ಗುರುವಾರ , ಡಿಸೆಂಬರ್ 12, 2019
17 °C
ದೊಂಬಿ ಹತ್ಯೆ: ಪೊಲೀಸರು ಲಾಕಪ್‌ನಲ್ಲಿ ಮಾಡಿದ ಹಾಗೆ ಜನ ಬೀದಿಯಲ್ಲಿ ಮಾಡುತ್ತಿದ್ದಾರೆ ಅಷ್ಟೇ

ಡಯರ್‌ ಸಂತಾನದ ಈರ್ವರನ್ನು ಗಲ್ಲಿಗೇರಿಸುತ್ತಾರಂತೆ!

Published:
Updated:
Deccan Herald

ಇವರೀರ್ವರ ಕುತ್ತಿಗೆಗೆ ಹಗ್ಗ ಬಿಗಿದು ಸಾಯುವತನಕ ತೂಗಬೇಕು ಅಂತ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ಓದುತ್ತಿದ್ದರೆ ಅದನ್ನು ಕೇಳಿದ ಆ ಈರ್ವರು ಕಣ್ಣೀರು ಹಾಕಿದರಂತೆ. ಕೇರಳದಲ್ಲಿ ನ್ಯಾಯಾಧೀಶರು ಈ ಶಿಕ್ಷೆ ಪ್ರಕಟಿಸಿದ್ದು ಮಧ್ಯಮ ಮಟ್ಟದ ಹುದ್ದೆಯಲ್ಲಿರುವ ಈರ್ವರು ಪೊಲೀಸರಿಗೆ. ಅವರೀರ್ವರೂ ಒಬ್ಬ ಬಡಪಾಯಿ ಯುವಕನ ಮೇಲೆ ಸುಳ್ಳು ಆರೋಪ ಹೊರಿಸಿ ಕಸ್ಟಡಿಯಲ್ಲಿ ಕ್ರೂರವಾಗಿ ಹಿಂಸಿಸಿ ಇಂಚಿಂಚಾಗಿ ಆತನ ಜೀವ ತೆಗೆದಿದ್ದರು. ಇದನ್ನು ವಿರಳಾತಿವಿರಳ
ಕ್ರೌರ್ಯ ಅಂತ ಪರಿಗಣಿಸಿ ನ್ಯಾಯಾಧೀಶರು ಗಲ್ಲುಶಿಕ್ಷೆ ವಿಧಿಸಿದ್ದಾರೆ. ಕಟಕಟೆಯಲ್ಲಿ ಇನ್ನೂ ಮೂವರಿದ್ದರು. ಈರ್ವರು ಎಸ್‌ಪಿ ಮಟ್ಟದ ಹುದ್ದೆಯಿಂದ ನಿವೃತ್ತರಾದವರು, ಇನ್ನೋರ್ವ ಸದ್ಯ ಡಿವೈಎಸ್ಪಿ ಹುದ್ದೆಯಲ್ಲಿರುವಾತ. ಆ ಜೀವ ಹಿಂಸೆ ಅನುಭವಿಸುವಾಗ ಈ ಮೂವರು ಪಕ್ಕದಲ್ಲಿ ಕುರ್ಚಿ ಹಾಕಿ ಕುಳಿತು ಸಿಗರೇಟು ಸೇದುತ್ತಾ ಮನರಂಜನೆ ಅನುಭವಿಸಿದವರು ಅಥವಾ ನಂತರ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದವರಿರಬೇಕು. ಇವರು ಗಲ್ಲುಶಿಕ್ಷೆಯಿಂದ ಪಾರಾಗಿದ್ದಾರೆ. ಜೈಲುವಾಸ ಅನುಭವಿಸಲಿದ್ದಾರೆ.

ಪೊಲೀಸರು ಅಮಾಯಕರನ್ನು ಹಿಂಸಿಸಿ ಕೊಲ್ಲುವುದು ಅಥವಾ ಆಪಾದಿತರಾದವರನ್ನು ವಿಚಾರಣೆಯ ನೆಪ ಹೇಳಿ ಬಡಿದು ಕೊಲ್ಲುವುದು ಈ ದೇಶದಲ್ಲಿ ಪದೇ ಪದೇ ಸಲೀಸಾಗಿ ನಡೆಯುವ ವಿದ್ಯಮಾನ. ಇವೆಲ್ಲಾ ಇತರ ಕೊಲೆ ಪ್ರಕರಣಗಳಿಗಿಂತ ಸಾವಿರ ಪಾಲು ಹೆಚ್ಚು ಗಂಭೀರವಾಗಿ ಪರಿಗಣಿಸಬೇಕಾದ ಕೊಲೆಗಳು- ಮೊದಲನೆಯದಾಗಿ ಇವುಗಳನ್ನು ಮಾಡುವವರು ಪೊಲೀಸರು ಎನ್ನುವ ಕಾರಣಕ್ಕೆ. ಎರಡನೆಯದಾಗಿ, ಅಮಾನವೀಯವಾದ ಹಿಂಸೆಯ ಮೂಲಕ ಈ ಕೊಲೆಗಳನ್ನು ಮಾಡಲಾಗುತ್ತದೆ ಎನ್ನುವ ಕಾರಣಕ್ಕೆ. ಆದರೆ ಇದು ಭಾರತ. ಇಲ್ಲಿ ಕೊಲೆ ಮಾಡಿದವ ಬಲಶಾಲಿಯಾಗಿದ್ದರೆ ಅದು ಕೊಲೆಯಲ್ಲ. ಕೊಲೆಯಾದವ ಬಲಹೀನನಾಗಿದ್ದರೆ ಅದು ಕೊಲೆಯಲ್ಲ. ಆದಕಾರಣ ಪೊಲೀಸರು ಯಾರನ್ನಾದರೂ ಚಿತ್ರಹಿಂಸೆ ನೀಡಿ ಕೊಂದರೆ ಅದು ದೇಶಸೇವೆಯಾಗುತ್ತದೆ, ಹೆಚ್ಚೆಂದರೆ ಅದು ಕರ್ತವ್ಯ ನಿರ್ವಹಣೆಯಲ್ಲಿ ಆದ ಒಂದು ಸಣ್ಣ ಪ್ರಮಾದವಾಗಿಬಿಡುತ್ತದೆ. ಲಾಕಪ್‌ನಲ್ಲಿ ಸಾವಿಗೆ ತುತ್ತಾದವರು ಬಹುತೇಕ ಪ್ರಕರಣಗಳಲ್ಲಿ ಪಳಗಿದ ರೌಡಿಗಳೋ, ಭೂಗತ ಜಗತ್ತಿನ ಕುಖ್ಯಾತ ವ್ಯಕ್ತಿಗಳೋ ಆಗಿರುವುದಿಲ್ಲ. ರೌಡಿಗಳು, ಭೂಗತ ಜಗತ್ತಿನವರು ನಕಲಿ ಎನ್‌ಕೌಂಟರ್‌ನಲ್ಲಿ ಸಾಯಬಹುದು. ಲಾಕಪ್‌ನಲ್ಲಿ ಜೀವ ಕಳೆದುಕೊಳ್ಳುವವರು ಒಂದೋ ಅಮಾಯಕರಾಗಿರುತ್ತಾರೆ, ಇಲ್ಲಾ ಸಣ್ಣಪುಟ್ಟ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಕ್ಕಿಕೊಂಡವರಿರುತ್ತಾರೆ. ಇದರ ಅರ್ಥ ರೌಡಿಗಳನ್ನೂ, ಭೂಗತರನ್ನೂ ಪೊಲೀಸರು ಹಿಡಿದು ಕೊಲ್ಲಬಹುದು ಅಥವಾ ಕೊಲ್ಲಬೇಕು ಅಂತ ಅಲ್ಲ. ಅದೇನೇ ಇರಲಿ, ಈತನಕ ಕೊಲೆ ಮಾಡಿದ ಯಾವ ಖಾಕಿಧಾರಿಗೂ ಯಾವ ಕೋರ್ಟು ಕೂಡಾ ಗಲ್ಲು ವಿಧಿಸಿದ್ದಿಲ್ಲ.

ಆದುದರಿಂದ ಮರಣದಂಡನೆಗೆ ಗುರಿಯಾದ ತೀರ್ಪು ಕೇಳಿದ ಕೇರಳದ ಆ ಈರ್ವರು ಖಾಕಿಧಾರಿಗಳ ಕಣ್ಣಲ್ಲಿ ನೀರು ಜಿನುಗಿದ ಆ ಕ್ಷಣ ಇದೆಯಲ್ಲಾ, ಅದು ಚಾರಿತ್ರಿಕ ಕ್ಷಣ. ಅವರ ಕಣ್ಣೀರಲ್ಲಿ ಕ್ರೌರ್ಯವೇ ಮೈವೆತ್ತಿರುವ ಭಾರತೀಯ ಪೊಲೀಸ್ ವ್ಯವಸ್ಥೆಗೊಂದು ಸಂದೇಶವಿತ್ತು. ಕಣ್ಣೀರಿನೊಂದಿಗಿನ ಆ ಕ್ಷಣದ ಅವರ ಮುಖಭಾವವನ್ನು ಛಾಯಾಚಿತ್ರದಲ್ಲಿ ಸೆರೆಹಿಡಿದು ಅದರ ಪ್ರತಿಗಳನ್ನು ಈ ದೇಶದ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ, ಗೃಹಮಂತ್ರಿ, ಗೃಹಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರ ಕಚೇರಿಗಳಲ್ಲಿ ತೂಗುಹಾಕಬೇಕಿತ್ತು. ಹಿಂದೊಮ್ಮೆ ಒಂದು ಭೀಕರ ರೈಲು ಅಪಘಾತ ಸಂಭವಿಸಿ ಜಜ್ಜಿ ಹೋದ ಬೋಗಿಯೊಂದರಲ್ಲಿ ಸಿಕ್ಕಿಕೊಂಡ ವ್ಯಕ್ತಿಯೋರ್ವರ ಯಾತನಾಮಯ ಮುಖ ಕಿಟಕಿಯ ಸರಳುಗಳಿಂದ ಕಾಣುವ ಫೋಟೊ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಆಗ ರೈಲ್ವೆ ಇಲಾಖೆಯಲ್ಲಿ ಹಿರಿಯ ಹುದ್ದೆಯಲ್ಲಿದ್ದ ವ್ಯಕ್ತಿಯೊಬ್ಬರು ಆ ಫೋಟೊವನ್ನು ತಮ್ಮ ಕಚೇರಿಯಲ್ಲಿ ಹಾಕಿಕೊಂಡಿದ್ದರು. ರೈಲ್ವೆ ಮಂದಿಯ ಹೊಣೆಗೇಡಿತನದಿಂದ ಆ ಅಪಘಾತ ಸಂಭವಿಸಿದ ಕಾರಣ, ‘ಆ ನತದೃಷ್ಟ ವ್ಯಕ್ತಿಯ ಯಾತನಾಮಯ ಮುಖದ ಚಿತ್ರ ದಿನ ದಿನ ನಮ್ಮ ಪಾಪಪ್ರಜ್ಞೆಯನ್ನು ಜಾಗೃತಗೊಳಿಸಲಿ’ ಎಂದು ಅವರು ಹೇಳಿಕೊಂಡಿದ್ದರು. ಅವರ ಹೆಸರು ಎಂ.ವಿ. ರಮಣಿ ಎಂದೇನೋ ನೆನಪು. ಇಂತಹ ಪಾಪಪ್ರಜ್ಞೆ, ದಯೆ ಇತ್ಯಾದಿಗಳನ್ನೆಲ್ಲಾ ಪೊಲೀಸ್ ವ್ಯವಸ್ಥೆಯಿಂದ ನಿರೀಕ್ಷಿಸಬಹುದು ಎನ್ನುವ ಖಾತರಿಯಿಲ್ಲ. ಪೊಲೀಸರನ್ನು ಸ್ವಲ್ಪಮಟ್ಟಿಗೆ ತಟ್ಟಬಹುದಾಗಿರುವುದು ಅವರಿಗೆ ಬಂದ ಸಂಕಷ್ಟ ಮಾತ್ರ. ಆದುದರಿಂದ ನೇಣುಗಂಬವನ್ನು ನೆನೆಸಿಕೊಂಡು ಕಪ್ಪಿಟ್ಟಿರುವ ಮತ್ತು ಕಣ್ಣೀರಿನಿಂದ ತೊಯ್ದಿರುವ ತಮ್ಮದೇ ‘ಬುಡಕಟ್ಟಿನ’ ಈರ್ವರ ಆ ಚಿತ್ರ ಅವರಲ್ಲಿ ಕೊಂಚ ಮಟ್ಟಿನ ಎಚ್ಚರ ಸೃಷ್ಟಿಸುತ್ತಿತ್ತೋ ಏನೋ? ಲಾಕಪ್‌ನಲ್ಲಿ ಏನು ಮಾಡಿದರೂ ಕೇಳುವವರಿಲ್ಲ ಎನ್ನುವ ಅವರ ಕ್ರೂರದಾರ್ಷ್ಟ್ಯವನ್ನು ಅದು ಸಣ್ಣಗೆ ಚುಚ್ಚುತ್ತಿತ್ತೋ ಏನೋ?

ಪೊಲೀಸರು ಈ ಫೋಟೊ ತೂಗುಹಾಕುವುದು ಬಿಡಿ, ಮುಖ್ಯವಾಹಿನಿ ಪತ್ರಿಕೆಗಳು ಈ ಸುದ್ದಿಗೆ ರಾಷ್ಟ್ರ ಮಟ್ಟದ ಪ್ರಾಧಾನ್ಯವನ್ನು ನೀಡಿಲ್ಲ. ಟೈಮ್ಸ್ ಆಫ್ ಇಂಡಿಯಾ ಮಾತ್ರ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸಿತು. ಮಾತ್ರವಲ್ಲದೆ ಲಾಕಪ್ಪಿನಲ್ಲಿ ಕೊಲೆಯಾದ ಆ ಯುವಕನ ವೃದ್ಧ ತಾಯಿ ತೀರ್ಪು ಕೇಳಿ ವಿಷಣ್ಣವದನರಾಗಿ ಆಕಾಶ ದಿಟ್ಟಿಸುವ ಫೋಟೊವನ್ನು ಕೂಡಾ ಪತ್ರಿಕೆ ಪ್ರಕಟಿಸಿತು. ಈ ಫೋಟೊ ಪೊಲೀಸರನ್ನು ತಟ್ಟುವುದಿಲ್ಲ, ಮನುಷ್ಯರ ಹೃದಯವನ್ನು ತಟ್ಟೀತು. ಏನೇ ಇರಲಿ, ಏಕೈಕ ಮಗನ ಕ್ರೂರ ಸಾವನ್ನು ನೆನೆದು ನಿತ್ಯ ನೋವಿನಿಂದ ದಿನ ದೂಡುವ ಆ ಅನಾಥ ತಾಯಿಗೆ ಈ ದೇಶದಲ್ಲಿ ಕಮರ್ಷಿಯಲ್ ಪತ್ರಿಕೆ ಎಂಬ ಹಣೆಪಟ್ಟಿ ಹೊಂದಿರುವ ಇಂಗ್ಲಿಷ್ ಪತ್ರಿಕೆಯೊಂದು ಮಾತ್ರ ಧ್ವನಿ ಆಯಿತು ಎನ್ನುವುದು ಈ ಕಾಲದ ವಿಪರ್ಯಾಸಗಳಲ್ಲಿ ಒಂದು.

ಪೊಲೀಸ್ ದೌರ್ಜನ್ಯದ ಕುರಿತು ಮಾತೆತ್ತಿದರೆ ಪ್ರಾಯೋಗಿಕವಾಗಿ ಯೋಚಿಸಿ ಎನ್ನುವ ಸಲಹೆ ಬರುತ್ತದೆ. ಪೊಲೀಸರು ಅಷ್ಟೊಂದು ಕಠಿಣವಾಗಿರುವುದಕ್ಕೆ ಇಷ್ಟಾದರೂ ಸುವ್ಯವಸ್ಥೆ ಇದೆ ಎನ್ನುವ ಸಮಜಾಯಿಷಿ ಸಿಗುತ್ತದೆ. ಮಾನವ ಹಕ್ಕುಗಳ ಬಗ್ಗೆ ಪ್ರತಿಪಾದಿಸುವವರು ಕೆಲಸಕ್ಕೆ ಬಾರದ ತತ್ವಜ್ಞಾನಿಗಳು ಎನ್ನುವ ಕುಹಕ ಕೇಳಿಸುತ್ತದೆ. ಪೊಲೀಸರು ಬಲಪ್ರಯೋಗಿಸದೆ ಕೆಲಸ ಮಾಡಲಾಗುವುದಿಲ್ಲ ಮತ್ತು ಕಾಠಿಣ್ಯದಿಂದ ವರ್ತಿಸಬೇಕಾಗುತ್ತದೆ ಇತ್ಯಾದಿ ಪಾಠಗಳನ್ನು ಯಾರೂ ಹೇಳುವ ಅಗತ್ಯವಿಲ್ಲ. ಅವೆಲ್ಲಾ ಎಲ್ಲರಿಗೂ ತಿಳಿದದ್ದೇ ಆಗಿದೆ. ಆದರೆ ಕಾಠಿಣ್ಯ ಬೇರೆ, ದರ್ಪ ತೋರುವುದು ಬೇರೆ. ಅಗತ್ಯ ಬಲಪ್ರಯೋಗಿಸುವುದು ಬೇರೆ, ದೌರ್ಜನ್ಯ ಎಸಗುವುದು ಬೇರೆ.

ಒಂದು ಸಮಾಜ ಪೊಲೀಸ್ ವ್ಯವಸ್ಥೆಯನ್ನು ಅಗತ್ಯ ಪೆಡಂಭೂತ (necessary evil) ಎನ್ನುವಂತೆ ನೋಡಬೇಕೇ ಹೊರತು ಅದನ್ನು ವೈಭವೀಕರಿಸಬಾರದು. ಯಾಕೆಂದರೆ ಪೊಲೀಸ್ ವ್ಯವಸ್ಥೆ ಎಂದಮೇಲೆ ಅದರ ಬಳಿ ಪ್ರಶ್ನಾತೀತವಾದ ಒಂದಷ್ಟು ಅಧಿಕಾರ ಇದ್ದೇ ಇರುತ್ತದೆ ಮತ್ತು ಇರಬೇಕಾಗುತ್ತದೆ. ಪ್ರಶ್ನಾತೀತ ಅಧಿಕಾರ ಯಾರ ಬಳಿ ಇದ್ದರೂ ಅಪಾಯಕಾರಿ. ಅದೂ ಭಾರತದಂತಹ ಶ್ರೇಣೀಕೃತ ಸಮಾಜದಲ್ಲಿ ಇನ್ನೂ ಅಪಾಯಕಾರಿ. ಆದುದರಿಂದ ಪೊಲೀಸರ ಮೇಲೆ ಜನರಿಗೆ ಮತ್ತು ಚುನಾಯಿತ ಸರ್ಕಾರಗಳಿಗೆ ಒಂದು ಹಂತದ ನಿಗಾ ಇರಲೇಬೇಕು. ಅದು ಇಲ್ಲದೆ ಹೋದಾಗ ಏನೇನಾಗಬೇಕೋ ಅದೆಲ್ಲವೂ ಈ ಹೊತ್ತು ಭಾರತದ ಪೊಲೀಸ್ ವ್ಯವಸ್ಥೆಯಲ್ಲಿ ಆಗುತ್ತಿದೆ.

ಹೋದ ವಾರ ಭಾರತೀಯ ಪೊಲೀಸ್ ಸೇವೆಯ ಕರ್ನಾಟಕ ವೃಂದಕ್ಕೆ ಸೇರಿದವರೊಬ್ಬರು ದೇಶದ ಪೊಲೀಸ್ ವ್ಯವಸ್ಥೆಯ ಕುರಿತು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಒಂದು ಅಗ್ರ ಲೇಖನ ಬರೆದರು. ಅದರಲ್ಲಿ ವ್ಯವಸ್ಥೆಯ ಕ್ರೌರ್ಯದ ಬಗ್ಗೆ ಪ್ರಸ್ತಾಪವೇನೂ ಇರಲಿಲ್ಲ. ಅದರಲ್ಲಿ ಪೊಲೀಸ್ ವ್ಯವಸ್ಥೆಯ ಅಸಮರ್ಥತೆ ಮತ್ತು ತುಘಲಕ್ ಶೈಲಿಯ ಬಗ್ಗೆ ವಿವರಗಳಿದ್ದವು. ವ್ಯವಸ್ಥೆಯ ಒಳಗಿರುವವರು ಆಗಾಗ ಹೀಗೆ ಬರೆಯುತ್ತಿರುವುದು ಅಗತ್ಯ. ಇಂತಹ ಬರವಣಿಗೆಗಳನ್ನು ಅವರ ಕರ್ತವ್ಯ ಪ್ರಜ್ಞೆಯ ಭಾಗ ಎಂದು ಗೌರವಿಸಬೇಕು. ಭಾರತದ ಪೊಲೀಸ್ ವ್ಯವಸ್ಥೆಯು ಬ್ರಿಟಿಷರು ದೇಶ ಬಿಟ್ಟು ಹೋದ ದಿನ ಯಾವ ಸ್ಥಿತಿಯಲ್ಲಿತ್ತೋ ಇಂದಿಗೂ ಹಾಗೆಯೇ ಇದೆ ಅಂತ ಅವರು ಬರೆದಿದ್ದಾರೆ. ಇದನ್ನು ಇನ್ನಷ್ಟು ಚೆನ್ನಾಗಿ ಕಟ್ಟಿಕೊಟ್ಟದ್ದು ಗುಜರಾತ್ ಪೊಲೀಸರ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಯುಟ್ಯೂಬ್‌ನಲ್ಲಿ ವೈರಲ್ ಆಗಿದ್ದ ಒಂದು ವಿಡಿಯೊಗೆ ಯಾರೋ ನೀಡಿದ ಶೀರ್ಷಿಕೆ. 2015ರಲ್ಲಿ ಪಾಟೀದಾರ್ ಚಳವಳಿಯನ್ನು ಹತ್ತಿಕ್ಕಿದ ಪೊಲೀಸರು ಆನಂತರ ಗುಜರಾತ್‌ನ ನಗರವೊಂದರ ನಿರ್ಜನ ಬೀದಿಗಳಲ್ಲಿ ಮನಬಂದಂತೆ ವರ್ತಿಸುತ್ತಾರೆ. ರಸ್ತೆ ಪಕ್ಕ ನಿಲ್ಲಿಸಿದ್ದ ವಾಹನಗಳ ಗಾಜುಗಳನ್ನು ಮನಸೋ ಇಚ್ಛೆ ಪುಡಿ ಮಾಡುತ್ತಾರೆ. ಯುದ್ಧ ಗೆದ್ದ ಸೈನಿಕರು ಶತ್ರು ರಾಜ್ಯದಲ್ಲಿ ಕಂಡಕಂಡದ್ದನ್ನೆಲ್ಲಾ ಕೆಡಹುತ್ತಾ ಸಾಗುವ ರೀತಿಯಲ್ಲಿ ಅಲ್ಲಿನ ದೃಶ್ಯಾವಳಿಗಳು ಕಾಣಿಸುತ್ತವೆ. ಆ ವಿಡಿಯೊ ತುಣುಕಿಗೆ ನೀಡಿದ ಶೀರ್ಷಿಕೆ ಗುಜರಾತಿನ ‘ಜನರಲ್ ಡಯರ್ ಕ್ಷಣ’ (Gujarath’s Dyer Moment) ಎನ್ನುವುದಾಗಿತ್ತು. ಡಯರ್ ಗೊತ್ತಲ್ಲ. ಜಲಿಯನ್‌ವಾಲಾಬಾಗ್‌ನಲ್ಲಿ ಅಮಾಯಕರ ಮೇಲೆ ಗುಂಡು ಹಾರಿಸಲು ಆದೇಶಿಸಿ ಜನ ಸತ್ತು ನೆಲಕ್ಕೊರಗುತ್ತಿರುವುದನ್ನು ಕಂಡು ಮನಸಾ ಸುಖಿಸಿದ ಬ್ರಿಟಿಷ್ ಮಿಲಿಟರಿ–ಪೊಲೀಸ್ ಮುಖ್ಯಸ್ಥ. ತನ್ನ ಕ್ರೌರ್ಯ ಪರಾಕಾಷ್ಠೆಯ ಬಗ್ಗೆ ಏನೊಂದು ಪಶ್ಚಾತ್ತಾಪವಿಲ್ಲದೆ ‘ಅವಕಾಶ ಇದ್ದಿದ್ದರೆ ಮಷಿನ್ ಗನ್ ತಂದು ಅವರ ಮೇಲೆ ಪ್ರಯೋಗಿಸುತ್ತಿದ್ದೆ’ ಎಂದು ಹಂಟರ್ ಕಮಿಷನ್ ಮುಂದೆ ನಿರ್ಭಾವುಕನಾಗಿ ನುಡಿದವ. ನಿಜಕ್ಕೂ ಇಂದಿನ ಪೊಲೀಸ್ ವ್ಯವಸ್ಥೆಯನ್ನು ಹೋಲಿಸಬೇಕಾಗಿರುವುದು ಜಲಿಯನ್‌ವಾಲಾಬಾಗ್ ಮಾರಣಹೋಮ ನಡೆದ ದಿನಕ್ಕೆ. ಅಂದು ಅದು ಹೇಗಿತ್ತೋ ಹಾಗೆನೇ ಇಂದೂ ಇದೆ. ಇಂದಿಗೂ ಭಾರತದಲ್ಲಿ ಪೊಲೀಸ್ ವ್ಯವಸ್ಥೆಗೆ ಸೇರುವುದು ಎಂದರೆ ಜನರಲ್ ಡೈಯರ್‌ನ ಸಂತತಿಯಾಗಿ ದೀಕ್ಷೆ ಪಡೆಯುವುದು ಎಂದೇ ಲೆಕ್ಕ. ಇದಕ್ಕೆ ಅಪವಾದ ಎಂಬಂತೆ ಅಲ್ಲೋರ್ವ ಇಲ್ಲೋರ್ವ ಕಾಣಿಸಬಹುದು. ಈ ಲೇಖನ ವ್ಯಕ್ತಿಗಳ ಮೇಲಲ್ಲ, ವ್ಯವಸ್ಥೆಯ ಮೇಲೆ.

ಡಯರ್ ಇಂಗ್ಲೆಂಡ್‌ಗೆ ಮರಳಿದಾಗ ಅಲ್ಲಿನ ಜನ ಆತನನ್ನು ದೊಡ್ಡ ಹೀರೊ ಎನ್ನುವಂತೆ ಸ್ವಾಗತಿಸುತ್ತಾರೆ, ಅಭಿನಂದಿಸುತ್ತಾರೆ. ಇಂದಿನ ಭಾರತೀಯ ಸಮಾಜವೂ ಹಾಗೆನೇ ಇದೆ. ಪೊಲೀಸರ ಕ್ರೌರ್ಯವನ್ನು ಅದು ಸಮರ್ಥಿಸುತ್ತದೆ, ವೈಭವೀಕರಿಸುತ್ತದೆ ಮಾತ್ರವಲ್ಲ ಅನುಕರಿಸಲೂತೊಡಗಿದೆ. ಪೊಲೀಸರು ಲಾಕಪ್‌ನ ಒಳಗೆ ಮಾಡುವುದನ್ನು ಜನ ಈಗ ಬೀದಿಯಲ್ಲಿ ಮಾಡುತ್ತಿದ್ದಾರೆ. ಅದನ್ನು ದೊಂಬಿ ಹತ್ಯೆ ಎನ್ನಲಾಗುತ್ತಿದೆ. ಇಲ್ಲಿ ಯಾರಿಗೆ ಯಾರು ಸ್ಫೂರ್ತಿ ಅಂತ ಪ್ರತ್ಯೇಕ ಹೇಳಬೇಕಾಗಿಲ್ಲ. ಹಿಂಸೆಯನ್ನೇ ಕೇಂದ್ರವಾಗಿಸಿಕೊಂಡು ಕಾರ್ಯವೆಸಗುವ ಪೊಲೀಸ್ ವ್ಯವಸ್ಥೆಯೇ ಮೂಲಭೂತವಾಗಿ ದೊಂಬಿ ಹತ್ಯೆ ಎಂಬ ಈ ಪಿಡುಗನ್ನು ಹುಟ್ಟುಹಾಕಿದ್ದು. ನಮ್ಮ ಕಾಲದ ರಾಜಕೀಯ ಅದನ್ನು ಪೋಷಿಸಿದೆ ಅಷ್ಟೇ.

ರಷ್ಯನ್ ಕಾದಂಬರಿಕಾರ ದಾಸ್ತೋವಸ್ಕಿಯ ‘ಅಪರಾಧ ಮತ್ತು ಶಿಕ್ಷೆ’ (Crime and Punishment) ಕೃತಿಯ ಪ್ರಧಾನ ಪಾತ್ರ ರಾಸ್ಕೊಲ್ನಿಕೋವ್ ತನಗೆ ಸರಿಯೆನಿಸಿದ ಕಾರಣಕ್ಕೆ ಕೊಲೆ ಮಾಡಿದರೆ ಅದರಲ್ಲಿ ಏನೂ ತಪ್ಪಿಲ್ಲ, ತಾನು ಎಲ್ಲದಕ್ಕೂ ಅತೀತ ಎನ್ನುವ ಮನೋಸ್ಥಿತಿ ಹೊಂದಿರುತ್ತಾನೆ. ಆದರೆ ಕೊಲೆ ಮಾಡಿದ ನಂತರ ವಿಚಲಿತನಾಗಿ ಪಾಪಪ್ರಜ್ಞೆಯಿಂದ ಮನೋರೋಗಿಯಾಗುತ್ತಾನೆ. ಆಲ್ಬರ್ಟ್ ಕಾಮುನ ಶ್ರೇಷ್ಠ ಕಾದಂಬರಿ ‘ಅನ್ಯ’ದಲ್ಲಿ (The Stranger) ಮೆರ್ಸೊ ಎಂಬಾತ ಒಂದು ದಿನ ಓರ್ವ ವ್ಯಕ್ತಿಯನ್ನು ‘ಹೀಗೆ ಸುಮ್ಮನೆ’ ಕೊಲೆ ಮಾಡುತ್ತಾನೆ ಮತ್ತು ಕೊನೆಯತನಕ ಆ ಕುರಿತು ಯಾವುದೇ ಪಶ್ಚಾತ್ತಾಪವಿಲ್ಲದೆ ನಿರ್ಭಾವುಕನಾಗಿರುತ್ತಾನೆ. ಭಾರತೀಯ ಪೊಲೀಸರ ಮನಸ್ಥಿತಿ ಈ ಎರಡೂ ಪಾತ್ರಗಳ ಮಿಶ್ರಣದಂತಿದೆ. ಅವರು ರಾಸ್ಕೊಲ್ನಿಕೋವ್‌ನ ಹಾಗೆ ತಮಗೆ ಬೇಕಾದವರನ್ನು ಹಿಂಸಿಸಿ ಕೊಲ್ಲುವುದು ಎಂದರೆ ಅದು ಬಹಳ ಸಹಜ ಕ್ರಿಯೆ ಎಂದು ಭಾವಿಸಿದ್ದಾರೆ. ಕೊಲೆ ಮಾಡಿದ ಮೇಲೆ ಮೆರ್ಸೊನ ಹಾಗೆ ‘ಹೌದು ಕೊಂದಿದ್ದೇವೆ, ಏನಂತೆ ಈಗ’ ಎಂದು ನಿರ್ಭಾವುಕ ಮನೋಭಾವ ಬೆಳೆಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಹೀಗೊಂದು ತೀರ್ಪು ನೀಡುವ ಅಗತ್ಯವಿತ್ತು.

ಕೊನೆಯದಾಗಿ ಒಂದು ಮಾತು. ಮನುಷ್ಯರಿಗೆ ಬಿಡಿ, ಪೊಲೀಸರಿಗೂ ಗಲ್ಲಾಗಬಾರದು. ಈ ಶಿಕ್ಷೆ ಜೀವಾವಧಿ ಶಿಕ್ಷೆಯಾಗಿ ಬದಲಾಗಲಿ. ಅಲ್ಲಿಯತನಕ ಸಾವನ್ನು ನೆನೆದು ಅವರು ನಡುಗಿದರೆ ಸಾಕು. ಉಳಿದವರಿಗೆ ಇದೊಂದು ಪಾಠವಾದರೆ ಸಾಕು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು