ಅಸಮರ್ಥವಾದ ಭಾಷೆ

7

ಅಸಮರ್ಥವಾದ ಭಾಷೆ

ಗುರುರಾಜ ಕರಜಗಿ
Published:
Updated:

ನರಭಾಷೆ ಬಣ್ಣಿಪುದೆ ಪರಸತ್ವರೂಪವನು ? |
ಅರಿಯದದು ನಮ್ಮೆದೆಯ ಭಾವಗಳನೊರೆಯೆ ||
ಪರಮಾನುಭವಗಳುಲಿಯನುಭವಿಗಳೊಳಕಿವಿಗೆ |
ಒರಟುಯಾನವೊ ಭಾಷೆ – ಮಂಕುತಿಮ್ಮ || 63 ||

ಪದ-ಅರ್ಥ: ಭಾವಗಳನೊರೆಯೆ=ಭಾವಗಳನ್ನು+ಒರೆಯೆ, ಪರಮಾನುಭವಗಳುಲಿಯನುಭವಿಗಳೊಳಕಿವಿಗೆ =ಪರಮಾನುಭವಗಳ+ಉಲಿಯನು(ಮಾತುಗಳನ್ನು) + ಅನುಭವಿಗಳ (ಸಾಧಕರ)+ಒಳಕಿವಿಗೆ (ಅಂತರಂಗಕ್ಕೆ)

ವಾಚ್ಯಾರ್ಥ: ಮನುಷ್ಯರ ಭಾಷೆ ಪರಸತ್ವದ ರೂಪವನ್ನು ವರ್ಣಿಸಲು ಸಾಧ್ಯವೇ? ನಮ್ಮ ಹೃದಯದ ಭಾವಗಳನ್ನು ತಿಳಿಸಲು ಅದಕ್ಕೆ ತಿಳಿಯದು. ಪರಮಾನುಭವದ ಮಾತುಗಳು ಸಾಧಕರ ಒಳಕಿವಿಗೆ ಮಾತ್ರ ದೊರಕುವಂಥವು. ಅಸಮರ್ಥವಾದ ಭಾಷೆ ಒಂದು ಒರಟು ಪ್ರಯಾಣ.

ವಿವರಣೆ: ಭಾಷೆ ಎನ್ನುವುದು ಒಂದು ಪ್ರದೇಶದ, ಗುಂಪಿನ ಜನರು ಮಾತನಾಡುವ ಅಕ್ಷರಶಬ್ದಗಳ ಒಂದು ಸಮೂಹ. ಮನಸ್ಸಿನ ಭಾವನೆಗಳನ್ನು ದೇವರು ಎಂದುಕೊಂಡರೆ, ಭಾಷೆ ಅದರ ಉತ್ಸವ ಮೂರ್ತಿ. ಅದು ಮನಸ್ಸಿನ ವಾಹನ, ಮನುಷ್ಯನ ಭಾವನೆಗಳನ್ನು ಹೊರಗೆ ತೋರುವ ಸಂಕೇತ. ಭಾಷೆ ಅಂತರಂಗದ ಭಾವನೆಗಳನ್ನು, ಚಿಂತನೆಗಳನ್ನು ಅಕ್ಷರರೂಪದಲ್ಲಿ ಹಿಡಿದಿಟ್ಟುಕೊಂಡು ಮತ್ತೊಬ್ಬರಿಗೆ ತಿಳಿಸಲು ಪ್ರಯತ್ನಿಸುತ್ತದೆ. ತೈತ್ತರೀಯ ಬ್ರಾಹ್ಮಣದಲ್ಲಿ ಒಂದು ಮಾತು ಭಾಷೆಯ ನಾಲ್ಕು ಸೂಕ್ಷ್ಮ ಹಂತಗಳನ್ನು ಗುರುತಿಸುತ್ತದೆ.

ವೈಖರೀಶಕ್ತಿನಿಷ್ಪತ್ತಿರ್ಮಧ್ಯಮಾ ಶ್ರುತಿಗೋಚರಾ |
ದ್ಯೋತಿತಾರ್ಥ ತು ಪಶ್ಯನ್ತೀ ಸೂಕ್ಷ್ಮಾ ವಾಗನಪಾಯಿನೀ ||

ವೈಖರೀ ಎನ್ನವುದು ಬಾಹ್ಯ ಶಕ್ತಿಯುಳ್ಳದ್ದು - ಸ್ಥೂಲಭಾಷೆ, ಮಧ್ಯಮಾವು ಕಿವಿಗೊಟ್ಟು ಆಲಿಸಿದವರಿಗೆ ಮಾತ್ರ ಕೇಳುವಂಥದ್ದು- ಸೂಕ್ಷ್ಮವಾದದ್ದು, ಪಶ್ಯನ್ತಿ, ಅರ್ಥದ ಛಾಯೆಯನ್ನು ಮಾತ್ರ ತೋರುವುದು, ಪರಾ ಎಂಬುದು ಅತ್ಯಂತ ಸೂಕ್ಷ್ಮವೂ ಶುದ್ಧವೂ ಆದದ್ದು- ಇದು ಆತ್ಮವಸ್ತುವನ್ನು ಕುರಿತದ್ದು. ನಾವು ಮಾತನಾಡುವ, ಬರೆಯುವ ಓದುವ ಭಾಷೆ ವೈಖರೀ ಮಟ್ಟದ್ದು. ಆದರೆ ಇದು ಪರಾ ಮಟ್ಟದ ಆತ್ಮವಸ್ತುವನ್ನು ವರ್ಣಿಸಲು ಅಸಮರ್ಥವಾದುದು. ಪರಸತ್ವದ ಚಿಂತನೆ ಮಾತಿಗೂ, ಮನಸ್ಸಿಗೂ ಸಿಕ್ಕ ತಕ್ಕದ್ದಲ್ಲ. ಅದಕ್ಕೇ ವೇದ ಹೇಳುತ್ತದೆ- ‘ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ’. ಎಂದರೆ ಆತ್ಮವಸ್ತುವನ್ನು ವಿವರಿಸುವಲ್ಲಿ ಮನಸ್ಸು ಮತ್ತು ಭಾಷೆಗಳು ನಿರಾಸೆಯಿಂದ ಹಿಂತಿರುಗಿಬಿಟ್ಟವು. ಆದ್ದರಿಂದ ವೈಖರಿಯಲ್ಲಿ ಪರಸತ್ವವನ್ನು ವರ್ಣಿಸುವುದು ಒರಟು ಪೊರಕೆಯಿಂದ ಸೂಕ್ಷ್ಮಚಿತ್ರವನ್ನು ಬಿಡಿಸಿದಂತಾಗುತ್ತದೆ.

ಅದಕ್ಕೆ ಈ ಕಗ್ಗ ಹೇಳುತ್ತದೆ, ನರಭಾಷೆ ನಮ್ಮ ಹೃದಯದ ಭಾವನೆಗಳನ್ನೇ ತಿಳಿಸಲು ಅಸಮರ್ಥವಾಗಿರುವಾಗ ಪರಸತ್ವರೂಪವನ್ನು ಹೇಗೆ ವರ್ಣಿಸೀತು? ಹಾಗಾದರೆ ಈ ಪರಸತ್ವವನ್ನು ತಿಳಿಯುವುದು ಹೇಗೆ? ಅದು ಒಂದು ಪರಮಾನುಭವ, ಮಾತನ್ನು ಮೀರಿದ್ದು, ಅದರ ನುಡಿ ಅನುಭವಿಗಳ ಆಂತರ್ಯಕ್ಕೆ, ಒಳಕಿವಿಗೆ ಮಾತ್ರ ಕೇಳಿಸುವಂಥದ್ದು. ನಮ್ಮ ಭಾಷೆ ಒಂದು ಒರಟು ಪ್ರಯಾಣ, ಸೂಕ್ಷ್ಮವಾದ ಆಧ್ಯಾತ್ಮದರ್ಶನಕ್ಕೆ ಒಗ್ಗಿದ್ದಲ್ಲ. ಆದರೆ ಏನು ಮಾಡೋಣ? ಅದೊಂದೇ ನಮಗಿರುವ ಊರುಗೋಲು. 

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !