ಅವನೊಬ್ಬ ದುರಹಂಕಾರಿ ರಾಜ. ಅವನಿಗೆ ಯಾವುದಾದರೂ ವಿಷಯ ಒಂದು ಚೂರು ತಿಳಿದರೂ ಸಾಕು, ರಾಜ್ಯದಲ್ಲೆಲ್ಲ ಸಾರಿಕೊಂಡು ಬರುತ್ತಿದ್ದ. ಅಷ್ಟೇ ಆದರೆ ಒಳ್ಳೆಯದಿತ್ತು. ಆತ ತನ್ನ ರಾಜ್ಯದಲ್ಲಿ ಇರುವವರೆಲ್ಲ ಮೂರ್ಖರು, ತಾನೊಬ್ಬನೇ ಬುದ್ಧಿವಂತ ಎನ್ನುವಂತೆ ನಡೆದುಕೊಳ್ಳುತ್ತಿದ್ದ.

ಯಾರ ಹತ್ತಿರವೋ ಒಂದಿಷ್ಟು ವಿಷಯ ಕೇಳಿಕೊಂಡು ಅವುಗಳನ್ನೇ ವಿಚಿತ್ರ ಪ್ರಶ್ನೆಗಳನ್ನಾಗಿ ಮಾಡಿಕೊಂಡು ಜನರಿಗೆ ಕೇಳಿ ಕಾಡುತ್ತಿದ್ದ. ಉತ್ತರ ಹೇಳಲಾಗದಿದ್ದರೆ ಶಿಕ್ಷಿಸುತ್ತಿದ್ದ. ಒಂದು ಬಾರಿ ಆತ ನಗರದಲ್ಲಿ ಡಂಗುರ ಸಾರಿಸಿದ. ‘ಮಹಾರಾಜರ ಹತ್ತಿರ ಎರಡು ಅತ್ಯಮೂಲ್ಯವಾದ ಪ್ರಶ್ನೆಗಳಿವೆ. ಅವುಗಳಿಗೆ ಯಾರಾದರೂ ಸರಿಯಾಗಿ ಉತ್ತರಿಸಿದರೆ ಭಾರಿ ಬಹುಮಾನ ಕೊಡುತ್ತಾರೆ, ಅಷ್ಟೇ ಅಲ್ಲ ತಮ್ಮ ಒಬ್ಬಳೇ ಮಗಳನ್ನು ಮದುವೆ ಮಾಡಿಕೊಡುತ್ತಾರೆ.

ಅವನೇ ಮುಂದಿನ ರಾಜನಾಗುತ್ತಾನೆ. ಆದರೆ, ಯಾರಾದರೂ ಉತ್ತರಿಸಲು ಮುಂದೆ ಬಂದು ಯಾವುದೇ ಒಂದು ಪ್ರಶ್ನೆಗೆ ಸರಿಯಾಗಿ ಉತ್ತರ ನೀಡದಿದ್ದರೆ ತಲೆ ಕಳೆದುಕೊಳ್ಳಬೇಕಾಗುತ್ತದೆ. ಎಚ್ಚರ’. ಜನ ಗಾಬರಿಯಾದರು. ಮೊದಲೇ ಹುಚ್ಚ ರಾಜ ಮತ್ತು ಅವನ ಹುಚ್ಚ ಪ್ರಶ್ನೆಗಳು! ಅವನಿಂದ ತಪ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ರಾಜನ ಅಪ್ಪಣೆಯಂತೆ ಜನರೆಲ್ಲ ತಿಳಿಸಿದ ದಿನ ಅವನ ಮನೆಯ ಮುಂದಿದ್ದ ಎತ್ತರ ಪ್ರದೇಶದಲ್ಲಿ ಸೇರಿದರು. ರಾಜ ಸಿಂಹಾಸನದ ಮೇಲೆ ಕುಳಿತುಕೊಂಡ. ತನ್ನ ಎರಡು ಪ್ರಶ್ನೆಗಳನ್ನು ಅವರ ಮುಂದಿಟ್ಟ.

ಅವುಗಳನ್ನು ಉತ್ತರಿಸಲಾಗದೇ ಅಥವಾ ಉತ್ತರ ನೀಡಲಿಚ್ಛಿಸದೇ ಜನ ಸುಮ್ಮನೆ ಕುಳಿತರು. ಆತ ಎಲ್ಲರನ್ನೂ ಹೀಯಾಳಿಸಿ ಬಯ್ಯತೊಡಗಿದ. ಇದನ್ನೆಲ್ಲ ದೂರ ನಿಂತು ನೋಡುತ್ತಿದ್ದ ದನಕಾಯುವ ಗುಂಡಣ್ಣ ತಡೆಯಲಾರದೆ ಮುಂದೆ ಬಂದು ತಾನು ಉತ್ತರಿಸುವುದಾಗಿ ಘೋಷಿಸಿದ. ರಾಜ ವ್ಯಂಗ್ಯವಾಗಿ ನಕ್ಕ.

ಮೊದಲನೇ ಪ್ರಶ್ನೆ ಕೇಳಿದ, ‘ಈಗ ಭಗವಂತ ಏನು ಮಾಡಬಯಸಿದ್ದಾನೆ?’ ಗುಂಡಣ್ಣ ಕ್ಷಣಕಾಲ ಯೋಚಿಸಿ ಹೇಳಿದ, ‘ಪ್ರಭು, ಈ ಪ್ರಶ್ನೆಗೆ ಉತ್ತರಿಸಲು ನೀವು ನಾನು ನಿಂತಲ್ಲಿಗೆ ಬರಬೇಕು ಮತ್ತು ನಾನು ಸಿಂಹಾಸನದ ಬಳಿ ಬರುತ್ತೇನೆ’. ರಾಜನಿಗೆ ಏನೂ ತಿಳಿಯದೆ ‘ಸರಿ’ ಎಂದು ಕೆಳಗೆ ಬಂದ. ಗುಂಡಣ್ಣ ಮೇಲೆ ಹೋಗಿ ಸಿಂಹಾಸನದ ಮೇಲೆ ಕುಳಿತ. ಜನ ಬೆರಗಾಗಿ ನೋಡುತ್ತಿದ್ದರು. ಗುಂಡಣ್ಣ ಹೇಳಿದ, ‘ಇದೇ ಪ್ರಭು ದೇವರು ಮಾಡಬಯಸಿದ್ದು.

ದುರಹಂಕಾರಿ ಮೂರ್ಖ ರಾಜನನ್ನು ಸಿಂಹಾಸನದ ಮೇಲಿಂದ ಕೆಳಗಿಳಿಸಿ, ನನ್ನಂತಹ ಅನಕ್ಷರಸ್ಥ, ಬಡ ಆದರೆ, ಪ್ರಾಮಾಣಿಕ ವ್ಯಕ್ತಿಯನ್ನು ಎರಡೇ ನಿಮಿಷಗಳಲ್ಲಿ ಸಿಂಹಾಸನದ ಮೇಲೆ ಕುಳ್ಳಿರಿಸಿ ಬಿಟ್ಟ. ಅದೇ ಅವನ ಶಕ್ತಿ’. ಜನ ಹುಚ್ಚೆದ್ದು ಜೈಕಾರ ಹಾಕಿದರು. ತಡಬಡಿಸಿದ ರಾಜ ಎರಡನೇ ಪ್ರಶ್ನೆ ಕೇಳಿದ, ‘ನಿನ್ನ ದೇವರು ಈ ಕ್ಷಣದಲ್ಲಿ ಯಾವ ಕಡೆಗೆ ನೋಡುತ್ತಿದ್ದಾನೆ?’ ಗುಂಡಣ್ಣ ಕೇಳಿ ಒಂದು ಮೇಣದಬತ್ತಿ ತರಿಸಿದ.

ಅದಕ್ಕೆ ಕಿಡಿ ಹಚ್ಚಿ ಬೆಳಗಿಸಿದ. ನಂತರ ರಾಜನಿಗೆ ಕೇಳಿದ, ‘ಈಗ ಮೇಣಬತ್ತಿಯ ಬೆಳಕು ಯಾವ ದಿಕ್ಕಿನಲ್ಲಿ ಹೋಗುತ್ತಿದೆ?’ ರಾಜ, ‘ಎಲ್ಲ ದಿಕ್ಕಿಗೂ ಬೆಳಕು ಹರಡುತ್ತಿದೆ’ ಎಂದಾಗ ಗುಂಡಣ್ಣ, ‘ಹಾಗೆಯೇ ಪ್ರಭು ಭಗವಂತನ ದೃಷ್ಟಿ ಎಲ್ಲೆಡೆಗೂ ಇದೆ. ಅದರಲ್ಲೂ ದುರಹಂಕಾರಿಗಳ ಕಡೆಗೆ ಹೆಚ್ಚಿದೆ’ ಎಂದ. ರಾಜನ ಕಣ್ಣುಗಳು ನಿಚ್ಚಳವಾದವು. ಗುಂಡಣ್ಣ ರಾಜನ ಅಳಿಯನಾದ, ಮುಂದೆ ತಿಳುವಳಿಕೆಯ ರಾಜನಾದ. ಸಾಮಾನ್ಯ ಜ್ಞಾನ ಬೇರೆ, ಪದವಿ ಪತ್ರಗಳು ಬೇರೆ. ಅತ್ಯಂತ ಪ್ರಾಮಾಣಿಕವಾಗಿ, ನೈಸರ್ಗಿಕವಾಗಿ ಯೋಚಿಸಿದರೆ ತುಂಬ ಕಠಿಣವಾಗಿ ಕಾಣುವ ಸಮಸ್ಯೆಯೂ ಸಲೀಸಾಗಿ ಪರಿಹಾರವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.