ದೇವತೆಗಳ ಸೃಷ್ಟಿ

7

ದೇವತೆಗಳ ಸೃಷ್ಟಿ

ಗುರುರಾಜ ಕರಜಗಿ
Published:
Updated:

ನರರ ಭಯಬಯಕೆಗಳೆ ಸುರರ ತಾಯ್ತಂದೆಗಳೊ ? |

ಸುರರಟ್ಟಹಾಸದಿನೆ ನರಭಕ್ತಿಯೊರಲೊ ? ||

ಪರಿಕಿಸುವರೇನವರ್ಗಳನ್ಯೋನ್ಯ ಶಕ್ತಿಗಳ ? |
ಧರುಮವೆಲ್ಲಿದರಲ್ಲಿ ? – ಮಂಕುತಿಮ್ಮ ||24||

ಪದ ಅರ್ಥ: ಸುರರಟ್ಟಹಾಸದಿನೆ=ಸುರರ(ದೇವತೆಗಳ) + ಅಟ್ಟಹಾಸದಿನೆ (ಅಬ್ಬರದಿಂದ), ನರಭಕ್ತಿಯೊರಲೊ =ನರಭಕ್ತಿ (ಮನುಷ್ಯರ ಭಕ್ತಿಯ)+ಒರಲೋ (ದೀನತೆಯ ಕೂಗು), ಪರಿಕಿಸುವರೇನವರ್ಗಳನ್ಯೋನ್ಯ = ಪರಿಕಿಸುವರೇನು(ಪರೀಕ್ಷಿಸುವರೇನು)+ಅವರ್ಗಳ(ಅವರವರ)+ಅನ್ಯೋನ್ಯ(ಬೇರ್ಪಡಿಸಲಾರದ), ಧರುಮವೆಲ್ಲಿದರಲ್ಲಿ = ಧರುಮ(ಧರ್ಮ)+ಎಲ್ಲಿ+ಇದರಲ್ಲಿ.

ವಾಚ್ಯಾರ್ಥ: ದೇವತೆಗಳ ಸೃಷ್ಟಿಗೆ ಮನುಷ್ಯರ ಭಯ, ಬಯಕೆಗಳೇ ಕಾರಣವೇ? ಅಥವಾ ದೇವತೆಗಳ ಅಟ್ಟಹಾಸದಿಂದ ನರರು ಭಕ್ತಿಯ ಕೂಗನ್ನು ಹಾಕುತ್ತಿದ್ದಾರೆಯೇ? ಹೀಗೆ ದೇವತೆಗಳು ಹಾಗು ಮನುಷ್ಯರು ಪರಸ್ಪರರ ಶಕ್ತಿಗಳನ್ನ ಅಳೆದು ನೋಡುತ್ತಿದ್ದಾರೆಯೇ? ಇದರಲ್ಲಿ ಧರ್ಮವೆಲ್ಲಿದೆ?

ವಿವರಣೆ: ‘ಏಕಂ ಸತ್ ವಿಪ್ರಾ ಬಹುದಾವದಂತಿ’ ಎನ್ನುವುದು ಒಂದು ಪೂರ್ವಿಕರ ಉಕ್ತಿ. ಅಂದರೆ, ದೇವರು ಒಬ್ಬನೇ ಆದರೆ ಜನರು ಅವನನ್ನು ಬೇರೆ ಬೇರೆ ಹೆಸರಿನಲ್ಲಿ ಗುರುತಿಸುತ್ತಾರೆ. ಯಾಕೆ ಹೀಗೆ ಅನೇಕ ದೇವರುಗಳು ಬೇಕಿತ್ತು? ನಮ್ಮ ಪರಂಪರೆಯಲ್ಲಿ ಹೇಳುವಂತೆ ಮೂವತ್ತು ಮೂರು ಕೋಟಿ ದೇವತೆಗಳು ಇದ್ದಾರಂತೆ. ಇವರೆಲ್ಲ ಬೇಕಿತ್ತೇ? ಇಷ್ಟೊಂದು ದೇವರುಗಳ ಅವಶ್ಯಕತೆ ಏನಿತ್ತು? ಅವರನ್ನೆಲ್ಲ ಸೃಷ್ಟಿ ಮಾಡಿದ್ದು ಯಾರು? ಒಬ್ಬನೇ ದೇವರಿದ್ದರೆ ಸಾಕಿತ್ತಲ್ಲ? ಇದಕ್ಕೆ ಕಾರಣ ಲೋಕದಲ್ಲಿರುವ ನೂರಾರು ಮತಗಳು. ಮತ ಎಂದರೆ ಅಭಿಪ್ರಾಯ ಅಥವಾ ನಂಬಿಕೆ. ಒಂದೊಂದು ಮತಕ್ಕೆ ಒಂದೊಂದು ನಂಬಿಕೆ. ಪ್ರತಿಯೊಬ್ಬ ವ್ಯಕ್ತಿ, ಪ್ರತಿಯೊಂದು ಮತ ಅನೇಕ ಪದಾರ್ಥಗಳಲ್ಲಿ ದೈವಮಹಿಮೆಯನ್ನು ಭಾವಿಸಿಕೊಂಡು ಪೂಜಿಸಿಕೊಂಡು ಬಂದದ್ದಾಗಿದೆ. ಅದರಲ್ಲಿ ಭಕ್ತಿ ಮೂಡಿದೆ. ಆದರೆ ನಮ್ಮ ಭಕ್ತಿಯಲ್ಲಿ ಶ್ರದ್ಧೆ ಎಷ್ಟು ಭಾಗ, ಭೀತಿ ಎಷ್ಟು ಭಾಗ? ನಮ್ಮಲ್ಲಿ ಬಹಳಷ್ಟು ಜನರ ಭಕ್ತಿಗೆ ಭೀತಿಯೇ ಕಾರಣ. ‘ಈ ಶನಿವಾರ ಪೂಜೆ ಮಾಡದಿದ್ದರೆ ಯಾವ ತೊಂದರೆ ಕಾದಿದೆಯೋ?’, ’ನಮ್ಮ ಕುಲದೇವರು ತುಂಬ ಉಗ್ರ, ಆಚಾರದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಗ್ರಹಚಾರ ಸರಿಯಾಗಿರೊಲ್ಲ’ ಎಂದೆಲ್ಲ ಮಾತನಾಡುವುದಿಲ್ಲವೇ?

ಅಧಿಕಾರಿಯ ದರ್ಪ ಹೆಚ್ಚಾದಾಗ ಅವನನ್ನು ಲಂಚಕೊಟ್ಟು ತಮ್ಮ ಪರವಾಗಿ ಒಲಿಸಿಕೊಳ್ಳುವಂತೆ ನಾವೂ ಕಲ್ಪಿಸಿಕೊಂಡ ದೇವರೊಡನೆ ವ್ಯವಹಾರ ಮಾಡುತ್ತೇವೆ. ‘ನಮಗೆ ಗಂಡುಮಗುವಾದರೆ ಬೆಳ್ಳಿ ತೊಟ್ಟಿಲು ಮಾಡಿಸಿಕೊಡುತ್ತೇನೆ’, ‘ನನ್ನ ಮೇಲಿನ ಕೇಸು ಖುಲಾಸೆಯಾದರೆ ಬಂಗಾರದ ಮುಖ ಮಾಡಿಸುತ್ತೇನೆ’, ‘ಮಗನಿಗೆ ಒಳ್ಳೆಯ ನೌಕರಿ ಸಿಕ್ಕಿದರೆ ನಿನಗೆ ಸರ್ವಾಲಂಕಾರ ಸೇವೆ ಮಾಡುತ್ತೇನೆ’. ಹೀಗೆ ದೇವಸ್ಥಾನವನ್ನು ಅಂಗಡಿಯನ್ನಾಗಿ ಮಾಡಿದ್ದೇವೆ.

ಹೀಗೆ ನಮ್ಮ ಭಯಗಳು, ಅಪೇಕ್ಷೆಗಳು ಹೆಚ್ಚಾದಂತೆಲ್ಲ ದೇವತೆಗಳೂ ಹೆಚ್ಚಾಗುತ್ತಿದ್ದಾರೆ. ಅದಕ್ಕೇ ಡಿ.ವಿ.ಜಿ. ಕೇಳುವುದು, ದೇವತೆಗಳ ಸೃಷ್ಟಿಗೆ ಮನುಷ್ಯನ ಭಯ, ಅಪೇಕ್ಷೆಗಳೇ ಕಾರಣವೇ? ಅಥವಾ ಈ ದೇವತೆಗಳು ನಿಜವಾಗಿಯೂ ಇದ್ದು ಅವರು ತಮ್ಮ ಅಧಿಕಾರದಿಂದ ಅಬ್ಬರಿಸುವುದರಿಂದಲೇ ಗಾಬರಿಯಾದ ಮನುಷ್ಯರು ಭಕ್ತಿಯ ಹೆಸರಿನಿಂದ ಅಸಹಾಯಕರಾಗಿ ನರಳುತ್ತಿದ್ದಾರೆಯೇ? ಒಂದು ರೀತಿಯಲ್ಲಿ ಗಮನಿಸಿದರೆ ಮನುಷ್ಯರ ಭಯ, ಅಪೇಕ್ಷೆಗಳಿಂದ ನೂರಾರು ದೇವತೆಗಳ ಸೃಷ್ಟಿ ಮತ್ತು ಆ ದೇವತೆಗಳು ತಮಗೇನು ತೊಂದರೆ ಕೊಟ್ಟಾರೋ ಎಂದುಕೊಂಡ ಜನರ ದೀನ ಕೂಗು, ಪರಸ್ಪರ ಅನ್ಯೋನ್ಯವಾದವುಗಳು. ಒಂದನ್ನು ಬಿಟ್ಟು ಇನ್ನೊಂದಿಲ್ಲ. ಭಕ್ತರಿಂದ ದೇವತೆಗಳು, ಕಲ್ಪಿತ ದೇವತೆಗಳ ತೃಪ್ತಿಗಾಗಿ ಮನುಷ್ಯರ ಒರಲಾಟ. ಈ ಪರಸ್ಪರ ಶಕ್ತಿ ಪರೀಕ್ಷೆಯಲ್ಲಿ ನಿಜವಾದ ಧರ್ಮದ ಕಲ್ಪನೆ ಎಲ್ಲಿದೆ ಎಂದು ಡಿ.ವಿ.ಜಿ ಪ್ರಶ್ನಿಸುತ್ತಾರೆ.

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !