ಭಾನುವಾರ, ಜೂಲೈ 12, 2020
28 °C

ಸಂಪನ್ಮೂಲ ನಾಶ: ಉಪೇಕ್ಷೆ ಸರಿಯಲ್ಲ

ಡಾ. ಚಂದ್ರಶೇಖರ್ ಹರಿಹರನ್ Updated:

ಅಕ್ಷರ ಗಾತ್ರ : | |

ಸಂಪನ್ಮೂಲ ನಾಶ: ಉಪೇಕ್ಷೆ ಸರಿಯಲ್ಲ

ಗರಗಳು ಇಂದು ಸಿಕ್ಕಿದ್ದೆಲ್ಲವನ್ನೂ ಸ್ವಾಹಾ ಮಾಡುತ್ತಿವೆ. ಇದೇ ಪರಿಸ್ಥಿತಿ ಮುಂದುವರಿಯಲು ಬಿಡಬೇಕೇ? ಕಟ್ಟಡ ನಿರ್ಮಾಣ ಉದ್ಯಮ ಈ ಚರ್ಚೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಇದರತ್ತ ವಿಶೇಷ ಗಮನ ಹರಿಸುವ ಕಾಲ ಸನ್ನಿಹಿತವಾಗಿದೆ.

ಮೈಲಾಪುರದಿಂದ ಕೇವಲ ಮೂರು ಕಿಲೋಮೀಟರ್ ದೂರದ ಹೋಟೆಲ್‌ನಲ್ಲಿ ನಾವೆಲ್ಲ ಸೇರಿದ್ದೆವು. ಮೂರು ಸಾವಿರ ವರ್ಷಗಳ ಹಿಂದೆಯೇ ಮೆರೆದ ನಗರ ಮೈಲಾಪುರ. ಎರಡು ಸಾವಿರ ವರ್ಷಗಳ ಮೊದಲೇ ಅಲ್ಲಿನ ನೈರ್ಮಲ್ಯ ವ್ಯವಸ್ಥೆ ಅತ್ಯುತ್ತಮ ಆಗಿತ್ತು ಎನ್ನುವುದರ ಬಗ್ಗೆ ಇತಿಹಾಸ ಬೆಳಕು ಚೆಲ್ಲುತ್ತದೆ. ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಈ ನಗರ ಒಂದು ಸಾವಿರ ವರ್ಷಗಳ ಮೊದಲೇ ತಿಳಿಸಿತ್ತು. ಇಲ್ಲಿನ ನಗರ ಯೋಜನೆಯ ಆಧಾರದಲ್ಲಿ 1863ರಲ್ಲಿ ಮದ್ರಾಸ್ ನಗರ ಯೋಜನೆ ರೂಪಿಸಲಾಗಿತ್ತು.

ನಾವು ಸೇರಿದ್ದ ಈ ಸಭೆಯನ್ನು ಭಾರತೀಯ ಕೈಗಾರಿಕ ಒಕ್ಕೂಟ (ಸಿಐಐ) ಮತ್ತು ದಕ್ಷಿಣ ಭಾರತದ ಕಟ್ಟಡ ನಿರ್ಮಾಣಗಾರರ ಸಂಘಗಳು ಸಂಘಟಿಸಿದ್ದವು. ಇತರ ಎಲ್ಲ ಸಭೆಗಳಂತೆ ಇಲ್ಲೂ ಪರಿಸರ ಪೂರಕ ಕಟ್ಟಡಗಳು ಮತ್ತು ಸುಸ್ಥಿರ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ನಗರಗಳು ಇಂದು ಭಾರಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿವೆ. ಕಟ್ಟಡ ನಿರ್ಮಾಣ ಕಾರ್ಯಗಳು ಅವ್ಯಾಹತವಾಗಿ ನಡೆಯುತ್ತಿವೆ. ಇದೇ ವೇಳೆ ಅತಿಯಾದ ಕಬ್ಬಿಣದ ಅದಿರಿನ ಗಣಿಗಾರಿಕೆಯಿಂದ ನದಿಗಳು, ಅರಣ್ಯಗಳ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ, ಕೃಷಿ ಭೂಮಿ ನಾಶವಾಗುತ್ತಿದೆ ಎಂಬ ಕೂಗೂ ಕೇಳಿಸುತ್ತಿದೆ.

ಈ ಪರಿಸ್ಥಿತಿ ಇಂದು ಒಂದೆರಡು ನಗರಗಳಿಗೆ ಸೀಮಿತವಾಗಿ ಉಳಿದಿಲ್ಲ. ಸೂರತ್, ರಾಜಕೋಟ್, ಕೊಯಿಮತ್ತೂರುಗಳಂತಹ ನಗರಗಳಲ್ಲಿ ಮುಂದಿನ 20 ವರ್ಷಗಳಲ್ಲಿ ಜನಸಂಖ್ಯೆ ಪ್ರಮಾಣ ಈಗಿನ 10 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಲಿದೆ. ನಗರ ವ್ಯಾಪ್ತಿಯೂ ವಿಸ್ತರಿಸುತ್ತಿದೆ. ಈ ನಗರಗಳೆಲ್ಲ 20 ವರ್ಷಗಳ ಹಿಂದೆ ಈಗಿನ ಗಾತ್ರದ ಕೇವಲ ಮೂರನೇ ಒಂದರಷ್ಟು ಗಾತ್ರಕ್ಕಿದ್ದವು ಎಂಬುದನ್ನು ನೆನಪಿನಲ್ಲಿಡಿ. ಜನಸಂಖ್ಯಾ ಪ್ರಮಾಣ ತೀವ್ರವಾಗಿ ಹೆಚ್ಚಿದಂತೆ ಮೂಲಸೌಕರ್ಯ ಸಮಸ್ಯೆ ಕಾಡುತ್ತದೆ. ಈ ನಗರಗಳಲ್ಲಿರುವ 70 ವರ್ಷಗಳಷ್ಟು ಹಳೆಯದಾದ ನೀರು, ಒಳಚರಂಡಿ ಪೈಪುಗಳು ಅತಿಯಾದ ಒತ್ತಡದಿಂದ ಅಲ್ಲಲ್ಲಿ ಸಿಡಿಯತೊಡಗಿವೆ. ಇದೇ ಸ್ಥಿತಿಯಲ್ಲಿ ನಾವು ಇನ್ನಷ್ಟು ಕಟ್ಟಡಗಳನ್ನು ನಿರ್ಮಿಸುತ್ತ ಹೋದರೆ ಅದರಿಂದ ನಿರ್ಮಾಣವಾಗುವ ತ್ಯಾಜ್ಯವನ್ನು ನಿಭಾಯಿಸಲು ಸರ್ಕಾರಕ್ಕೆ ಮಾತ್ರವಲ್ಲ ಯಾರಿಂದಲೂ ಸಾಧ್ಯವಿಲ್ಲ.

ಹಳೆಯದುದರಿಂದ ಪರಿಹಾರ ಕಂಡುಕೊಳ್ಳೋಣ. ಮನುಷ್ಯ ಕಳೆದ 500 ವರ್ಷಗಳಿಂದೀಚೆಗೆ ಹೇಗೆ ಬದುಕಿದ್ದಾನೆ ಎಂಬುದನ್ನು ನೋಡಿಕೊಂಡು ಸದ್ಯದ ಸಮಸ್ಯೆಗಳಿಗೆ ಕ್ರಾಂತಿಕಾರಕ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಅಂದರೆ ಸರ್ಕಾರದ ಪರಿಹಾರ ಸೂತ್ರಕ್ಕಿಂತಲೂ ಸ್ಥಳೀಯವಾಗಿ ಮತ್ತು ಸ್ವಂತವಾಗಿ ನಿರ್ವಹಿಸಬಹುದಾದಂತಹ ಬೇಡಿಕೆಗಳೊಂದಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ದೂರದ ಸ್ಥಳಗಳಿಗೆ ವಸ್ತುಗಳನ್ನು ಸಾಗಿಸದೆ ಸ್ಥಳೀಯವಾಗಿಯೇ ಲಭ್ಯ ಇರುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ಉತ್ಪಾದನೆ ಮತ್ತು ಅನುಭೋಗಿಸುವ ಕಾರ್ಯ ನಡೆಯಬೇಕಿದೆ.

ಕಳೆದ ನೂರು ವರ್ಷಗಳಿಂದೀಚೆಗೆ ನಮ್ಮ ಎಂಜಿನಿಯರ್‌ಗಳು ಸೇತುವೆಗಳು, ಅಣೆಕಟ್ಟೆಗಳು, ಕಚೇರಿಗಳು, ಕಟ್ಟಡ ಸಮುಚ್ಚಯಗಳು, ಮನೆಗಳು, ಕಾಲೋನಿಗಳನ್ನು ನಿರ್ಮಿಸುತ್ತ ಬಂದಿದ್ದಾರೆ. ಅವರು ಅನುಸರಿಸುತ್ತಿರುವ ವಿಧಾನದಲ್ಲಿ ಯಾವುದೇ ತಪ್ಪೂ ಇಲ್ಲ. ಅವರ ಕಾಮಗಾರಿಗಳಲ್ಲಿ ಉಕ್ಕು ಮತ್ತು ಸಿಮೆಂಟ್ ಅವಿಭಾಜ್ಯ ಅಂಗಗಳು. ಆದರೆ ಖನಿಜ ಸಂಪನ್ಮೂಲಗಳ ಅತಿಯಾದ ಬಳಕೆಯಿಂದ ಇಡೀ ಭೂಮಿಯೇ ನಲುಗತೊಡಗಿದೆ.1980ರ ದಶಕದಲ್ಲಿ ನಮಗೆ ಈ ಸಮಸ್ಯೆಯ ಬಗ್ಗೆ ಮೊದಲಾಗಿ ಅರಿವಾಯಿತು. 2000ನೇ ಇಸವಿಯ ಹೊತ್ತಿಗೆ ಜಗತ್ತು ನಿಜವಾಗಿಯೂ ಇಂಗಾಲದಿಂದ ಉಂಟಾಗುವ ಮಾಲಿನ್ಯದ ನೇರ ದುಷ್ಪರಿಣಾಮಕ್ಕೆ ಒಳಗಾಗುತ್ತಿರುವುದು ಸ್ಪಷ್ಟವಾಗಿತ್ತು. ಈಗಲೇ ನಾವು ಇದರ ಬಗ್ಗೆ ಎಚ್ಚರ ವಹಿಸದಿದ್ದರೆ ಇನ್ನೊಂದು ಶತಮಾನದಲ್ಲಿ ನಾವೆಲ್ಲ ನಾಶವಾಗಿ ಬಿಡುವ ಅಪಾಯ ಇದೆ.

ಜಗತ್ತಿನಲ್ಲಿ ಇಂದು ಕಟ್ಟಡ ನಿರ್ಮಾಣ ಉದ್ಯಮ ಬಹಳ ದೊಡ್ಡ ಉದ್ಯಮವಾಗಿ ಹೊರಹೊಮ್ಮಿದೆ. ಇದೊಂದು ಬಹಳ ದೊಡ್ಡ ಅಸಂಘಟಿತ ಉದ್ಯಮವೂ ಹೌದು. ಭೂಮಿಯಲ್ಲಿ ಉತ್ಪಾದನೆಯಾದ ಸರಿಸುಮಾರು ಶೇಕಡಾ 50ರಷ್ಟು ಇಂಧನ ಇಂದು ನಮ್ಮ ಕಟ್ಟಡಗಳಿಗಾಗಿ ವಿನಿಯೋಗವಾಗುತ್ತಿದೆ.ಉಕ್ಕು, ಕಾಂಕ್ರೀಟ್, ಇಟ್ಟಿಗೆ, ಬ್ಲಾಕ್, ಗ್ಲಾಸ್, ಫ್ಲೋರ್, ಪೇಂಟ್, ಗ್ರಿಲ್, ಟ್ಯಾಂಕ್... ಪ್ರತಿಯೊಂದಕ್ಕೂ ಅದೆಷ್ಟೋ ಪ್ರಮಾಣದಲ್ಲಿ ಇಂಧನ ಬಳಕೆಯಾಗಿರುತ್ತದೆ. ಹವಾನಿಯಂತ್ರಿತ ವ್ಯವಸ್ಥೆ, ದೀಪ, ನೀರು, ಅಡುಗೆ ಅನಿಲ ಸಹಿತ ವಿವಿಧ ಸೌಲಭ್ಯಗಳಿಗೆ ಮತ್ತೂ ಶೇ 8ರಷ್ಟು ಇಂಧನ ಬೇಕಾಗುತ್ತದೆ.

ಅದಕ್ಕಾಗಿಯೇ ಪರಿಸರ ಪೂರಕ ಕಟ್ಟಡಗಳ ಬಗ್ಗೆ ಇಂದು ಹೆಚ್ಚಿನ ಕಾಳಜಿ ವ್ಯಕ್ತಪಡಿಸಲಾಗುತ್ತಿದೆ. ಹಳೆಯ ನಿರ್ಮಾಣ ಕಾರ್ಯಗಳಿಗೆ ತೀರಾ ಭಿನ್ನವಾಗಿ ಇಂದು ಇವುಗಳನ್ನು ನಿರ್ಮಿಸಬೇಕಿರುವ ಅಗತ್ಯವನ್ನು ಕಾಲವೇ ನಮಗೆ ತಿಳಿಸಿಕೊಟ್ಟಿದೆ. ನಾವು ಬಳಸುವ ಪ್ರತಿಯೊಂದು ವಸ್ತುವಿನ ಬಗ್ಗೆಯೂ ಸೂಕ್ಷ್ಮವಾಗಿ ಗಮನಿಸಬೇಕಾದ ಕಾಲ ಎದುರಾಗಿದೆ. ಇಂದು   ಇಂತಹ ಕ್ರಮಗಳ ಬಗ್ಗೆಯೇ ಕಟ್ಟಡ ವಿನ್ಯಾಸಕಾರರು, ಎಂಜಿನಿಯರ್‌ಗಳು, ಗುತ್ತಿಗೆದಾರರು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ನೀವು ಕಟ್ಟಡವೊಂದರ ವಿನ್ಯಾಸವನ್ನು ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಮಾಡುತ್ತಿರುವಾಗ ಸ್ವಲ್ಪ ವಾಸ್ತವದ ಕಡೆಗೂ ಗಮನ ಹರಿಸಿ. ಪ್ರತಿ ಒಂದು ಲಕ್ಷ ಚದರ ಅಡಿಯ ಬಹು ಉದ್ದೇಶಿತ ಕಟ್ಟಡ ನಿರ್ಮಾಣಕ್ಕೆ ನೀವು 4 ಸಾವಿರ ಕ್ಯೂಬಿಕ್ ಮೀಟರ್ ಕಾಂಕ್ರೀಟ್, 400 ಟನ್ ಉಕ್ಕು, 2 ಸಾವಿರ ಟನ್ ನದಿ ಪಾತ್ರದ ಮರಳು ಬಳಕೆಯಾಗಿರುತ್ತದೆ. ನೀವು ಇದರ ಬಗ್ಗೆ ನಿಮ್ಮ ಗ್ರಾಹಕರಿಗೆ ವಿಷಯ ತಿಳಿಸಿ ಹೇಳಿದರಷ್ಟೇ ಇನ್ನು ಸಾಕಾಗುವುದಿಲ್ಲ. ಬದಲಿಗೆ ಪರ್ಯಾಯಗಳನ್ನು ಅವರಿಗೆ ತಿಳಿಸಿ ಅದನ್ನು ಅವರು ಬಳಸಿಕೊಳ್ಳುವಂತೆ ಮಾಡುವ ಭಾರಿ ದೊಡ್ಡ ಹೊಣೆಗಾರಿಕೆ ನಿಮ್ಮ ಮೇಲಿದೆ.ಹವಾನಿಯಂತ್ರಣ ವ್ಯವಸ್ಥೆ, ವಿದ್ಯುತ್ ಬಳಕೆ ಮಾಡುವಾಗಲೂ ಒಂದೊಂದು ಯೂನಿಟ್‌ಗೂ ನೀವು ಒಂದೊಂದು ಕಾರ್ಬನ್ ಕೆ.ಜಿ.ಗೆ ಸಮಾನವಾದ ಮಾಲಿನ್ಯವನ್ನು ಪರಿಸರಕ್ಕೆ ಬಿಟ್ಟಂತಹ ಅಪರಾಧ ಭಾವ ನಿಮ್ಮ ಮೇಲೆ ಬರುತ್ತದೆ.

ಹಾಗಿದ್ದರೆ ಪರಿಸರ ಪೂರಕ ಕಟ್ಟಡಗಳನ್ನು ನಿರ್ಮಿಸಿದರೆ ನಾವು ಕಾರ್ಬನ್ ಕ್ರೆಡಿಟ್‌ಗೆ ಅರ್ಜಿ ಸಲ್ಲಿಸಬಹುದೇ? ಅದರಿಂದ ನಮಗೇನಾದರೂ ಲಾಭ ಉಂಟೇ ಎಂದು ಹಲವರು ಪ್ರಶ್ನಿಸುತ್ತಾರೆ. ಉದ್ಯಮವೊಂದು ಪ್ರತಿ ದಿನ ಹೊರಸೂಸುವ ಮಾಲಿನ್ಯಕ್ಕೆ ಹೋಲಿಸಿದರೆ ಒಂದು ಮನೆ, ಕಟ್ಟಡದಿಂದ ಹೊರಸೂಸುವ ಕಾರ್ಬನ್ ಕ್ರೆಡಿಟ್‌ನ ಪ್ರಮಾಣ ತೀರಾ ಚಿಕ್ಕದು ನಿಜ. ಹೀಗೆ ಸಣ್ಣ ಪ್ರಮಾಣದಲ್ಲಿ ಮಾಲಿನ್ಯ ತಡೆಗಟ್ಟಿದ್ದಕ್ಕೆ ಪ್ರತಿಯಾಗಿ ದುಡ್ಡು ಸಿಗಲಾರದು ಎಂಬುದೂ ನಿಜ. ಆದರೆ, ಪರಿಸರ ಪೂರಕ ಕಟ್ಟಡ ಇರುವುದು ಜಗತ್ತನ್ನು ಉಳಿಸುವುದಕ್ಕಿಂತಲೂ ಮಿಗಿಲಾಗಿ ನಿಮ್ಮನ್ನು ಉಳಿಸಲು ಎಂಬ ಭಾವನೆ ಮನದಲ್ಲಿ ಮೂಡಬೇಕು. ಮುಂದಿನ 300 ವರ್ಷಗಳು ಹಾಗೂ ಅದಕ್ಕಿಂತಲೂ ಮುಂದೆ ಈ ಜಗತ್ತಿನಲ್ಲಿ ನಮ್ಮ ಪೀಳಿಗೆಯವರು ಬದುಕಿ ಬಾಳಬೇಕು ಎಂಬ ಕಲ್ಪನೆಯೊಂದಿಗೆ ನಾವು ಈ ಕೆಲಸವನ್ನು ಮಾಡಲೇಬೇಕು.

ಅದಿಲ್ಲವಾದರೆ ಐಷಾರಾಮದ ಮದ ಹತ್ತಿಸಿಕೊಂಡ ಕೆಲವೇ ಸಂಖ್ಯೆಯಲ್ಲಿರುವ ಶ್ರೀಮಂತರು ಇಡೀ ಜಗತ್ತನ್ನು ವಿನಾಶದ ಅಂಚಿಗೆ ಕೊಂಡೊಯ್ಯುವ ಅಪಾಯ ಇದೆ. ಕಳೆದ ನಾಲ್ಕು ಸಾವಿರ ವರ್ಷಗಳಲ್ಲಿ ಆರು ನಾಗರಿಕತೆಗಳು ಉಪೇಕ್ಷೆಗೆ ಒಳಗಾದುದು ಇಂತಹದೇ ಕಾರಣದಿಂದ ಎಂಬುದನ್ನು ಮರೆಯಬಾರದು.

ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲೇ ದೀರ್ಘಾವಧಿಯ ಸುಸ್ಥಿರ ನಿರ್ಮಾಣ ಕಾರ್ಯಗಳತ್ತ ಎಂಜಿನಿಯರ್‌ಗಳು ಮತ್ತು ವಿನ್ಯಾಸಕಾರರು ಇದೀಗ ಗಂಭೀರ ಚಿಂತನೆ ನಡೆಸಬೇಕಿದೆ. ಇದಕ್ಕಾಗಿ ನೀರು, ಇಂಧನ ಮತ್ತು ತ್ಯಾಜ್ಯದ ಕೆಲವು ಪ್ರಾಥಮಿಕ ತತ್ವಗಳನ್ನು ಅರಿತುಕೊಳ್ಳಬೇಕು. ಲಭ್ಯ ಇರುವ ವಸ್ತುಗಳ ‘ಬಳಕೆ’, ‘ಸದ್ಬಳಕೆ’ ಮತ್ತು ‘ದುರ್ಬಳಕೆ’ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು.

ಇಂದು ಅಗ್ಗದ ದರದಲ್ಲಿ, ದಕ್ಷ ಮತ್ತು ಉತ್ತಮ ರೀತಿಯಿಂದ ಕಟ್ಟಡ ನಿರ್ಮಿಸಿಕೊಡುವುದಕ್ಕೆ ಹಲವಾರು ಮಾರ್ಗಗಳಿವೆ. ನೀರನ್ನೇ ಮರುಬಳಕೆ ಮಾಡಿ ಸ್ವಚ್ಛ ನೀರಿನ ಬಳಕೆಯನ್ನು ಶೇ 70ರಷ್ಟು ಉಳಿಸುವುದು ಸಾಧ್ಯವಿದೆ.ಜತೆಗೆ ಇತರ ಎಲ್ಲಾ ವಿಚಾರಗಳಲ್ಲೂ ನೀವು ಇಂತಹದೇ ಉಳಿತಾಯ ಮಾಡುತ್ತ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಕಟ್ಟಡ ನಿರ್ಮಾಣ ಮಾಡುವುದು ಸಾಧ್ಯವಿದೆ. ಅಗತ್ಯವಾಗಿ ಬೇಕಾಗಿರುವ ಒಂದು ಸೌಲಭ್ಯ ಅಥವಾ ವಿಷಯದ ಪೂರೈಕೆ ಕಡೆಯತ್ತ ನಿಮ್ಮ ಗಮನ ಇರಬೇಕೇ ಹೊರತು ಬೇಡಿಕೆಯತ್ತ ಅಲ್ಲ.  ನಮ್ಮ ಎಂಜಿನಿಯರ್‌ಗಳು ಮುಖ್ಯವಾಗಿ ಹಾದಿ ತಪ್ಪುತ್ತಿದ್ದುದು ಇಲ್ಲೇ. ಈ ತಪ್ಪನ್ನು ಇನ್ನೂ ಮಾಡುತ್ತಿರಬೇಕೇ?      

(ಲೇಖಕರನ್ನು 56767 ಸಂಖ್ಯೆಗೆ ZED ಎಂದು ಎಸ್‌ಎಂಎಸ್ ಮಾಡುವ ಮೂಲಕ ಇಲ್ಲವೇ 99010 54321 ಕರೆ ಮಾಡಿ ಸಂಪರ್ಕಿಸಬಹುದು)

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.