ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಭಯ ಮತ್ತು ಗಾಂಧಿ ಪ್ರೀತಿ

ನೂರೈವತ್ತನೇ ಗಾಂಧಿ ಜಯಂತಿಯ ಸಂದರ್ಭದಲ್ಲಿ ಮಾಡಬೇಕಾದ ಒಂದು ಕನಿಷ್ಠ, ಒಂದು ಗರಿಷ್ಠ ಕಾರ್ಯ
Last Updated 25 ಸೆಪ್ಟೆಂಬರ್ 2018, 4:19 IST
ಅಕ್ಷರ ಗಾತ್ರ

ಮುಂದಿನ ಮಂಗಳವಾರ ಮಹಾತ್ಮ ಗಾಂಧಿಯವರ ನೂರೈವತ್ತನೆಯ ಜನ್ಮದಿನ. ಗಾಂಧೀಜಿಯನ್ನು ಎಂದೂ ಮನಸಾ ಒಪ್ಪದ, ಅವರ ಹತ್ಯೆಯನ್ನು ಎಂದೂ ಮನಃ ಪೂರ್ವಕವಾಗಿ ಖಂಡಿಸದ ರಾಜಕೀಯ ಪಕ್ಷವೊಂದು ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಮಾತ್ರವಲ್ಲದೆ, ದೇಶದಾದ್ಯಂತ ಚಾರಿತ್ರಿಕ ಪ್ರಾಬಲ್ಯ ಸ್ಥಾಪಿಸಿರುವ ಕಾಲಘಟ್ಟದಲ್ಲಿ ನೂರೈವತ್ತನೆಯ ಗಾಂಧಿ ಜಯಂತಿ ಬಂದಿರುವುದು ಕಾಕತಾಳೀಯವೂ ವಿರೋಧಾಭಾಸಕರವೂ ಆಗಿರುವ ವಿದ್ಯಮಾನ.

ಒಂದೆಡೆ ಆಳುವ ಬಿಜೆಪಿಗೆ, ಇನ್ನೊಂದೆಡೆ ದಲಿತ ಮತಗಳ ಶಕ್ತಿಯಿಂದ ತಲೆ ಎತ್ತಿರುವ ಬಿಎಸ್‌ಪಿಗೆ ಗಾಂಧೀಜಿಯ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಒಲವು ನಿಲುವುಗಳ ಜತೆ ಸಂಘರ್ಷಾತ್ಮಕ ನೆಲೆಯಲ್ಲಿ ಕಾಣಿಸಿಕೊಳ್ಳುವುದೇ ಒಂದು ರೀತಿಯ ಬಂಡವಾಳವಾದರೆ, ಕಾಂಗ್ರೆಸ್‌ ಸೇರಿದ ಹಾಗೆ ಉಳಿದ ಪಕ್ಷಗಳ ಪಾಲಿಗೆ ಗಾಂಧೀಜಿಯನ್ನು ವಿಧಿವತ್ತಾಗಿ ನೆನಪಿಸಿಕೊಳ್ಳುವುದು ಒಂದು ಯಾಂತ್ರಿಕ ಕ್ರಿಯೆ. ಅಂತೂ ಅಧಿಕಾರದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳಿಗೆ ಗಾಂಧಿ ಸ್ಮರಣೆ ಎನ್ನುವುದು ಆಂತರ್ಯದಲ್ಲಿ ಅನಗತ್ಯ ಎನ್ನಿಸಿದರೂ ಬಾಹ್ಯದಲ್ಲಿ ಅನಿವಾರ್ಯ.

ಯಥಾರ್ಥವಾಗಿ ಗಾಂಧೀಜಿ ಬಗ್ಗೆ ಗೌರವ ಇರಿಸಿಕೊಂಡ ಒಂದಷ್ಟು ಮಂದಿ ಜನಸಾಮಾನ್ಯರ ಮತ್ತು ಗಾಂಧಿ ತತ್ವಗಳಲ್ಲಿ ನಂಬಿಕೆ ಇರಿಸಿಕೊಂಡಿರುವ ಇನ್ನೊಂದಷ್ಟು ಮಂದಿ ಗಾಂಧಿವಾದಿಗಳ ವಿಷಯ ಹೊರತುಪಡಿಸಿದರೆ ಸಾರ್ವಜನಿಕವಾಗಿ ಗಾಂಧೀಜಿಗೆ ನೀಡಲಾಗುವ ಗೌರವಾದರಗಳಿವೆಯಲ್ಲಾ ಅವೆಲ್ಲವೂ ಹೀಗೆ. ತೋರಿಕೆಗೆ. ಅದು ‘ಕೊಡದೆ ಹೋದರೆ ಯಾರಾದರೂ ಏನಾದರೂ ಅಂದುಕೊಳ್ಳಬಹುದು’ ಎನ್ನುವ ಕಾರಣಕ್ಕೋಸ್ಕರ ಕೊಡುವ ಗೌರವವೇ ಹೊರತು ಅದರಲ್ಲಿ ಮನಃಪೂರ್ವಕ ಎನ್ನುವುದು ಅಥವಾ ಭಾವಪೂರ್ಣ ಎನ್ನುವುದು ಏನೂ ಇರುವುದಿಲ್ಲ, ಇದ್ದರೂ ಬಹಳ ಕಡಿಮೆ. ‘ಏನಾದರೂ ಅಂದುಕೊಳ್ಳುವವರು’ ಯಾರು ಅಂತ ಹುಡುಕಿದರೆ ಅಲ್ಲಿ ಯಾರೂ ಇರುವುದಿಲ್ಲ. ಇದ್ದರೂ ಅಂದುಕೊಳ್ಳುವುದಾದರೂ ಏನನ್ನು ಎನ್ನುವ ಪ್ರಶ್ನೆಗೂ ಉತ್ತರವಿಲ್ಲ. ಆದರೆ ಭಯ ಮಾತ್ರ ಇದ್ದೇ ಇರುತ್ತದೆ. ಅದು ಭಾರತೀಯರ ಪಾಲಿನ ‘ಗಾಂಧಿ ಭಯ’. ಅಪಾಯವಲ್ಲದ ಮೂಲದಿಂದ ಸೃಷ್ಟಿಯಾಗುವ ಭಯ ಅದು.

ಈ ಭಯವನ್ನು ತನ್ನ ವಿಚಾರದಲ್ಲಿ ಎಪ್ಪತ್ತು ವರ್ಷಗಳಿಗೆ ಹಿಂದೆ ಸತ್ತ ಗಾಂಧೀಜಿ ಇನ್ನೂ ಉಳಿಸಿಕೊಂಡಿದ್ದಿದೆಯಲ್ಲಾ ಅದೇ ಅವರ ವಿಶಿಷ್ಟತೆ. ಒಪ್ಪದಿದ್ದರೂ ಬಿಡಲಾಗದ, ದೂರಿದರೂ ದೂರೀಕರಿಸಲಾಗದ, ಬೇಡ ಎಂದಾಗ ಬೇಕಾಗುವ, ಬೇಕು ಎಂದಾಗ ಬೇಡವಾಗುವ ವಿಚಿತ್ರ ವಿದ್ಯಮಾನ ಗಾಂಧಿ. ಇನ್ನೊಂದು ದೇಶದಲ್ಲಿ ಇನ್ನೊಬ್ಬ ಚಾರಿತ್ರಿಕ ವ್ಯಕ್ತಿಯ ಬಗ್ಗೆ ಅಲ್ಲಿನ ಅಧಿಕಾರಸ್ಥ ರಾಜಕೀಯ ಪಕ್ಷಗಳು ಮತ್ತು ಸಮಾಜ ಈ ರೀತಿಯದ್ದೊಂದು ವಿಲಕ್ಷಣ ಸಂಬಂಧ ಹೊಂದಿರುವ ಉದಾಹರಣೆ ಇರಲಾರದು ಅನ್ನಿಸುತ್ತದೆ. ಒಂದು ಪ್ರಶ್ನೆ ಕಾಡುತ್ತದೆ. ಮಹಾತ್ಮ ಗಾಂಧಿಯವರ ಜೀವಿತ ಕಾಲದಲ್ಲಿ ಭಾರತೀಯರು ಅವರನ್ನು ನಿಜಕ್ಕೂ ಅಷ್ಟೊಂದು ಪ್ರೀತಿಸಿದ್ದರೇ? ಅಷ್ಟೊಂದು ಹಚ್ಚಿಕೊಂಡಿದ್ದರೇ? ಅಷ್ಟೊಂದು ಬೆಂಬಲಿಸಿದ್ದರೇ? ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದಾಗ ಈ ಎಲ್ಲಾ ಪ್ರಶ್ನೆಗಳಿಗೆ ಹೌದು ಎನ್ನುವ ಉತ್ತರ ಸಿಗುತ್ತದೆ. ಯಾಕೆಂದರೆ ಯಾವುದೇ ರೀತಿಯ ಆಧುನಿಕ ಸಂಪರ್ಕ ಸಾಧನಗಳೂ ಇಲ್ಲದ ಕಾಲದಲ್ಲಿ ಗಾಂಧೀಜಿಯ ಹೆಸರು ಇಡೀ ದೇಶವನ್ನೇ ಬೆಸೆದದ್ದು, ಅವರ ಒಂದು ಕರೆಗೆ ಕೋಟಿ ಕೋಟಿ ಧ್ವನಿಗಳು ಓಗೊಟ್ಟು ಬೀದಿಗಿಳಿಯುತ್ತಿದ್ದದ್ದು ಇತ್ಯಾದಿಗಳೆಲ್ಲಾ ಚಾರಿತ್ರಿಕ ಸತ್ಯಗಳು ಎನ್ನುವ ಕಾರಣಕ್ಕೆ ಮೇಲಿನ ಪ್ರಶ್ನೆಗಳಿಗೆ ಹೌದು ಎಂದು ಉತ್ತರಿಸದೆ ವಿಧಿ ಇಲ್ಲ. ಪ್ರಶ್ನೆ ಮತ್ತು ಉತ್ತರ ಇಷ್ಟೇ ಆದರೆ ಅದರಲ್ಲಿ ಕಾಡುವಂತಹ ಒಗಟು ಏನೂ ಇಲ್ಲ. ಒಗಟು ಇರುವುದು ಈ ಪ್ರಶ್ನೆಯನ್ನು ಸ್ವಲ್ಪ ವಿಸ್ತರಿಸಿದಾಗ.

ಜೀವಿತ ಕಾಲದಲ್ಲಿ ಅಷ್ಟೊಂದು ಪ್ರೀತಿ ಸಂಪಾದಿಸಿದ ಗಾಂಧಿ, ಸತ್ತ ನಂತರ ಬಹುತೇಕ ಭಾರತೀಯರ ಪಾಲಿಗೆ ಯಾಕೆ ಹೀಗೆ ಅನಗತ್ಯ ಅನಿವಾರ್ಯವಾಗಿ ಮಾತ್ರ ಉಳಿದರು? ಈ ಪ್ರಶ್ನೆ ಇನ್ನೊಂದು ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. ಭಾರತೀಯರು ಜೀವಂತ ಗಾಂಧೀಜಿಯನ್ನು ನಿಜಕ್ಕೂ ಅಷ್ಟೊಂದು ಪ್ರೀತಿಸಿದ್ದು ಯಾಕೆ? ಈ ಪ್ರೀತಿಗೆ ಕಾರಣ ಅವರು ಪಾಲಿಸುತ್ತಿದ್ದ ಸತ್ಯ, ಅಹಿಂಸೆ, ಸರಳತೆ, ಸ್ವಚ್ಛತೆ, ಮಾನವೀಯತೆ ಇತ್ಯಾದಿ ತತ್ವಗಳು ಭಾರತೀಯರಿಗೆ ಇಷ್ಟವಾಗಿದ್ದವು ಅಥವಾ ಒಪ್ಪಿತವಾಗಿದ್ದವು ಎನ್ನುವುದಾಗಿರಲಿಲ್ಲ. ಒಂದು ವೇಳೆ ಅವು ಕಾರಣ ಎಂದಾಗಿದ್ದರೆ ಗಾಂಧೀಜಿ ಕಾಲವಾದ ನಂತರ ಈ ಆದರ್ಶಗಳೆಲ್ಲಾ ಭಾರತೀಯ ಸಾರ್ವಜನಿಕ ಜೀವನದಿಂದ ಮರೆಯಾಗುತ್ತಿರಲಿಲ್ಲ. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದ ನಂತರವೂ ಕನಿಷ್ಠ ತಮ್ಮ ತಮ್ಮ ವಠಾರಗಳನ್ನು, ಬೀದಿಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ ಅಂತ ಭಾರತೀಯರಿಗೆ ಪ್ರಬಲ ಪ್ರಧಾನಮಂತ್ರಿಯೊಬ್ಬ ಕರೆ ನೀಡುವ ಅಗತ್ಯ ಬೀಳುತ್ತಿರಲಿಲ್ಲ. ಗಾಂಧೀಜಿ ಸಾಯುತ್ತಲೇ ಅವರು ಕೇವಲ ಸಂಕೇತವಾದರು. ಅವರ ತತ್ವಾದರ್ಶಗಳು ಬಹುತೇಕ ಭಾರತೀಯರ ಪಾಲಿಗೆ ಅಪ್ರಾಯೋಗಿಕ ತಮಾಷೆಯಾಗಿ ಕಂಡವು, ಇನ್ನು ಕೆಲವರು ಅವರನ್ನು ದ್ವೇಷಿಸಲು ಕಾರಣ ಸೃಷ್ಟಿಸತೊಡಗಿದರು. ಆದುದರಿಂದ ಗಾಂಧಿಯವರ ನೈತಿಕ ಮೇಲ್ಮೆಗೂ ಅವರಿಗೆ ದೊರೆತ ಜನಬೆಂಬಲಕ್ಕೂ ಸಂಬಂಧ ಇಲ್ಲ ಎಂದಾಯಿತು. ಹಾಗಾದರೆ ಯಾವ ಕಾರಣಕ್ಕೆ ಅವರ ಜೀವಿತ ಕಾಲದಲ್ಲಿ ಎಲ್ಲರೂ ಗಾಂಧೀಜಿಯನ್ನು ಆ ಮಟ್ಟಿಗೆ ಹಚ್ಚಿಕೊಂಡರು? ಇದು ರಾಜಕೀಯ ಮನಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಭಾರತೀಯ ಮನಸ್ಸುಗಳಿಗೆ ಅಧಿಕಾರದ ಜತೆ ಇರುವ ವಿಚಿತ್ರ ಸಂಬಂಧವೊಂದರ ಅನಾವರಣ ಆಗುತ್ತದೆ.

ಭಾರತೀಯರು ಗಾಂಧಿಯವರನ್ನು ಹಚ್ಚಿಕೊಂಡದ್ದು ಮತ್ತು ಮೆಚ್ಚಿಕೊಂಡದ್ದು ಯಾಕೆ ಎಂದರೆ ಆ ಮನುಷ್ಯನ ಮುಂದೆ ಪ್ರಬಲ ಬ್ರಿಟಿಷ್ ಸರ್ಕಾರ ಮಣಿಯುತ್ತಿತ್ತು ಎನ್ನುವ ಕಾರಣಕ್ಕೆ. ಭಾರತೀಯರು ಗಾಂಧಿಯವರಲ್ಲಿ ಅಸಾಮಾನ್ಯ
ನೊಬ್ಬನನ್ನು ಕಂಡದ್ದು ಯಾಕೆಂದರೆ ಬ್ರಿಟಿಷ್ ಸರ್ಕಾರವು ಅವರ ತತ್ವಾದರ್ಶಗಳ ಮುಂದೆ ಒಂದು ರೀತಿಯಲ್ಲಿ ಕೈಸೋತು ಅವರನ್ನು ಗೌರವದಿಂದ ಕಾಣುತ್ತಿತ್ತು ಎನ್ನುವ ಕಾರಣಕ್ಕೆ. ಭಾರತೀಯ ಮನಸ್ಥಿತಿ ಹೇಗೆ ಎಂದರೆ ಅದು ಅಧಿಕಾರವನ್ನು ಆರಾಧಿಸುತ್ತದೆ ಅಥವಾ ಅಧಿಕಾರಸ್ಥರನ್ನು ಮಣಿಸುವ, ಅಧಿಕಾರಸ್ಥರಿಂದ ಗೌರವ ಪಡೆಯುವ ವ್ಯಕ್ತಿಯನ್ನು ಗೌರವಿಸುತ್ತದೆ. ಈಗಲೂ ಹಾಗೆಯೇ ನೋಡಿ. ಒಬ್ಬಾತ ಸ್ಥಳೀಯವಾಗಿ ನಾಯಕ ಅನ್ನಿಸಿಕೊಳ್ಳುವುದು ಹೇಗೆ ಎಂದರೆ ಆತ ಮೊದಲು ಏನಾದರೂ ಮಾಡಿ ಪೊಲೀಸರನ್ನು ಮತ್ತು ಇತರ ಸರ್ಕಾರಿ ಕಚೇರಿಗಳ ಮಂದಿಯನ್ನು ಪ್ರಶ್ನಿಸುವ, ಅವರಿಂದ ಕೆಲಸ ಮಾಡಿಸಿಕೊಳ್ಳುವ ಹಂತಕ್ಕೇರುವ ಮೂಲಕ. ಅಥವಾ ರಾಜಕೀಯ ಅಧಿಕಾರದ ಜತೆ ಸಂಪರ್ಕ ಮತ್ತು ಪ್ರಭಾವ ಹೊಂದುವ ಮೂಲಕ. ಅಂದು ಸೂರ್ಯ ಮುಳುಗದ ಸಾಮ್ರಾಜ್ಯವೊಂದು ತನ್ನನ್ನು, ತನ್ನ ಮಾತನ್ನು ಗಂಭೀರವಾಗಿ ಪರಿಗಣಿಸುವ ಮಟ್ಟಿಗೆ ಗಾಂಧೀಜಿ ನೈತಿಕವಾಗಿ ಬೆಳೆದು ನಿಂತರಲ್ಲ, ಅದನ್ನು ನೋಡಿ ಬೆಕ್ಕಸ ಬೆರಗಾದ ಜನ ‘ಮಹಾತ್ಮಾ ಗಾಂಧಿಕೀ ಜೈ’ ಎಂದರು. ಅಧಿಕಾರಸ್ಥರನ್ನು ನಡುಗಿಸಬಲ್ಲ ಗಾಂಧೀಜಿ ಭಾರತೀಯರ ಪಾಲಿಗೆ ನಾಯಕರಂತೆ ಕಂಡರು. ಅವರು ಅಧಿಕಾರಸ್ಥರನ್ನು ನಡುಗಿಸಲು ಸತ್ಯ, ಸತ್ಯಾಗ್ರಹ, ನೈತಿಕತೆ ಮತ್ತು ಅಹಿಂಸೆಯ ಅಸ್ತ್ರಗಳನ್ನು ಬಳಸಿದರು ಎನ್ನುವುದು ಒಂದು ಸಣ್ಣ ಸಂಖ್ಯೆಯ ಮಂದಿಗಷ್ಟೇ ಅದ್ಭುತ ಮತ್ತು ಆದರ್ಶ ಅಂತ ಕಂಡದ್ದು. ಜನಸಮೂಹ ಅದರ ಮಹತ್ವವನ್ನು ಅಂದೂ ಅರ್ಥ ಮಾಡಿಕೊಂಡಿಲ್ಲ, ಇಂದೂ ಅರ್ಥ ಮಾಡಿಕೊಂಡಿಲ್ಲ. ಅರ್ಥ ಮಾಡಿಕೊಂಡಿದ್ದರೆ ಸಮಕಾಲೀನ ಭಾರತದ ಸಾರ್ವಜನಿಕ ಜೀವನ ಮತ್ತು ಸಾರ್ವಜನಿಕ ತಾಣಗಳು ಈ ಪರಿ ಕೊಳಕಾಗುತ್ತಿರಲಿಲ್ಲ. ಹಿಂಸೆ ಈ ಪರಿ ವಿಜೃಂಭಿಸುತ್ತಿರಲಿಲ್ಲ.

ಈ ದೇಶದ ಜನಸಮೂಹ ಗಾಂಧಿಯನ್ನು ಗಾಂಧಿಯಾಗಿ ಯಾವತ್ತೂ ಪ್ರೀತಿಸಿಲ್ಲ. ಅದು ಪ್ರೀತಿಸಿದ್ದು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸೆಟೆದು ನಿಂತ ಶಕ್ತಿಯೊಂದನ್ನು. ಯಾವತ್ತು ಬ್ರಿಟಿಷ್ ಸಾಮ್ರಾಜ್ಯದ ವರ್ಚಸ್ಸು ಭಾರತದಲ್ಲಿ ಕಡಿಮೆಯಾಗತೊಡಗಿ ಇನ್ನೇನು ಅವರು ಭಾರತಕ್ಕೆ ಸ್ವಾತಂತ್ರ್ಯ ನೀಡಿ ಹೊರಟುಹೋಗುತ್ತಾರೆ ಎನ್ನುವಾಗ ಮಹಾತ್ಮ ಗಾಂಧಿಯವರ ಪ್ರಾಮುಖ್ಯವೂ ಕಡಿಮೆಯಾಗತೊಡಗಿತು. ಸಾಮ್ರಾಜ್ಯವೇ ಇಲ್ಲ ಎಂದಾದ ಮೇಲೆ ಆ ಸಾಮ್ರಾಜ್ಯವನ್ನು ಮಣಿಸಬಲ್ಲವನ ಹಂಗ್ಯಾಕೆ? ಸ್ವತಃ ಕಾಂಗ್ರಸ್ಸಿನೊಳಗೂ ಗಾಂಧಿ ತೀರಾ ಏಕಾಂಗಿಯಾದರು. ಈ ಹಂತದಲ್ಲಿ ಗಾಂಧಿಯವರ ಕೊಲೆಯಾಗುತ್ತದೆ. ಸಾವಿನಲ್ಲಿ ಗಾಂಧೀಜಿ ರಾಜಕೀಯ ಮರುಹುಟ್ಟು ಪಡೆಯುತ್ತಾರೆ. ಈಗ ನಮ್ಮ ಮುಂದಿರುವುದು 1869ರ ಅಕ್ಟೋಬರ್ 2ರಂದು ಹುಟ್ಟಿದ ಗಾಂಧಿ ಅಲ್ಲ. ಈಗ ನಮ್ಮ ಮುಂದಿರುವುದು 1948ರ ಜನವರಿ 30ರಂದು ಕೊಲೆಯಾಗುವುದರ ಮೂಲಕ ಪುನರ್ಜನ್ಮ ಪಡೆದ ಗಾಂಧಿ. ಅದಕ್ಕೇ ಇರಬೇಕು ರಿಚರ್ಡ್ ಅಟೆನ್‌ಬರೋ ಅವರ ‘ಗಾಂಧಿ’ ಸಿನಿಮಾ ಪ್ರಾರಂಭವಾಗುವುದು ಗಾಂಧಿಯವರ ಸಾವಿನ ಸನ್ನಿವೇಶದಿಂದ.

ಅಹಿಂಸೆಯನ್ನು ಜನಮನದಲ್ಲಿ ಪ್ರತಿಷ್ಠಾಪಿಸಲು ಹೆಣಗಿ ಹಿಂಸಾತ್ಮಕ ಅಂತ್ಯ ಕಂಡ ಗಾಂಧೀಜಿಯ ನೂರೈವತ್ತನೆಯ ಜಯಂತ್ಯುತ್ಸವದ ಸುತ್ತ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿ. ಹಿಂಸೆಯನ್ನು ಕೃತಿಯಿಂದಲೂ, ಮೌನಸಮ್ಮತಿಯಿಂದಲೂ ಪ್ರೋತ್ಸಾಹಿಸುತ್ತಿರುವ ನಾಯಕತ್ವವು ‘ಆಚರಣೆ ಕೇವಲ ಸಾಂಕೇತಿಕ ಆಗಬಾರದು’ ಎನ್ನುತ್ತಿದೆ, ‘ಮಹಾತ್ಮ ಗಾಂಧಿಯವರ ಚಿಂತನೆಗಳು ಬದುಕಿನ ಭಾಗವಾಗಬೇಕು’ ಎಂದು ಕರೆ ನೀಡುತ್ತಿದೆ! ಯಾವ ಚಿಂತನೆಗಳು? ಯಾರ ಬದುಕಿನ ಭಾಗ? ಮಹಾತ್ಮ ಗಾಂಧಿಯನ್ನು ಅಂತರಂಗದಲ್ಲಿ ಸದಾ ದ್ವೇಷಿಸುತ್ತಾ ಬಂದು ಹಲವು ತಲೆಮಾರುಗಳ ಹೃದಯದಲ್ಲಿ ಗಾಂಧಿ ದ್ವೇಷವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬಿತ್ತಿದ ಸಂಘಟನೆಯ ಪ್ರಭೃತಿಗಳಿಗೂ ಆಚರಣೆಯ ರೂಪುರೇಷೆ ತಯಾರಿಸಲು ಸರ್ಕಾರ ರಚಿಸಿದ ಸಮಿತಿಯಲ್ಲಿ ಜಾಗ ಸಿಕ್ಕಿದೆ! ಇನ್ನು ಅದರಲ್ಲಿ ದೇಶದಲ್ಲಿ ಹರಡುತ್ತಿರುವ ಹಿಂಸೆಯ ಬಗ್ಗೆ ಬಾಯಿ ಬಿಡದ ಧರ್ಮೋದ್ಯಮಿಗಳು, ಅಧ್ಯಾತ್ಮೋದ್ಯಮಿಗಳು, ದೇವಾಲಯೋದ್ಯಮಿಗಳು ಯಥಾಪ್ರಕಾರ ಸೇರಿಕೊಂಡಿದ್ದಾರೆ. ಇಂತಹ ಸಂಘಟನೆಗಳ, ಇಂತಹ ವ್ಯಕ್ತಿಗಳ ಪ್ರತ್ಯಕ್ಷ ಪರೋಕ್ಷ ಪ್ರಭಾವಕ್ಕೊಳಗಾಗಿ ತಯಾರಾದ ಮನಸ್ಸುಗಳು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಗಾಂಧಿ ದ್ವೇಷವನ್ನು ಯಥಾಶಕ್ತಿ ಹರಡುತ್ತಿವೆ.

ಗಾಂಧೀಜಿ ನೂರೈವತ್ತನೆಯ ಜನ್ಮದಿನಾಚರಣೆಯ ಅಂಗವಾಗಿ ಮೊದಲಿಗೆ ಆಗಬೇಕಾದದ್ದು ಜಾಲತಾಣಗಳಲ್ಲಿ ರಾಶಿ ಹಾಕಿರುವ ಇಂತಹ ಗಾಂಧಿ ದ್ವೇಷದ ಸಂದೇಶಗಳನ್ನು ತೆಗೆದುಹಾಕುವ ಕೆಲಸ. ಸ್ವಚ್ಛ ಭಾರತ ಪ್ರಾರಂಭವಾಗಬೇಕಾಗಿರುವುದು ಸ್ವಚ್ಛ ಮನಸ್ಸುಗಳಿಂದ. ಎರಡನೆಯದಾಗಿ ಆಗಬೇಕಾಗಿರುವುದು ಗಾಂಧೀಜಿಯನ್ನು ಕೊಂದ ನಾಥುರಾಮ್ ಗೋಡ್ಸೆ ಎಂಬ ಧರ್ಮಾಂಧ ಯುವಕನನ್ನು ಪೂಜಿಸಲೆಂದು ದೇಶದ ಕೆಲವೆಡೆ ಕೆಲವರು (ಅವರು ಯಾರು ಮತ್ತು ಯಾವ ರಾಜಕೀಯ ಒಲವುಳ್ಳವರು ಅಂತ ಹೇಳಬೇಕಿಲ್ಲ ತಾನೇ) ಕಟ್ಟಿದ ಆಲಯಗಳನ್ನು ರಾಷ್ಟ್ರೀಯ ನಾಚಿಕೆಗೇಡಿನ ಭವನ (ನ್ಯಾಷನಲ್ ಹಾಲ್ ಆಫ್ ಶೇಮ್) ಎಂದು ಘೋಷಿಸುವ ಕೆಲಸ. ಈ ಆಲಯಗಳನ್ನು ಕೆಡವಿ ಅವುಗಳಿಗೆ ಒಂದು ಹೊಸ ಪ್ರಾಮುಖ್ಯ ಮತ್ತು ಪಾವಿತ್ರ್ಯ ನೀಡುವುದು ಬೇಡ. ಅವುಗಳು ಇರಬೇಕು. ಸಾವಿರಾರು ವರ್ಷಗಳ ಹಿಂದೆಯೇ ಜಗತ್ತಿಗೆ ಶಾಂತಿಯ ಮಂತ್ರ ನೀಡಿದ ಭಾರತದ ಆಂತರ್ಯದಲ್ಲಿ ಇನ್ನೂ ಉಳಿದಿರುವ ಹಿಂಸಾಪ್ರವೃತ್ತಿಗೆ ಸಾಕ್ಷಿಯಾಗಿ ಉಳಿಯಬೇಕು. ಕನಿಷ್ಠ ಈ ಎರಡು ಕಾರ್ಯಗಳು ಆಗದ ಹೊರತು ಗಾಂಧೀಜಿಯ ಜನ್ಮದಿನಾಚರಣೆಯನ್ನು ಆಳುವ ಪಕ್ಷ ಅದೆಷ್ಟು ವೈಭವದಲ್ಲಿ ಮಾಡಿದರೂ ಅದು ಅರ್ಥಹೀನ.

ಕೇಂದ್ರ ಸರ್ಕಾರ ನೇಮಿಸಿದ ಸಮಿತಿಯಲ್ಲಿ ಒಳ್ಳೆಯವರೂ ಇದ್ದಾರೆ. ಆದರೆ ಅವರಿಗೆ ಭಾರಿ ಗೌಜಿನಿಂದ ಗಾಂಧಿ ಜಯಂತಿ ಆಚರಿಸಲು ಹೊರಟಿರುವ ಪ್ರಬಲ ನಾಯಕತ್ವಕ್ಕೆ ಮೇಲಿನ ನಿಷ್ಠುರ ಸಲಹೆಗಳನ್ನು ನೀಡುವ ಧೈರ್ಯವಿದ್ದೀತೆ? ಒಬ್ಬಂಟಿಯಾಗಿ ಸತ್ಯ ಹೇಳುವ ಧೈರ್ಯ ಮತ್ತು ಸತ್ಯ ಹೇಳಿ ಒಬ್ಬಂಟಿಯಾಗುವ ಧೈರ್ಯ ಇದ್ದ ಈ ದೇಶದ ಕೊನೆಯ ನಾಯಕ (ಮೊದಲ ನಾಯಕನೂ ಆಗಿರಬಹುದು) ಮಹಾತ್ಮ ಗಾಂಧಿ. ಅಂತಹ ಧೈರ್ಯ ಇರುವ ಹೊಸ ತಲೆಮಾರಿನ ನಾಯಕತ್ವ ಸೃಷ್ಟಿಯಾದರೆ ಅದಕ್ಕಿಂತ ದೊಡ್ಡ ಗೌರವ ಗಾಂಧೀಜಿಗೆ ಬೇಕಾಗಿಲ್ಲ. ಅದು ಬಿಡಿ. ನಾಯಕತ್ವ ಸೃಷ್ಟಿಯಾಗುವುದು ಬಹಳ ದೊಡ್ಡ ವಿಚಾರವಾಯಿತು. ಕನಿಷ್ಠ ಗುರಿಯೊಂದನ್ನು ಇರಿಸಿಕೊಳ್ಳೋಣ. ಆಚರಣೆಯ ಉತ್ಸವಾದಿಗಳೆಲ್ಲಾ ಕಳೆದು, ಮೀಸಲಿಟ್ಟ ಹಣ ಮುಗಿದು ಉತ್ಸಾಹ ತಗ್ಗಿದ ನಂತರ ಈ ಇಡೀ ದೇಶದಲ್ಲಿ ಶುಚಿಯಾಗಿರುವ ಒಂದೇ ಒಂದು ಸಾರ್ವಜನಿಕ ಶೌಚಾಲಯ (ದುಡ್ಡು ನೀಡಿ ಉಪಯೋಗಿಸುವ ಸಾರ್ವಜನಿಕ ಶೌಚಾಲಯವಾದರೂ ಸರಿ) ಕಾಣಿಸಿದರೆ ಸಾಕು, ಗಾಂಧೀಜಿ ನೆನಪಿಗೆ ಅದಕ್ಕಿಂತ ಹೆಚ್ಚಿನ ಕಾಣಿಕೆ, ದೇಣಿಗೆ ಏನೂ ಬೇಕಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT