ಒಳಿತಿನ ರಾಕ್ಷಸೀಕರಣದ ಎಲ್ಲ ಕಾಲದ ಪಿತೂರಿ ಗಾಂಧೀಜಿಯ ಮೇಲೂ ನಡೆದಿದೆ ಹಾಗೂ ಮಹಾತ್ಮನ ಚಾರಿತ್ರ್ಯವಧೆಯ ಪ್ರಯತ್ನ ಸಾಕಷ್ಟು ಯಶಸ್ವಿಯಾಗಿದೆ. ಈ ಷಡ್ಯಂತ್ರದ ಮುಂದಿನ ಗುರಿ, ಮಹಾತ್ಮನಂತೆಯೇ ‘ಈ ದೇಶ ಎಲ್ಲರಿಗೂ ಸೇರಿದ್ದು’ ಎಂದು ಸಾರುತ್ತಿರುವ ಸಂವಿಧಾನವೆ?

ಕಾಲದ ಒಳಿತೇ ಮನುಷ್ಯರೂಪ ತಳೆದು ಗಾಂಧೀಜಿಯಾಗಿ ಈ ದೇಶದಲ್ಲಿ ಜನಿಸಿತು ಎಂದು ಅವರ ಜೀವಿತಾವಧಿಯಲ್ಲಿ ಬಹುಪಾಲು ಮಂದಿ ಭಾವಿಸಿದ್ದರು. ಹಾಗಾಗಿಯೇ ಅವರನ್ನು ಕೊಂದ ರಾಮಚಂದ್ರ ವಿನಾಯಕ ಗೋಡ್ಸೆ ಅಲಿಯಾಸ್ ನಾಥೂರಾಮ್ ಗೋಡ್ಸೆ ಜನರ ಕಣ್ಣಲ್ಲಿ ಬಹುದೊಡ್ಡ ಕೆಡುಕಾಗಿ ಕಾಣಿಸಿಕೊಂಡ. ಆತನನ್ನು ಛೂ ಬಿಟ್ಟ ಕೂಟದವರು ಕೆಡುಕಿನ ಪ್ರತಿನಿಧಿಗಳಾಗಿ ಕಂಡರು. ಅವರು ಪ್ರತಿಪಾದಿಸುತ್ತಿದ್ದ ಸಿದ್ಧಾಂತ ಕೆಡುಕಿನ ಬೀಜಮಂತ್ರವೇನೋ ಎಂದು ಆ ಕಾಲದಲ್ಲಿ ಜನ ಭಾವಿಸುವಂತಾಯಿತು. ಗೋಡ್ಸೆಯನ್ನು ಗೋಡ್ಸೆಯನ್ನಾಗಿ ತಯಾರಿಸಿದವರು ‘ಈ ದೇಶ ನಮಗೆ ಮತ್ತು ನಮ್ಮವರಿಗೆ ಮಾತ್ರ ಸೇರಿದ್ದು’ ಎಂದು ಪ್ರತಿಪಾದಿಸುತ್ತಿದ್ದರು. ಹಾಗಾಗಿ ‘ದೇಶ ಎಲ್ಲರಿಗೂ ಸೇರಿದ್ದು’ ಎಂದು ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದ ಗಾಂಧೀಜಿಯವರು ಗೋಡ್ಸೆಯ ಬೆನ್ನಾಗಿ ನಿಂತವರಿಗೆ ವೈರಿಯಾಗಿ ಕಾಣಿಸಿದರು. ‘ಎಲ್ಲರಿಗೂ’ ಎನ್ನುವಲ್ಲಿ ಒಂದು ಒಳಿತು ಇದೆ. ‘ನಮಗೆ’, ‘ನಮ್ಮವರಿಗೆ ಮಾತ್ರ’ ಎನ್ನುವಲ್ಲಿ ಸ್ವಾರ್ಥವಿದೆ, ಸಂಕುಚಿತತೆ ಇದೆ. ಹಾಗಾಗಿ, ಗಾಂಧೀಜಿಯ ಹತ್ಯೆಯ ನಂತರ ಅವರ ಕೊಲೆಗೆ ಒತ್ತಾಸೆ ನೀಡಿದವರನ್ನು ಕೆಡುಕಿನ ಪ್ರತೀಕಗಳು ಎಂದು ಜನ ಭಾವಿಸಿದ್ದು ಸಹಜವಾಗಿಯೇ ಇತ್ತು.

ಜನಾಭಿಪ್ರಾಯ ಈ ರೀತಿಯಾಗಿ ಮೂಡಿದ ಹಿನ್ನೆಲೆಯಲ್ಲಿ ಗೋಡ್ಸೆಯ ಮನಸ್ಸು ಕೆಡಿಸಿ ಪಾತಕೋದ್ಯಮಕ್ಕೆ ಹಚ್ಚಿದವರಿಗೆ ತಮಗೆ ಅಂಟಿದ ಕಾಳಕಳಂಕವನ್ನು ತೊಳೆದುಕೊಳ್ಳಬೇಕಿತ್ತು. ಗಾಂಧೀಜಿಯಿಂದಾಗಿ ಪಾಕಿಸ್ತಾನ ಹುಟ್ಟಿಕೊಂಡದ್ದು ಎಂಬ ಕಾರಣಕ್ಕೆ ಉದ್ವೇಗಗೊಂಡ ಗೋಡ್ಸೆ ಗಾಂಧೀಜಿಯನ್ನು ಕೊಂದ ಎಂಬ ಅವರ ಅಸಂಗತ ಸಮರ್ಥನೆ ಟೊಳ್ಳಾಗಿತ್ತು. ಜನ ಅದನ್ನು ಒಪ್ಪಿಕೊಳ್ಳಲಿಲ್ಲ. ಯಾಕೆಂದರೆ, ಗಾಂಧೀಜಿಯ ಕೊಲೆ ಯತ್ನ ಪಾಕಿಸ್ತಾನದ ಪ್ರಸ್ತಾಪ ಮುನ್ನೆಲೆಗೆ ಬರುವ ಮೊದಲೇ ಪ್ರಾರಂಭವಾಗಿತ್ತು. ಹಾಗಾಗಿ, ಕಳಂಕ ಕಳೆದುಕೊಳ್ಳಲು ಅವರಿಗಿದ್ದ ಒಂದೇ ದಾರಿ, ಗಾಂಧೀಜಿ ಪ್ರತಿನಿಧಿಸಿದ್ದ ಒಳಿತನ್ನೇ ಕೆಡುಕು ಎಂದು ಚಿತ್ರಿಸುವುದು. ವ್ಯವಸ್ಥಿತ ಸುಳ್ಳುಗಳ ಮೂಲಕ ಅವರ ಚಾರಿತ್ರ್ಯವಧೆ ಮಾಡುವುದು ಮತ್ತು ಚರಿತ್ರೆಯನ್ನು ತಿರುಚಿ ಗಾಂಧೀಜಿ ಮಹಾನ್ ಕೆಡುಕಿನ ಬಹುದೊಡ್ಡ ಪ್ರತಿನಿಧಿ ಎಂದು ಬಿಂಬಿಸುವುದು. ಆ ಕೆಡುಕನ್ನು ಕೆಡವಿದ ಗೋಡ್ಸೆ, ಅವನ ಬೆನ್ನಿಗೆ ನಿಂತ ಸಮುದಾಯ ಮತ್ತು ಸಿದ್ಧಾಂತ ಒಳಿತಿನ ಮಹಾನ್ ಪ್ರತಿನಿಧಿಗಳು ಎಂದು ಜನರನ್ನು ನಂಬಿಸುವುದು. ಇದು ಗಾಂಧೀಜಿಯ ರಾಕ್ಷಸೀಕರಣ. ಇದನ್ನು ಅವರು ಮಾಡಿದರು. ಎಡೆಬಿಡದೆ, ಅಡೆತಡೆಗಳನ್ನು ಲೆಕ್ಕಿಸದೆ ಮಾಡಿದರು. ಆಗ ಗುಪ್ತವಾಗಿ, ಈಗ ಮುಕ್ತವಾಗಿ ಮಾಡುತ್ತಿದ್ದಾರೆ. ದೊಡ್ಡ ಯಶಸ್ಸು ಗಳಿಸಿದ್ದಾರೆ.

ಹೀಗೆಲ್ಲಾ ಆಗಿಹೋಗಿದ್ದು ಗಾಂಧೀಜಿಯ ವಿಚಾರದಲ್ಲಿ ಮಾತ್ರವಲ್ಲ. ಚರಿತ್ರೆಯುದ್ದಕ್ಕೂ ಇದುವೇ ಆಗಿದೆ. ಒಳಿತಿನ ರಾಕ್ಷಸೀಕರಣ ಮತ್ತು ಕೆಡುಕಿನ ದೈವೀಕರಣ ಒಂದು ನಿರಂತರ ರಾಜಕೀಯ ಪ್ರಕ್ರಿಯೆ. ಸಮಸ್ತ ಭಾರತೀಯ ಪುರಾಣಗಳಲ್ಲಿ ಬರುವ ಅಷ್ಟೂ ರಾಕ್ಷಸರ ಪಾತ್ರಗಳೂ ನಿಜವಾಗಿ ಕೆಡುಕುಗಳನ್ನು ಪ್ರತಿನಿಧಿಸುತ್ತವೆಯೇ? ಅಥವಾ ಸಮಾಜದ ಕೆಲವೊಂದು ಶಕ್ತಿಗಳನ್ನು ಎದುರು ಹಾಕಿಕೊಂಡದ್ದಕ್ಕಾಗಿ ಅವರನ್ನೆಲ್ಲ ರಾಕ್ಷಸರನ್ನಾಗಿ ಬಿಂಬಿಸಲಾಗಿದೆಯೆ? ಈ ಪ್ರಶ್ನೆಯನ್ನು ಕಾಲಕಾಲಕ್ಕೆ ಬಹಳಷ್ಟು ಮಂದಿ ಎತ್ತಿದ್ದಾರೆ.

ದೇಶದಾದ್ಯಂತ ಒಂದು ಸಮುದಾಯದವರು ರಾಕ್ಷಸರು ಎಂದು ಕಟ್ಟಿಕೊಟ್ಟ ಹಲವಾರು ಪುರಾಣಪಾತ್ರಗಳನ್ನು ಇತರ ಸಮುದಾಯಗಳವರು ಪೂಜಿಸುತ್ತಾರೆ. ಇಂದಿಗೂ ಜನಪದರು ಲಂಕೇಶ, ರಾವಣ, ದುರ್ಯೋಧನ ಮುಂತಾದ ಹೆಸರುಗಳನ್ನು ಮಕ್ಕಳಿಗೆ ಇಡುತ್ತಾರೆ ಎಂದರೆ, ಅವರ ಕಲ್ಪನೆಯಲ್ಲಿ ಈ ಪಾತ್ರಗಳೆಲ್ಲ ಕೆಡುಕುಗಳ ಪ್ರತಿನಿಧಿಗಳಾಗಿರಲಿಲ್ಲ ಎಂದೇ ಲೆಕ್ಕ. ಕೇರಳದಂತಹ ರಾಜ್ಯ, ವೈದಿಕ ಪುರಾಣಗಳು ರಾಕ್ಷಸ ಅಂತ ಚಿತ್ರಿಸುವ ಬಲಿ ಚಕ್ರವರ್ತಿಯ ಮಾನವೀಯ ಗುಣಗಳನ್ನು ಕೊಂಡಾಡುತ್ತದೆ. ಬಲಿಯ ಆಡಳಿತವನ್ನು ಕಟ್ಟಿಕೊಡುವ ಒಂದು ಮಲಯಾಳದ ಜಾನಪದ ಗೀತೆಯ ಆರಂಭದ ಸಾಲುಗಳು ಹೀಗಿವೆ: ಮಾವೆಲಿ ನಾಡುಂ ಈಡುಮ್ ಕಾಲಂ, ಮನುಷ್ಯರೆಲ್ಲವರೂಂ ಒನ್ನು ಪೋಲೆ, ಆಮೋದತ್ತೋಡೇ ವಶಿಕ್ಕುಮ್ ಕಾಲಂ, ಆಪತ್ತಂಗಾರ್ಕು ಮೊತ್ತಿಲ್ಲ ತಾನುಂ (ಮಹಾಬಲಿಯ ಕಾಲದಲ್ಲಿ/ ಮನುಷ್ಯರೆಲ್ಲರೂ ಸಮಾನರಲ್ಲಿ/ ನಾಡಗುಂಟ ನೆಮ್ಮದಿ/ ಕಾಡಿದ್ದಿಲ್ಲ ಬೇಗುದಿ). ಇದರಲ್ಲಿ ಸಾಂವಿಧಾನಿಕ ಮೌಲ್ಯಗಳಿವೆ. ಆ ಕಾರಣಕ್ಕೇನೆ ಬಲಿ ಕೆಲವರ ಕಣ್ಣಲ್ಲಿ ರಾಕ್ಷಸನಾಗಿರಬೇಕು. ಕೇರಳದ ರಾಜ್ಯಹಬ್ಬ ಆದ ಓಣಂ ಸಂದರ್ಭದಲ್ಲಿ ಈ ಹಾಡು ಎಲ್ಲ ಸಮುದಾಯಗಳ ಮನೆ ಮನೆಯಲ್ಲೂ ರಿಂಗಣಿಸುತ್ತದೆ.

ಒಳಿತು ಮತ್ತು ಕೆಡುಕುಗಳು ಎಂದರೆ ಕಪ್ಪು ಮತ್ತು ಬಿಳುಪು ಎಂದು ಪ್ರತ್ಯೇಕಿಸಬಹುದಾದಷ್ಟು ಸ್ಪಷ್ಟವಾಗಿರುವುದಿಲ್ಲ ಎನ್ನುವ ಸಂದೇಶವನ್ನೇ ಎಲ್ಲ ಪುರಾಣಗಳು ಕಟ್ಟಿಕೊಡುವುದು. ಸ್ಥಳೀಯ ಪುರಾಣಗಳಾದರೂ ಅಷ್ಟೇ, ಅವುಗಳನ್ನು ಮೂಲೆಗುಂಪು ಮಾಡಿ ಜನಮನವನ್ನು ಆವರಿಸಿರುವ ದೊಡ್ಡ ದೊಡ್ಡ ಪುರಾಣಗಳಾದರೂ ಅಷ್ಟೇ. ಆದರೆ, ಪುರಾಣ ಪಾತ್ರಗಳನ್ನು ಬಳಸಿಕೊಂಡು ಜನರ ಭಾವನೆಗಳನ್ನು ಬಡಿದೆಬ್ಬಿಸಿ ಅಧಿಕಾರ ಹಿಡಿಯುವ ತಂತ್ರ ಹೇಳಿಕೊಡುವ ವರ್ಗಗಳು ತಮಗೆ ಅನುಕೂಲವೆನಿಸುವ ಪಾತ್ರಗಳನ್ನು ಒಳಿತಿನ ಮಹಾನ್ ಪ್ರತೀಕಗಳೆಂದೂ, ತಮಗಾಗದವರನ್ನು– ಅವರೆಷ್ಟೇ ಜೀವಪರವಾಗಿದ್ದರೂ ಸರಿ– ರಾಕ್ಷಸರೆಂದೂ ಚಿತ್ರಿಸುವ ನೀಚ ಬೌದ್ಧಿಕೋದ್ಯಮದಲ್ಲಿ ಯಶಸ್ವಿಯಾಗಿವೆ. ಗಾಂಧೀಜಿ ಈ ದಂಧೆಗೆ ಬಲಿಯಾಗುತ್ತಿರುವ ಇತ್ತೀಚಿನ ಚಾರಿತ್ರಿಕ ವ್ಯಕ್ತಿ.

ಅಕ್ಷರ ಮತ್ತು ವಿದ್ಯೆ ಕೆಲವೇ ಅಧಿಕಾರದಾಹಿ ವರ್ಗಗಳ ಏಕಸ್ವಾಮ್ಯವಾಗಿ ಉಳಿದಿದ್ದಾಗ, ಪುರಾಣ ಪಾತ್ರಗಳನ್ನು ತಮ್ಮ ಮೂಗಿನ ನೇರಕ್ಕೆ ಬೇಕಾದಂತೆ ಚಿತ್ರಿಸಿಕೊಂಡು ಜನಮನದಲ್ಲಿ ಪ್ರತಿಷ್ಠಾಪಿಸಲು ಸುಲಭವಾಗಿತ್ತು. ಅದೃಷ್ಟವಶಾತ್, ಗಾಂಧೀಜಿಯ ರಾಕ್ಷಸೀಕರಣ ಪ್ರಾರಂಭವಾಗುವ ಹೊತ್ತಿಗೆ ಅಕ್ಷರ ಮತ್ತು ವಿದ್ಯೆ ಬಹುಜನರನ್ನು ತಲಪಿತ್ತು. ಇಲ್ಲದೇ ಹೋಗಿದ್ದರೆ, ಈ ವೇಳೆಗೆ ಗಾಂಧೀಜಿ ಕೂಡ ಕೋರೆ ಹಲ್ಲು ಹೊತ್ತ, ಹತ್ತೋ ಇಪ್ಪತ್ತೋ ತಲೆ ಹೊತ್ತ ರಾಕ್ಷಸನಾಗಿ ರೂಪುಗೊಳ್ಳುತ್ತಿದ್ದರು; ಗೋಡ್ಸೆ ಸಕಲಗುಣಸಂಪನ್ನನಾದ ಪುರುಷೋತ್ತಮನಾಗಿ, ಒಂದು ದೈವೀ ಅವತಾರವಾಗಿ ರೂಪುಗೊಳ್ಳುತ್ತಿದ್ದ. ಪುರಾಣ ಪಾತ್ರಗಳನ್ನು ರಾಕ್ಷಸೀಕರಿಸಿದಷ್ಟು ಸುಲಲಿತವಾಗಿ ಗಾಂಧೀಜಿಯವರನ್ನು ಪೂರ್ಣ ರಾಕ್ಷಸೀಕರಿಸಲು ಸಾಧ್ಯವಾಗಿಲ್ಲ. ಹಾಗೆಂದು ಈ ಪ್ರಯತ್ನ ಪೂರ್ತಿ ಸೋಲಲೂ ಇಲ್ಲ. ಇವತ್ತು ಮಕ್ಕಳು ಕೂಡಾ ಗಾಂಧೀಜಿ ಎಂದರೆ ಏನೋ ಕೆಡುಕಿನ ಅಪಅವತಾರ ಎಂದು ಭಾವಿಸುವ ಹಂತ ತಲಪಿದೆ. ಗೋಡ್ಸೆಯ ಹೆಸರು ಮತ್ತು ಚಿತ್ರ ಲಾರಿ, ಬಸ್, ಆಟೊಗಳ ಹಿಂಭಾಗದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ (ಎಲ್ಲೆಲ್ಲಿ ದೇವರುಗಳ, ಮಹಾಪುರುಷರ, ಮೇರುನಟರ ಚಿತ್ರಗಳಿಗೆ ಮಾತ್ರ ಅವಕಾಶವಿತ್ತೋ ಅಲ್ಲೆಲ್ಲ) ನಿಧಾನಕ್ಕೆ ಸ್ಥಾನ ಪಡೆಯುತ್ತಿದೆ. ಉತ್ತರ ಭಾರತದ ಕೆಲವೆಡೆ ಗೋಡ್ಸೆಗೆ ದೇವಾಲಯ ನಿರ್ಮಾಣವಾದ ಸುದ್ದಿ ಬರುತ್ತಿದೆ. ಅಷ್ಟರಮಟ್ಟಿಗೆ ಒಂದು ವರ್ಗದ ಬೌದ್ಧಿಕ ಪಿತೂರಿ ಯಶಸ್ವಿಯಾಗಿದೆ.

ಗಾಂಧೀಜಿಯವರ ವಿರುದ್ಧ ಯಾವ ವರ್ಗ ತಿರುಗಿ ಬಿತ್ತೋ, ಅವರೇ ಇಂದು ಸಂವಿಧಾನದ ವಿರುದ್ಧವೂ ಕತ್ತಿಮಸೆಯುತ್ತಿರುವುದು. ಯಾವ ಕಾರಣಕ್ಕೆ ಅವರು ಗಾಂಧೀಜಿಯವರನ್ನು ದ್ವೇಷಿಸಿದರೋ ಅದೇ ಕಾರಣಕ್ಕೆ ಅವರು ಇಂದು ಸಂವಿಧಾನವನ್ನೂ ದ್ವೇಷಿಸುತ್ತಿರುವುದು. ಗಾಂಧೀಜಿ ಪ್ರತಿಪಾದಿಸುತ್ತಿದ್ದಂತೆಯೇ ಸಂವಿಧಾನವೂ ಈ ದೇಶ ಎಲ್ಲರಿಗೂ ಸೇರಿದ್ದು ಎಂದು ವಿಧಿಸುತ್ತದೆ. ಎಲ್ಲ ದೇಶಗಳಲ್ಲೂ ಎಲ್ಲರೂ, ಯಾವುದೋ ಕಾಲಘಟ್ಟದಲ್ಲಿ ಎಲ್ಲಿಂದಲೋ ಬಂದವರೇ ಆಗಿರುತ್ತಾರೆ ಮತ್ತು ಎಲ್ಲರೂ ಮನುಷ್ಯರೇ ಆಗಿರುತ್ತಾರೆ. ಹಾಗಾಗಿ, ‘ನಾವು ಇಲ್ಲಿನವರು’, ‘ಅವರು ಎಲ್ಲಿಂದಲೋ ಬಂದ ಅನ್ಯರು’, ‘ನಾವು ಮೇಲಿನವರು’, ‘ಅವರು ಕೆಳಗಿನವರು’ ಎಂಬಿತ್ಯಾದಿ ಪ್ರತ್ಯೇಕೀಕರಣಗಳಿಗೆ ಗಾಂಧೀಜಿಯಂತೆ ಸಂವಿಧಾನವೂ ಅವಕಾಶ ನೀಡುವುದಿಲ್ಲ. ಈ ಅಂಶವೇ ಗಾಂಧೀಜಿಯ ಕಗ್ಗೊಲೆಗೆ ಕಾರಣರಾದ ಶಕ್ತಿಗಳನ್ನು ಸಂವಿಧಾನದ ವಿರುದ್ಧವೂ ಕೊತಕೊತ ಕುದಿಯುವಂತೆ ಮಾಡಿರುವುದು. ಹಾಗಾಗಿಯೇ ಗಾಂಧೀಜಿಯ ವಿರುದ್ಧ ಮಾಡುತ್ತಿರುವ ಅದೇ ಅಪಪ್ರಚಾರವನ್ನು, ಅದೇ ರಾಕ್ಷಸೀಕರಣ ತಂತ್ರವನ್ನು ಅವರು ಸಂವಿಧಾನದ ವಿರುದ್ಧವೂ ಗುಪ್ತವಾಗಿಯೂ, ಬಹಿರಂಗವಾಗಿಯೂ ಮಾಡುತ್ತಿರುವುದು. ಆರು ಬಾರಿ ಪ್ರಯತ್ನಿಸಿ ಏಳನೆಯ ಬಾರಿಗೆ ಕೊನೆಗೂ ಅವರು ಗಾಂಧೀಜಿಯ ಎದೆಗೆ ಗುಂಡಿಕ್ಕುವಲ್ಲಿ ಸಫಲರಾದ ಹೊತ್ತಿಗೆ ಗಾಂಧೀಜಿಗೆ ಎಪ್ಪತ್ತೊಂಬತ್ತು ವರ್ಷ ವಯಸ್ಸಾಗಿತ್ತು. ಮುಂದಿನ ಮೂರು ವರ್ಷಗಳಲ್ಲಿ ಸಂವಿಧಾನಕ್ಕೂ ಎಪ್ಪತ್ತೊಂಬತ್ತು ತುಂಬಲಿದೆ. ಮುಂದಿನ ಮೂರು ವರ್ಷಗಳು! ಸಂವಿಧಾನ ಪ್ರೇಮಿಗಳೇ, ಸಂವಿಧಾನಕ್ಕಿರುವ ಈ ಎಪ್ಪತ್ತೊಂಬತ್ತರ ಕಂಟಕದ ಬಗ್ಗೆ ಎಚ್ಚರವಿರಲಿ.

ಆರು ಬಾರಿ ಗಾಂಧೀಜಿಯವರ ಜೀವದ ಮೇಲೆ ದಾಳಿ ಆಗಿದ್ದರೂ ಇನ್ನೊಮ್ಮೆಯೂ ಅದು ಆಗಬಹುದು ಎಂದು ಆಗ ಅಧಿಕಾರದಲ್ಲಿದ್ದ ಗಾಂಧೀಜಿಯ ಶಿಷ್ಯವರ್ಗ ಮತ್ತು ಗಾಂಧೀಜಿಯನ್ನು ಆರಾಧಿಸುತ್ತಿದ್ದ ಅಂದಿನ ಇಡೀ ಜನಸಮೂಹ ಊಹಿಸದೇ ಹೋದದ್ದು ಒಂದು ಚೋದ್ಯ. ಗಾಂಧೀಜಿಯ ಜೀವಕ್ಕಿದ್ದ ಕಂಟಕದ ಬಗ್ಗೆ ಅಂದಿನ ಭಾರತ ಪ್ರದರ್ಶಿಸಿದ್ದು ಅಸಾಧಾರಣ ಮೂರ್ಖತನ. ಅದು ಎರಡು ಹೆಜ್ಜೆಗಳಲ್ಲಿ ಭೂಮ್ಯಾಕಾಶ ವ್ಯಾಪಿಸಿದ ವಾಮನನಿಗೆ ಮೂರನೆಯ ಹೆಜ್ಜೆಯನ್ನು ತನ್ನ ತಲೆಯ ಮೇಲಿಡಲು ಅನುಮತಿಸಿದ ಬಲಿ ಚಕ್ರವರ್ತಿಯ ಹುಂಬತನಕ್ಕೆ ಸಮಾನ. ಸಂವಿಧಾನದ ವಿಚಾರದಲ್ಲಿ ಈ ಅವಿವೇಕತನ ಪುನರಾವರ್ತನೆ ಆಗಬಾರದು ಎಂದಾದರೆ, ಗಾಂಧೀಜಿಯ ರಾಕ್ಷಸೀಕರಣ ಬೇರಲ್ಲ, ಸಂವಿಧಾನದ ರಾಕ್ಷಸೀಕರಣ ಬೇರಲ್ಲ ಎನ್ನುವ ಸತ್ಯದರ್ಶನದ ಅಗತ್ಯವಿದೆ.