ಬುಧವಾರ, ಜನವರಿ 22, 2020
18 °C

ಯಾರು ನೆಪೋಲಿಯನ್ ?

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಫ್ರಾ ನ್ಸ್‌ನ ಮಿಲಿಟರಿ ಜನರಲ್‌­ರೊಬ್ಬರಿಗೆ ಪ್ಯಾರಿಸ್‌ಗೆ ವರ್ಗವಾಯಿತು. ಅವರಿಗೆ ರಾಷ್ಟ್ರೀಯ ಉದ್ಯಾನದ ಪಕ್ಕದಲ್ಲೇ ವಿಶಾಲವಾದ ಬಂಗಲೆಯನ್ನು ಗೊತ್ತು ಮಾಡಿದ್ದರು. ಜನರಲ್‌ಗೆ ಒಬ್ಬ ಪುಟ್ಟ ಮಗ. ದಿನಾಲು ಅವನನ್ನು ಕರೆದುಕೊಂಡು ಬೆಳಿಗ್ಗೆ ವಾಯು­ವಿಹಾರಕ್ಕೆ ಹೋಗುತ್ತಿದ್ದರು. ಒಂದು ದಿನ ಬೆಳಿಗ್ಗೆ  ಉದ್ಯಾನದಲ್ಲಿ ಮಗನೊಂದಿಗೆ ಸುತ್ತಾಡುತ್ತಿದ್ದಾಗ ಅಲ್ಲೊಂದು ದೊಡ್ಡ ಕಂಚಿನ ವಿಗ್ರಹ ಕಣ್ಣಿಗೆ ಬಿತ್ತು. ಅದು ಒಂದು ಭಾರಿ ಕುದುರೆಯನ್ನೇರಿ ಕುಳಿತ ಯೋಧನ ವಿಗ್ರಹ.ಜನರಲ್ ಕೂಡ ಹತ್ತಿರ ಹೋಗಿ ನೋಡಿದರು. ಆ ಬಹುದೊಡ್ಡ ವಿಗ್ರಹದ ಮುಂದೆ ತಾಮ್ರದ ಫಲಕದ ಮೇಲೆ ಕೆತ್ತಲಾಗಿತ್ತು. ಧೀರ ಚಕ್ರವರ್ತಿ ನೆಪೋಲಿಯನ್. ಮಗ, ‘ಯಾರಪ್ಪಾ ಅದು?’ ಎಂದು ಕೇಳಿದ. ಆಗ ಜನರಲ್ ಎದೆಯುಬ್ಬಿಸಿ ಹೇಳಿದರು, ಅದು ನೆಪೋಲಿಯನ್ ಬೋನಾಪಾರ್ಟೆ.ಆತನಂತಹ ಬುದ್ಧಿ­ವಂತ, ಧೀರ ಜನರಲ್‌ನನ್ನು ಇದುವರೆಗೂ ಪ್ರಪಂಚ ಕಂಡಿಲ್ಲ ... ಜನರಲ್ ಹೇಳುತ್ತಾ ಹೋದ. ಹುಡುಗ ಬೆರಗುಗಣ್ಣುಗಳಿಂದ ನೋಡುತ್ತಲೇ ಇದ್ದ. ಅಂದಿನಿಂದ ದಿನನಿತ್ಯ ತಂದೆ ಮಗ ಇಬ್ಬರಿಗೂ ವಾಕಿಂಗ್ ಈ ಉದ್ಯಾನದಲ್ಲೇ. ಮಗ ಉತ್ಸಾಹದಿಂದ ನೆಪೋಲಿಯನ್ ವಿಗ್ರಹಕ್ಕೆ ಐದು ಸುತ್ತು ಪ್ರದಕ್ಷಿಣೆ ಹಾಕುತ್ತಿದ್ದ. ಎರಡು ನಿಮಿಷ ಆ ವಿಗ್ರಹದ ಮುಂದೆ ನಿಂತು ಅದನ್ನೇ ತದೇಕಚಿತ್ತದಿಂದ ನೋಡುತ್ತಿದ್ದ.ಅದನ್ನು ನೋಡಿದ ಜನರಲ್‌ನಿಗೆ ತುಂಬ ಸಮಾಧಾನವಾಗುತ್ತಿತ್ತು. ತನ್ನ ಮಗ ದಿನಾಲು ನೆಪೋಲಿಯನ್‌ನನ್ನು ಹಾಗೆ ಕಣ್ತುಂಬಿ ನೋಡಿ ಸಂತೋಷಪಡು­ವುದನ್ನು ಕಂಡಾಗ, ಇದೊಂದು ಶುಭ ಚಿಹ್ನೆ. ನನ್ನ ಮಗನಿಗೂ ಬಹುಶಃ ಮಹಾನ್ ನಾಯಕನಾಗುವ ಮನಸ್ಸು ಬರುತ್ತಿರಬೇಕು. ಅವನೂ ಒಂದಲ್ಲ ಒಂದು ದಿನ ದೊಡ್ಡ ಜನರಲ್ ಆಗಿಯೇ ಆಗುತ್ತಾನೆ ಎಂದು ತೃಪ್ತಿಪಟ್ಟ.  ಒಂದು ವರ್ಷ ಕಾಲ ಒಂದು ದಿನವೂ ತಪ್ಪದಂತೆ ಹುಡುಗ ಈ ವಿಗ್ರಹವನ್ನು ನೋಡುತ್ತಲೇ ಬಂದ. ಆಗ ಜನರಲ್‌ನಿಗೆ ಮತ್ತೊಂದು ಕಡೆಗೆ ವರ್ಗವಾದ ಸುದ್ದಿ ತಲುಪಿತು. ಮನೆಯಲ್ಲಿ ವಿಷಯ ಹಂಚಿಕೊಂಡಾಗ ಮಗ ತುಂಬ ದುಃಖಪಟ್ಟ.ಅವನಿಗೆ ಪ್ಯಾರಿಸ್  ಬಿಡುವುದು ಅಷ್ಟು ದುಃಖದ ವಿಷಯವಾಗಿರಲಿಲ್ಲ. ಆದರೆ ಮುಂದೆ ದಿನಾಲು ಆ ನೆಪೋಲಿ­ಯನ್ ವಿಗ್ರಹವನ್ನು ನೋಡಲಾಗುವು­ದಿಲ್ಲವಲ್ಲ ಎಂಬ ಚಿಂತೆ. ಆತ ಒಂದೇ ಸಮನೆ ಅಳುತ್ತಿದ್ದ. ಊರು ಬಿಟ್ಟು ಹೊರಡುವ ಸಮಯ ಬಂದಿತು. ಮರುದಿನ ಬೆಳಿಗ್ಗೆಯೇ ಹೊರಡಬೇಕು. ಆಗ ಜನರಲ್ ಯೋಚಿಸಿದ. ಹೊರಡುವ ಮೊದಲು ಮಗನನ್ನು ಉದ್ಯಾನಕ್ಕೆ ಕರೆದುಕೊಂಡು ಹೋಗಿ ಕೊನೆಯ ಬಾರಿಗೆ ಆ ವಿಗ್ರಹವನ್ನು ತೋರಿಸುವುದು ಉಚಿತ. ವಿದಾಯ ಹೇಳಲು ಮಗನನ್ನು ಕರೆದುಕೊಂಡು ವಿಗ್ರಹದ ಹತ್ತಿರ ಹೋದ. ಹುಡುಗ ಮತ್ತೆ ಐದು ಸುತ್ತು ಪ್ರದಕ್ಷಿಣೆ ಹಾಕಿದ. ಅದರ ಮುಂದೆ ನಿಂತ.ದುಃಖ ತಡೆಯಲಾಗಲಿಲ್ಲ. ಕಣ್ಣೀರು ಸುರಿದವು. ಮಗನನ್ನು ಸಂತೈಸಲು ಜನರಲ್ ಅವನ ಭುಜದ ಮೇಲೆ ಕೈಯಿಟ್ಟು ಒತ್ತಿದ. ಮಗ ತಲೆಯೆತ್ತಿ ನೋಡಿ ಕಣ್ಣೊರೆಸಿಕೊಂಡ. ನಂತರ ತಂದೆಗೆ ಕೇಳಿದ, ‘ಅಪ್ಪಾ, ನಾನು ನಿನಗೆ ಅಂದಿನಿಂದ ಒಂದು ಪ್ರಶ್ನೆ ಕೇಳಬೇಕು ಎಂದುಕೊಂಡಿದ್ದೆ. ಆದರೆ, ಈ ನೆಪೋಲಿಯನ್‌ನನ್ನು ನೋಡಿದಾಗಲೆಲ್ಲ ನನಗಾದ ಸಂತೋಷದಲ್ಲಿ ನಾನು ಕೇಳುವುದನ್ನೇ ಮರೆತುಬಿಡುತ್ತಿದ್ದೆ. ಇಂದು ಕೊನೆಯ ದಿನವಾದ್ದರಿಂದ ಕೇಳುತ್ತೇನೆ. ಅಪ್ಪಾ ಇಷ್ಟು ಸುಂದರ­ವಾದ, ಬಲಿಷ್ಠವಾದ ನೆಪೋಲಿಯನ್‌ನ ಮೇಲೆ ಕುಳಿತ ಮೂರ್ಖ ಯಾರು?‘ ಅಪ್ಪನಿಗೆ ಮೂಛೆರ್ ಬರುವುದೊಂದು ಬಾಕಿ. ಇದುವರೆಗೂ ಕುದುರೆಯ ಮೇಲೆ ಕುಳಿತ ನೆಪೋಲಿಯನ್‌ನನ್ನು ನೋಡಿ ಮಗ ಸಂತೋಷಪಡುತ್ತಾನೆ ಎಂದು ಭಾವಿಸಿದ್ದ ಜನರಲ್.ಆದರೆ ಮಗ ಮೆಚ್ಚಿದ್ದು ಕುದುರೆಯನ್ನು ಮತ್ತು ಅದನ್ನೇ ನೆಪೋಲಿಯನ್ ಎಂದು ತಿಳಿದದ್ದು ಈಗ ಗೊತ್ತಾಗಿತ್ತು. ಜಗತ್ತೇ ಹೀಗೆ. ನಾವು ಏನೋ ಹೇಳುತ್ತೇವೆ, ಕೆಲವು ಜನ ಮತ್ತೇನೋ ಭಾವಿಸಿಕೊ­ಳ್ಳುತ್ತಾರೆ. ನಾವು ಹೇಳಿದ್ದನ್ನೇ, ಮಾಡಿದ್ದನ್ನೇ ಸರಿಯಾಗಿ ಅರ್ಥೈಸಿ­ಕೊಂಡಿದ್ದಾರೆ ಎಂದು ತೃಪ್ತಿಪಡುತ್ತೇವೆ. ಆದರೆ, ಜನ ತಮ್ಮ ಮೂಗಿನ ನೇರಕ್ಕೇ ಅರ್ಥವನ್ನು ಹೊಂದಿಸಿಕೊಳ್ಳುತ್ತಾರೆ. ಎಷ್ಟು ಜನಕ್ಕೆಂದು ವಿವರಿಸಿ ಹೇಳಹೋಗು­ತ್ತೀರಿ? ಯಾರಾದರೂ ಸರಿಯಾದ ಅರ್ಥದಲ್ಲಿ ಗ್ರಹಿಸಿದರೆ ಭಗವಂತನ ಕೃಪೆ­ಯೆಂದು ತೃಪ್ತರಾಗಿರಿ. ಹಾಗಾಗದಿದ್ದರೆ ಅವರ ಹಣೆಬರಹ ಎಂದು ಸುಮ್ಮನಾಗಿ.

ಪ್ರತಿಕ್ರಿಯಿಸಿ (+)