ಸೋಮವಾರ, ಏಪ್ರಿಲ್ 19, 2021
32 °C

ವೃತ್ತಿಯಲ್ಲಿ ಘನತೆ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |ಕೆಲ ವರ್ಷಗಳ ಹಿಂದೆ ಕೆಲವು ಶಾಲೆಗಳಲ್ಲಿ ಶಿಕ್ಷಕರಿಗೆ ತರಬೇತಿ ನೀಡಲು ನಾನು ಬ್ಯಾಂಕಾಕ್‌ಗೆ ವರ್ಷಕ್ಕೆ ಸುಮಾರು ಎರಡು ಮೂರು ಬಾರಿ ಹೋಗುತ್ತಿದ್ದೆ. ಸುಕುಮವಿತ್ ಎಂಬ ನಗರ ಮಧ್ಯಪ್ರದೇಶದಲ್ಲಿದ್ದ ಶಾಲೆ ನನಗೆ ಹೆಚ್ಚು ಪ್ರಿಯವಾದದ್ದು. ಅಲ್ಲಿ ಹೋದಾಗ ಮೂರು-ನಾಲ್ಕು ದಿನಗಳಿದ್ದು ಶಿಕ್ಷಕರಿಗೆ ತರಬೇತಿ ಕೊಡುವುದು ನನ್ನ ಕೆಲಸ.ಒಂದು ದಿನ ನನ್ನನ್ನು ಕರೆಯಲು ಕಾರು ಬೇಗನೇ ಬಂದದ್ದರಿಂದ ಶಾಲೆಗೆ ಬೇಗ ಹೋದೆ. ತರಗತಿ ಪ್ರಾರಂಭವಾಗಲು ಇನ್ನೂ ಒಂದು ಗಂಟೆ ಸಮಯವಿತ್ತು. ಆಗಲೇ ನಾನು ಲೂಸಿಯನ್ನು ಕಂಡದ್ದು. ದಪ್ಪವೂ ಅಲ್ಲದೇ, ತೆಳ್ಳಗೂ ಅಲ್ಲದೇ ಪ್ರಮಾಣಬದ್ಧವಾದ ದೇಹ, ಕಾಂತಿಯುತವಾದ ಸುಂದರ ನಗು ಮುಖ, ನಡಿಗೆಯಲ್ಲಿದ್ದ ಚುರುಕು, ಸ್ವಚ್ಛವಾದ ನೀಟಾದ ಬಟ್ಟೆ. ಇವುಗಳ ಒಡತಿ ಲೂಸಿ. ಹತ್ತಿರ ಬಂದಾಗ ನನ್ನನ್ನು ನೋಡಿ ನಗೆ ಚೆಲ್ಲಿ ‘ಹಲೋ, ಹೇಗಿದ್ದೀರಿ? ಯಾವಾಗ ಬಂದಿರಿ ಶಾಲೆಗೆ?’ಎಂದು ಸ್ವಚ್ಛವಾದ ತಪ್ಪಿಲ್ಲದ ಇಂಗ್ಲೀಷಿನಲ್ಲಿ ಕೇಳಿದಾಗ ಆಕೆಯೂ ಒಬ್ಬ ಹೊಸದಾಗಿ ನೇಮಕವಾದ ಶಿಕ್ಷಕಿ ಇರಬೇಕು ಎಂದುಕೊಂಡು, ‘ಹಲೋ, ನಾನು ಚೆನ್ನಾಗಿದ್ದೇನೆ. ಈಗ ತಾನೇ ಬಂದೆ. ತಾವು ಹೊಸದಾಗಿ ಶಾಲೆಯನ್ನು ಸೇರಿದ್ದೀರಾ?’

ಎಂದು ಕೇಳಿದೆ. ಆಕೆ ಪ್ರತಿಯೊಂದು ಮಾತಿನ ಮೊದಲು ಮೊರ ತುಂಬ ನಗೆ ಸುರಿಸುತ್ತಾಳೆ. ‘ಛೇ, ಛೇ ನಾನಿಲ್ಲಿ ಕೆಲಸಮಾಡುತ್ತಿದ್ದು ಮೂರು ವರ್ಷವಾಯಿತು. ನೀವು ನನ್ನನ್ನು ಮರೆತುಬಿಟ್ಟಿದ್ದೀರಿ’ ಎಂದಳು. ‘ಹೌದೇ? ಯಾವ ವಿಷಯವನ್ನು ಕಲಿಸುತ್ತೀರಿ?’ ಎಂದು ಕೇಳಿದೆ. ಮತ್ತೆ ಫಕ್ಕನೇ ನಕ್ಕಳು, ‘ನಾನು ಯಾವುದೇ ವಿಷಯ ಕಲಿಸಬಹುದು, ಆದರೆ ಕೇಳುವವರಾರು?ನಾನಿಲ್ಲಿ ಶಿಕ್ಷಕಿಯಲ್ಲ, ಕಟ್ಟಡವನ್ನು ಸ್ವಚ್ಛವಾಗಿ ಇಡಲು ನೇಮಕವಾಗಿರುವ ಕೆಲಸಗಾರ್ತಿ. ನಾನು ನಿಮ್ಮ ತರಗತಿಯನ್ನು ಸಾಕಷ್ಟು ಬಾರಿ ಕಂಡಿದ್ದೇನೆ. ನಿಮ್ಮ ಕ್ಲಾಸು ನನಗೆ ಬಹಳ ಇಷ್ಟ. ಆದರೆ ನಾನು ನಿಮ್ಮ ತರಗತಿಯಲ್ಲಿ ಕೂಡ್ರುವಂತಿಲ್ಲ. ಅವಕಾಶ ಸಿಕ್ಕಾಗ ಬಾಗಿಲು ಹಿಂದೆ ನಿಂತು ಕೆಲವಾರು ಬಾರಿ ಕೇಳಿದ್ದೇನೆ. ಆಯ್ತು ಆಮೇಲೆ ಮತ್ತೆ ಭೆಟ್ಟಿಯಾಗುತ್ತೇನೆ’ ಎಂದು ಕುಣಿಯುತ್ತ ನಡೆದೇ ಬಿಟ್ಟಳು.ಐದು ನಿಮಿಷದಲ್ಲಿ ತನ್ನ ಕೋಣೆಗೆ ಹೋಗಿ ಕೆಲಸಗಾರರು ಧರಿಸುವ ಸಮವಸ್ತ್ರವನ್ನು ಧರಿಸಿಬಂದಳು. ಕೂದಲನ್ನು ಎತ್ತಿ ಕಟ್ಟಿ ಅದಕ್ಕೊಂದು ಟೋಪಿ ಹಾಕಿದ್ದಾಳೆ. ಆಕೆಯ ಕೆಲಸ ಮಾಡುವ ರೀತಿ ನನಗೆ ಬೆರಗು ತಂದಿತು. ಅದೇನು ತನ್ಮಯತೆ ಆಕೆಗೆ ಕಸ ಗುಡಿಸಿ, ನೆಲ ಒರೆಸುವುದರಲ್ಲಿ! ಪ್ರತಿಯೊಂದು ಕುರ್ಚಿ, ಮೇಜುಗಳನ್ನು ಸರಿಸಿ ಒಂದು ಚೂರೂ ಧೂಳು ಇರದಂತೆ ಸ್ವಚ್ಛವಾಗಿ ಇಟ್ಟಿದ್ದಳು. ಈ ಶಾಲೆಯಲ್ಲಿ ಈಕೆಯೊಬ್ಬಳೇ ಕೆಲಸಗಾರ್ತಿಯಲ್ಲ, ಅನೇಕರಿದ್ದಾರೆ. ಆದರೆ ಲೂಸಿಯ ವಿಷಯವೇ ಬೇರೆ. ಆಕೆಗೆ ತನ್ನ ಕೆಲಸದ ಬಗ್ಗೆ, ತನ್ನ ಬಗ್ಗೆ ಕೀಳರಿಮೆಯಿಲ್ಲ.ಸಂಜೆ ತರಗತಿ ಮುಗಿದ ಮೇಲೆ ನಾನು ಪ್ರಿನ್ಸಿಪಾಲರಿಗಾಗಿ ಕಾಯುತ್ತಿದ್ದಾಗ ಮತ್ತೆ ಲೂಸಿ ಬಂದಳು. ಈಗ ಆಕೆ ಸಮವಸ್ತ್ರ ಕಳಚಿ ತನ್ನ ನೀಟಾದ ಉಡುಪನ್ನು ದರಿಸಿದ್ದಳು. ‘ಸರ್ ನಾಳೆ ನಿಮ್ಮನ್ನು ಕಾಣಲು ನನ್ನ ಮಗಳನ್ನು ಕರೆದು ತರಲೇ?’ ಎಂದು ಕೇಳಿದಳು. ‘ನಿಮಗೆ ಮಗಳಿದ್ದಾಳೆಯೇ? ಏನು ಓದುತ್ತಿದ್ದಾಳೆ?’ ಎಂದೆ. ‘ನನ್ನ ಮಗಳು ಈ ವರ್ಷ ಕಾಲೇಜು ಮುಗಿಸಿ ದಂತಶಾಸ್ತ್ರವನ್ನು ಕಲಿಯಬೇಕೆನ್ನುತ್ತಾಳೆ. ನನಗೆ ಅದು ಅಷ್ಟು ಅರ್ಥವಾಗುವುದಿಲ್ಲ. ನೀವು ಅಷ್ಟೊಂದು ಓದಿಕೊಂಡಿದ್ದೀರಿ.ಸ್ವಲ್ಪ ಮಾರ್ಗದರ್ಶನ ಮಾಡಬಹುದೇ?’ ಎಂದು ಕೇಳಿದಳು. ನನಗೆ ಆಶ್ಚರ್ಯ. ಯಾಕೆಂದರೆ ಲೂಸಿಗೆ ದೊಡ್ಡ ವಯಸ್ಸಿನ ಮಗಳು ಇರಬಹುದು ಎಂದುಕೊಂಡಿರಲಿಲ್ಲ. ‘ನಿಮಗೆ ಅಷ್ಟು ವಯಸ್ಸಿನ ಮಗಳಿದ್ದಾಳೆಯೇ? ನಿಮ್ಮನ್ನು ನೋಡಿದರೆ ಮೂವತ್ತು ದಾಟಿದಂತೆ ಕಾಣುವುದಿಲ್ಲ’ ಎಂದೆ. ಆಕೆ ನಕ್ಕು, ಥೈಲಾಂಡಿನಲ್ಲಿ ನೀವು ಯಾವ ಮಹಿಳೆಯ ವಯಸ್ಸನ್ನೂ ಊಹಿಸಲಾರಿರಿ. ನಾವು ಚಿರಯೌವನೆಯರು. ನನಗೆ ಈಗ ನಲವತ್ತಾರು ವಯಸ್ಸು. ನಾನು ಶಾಲೆಯಲ್ಲಿ ಬಹಳ ಬುದ್ಧಿವಂತಳಾಗಿದ್ದೆ.ಹೈಸ್ಕೂಲಿನಲ್ಲಿ ಪ್ರಥಮಳಾಗಿದ್ದೆ. ತಂದೆ ತೀರಿದರು, ತಾಯಿಗೆ ಕಾಲೇಜಿಗೆ ಕಳಿಸುವ ಶಕ್ತಿ ಇಲ್ಲ. ಇಲ್ಲಿ ಬಂದು ಕೆಲಸ ಕೇಳಿದರೆ ನಿನ್ನಲ್ಲಿ ಡಿಗ್ರಿ ಇಲ್ಲದಿರುವುದರಿಂದ ನೀನು ಕಸಗುಡಿಸುವುದನ್ನು ಮಾತ್ರ ಮಾಡಬಹುದು ಎಂದರು. ಯಾವ ಕೆಲಸವೇನು ಸರ್? ನಮಗೊಪ್ಪಿಸಿದ ಕೆಲಸವನ್ನು ಅವರ ಅಪೇಕ್ಷೆಗಿಂತ ಹೆಚ್ಚಾಗಿ ನಮಗೆ ತೃಪ್ತಿಯಾಗುವಂತೆ ಮಾಡಿದರೆ ಸಾಕು. ಅಲ್ಲವೇ?’ ಎಂದಳು. ಮರುದಿನ ಮಗಳನ್ನು ಕರೆದುಕೊಂಡು ಬಂದಳು.ಶಾಲೆಯ ಪ್ರಿನ್ಸಿಪಾಲರೂ ಹೇಳಿದರು, ನಾವು ಶಾಲೆಯ ಉಳಿದೆಲ್ಲ ಕೆಲಸಗಾರರಿಗಿಂತ ಲೂಸಿಗೆ ಹೆಚ್ಚು ಮರ್ಯಾದೆ ಕೊಡುತ್ತೇವೆ. ಆಕೆಯ ಕಾರ್ಯತತ್ಪರತೆ, ಸ್ವಾಭಿಮಾನ ಮತ್ತು ಸದಾ ಪ್ರಸನ್ನತೆಯನ್ನು ಎಲ್ಲರೂ ಮೆಚ್ಚುತ್ತಾರೆ. ಆಕೆಯ ಇಂಗ್ಲೀಷು ನಮ್ಮ ಎಷ್ಟೋ ಶಿಕ್ಷಕರಿಗಿಂತ ಚೆನ್ನಾಗಿದೆ. ಲೂಸಿ ನಮ್ಮೆಲ್ಲರಿಗೂ ಅಚ್ಚುಮೆಚ್ಚು. ನಾನು ಅಲ್ಲಿಂದ ಹೊರಡುವ ಮುನ್ನ ಲೂಸಿ ಬಂದು ಕೈ ಕುಲುಕಿ ‘ಸರ್, ನನ್ನ ಮಗಳು ನಿಮ್ಮನ್ನು ತುಂಬಾ ಮೆಚ್ಚಿಕೊಂಡಿದ್ದಾಳೆ. ಆಕೆಗೆ ಈಗ ತುಂಬ ಆತ್ಮಶ್ವಾಸ ಬಂದಿದೆಯಂತೆ’ ಎಂದಳು.ಆಗ ನಾನು ಲೂಸಿಗೆ ಹೇಳಿದೆ, ‘ನಾನು ಇಲ್ಲಿ ಶಿಕ್ಷಕರಿಗೆ ಆತ್ಮಗೌರವ, ಆತ್ಮವಿಶ್ವಾಸ, ಕಾರ್ಯತತ್ಪರತೆ, ಸಮಯಪಾಲನೆ, ವೃತ್ತಿಯಲ್ಲಿಯ ಘನತೆ ಇವುಗಳನ್ನು ತಿಳಿಸಲು ಬಂದಿದ್ದೆ. ಆದರೆ ನಿಜವಾಗಿಯೂ ಹೇಳುತ್ತೇನೆ, ಅವುಗಳನ್ನು ನಾನು ನಿಮ್ಮಿಂದ ಕಲಿತೆ. ನಿಮ್ಮ ಮಗಳಿಗೆ ನಾನು ಹೊಸದೇನೂ ಹೇಳಲಿಲ್ಲ, ನಿನ್ನ ಅಮ್ಮನಿಂದ ಕಲಿ ಎಂದು ಹೇಳಿದೆ’. ವೃತ್ತಿಯಲ್ಲಿ ಘನತೆಯನ್ನು ತೋರಲು ಉನ್ನತ ಹುದ್ದೆಯೇ ಆಗಬೇಕಿಲ್ಲ. ಎಂಥ ಸಣ್ಣ ಕೆಲಸದಲ್ಲೂ ಅತ್ಯುನ್ನತ ಘನತೆಯನ್ನು ಸಾಧಿಸಬಹುದೆಂಬುದನ್ನು ಲೂಸಿಯಿಂದ ಕಲಿತೆ. ಆಕೆಗೆ, ಆಕೆಯಂಥವರಿಗೆ ನನ್ನ ಪ್ರಣಾಮಗಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.