ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗಲಿಕೆಯ ಖಾಲಿತನ; ಆರ್ಥಿಕ ನೆರವು

ಹುತಾತ್ಮ ಯೋಧರ ಕುಟುಂಬಕ್ಕೆ ದೊರೆಯುತ್ತಿರುವ ನೆರವು, ಅವಲಂಬಿತರ ಗೌರವಯುತ ಬದುಕಿಗೆ ಅನುವು ಮಾಡಿಕೊಡುವ ಮಟ್ಟದಲ್ಲಿಲ್ಲವೇ ಎಂಬುದನ್ನು ಪರಿಶೀಲಿಸಬೇಕಿದೆ
Last Updated 28 ಫೆಬ್ರುವರಿ 2019, 20:28 IST
ಅಕ್ಷರ ಗಾತ್ರ

ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಸೈನಿಕರ ಕುಟುಂಬಗಳಿಗೆ ನೆರವು ನೀಡಲು ಕೆಲ ಉದ್ದಿಮೆ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಮುಂದೆ ಬಂದಿದ್ದಾರೆ. ಸಂಕಷ್ಟದಲ್ಲಿರುವ ಯೋಧರ ಕುಟುಂಬ ವರ್ಗದವರಿಗೆ ನೆರವಾಗುವುದು ಸ್ವಾಗತಾರ್ಹವೇ ಆದರೂ, ಈ ಬೆಳವಣಿಗೆಯು ವ್ಯವಸ್ಥೆ ತನಗೆ ತಾನು ಕೇಳಿಕೊಳ್ಳಬೇಕಿರುವ ಕೆಲ ಪ್ರಶ್ನೆಗಳತ್ತಲೂ ಬೊಟ್ಟು ಮಾಡುತ್ತಿದೆ.

ಸಮಸ್ಯೆಗಳನ್ನು ವ್ಯಕ್ತಿಗತ ನೆಲೆಗಟ್ಟಿನಲ್ಲಿ ಪರಿಭಾವಿಸಿ ಅದಕ್ಕೆ ಪರಿಹಾರ ಒದಗಿಸುವುದಕ್ಕಿಂತ, ವ್ಯವಸ್ಥೆಯಲ್ಲಿನ ಓರೆಕೋರೆಗಳನ್ನು ಗುರುತಿಸಿ ಅವುಗಳಿಗೆ ಇಡೀ ವ್ಯವಸ್ಥೆಯ ಮಟ್ಟದಲ್ಲಿ ಪರಿಹಾರ ಹುಡುಕುವುದು ಸೂಕ್ತ ಎಂಬುದನ್ನು ಮನಗಾಣಬೇಕಿದೆ. ಮೃತ ಸೈನಿಕರ ಕುಟುಂಬ ವರ್ಗದ ಅವಲಂಬಿತರಿಗೆ ಸೇನೆ ಹಾಗೂ ಸರ್ಕಾರದಿಂದ ಪ್ರಸ್ತುತ ದೊರೆಯುತ್ತಿರುವ ನೆರವು ಮತ್ತು ಸೌಲಭ್ಯಗಳು ಅವರು ಗೌರವಯುತ ಬದುಕು ರೂಪಿಸಿಕೊಳ್ಳಲು ಅನುವು ಮಾಡಿಕೊಡುವ ಮಟ್ಟದಲ್ಲಿಲ್ಲವೇ ಎಂಬುದನ್ನು ಪರಿಶೀಲಿಸಬೇಕಿದೆ. ಒಂದು ವೇಳೆ, ಸರ್ಕಾರದಿಂದ ಪ್ರಸ್ತುತ ದೊರೆಯುತ್ತಿರುವ ಸವಲತ್ತುಗಳು ಸಾಕಾಗುತ್ತಿಲ್ಲವೆಂದಾದರೆ, ಕರ್ತವ್ಯದ ವೇಳೆ ಸಾವನ್ನಪ್ಪುವ ಪ್ರತಿ ಸೈನಿಕನ ಕುಟುಂಬ ವರ್ಗಕ್ಕೂ ಅಗತ್ಯವಿರುವಷ್ಟು ಆರ್ಥಿಕ ನೆರವು ಒದಗಿಸುವುದು ಸರ್ಕಾರದ ಆದ್ಯತೆಯಾಗಬೇಕು.

ಇದೇ ವೇಳೆ, ಸರ್ಕಾರದಿಂದ ಮೃತ ಯೋಧರ ಕುಟುಂಬ ವರ್ಗಕ್ಕೆ ಸಮರ್ಪಕ ನೆರವು ದೊರೆಯುತ್ತಿರುವುದೇ ಆದಲ್ಲಿ, ನಾಗರಿಕ ಸಮಾಜ ಸೈನಿಕರ ಕುಟುಂಬಕ್ಕೆ ನೆರವಾಗಲು ಇರುವ ಇತರ ಮಾರ್ಗಗಳತ್ತ ಕೊಂಚ ಸಾವಧಾನದಿಂದ ಪರಿಶೀಲಿಸಬೇಕು. ವ್ಯಕ್ತಿಯೊಬ್ಬರ ಅಗಲಿಕೆಯು ಅವರ ಅವಲಂಬಿತರಲ್ಲಿ ಉಂಟು ಮಾಡುವ ನೋವು ಮತ್ತು ಖಾಲಿತನವನ್ನು ಆರ್ಥಿಕ ನೆರವು ಶಮನಗೊಳಿಸಲಾರದು. ಹಾಗಾಗಿ, ಯೋಧನ ಸಾವಿಗೆ ಮಿಡಿಯುವ ನಾಗರಿಕ ಸಮಾಜ, ಯೋಧನೊಬ್ಬ ಕರ್ತವ್ಯದ ವೇಳೆ ಸಾವನ್ನಪ್ಪುವ ಸಾಧ್ಯತೆಯನ್ನು ಕಡಿಮೆಗೊಳಿಸಲು ಇರುವ ಆಯ್ಕೆಗಳಿಗೆ ಮನ್ನಣೆ ನೀಡುವ ಮನಸ್ಥಿತಿ ಹೊಂದಿರಬೇಕಲ್ಲವೇ?

-ಎಚ್.ಕೆ.ಶರತ್, ಹಾಸನ

ಪಕ್ಷಗಳು ಪ್ರಬುದ್ಧತೆ ತೋರಲಿ

ಭಯೋತ್ಪಾದನೆ ಎಂಬುದು ಈ ಜಗತ್ತಿಗಂಟಿದ ಶಾಪ. ತನ್ನ ಧರ್ಮವೇ ಶ್ರೇಷ್ಠ ಎಂಬ ಭ್ರಮೆಗೆ ಬಿದ್ದವರೆಲ್ಲ ಜಗತ್ತನ್ನು ಅಕ್ಷರಶಃ ಅಗ್ನಿಕುಂಡಕ್ಕೆ ನೂಕಿದ್ದಾರೆ. ಸಮಸ್ಯೆಯ ಬೇರು ಎಲ್ಲಿದೆ ಎಂದು ಹುಡುಕಿ ನಾಶ ಮಾಡದೇ ಹೋದರೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ಸಂಘಟಿತ ಹೋರಾಟ ಅಗತ್ಯ. ಪಕ್ಷಗಳು ಪರಸ್ಪರರನ್ನುದೋಷಿಯಾಗಿಸುವುದು ಶುರುವಾಗಿದೆ. ಕನಿಷ್ಠ ಈ ಸಂದರ್ಭದಲ್ಲಾದರೂ ಅವು ರಾಜಕೀಯದ ಬೇಳೆ ಬೇಯಿಸಿಕೊಳ್ಳುವುದನ್ನು ಬಿಡಬೇಕು. ನಾವು ಒಂದಾಗಿದ್ದು ನಮ್ಮ ಸೈನಿಕರಿಗೆ ನೈತಿಕ ಬಲ ತುಂಬೋಣ, ಒಟ್ಟಾಗಿ ತೀರ್ಮಾನ ತೆಗೆದುಕೊಳ್ಳೋಣ ಎಂಬ ಪ್ರಬುದ್ಧತೆ ನಮ್ಮ ಎಲ್ಲ ಪ್ರಮುಖ ಪಕ್ಷಗಳಿಗೆ ಬಂದರೆ ಸಮಸ್ಯೆಯ ಪರಿಹಾರ ಸಾಧ್ಯ. ಪಾಕಿಸ್ತಾನದ ಹುನ್ನಾರಗಳನ್ನು ವಿಶ್ವ ಮಟ್ಟದಲ್ಲಿ ಪ್ರಚುರಪಡಿಸಿ ಆರ್ಥಿಕ ದಿಗ್ಬಂಧನ ಹೇರುವಂತೆ ಮಾಡಿ, ಅದರ ಬೆನ್ನೆಲುಬು ಮುರಿಯುವ ಬಗ್ಗೆ ಚಿಂತಿಸಬೇಕಿದೆ.

ಈ ವಿಚಾರದಲ್ಲಿ ಸರ್ಕಾರ ಏನೇ ತೀರ್ಮಾನ ತೆಗೆದುಕೊಂಡರೂ ಅದನ್ನು ಎಲ್ಲ ವಿರೋಧ ಪಕ್ಷಗಳೂ ಏಕಕಂಠದಿಂದ ಅನುಮೋದಿಸುವ ರೂಢಿ ಶುರುವಾಗಲೇಬೇಕು. ದಾಳಿಯ ತೀರ್ಮಾನ ತೆಗೆದುಕೊಂಡರೆ ಚುನಾವಣೆಗಾಗಿ ಎನ್ನುವುದು, ಮಾಡದೇ ಇದ್ದರೆ ಇವರ ಕೈಲಿ ಏನೂ ಆಗದು ಎಂಬ ಮಾತುಗಳು ವಿರೋಧ ಪಕ್ಷದವರಿಂದ ಬರಲೇಬಾರದು. ಹಾಗೆಯೇ ಹಿಂದೆಲ್ಲ ಬಹು ಗುಟ್ಟಾಗಿ ನಡೆಯುತ್ತಿದ್ದ ಸೇನಾ ಕಾರ್ಯಾಚರಣೆಗಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುವುದನ್ನು ಸರ್ಕಾರವೂ ಕೈ ಬಿಡಬೇಕು. ಹೀಗೆ ಆಡಳಿತ ಮತ್ತು ವಿರೋಧ ಪಕ್ಷಗಳೆಲ್ಲವೂ ಚುನಾವಣಾ ರಾಜಕೀಯ ನಿಲ್ಲಿಸಿ, ಸಮಸ್ಯೆಯ ಪರಿಹಾರದತ್ತ ಗಮನ ಹರಿಸಿದರೆ ಮುಂದಿನ ದಿನಗಳಲ್ಲಿ ಒಳ್ಳೆಯ ಪರಿಣಾಮಗಳನ್ನು ಕಾಣಬಹುದೇನೊ.

-ದೀಪಾ ಹಿರೇಗುತ್ತಿ, ಕೊಪ್ಪ

ಸಂಯಮ ಪಾಲಿಸಬೇಕು

‘ಯುದ್ಧದ ಸಂದರ್ಭದಲ್ಲಿ ಯುವಕರು ಸಾಯುತ್ತಾರೆ, ಮುದುಕರು ಮಾತನಾಡುತ್ತಾರೆ’ ಎಂದು ಅನುಭವಿಗಳು ಹೇಳುತ್ತಾರೆ. ಪಾಕಿಸ್ತಾನದ ಪ್ರಧಾನಿ ಕೂಡ ಯುದ್ಧದ ಭಯಾನಕ ಪರಿಣಾಮಗಳ ಕುರಿತು ಮಾತನಾಡಿದ್ದಾರೆ. ಭಯೋತ್ಪಾದನೆಯನ್ನು ನಿಗ್ರಹಿಸುವ ವಿಚಾರದಲ್ಲೂ ಅವರು ಇದೇ ರೀತಿಯ ಕಾಳಜಿ ತೋರಿಸಿದ್ದರೆ, ಈಗಿನ ಸ್ಥಿತಿ ಬರುತ್ತಿರಲಿಲ್ಲ.

ದುಃಖದ ಸಂಗತಿಯೆಂದರೆ, ರಾಜಕೀಯ ಕಾರ್ಯಕರ್ತರು ಉದ್ವೇಗಕಾರಿ ಪ್ರತಿಕ್ರಿಯೆಗಳನ್ನು ಹರಿಯಬಿಡತೊಡಗಿರುವುದು. ನಾವು ಶಾಂತಿ ಎಂದರೆ ಕೆಲ ಮಾಧ್ಯಮಗಳು ಕ್ರಾಂತಿ ಎನ್ನುತ್ತಿವೆ!

ಉಗ್ರರ ವಿರುದ್ಧ ಭಾರತದ ನಡೆ ಸಮರ್ಪಕವಾಗಿದೆ. ಕಾಶ್ಮೀರದ ಕುರಿತು ಪಾಕಿಸ್ತಾನ ಹಪಹಪಿಸುವುದು ಅನಗತ್ಯ. ಅದು ಭಾರತದ ಅವಿಭಾಜ್ಯ ಅಂಗ. ಹಿಂದಿನವರು ಇಂದಿನವರೆಗೆ ಒಂದು ಸಂಯಮ ಕಾಯ್ದುಕೊಂಡು ಬಂದಿದ್ದಾರೆ. ಇಬ್ಬರ ಜಗಳ ಮೂರನೆಯವರಿಗೆ ‘ಲಾಭ’ ಆಗಬಾರದು. ಚೀನಾಅಂತಹ ಲಾಭ ಪಡೆಯಲು ಹವಣಿಸುತ್ತಿದೆ. ಈ ಎಚ್ಚರ ಇರಲಿ. ವಿಶ್ವ ಸಮುದಾಯವು ಭಾರತದ ಪರವಾಗಿದೆ. ನಾವೆಲ್ಲ ಈಗ ಜಾಣ್ಮೆ ತೋರಬೇಕು. ಸಂಯಮ ಪಾಲಿಸಬೇಕು. ಭಾರತವು ಪ್ರಬುದ್ಧತೆ
ಯಿಂದ ಮುಂದಿನ ಹೆಜ್ಜೆ ಇಡಲಿ.

-ತಿರುಪತಿ ನಾಯಕ್,ಆಶಿಹಾಳ ತಾಂಡಾ, ರಾಯಚೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT