ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮೊನ್ನೆ (ಮಾ.೧೬) ಐದು ಅಡಿ, ಐದು ಅಂಗುಲ ಎತ್ತರವಿದ್ದ ವ್ಯಕ್ತಿ ದಣಿವರಿಯದೆ ಹೇಳಿದ ಮಾತು ಕೆಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದು ನಿಜ.

‘ನೀವು ಬಿಜೆಪಿಗೆ ವೋಟು ಹಾಕಿ ಕಾಂಗ್ರೆಸ್‌ಗೆ ವೋಟು ಹಾಕಿ ಕಡೆಗೆ ಆಳುವ ವ್ಯಕ್ತಿ ಮಾತ್ರ ಅಂಬಾನಿ...’ ಹೀಗೆ ಹೇಳುತ್ತಾ ನರೇಂದ್ರ ಮೋದಿ ಬಗೆಗಿನ ಭ್ರಮೆಯನ್ನು ಕಳಚುತ್ತಾ ಹೋದ ಅರವಿಂದ ಕೇಜ್ರಿವಾಲ್ ಮಾತು ನನಗೆ ಮಹತ್ವದ್ದಾಗಿ ಕಂಡಿತು. ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಪಕ್ಷಗಳ ಬಣ್ಣಗಳೂ ಬಯಲಾಗುತ್ತಿವೆ.

ಹಳೆಯದಾಗಲಿ ಹೊಸದಾಗಲಿ ಪಕ್ಷಗಳಿಗೆ ಹಣ ಎಲ್ಲಿಂದ ಬರುತ್ತದೆಂದು ತಿಳಿಯುವುದು ಅನಿವಾರ್ಯವಾಗಿದೆ. ಭಾರತದ ಬೃಹತ್ ಆಲದ ಮರದಂತೆ ಬೆಳೆದು ನಿಂತ ಎರಡು ಪಕ್ಷಗಳಿಗೆ ಅಂಬಾನಿ ಹೀಗೆ ನೇರವಾಗಿ ನೀರೆರೆಯುತ್ತಾರೆಂದು ಹೇಳುವಾಗ, ಮತ್ತು ಯಾರೇ ಅಧಿಕಾರಕ್ಕೆ ಬಂದರೂ ನಿಜವಾಗಿ ನಮ್ಮನ್ನು ಆಳುವವರು ಬೃಹತ್ ಬಂಡವಾಳಶಾಹಿಗಳು ಎಂದಾಗ ರಾಜಕೀಯ ಪಕ್ಷಗಳ ಬಗೆಗಿದ್ದ ಅಲ್ಪಸ್ವಲ್ಪ ನಂಬಿಕೆಯೂ ಗಾಳಿಗೆ ತೂರಿಹೋಗುತ್ತದೆ. ಆದ್ದರಿಂದಲೇ ಈ ದೇಶದ ಕೈಗಾರಿಕಾ ನೀತಿಯಾಗಲಿ ಕೃಷಿ ನೀತಿಯಾಗಲಿ ನಮ್ಮ ಹಿಡಿತವನ್ನು ಕಳೆದುಕೊಂಡಿದೆ ಎನಿಸುತ್ತದೆ.

ನಾವು ಇಂದು ರಾಜಕೀಯ ಪಕ್ಷಗಳನ್ನು ಕೇಳುವುದಕ್ಕಿಂತ, ಬಂಡವಾಳಶಾಹಿಗಳನ್ನೇ ನಿಮ್ಮ ಜೇಬಿನಲ್ಲಿ ಇರುವ ರಾಜಕಾರಣಿಗಳು ಯಾರು ಎಂದು ಬಹಿರಂಗವಾಗಿ ಕೇಳಬೇಕಾಗಿದೆ. ಈ ದೇಶದಲ್ಲಿ ವಿದೇಶದ ಬಂಡವಾಳವೂ ಹರಿಯ ತೊಡಗಿರುವುದರಿಂದ, ಕಡೆಯ ಪಕ್ಷ ನಮ್ಮ ದೇಶದಲ್ಲೇ ಇರುವ ದುಡ್ಡಿನ ಒಡೆಯರಾದರೂ ಜನರಿಗೆ ಉತ್ತರ ನೀಡಬೇಕಾಗಿದೆ.

ಒಂದು ಕಾಲಕ್ಕೆ ಟಾಟಾ, ಬಿರ್ಲಾ ಅಂತಹ ಬಂಡವಾಳಶಾಹಿ ಕುಟುಂಬಗಳು ರಾಷ್ಟ್ರೀಯ ಹೋರಾಟಕ್ಕೆ ಬೆಂಬಲ ನೀಡಿದ್ದವು. ಕಂಪೆನಿಗಳ ಸ್ಥಾಪನೆಗೆ ಭಾರತದಲ್ಲಿ ನಡೆದ ಸ್ವದೇಶಿ ಹೋರಾಟವೂ ಕಾರಣವಾಗಿತ್ತು. ಹೀಗೆ ನಮ್ಮದೆಂಬ ಆದರ್ಶದಲ್ಲಿ ಕಾಪಿಟ್ಟುಕೊಂಡು-ಬಂದ ಕೈಗಳೇ ಇಂದು ನಮ್ಮನ್ನು ಆಡಿಸುತ್ತವೆ. ಅವರ ಮುಂದೆ ಮಂಡಿಯೂರಿ ಸಾಮಾಜಿಕ ನ್ಯಾಯವನ್ನು ಬೇಡುವುದೂ ಕೋಡುಗಲ್ಲ ಬಸವನಿಗೆ ಅಡ್ಡಬೀಳುವುದೂ ಒಂದೇ ಆಗಿರುತ್ತದೆ.

ನಮ್ಮದೆಂದು ತಿಳಿದಿದ್ದ ಕಂಪೆನಿಗಳು ಈಗ ನಮ್ಮವಾಗಿ ಉಳಿದಿಲ್ಲ, ವಿದೇಶಿ ಬಂಡವಾಳಕ್ಕೆ ಬೆಸೆದ ಬಂದಳಿಕೆಗಳು. ತಮಗೆ ಲಾಭ ತರುವ ವ್ಯವಹಾರಕ್ಕೆ ರಾಜಕೀಯ ಪಕ್ಷಗಳನ್ನು ಬಳಸಿಕೊಳ್ಳುತ್ತಿವೆ. ಈ ಹೊತ್ತಿನಲ್ಲಿ ನಾವು ರಾಜಕಾರಣಿಗಳ ವ್ಯಕ್ತಿತ್ವವನ್ನು ವಿಚಾರಿಸುವ ಜೊತೆಗೆ ಪ್ರತಿ ದೈತ್ಯ ಉದ್ದಿಮೆದಾರನನ್ನೂ ನೀವು ಬೆಂಬಲಿಸುವ ಪಕ್ಷ ಯಾವುದು ಎಂದು ಬಹಿರಂಗವಾಗಿ ಕೇಳಬೇಕಾಗಿದೆ.

ಭಾರತ ಬಹು ಪಕ್ಷಗಳನ್ನು ಹೊಂದಿದ ದೇಶ ಎಂದು ಮಾತ್ರ ಅರ್ಥವಾಗುತ್ತಿತ್ತು. ಅದರೆ ಪ್ರತಿ ಪಕ್ಷವೂ ತನ್ನೊಳಗೆ ಹಲವು ಪಕ್ಷಗಳನ್ನು ಒಳಗೊಂಡಿದೆ. ಕಾಂಗ್ರೆಸ್ ಆಗಲಿ ಬಿಜೆಪಿ ಆಗಲಿ ಹೊರನೋಟಕ್ಕೆ ಒಂದು ಪಕ್ಷವಾಗಿ ಕಂಡರೂ ಅವು ಒಂದು ಪಕ್ಷವಾಗಿ ಉಳಿದಿಲ್ಲ. ಇಲ್ಲಿ ಪಕ್ಷ ಎಂದಾಗ ನಿಲುವು ಎಂಬ ಅರ್ಥವೂ ಬರುತ್ತದೆ.

ನರೇಂದ್ರ ಮೋದಿ ಎಲ್ಲಾ ವೇದಿಕೆಗಳಲ್ಲೂ ಒಂಟಿಯಾಗಿ ನಿಲ್ಲುವುದನ್ನು ನೋಡಿದರೆ, ಬಿಜೆಪಿ ಎಂದರೆ ಕಾಣಲೇಬೇಕಾದ ಹಳೆಯ ಮುಖಗಳು ಒಂದೂ ಕಾಣದೆ ಪಕ್ಷವೇನಾದರೂ ಬದಲಾಗಿದೆಯೇ ಎನಿಸುತ್ತದೆ. ಹಾಗಾದರೆ ಪಕ್ಷದ ಮುಂದಿನ ಆಗುಹೋಗುಗಳಿಗೆಲ್ಲಾ ಮೋದಿ ಅವರನ್ನು ಮಾತ್ರವೇ ಜವಾಬ್ದಾರನನ್ನಾಗಿ ಮಾಡಲಾಗಿದೆಯೆ? ಬಿಜೆಪಿ ಎಂದರೆ ಕಾಣಲೇಬೇಕಾಗಿದ್ದ ಎಲ್.ಕೆ. ಅಡ್ವಾಣಿ, ಸುಷ್ಮಾ ಸ್ವರಾಜ್ ಮುಂತಾದ ಹಿರಿಯ ನಾಯಕರು ಮೋದಿ ನಾಯಕತ್ವದ ಬಿಜೆಪಿಯಲ್ಲಿ ಇಲ್ಲವೆಂದು ತಿಳಿಯಬೇಕೆ? ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ಆಳ್ವಿಕೆಯ ಕಡೆಯ ಹೊತ್ತಿಗೆ ಅದು ಬಿಜೆಪಿ ಎಂಬುದನ್ನೇ ಅದರ ಮಾತೃಸಂಸ್ಥೆಗಳು ನಿರಾಕರಿಸಿದ್ದವು.

ಯಡಿಯೂರಪ್ಪ ವ್ಯಕ್ತಿ ಕೇಂದ್ರಿತವಾಗಿ ನಡೆದುಕೊಳ್ಳ ತೊಡಗಿದಂತೆ ಪಕ್ಷ ಕುಸಿಯಿತು. ವ್ಯಕ್ತಿ ಕೇಂದ್ರಿತವಾದಂತೆ ಪಕ್ಷಗಳು ಒಡೆದು ಹೋಗುತ್ತವೆ ಎನ್ನುವುದಕ್ಕೆ ಇದೂ ಒಂದು ಉದಾಹರಣೆ.

ಇನ್ನು ಕಾಂಗ್ರೆಸ್ ವಿಷಯಕ್ಕೆ ಬಂದರಂತೂ ಅದರ ಸುದೀರ್ಘ ಚರಿತ್ರೆಯೇ ಅದನ್ನು ಕಗ್ಗಂಟಾಗಿಸಿದೆ. ಜಾತ್ಯತೀತ ಪಕ್ಷವಾಗಿ ನೆಹರೂ ಕಾಲಕ್ಕೆ ಹೆಸರು ಮಾಡಿದ್ದು, ಅಯೋಧ್ಯಾ ಘಟನೆ ಹೊತ್ತಿಗೆ ಹಿಂದೂವಾದದ ಮೈಲಿಗೆಗೆ ತುತ್ತಾಯಿತು. ಅದರಿಂದ ಹೊರಬಂದು ಜಾತ್ಯತೀತ ಆಗುವ ನಿರಂತರ ಪ್ರಯತ್ನ ನಡೆದೇ ಇದೆ. ಹಾಗಾದಲ್ಲಿ ಮಾತ್ರವೇ ಅದರ ಸಾಂಪ್ರದಾಯಿಕ ಮತಗಳನ್ನು ಗಟ್ಟಿಯಾಗಿ ಉಳಿಸಿಕೊಳ್ಳಲು ಸಾಧ್ಯ.

ರಾಜೀವ್ ಗಾಂಧಿ ಕಾಲಕ್ಕೆ ಹಳೆ ಬೇರು ಹೊಸ ಚಿಗುರು ಎನ್ನುವಂತೆ ಪಕ್ಷದ ಹಿರಿಯ ನಾಯಕರು ಯುವ ನಾಯಕನನ್ನು ಮೆರೆಸಿದರು. ಸೋನಿಯಾ ಗಾಂಧಿ ನಾಯಕತ್ವದಲ್ಲಿ, ಮನಮೋಹನ್ ಸಿಂಗ್ ಪ್ರಧಾನಿಯಾಗಿ ಪಕ್ಷದೊಳಗಿನ ರಾಜಕೀಯವಾಗಲಿ, ಸೈದ್ಧಾಂತಿಕ ಘರ್ಷಣೆಗಳಾಗಲಿ ಕಾಣದೆ ಪಕ್ಷವನ್ನು ಕಾರ್ಪೊರೇಟ್ ಆಫೀಸ್‌ನಂತೆ ನಡೆಸಲಾಗುತ್ತಿದೆ. ಪ್ರತಿ ರಾಜ್ಯ-ದಲ್ಲೂ ಕಾಂಗ್ರೆಸ್‌ನ ಶೈಲಿ ಬೇರೆಯೇ ಆಗಿದೆ. ಪಕ್ಷದೊಳಗಿನ ಅಭಿಪ್ರಾಯಗಳಲ್ಲಿ ಸೌಹಾರ್ದ ಏರ್ಪಡುವುದಕ್ಕಿಂತ ಪಕ್ಷಗಳ ಸಹಯೋಗದಲ್ಲಿ ಕಾರ್ಯನಡೆಸುತ್ತಾ ಬಂದಿದೆ.

ಇಂದಿನ ಚುನಾವಣೆಯಲ್ಲಿ ಬಿಜೆಪಿಯ ಪೈಪೋಟಿಗೆ ತಾವು ಒಬ್ಬ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ತೋರಿಸಿಕೊಳ್ಳಬೇಕಾದ ಅನಿವಾರ್ಯಕ್ಕೆ ಬಿದ್ದು ರಾಹುಲ್ ಗಾಂಧಿ ಅವರನ್ನು ಪ್ರಚಾರಕ್ಕಿಳಿಸಿದೆ. ಆದರೆ ರಾಹುಲ್ ಗಾಂಧಿ ಕಾಂಗ್ರೆಸ್ ನೇತಾರನೆಂದು ಜನರ ಮನಸ್ಸಿಗೆ ಇಳಿದಂತಿಲ್ಲ. ಪಕ್ಷವೆಂದಾಗ ಹತ್ತಾರು ಜನ ನಾಯಕರು ಅದರ ಜವಾಬ್ದಾರಿಯನ್ನು ಹೊರುತ್ತಾರೆ ಎಂಬುದರಲ್ಲಿ ಹೆಚ್ಚಿನ ನಂಬಿಕೆ ಮೂಡುತ್ತದೆ. ಮನಮೋಹನ್ ಸಿಂಗ್, ಪಿ.ಚಿದಂಬರಂ, ಎ.ಕೆ ಆಂಟನಿ ಇವರೆಲ್ಲಾ ಕಾಂಗ್ರೆಸ್‌ನ ಹಿರಿಯ ನಾಯಕರಲ್ಲವೇ? ಕಡೆಗೆ ಸೋನಿಯಾ ಗಾಂಧಿಯೂ ಕಾಣಬಾರದೇ? ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತಾರೂಢ ಪಕ್ಷವಾಗಿದ್ದು ಜನತೆಗೆ ಕೊಡುವ ಭರವಸೆ ಏನು? ಹೇಳಲು ಹೊರಟರೆ ಅನುಭವಿ ರಾಜಕಾರಣಿಗಳ ಸಾಲು ಸಾಲೇ ಅಲ್ಲಿದೆ.

ತಮ್ಮ ತಪ್ಪು ನೆಪ್ಪುಗಳನ್ನು ಜನತೆ ಮುಂದೆ ನಿಂತು ಹೇಳಿಕೊಳ್ಳುತ್ತಿಲ್ಲವೇಕೆ? ‘ನರೇಗಾ’ ದಂತಹ ಯೋಜನೆ ಬಡ ಜನತೆ ಪರವಾದ ಯೋಜನೆ. ಅದರ ಬೆನ್ನ ಹಿಂದೆ ಕಮ್ಯುನಿಸ್ಟರಿದ್ದದ್ದು ನಿಜವೇ ಆದರೂ ಅದನ್ನೆಲ್ಲೂ ತನ್ನ ಸಾಧನೆ ಎಂದು ಹೇಳಿಕೊಂಡಂತೆ ಕಾಣುವುದಿಲ್ಲ. ಜನತೆಯನ್ನು ಎದುರಿಸಲಾಗದ ದೌರ್ಬಲ್ಯವೇನು ಎಂದು ಪಕ್ಷಗಳೇ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ದೀರ್ಘಾವಧಿಯ ಅಸ್ತಿತ್ವ ಕಾಂಗ್ರೆಸ್‌ನ ಶಕ್ತಿಯೂ ಹೌದು ದೌರ್ಬಲ್ಯವೂ ಹೌದು.

ಸಾಮಾನ್ಯವಾಗಿ ಮೂರನೇ ಶಕ್ತಿಯಾಗಿ ಒಗ್ಗೂಡುತ್ತಿದ್ದ ಸಮಾಜವಾದಿ ಪಕ್ಷಗಳು ಈ ಬಾರಿ ಮುಂಚೂಣಿಗೆ ಬಂದಂತೆ ಕಾಣುತ್ತಿಲ್ಲ. ಸಾಧ್ಯವಾದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಯ ಜೊತೆ ಸೇರುವ ಆಲೋಚನೆಯಲ್ಲಿ ವ್ಯವಹರಿಸುತ್ತಿವೆ. ಬಹುತೇಕ ಪ್ರಾದೇಶಿಕ ಪಕ್ಷಗಳಂತೆ ಕಾಣತೊಡಗಿವೆ. ಅಷ್ಟೇ ಅಲ್ಲ, ವ್ಯಕ್ತಿ ಕೇಂದ್ರಿತ ಪಕ್ಷಗಳಾಗಿವೆ. ಜೆಡಿಎಸ್ ಕರ್ನಾಟಕದಲ್ಲೂ, ಬಿಎಸ್‌ಪಿ ಉತ್ತರ ಪ್ರದೇಶದಲ್ಲೂ, ಕಮ್ಯುನಿಸ್ಟ್ ಪಕ್ಷಗಳು ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲೂ ರಾಷ್ಟ್ರ ರಾಜಕೀಯಕ್ಕೆ ಹೊರಟು ಸ್ಥಳೀಯವಾಗಿ ಉಳಿದುಕೊಂಡಿವೆ. ಕಮ್ಯುನಿಸ್ಟರಿಗೆ ವಿರುದ್ಧವಾಗಿ ಬಂಗಾಳದಲ್ಲಿ ಹುಟ್ಟಿದ್ದು ತೃಣಮೂಲ ಕಾಂಗ್ರೆಸ್.

ಅಸ್ಸಾಂನಲ್ಲಿ ಎಜೆಪಿ, ಪಂಜಾಬಿನ ಅಕಾಲಿದಳ, ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಇತ್ಯಾದಿ ಪ್ರಾದೇಶಿಕ ಪಕ್ಷಗಳು ರಾಷ್ಟ್ರ ರಾಜಕೀಯದಲ್ಲಿ ಪಾಲ್ಗೊಳ್ಳುತ್ತಿವೆ. ಇಲ್ಲವೇ ಪಕ್ಷದೊಳಗೊಂದು ಪಕ್ಷವಾಗಿ ಒಂದು ಹೊಸ ರಾಜಕೀಯ ವ್ಯವಸ್ಥೆಯನ್ನೇ ಹುಟ್ಟುಹಾಕಿವೆ. ನಮಗಿಲ್ಲಿ ಕಾಣಬರುತ್ತಿರುವುದು ಮುಂದುವರಿದ ವ್ಯಕ್ತಿಕೇಂದ್ರಿತ ರಾಜಕೀಯ ಗುಣ ಈ ಪಕ್ಷಗಳ ಶಕ್ತಿಯನ್ನು ಕ್ಷೀಣಗೊಳಿಸಿದೆ. ರಾಜಕೀಯದಲ್ಲಿ ವ್ಯಕ್ತಿಯ ವರ್ಚಸ್ಸು ಹಿರಿದೇ ಆದರೂ ಪಕ್ಷಕ್ಕೊಂದು ಸಾಮುದಾಯಿಕ ಪ್ರಜ್ಞೆ ಬೇಕೇ ಆಗಿರುತ್ತದೆ.

ಮೊನ್ನೆ ಆಮ್ ಆದ್ಮಿ ಪಕ್ಷದ ಬೆಂಬಲಕ್ಕೆ ಮುಂದಾಗಿರುವ ಜನರನ್ನು ನೋಡಿದರೆ ಮೂರು ತಿಂಗಳ ಕೆಳಗೆ ಈ ಪಕ್ಷದ ಬಗೆಗೆ ಇದ್ದ ಅನುಮಾನಗಳನ್ನು ಜನ ಸಾಕಷ್ಟು ದೂರ ಮಾಡಿಕೊಂಡಂತಿತ್ತು. ಕರ್ನಾಟಕ ಹಾಗೂ ಮತ್ತಿತರ ಕಡೆ ಚುನಾವಣಾ ಕಣಕ್ಕಿಳಿಯುತ್ತಿರುವ ಸ್ಪರ್ಧಾಳುಗಳನ್ನು ನೋಡಿದರೆ ದುಡ್ಡಿನ ಬೆಂಬಲವಿಲ್ಲದ, ಆದರೆ ಬೇರೆ ಬೇರೆ ಕ್ಷೇತ್ರಗಳಲ್ಲಿ ನಾಯಕರಾಗಿದ್ದವರು ಇಲ್ಲಿ ಸೀಟು ಪಡೆಯುವ ಮೂಲಕ ಪ್ರಜಾಪ್ರಭುತ್ವದ ಸಾಧ್ಯತೆಯನ್ನು ಬೇರೆ ನೆಲೆಗಳಲ್ಲೂ ಹುಡುಕಾಡುತ್ತಿರುವಂತೆ ಕಾಣಬರುತ್ತಿದ್ದಾರೆ.

ಆಮ್ ಆದ್ಮಿಗೆ ಬೆಂಬಲಕ್ಕಿರುವ ಜನ ಯುವಕರು. ಅದರಲ್ಲೂ ಐ.ಟಿ. ಹಿನ್ನೆಲೆಯ ಜನ ಅದರ ವಿಶೇಷ ಆಕರ್ಷಣೆಗೆ ಒಳಗಾಗಿದ್ದಾರೆ. ಈವರೆಗೆ ಮತಗಟ್ಟೆಗೆ ಬರದೇ ಇದ್ದ ಹೊಸದೊಂದು ವರ್ಗವನ್ನು ಎಎಪಿ ಆಕರ್ಷಿಸಿದೆ. ಸಾಮಾನ್ಯವಾಗಿ ನಗರದ ಮೇಲು ವರ್ಗದ ಮತಗಳು ಬಿಜೆಪಿಯ ಬಗಲಿಗೆ ಬೀಳುವ ನಿರೀಕ್ಷೆಯಲ್ಲಿ ರಾಜಕೀಯ ದಾಳಗಳನ್ನು ಹಾಕಲಾಗುತ್ತದೆ. ಅಂತಹ ಮತಗಳಿಗೆ ಆಮ್ ಆದ್ಮಿ ಸ್ಪರ್ಧೆಗಿಳಿದಂತಿದೆ. ಭ್ರಷ್ಟಾಚಾರ ವಿರೋಧಿ ಘೋಷಣೆಯೇ ಈ ಪಕ್ಷದ ಅಯಸ್ಕಾಂತವಾಗಿದೆ.

ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಬೇಸತ್ತು ತಮ್ಮ ಬದುಕಿನ ಇಳಿಗಾಲದಲ್ಲಿ ದೇಶವನ್ನು ಭ್ರಷ್ಟತೆಯಿಂದ ವಿಮೋಚನೆಗೊಳಿಸಬೇಕೆಂದು ಬಯಸುವವರು ಆಮ್ ಆದ್ಮಿ ಪಕ್ಷದ ಬೆಂಬಲಕ್ಕೆ ನಿಂತಿದ್ದಾರೆ. ಅಂತಹ ಕಡೆ ಕಾಂಗ್ರೆಸ್‌ಗೆ ಬೀಳುವ ವೋಟು ಆದ್ಮಿ ಕಡೆ ಹೊರಳುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. ಪಕ್ಷಕ್ಕೆ ದೇಣಿಗೆಯನ್ನು ಬಹಿರಂಗವಾಗಿ ಜನರಿಂದ ಸಂಗ್ರಹಿಸುತ್ತಿರುವುದು ಹೆಚ್ಚಿನ ನೈತಿಕ ಸ್ಥೈರ್ಯವನ್ನು ತಂದುಕೊಟ್ಟಂತಿದೆ. ಜನರಿಂದ ದೇಣಿಗೆ ಸಂಗ್ರಹಿಸುವ ರಾಜಕಾರಣ ಹಿಂದೆಯೂ ನಡೆದಿದೆ.

ಅದನ್ನೊಂದು ಸಿದ್ಧಾಂತವಾಗಿ ಕರ್ನಾಟಕದಲ್ಲಿ ಶಾಂತವೇರಿ ಗೋಪಾಲಗೌಡರು ರೂಪಿಸಿದ್ದು ಇಂದಿಗೂ ದಂತಕಥೆಯಾಗಿದೆ. ಕಾನ್ಶಿರಾಮರ ನೇತೃತ್ವದಲ್ಲಿ ಹಣವೇ ಇಲ್ಲದ ಜನರು ಪಕ್ಷ ಕಟ್ಟಲು ಸಾಧ್ಯವಾಗಿದ್ದನ್ನು ಜನ ಇಂದೂ ನೆನೆಯುತ್ತಾರೆ. ಇವೆಲ್ಲಾ ಕೇವಲ ಹಳಹಳಿಕೆಯಾಗದೆ ಮತ್ತೆ ಚಲಾವಣೆಗೆ ಬರುವುದಾದರೆ ಅದನ್ನು ಮತ್ತೆ ಸ್ವಾಗತಿಸಲೇಬೇಕಾಗುತ್ತದೆ.

ಅಂಬಾನಿ ಅವರನ್ನು ಪ್ರಶ್ನಿಸಿದ ಹಾಗೆ ನಾವು ಪ್ರಶ್ನೆ ಮಾಡಲೇಬೇಕಾದ ಜನ ಬಹಳ ಮಂದಿ ಇದ್ದಾರೆ. ಅವರ ಬೆಂಬಲ ಯಾರಿಗಿರುತ್ತದೆ ಎಂದು ತಿಳಿಯಬೇಕಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ಹಣವನ್ನೇ ಹಿಂದಿರುಗಿಸದ ಉದ್ಯಮಿಗಳು, ಕಂಪ್ಯೂಟರ್ ಲೋಕದ ದೊರೆಗಳು ಇವರ ಆಶೀರ್ವಾದ ಯಾರಿಗೆ? ಈ ಸಂಗತಿ ಬಹಿರಂಗವಾಗಬೇಕಿದೆ. ಬಂಡವಾಳ ಶಾಹಿಗಳು, ರಾಜಕಾರಣಿಗಳು ಒಂದಾದ ರಾಜಕೀಯ ಜನಸಾಮಾನ್ಯರು ಅಹೋರಾತ್ರಿ ನೋಡುವ ನಾಟಕವಾಗಿರುತ್ತದೆ. ಆ ಹೊತ್ತಿನಲ್ಲಿ ಆ ವೇಷ ಭೂಷಣದಲ್ಲಿ ಏನೂ ತಿಳಿಯುವುದಿಲ್ಲ.

ರಾಜಕಾರಣಿಗಳು ಕೆಲವೇ ವರ್ಷದ ರಾಜಕೀಯ ಅವಕಾಶವನ್ನು ಬಳಸಿಕೊಂಡು ಬಂಡವಾಳಗಾರರಾಗುತ್ತಾರೆ. ಉದ್ಯಮಪತಿಗಳು ಕೊಟ್ಟ ಹಣ ಅದು ದೇಣಿಗೆಯಾಗಿರುವುದಿಲ್ಲ, ರಾಜಕೀಯದ ಹೆಸರಿನಲ್ಲಿ ಹೂಡಿದ ಬಂಡವಾಳವಾಗಿರುತ್ತದೆ. ರಾಜಕೀಯಕ್ಕೆ ಹೂಡುವ ಹಣ ಐದು ವರ್ಷ ನಿರಂತರವಾಗಿ ಕರೆಯುವ ಹಸುವಿಗೆ ಹಿಂಡಿ ಹಾಕಿದಂತೆ. ಜನಸಾಮಾನ್ಯನಿಗೆ ಇರುವ ಬಂಡವಾಳ ಒಂದು ವೋಟು. ಆದರೂ ಆ ಒಂದು ವೋಟಿಗಾಗಿ ಇಷ್ಟೆಲ್ಲಾ ಹೈರಾಣಾಗುವುದೇ ಪ್ರಜಾಪ್ರಭುತ್ವದಲ್ಲಿರುವ ಶಕ್ತಿ. ವೋಟನ್ನೇ ಖಡ್ಗವಾಗಿಸಿಕೊಂಡು ಜನಸಾಮಾನ್ಯರು ಪ್ರಜಾಪ್ರಭುತ್ವಕ್ಕಾಗಿ ಹೋರಾಡಬೇಕಾಗಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.