರ್ಷಗಳಲ್ಲಿ ರಾಜ್ಯದಲ್ಲಿನ ಪಕ್ಷದ ಹಿಡಿತ ಸಡಿಲುಗೊಂಡಿತ್ತು. ಇಬ್ಬರು ಅಸಮರ್ಥ ಮುಖ್ಯಮಂತ್ರಿಗಳನ್ನು ಕಂಡಿತ್ತು. ಜಾತಿ ಆಧರಿತ ಜನಪ್ರಿಯ ಚಳವಳಿಗಳನ್ನು ನಿಯಂತ್ರಿಸುವಲ್ಲಿ ಪಕ್ಷ ಅಥವಾ ರಾಜ್ಯ ಸರ್ಕಾರ ವಿಫಲಗೊಂಡಿದ್ದವು.

ಮೋದಿ ಅವರು ನಿರೀಕ್ಷಿಸದ ಮಟ್ಟಕ್ಕೆ ಕೃಷಿಕರ ಆಕ್ರೋಶ ತಲುಪಿದೆ. ಹೊಸ ತಲೆಮಾರಿನ ಜನಪ್ರಿಯ ಮುಖಂಡರು ರಾಜಕೀಯ ಪ್ರವೇಶಿಸಿರುವುದು ಅವರನ್ನು ತಬ್ಬಿಬ್ಬುಗೊಳಿಸಿದೆ. ಕಾಂಗ್ರೆಸ್ ಪಕ್ಷಕ್ಕೂ ಇದು ವಿಸ್ಮಯ ತಂದಿದೆ. ತಮ್ಮ ತವರು ರಾಜ್ಯದಲ್ಲಿನ ಈ ಹಠಾತ್ ಬೆಳವಣಿಗೆಗಳು ಮೋದಿ ಅವರ ಕಳವಳಕ್ಕೆ ಕಾರಣವಾಗಿವೆ. ಪ್ರಧಾನಿ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಇಬ್ಬರೂ ಗುಜರಾತಿನವರು. ಹೀಗಾಗಿ ರಾಷ್ಟ್ರೀಯ ರಾಜಕಾರಣದಲ್ಲಿ ಗುಜರಾತ್‌ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಪ್ರಧಾನಿ ಹುದ್ದೆಯ ನಾಲ್ಕನೇ ವರ್ಷದಲ್ಲಿ ತವರು ರಾಜ್ಯವನ್ನು ಹಗುರವಾಗಿ ಪರಿಗಣಿಸುವಂತಹ ವಾತಾವರಣ ಇಲ್ಲದಿರುವುದು ಮತ್ತು ಪಕ್ಷವು ಉತ್ತಮ ಸಾಧನೆ ಮಾಡದಿರುವುದನ್ನು ಕಂಡು ಅವರಿಗೆ ಸಹಜವಾಗಿಯೇ ಸಿಟ್ಟು ತರಿಸಿದೆ.

ಹಲವಾರು ವಿದ್ಯಮಾನಗಳ ಒಳನೋಟವನ್ನೂ ಅವರು ಅರ್ಥೈಸಿಕೊಂಡಿದ್ದಾರೆ. ಒಟ್ಟಾರೆ ಆರ್ಥಿಕ ಬೆಳವಣಿಗೆಯು ಹಿತಾನುಭವ ನೀಡುವುದಕ್ಕಿಂತ ಕಡಿಮೆ ಮಟ್ಟದಲ್ಲಿ ಇದೆ. ಯುವ ನಿರುದ್ಯೋಗಿಗಳಲ್ಲಿ ರೈತರಿಗೆ ಇರುವಷ್ಟೇ ಸಿಟ್ಟು ಮಡುಗಟ್ಟಿದೆ. ಸ್ಥಗಿತಗೊಂಡಿರುವ ಆರ್ಥಿಕತೆಗೆ ತಕ್ಷಣ ಪರಿಹಾರ ಸಿಗುತ್ತಿಲ್ಲ. ಬಡ್ಡಿದರ ಕಡಿತದಿಂದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಏಕೈಕ ನಿರೀಕ್ಷೆಯೂ ತಲೆಕೆಳಗಾಗಿದೆ. ಒಂದು ವೇಳೆ ದೇಶಿ ಅರ್ಥ ವ್ಯವಸ್ಥೆಯು ಬೆಳವಣಿಗೆ ಹಾದಿಗೆ ಮರಳಿದರೂ ಅದರಿಂದ ಸಾಕಷ್ಟು ಉದ್ಯೋಗ ಅವಕಾಶ ಸೃಷ್ಟಿಸಲು ಸಾಧ್ಯವಾಗಲಾರದು. ಯುವ ಜನಾಂಗದ ಹತಾಶೆ ಕಡಿಮೆಯಾಗುವುದೂ ಇಲ್ಲ. ಮೋದಿ ಅವರು ಯುವ ಜನಾಂಗವನ್ನು ತಮ್ಮ ಪ್ರಮುಖ ಮತದಾರರೆಂದೇ ಪರಿಗಣಿಸಿರುವಾಗ ಈ ಕಟು ವಾಸ್ತವ ಸಂಗತಿಗಳು ಪಕ್ಷದ ಸಾಧನೆಯ ಹಾದಿಯಲ್ಲಿ ಅಡ್ಡಿ ಉಂಟು ಮಾಡಲಿವೆ.

ಇಂತಹ ಪ್ರತಿಕೂಲತೆಗಳನ್ನು ಮೆಟ್ಟಿ ನಿಲ್ಲಲು ತುರ್ತಾಗಿ ಕೈಗೊಳ್ಳುವ ಕ್ರಮಗಳು ಮೋದಿ ಅವರ ಭವಿಷ್ಯದ ರಾಜಕೀಯ ರೂಪಿಸಲಿವೆ. ಗುಜರಾತ್‌ನಲ್ಲಿ ಹಿಡಿತ ಸಡಿಲಗೊಂಡಿರುವ ಬೆನ್ನಲ್ಲೇ, ಜಾತಿ ಸಂಘಟನೆಗಳಿಂದ ಹೊಸ ಸವಾಲನ್ನು ಎದುರಿಸಬೇಕಾಗಿ ಬರಬಹುದು ಎನ್ನುವ ಸತ್ಯವೂ ಮೋದಿ ಅವರಿಗೆ ಮನವರಿಕೆಯಾಗಿದೆ. ಗುಜರಾತ್‌ನಲ್ಲಿ ಕಂಡಿರುವ ಅಲ್ಪ ಯಶಸ್ಸನ್ನು ವಿರೋಧಿಗಳು ಇನ್ನು ಮುಂದೆ ದೇಶದ ಎಲ್ಲೆಡೆ ಬಂಡವಾಳ ಮಾಡಿಕೊಳ್ಳಲು ಮುಂದಾಗಲಿದ್ದಾರೆ.

ಇನ್ನು ಮುಂದೆ, ದೇಶದ ರಾಜಕಾರಣವನ್ನು ಗುಜರಾತ್‌ ಚುನಾವಣೆ ವ್ಯಾಖ್ಯಾನಿಸಲಿದೆಯೇ ಹೊರತು, ಗಾತ್ರದಲ್ಲಿ ಗುಜರಾತ್‌ಗಿಂತ ಮೂರು ಪಟ್ಟು ದೊಡ್ಡದಿರುವ ಉತ್ತರ ಪ್ರದೇಶವಲ್ಲ. ಮೋದಿ ಮತ್ತು ಅಮಿತ್‌ ಷಾ ಅವರ ತವರು ರಾಜ್ಯವಾಗಿದ್ದರೂ ಗುಜರಾತ್‌ನಲ್ಲಿನ ಗೆಲುವು ಸುಲಭದ್ದಾಗಿರಲಿಲ್ಲ. ಉತ್ತರ ಪ್ರದೇಶದಲ್ಲಿ ಬಿಜೆಪಿಯು ಜನಪ್ರಿಯವಲ್ಲದ ಆಡಳಿತಾರೂಢ ಪಕ್ಷದ ವಿರುದ್ಧ ಸ್ಪರ್ಧಿಸಿ ಗೆಲುವು ಕಂಡಿತ್ತು. ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿತ್ತು.

2019ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಮತ್ತು ಅಲ್ಲಿಯವರೆಗೆ ನಡೆಯಲಿರುವ 10 ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಮೋದಿ ಅವರು ಗುಜರಾತ್‌ನಿಂದ ಕಲಿತ ಪಾಠಗಳನ್ನು ಜಾರಿಗೆ ತರಲು ಪ್ರಯೋಗ ನಡೆಸಬಹುದು.

ಹಿಂದೂಗಳೆಲ್ಲ ಒಂದಾಗಿ ಮತ ಚಲಾಯಿಸಿದಾಗಲ್ಲೆಲ್ಲ ಬಿಜೆಪಿ ಗೆಲ್ಲುತ್ತ ಬಂದಿದೆ. ಜಿಗ್ನೇಶ್‌, ಅಲ್ಪೇಶ್‌ ಮತ್ತು ಹಾರ್ದಿಕ್ ಅವರು ಕಾಂಗ್ರೆಸ್‌ ಜತೆ ಕೈಜೋಡಿಸಿರುವಂತಹ ವಿದ್ಯಮಾನವನ್ನು ಮತ್ತೆ ಬೇರೆಡೆ ನೋಡಲು ಮೋದಿ – ಷಾ ಜೋಡಿ ಇಷ್ಟಪಡುವುದಿಲ್ಲ. ಹೀಗಾಗಿ ಇನ್ನಷ್ಟು ಧ್ರುವೀಕರಣದ ಮೂಲಕ ತನ್ನ ಹಿಂದುತ್ವದ ಅಂಟನ್ನು ಭದ್ರಪಡಿಸಿಕೊಳ್ಳುವುದು ಅದರ ಲೆಕ್ಕಾಚಾರವಾಗಿದೆ.

ತಲಾಖ್‌ ಮಸೂದೆ ಮಂಡಿಸಿರುವುದು ಇದೇ ಉದ್ದೇಶಕ್ಕೆ. ಮಾರುಕಟ್ಟೆ ಪರಿಭಾಷೆಯಲ್ಲಿ ಇದನ್ನು ಸ್ಪರ್ಧೆಯನ್ನು ಮರುಸ್ಥಾಪನೆ ಮಾಡುವುದು ಎಂದು ವ್ಯಾಖ್ಯಾನಿಸಲಾಗುತ್ತದೆ. ರಾಹುಲ್‌ ಗಾಂಧಿ ಅವರು ದೇವಸ್ಥಾನಗಳಿಗೆ ಭೇಟಿ ನೀಡುತ್ತ ಉತ್ತರ ನೀಡುತ್ತಿದ್ದಾರೆ. ಅಲ್ಪಸಂಖ್ಯಾತರ ಓಲೈಕೆ ಹೆಸರಿನಲ್ಲಿ ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ. ಇಂತಹ ಇನ್ನಷ್ಟು ಕಾರ್ಯಕ್ರಮಗಳು ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿಯೂ ಜಾರಿಗೆ ಬರಬಹುದು.

ಎಲ್ಲರ ಕಲ್ಯಾಣ (ಸಬ್‌ಕಾ ವಿಕಾಸ್‌) ಎನ್ನುವುದು ಬಿಜೆಪಿಯ ಘೋಷಣೆಯಾಗಿದ್ದರೂ, 5 ವರ್ಷಗಳ ಅಧಿಕಾರಾವಧಿಯಲ್ಲಿ ಆರ್ಥಿಕತೆಯು ಸಾಕಷ್ಟು ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಮತ್ತು ಪಕ್ಷಕ್ಕೆ ವೋಟ್‌ಗಳನ್ನು ತಂದುಕೊಡಲು ನೆರವಾಗುವುದಿಲ್ಲ ಎನ್ನುವ ಸತ್ಯ ಬಿಜೆಪಿಗೆ ಮನವರಿಕೆಯಾಗಿದೆ. ಭ್ರಷ್ಟಾಚಾರ ವಿರುದ್ಧದ ಹೋರಾಟವು ಚುನಾವಣೆಗೆ ಕೆಲಮಟ್ಟಿಗೆ ಕಾವು ಕೊಡಬಹುದು. ಇದರಿಂದ ಚುನಾವಣಾ ಪ್ರಚಾರ

ಭಾಷಣಗಳಲ್ಲಿಯೂ ಬದಲಾವಣೆ ಕಂಡು ಬರಬಹುದು. ಕಪ್ಪು ಹಣ ಸಂಗ್ರಹಕಾರರ ಮೇಲಿನ ಐ.ಟಿ ದಾಳಿಗಳು ಇನ್ನಷ್ಟು ಹೆಚ್ಚಬಹುದು. ಕೆಲ ಪ್ರಭಾವಿಗಳ ವಿರುದ್ಧದ ಕಾನೂನು ಕ್ರಮಗಳು ಬಿಗಿಗೊಳ್ಳಬಹುದು. ದಿವಾಳಿ ಎದ್ದಿರುವ ಕಾರ್ಪೊರೇಟ್‌ ಸಂಸ್ಥೆಗಳಿಂದ ಸಾಲ ವಸೂಲಿ ಕ್ರಮಗಳು ತ್ವರಿತಗೊಳ್ಳಬಹುದು.

‘2ಜಿ’ ಹಗರಣದಲ್ಲಿ ಭಾಗಿಯಾದವರನ್ನು ಕೋರ್ಟ್‌ ಖುಲಾಸೆಗೊಳಿಸಿರುವುದರಿಂದ ಮೋದಿ ಅವರ ಭ್ರಷ್ಟಾಚಾರ ವಿರೋಧಿ ಹೋರಾಟ ತನ್ನ ಮೊನಚು ಕಳೆದುಕೊಂಡಿದೆ. ಆದರ್ಶ ಪ್ರಕರಣವನ್ನೂ ನ್ಯಾಯಾಂಗವು ದುರ್ಬಲಗೊಳಿಸುವ ಸಾಧ್ಯತೆ ಕಂಡು ಬರುತ್ತಿದೆ.

ಈಗಲೂ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರ ಒಳ್ಳೆಯ ಹೆಸರಿಗೆ ಭ್ರಷ್ಟತೆಯ ಯಾವುದೇ ಕಪ್ಪು ಕಲೆ ಅಂಟಿಕೊಂಡಿಲ್ಲ. ಕೆಲ ಆರೋಪಗಳು ಕೇಳಿ ಬಂದರೂ ಗಟ್ಟಿಯಾಗಿ ನಿಲ್ಲಲಿಲ್ಲ. ‘ಅದಾನಿ – ಅಂಬಾನಿ ಸರ್ಕಾರ’ ಎನ್ನುವ ಟೀಕೆ ಸದ್ದುಮಾಡಿದರೂ ಟೀಕಾಕಾರರಿಗೆ ಇದರಿಂದ ವೋಟ್‌ಗಳೇನೂ ಬರಲಿಲ್ಲ. ಭ್ರಷ್ಟಾಚಾರ ವಿರೋಧಿ ಚಳವಳಿಯು ಪುನಶ್ಚೇತನಗೊಳ್ಳದಿದ್ದರೆ ಆಶ್ಚರ್ಯಚಕಿತರಾಗಬೇಡಿ. ಚುನಾವಣೆಯಲ್ಲಿ ಭ್ರಷ್ಟಾಚಾರವು ಪ್ರಮುಖ ಅಸ್ತ್ರವಾಗಿದ್ದರೂ, ಧರ್ಮ ಮತ್ತು ರಾಷ್ಟ್ರೀಯತೆ ಬೆರೆತ ಅಸ್ತ್ರವು ಅದಕ್ಕಿಂತ ಹೆಚ್ಚು ತೀಕ್ಷ್ಣವಾಗಿರುತ್ತದೆ. ಮುಂಬರುವ ದಿನಗಳಲ್ಲಿ ಈ ಅಸ್ತ್ರದ ತೀವ್ರತೆ ನಮ್ಮ ಅನುಭವಕ್ಕೆ ಬರಲಿದೆ. ಆಡಳಿತಾರೂಢ ಪಕ್ಷದ ವೈಫಲ್ಯ ಮತ್ತು ಅದಕ್ಷತೆಯ ಹೊರತಾಗಿಯೂ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಭಾರತವು ಒಂದಾಗಿ ಅದರ ಬೆನ್ನಿಗೆ ನಿಲ್ಲುತ್ತದೆ ಎನ್ನುವುದನ್ನು ಇತಿಹಾಸ ನಮಗೆ ಹೇಳಿಕೊಟ್ಟಿದೆ.

ಇತ್ತೀಚಿನ ನಿದರ್ಶನಗಳು ಈ ಮಾತನ್ನು ಪುಷ್ಟೀಕರಿಸುತ್ತವೆ. ಕಾರ್ಗಿಲ್‌ ಯುದ್ಧ ಮತ್ತು ಮುಂಬೈ ಮೇಲಿನ ಭಯೋತ್ಪಾದಕರ ದಾಳಿಯ (26/11) ನಂತರದ ದಿನಗಳಲ್ಲಿ ಕ್ರಮವಾಗಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್‌ ಸರ್ಕಾರಗಳು ಸ್ಪಷ್ಟ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದವು. ಟೆಲಿವಿಷನ್‌ ಚಾನೆಲ್‌ಗಳಲ್ಲಿ ಕುಳಿತು ‍ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವವರಿಂದ ಆ ದೇಶದ ಜತೆಗಿನ ಬಿಕ್ಕಟ್ಟು ಹೆಚ್ಚಳಗೊಳ್ಳುವುದನ್ನೂ ನೀವು ಮುಂಚಿತವಾಗಿಯೇ ಊಹಿಸಬಹುದು.

ಇಲ್ಲಿ ಕೆಲ ಸಂಗತಿಗಳು ಸಾಕಷ್ಟು ಗೋಜಲಾಗಿವೆ. ದೊಕಾಲಾ ಮತ್ತಿತರ ಕಡೆಗಳಲ್ಲಿ ಚೀನಾದ ಮನಸ್ಸಿನಲ್ಲಿ ಏನಿದೆ ಎನ್ನುವುದು ಯಾರೊಬ್ಬರಿಗೂ ಗೊತ್ತಿಲ್ಲ. ಇಂತಹ ಬಿಕ್ಕಟ್ಟುಗಳು ನಿಯಂತ್ರಣದಲ್ಲಿ ಇರುವವರೆಗೆ, ಗಂಭೀರ ಸ್ವರೂಪದ ತಿರುವು ಪಡೆಯುವವರೆಗೆ ಆಡಳಿತಾರೂಢ ಪಕ್ಷದ

ಪಾಲಿಗೆ ಹೆಚ್ಚು ಪ್ರಯೋಜನಕಾರಿ ಆಗಿರಲಿವೆ. ಅಂತ್ಯದಲ್ಲಿ ಗೆಲುವು ಸಾಧಿಸಲಾಯಿತು ಎಂದೇ ಹೇಳಿಕೊಳ್ಳಬಹುದು. ಆಕ್ರಮಣಕಾರಿ ರಾಷ್ಟ್ರೀಯತೆ ಮತ್ತು ದೇಶದ ಗಡಿಪ್ರದೇಶದಲ್ಲಿನ ಮಿತಿಗಳ ಮಧ್ಯೆ ಸಮತೋಲನ ಸಾಧಿಸುವುದು ಮೋದಿ ಸರ್ಕಾರಕ್ಕೆ ಸವಾಲಿನ ಕೆಲಸವಾಗಿರಲಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮುಂಬರುವ ದಿನಗಳಲ್ಲಿ ಧರ್ಮ, ರಾಷ್ಟ್ರೀಯತೆ ಮತ್ತು ಭ್ರಷ್ಟಾಚಾರ ವಿಷಯಗಳು ಬಿಜೆಪಿಯ ರಾಜಕೀಯ ಮುನ್ನಡೆಸಲಿರುವ ಚಾಲಕ ಶಕ್ತಿಗಳಾಗಿರಲಿವೆ. ಅಲ್ಲೊಮ್ಮೆ ಇಲ್ಲೊಮ್ಮೆ ಅಭಿವೃದ್ಧಿ ಮಂತ್ರ, ಉದ್ಯೋಗ ಅವಕಾಶ, ಒಳ್ಳೆಯ ದಿನಗಳ ಘೋಷಣೆಗಳು ಕಿವಿಗೆ ಬೀಳಬಹುದು. ಇವೆಲ್ಲ ಬರೀ ತೋರಿಕೆಯ ಲಕ್ಷಣಗಳಷ್ಟೆ. ನರೇಂದ್ರ ಮೋದಿ ಅವರ ಅಧಿಕಾರಾವಧಿಯ ಉಳಿದ ದಿನಗಳು ಹೇಗೆ ಇರಲಿವೆ ಎನ್ನುವುದಕ್ಕೆ ಅವರ ಭಾವುಕ ಕ್ಷಣಗಳು ಮತ್ತು ಮುಖಭಾವದ ಬಗೆಗಿನ ನನ್ನ ಒಳನೋಟ ಇದಾಗಿದೆ.

(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)