ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಸಂಧಾನ: ಕಾಣದ ಪದವಿಗೆ ಹಂಬಲಿಸಿದೆ ಮನ!

‘ಸಿದ್ದರಾಮೋತ್ಸವ’ಕ್ಕಿಂತ ಈಗ ಬೇಕಿರುವುದು ಬದ್ಧರಾಮೋತ್ಸವ
Last Updated 27 ಜುಲೈ 2022, 19:02 IST
ಅಕ್ಷರ ಗಾತ್ರ

ರಾಜ್ಯದಲ್ಲಿ ನಡೆದ ಗೋಕಾಕ್ ಚಳವಳಿಯ ನಂತರ ಡಾ.ರಾಜ್‌ಕುಮಾರ್ ಅವರ ಜನಪ್ರಿಯತೆ ಉತ್ತುಂಗದಲ್ಲಿತ್ತು. ಆಗ ಒಂದಿಷ್ಟು ಮಂದಿ ರಾಜ್‌ಕುಮಾರ್ ಅವರಿಗೆ ‘ನೀವು ರಾಜಕೀಯ ಪ್ರವೇಶ ಮಾಡಿ’ ಎಂದು ಸಲಹೆ ಮಾಡಿದರು. ‘ಹೌದಾ, ರಾಜಕೀಯ ಪ್ರವೇಶ ಮಾಡಿದರೆ ಏನಾಗುತ್ತದೆ?’ ಎಂದು ಡಾ.ರಾಜ್ ಪ್ರಶ್ನೆ ಮಾಡಿದರು. ‘ರಾಜಕೀಯ ಪ್ರವೇಶ ಮಾಡಿದರೆ ನೀವು ಮುಖ್ಯಮಂತ್ರಿ ಆಗ್ತೀರಿ’ ಎಂದು ಇವರು ಪುಸಲಾಯಿಸಿದರು. ತಕ್ಷಣವೇ ನಕ್ಕ ರಾಜ್‌ಕುಮಾರ್ ‘ಏನ್ರಪಾ ನೀವು, ಈ ರಾಜ್ಯದ ಜನ ನನ್ನನ್ನು ರಾಜನನ್ನಾಗಿ ಮಾಡಿದ್ದಾರೆ. ನೀವು ನೋಡಿದರೆ ಮಂತ್ರಿ ಆಗಿ ಅನ್ನುತ್ತೀರಲ್ಲ’ ಎಂದು ಉತ್ತರಿಸಿದರಂತೆ. ಅದು ರಾಜ್‌ಕುಮಾರ್ ಅವರ ಶಕ್ತಿ. ರಾಜ್ಯದ ಬಗೆಗಿನ ಭಕ್ತಿ. ಅಭಿಮಾನಿಗಳ ಮೇಲಿನ ಅನುರಕ್ತಿ.

ಈ ಪ್ರಸಂಗ ಈಗ ನೆನಪಾಗುವುದಕ್ಕೆ ಕಾರಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಕಾರ್ಯಕ್ರಮ. ವಿಧಾನಸಭೆ ಚುನಾವಣೆ ಹತ್ತಿರದಲ್ಲಿಯೇ ಇರುವಾಗ ಅವರ 75ನೇ ಹುಟ್ಟುಹಬ್ಬವೂ ಬಂದಿದೆ. ಅದು ಕಾಕತಾಳೀಯ ಎನ್ನೋಣ. ಸಿದ್ದರಾಮಯ್ಯ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಬೇಕು ಎಂದು ಅವರ ಅಭಿಮಾನಿಗಳಿಗೆ ಅನ್ನಿಸಿದೆ. ಅದು ತಪ್ಪಲ್ಲ. ಅದಕ್ಕೇ ಅವರು ‘ಸಿದ್ದರಾಮೋತ್ಸವ’ ಆಚರಣೆಯ ಬಯಕೆ ಯನ್ನು ಸಿದ್ದರಾಮಯ್ಯ ಅವರ ಮುಂದಿಟ್ಟಿದ್ದಾರೆ. ಅದಕ್ಕೆ ಅವರು ಒಪ್ಪಿಗೆ ಕೊಟ್ಟಿದ್ದೇ ಈಗ ದೊಡ್ಡ ಸಂಕಷ್ಟ ತಂದಿದೆ. ಕಾಂಗ್ರೆಸ್ ಪಕ್ಷದಲ್ಲಿಯೂ ಅದು ಸದ್ದು ಮಾಡುತ್ತಿದೆ. ಇದನ್ನೇ ಆಡಳಿತಾರೂಢ ಬಿಜೆಪಿಯೂ ಅಸ್ತ್ರವನ್ನಾಗಿಸಿಕೊಂಡಿದೆ. ಇದು ಹೀಗೆಯೇ ಆಗುತ್ತದೆ ಎಂದು ಊಹಿಸದೇ ಇರುವಷ್ಟು ದಡ್ಡರಲ್ಲ ಸಿದ್ದರಾಮಯ್ಯ. ಅವರ ರಾಜಕೀಯ ಅನುಭವ ಸಣ್ಣದಲ್ಲ. ಇಂತಹ ಹಲವಾರು ಪರಿಸ್ಥಿತಿಗಳನ್ನು ಅವರು ಎದುರಿಸಿದ್ದಾರೆ. ಸೋಲು ಗೆಲುವು ಅವರಿಗೆ ಹೊಸತಲ್ಲ. ಎಲ್ಲಾ ಗೊತ್ತಿದ್ದೂ ಯಾಕೆ ಅವರು ಜನ್ಮದಿನೋತ್ಸವಕ್ಕೆ ಒಪ್ಪಿಗೆ ಕೊಟ್ಟರು? ಅವರ ಅಭಿಮಾನಿಗಳನ್ನು ಕೇಳಿದರೆ ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದೇ ಹೇಳುತ್ತಾರೆ. ಆದರೆ ಆ ಪಕ್ಷದ ಮುಖಂಡರ ನಡವಳಿಕೆ ಮತ್ತು ಹೇಳಿಕೆಗಳು ಇದಕ್ಕೆ ಪುಷ್ಟಿ ನೀಡುವಂತೆ ಇಲ್ಲ. ಜನರಲ್ಲಿಯೂ ಇದು ಕಾಂಗ್ರೆಸ್ ಪಕ್ಷಕ್ಕೆ ಒಳಿತು ಮಾಡುವ ಉತ್ಸವ ಅಲ್ಲ ಎಂಬ ಭಾವನೆಯೇ ಇದೆ.

ರಾಜ್ಯದಲ್ಲಿ ಈಗ ಇರುವ ರಾಜಕಾರಣಿಗಳಲ್ಲಿ ಸಿದ್ದರಾಮಯ್ಯ ಅವರೂ ಒಬ್ಬ ಜನನಾಯಕ. ಮಾಸ್ ಲೀಡರ್. ಅದರಲ್ಲಿ ಅನುಮಾನವಿಲ್ಲ. ಉತ್ತಮ ಆಡಳಿತ ಗಾರ ಎಂದು ಹೆಸರು ಮಾಡಿದವರು. ಹಲವಾರು ಬಾರಿ ಬಜೆಟ್ ಮಂಡಿಸಿ ತಾವೊಬ್ಬ ಅರ್ಥನೀತಿ ತಜ್ಞ ಎಂದು ಸಾಬೀತುಪಡಿಸಿದವರು. ಪ್ರಗತಿಪರ ವಿಚಾರಧಾರೆ ಗಳಿಂದ ಹೆಸರಾದವರು. ಉತ್ತಮ ಭಾಷಣಕಾರ. ಮಾತಿನ ಶಕ್ತಿಯಿಂದ ಜನರನ್ನು ಆಕರ್ಷಿಸುವ ತಾಕತ್ತು ಹೊಂದಿ ದವರು. ಎಲ್ಲಾ ಹೌದು. ಆದರೆ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ಅವರು ವಿಫಲರಾಗು
ತ್ತಾರೆಯೇ ಅಥವಾ ಉದ್ದೇಶಪೂರ್ವಕವಾಗಿಯೇ ತಪ್ಪು ಹೆಜ್ಜೆ ಇಡುತ್ತಾರೆಯೇ?

ಮುಖ್ಯಮಂತ್ರಿಯಾಗಿ ಪೂರ್ಣ ಐದು ವರ್ಷಗಳ ಅಧಿ ಕಾರವನ್ನು ಪೂರೈಸಿದವರು ಅವರು. ಅವರ ನೇತೃತ್ವದ ಸರ್ಕಾರ ಜಾರಿಗೊಳಿಸಿದ ಹಲವಾರು ಯೋಜನೆಗಳಿಂದ ಕಾಂಗ್ರೆಸ್ ಪಕ್ಷದ ಜನಪ್ರಿಯತೆ ಅಷ್ಟೊಂದು ಕುಸಿದಿರಲಿಲ್ಲ. ಆದರೂ 2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅವರು ಕೆಲವು ತಪ್ಪು ನಿರ್ಧಾರಗಳನ್ನು ಕೈಗೊಂಡರು. ಅದರಲ್ಲಿ ಮುಖ್ಯವಾಗಿ ಪ್ರತ್ಯೇಕ ಲಿಂಗಾಯತ ಧರ್ಮ ಬೇಡಿಕೆಗೆ ಬೆಂಬಲವಾಗಿ ನಿಂತಿದ್ದು ಮತ್ತು ಈ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಿದ್ದು. ಈ ವಿಚಾರವಾಗಿ ಅವರು ಕೆಲವರ ಮಾತಿಗೆ ಕಟ್ಟುಬಿದ್ದರು. ಅದು ಚುನಾವಣೆಯಲ್ಲಿ ಹಿನ್ನಡೆಗೆ ಕಾರಣವಾಯಿತು. ಇದಲ್ಲದೆ ತಮ್ಮ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು ತಾವು ಎರಡು ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದದ್ದು ಕೂಡ ಅವರಿಗೆ ಮುಳುವಾಯಿತು. ಇವೆಲ್ಲವೂ ಅತಂತ್ರ ವಿಧಾನಸಭೆ ನಿರ್ಮಾಣವಾಗಲು ಕಾರಣವಾಯಿತು. ಕೊನೆಯ ಕಾಲದಲ್ಲಿ ಎಡವಟ್ಟು ಮಾಡಿಕೊಳ್ಳದೇ ಹೋಗಿದ್ದರೆ ಕಾಂಗ್ರೆಸ್‌ಗೆ ಬಹುಮತ ಬರುತ್ತಿತ್ತೋ ಏನೋ? ಬಹುಮತ ಬಂದಿದ್ದರೆ ಸಹಜವಾಗಿಯೇ ಎರಡನೇ ಬಾರಿಗೂ ಅವರೇ ಮುಖ್ಯಮಂತ್ರಿಯಾಗುತ್ತಿದ್ದರು. ಈಗ ಮತ್ತೆ ಆ ಸ್ಥಾನಕ್ಕೆ ಕಸರತ್ತು ನಡೆಸುವ ಅಗತ್ಯ ಇರಲಿಲ್ಲ.

2023ರ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿಯೂ ಅವರು ಇಂತಹದ್ದೇ ತಪ್ಪು ಮಾಡುತ್ತಿದ್ದಾರೇನೋ ಅನ್ನಿಸುತ್ತಿದೆ. ಸಮರ್ಥ ವಿರೋಧಪಕ್ಷವಾಗಿ ಕಾಂಗ್ರೆಸ್ ಹೇಳಿಕೊಳ್ಳುವಂತಹ ಕೆಲಸ ಮಾಡದೇ ಇದ್ದರೂ ಬಿಜೆಪಿಯ ಅಟಾಟೋಪಕ್ಕೆ ಬೇಸರಗೊಂಡು ರಾಜ್ಯದ ಜನರು ಕಾಂಗ್ರೆಸ್‌ನತ್ತ ವಾಲುವ ವಾತಾವರಣ ಇತ್ತು. ಜೊತೆಗೆ ಮೇಕೆದಾಟು ಪಾದಯಾತ್ರೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆಯೊಂದು ಸೃಷ್ಟಿಯಾಗುವ ಸೂಚನೆ ಕಂಡುಬಂದಿತ್ತು. ನಂತರ ಹಿಜಾಬ್, ಹಲಾಲ್, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಮುಂತಾದ ವಿವಾದ ಗಳಿಂದ ಕಾಂಗ್ರೆಸ್‌ಗೆ ಕೊಂಚ ಹಿನ್ನಡೆಯಾದಂತೆ ಭಾಸ ವಾದರೂ ಬೆಲೆ ಏರಿಕೆಯ ತಾಪ ಜನರಿಗೆ ತಾಗತೊಡಗಿದ ನಂತರ ಮತ್ತೆ ಆ ಪಕ್ಷಕ್ಕೆ ಭವಿಷ್ಯದ ಭರವಸೆ ಕಾಣಿಸ ತೊಡಗಿದೆ. ಆದರೆ ಈಗ ಸಿದ್ದರಾಮಯ್ಯ ಅಮೃತ ಮಹೋತ್ಸವ ಎನ್ನುವುದು ಅದರ ಜನಪ್ರಿಯತೆ ಏರಿಕೆಗೆ ತಡೆಯೊಡ್ಡಿದೆ.

ಸಿದ್ದರಾಮಯ್ಯ ಅವರು ಪಕ್ಷಾತೀತವಾಗಿ ಜನ್ಮದಿನ ಆಚರಿಸಿಕೊಂಡಿದ್ದರೆ ಅಥವಾ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದಲೇ ಈ ಸಮಾರಂಭ ಆಯೋಜನೆಗೊಂಡಿದ್ದರೆ ವಿವಾದವೂ ಆಗುತ್ತಿರಲಿಲ್ಲ, ಪಕ್ಷದೊಳಗೆ ತಳಮಳವನ್ನೂ ಸೃಷ್ಟಿಸುತ್ತಿರಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ‘ಎಸ್.ಎಂ.ಕೃಷ್ಣ ಅವರ ನಂತರ ರಾಜ್ಯದಲ್ಲಿ ಒಕ್ಕಲಿಗರಿಗೆ ಅತ್ಯುನ್ನತ ಹುದ್ದೆ ದೊರೆಯುವ ಸಾಧ್ಯತೆ ಇದೆ. ಅದಕ್ಕೆ ಒಕ್ಕಲಿಗರು ಸಂಪೂರ್ಣ ಬೆಂಬಲ ನೀಡಬೇಕು’ ಎಂದು ಕೇಳಿಕೊಳ್ಳುತ್ತಲೂ ಇರಲಿಲ್ಲ. ಮುಖ್ಯಮಂತ್ರಿ ಗಾದಿಯ ಬಗ್ಗೆ ಎಂ.ಬಿ.ಪಾಟೀಲ, ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ, ಜಮೀರ್ ಅಹ್ಮದ್ ಮುಂತಾದವರು ಮಾತನಾಡುವ ಪ್ರಮೇಯ ಕೂಡ ಬರುತ್ತಿರಲಿಲ್ಲ. ಬಿಜೆಪಿ ಮುಖಂಡರೂ ಕಾಂಗ್ರೆಸ್ ಪಕ್ಷದ ಒಗ್ಗಟ್ಟಿನ ಬಗ್ಗೆ ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ. ಈಗಿನ ಕಾಂಗ್ರೆಸ್ ವಿದ್ಯಮಾನ ನಗೆಯಾಡುವವರ ಮುಂದೆ ಎಡವಿಬಿದ್ದ ಹಾಗಿದೆ.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎನ್ನಲು ಯಾವುದೇ ಆಧಾರವಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಎಂದು ಕೈ ಹೈಮಾಂಡ್ ಈಗಾಗಲೇ ಸೂಚನೆ ನೀಡಿದೆ. ಆದರೂ ಸಿದ್ದರಾಮಯ್ಯ ಅಮೃತ ಮಹೋತ್ಸವ
ಎನ್ನುವುದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟು ಇಲ್ಲ. ಮುಖ್ಯಮಂತ್ರಿ ಗಾದಿಗೆ ಪರಸ್ಪರ ಕಚ್ಚಾಟ ನಡೆಯುತ್ತಿದೆ. ಆ ಕುರ್ಚಿಯ ಮೇಲೆ ಈಗಲೇ ಟವೆಲ್ ಹಾಕಲು ಪೈಪೋಟಿ ನಡೆಯುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡಿದ್ದರೆ ಅಚ್ಚರಿಯಿಲ್ಲ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಾರದೇ ಹೋದರೆ ಅದರ ಹೊಣೆ ಯಾರದ್ದು?

2013ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜಿ.ಪರಮೇಶ್ವರ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಕೊರಟಗೆರೆಯಲ್ಲಿ ಅವರು ಸ್ಪರ್ಧೆ ಮಾಡಿದ್ದರು. ಮುಖ್ಯಮಂತ್ರಿ ಗಾದಿಗೆ ಸ್ಪರ್ಧೆಯೊಡ್ಡಬಾರದು ಎಂಬ ಕಾರಣಕ್ಕೆ ಪರಮೇಶ್ವರ ಅವರ ಪ್ರತಿಸ್ಪರ್ಧಿಗೆ ಸಿದ್ದರಾಮಯ್ಯ ಪರೋಕ್ಷವಾಗಿ ನೆರವು ನೀಡಿದ್ದರಿಂದಲೇ ಅಲ್ಲಿ ಜೆಡಿಎಸ್‌ ಅಭ್ಯರ್ಥಿ ಸುಧಾಕರ ಲಾಲ್‌ ಗೆಲುವು ಸಾಧ್ಯವಾಯಿತು ಎಂಬ ಗುಸುಗುಸು ಕಾಂಗ್ರೆಸ್ ಪಾಳೆಯದಲ್ಲಿ ಆಗ ಕೇಳಿಬಂದಿತ್ತು. ಈಗ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು. ಅವರನ್ನು ಕನಕಪುರದಲ್ಲಿ ಸೋಲಿಸುವುದು ಕಷ್ಟ. ಅದಕ್ಕಾಗಿಯೇ ಸಿದ್ದರಾಮಯ್ಯ ಹೊಸ ತಂತ್ರ ಹೂಡಿದ್ದಾರೆ. ತಮ್ಮ ಜನ್ಮದಿನೋತ್ಸವವನ್ನು ಅದ್ಧೂರಿಯಾಗಿ ನಡೆಸಿ ಶಕ್ತಿ ಪ್ರದರ್ಶನ ಮಾಡುವುದರ ಜೊತೆಗೆ ಪಕ್ಷ ಬಹುಮತ ಗಳಿಸಿದರೆ ತಾವೇ ಮುಖ್ಯಮಂತ್ರಿ ಎಂಬುದನ್ನು ಹೈಕಮಾಂಡ್‌ಗೂ ಮತ್ತು ಜನರಿಗೂ ಸ್ಪಷ್ಟ ಮಾಡುವುದು ಅವರ ಉದ್ದೇಶ ಎಂದೂ ಪಕ್ಷದೊಳಗಿನ ಒಂದು ಗುಂಪು ಮಾತನಾಡಿಕೊಳ್ಳುತ್ತಿದೆ. ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರ ಹೇಳಿಕೆಯನ್ನು

ನೋಡಿದರೆ ಇವೆಲ್ಲ ನಿಜವಲ್ಲ ಎಂದು ಹೇಳಲಾಗದು. ಮುತ್ಸದ್ದಿ ರಾಜಕಾರಣಿ ಎಡವಿದರೇ?

ಮುಖ್ಯಮಂತ್ರಿ ಗಾದಿ ಎನ್ನುವುದು ಕಾಣದ ಕಡಲು. ಕೈಗೆ ಸಿಗಬಹುದು, ಸಿಗದೆಯೂ ಇರಬಹುದು. ಆ ಪದವಿಗೆ ಹಂಬಲಿಸುವ ಮನ ಹೀಗೆಲ್ಲಾ ಮಾಡಿಸುತ್ತಾ? ಗೊತ್ತಿಲ್ಲ. ಆದರೆ ರಾಜ್ಯದ ಜನರ ದೃಷ್ಟಿಯಿಂದ ಈಗ ಬೇಕಿರುವುದು ಸಿದ್ದರಾಮೋತ್ಸವ ಅಲ್ಲ, ಪ್ರಜೆಗಳಿಗೆ
ಬದ್ಧರಾಮೋತ್ಸವ ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT