‘ಮಹಾಭಾರತ’ ಎನ್ನುವ ಇತಿಹಾಸ ಕಥನಕ್ಕೆ – ‘ಜಯ’ ಎನ್ನುವುದು ಈ ಕಥನದ ಅಂತರಂಗದ ಹೆಸರು. ‘ಜಯೋನಾಮ ಇತಿಹಾಸೋsಯಂ’. ಕವಿಯ ಕಾವ್ಯನಾಮವಲ್ಲ, ಕಾವ್ಯಕ್ಕೇ ಇನ್ನೊಂದು ಹೆಸರು. ತನ್ನ ಕೃತಿಯನ್ನು ಯಾವ ದೃಷ್ಟಿಯಿಂದ ನೋಡಬೇಕು, ನೋಡುವುದು ಸಾಧ್ಯ ಮತ್ತು ಸಾಧು ಎಂದು ಕೃತಿಕಾರನೇ ಸೂಚಿಸುವ ನಿಜವಾದ ಅರ್ಥದ ಕಾವ್ಯನಾಮ.

ರಾಮಾಯಣಕ್ಕೂ ಹೀಗೆ ಮೂರು ಹೆಸರುಗಳಿವೆ. ‘ರಾಮಾಯಣ’ ಎನ್ನುವುದು ಅಯೋಧ್ಯೆಯಿಂದ ಲಂಕೆಯವರೆಗಿನ ರಾಮಾದಿಗಳ ಸಂಚಾರವನ್ನು ಸೂಚಿಸುವ ಪ್ರಸಿದ್ಧವಾದ ಹೆಸರು. ‘ಸೀತಾಚರಿತ’ ಮತ್ತು ‘ರಾವಣವಧೆ’ ಎನ್ನುವುದು ಕೂಡ ರಾಮಾಯಣದ ಹೆಸರುಗಳೇ. ವಸ್ತು ಒಂದೇ – ನೋಟ ಅನೇಕ, ನಾಮ–ರೂಪಗಳು ಅನೇಕ ಎನ್ನುವುದು ಭಾರತೀಯ ಒಳನೋಟವೇ.

‘ಜಯ’ ಎನ್ನುವ ಹೆಸರಿಗೆ ಒಂದು ಅಂತರಂಗದ ಅರ್ಥವೇ ಇದೆ. ‘ಜಯ’ ಎಂದರೆ ತನ್ನನ್ನು ತಾನು ಗೆಲ್ಲುವುದಂತೆ; ಇತರರನ್ನು ಗೆಲ್ಲುವುದಲ್ಲ, ಲೋಕವನ್ನು ಗೆಲ್ಲುವುದಲ್ಲ. ದಿಗ್ವಿಜಯವಲ್ಲ, ಆತ್ಮಜಯ! ನಮ್ಮ ಬದುಕೆಂದರೆ – ಅದು ನಮಗೇ ನಾವು ಸೋತಂತೆ ಬದುಕಿರುವುದು! ನಮ್ಮ ಭಾವನೆಗಳೇ ನಮ್ಮನ್ನು ಆಳುತ್ತಿವೆ.

ನಾವು ನಿಜಕ್ಕೂ ಈ ಭಾವನೆಗಳ ಅಡಿಯಾಳುಗಳು. ಈ ಸ್ಥಿತಿಯನ್ನು ಬದಲಿಸುವುದನ್ನು ‘ಜಯ’ ಎನ್ನುವ ಪದ ಸೂಚಿಸುತ್ತದೆ. ‘ಜಯತಿ ಅನೇನ ಸಂಸಾರಂ’ – ಸಾಂಸಾರಿಕತೆಯನ್ನು ಗೆಲ್ಲುವುದು, ನಮ್ಮ ನಿಹಿತ ಸ್ವಾರ್ಥವನ್ನು ಗೆಲ್ಲುವುದು – ಇದೇ ತನ್ನನ್ನು ತಾನು ಗೆಲ್ಲುವುದೆನ್ನುವುದರ ಅರ್ಥ.

ಮೇಲ್ನೋಟಕ್ಕೆ ‘ಜಯ’ವೆಂದರೆ ಶತ್ರುಗಳ ವಿರುದ್ಧದ ಗೆಲವಾಗಿ, ರಾಜ್ಯವನ್ನು ಆಳುವ ಅವಕಾಶವಾಗಿ, ಈ ಗುರಿಗಾಗಿ ನಮ್ಮೆಲ್ಲ ಶಕ್ತಿಗಳನ್ನೂ ದುಡಿಸುತ್ತ ಸಾಗುವ ಇತಿಹಾಸದ ಪ್ರವಾಹ ರಭಸಗತಿಯನ್ನು ತೋರಿಸುತ್ತಲೇ ಈ ಎಲ್ಲ ಕುರುಕ್ಷೇತ್ರ ಕೋಲಾಹಲದ ನಡುವೆ ನಿಜವಾದ ಗೆಲವೆಂದರೆ ತನ್ನನ್ನು ತಾನು ಗೆಲ್ಲುವುದೆನ್ನುವ, ಈ ಮೂಲಕ ಸೋಲು–ಗೆಲವಿನ ಪರಿಕಲ್ಪನೆಯನ್ನೇ ಆಳವಾಗಿ ಬದಲಿಸುವ ಚೇತೋಹಾರಿಯಾದ ಅರಿವೊಂದನ್ನು ಒಳಗಿಂದಲೇ ಒಡಮೂಡಿಸುವುದರಿಂದ – ಇದು ಅಂತರಂಗದ ಅರ್ಥ. ಇದೇ ಆಧ್ಯಾತ್ಮಿಕವಾದ ಅರ್ಥ.

ಈ ಅರ್ಥಕ್ಕಾಗಿ ದುಡಿಯುವುದೇ – ಲೋಕದ ಬದುಕಿನ ಯಾವ ಸೂಕ್ಷ್ಮತೆಗೂ ಎರವಾಗದೆ ದುಡಿಯುವುದೇ ಮಹಾಭಾರತದ ಮಹತ್ತ್ವ. ನಮ್ಮ ಪಂಪ – ತನ್ನ ಭಾರತವನ್ನು ‘ವಿಕ್ರಮಾರ್ಜುನವಿಜಯ’ವೆಂದೇ ಹೆಸರಿಸಿದ. ಅರ್ಜುನನ ‘ಸಾಹಸದ’ ಮಹಿಮೆ ಪಂಪನ ಕಾವ್ಯದ ವಸ್ತು. ತನ್ನರಸನಾದ ಅರಿಕೇಸರಿಯನ್ನು ಅರ್ಜುನನೊಡನೆ ‘ತಗುಳ್ಚಿ’ – ಕಾವ್ಯದ ಇತಿಹಾಸದಲ್ಲಿಯೇ ಹೊಸ ರೀತಿಯ ನಿಯೋಗಕ್ಕೆ ಪಂಪ ಕಾರಣನಾದ.

ಈ ‘ನಿಯೋಗ’ವಂತೂ ವಿಫಲವಾಗಿಲ್ಲ. ಇಷ್ಟೆಲ್ಲ ಇದ್ದರೂ, ಪಂಪ; ಅರ್ಜುನ ಪಕ್ಷಪಾತಿಯೇ ಆಗಿದ್ದರೂ, ‘ವಿಜಯ’ ಎನ್ನುವುದು ಅರ್ಜುನನ ಇನ್ನೊಂದು ಹೆಸರೇ ಆಗಿದ್ದರೂ ಪಂಪನ ಒಳಮನ, ಕವಿ–ಮನ, ಕರ್ಣನನ್ನು ನೆನೆಯುತ್ತಿತ್ತು. ತಾನು ಬಿಟ್ಟಗಲಿ ಬಂದ ತನ್ನ ಬನವಾಸಿಯನ್ನು ನೆನೆಯುವಂತೆ ಅವನು ಕರ್ಣನನ್ನು ನೆನೆಯುತ್ತಿದ್ದ! ‘ನೆನೆವೊಡೆ ಭಾರತದೊಳ್ ಕರ್ಣನಂ ನೆನೆ’ ಎಂದ. ‘ಕರ್ಣ ರಸಾಯನಮಲ್ತೆ ಭಾರತಂ’ ಎಂದ.

ಕರ್ಣನು ಗೆದ್ದವನಲ್ಲವಲ್ಲ! ತನ್ನ ಜೀವಾಳವಾದ ದುರ್ಯೋಧನನನ್ನೂ ಕರ್ಣನಿಗೆ ಗೆಲ್ಲಿಸಲಾಗಲಿಲ್ಲವಲ್ಲ! ಎಲ್ಲ ಬಗೆಯಲ್ಲೂ ಕರ್ಣ, ಪರಾಭವವನ್ನು ಅನುಭವಿಸಿದವನಲ್ಲವೆ! ಒಂದ ರೀತಿಯಲ್ಲಿ ಪ್ರತಿ–ನಾಯಕನಲ್ಲವೆ? ಕೆಲವರ ದೃಷ್ಟಿಯಲ್ಲಿ ಖಳನಾಯಕನೂ ಅಲ್ಲವೆ? ಇರಬಹುದು. ಆದರೆ ಪಂಪನಿಗೆ ಗೊತ್ತು. ಸೋಲು–ಗೆಲವೆನ್ನುವುದು ಕಪ್ಪು–ಬಿಳುಪಿನ ಸರಳ ಲೆಕ್ಕಾಚಾರವಲ್ಲ.

ಪಾತ್ರದ ಆಳವನ್ನು ಮುಟ್ಟುವುದೇ ಕವಿಯ ಕೃತಾರ್ಥತೆಯಲ್ಲದೆ ಪರ–ವಿರೋಧವಾಗಿ ವಾದಿಸುವುದಲ್ಲ. ಆದುದರಿಂದಲೇ ಪಂಪ – ಆರಂಕುಸಮಿಟ್ಟೊಡಂ – ಕರ್ಣನನ್ನು ಕೊಂಡಾಡಿದ. ತನ್ನ ಕಾವ್ಯದ ಹೆಸರು ‘ವಿಜಯ’ ಎಂದಿದ್ದರೂ, ಜಯೋನಾಮ ಇತಿಹಾಸದ ಅಂತರಂಗದ ಅರ್ಥವನ್ನು ಹೀಗೆ ಮಾನ್ಯ ಮಾಡಿದ.

ಪಂಪನಿಗಾಗಿ ತಮ್ಮ ಬದುಕನ್ನೆ ಮೀಸಲಿಟ್ಟ ಪಂಡಿತ ಮುಳಿಯ ತಿಮ್ಮಪ್ಪಯ್ಯನವರು, ‘ಪೆರ್ಮೆಗೆ (ಹೆಮ್ಮೆಗೆ; ಗರ್ವಕ್ಕೆ) ನೆಲೆಯಿಲ್ಲ, ಕೂರ್ಮೆ (ಪ್ರೀತಿ) ಗೆಡೆಯುಂಟೆನೆ ಧರ್ಮದ ಸಾರಮಂ ಮನಂಬುಗಿಸುತೆ ಸಾರ್ದ ಕನ್ನಡಿಗ’ ಎಂದು ಹೃದ್ಯವಾಗಿ ಪಂಪನನ್ನು ಬಣ್ಣಿಸಿದ್ದಾರೆ. ಇದು ವ್ಯಾಸರನ್ನು ಕುರಿತು ಪಂಪನೇ ಆಡಿದ ಮಾತು.

‘ಗರ್ವಮೆ ದೋಷಂ, ಅಳಿಗಂ ದೋಷಮೆ?’ ಎಂದು ಪಂಪನ ಮಾತು. ಗರ್ವವಾದರೆ ದೋಷ; ಪ್ರೀತಿಗೇನು ದೋಷ? – ಎಂದು ಕೇಳಿದ್ದ. ತಾನು ‘ವ್ಯಾಸಮುನೀಂದ್ರರುಂದ್ರ – ವಚನಾಮೃತವಾರ್ಧಿಯನೀಸುವೆನ್ ಎಂಬ ಗರ್ವಮೆನಗಿನಿತಿಲ್ಲ’ – ಎಂದಿದ್ದ. ವ್ಯಾಸರ ಕೃತಿಯನ್ನು ಒಳಹೊಗುವಲ್ಲಿಯೇ ಪ್ರೀತಿಯೆ ವಿನೀತ ದೃಷ್ಟಿಗೆ ಕಾಣುವ ಅಂತರಂಗದ ಲೋಕವೇ ಬೇರೆ, ಇಲ್ಲಿನ ರಹಸ್ಯಗಳನ್ನೆಲ್ಲ ಭೇದಿಸಬಲ್ಲೆನೆನ್ನುವ ಗರ್ವದ, ನೆತ್ತಿಯ ಮೇಲಿನ ಕಣ್ಣಿಗೆ ಕಾಣುವ ಲೋಕವೇ ಬೇರೆ ಎಂದು ಪಂಪ ಸೂಚಿಸಿ, ‘ಜಯ’ ಎನ್ನುವುದರ ಅಂತರಂಗದ ಅರ್ಥ ಕಾವ್ಯದ ಅಧ್ಯಯನ ಮಾರ್ಗದಲ್ಲಿಯೇ ಹೊಸ ಬಾಗಿಲು ತೆರೆಯಬಲ್ಲುದೆನ್ನುವುದನ್ನು ತೋರಿಸಿದ.

ನಮ್ಮ ಕುಮಾರವ್ಯಾಸನಿಗಂತೂ – ಈ ಕೌರವ–ಪಾಂಡವಯುದ್ಧದಲ್ಲಿ ಇವರಾರೂ ಗೆದ್ದವರಲ್ಲ; ಗೆದ್ದವನು ಕೃಷ್ಣ. ಅವನು ಯುದ್ಧವನ್ನೇ ಮಾಡದೆ ಗೆದ್ದವನು! ಕೃಷ್ಣ ಕೇವಲ ಸಾರಥಿ ಅಷ್ಟೆ! ಕುಮಾರವ್ಯಾಸನಿಗೆ – ‘ಲೋಕಸಮಿದೆಗಳಗ್ನಿಕಾರ್ಯದ ಬ್ರಹ್ಮಚಾರಿ ವಟು’ವಿನಂತೆ ಕೃಷ್ಣ ಕಾಣಿಸುತ್ತಾನೆ. ಬ್ರಹ್ಮಚಾರಿ, ತನ್ನ ದೈನಿಕದಲ್ಲಿ ಅಗ್ನಿಗೆ ಸಮಿಧೆಗಳನ್ನೆಸೆಯುತ್ತ ಅಗ್ನಿಕಾರ್ಯ ಮಾಡುತ್ತಿರುವಂತೆ – ಈ ಕುರುಕ್ಷೇತ್ರಯುದ್ಧ ನಡೆದಿದೆ.

ಹದಿನೆಂಟು ಅಕ್ಷೋಹಿಣೀ ಸೇನೆಯೆಲ್ಲ ಸಮಿಧೆಗಳಂತಿವೆ! ಸಮಿಧೆಗಳಿಗೆ ಉರಿಯುವುದೊಂದೇ ಪಾಡು! ಅವುಗಳಿಗೆ ಸೋಲೇನು? ಗೆಲವೇನು? ಹಾಗಾದರೆ ಗೆದ್ದವನು ಯಾರು? ತನ್ನ ದೈನಿಕದ ಜೀವಂತಿಕೆಯಲ್ಲಿ ಉಜ್ವಲವಾಗಿ ಬೆಳಗುತ್ತಿರುವ ಕೃಷ್ಣ! ಹೀಗೆಂದಾಗ – ಈ ಲೋಕದ ಇತಿಹಾಸವೇ ಆಧ್ಯ್ಾತ್ಮಿಕವಾಗಿಬಿಟ್ಟಿತು.

ಕುಮಾರವ್ಯಾಸ ಹೀಗೆ ಬಣ್ಣಿಸುವಾಗಲೂ, ಕೃಷ್ಣನೆಂಬ ದೈವದ ದೈನಿಕದ ಜೀವಂತಿಕೆ – ಉರಿಯುತ್ತಿರುವ ಸಮಿಧೆಗಳ ಉರಿಯನ್ನು ತಾನು ಮುಟ್ಟಿಸಿಕೊಳ್ಳುವುದರಲ್ಲಿದೆ ಎಂದು ಕೂಡ ಸೂಚಿಸುತ್ತಾನೆ. ಸಂಜಯನಲ್ಲಿ ಕೃಷ್ಣ ಹೀಗೆ ಹೇಳಿದನಂತೆ: ‘ಎಮಗೆ ಸರಿ ಇತ್ತಂಡ (=ಕೌರವ, ಪಾಂಡವರು), ಪಕ್ಷಭ್ರಮೆಯ ಮಾಡೆವು, ಹಿತವ ಬಯಸುವೆವೆರಡು ಸಂತತಿಗೆ’.

ಮತ್ತೇಕೆ ಪಾಂಡವರ ಪರ? ಏಕೆಂದರೆ. ‘ಕಮಲಮುಖಿ ಸುಲಿವಡೆದು ಲಕ್ಷ್ಮೀರಮಣ; ಲಕ್ಷ್ಮೀರಮಣ ಎಂದು ಒರಲಿದೊಡೆ, ಸಂಜಯ; ನೊಂದೆ ನಾನೆಂದ’. ಇದು ದ್ರೌಪದಿಯ ಉರಿಯನ್ನು ಕೃಷ್ಣ ಮುಟ್ಟಿಸಿಕೊಂಡ ಪರಿ.

ಕೃಷ್ಣನನ್ನು ತನ್ನ ಸಾರಥಿಯಾಗು ಎಂದು ಅರ್ಜುನ ಕೇಳಿಕೊಂಡದ್ದೇನೋ ಹೌದು. ಅದಕ್ಕೆ ಕೃಷ್ಣ ಒಪ್ಪಿದ್ದೂ ನಿಜ. ಅದೆಲ್ಲ ಲೋಕವ್ಯವಹಾರ. ಆದರೆ ಕೃಷ್ಣನನ್ನು ಪಾಂಡವರಲ್ಲಿಗೆ ಕರೆದುತಂದದ್ದು ದ್ರೌಪದೀ! ಇದನ್ನು ಸೂಚಿಸಲೆಂಬಂತೆ ಮಹಾಭಾರತದಲ್ಲಿ ಕೃಷ್ಣನ ಪ್ರವೇಶವಾಗುವುದೇ ದ್ರೌಪದೀ ಸ್ವಯಂವರದ ಸಂದರ್ಭದಲ್ಲಿ!

ಕಥನವು ಕೃಷ್ಣಕೇಂದ್ರಿತವಾದಾಗ ಸೋಲು–ಗೆಲವಿನ ಕಲ್ಪನೆ ಬದಲಾಗುವುದು ಅನಿವಾರ್ಯ. ಹಾಗಲ್ಲದೆ ಇದ್ದಾಗಲೂ, ಲೌಕಿಕ ಅನುಭವದಲ್ಲಿಯೇ ಕಥನ ನಡೆಯುತ್ತಿದ್ದಾಗಲೂ ಅನುಭವದ ಆಳದಲ್ಲಿ ನೋಡಿದರೆ, ಸೋಲು–ಗೆಲವಿನ ಪರಿಕಲ್ಪನೆಗಳು ಬದಲಾಗದೆ ಇರುವಂತಿಲ್ಲ. ಕಾವ್ಯಮಾರ್ಗವೇ ಲೋಕಸಿದ್ಧವಾದ ಸೋಲು–ಗೆಲವಿನ ಕಲ್ಪನೆಯನ್ನು ಪ್ರಶ್ನಿಸುವುದಕ್ಕಾಗಿಯೇ ಹುಟ್ಟಿಕೊಂಡಂತಿದೆ!

ಇದನ್ನು ಸೂಚಿಸಿಲೆಂಬಂತೆ, ಆದಿಪರ್ವದ ಮೊದಲ ಅಧ್ಯಾಯದಲ್ಲಿ, ಕುರುಡುದೊರೆ ಧೃತರಾಷ್ಟ್ರ ತನ್ನ ಆಪ್ತ ಸಹಚರ ಸಂಜಯನೊಡನೆ – ಯುದ್ಧದ ವಾರ್ತೆಗಳನ್ನು ಕೇಳುತ್ತಿದ್ದಂತೆ ತನ್ನಲ್ಲಿ ವಿಜಯದ ಆಸೆ ಹೇಗೆ ಕಮರಿಹೋಗುತ್ತಿತ್ತೆನ್ನುವುದನ್ನು ಆರ್ತವಾಗಿ ಹೇಳುವ ಒಂದು ಭಾಗವಿದೆ.

ಸಂಜಯನು, ಕುರುಕ್ಷೇತ್ರದ ಯುದ್ಧದ ವಾರ್ತೆಗಳನ್ನು ಇದ್ದುದಿದ್ದಂತೆ, ದೊರೆಗೆ ವರದಿ ಮಾಡಲು ನಿಯುಕ್ತನಾದವನು. ದೊರೆಯ ಬಳಿಯಲ್ಲಿ, ಅರಮನೆಯಲ್ಲಿ ಇದ್ದಂತೆಯೇ ಕುರುಕ್ಷೇತ್ರದ ರಣಸನ್ನಿವೇಶ ಸಂಜಯನಿಗೆ ಕಾಣುವಂತೆ ವ್ಯಾಸರು ದಿವ್ಯದೃಷ್ಟಿಯನ್ನು ಅವನಿಗೆ ಅನುಗ್ರಹಿಸಿದ್ದರು! ವ್ಯಾಸರು, ಧೃತರಾಷ್ಟ್ರನಿಗೇ ದಿವ್ಯದೃಷ್ಟಿಯ ಈ ಕೊಡುಗೆಯನ್ನು ನೀಡಿದ್ದರು.

ಯುದ್ಧವನ್ನು ನೋಡಬಯಸುವೆಯಾದರೆ ನೀನು ನೋಡಬಲ್ಲೆ, ಹಾಗೆ ನಾನು ಅನುಗ್ರಹಿಸುವೆನೆಂದಿದ್ದರು. ಒಲ್ಲೆನೆಂದಿದ್ದ ಧೃತರಾಷ್ಟ್ರ! ದೊರೆ, ಅಂಬಿಕೆಯ ಮಗನಲ್ಲವೆ? ನಿಯೋಗ ಕಾಲದಲ್ಲಿ ವ್ಯಾಸರ ಮುನಿರೂಪಕ್ಕೆ ಹೇಸಿ, ಅಂಬಿಕೆ ಕಣ್ಣು ಮುಚ್ಚಿಕೊಂಡಳಲ್ಲವೆ? ಅದರಿಂದಲೇ – ಮಗು; ಧೃತರಾಷ್ಟ್ರ ಕುರುಡಾದುದಂತೆ! ಅಂಥ ಧೃತರಾಷ್ಟ್ರ ಈಗ ವ್ಯಾಸರ ದಿವ್ಯದೃಷ್ಟಿಯ ಕೊಡುಗೆಗೆ ಎರವಾದುದು ಸಹಜವಾಗಿಯೇ ಇದೆ.

ಸಂಜಯ, ಕಂಡದ್ದು ಕಂಡ ಹಾಗೆ ಹೇಳುತ್ತಿದ್ದ. ಕುರುಡುದೊರೆಯ ಒಳಗಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದ. ಯುದ್ಧದ ಈ ವಿವರಗಳು ಆದಿಪರ್ವದ ಮೊದಲಲ್ಲೇ ಇವೆ. ಅಂದರೆ ಕಾವ್ಯದ ಒಳಗಡೆ ಸವಿವರವಾಗಿ ಆಮೇಲೆ ಸಂಭವಿಸಬೇಕಾದ ಘಟನೆಗಳು, ಮೊದಲೇ ಅಭಿನೀತವಾಗುತ್ತವೆ. ಕಥನದಲ್ಲಿ ಕಾಲ ಹಿಂದಕ್ಕೂ ಚಲಿಸುವುದುಂಟು.

ಇತಿಹಾಸವೆಂದರೆ ನಾವು ಕಾಲದಲ್ಲಿ ಹಿಂದಕ್ಕೆ ಚಲಿಸುವುದೇ ಅಲ್ಲವೆ! ಅಚ್ಚರಿ ಎಂದರೆ, ಎಲ್ಲವನ್ನೂ ಎಲ್ಲರನ್ನೂ ತನ್ನ ತೆಕ್ಕೆಗೆ ದುರ್ದುಮ್ಯವಾಗಿ ಸೆಳೆದುಕೊಂಡು ಈ ಮೂಲಕ ಲೋಕವನ್ನೇ ಗೆಲ್ಲುವ ‘ಕಾಲ’ವನ್ನು, ಅದರ ಮೂಲಕವೇ ನಾವು ಹಿಂತಿರುಗಿ ನೋಡುವುದು ಸಾಧ್ಯವಾದರೆ, ನಮ್ಮನ್ನು ಮುಂದಕ್ಕೆ ಒಯ್ಯುವ ಮೂಲಕ ನಮ್ಮನ್ನು ಸೋಲಿಸಿ ತಾನು ಗೆಲ್ಲುವ ಕಾಲವನ್ನು, ನಾವು ಹಿಂದಕ್ಕೆ ಒಯ್ಯುವುದು ಸಾಧ್ಯವಾದರೆ ನಾವು ‘ಕಾಲ’ವನ್ನು ಗೆದ್ದಂತೆ! ಹಿಂತಿರುಗಿ ನೋಡುವುದೆಂದರೆ, ನಾವು ನಡೆದುಬಂದ ದಾರಿಯನ್ನು ನೋಡುವುದು.

ನಮ್ಮನ್ನೇ ನಾವು ಪ್ರೇಕ್ಷಕರಾಗಿ ನೋಡುವುದು. ನಿರ್ಲಿಪ್ತರಾಗಿ ನೋಡುವುದು! ನಾವೇ ಅನುಭವಿಸಿದ ಮೋಹದ ಆವರಣವನ್ನು ಹರಿದು, ಇನ್ನೊಮ್ಮೆ ನಿರ್ಮೋಹದಿಂದ ನಿಚ್ಚಳವಾಗಿ ನಿಜವನ್ನು ನೋಡುವುದು. ಇದು ನಾವು ‘ಕಾಲ’ವನ್ನು ಗೆದ್ದಂತೆ! ಇತಿಹಾಸ ಕಥನದ ಉದ್ದೇಶವೇನೆಂದರೆ, ಹೀಗೆ ನಾವು ‘ಕಾಲ’ವನ್ನು ಹಿಂತಿರುಗಿ ನೋಡುವಂತೆಸಗಿ, ‘ಕಾಲ’ವನ್ನು ಗೆಲ್ಲಬೇಕೆನ್ನುವುದು.

ಈ ಮೂಲಕ ನಮ್ಮನ್ನೇ ನಾವು ಗೆಲ್ಲಬೇಕೆನ್ನುವುದು! ಈಗಲೂ ಸೋಲು–ಗೆಲವಿನ ಪರಿಕಲ್ಪನೆ ಬದಲಾಗಿಹೋಯಿತು! ಇತಿಹಾಸಕ್ಕೆ ‘ಜಯ’ ಎಂದು ಕರೆದುದರ ಅರ್ಥ ನಿಚ್ಚಳವಾಗತೊಡಗಿತು.

ಇತಿಹಾಸ ರಚಯಿತರಾದ ವ್ಯಾಸರ ವ್ಯಕ್ತಿತ್ತ್ವದಲ್ಲಿಯೇ ಕಾಲದ ಹಿಂದುಮುಂದುಗಳನ್ನು ಒಂದುಗೂಡಿಸುವ ಅಪೇಕ್ಷೆ, ತವಕ, ದರ್ಶನಗಳಿವೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ‘ಪೂರ್ವಿಕ’ರನ್ನೂ ‘ನೂತನ’ರನ್ನೂ ಒಂದುಗೂಡಿಸುವ ಗಾಢವಾದ ಅನುರಕ್ತಿ ಇದೆ. ವೇದಗಳ ಕ್ರಮಬದ್ಧವಾದ ಸಂಕಲನವನ್ನು ಮಾಡಿ, ವ್ಯಾಸರು ವೇದವ್ಯಾಸರೆಂದು ಪ್ರಸಿದ್ಧರಾದುದು. ಅವರು ಸಂಕಲನ ಮಾಡಿದ ಋಗ್ವೇದದ ಮೊದಲ ಅಗ್ನಿಸೂಕ್ತದ ಮೊದಲ ಋಚೆಯಲ್ಲಿಯೇ ‘ಪೂರ್ವಿಕ’ ಮತ್ತು ‘ನೂತನ’ ಎಂಬ ಪದಪ್ರಯೋಗಗಳೇ ಇವೆ!

‘ಅಗ್ನಿಃ ಪೂರ್ವೇಭಿಃ ಋಷಿಭಿಃ ಈಡ್ಯಃ ನೂತನೈಃ ಉತ’ – ನಮ್ಮ ಮುಂದೆ ಜಾಜ್ವಲ್ಯಮಾನನಾಗಿರುವ ‘ಅಗ್ನಿ’ ಪೂರ್ವಿಕರಾದ ಋಷಿಗಳಿಂದ ಹೇಗೆ ಸ್ತುತ್ಯನಾಗಿದ್ದಾನೆ; ಹಾಗೆ ನೂತನರಿಂದಲೂ ಸ್ತುತ್ಯನಾಗಿರುವನೆಂದು ಈ ಮಾತಿನ ಅರ್ಥ. ನೂತನರೂ ಋಷಿಗಳೇ. ಇದು ವೇದದ ಮಾತು, ವ್ಯಾಸರ ಮಾತಲ್ಲ. ಇದನ್ನು ಮೊದಲ ಸೂಕ್ತವಾಗಿ ವ್ಯಾಸರು ಸಂಕಲನ ಮಾಡಿದ್ದಾರೆ.

ಹಾಗೆ ಸಂಕಲನ ಮಾಡಿರುವಲ್ಲಿ ವ್ಯಾಸರ ಹೃದಯ ಕಾಣಿಸುತ್ತದೆ. ಅಗ್ನಿಯನ್ನು ಮುಂದಿಟ್ಟುಕೊಂಡು ಅದರ ಬಣ್ಣನೆಯಲ್ಲಿ ಬದುಕಿನ ಕಾವನ್ನು ಪಡೆಯುತ್ತ, ಆ ಕಾವಿನಲ್ಲಿ ಮಾತನ್ನು ಜೀವಂತವಾಗಿಸಿ, ಆ ಜೀವಂತಿಕೆಯಲ್ಲಿ ಕಾಲದ ಸಾತತ್ಯವನ್ನು ಅನುಭವಿಸಿದವರು – ಇತಿಹಾಸವನ್ನೇ ಹೇಳಹೊರಟದ್ದು ಆಶ್ಚರ್ಯವಲ್ಲ.

ಮತ್ತು ‘ಕಾಲ’ವನ್ನು ಗೆಲ್ಲುವುದೆಂದರೇನು ಎಂದು ಈ ಮೂಲಕ ಸೂಚಿಸುತ್ತಿರುವುದೂ ಆಶ್ಚರ್ಯವಲ್ಲ. ಹಿಂದಕ್ಕೆ ನೋಡುವುದೆಂದರೆ ತನ್ನ ಪೂರ್ವವನ್ನೇ ತಾನು ನೋಡಿದಂತೆ! ಆಗ, ತನ್ನ ಪೂರ್ವಿಕನು ತಾನೇ ಎಂದಂತೆ! ಅಂದರೆ, ಅವನೇ ಅವನ ಪೂರ್ವಿಕ; ಅವನೇ ನೂತನ ಎಂದಂತೆ! ಎಲ್ಲವೂ ಒಂದೆಡೆ ಸಂಧಿಸುವ ಬಿಂದುವನ್ನು ಅಧ್ಯಾತ್ಮ ಮಾತ್ರವಲ್ಲ, ಇತಿಹಾಸ ಕೂಡ ಹುಡುಕುತ್ತಿದೆ. ಬಸವಣ್ಣನವರು, ಕೂಡಲಸಂಗನಿಗೆ, ಎಳೆಯ ನೀನು; ಹಳೆಯ ನಾನು ಎಂದದ್ದು ಬರಿಯ ಮಾತಾಗಿರಲಾರದು!
ಧೃತರಾಷ್ಟ್ರನು ಸಂಜಯನಲ್ಲಿ ತನ್ನ ಮನಸ್ಸನ್ನು ತೋಡಿಕೊಳ್ಳುತ್ತಿದ್ದಾನೆ.

ಕುರುಕ್ಷೇತ್ರದಲ್ಲಿ ನಡೆದ ಯುದ್ಧದ ಬೀಜ ಎಷ್ಟು ಮೊದಲೇ ಬಿತ್ತಲ್ಪಟ್ಟಿತ್ತೆನ್ನುವುದನ್ನು ದೊರೆಯ ಮಾತುಗಳು ಸೂಚಿಸುತ್ತವೆ. ದ್ರೌಪದಿಯ ಸ್ವಯಂವರ ಸಭೆಯಲ್ಲಿ ಮತ್ಸ್ಯಯಂತ್ರವನ್ನು ಭೇದಿಸಿ, ಅವಳನ್ನು ಗೆದ್ದು, ಸೇರಿದ ಎಲ್ಲ ಕ್ಷತ್ರಿಯರು ನೋಡುತ್ತಿರುವಂತೆ ದ್ರೌಪದಿಯನ್ನು ಒಯ್ದವನು ಅರ್ಜುನನೆಂದು ಕೇಳಿದಾಗ – ನನ್ನ ಗೆಲ್ಲುವ ಆಸೆ ಅಲ್ಲಿಗೆ ಕಮರಿತು, ಸಂಜಯ– ಎನ್ನುತ್ತಾನೆ!

‘ಕೃಷ್ಣಾಂ ಹೃತಾಂ ಪ್ರೇಕ್ಷತಾಂ ಸರ್ವರಾಜ್ಞಾಂ ತದಾ ನಾಶಂಸೇ ವಿಜಯಾಯ ಸಂಜಯ’.
ಕುರುಡುದೊರೆಗೆ ಬಹಳ ದೂರದೃಷ್ಟಿ ಇತ್ತೆನ್ನಬೇಕು!

ಅರಗಿನ ಮನೆಯಲ್ಲಿ ಪಾಂಡವರು ಉರಿದುಹೋದರೆಂದು ಕೇಳಿ ನಿರಾಳರಾಗಿದ್ದರು ಕೌರವರು. ಈಗ ನೋಡಿದರೆ ಪಾಂಡವರು ಸತ್ತಿಲ್ಲ, ಬದುಕಿದ್ದಾರೆ. ಅವರು ಬದುಕಿದ್ದಾರೆ ಎಂಬ ವಾರ್ತೆಯಲ್ಲಿಯೇ ಯುದ್ಧದ ಬೀಜವಿದೆಯಂತೆ! ಮತ್ತು ಅವರು ಬದುಕಿರುವರೆಂಬುದರಿಂದಲೇ ಧೃತರಾಷ್ಟ್ರನಿಗೆ ಗೆಲವಿನ ಆಸೆ ಇಲ್ಲವಾಗಿದೆಯಂತೆ! ಗೆಲವಿನ ಹಪಹಪಿಯೊಂದೇ ಧೃತರಾಷ್ಟ್ರನ ನರನಾಡಿಗಳಲ್ಲಿ ಹರಿಯುತ್ತಿದ್ದುದು.

ಈ ಮಾತು ಕೇಳಿ: ‘ಯಕ್ಷಪ್ರಶ್ನೆಯ ಸಂದರ್ಭದಲ್ಲಿ ಯುಧಿಷ್ಠಿರನು ಯಕ್ಷನ ಪ್ರಶ್ನೆಗಳಿಗೆಲ್ಲ ಉತ್ತರಿಸಿದನೆಂದು ಕೇಳಿ – ಗೆಲವಿನ ಆಸೆಯನ್ನು ನಾನು ತೊರೆದೆ’. ಏನೆನ್ನಬೇಕು! ಪಾಂಡವರ ಗೆಲವು – ಅದು ಯಾವ ರೂಪದಲ್ಲಿಯೇ ಇರಲಿ – ತಮ್ಮ ಸೋಲೆಂಬಂತೆ ದೊರೆಗೆ ಅನ್ನಿಸಹತ್ತಿದೆ.

ಯುದ್ಧದ ಎಲ್ಲ ಘಟನೆಗಳನ್ನೂ ಧೃತರಾಷ್ಟ್ರ ಒಂದೊಂದಾಗಿ ಉಲ್ಲೇಖಿಸುತ್ತ, ಪ್ರತಿಯೊಂದು ಉಲ್ಲೇಖದ ಕೊನೆಯಲ್ಲಿಯೂ, ಈ ವಾರ್ತೆಯನ್ನು ಕೇಳಿ ಗೆಲವಿನ ಆಸೆ ಕಮರಿತು ಎಂದು ಹೇಳುತ್ತ ಹೋಗುವನು. ಆಸೆ ಕಮರಿಹೋಯಿತೆಂದರೂ ಅದು ಮತ್ತೆ ಮತ್ತೆ ಚಿಗುರೊಡೆಯುತ್ತಲೇ ಇರುತ್ತದೆ. ಅದು ಆಸೆಯಲ್ಲವೆ! ಅದರಲ್ಲೂ ಗೆಲವಿನ ಆಸೆಯಲ್ಲವೆ! ಅರುವತ್ತಕ್ಕೂ ಹೆಚ್ಚುಸಲ, ‘ತದಾನಾಶಂಸೇ ವಿಜಯಾಯ ಸಂಜಯ’ – ಆಗ ಗೆಲವಿನ ಆಸೆ ಕಮರಿತು – ಎಂಬ ಸೊಲ್ಲು, ಒಂದು ಪಲ್ಲವಿಯಂತೆ ಅನುರಣನಗೊಂಡಿದೆ. ಈ ಪಲ್ಲವಿಗಾಗಿಯೇ ಈ ಭಾಗ ಮುಖ್ಯವೆನಿಸುವುದು. ಮತ್ತು ಈ ಪಲ್ಲವಿಯ ಹಿನ್ನೆಲೆಯಲ್ಲಿಯೇ ‘ಜಯ’ ಎನ್ನುವುದರ ನಿಜಾರ್ಥ ನಿಚ್ಚಳಗೊಳ್ಳುವುದು.

ಈ ನಡುವೆ, ದ್ರೌಪದಿಯ ಸಂದರ್ಭವನ್ನು ಉಲ್ಲೇಖಿಸುತ್ತ, ಆರ್ತಳಾದ, ಅಳುತ್ತಿರುವ, ನಾಥರಿದ್ದರೂ ಅನಾಥೆಯಂತಾದ – ನಾಥವತೀ ಅನಾಥವತ್ – ಒಂದೇ ಬಟ್ಟೆಯಲ್ಲಿರುವ ಪಾಂಚಾಲಿಯನ್ನು ಸಭೆಗೆಳೆತಂದರೆಂದು ಕೇಳಿ – ಗೆಲವಿನ ಆಸೆ ಕೈಬಿಟ್ಟೆ ಎಂಬ ಮಾತಿದೆ. ಇಲ್ಲಿ ಮಿಶ್ರ–ಭಾವವಿದೆ. ಹೀಗಾಗಬಾರದಿತ್ತೆಂದು ಧೃತರಾಷ್ಟ್ರನಿಗೂ ಅನ್ನಿಸಿದೆ. ಅಲ್ಲದೆ ಇಷ್ಟಾದ ಮೇಲೆ ಇನ್ನೇನಾದೀತೋ ಎಂಬ ಭೀತಿಯೂ ಇದೆ. ಆದರೆ ಇವೆಲ್ಲವನ್ನೂ ಗೆಲ್ಲುವ ಆಸೆಗೆ ತಳಕು ಹಾಕಿ ಎಲ್ಲವೂ ಮಣ್ಣುಗೂಡಿದೆ. ದ್ರೌಪದಿಗಾಗಿ ತಾನು ನೊಂದೆನೆನ್ನುವ ಕೃಷ್ಣನ ಮಾತಿಗೂ ಧೃತರಾಷ್ಟ್ರನ ಮಾತಿಗೂ ಎಂಥ ವೈದೃಶ್ಯ!

ಕುರುಡುದೊರೆಗೆ ಎಲ್ಲಿಯವರೆಗೆ ಗೆಲವಿನ ಆಸೆ ಇತ್ತು? ಆಸೆಯನ್ನು ಕೈಬಿಟ್ಟೆನೆಂದರೂ – ಆಸೆಯ ಎಳೆಯೊಂದು ಇನ್ನೂ ಕ್ಷೀಣವಾಗಿಯಾದರೂ ಮಿಡಿಯುತ್ತಿದೆ ಎಂದೇ ಅರ್ಥ. ದುರ್ಯೋಧನನು ತೊಡೆಮುರಿದು ಬಿದ್ದುದನ್ನು ಕೇಳಿದ ಮೇಲೆ, ಕುರುಡುದೊರೆ ಮತ್ತೆ ಮುಂದಿನ ಮಾತು ಆಡಲಾರನೆಂದು, ಅಲ್ಲಿಗೆ ಅವನ ಆಸೆಯ ಕೊನೆಯ ತಂತುವೂ ಹರಿದುಬಿದ್ದಿತೆಂದು, ಎಲ್ಲವೂ ಮುಗಿಯಿತೆನ್ನುವ ಹತಾಶೆಯ ಆಳದಲ್ಲಿ ಅವನು ಮುಳುಗಿರಬಹುದೆಂದುಕೊಂಡರೆ – ಅಲ್ಲ, ಖಂಡಿತ ಅಲ್ಲ. ಮಹಾಭಾರತವು ಕಂಡಂತೆ ಮನುಷ್ಯನ ಆಸೆಯ ಬೇರು ಇನ್ನೂ ಆಳದಲ್ಲಿದೆ, ಪಾತಾಳದಲ್ಲಿದೆ!

ದುರ್ಯೋಧನ ಬಿದ್ದಮೇಲೂ ಅಲ್ಲಿ ಉಗ್ರ ಅಶ್ವತ್ಥಾಮನಿದ್ದಾನೆ. ಪಾಂಡವರ ಮೇಲೆ ಅವನಿಗೆ ನಿತಾಂತ ದ್ವೇಷವಿದೆ. ತನ್ನ ದ್ವೇಷದಲ್ಲಿ ತನ್ನನ್ನೇ ಮರೆಯಬಲ್ಲನು, ಹುಚ್ಚಾಗಬಲ್ಲನು. ಈ ಸ್ಥಿತಿಯೇ ಒಂದು ಸಣ್ಣ ಆಶೆ! ಆದುದರಿಂದ ಅಶ್ವತ್ಥಾಮನಿಗೆ ಸಂಬಂಧಿಸಿದ ವಿವರಗಳು ಕೇಳಿಬರುವವರೆಗೆ, ಧೃತರಾಷ್ಟ್ರನಿಗೆ, ಒಳಗಿನ ಆಸೆ ಪೂರ್ತಿ ಸತ್ತಿರಲಿಲ್ಲ.

ಆಸೆ ಏನೆಂದರೆ – ದುರ್ಯೋಧನನ ಮಡದಿಯಲ್ಲಿ ಅಶ್ವತ್ಥಾಮನ ‘ನಿಯೋಗ’ದಿಂದ ಮಕ್ಕಳನ್ನು ಪಡೆದು – ವ್ಯಾಸರ ‘ನಿಯೋಗ’ದಿಂದ ಧೃತರಾಷ್ಟ್ರಾದಿಗಳು ಜನಿಸಿದಂತೆ – ಆ ಮಗುವಿನ ಹೆಸರಿನಲ್ಲಿ ಹಸ್ತಿನಾವತಿಯ ಅಧಿಕಾರದ ಪ್ರಶ್ನೆಯನ್ನು ಜೀವಂತವಾಗಿಟ್ಟು ರಾಜ್ಯಲಾಭಕ್ಕಾಗಿ ಮತ್ತೊಮ್ಮೆ ಯತ್ನಿಸುವ ಆಶೆ! ಆದರೆ ಯಾವಾಗ ಅಶ್ವತ್ಥಾಮನು, ಮಲಗಿದ್ದ ದ್ರೌಪದಿಯ ಮಕ್ಕಳನ್ನು ಕತ್ತರಿಸಿ, ಉತ್ತರೆಯ ಒಡಲಲ್ಲಿ ಬೆಳೆಯುತ್ತಿರುವ ಶಿಶುವಿಗೆ ಬಾಣವನ್ನೆಸೆದು – ಇಂಥ ಅತಿ ನೀಚಕಾರ್ಯಗಳಿಗಾಗಿ ವ್ಯಾಸರಿಂದ, ಕೃಷ್ಣನಿಂದ ಶಾಪಗ್ರಸ್ತನಾದನೋ – ಆಗ ‘ನಿಯೋಗ’ಕ್ಕೆ ಅನರ್ಹನಾದನು! ಅಲ್ಲಿಗೆ, ಧೃತರಾಷ್ಟ್ರನ ಗೆಲವಿನ ಆಸೆ ಪೂರ್ತಿಯಾಗಿ ಕಮರಿತು! ಭಾರತಭಾವದೀಪಕಾರ, ಈ ವಿವರಣೆಯನ್ನು ನೀಡುತ್ತಾನೆ.

‘ಜಯ’ ಎನ್ನುವ ಪದದ ವಿಶೇಷವಾದ ಅರ್ಥವನ್ನು ಮನನ ಮಾಡಬೇಕಾದ ಹಿನ್ನೆಲೆ ಇದು. ನಮ್ಮೊಳಗಿನ ರಾಗ–ದ್ವೇಷ ನಮ್ಮ ಸಂತತಿಯಲ್ಲಿಯೂ ಮುಂದುವರಿಯುವುದನ್ನು ತೀವ್ರವಾಗಿ ಬಯಸುವೆವು. ಅದನ್ನೇ ಬದುಕಿನ ಗೆಲವು ಎನ್ನುವೆವು! ಅದಕ್ಕಾಗಿಯೇ ಮಕ್ಕಳನ್ನು ಬಯಸುವೆವೆಂದರೂ ತಪ್ಪಾಗದು. ಈ ಅರ್ಥದಲ್ಲಿ ಪೂರ್ವಿಕರನ್ನೂ ನೂತನರನ್ನೂ ಒಂದು ಮಾಡುವೆವು!

ಆದರೆ ಈ ಲೌಕಿಕಕ್ಕಿಂತ ಬೇರೆಯಾದ ಇನ್ನೊಂದು ದೃಷ್ಟಿಯನ್ನು ಮಹಾಭಾರತ ಸೂಚಿಸುವುದು; ಇತಿಹಾಸಕಥನವಾಗಿದ್ದುಕೊಂಡೇ ಸೂಚಿಸುವುದು. ಪದಗಳಿಗೆ ನಾವು ಹಚ್ಚುವ ಅರ್ಥ ನಮ್ಮ ಇತಿಹಾಸದ ಗತಿಯನ್ನೆ ಬದಲಿಸಬಲ್ಲುದೆನ್ನುವುದು. ‘ಜಯ’ ಎಂದಾಗ ನಮ್ಮನ್ನು ನಾವು ಗೆಲ್ಲುವುದೆನ್ನುವ ಅರ್ಥದ ಮೂಲಕ ನಮ್ಮನ್ನೇ ನಾವು ಹೊಸತಾಗಿಪಡೆದಂತೆ – ಎನ್ನುವುದು. ಇದೂ, ನಮ್ಮೊಳಗೇ ನಡೆಯತಕ್ಕ ಒಂದು ‘ನಿಯೋಗ’ವೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.