ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರಳಿನೊಡನೆಯ ಬದುಕು

Last Updated 17 ಜೂನ್ 2019, 20:35 IST
ಅಕ್ಷರ ಗಾತ್ರ

ರಾಯ ಮುದಿದಶರಥನನಾಡಿಸುತ ಕೈಕೇಯಿ |
ಸ್ಪೀಯ ವಶದಲಿ ಕೋಸಲವನಾಳಿದಂತೆ ||
ಮಾಯೆ ಬೊಮ್ಮನ ಬಿನದವಡಿಸಿ ನಮ್ಮೀ ಜಗವ |
ಕಾಯುವಳು ತನ್ನಿಚ್ಛೆ – ಮಂಕುತಿಮ್ಮ || 146 ||

ಪದ-ಅರ್ಥ: ರಾಯ=ರಾಜ, ಮುದಿದಶರಥನನಾಡಿಸುತ=ಮುದಿ+ದಶರಥನನು+ಆಡಿಸುತ, ಸ್ಪೀಯ=ತನ್ನ, ಕೋಸಲವನಾಳಿದಂತೆ=ಕೋಸಲವನು(ಕೋಸಲ ರಾಜ್ಯವನ್ನು)+ಆಳಿದಂತೆ, ಬಿನದವಡಿಸಿ=ವಿನೋದಪಡಿಸಿ, ರಂಜಿಸಿ
ವಾಚ್ಯಾರ್ಥ: ವೃದ್ಧ ರಾಜನಾದ ದಶರಥನನ್ನು ತನ್ನ ಕೈಗೊಂಬೆಯಂತೆ ಆಡಿಸುತ್ತ, ಕೋಸಲದೇಶವನ್ನು ತನ್ನ ವಶದಲ್ಲಿ ತೆಗೆದುಕೊಂಡು ಆಳಿದಂತೆ, ಮಾಯೆ ಪರಬ್ರಹ್ಮನನ್ನು ಸಂತೋಷಪಡಿಸಿ ತನ್ನ ಇಚ್ಛೆಯಂತೆ ಈ ಜಗತ್ತನ್ನೂ ಕಾಯುತ್ತಾಳೆ.

ವಿವರಣೆ: ಕಗ್ಗ ಮಾಯೆಯ ಪಾತ್ರವನ್ನು ಹೇಳಲು ರಾಮಾಯಣದ ಸುಂದರ ಪ್ರಸಂಗವೊಂದನ್ನು ಹೋಲಿಕೆಯಾಗಿ ಬಳಸಿಕೊಳ್ಳುತ್ತದೆ. ರಾಜ ದಶರಥ ವಯಸ್ಸಾದವನು. ಅವನಿಗೆ ಸುಂದರಿಯಾದ ಮತ್ತು ಅತ್ಯಂತ ಕಿರಿಯವಳಾದ ಕೈಕೇಯಿಯ ಮೇಲೆ ಹೆಚ್ಚು ಮೋಹ. ಅದು ಆಕೆಗೂ ಗೊತ್ತು. ಅದೇ ಮೋಹವೇ ದಶರಥನ ದೌರ್ಬಲ್ಯವೂ ಹೌದು. ಆ ಮೋಹವನ್ನೇ ಬಂಧನವನ್ನಾಗಿ ಮಾಡಿಕೊಂಡು ಕೈಕೇಯಿ ದಶರಥನನ್ನು ತನಗೆ ಬೇಕಾದ ಹಾಗೆ ಆಡಿಸುತ್ತಿದ್ದಳು. ತನ್ನ ಮಗ ಭರತನಿಗೆ ಪಟ್ಟಾಭಿಷೇಕ ಮಾಡಿ ರಾಮನನ್ನು ಕಾಡಿಗೆ ಕಳಿಸುವಂತೆ ಕೇಳಲು ಕೈಕೇಯಿ ಕೋಪಗೃಹಕ್ಕೆ ಸೇರಿದಾಗ ಆಕೆಯ ಮನವೊಲಿಸಲು ದಶರಥ ಪಟ್ಟ ಕಷ್ಟವನ್ನು ನೋಡಬೇಕು. ಆಕೆಯ ಮೋಹದಲ್ಲಿ ಆತ ಭ್ರಮಾಧೀನನಾದವನಂತೆ ವರ್ತಿಸುತ್ತಾನೆ. ಅವನ ಮಾತುಗಳು ಗಾಬರಿ ಹುಟ್ಟಿಸುತ್ತವೆ. “ಹೇಳು, ನಿನಗೇನು ಬೇಕು? ನಾನು ನನ್ನ ಸುಪುತ್ರ ರಾಮನ ಮೇಲೆ ಆಣೆ ಮಾಡಿ ಹೇಳುತ್ತೇನೆ. ನೀನು ಹೇಳಿದರೆ ಮರಣದಂಡನೆಗೆ ಒಳಗಾದ ವ್ಯಕ್ತಿಯನ್ನು ಮುಕ್ತನಾಗಿಸುತ್ತೇನೆ, ನಿರಪರಾಧಿಯನ್ನು ಶೂಲಕ್ಕೇರಿಸಿಬಿಡುತ್ತೇನೆ” ಹೀಗೆಲ್ಲ ವಿಸ್ಮತಿಗೆ ಒಳಗಾದಂತೆ ಮಾಡುತ್ತಾನೆ. ಕೊನೆಗೆ ತನ್ನ ಮಾತಿಗೆ ತಾನೇ ಸಿಕ್ಕು ಬಿದ್ದು ರಾಮನ ವನವಾಸಕ್ಕೆ ಮನಸ್ಸಿಲ್ಲದೆ ಒಪ್ಪುತ್ತಾನೆ. ಇದು ರಾಜನನ್ನು ಮೋಹಗೊಳಿಸಿದ ಕೈಕೇಯಿಯ ಬಲೆ. ಮುಂದೆ ಆಕೆ ತನಗೆ ಬೇಕಾದ ವರವನ್ನು ಪಡೆದುಕೊಂಡಳು.

ಇದೇ ರೀತಿ ಪರಬ್ರಹ್ಮನ ಸೃಷ್ಟಿಯೇ ಆದ, ನೆರಳೇ ಆದ, ಮಾಯೆ ನಮ್ಮ ಜಗತ್ತನ್ನು ತನ್ನಿಚ್ಛೆಯಂತೆ ಆಳುತ್ತಿರಬೇಕಾದರೆ ಆಕೆ ಬ್ರಹ್ಮನನ್ನು ಸಂತೋಷಪಡಿಸಿರಬೇಕು. ಆಕೆಯ ಕಾರ್ಯದಿಂದ ತೃಪ್ತನಾದ ಭಗವಂತ ಆಕೆಗೆ ಜಗತ್ತನ್ನು ಹೇಗಾದರೂ ನಡೆಸುವ ಸ್ವಾತಂತ್ರ್ಯವನ್ನು ನೀಡಿರಬಹುದು ಎನ್ನುತ್ತದೆ ಕಗ್ಗ.

ಇಲ್ಲಿ ಒಂದು ಕ್ಷಣ ಚಿಂತಿಸಿದರೆ ಬೇರೊಂದು ಅರ್ಥ ಹೊಳೆದೀತು. ದಯವಿಟ್ಟು ಗಮನಿಸಿ, ನೆರಳಿಗೆ ಸ್ವಂತ ಇರುವಿಕೆ ಇಲ್ಲ, ಅದಕ್ಕೆ ಸ್ವತಂತ್ರವಾದ ಚಲನೆಯೂ ಇಲ್ಲ. ಅದು ಸಂಪೂರ್ಣವಾಗಿ ಮೂಲವಸ್ತುವಿನ ಮೇಲೆ ಅವಲಂಬಿತವಾದದ್ದು. ಮೂಲ ವಸ್ತು ಚಲಿಸಿದರೆ ಅದೂ ಚಲಿಸುತ್ತದೆ, ನಿಂತರೆ ನಿಲ್ಲುತ್ತದೆ. ಅದರ ಚಲನವಲನವೆಲ್ಲವನ್ನು ನಿರ್ದೇಶಿಸುವುದು ಮೂಲ ವಸ್ತು. ಅಂದರೆ ಮಾಯೆ ಸರ್ವತಂತ್ರ ಸ್ವತಂತ್ರವೆಂದು ತೋರಿದರೂ ಅದು ಸತ್ಯವಲ್ಲ. ಮಾಯೆಯೆಂಬ ನೆರಳಿಗೆ ಮೂಲವಸ್ತು ಬ್ರಹ್ಮ. ಬ್ರಹ್ಮದ ನಿರ್ದೇಶದಂತೆಯೇ ಮಾಯೆ ಕಾರ್ಯ ಮಾಡುತ್ತದೆ. ಆದರೆ ನಮಗೆ ಮಾಯೆ ಕಾಣುತ್ತದೆ, ಮೂಲಶಕ್ತಿಯಾದ ಬ್ರಹ್ಮವಸ್ತು ಕಾಣುವುದಿಲ್ಲ. ಪ್ರಜ್ಞಾದೃಷ್ಟಿಯನ್ನು ಹೊಂದಿ ಅನಂತವಾದ ಸತ್ಯವನ್ನು ಕಾಣುವ ಶಕ್ತಿ ಇದ್ದವರೇ ಸಂತರು, ಜ್ಞಾನಿಗಳು. ಅವರಿಗೆ ಪರವಸ್ತುವಿನ ದರ್ಶನ ಸಾಧ್ಯ. ಆಗ ಮಾಯೆಯ ಬಲೆ ಮಾಯವಾಗುತ್ತದೆ. ಅಲ್ಲಿಯವರೆಗೆ ನೆರಳಿನೊಡನೆ ನಮ್ಮ ಬದುಕು ಓಲಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT