ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾತ್ಮನೊಂದಿಗೆ ನಮ್ಮದು ಎಂಥ ಸಂಬಂಧ?

ಗಾಂಧೀಜಿಗೆ ಜೈ ಎನ್ನದಿದ್ದರೆ ಬೇಡ, ಗಾಂಧಿ ದ್ವೇಷೋತ್ಪಾದಕರಿಗೊಂದು ಧಿಕ್ಕಾರ ಕೂಗಿ
Last Updated 1 ಅಕ್ಟೋಬರ್ 2019, 20:06 IST
ಅಕ್ಷರ ಗಾತ್ರ

ಗಾಂಧೀಜಿಯವರನ್ನು ದ್ವೇಷಿಸುವುದು ಎಂದರೆ ಅದು ದೇಶಭಕ್ತಿ, ಗಾಂಧೀಜಿಯವರನ್ನು ದೂಷಿಸುವುದು ಎಂದರೆ ಅದು ಸಾಮಾಜಿಕ ನ್ಯಾಯ ಎಂಬಿತ್ಯಾದಿ ರಾಜಕೀಯಪ್ರೇರಿತ ಪ್ರತಿಪಾದನೆಗಳೆಲ್ಲಾ ಒಂದು ನಿರ್ಣಾಯಕ ಹಂತ ತಲುಪಿರುವ ಇಂದಿನ ಸಂದರ್ಭದಲ್ಲಿ, ಮಹಾತ್ಮನ 150ನೇ ಜನ್ಮದಿನ ಆಡಂಬರದಿಂದ ಜರುಗುತ್ತಿದೆ. ಮತ್ತೆ ಮತ್ತೆ ಒಂದು ಪ್ರಶ್ನೆಯನ್ನು ಕೇಳದೇ ಇರಲು ಆಗುವುದಿಲ್ಲ. ಗಾಂಧಿಯವರನ್ನು ಈ ದೇಶದ ಜನ ನಿಜಕ್ಕೂ ಆಗ ಪ್ರೀತಿಸಿದ್ದರೇ? ಗೌರವಿಸಿದ್ದರೇ? ಈ ಪ್ರಶ್ನೆಗೆ ಮತ್ತೆ ಮತ್ತೆ ಅದೇ ಒಂದು ಉತ್ತರವನ್ನು ಕಂಡುಕೊಳ್ಳದೆ ಇರಲೂ ಆಗುವುದಿಲ್ಲ. ಇಲ್ಲ, ಒಂದು ಸಣ್ಣ ಸಂಖ್ಯೆಯ ಮಂದಿಯನ್ನು ಹೊರತುಪಡಿಸಿದರೆ ಗಾಂಧಿಯವರನ್ನು ಭಾರತೀಯರು ಎಂದೂ ಪ್ರೀತಿಸಲೂ ಇಲ್ಲ, ಗೌರವಿಸಲೂ ಇಲ್ಲ. ಅವರ ಜೀವಿತಕಾಲದಲ್ಲಿ ಬಹುತೇಕ ಭಾರತೀಯರು ಅವರನ್ನು ಗೌರವಿಸಿದ್ದು ಯಾಕೆಂದರೆ, ದೇಶವನ್ನಾಳುವ ಬ್ರಿಟಿಷರೇ ಅವರೆದುರು ಮಣಿಯುತ್ತಿದ್ದರು ಎನ್ನುವ ಕಾರಣಕ್ಕೆ. ಪ್ರಸ್ತುತ ಭಾರತದಲ್ಲಿ ಅಪಾರ ಗಾಂಧಿದ್ವೇಷ ಸೃಷ್ಟಿಯಾದ ನಂತರವೂ ಗಾಂಧಿ ಪ್ರೀತಿಯ ನಟನೆ ನಡೆಯುತ್ತಿರುವುದು ಯಾಕೆಂದರೆ, ಅವರನ್ನು ವಿಶ್ವ ಗೌರವಿಸುತ್ತದೆ ಎನ್ನುವ ಕಾರಣಕ್ಕೆ. ಈ ವಾದವನ್ನು ಸ್ವಲ್ಪ ವಿಶದೀಕರಿಸಬೇಕು.

ಗಾಂಧೀಜಿ ಎರಡು ಶಕ್ತಿಗಳ ಪ್ರತೀಕವಾಗಿದ್ದರು. ಒಂದು, ನೈತಿಕ ಶಕ್ತಿ. ಇನ್ನೊಂದು, ರಾಜಕೀಯ ಶಕ್ತಿ. ಒಬ್ಬಾತನಿಗೆ ಶಕ್ತಿ ಅಥವಾ ಅಧಿಕಾರ ಇದೆ ಎಂದು ನಾವು ಯಾವಾಗ ಹೇಳುವುದು ಅಂದರೆ, ಆತ ಹೇಳಿದಂತೆ ಇತರರು ಕೇಳಲು, ಆತನ ಮಾತನ್ನು ಇತರರು ಪ್ರಶ್ನಿಸದೇ ಒಪ್ಪಿಕೊಳ್ಳಲು ಸಿದ್ಧರಾಗಿದ್ದಾಗ ಮಾತ್ರ. ಗಾಂಧೀಜಿಯನ್ನು ಒಂದು ಪೀಡೆ ಅಂತ ಗೇಲಿ ಮಾಡುತ್ತಿದ್ದ ಬ್ರಿಟಿಷ್ ದೊರೆಗಳು ಕೂಡ ಅವರ ಮಾತಿನಲ್ಲಿ ಮತ್ತು ಕೃತಿಯಲ್ಲಿದ್ದ ನೈತಿಕ ವರಸೆಯ ಹರಿತಕ್ಕೆ ಬೆರಗಾಗಿ ಅವರನ್ನು ಗಂಭೀರವಾಗಿ ಪರಿಗಣಿಸುತ್ತಿದ್ದರು. ಸಿ.ಎನ್.ಬ್ರೂಮ್‌ಫೀಲ್ಡ್ ಎನ್ನುವ ಬ್ರಿಟಿಷ್ ನ್ಯಾಯಾಧೀಶ, ಗಾಂಧೀಜಿ ನ್ಯಾಯಾಂಗಣ ಪ್ರವೇಶಿಸುತ್ತಿದ್ದಂತೆಯೇ ಎದ್ದು ನಿಂತು, ಅಲ್ಲಿದ್ದ ಇತರರೂ ಎದ್ದು ನಿಲ್ಲುವಂತೆ ಮಾಡಿರಲಿಲ್ಲವೇ? ಆರೋಪಿಯೊಬ್ಬನಿಗೆ ನ್ಯಾಯಾಧೀಶ ಎದ್ದು ನಿಂತು ಗೌರವಿಸಿದ ಪ್ರಕರಣ ಪ್ರಪಂಚದ ಚರಿತ್ರೆಯಲ್ಲಿ ಇದೊಂದೇ ಇರಬೇಕು. ರಿಚರ್ಡ್ ಅಟೆನ್‌ಬರೋ ಅವರ ‘ಗಾಂಧಿ’ ಸಿನಿಮಾದಲ್ಲಿ ಬ್ರೂಮ್‌ಫೀಲ್ಡ್‌ರ ಪಾತ್ರ ನಿರ್ವಹಿಸಿದ ಟ್ರೆವರ್ ಹೋವರ್ಡ್ ಆ ಸನ್ನಿವೇಶವನ್ನು ತನ್ನ ಮುಖಭಾವದ ಮೂಲಕವೇ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾನೆ. ಕೊನೆಗೆ ತನ್ನ ತೀರ್ಪಿನಲ್ಲಿ ‘ಕಾನೂನಿನ ಪ್ರಕಾರ ನಿಮ್ಮನ್ನು ಜೈಲಿಗೆ ಕಳುಹಿಸುವುದು ನನಗೆ ಅನಿವಾರ್ಯ. ಆದರೆ ಮುಂದೊಂದು ದಿನ ಈ ಕಾನೂನು ರೂಪಿಸಿದವರೇ ನಿಮ್ಮನ್ನು ಬಿಡುಗಡೆಗೊಳಿಸುವ ನಿರ್ಧಾರಕ್ಕೆ ಬಂದರೆ ಎಲ್ಲರಿಗಿಂತ ಹೆಚ್ಚು ನಾನು ಸಂತೋಷಪಡುತ್ತೇನೆ’ ಎನ್ನುವ ಆ ನ್ಯಾಯಾಧೀಶನ ಮಾತುಗಳು ಆ ಮುಖಭಾವದ ಶಬ್ದರೂಪವಾಗುತ್ತವೆ. ಆ ನಂತರ ಆಗಿಹೋದ ಘಟಾನುಘಟಿ ಬ್ರಿಟಿಷ್ ವೈಸ್‌ರಾಯ್‌
ಗಳೆಲ್ಲಾ ಗಾಂಧಿ ಎನ್ನುವ ರಾಜಕಾರಣಿಗೆ ಹೆದರಿದ್ದಲ್ಲ. ಅವರು ಹೆದರಿದ್ದು ಮತ್ತು ಗೌರವಿಸಿದ್ದು ಆ ರಾಜಕಾರಣದ ಆಂತರ್ಯದಲ್ಲಿ ಹುದುಗಿದ್ದ ಅಗಾಧ ನೈತಿಕ ಪ್ರಜ್ಞೆಗೆ.

ಆದರೆ, ಬಹುಮಂದಿ ಭಾರತೀಯರು ಗಾಂಧಿಯವರನ್ನು ಗೌರವಿಸಿದ್ದಾಗಲೀ, ಪ್ರೀತಿಸಿದ್ದಾಗಲೀ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರೊಡನೆ ಕೈಜೋಡಿಸಿದ್ದಾಗಲೀ ಈ ನೈತಿಕ ಶಕ್ತಿಗೆ ಮಣಿದು ಅಲ್ಲ. ಅವರು ಹಾಗೆಲ್ಲಾ ಮಾಡಿದ್ದು ಸೂರ್ಯ ಮುಳುಗದ ಸಾಮ್ರಾಜ್ಯ ಕಟ್ಟಿದ ರಾಜಕೀಯವನ್ನು ಪ್ರತಿನಿಧಿಸುವ ಮಂದಿಯನ್ನೇ ತನ್ನತ್ತ ಆಕರ್ಷಿಸಬಲ್ಲ ಶಕ್ತಿಯೊಂದು ಆ ವ್ಯಕ್ತಿಯಲ್ಲಿ ಇದೆ ಎನ್ನುವುದಕ್ಕೆ. ಅವರು ಪ್ರೀತಿಸಿದ್ದು ಮತ್ತು ಗೌರವಿಸಿದ್ದು ಗಾಂಧೀಜಿಯ ಆ ರಾಜಕೀಯ ಶಕ್ತಿಯನ್ನು. ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಶಕ್ತಿ ಕುಂದಿದಂತೆಯೇ, ಗಾಂಧಿಯವರ ರಾಜಕೀಯ ಪ್ರಸ್ತುತತೆಯೂ ಕುಸಿಯುತ್ತಾ ಸಾಗುವುದು ಈ ಕಾರಣಕ್ಕಾಗಿಯೇ. ಸ್ವಾತಂತ್ರ್ಯ ಬರುವ ಕಾಲಕ್ಕೆ ಗಾಂಧೀಜಿ ಕೇವಲ ಜೀವಂತ ಸ್ಮಾರಕವಾಗಿ ಬಿಟ್ಟಿದ್ದರು. ನಾಥೂರಾಮ್ ಗೋಡ್ಸೆ ಧರೆಗುರುಳಿಸಿದ್ದು ಈ ಸ್ಮಾರಕವನ್ನು.

ಇಂದು ಒಂದು ದೊಡ್ಡ ಸಂಖ್ಯೆಯ ಭಾರತೀಯರು ತಮ್ಮ ಮಕ್ಕಳಿಗೆ ಗಾಂಧಿ ಮಹಾನ್ ದುಷ್ಟನೆಂದೂ, ಪಾಕಿಸ್ತಾನ ಎಂಬ ವೈರಿ ರಾಷ್ಟ್ರವೊಂದು ಆವಿರ್ಭವಿಸಲು ಕಾರಣನಾದವನೆಂದೂ ಸುಳ್ಳು ಪಾಠ ಹೇಳಿಕೊಡುತ್ತಾರೆ. ಗಾಂಧಿ ಹುಟ್ಟದೇ ಹೋಗಿದ್ದರೆ ದೇಶ ಇನ್ನೂ ಬೇಗ ಸ್ವಾತಂತ್ರ್ಯ ಪಡೆಯುತ್ತಿತ್ತಂತಲ್ಲಾ ಅಂತ ಶಾಲೆಗೆ ಹೋಗುವ ಮಕ್ಕಳು ಕೇಳುತ್ತಾರೆ. ಹಾಗಂತ ಯಾರು ಹೇಳಿದರು ಅಂತ ಪ್ರಶ್ನಿಸಿದರೆ, ‘ಸಹಪಾಠಿಗಳು’ ಎನ್ನುವ ಉತ್ತರ ಬರುತ್ತದೆ. ಸುನೀಲ್ ಖಿಲ್ನಾನಿ ಅವರ ‘ಇನ್‌ಕಾರ್ನೇಶನ್ಸ್‌’ ಎಂಬ ಪುಸ್ತಕವಿದೆ. ಆ ಪುಸ್ತಕ 50 ಭಾರತೀಯರ ವ್ಯಕ್ತಿ ಚಿತ್ರಣಗಳ ಮೂಲಕ ಭಾರತದ ಕತೆಯನ್ನು ಹೇಳುತ್ತದೆ. ಅದರಲ್ಲಿ ಗಾಂಧೀಜಿಯ ಕತೆಯನ್ನು ಖಿಲ್ನಾನಿ ಪ್ರಾರಂಭಿಸುವುದು ಒಂದು ಸ್ವಾನುಭವದ ಮೂಲಕ. ಅವರು ಗುಜರಾತ್‌ನ ಗಾಂಧಿ ನಗರದಲ್ಲಿ ಸಿನಿಮಾ (‘ಹೇ ರಾಮ್’) ನೋಡಲು ಹೋಗಿದ್ದರಂತೆ. ಗಾಂಧೀಜಿಯ ಹತ್ಯೆ ನಡೆಯುವ ಸನ್ನಿವೇಶ ತೆರೆಯಲ್ಲಿ ಕಾಣಿಸಿಕೊಂಡಾಕ್ಷಣ, ಬಹಳಷ್ಟು ಮಂದಿ ಜೋರಾಗಿ ಚಪ್ಪಾಳೆ ತಟ್ಟಿ, ಕೇಕೆ ಹಾಕಿ ಸಂಭ್ರಮಿಸಿದರಂತೆ. ಭಾರತದ ಜನಸಾಮಾನ್ಯರ ಮಧ್ಯೆ ನಡೆಯುವ ಈ ವಿದ್ಯಮಾನಗಳೆಲ್ಲಾ ಗಾಂಧಿ ವಿರುದ್ಧದ ಯುದ್ಧ ಒಂದು ನಿರ್ಣಾಯಕ ಹಂತಕ್ಕೆ ಬಂದಿದೆ ಎನ್ನುವುದಕ್ಕೆ ಸಾಕ್ಷಿ.

ಈ ರೀತಿಯ ಗಾಂಧಿದ್ವೇಷವನ್ನು ಗುಟ್ಟಾಗಿ, ಕೆಲವೊಮ್ಮೆ ಬಹಿರಂಗವಾಗಿ ಪೋಷಿಸುತ್ತಾ, ಅದನ್ನೇ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ಅಧಿಕಾರಕ್ಕೆ ಬಂದವರೆಲ್ಲಾ ಗಾಂಧೀಜಿಯ 150ನೇ ಜನ್ಮದಿನ ಆಚರಿಸಲು ಸಜ್ಜಾಗಿದ್ದಾರೆ. ಇದಕ್ಕೆ ಕಾರಣ ಗಾಂಧೀಜಿ ಕೊನೆಗೂ ಇವರಿಗೆಲ್ಲಾ ಅರ್ಥವಾದರು ಅಂತ ಅಲ್ಲ. ಇವರೆಲ್ಲಾ ಬಗಲಲ್ಲಿ ಗಾಂಧಿದ್ವೇಷ ಕಟ್ಟಿಕೊಂಡಿದ್ದರೂ ಬಹಿರಂಗವಾಗಿ ಅವರನ್ನು ಗೌರವಿಸುವಂತೆ ನಟಿಸುತ್ತಿರುವುದೇಕೆಂದರೆ, ಪ್ರಪಂಚ ಅವರನ್ನು ಗೌರವಿಸುತ್ತದೆ ಎನ್ನುವ ಕಾರಣಕ್ಕೆ. ‘ಈ ತನಕ ಆಗಿಹೋದ ಯಾವುದಾದರೂ ಒಬ್ಬ ಶ್ರೇಷ್ಠ ವ್ಯಕ್ತಿಯ ಜತೆ ಉಣ್ಣುವ ಅವಕಾಶ ಲಭಿಸುತ್ತದೆ ಎಂದಾದಲ್ಲಿ ಯಾರನ್ನು ಆಯ್ದುಕೊಳ್ಳುವೆ’ ಎಂದು ಬರಾಕ್ ಒಬಾಮ ಅವರ ಬಳಿ ಯಾರೋ ಕೇಳಿದಾಗ ಅವರು ‘ನಾನು ಮಹಾತ್ಮ ಗಾಂಧಿಯನ್ನು ಆಯ್ದುಕೊಳ್ಳುತ್ತೇನೆ’ ಎಂದಿದ್ದರಲ್ಲವೇ? ಭಾರತದ ನಂತರ ಅತ್ಯಧಿಕ ಗಾಂಧಿ ಸ್ಮಾರಕಗಳಿರುವುದು ಅಮೆರಿಕದಲ್ಲಿ ಎನ್ನುವ ಸುದ್ದಿ ಅಮೆರಿಕದೊಂದಿಗಿನ ಹೊಸ ಸಂಬಂಧದ ಕುರಿತಾಗಿ ಆನಂದತುಂದಿಲರಾಗಿದ್ದ ಭಾರತೀಯ ಅಮೆರಿಕನ್ನರನ್ನು ಮತ್ತು ಭಾರತದಲ್ಲಿರುವ ಅವರ ಸಂಬಂಧಿಗಳನ್ನು ಕಸಿವಿಸಿಗೆ ದೂಡಿರಬಹುದು. ಭಾರತದಲ್ಲಾದರೆ, ‘ಕಾಂಗ್ರೆಸ್ಸಿನಿಂದ ದುಷ್ಟ ಗಾಂಧಿಗೆ ಅಷ್ಟೆಲ್ಲಾ ಸ್ಮಾರಕಗಳು ನಿರ್ಮಾಣವಾಗಿದ್ದು’ ಅಂತ ಮಕ್ಕಳಿಗೆ ಸುಲಭವಾಗಿ ಹೇಳಿಬಿಡಬಹುದು; ಅಮೆರಿಕದಲ್ಲಿ ಯಾಕೆ ಅಷ್ಟೊಂದು ಸ್ಮಾರಕಗಳಿವೆ ಅಂತ ಆ ಮಕ್ಕಳು ಪ್ರಶ್ನೆ ಹಾಕಿದರೆ ಏನೂಂತ ಉತ್ತರಿಸುವುದು.

ದೇಶಪ್ರೇಮದ ಹೆಸರಲ್ಲಿ ಹೊಸ ತಲೆಮಾರುಗಳ ಮಿದುಳಲ್ಲಿ ಗಾಂಧಿದ್ವೇಷ ತುಂಬುತ್ತಿರುವ ಮಂದಿ, ಈ ದೇಶದ ಆತ್ಮಶಕ್ತಿಯ ವಿರುದ್ಧ ಸಮರ ಸಾರಿದ್ದಾರೆ. ಹಾಗಂತ ಅವರಿಗೆ ತಿಳಿಹೇಳುವ ಸಾಮರ್ಥ್ಯ, ಧೈರ್ಯ ಯಾರಿಗಿದೆ? ಇಷ್ಟನ್ನು ಮೊದಲು ಹೇಳದೆ ಗಾಂಧಿ- 150ರ ಕುರಿತು ಭಾಷಣ ಬಿಗಿಯುವುದರಲ್ಲಿ ಏನರ್ಥವಿದೆ? ಭಾರತದಲ್ಲಿ ಇಂದು ಹರಡುತ್ತಿರುವ ಗಾಂಧಿದ್ವೇಷ ಸರ್ವ ದ್ವೇಷಗಳಿಗೆ ಮೂಲವಾಗುವ ಎಲ್ಲಾ ಸಾಧ್ಯತೆಯೂ ಇದೆ. ಯಾವ ವರ್ಗಗಳು ಇಂದು ಗಾಂಧೀಜಿಯ ವಿರುದ್ಧ ಎಳೆಯ ಮನಸ್ಸುಗಳನ್ನು ಎತ್ತಿಕಟ್ಟುತ್ತಿವೆಯೋ ಅದೇ ವರ್ಗಗಳೇ ಈ ದ್ವೇಷಾಗ್ನಿಗೆ ಮೊದಲು ಆಹುತಿಯಾಗುವ ಅಪಾಯ ಎದುರಿಸುತ್ತಿರುವುದು. ಗಾಂಧೀಜಿಯ 200ನೇ ಜನ್ಮದಿನದ ವೇಳೆಗೆ ಇಂತಹದ್ದೆಲ್ಲಾ ಭಾರತದ ಚರಿತ್ರೆಯ ಭಾಗವಾಗದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT