ಶುಕ್ರವಾರ, ಜನವರಿ 24, 2020
21 °C

ಹಂಗಿನರಮನೆಯ ಗುಂಗಿನಿಂದ ಪರಿಷತ್ತು ಹೊರಗೆ ಬರುವುದು ಯಾವಾಗ?

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ಇದೆಲ್ಲ ಹೇಗೆ ಶುರುವಾಗುತ್ತದೆ? ಕೀಳರಿಮೆಯಿಂದ ಶುರುವಾಗುತ್ತದೆಯೇ? ಮೇಲರಿಮೆಯಿಂದ ಆಗುತ್ತದೆಯೇ? ಅಕ್ಷರ ಲೋಕದವರಿಗೆ ರಾಜಕಾರಣಿಗಳನ್ನು ಕಂಡರೆ ಅಷ್ಟಕ್ಕಷ್ಟೆ. ರಾಜಕಾರಣಿಗಳಿಗೂ ಅಕ್ಷರ ಲೋಕದವರ ಬಗ್ಗೆ ಅಮರ ಪ್ರೇಮವೇನೂ ಇಲ್ಲ! ಆದರೂ ಪರಸ್ಪರರ ಹೆಗಲ ಮೇಲೆ ಕೈ ಹಾಕಿಕೊಂಡು ಇರಬೇಕು ಎಂದು ಏಕೆ ಬಯಸುತ್ತಾರೆ? ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರಿಗೆ ದೇವರು ದೊಡ್ಡ ಗಂಟಲು ಕೊಟ್ಟಿದ್ದಾನೆ. ಅವರು ಇಡೀ ಕನ್ನಡ ನಾಡಿಗೆ ಕೇಳುವಂತೆ ಮಾತನಾಡುತ್ತಾರೆ.ಕಳೆದ ಭಾನುವಾರ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ರಾಜಕಾರಣಿಗಳನ್ನು ತರಾಟೆಗೆ  ತೆಗೆದುಕೊಳ್ಳುವುದನ್ನೇ ಸಭೆಯಲ್ಲಿ ಇದ್ದ ಎಲ್ಲರೂ ಕಾಯುತ್ತ ಇದ್ದಂತೆ ಇತ್ತು. ಧಿಕ್ಕಾರದ ಘೋಷಣೆಗಳು ಮೊಳಗಿಯೇ ಬಿಟ್ಟುವು. ಆದರೆ, ಏಕೆ? ಮುಖ್ಯಮಂತ್ರಿ ಮತ್ತು ಅವರ ಸಂಪುಟದ ಸದಸ್ಯರು ಸಾಹಿತ್ಯ ಪರಿಷತ್ತಿನ ಎಲ್ಲ ಕಾರ್ಯಕ್ರಮಗಳಿಗೆ ಏಕೆ ಬರಬೇಕು? ಸಿದ್ದರಾಮಯ್ಯ  ಸಂಪುಟದಲ್ಲಿ ಇರುವ ಒಬ್ಬಿಬ್ಬರನ್ನು ಬಿಟ್ಟರೆ ಸಾಹಿತ್ಯ ಪರಿಷತ್ತಿನಲ್ಲಿ ಬಂದು ಯಾವ ಸಚಿವರು ಏನು ಮಾತನಾಡಲು ಸಾಧ್ಯ? ಅವರಲ್ಲಿ ಎಷ್ಟು ಮಂದಿ ಪುಸ್ತಕಗಳನ್ನು ಓದಿದ್ದಾರೆ? ಓದುತ್ತಾರೆ?ಸಾಹಿತ್ಯ, ಹಂಗಿನ ‘ಅರಮನೆ’ಯನ್ನು ಬಿಟ್ಟು ಬಂದು ಶತಮಾನಗಳೇ ಆಗಿವೆ. ಈಗಲೂ ರಾಜಕಾರಣಿಗಳು ತಮ್ಮ ಜತೆ ವೇದಿಕೆ ಹಂಚಿಕೊಳ್ಳಬೇಕು ಎಂದು ಸಾಹಿತಿಗಳು ಏಕೆ ಬಯಸುತ್ತಾರೆ? ಅವರೇ ಬಂದು ಪ್ರಶಸ್ತಿಗಳನ್ನು ಏಕೆ ಕೊಡಬೇಕು? ವಿಚಾರಗೋಷ್ಠಿಗಳನ್ನು ಏಕೆ ಉದ್ಘಾಟಿಸಬೇಕು? ಹಾಗೆ ನೋಡಿದರೆ ಸರ್ಕಾರ ಸಾಹಿತ್ಯ ಪರಿಷತ್ತಿಗೆ ಉದಾರ ದೇಣಿಗೆ ಕೊಡುತ್ತಲಿರುವುದು ತೀರಾ ಈಚಿನ ಹತ್ತು ಹನ್ನೆರಡು ವರ್ಷಗಳ ವಿದ್ಯಮಾನ. ಅದುವರೆಗೆ ಅದು ತನ್ನ ಶಕ್ತಿಯ ಮೇಲೆ ಸರ್ಕಾರ ಕೊಡುವ ಅಲ್ಪಸ್ವಲ್ಪ ಅನುದಾನದ ಮೇಲೆ ಹೇಗೋ ನಡೆದುಕೊಂಡು ಬಂದಿತ್ತು. ಹಾಗೆ ನೋಡಿದರೆ ಆಗಲೇ ಅದು ಸಾಹಿತ್ಯಕವಾಗಿ ಹೆಚ್ಚು ಕ್ರಿಯಾಶೀಲವಾಗಿತ್ತು. ಉಳಿಯುವ ಕೆಲಸಗಳೂ ಆಗಲೇ ನಡೆದುವು. ಆದರೆ, ಒಂದು ಸಾರಿ ಕೋಟಿಗಟ್ಟಲೆ ಅನುದಾನ ಬರಲು ಆರಂಭಿಸುತ್ತಿದ್ದಂತೆಯೇ ಪರಿಷತ್ತು ಪೈಪೋಟಿಯ ಕೇಂದ್ರ ಬಿಂದುವಾಯಿತು. ವರ್ಷಕ್ಕೆ ಒಮ್ಮೆ ಸಾಹಿತ್ಯ ಸಮ್ಮೇಳನ ನಡೆಸುವುದನ್ನು ಬಿಟ್ಟು ಪರಿಷತ್ತಿನಿಂದ ಮತ್ತೆ ಏನು ಕೆಲಸವಾಗಿದೆ?ನಿಜ, ಈಗ ಕನ್ನಡದ ಕೆಲಸ ಬಹುಮುಖವಾಗಿ ನಡೆದಿದೆ. ಅಕಾಡೆಮಿಗಳು ಇವೆ. ಕನ್ನಡ ವಿಶ್ವವಿದ್ಯಾಲಯ ಇದೆ. ರಾಜ್ಯದ ಉದ್ದಗಲಕ್ಕೂ ಇರುವ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳು ಇವೆ. ಎಲ್ಲರೂ ತಮಗೆ ತೋಚಿದ, ಸರಿಕಂಡ ರೀತಿಯಲ್ಲಿ ಕನ್ನಡದ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಕೆಲವು ಸಾರಿ ಪುನರಾವರ್ತನೆಯೂ ಕಂಡು ಬರುತ್ತಿದೆ. ಖಾಸಗಿ ವಲಯದಲ್ಲಿ ಪುಸ್ತಕ ಪ್ರಕಾಶನವೂ ಹಲವು ಮಡಿ ಹೆಚ್ಚಳ ಕಂಡಿದೆ. ಇದರ ಮಧ್ಯೆ ಪರಿಷತ್ತು ಕನ್ನಡದ ಕೆಲಸ ಮಾಡಬೇಕಿದೆ. ಕನ್ನಡದ ಯಾವ ಸಂಸ್ಥೆಗಳಿಗೂ ಇಲ್ಲದ ಪ್ರಾತಿನಿಧಿಕ ಸ್ವರೂಪ ಸಾಹಿತ್ಯ ಪರಿಷತ್ತಿಗೆ ಮಾತ್ರ  ಇದೆ. ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಗುಡುಗಿದರೆ ಯಾರೂ ಕಾಳಜಿ ಮಾಡುವುದಿಲ್ಲ. ಪರಿಷತ್ತಿನ ಅಧ್ಯಕ್ಷರು ಗುಡುಗಿದ ಕೂಡಲೇ ಸರ್ಕಾರ ಹಣ ಬಿಡುಗಡೆ ಮಾಡಿರುವ ಪ್ರಕಟಣೆಯನ್ನು ಪತ್ರಿಕೆಗಳಿಗೆ ಕಳುಹಿಸಿಕೊಡುತ್ತದೆ! ಪರಿಷತ್ತಿಗೆ ಹಣ ಬಿಡುಗಡೆ ಮಾಡುವುದು ಸರ್ಕಾರದ ಕರ್ತವ್ಯ ಎಂದೇ ಭಾವಿಸೋಣ. ಆದರೆ, ರಾಜಕಾರಣಿಗಳು ಎಲ್ಲ ಕಾರ್ಯಕ್ರಮಕ್ಕೆ ಬರಲಿ ಎಂದು ನಾವು ಏಕೆ ಅಪೇಕ್ಷಿಸಬೇಕು? ಈ ರೂಢಿ ಮೊದಲು ಇರಲಿಲ್ಲ. ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿಗಳು ಬರುತ್ತಿದ್ದರು. ಬಂದು  ಯಾರೋ ಬರೆದುಕೊಟ್ಟ ಭಾಷಣ ಓದಿ ಆತುರಾತುರವಾಗಿ ಹೊರಟು ಹೋಗುತ್ತಿದ್ದರು. ಅವರಿಗಿಂತ ಅವರು ಬರುವ ಹೆಲಿಕಾಪ್ಟರ್‌ಗಾಗಿಯೇ ಹೆಚ್ಚು ಜನರು ಕೌತುಕದಿಂದ ಕಾಯುತ್ತಿದ್ದರು! ಅದೆಲ್ಲ ಒಂದು ವಿಧ್ಯುಕ್ತ ಕ್ರಿಯೆ ಎನ್ನುವಂತೆ ಆಗಿತ್ತು. ಯಾರೂ ಅದನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ.ಯಾವಾಗಲೂ ಅಧ್ಯಕ್ಷರೇ ಸಮ್ಮೇಳನದ ಕೇಂದ್ರ ಬಿಂದು ಆಗಿರುತ್ತಿದ್ದರು. ಮುಖ್ಯಮಂತ್ರಿ ಬಂದರೆ ಸಮ್ಮೇಳನಕ್ಕೆ ಲಾಭವೂ ಇಲ್ಲ, ಬರದೇ ಇದ್ದರೆ ನಷ್ಟವೂ ಇಲ್ಲ ಎಂದು ಗೊತ್ತಿದ್ದರೂ ಆ ರೂಢಿಯನ್ನು ಇದುವರೆಗೆ ಮುರಿಯಲು ಆಗಲಿಲ್ಲ. ಹೆಚ್ಚೆಂದರೆ ಉದ್ಘಾಟನೆಗೆ ಬರುವ ಮುಖ್ಯಮಂತ್ರಿ, ಸಮಾರೋಪಕ್ಕೆ ಬಂದಿರಬಹುದು. ವ್ಯತ್ಯಾಸ ಅಷ್ಟು ಮಾತ್ರ.  ಸಾಹಿತ್ಯ ಪರಿಷತ್ತು ಈ ರೂಢಿಯನ್ನು ಮುರಿಯದೇ ಇರುವುದಕ್ಕೆ ಸರ್ಕಾರದ ನೆರವಿನ ಮೇಲೆ ಅದು ಅವಲಂಬಿಸಿದ್ದೇ ಕಾರಣ ಆಗಿರಬಹುದು. ಈ ಶತಮಾನದ ಆರಂಭದವರೆಗೆ ಕೇವಲ ಕೆಲವೇ ಲಕ್ಷಗಳಲ್ಲಿ ಇದ್ದ ಅನುದಾನ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಒಂದು ಕೋಟಿಗೆ ಏರಿದ ಮೇಲೆ ಪರಿಷತ್ತಿನ ಖದರೇ ಬೇರೆ ಆಯಿತು. ಸರ್ಕಾರದ ಮೇಲಿನ ಅವಲಂಬನೆ ಹೆಚ್ಚುತ್ತ ಹೋಯಿತು. ಈಗ ಅದು ಸರ್ಕಾರಕ್ಕೆ ಹೆದರಿಸುವ ಮಟ್ಟಕ್ಕೆ ಏರಿದೆ. ಸರ್ಕಾರದ ಅನುದಾನ ಹೆಚ್ಚುತ್ತ ಹೋದಂತೆ  ಪರಿಷತ್ತಿನ ಸತ್ವವೂ ಕಡಿಮೆ ಆಗುತ್ತ ಹೋಗಿರುವುದು ಕಾಕತಾಳೀಯ ಇರಲಾರದು.ಕರ್ನಾಟಕ ಅನೇಕ ಮುಖ್ಯಮಂತ್ರಿ, ಮಂತ್ರಿಗಳನ್ನು ಕಂಡಿದೆ. ಆದರೆ, ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಎಸ್‌.ಎಂ.ಕೃಷ್ಣ, ಜೆ.ಎಚ್‌.ಪಟೇಲ್‌, ಎಂ.ಪಿ.ಪ್ರಕಾಶ್, ಕೆ.ಎಚ್‌.ಶ್ರೀನಿವಾಸ್‌ ಅವರಂಥ ಕೆಲವರನ್ನು ಬಿಟ್ಟರೆ ಉಳಿದವರೆಲ್ಲ ಸಾಹಿತ್ಯವನ್ನು ಆಸಕ್ತಿಯಿಂದ ಓದಿದವರೂ ಅಲ್ಲ; ಆಳವಾಗಿ ಅಭ್ಯಾಸ ಮಾಡಿದವರೂ ಅಲ್ಲ. ಅರಸು ತುಂಬ ಓದುತ್ತಿದ್ದರು. ಪುಸ್ತಕಗಳ ಬಗ್ಗೆ ಗಂಭೀರವಾಗಿ ಚರ್ಚೆ ಮಾಡಬಲ್ಲ ತಿಳಿವಳಿಕೆ ಅವರಿಗೆ ಇತ್ತು. ಹೆಗಡೆ ಮತ್ತು ಕೃಷ್ಣ ಓದುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ, ಅವರಿಗೆ ಸಾಹಿತಿಗಳ ಜತೆಗೆ ಒಡನಾಡುವ ಸೂಕ್ಷ್ಮತೆ ಇತ್ತು. ಪಟೇಲರು ತುಂಬ ಓದಿದವರು. ಆದರೆ, ಮುಖ್ಯಮಂತ್ರಿ ಆಗುವ ವೇಳೆಗೆ ಓದು ನಿರರ್ಥಕ ಎಂದು ಅವರಿಗೆ ಅನಿಸತೊಡಗಿತ್ತು. ಹಾಗೆ ನೋಡಿದರೆ ಶಾಂತವೇರಿ ಗೋಪಾಲಗೌಡರೇ ಹೆಚ್ಚು ಓದಿದವರು. ಗೋಪಾಲಕೃಷ್ಣ ಅಡಿಗರ ಪದ್ಯಗಳನ್ನು ಯು.ಆರ್. ಅನಂತಮೂರ್ತಿ ಅವರಷ್ಟೇ ಚೆನ್ನಾಗಿ ಅರ್ಥೈಸಬಲ್ಲ ಸಮರ್ಥರು ಅವರಾಗಿದ್ದರು. ಅಂಥವರು ಬಂದು ಸಾಹಿತಿಗಳ ಜತೆಗೆ ವೇದಿಕೆ ಹಂಚಿಕೊಂಡರೆ ಸಾಹಿತಿಗಳಿಗೂ ಗೌರವ, ರಾಜಕಾರಣಿಗಳಿಗೂ ಗೌರವ. ಈಗಿನ ಸಚಿವರಲ್ಲಿ ಅನೇಕರಿಗೆ ರನ್ನ ಮಹಾಕವಿ ಯಾರು ಎಂದು ಗೊತ್ತಿರುವುದಿಲ್ಲ. ವಾಲ್ಮೀಕಿ ಬರೆದ ಕಾವ್ಯ ಯಾವುದು ಎಂದೂ ತಿಳಿದಿರುವುದಿಲ್ಲ. ಅವರು ಬಂದು ಸಾಹಿತ್ಯದ ವೇದಿಕೆಯಲ್ಲಿ ಕುಳಿತರೆ ಯಾರಿಗೆ ಮುಜುಗರ?ಸಾಹಿತ್ಯದಲ್ಲಿ, ಸಂಸ್ಕೃತಿಯಲ್ಲಿ, ಸಂಗೀತದಲ್ಲಿ, ನಾಟಕದಲ್ಲಿ ಆಸಕ್ತಿ ಇರಬೇಕಾದುದು ರಾಜಕಾರಣಿಗಳಿಗೆ ಇರಬೇಕಾದ ಕನಿಷ್ಠ ಗುಣಲಕ್ಷಣ. ಇಪ್ಪತ್ನಾಲ್ಕು ಗಂಟೆ ಕಾಲ ರಾಜಕಾರಣ ಮಾಡುವುದಕ್ಕಿಂತ ರಾಜಕೀಯದ ಮಧ್ಯೆ ಬಿಡುವು ಮಾಡಿಕೊಂಡು ಒಂದಿಷ್ಟು ಪುಸ್ತಕ ಓದುವುದು, ಸಂಗೀತ ಕೇಳುವುದು, ನೃತ್ಯ ನೋಡುವುದು ರಾಜಕಾರಣಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಒಳ್ಳೆಯದು. ಹೆಗಡೆ ಮತ್ತು ಕೃಷ್ಣ ಹೀಗೆ ಬಿಡುವು ಮಾಡಿಕೊಳ್ಳುತ್ತಿದ್ದರು.ಬಂಗಾರಪ್ಪನವರು ಸ್ವತಃ ಒಳ್ಳೆಯ ಹಿಂದುಸ್ತಾನಿ ಗಾಯಕರಾಗಿದ್ದರು. ರಾಜಕೀಯದ ನಡುವೆ ಬಿಡುವು ಮಾಡಿಕೊಂಡು ಬರೆದವರಲ್ಲಿ ರಾಮಮನೋಹರ ಲೋಹಿಯಾ ಬಹಳ ದೊಡ್ಡ ಅಪರೂಪದ ಚಿಂತಕ. ಅವರ ಒಂದು ಪುಸ್ತಕದ ಹೆಸರು ‘ರಾಜಕೀಯದ ಮಧ್ಯೆ ಬಿಡುವು’!  ಕೆ.ವಿ.ಸುಬ್ಬಣ್ಣ ಅದನ್ನು ಅನುವಾದ ಮಾಡಿದ್ದರು. ಲೋಹಿಯಾ ಒಂದು ತಲೆಮಾರನ್ನು ಪ್ರಭಾವಿಸಿದರು. ಅವರಷ್ಟೇ ಪ್ರಭಾವಿ ಲೇಖಕರಾಗಿದ್ದ ಜವಾಹರಲಾಲ್‌ ನೆಹರೂ ವಿರುದ್ಧ ಪ್ರತಿನಾಯಕನಾಗಿ ಬೆಳೆದು ನಿಂತರು. ಲೋಹಿಯಾ, ರಾಜಕಾರಣ ರೂಪಿಸಬಹುದಾದ ಬಹುದೊಡ್ಡ ಅಚ್ಚರಿ. ಅವರು ರಾಜಕಾರಣಿಯೇ? ಸಾಹಿತಿಯೇ? ಬಿಡಿಸಿ ಹೇಳುವುದು ಕಷ್ಟ. ಅವರ ಜತೆಗೆ ಒಡನಾಡಬೇಕು ಎಂದು ಸಾಹಿತಿಗಳು ಬಯಸಿದ್ದರೆ ಅದಕ್ಕೆ ಒಂದು ಅರ್ಥ ಇರುತ್ತಿತ್ತು. ಕೇರಳದ ಮೊದಲ ಮುಖ್ಯಮಂತ್ರಿ ಇ.ಎಂ.ಎಸ್‌ ನಂಬೂದ್ರಿಪಾದ್ ಕೂಡ ಬಹಳ ದೊಡ್ಡ ಲೇಖಕರಾಗಿದ್ದರು. ಮಹಾರಾಷ್ಟ್ರದಲ್ಲಿ, ಶರದ್ ಪವಾರ್‌ ಅವರು ಲೇಖಕರೇನೂ ಅಲ್ಲ. ಆದರೆ, ಸಾಹಿತ್ಯ ಸಮ್ಮೇಳನದಲ್ಲಿ ಯಾವ ಸದ್ದುಗದ್ದಲ ಮಾಡದೇ ಮುಂದೆ ಬಂದು ಕುಳಿತು ಭಾಷಣ ಕೇಳಿ ಹೋಗುವ ಸೌಜನ್ಯವನ್ನು ಅವರು ಬೆಳೆಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ರಾಜಕಾರಣಿಗಳನ್ನು ವೇದಿಕೆ ಮೇಲೆ ಕರೆಯುವುದೇ ಇಲ್ಲ. ಅವರದು ಹಟ ಎಂದರೆ ಹಟ ! ಅಲ್ಲಿನ ಸಾಹಿತ್ಯ ಪರಿಷತ್ತು ಸರ್ಕಾರದ ಹಣದ ಮೇಲೆ ಅವಲಂಬನೆಯೂ ಆಗಿಲ್ಲ. ಜನರು ಕೊಡುವ ವರ್ಗಣಿ ಹಣದ ಮೇಲೆಯೇ  ಸಮ್ಮೇಳನ ನಡೆಯುತ್ತದೆ.ನಮ್ಮ ಪರಿಷತ್ತಿಗೂ ಕೋಟಿಗಟ್ಟಲೆ ಹಣ ಬೇಡ ಅನಿಸುತ್ತದೆ. ನಮ್ಮ ಸಮ್ಮೇಳನಗಳಲ್ಲಿ ಊಟಕ್ಕೆ ಮತ್ತು ಪೆಂಡಾಲಿಗೆ ಮಾಡುವ ಖರ್ಚೇ ಬಹಳ ದೊಡ್ಡದು. ಲೆಕ್ಕ ಸಿಗದ ಅಥವಾ ಇಡಲಾಗದ ಖರ್ಚು ಕೂಡ ಅದೇ. ಸಮ್ಮೇಳನಕ್ಕೆ ಬಂದವರಿಗೆಲ್ಲ ಉಚಿತ ಊಟ ಏಕೆ ಹಾಕಬೇಕು? ಉಚಿತ ಊಟ ಎಲ್ಲಿ ಸಿಗುತ್ತದೆ? ಸಮ್ಮೇಳನಕ್ಕೆ ಬರುವವರೆಲ್ಲ ಬಡವರೇ? ಒಂದು ಊಟಕ್ಕೆ ಕನಿಷ್ಠ 30 ರೂಪಾಯಿ ಕೊಡುವ ಶಕ್ತಿ ಅವರಿಗೆ  ಇರುವುದಿಲ್ಲವೇ? ಇದುವರೆಗೆ ಯಾವ ಸಮ್ಮೇಳನದಲ್ಲಿ ಊಟದ ವ್ಯವಸ್ಥೆ ಯಶಸ್ಸು ಕಂಡಿದೆ? ಅದಕ್ಕಾಗಿಯೇ ಹಾಲಂಬಿಯವರು ಕಳೆದ ವಿಜಾಪುರ ಸಮ್ಮೇಳನದಲ್ಲಿ ಇನ್ನು ಮುಂದೆ ಉಚಿತ ಊಟ ಹಾಕುವುದಿಲ್ಲ ಎಂದಿದ್ದರು. ಈಗ ಮಡಿಕೇರಿಯಲ್ಲಿ ಮತ್ತೆ ಅದೇ ಭೂರಿ  ಭೋಜನದ ಸುದ್ದಿಯೇ ದೊಡ್ಡದಾಗಿದೆ.ಸಾಹಿತ್ಯ ಸಮ್ಮೇಳನಕ್ಕೆ ತನ್ನದೇ ಆದ ಮಹತ್ವ ಇದೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕು ಎನ್ನುವುದು ಎಲ್ಲ ಸಾಹಿತಿಗಳ ಜೀವನದ ಕನಸು, ಆಸೆ. ಇದನ್ನು ಮೀರಿದವರು ಬಹಳ ಕಡಿಮೆ. ಅದು ಕನ್ನಡ ನಾಡು ಕೊಡುವ ಬಹುದೊಡ್ಡ ಗೌರವ ಎಂಬುದು ಅವರ ಭಾವನೆ. ಅದನ್ನು ಕಡಿಮೆ ಮಾಡುವುದು ಬೇಡ. ಅದನ್ನು ಜಾತ್ರೆ ಎಂದು ಕರೆಯುವವರು ಹಾಗೆಯೇ ಕರೆಯಲಿ, ಸಂತೆ ಎನ್ನುವವರು ಹಾಗೆಯೇ ತಿಳಿಯಲಿ. ಸಮ್ಮೇಳನ ಮಾತ್ರ ನಡೆಯುತ್ತ ಇರಲಿ. ಊಟಕ್ಕೆ, ವಸತಿಗೆ ಕನಿಷ್ಠ ದರವನ್ನು ನಿಗದಿ ಮಾಡಿ ಅಷ್ಟು ಹಣ ಕೊಟ್ಟು ಬರುವವರು ಸಮ್ಮೇಳನಕ್ಕೆ ಬರಲಿ ಎಂದು ಪರಿಷತ್ತು ಹೇಳಲಿ. ಈಗ ಕೊಡುವ ಓಓಡಿ ಸೌಲಭ್ಯವನ್ನು ತೆಗೆದು ಹಾಕಿ ಸಮ್ಮೇಳನಕ್ಕೆ ಬರುವವರು ರಜೆ ಹಾಕಿ ಬರಲಿ ಎಂದೂ ಪರಿಷತ್ತು ಹೇಳಲಿ. ಆಗ ನಮ್ಮ ಜನರ ಕನ್ನಡದ ಅಭಿಮಾನ ಎಷ್ಟು ಎಂದು ಗೊತ್ತಾಗುತ್ತದೆ. ಈಗ ಸಾವಿರಗಟ್ಟಲೆ ಬರುವವರು ಆಗ ನೂರುಗಟ್ಟಲೆ ಬರಲಿ. ಹಾಗೆ ಬರುವವರು ನಿಜವಾದ ಸಾಹಿತ್ಯ ಆಸಕ್ತರು ಆಗಿರುತ್ತಾರೆ. ಅಲ್ಲಿ ನಡೆಯುವ ಚರ್ಚೆ ಅರ್ಥಪೂರ್ಣ ಆಗಿರುತ್ತದೆ. ಧಾರವಾಡದ ಸಾಹಿತ್ಯ ಸಂಭ್ರಮದಲ್ಲಿ ಇದನ್ನು ನಾನು ಕಂಡಿದ್ದೇನೆ. ಹೆಗ್ಗೋಡಿನ ಸಂಸ್ಕೃತಿ ಶಿಬಿರದಲ್ಲಿ ಅದನ್ನು ನೋಡಿದ್ದೇನೆ. ಅಲ್ಲಿ ಎರಡೂ ಕಡೆ ರಾಜಕಾರಣಿಗಳು ಇರಲಿಲ್ಲ. ಪರಿಷತ್ತು ರಾಜಕಾರಣಿಗಳ ಹೆಲಿಕಾಪ್ಟರುಗಳು ಮತ್ತು ಕಾರುಗಳು ಎಬ್ಬಿಸುವ ದೂಳಿನ ನಡುವೆ ತನ್ನ ಕಾಂತಿಯನ್ನು ಕಳೆದುಕೊಳ್ಳದಿರಲಿ.

 

ಪ್ರತಿಕ್ರಿಯಿಸಿ (+)