ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವೀಂದ್ರ ಭಟ್ಟ ಬರಹ | ಮೌಲ್ಯ: ಕಳೆದಲ್ಲೇ ಹುಡುಕೋಣ

ಗೂಟದ ಕಾರು, ಪೇಟದ ಆಳು, ತೋಟದ ಮನೆ ಆಸೆ ಬಿಟ್ಟರಷ್ಟೇ ಉಳಿಗಾಲ
Last Updated 26 ಫೆಬ್ರುವರಿ 2021, 20:30 IST
ಅಕ್ಷರ ಗಾತ್ರ

‘ಗೂಟದ ಕಾರು, ಪೇಟದ ಆಳು, ತೋಟದ ಮನೆ’ ಇವುಗಳಿಗಾಗಿಯೇ ರಾಜಕಾರಣಿಗಳು ಹಪಹಪಿಸುತ್ತಿದ್ದರೆ ಕುಸಿದ ಸಂಸದೀಯ ಮೌಲ್ಯ ಹೆಚ್ಚುವುದು ಹೇಗೆ? ಆತ್ಮವಂಚನೆ ಬಿಟ್ಟು ನಿಜವಾದ ಅರ್ಥದಲ್ಲಿ ಆತ್ಮಾವಲೋಕನವಾಗಬೇಕು. ನಿಜಮೌಲ್ಯ ಕಳೆದುಹೋಗಿದೆ. ಕಳೆದುಹೋದ ಮೌಲ್ಯವನ್ನು ಅದು ಎಲ್ಲಿ ಕಳೆದಿದೆಯೋ ಅಲ್ಲಿಯೇ ಹುಡುಕಬೇಕು. ಅದಕ್ಕಾಗಿಯೇ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಇಂತಹ ಯತ್ನಕ್ಕೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ಸಂಸದೀಯ ಮೌಲ್ಯಗಳ ಕುಸಿತ ತಡೆಗೆ ಆತ್ಮಾವಲೋಕನ ಸಭೆಯನ್ನೂ ನಡೆಸಿದ್ದಾರೆ. ಇದೊಂದು ಒಳ್ಳೆಯ ಯತ್ನ.

ರಾಜಕಾರಣಿಗಳು ಅಲ್ಲದೆ ಇತರ ಕ್ಷೇತ್ರಗಳ ಗಣ್ಯರೂ ಈ ಸಭೆಯಲ್ಲಿ ಭಾಗಿಯಾಗಿ ಸಲಹೆಗಳನ್ನು ನೀಡಿದ್ದಾರೆ. ರಾಜಕಾರಣಿಗಳು ನಿಜವಾದ ಅರ್ಥದಲ್ಲಿ ಆತ್ಮಾವಲೋಕನವನ್ನೂ ಮಾಡಿಕೊಂಡಿದ್ದಾರೆ. ಆ ಮಟ್ಟಿಗೆ ಅದು ಯಶಸ್ವಿ ಸಭೆ.

ಸಂಸದೀಯ ಮೌಲ್ಯ ಕುಸಿತಕ್ಕೆ ಚುನಾವಣೆ ವ್ಯವಸ್ಥೆಯೇ ಪ್ರಮುಖ ಕಾರಣ ಎಂಬ ಅಭಿಪ್ರಾಯವನ್ನು ಬಹಳಷ್ಟು ಗಣ್ಯರು ವ್ಯಕ್ತಪಡಿಸಿದ್ದಾರೆ. ಚುನಾವಣೆಯ ವೆಚ್ಚ ಕಡಿಮೆಯಾದರೆ ವ್ಯವಸ್ಥೆ ಸುಧಾರಣೆಯಾಗುತ್ತದೆ ಎಂಬ ಆಶಾವಾದವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ. ಆದರೆ ಇದು ಬರೀ ಆತ್ಮಾವಲೋಕನದ ಕಾಲ ಅಲ್ಲ. ಸುಧಾರಣೆಯತ್ತ ಗಂಭೀರ ಹೆಜ್ಜೆ ಇಡುವ ಕಾಲ. ಇಲ್ಲವಾದರೆ ಸಂಸದೀಯ ವ್ಯವಸ್ಥೆ ಮೇಲೆಯೇ ನಂಬಿಕೆ ಹೊರಟು ಹೋಗುತ್ತದೆ. ಈಗಾಗಲೇ ಜನರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಮತ್ತೊಂದು ತುರ್ತು ಪರಿಸ್ಥಿತಿ ಅಥವಾ ಸರ್ವಾಧಿಕಾರಿ ಆಡಳಿತ ಬರಬಹುದೆಂಬ ಆತಂಕ ಜನರ ಮನಸ್ಸಿನ ಮೂಲೆಯಲ್ಲಿ ಕಾಡುತ್ತಿದೆ.

ಅದಕ್ಕಾಗಿಯೇ ಆತ್ಮಾವಲೋಕನ ಎನ್ನುವುದು ಕೇವಲ ಪ್ರಚಾರದ ಸರಕಾಗದೆ ಸುಧಾರಣೆಗೆ ಹಾದಿಯಾಗಬೇಕು. ಒಂದು ದಿನ ಎಲ್ಲರೂ ಭಾಷಣ ಮಾಡಿ ಅವರವರ ಮನೆಗೆ ಹೋಗಿ ಮತ್ತೆ ತಮ್ಮ ತಮ್ಮ ರಾಜಕಾರಣದಲ್ಲಿಯೇ ಮುಳುಗಿಬಿಟ್ಟರೆ, ಕುಸಿದ ಮೌಲ್ಯ ಇನ್ನಷ್ಟು ಪಾತಾಳಕ್ಕೆ ಸೇರುತ್ತದೆ. ಯಾರು ಎಷ್ಟೇ ಸಲಹೆಗಳನ್ನು ನೀಡಿದರೂ ಬದಲಾಗಬೇಕಾಗಿದ್ದು ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಎನ್ನುವುದರಲ್ಲಿ ಅನುಮಾನ ಇಲ್ಲ. ಜನರು ಕರಪ್ಟ್ ಆಗಿದ್ದರಿಂದ ಚುನಾವಣೆಗೆ ಹೆಚ್ಚು ಹೆಚ್ಚು ಹಣ ವೆಚ್ಚವಾಗುತ್ತಿದೆ, ಮೌಲ್ಯ ಕುಸಿಯಲು ಇದೇ ಪ್ರಮುಖ ಕಾರಣ ಎಂದು ಹೇಳಿ ರಾಜಕಾರಣಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಜನರನ್ನು ಭ್ರಷ್ಟರನ್ನಾಗಿ ಮಾಡಿದ್ದು ಯಾರು ಎನ್ನುವುದರ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸುಧಾರಣೆಗೆ ಅವರು ಎರಡು ಹೆಜ್ಜೆ ಮುಂದಿಟ್ಟರೆ ಸಾಮಾನ್ಯರೂ ಅದನ್ನು ಅನುಸರಿಸುತ್ತಾರೆ. ಅದಕ್ಕೆ ತಕ್ಕಂತೆ ಕಾನೂನು ಗಳನ್ನೂ ಸುಧಾರಿಸಬೇಕು. ಕಾಲಕ್ಕೆ ತಕ್ಕಂತೆ ನಿಯಮಗಳೂ ಬದಲಾಗಬೇಕು. ಸೌಲಭ್ಯ ಪಡೆಯಲು ಬೇಕಾದ ಕಾನೂನುಗಳನ್ನು ಮಾತ್ರ ಬದಲು ಮಾಡಿಕೊಂಡು ಉಳಿದ ಓಬಿರಾಯನ ಕಾನೂನುಗಳನ್ನು ಹಾಗೆಯೇ ಇಟ್ಟುಕೊಳ್ಳುವುದು ತರವಲ್ಲ.

ಸ್ವಾತಂತ್ರ್ಯ ಬರುವುದಕ್ಕಿಂತ ಮೊದಲು ಮತ್ತು ನಂತರದ ಕೆಲವು ವರ್ಷ ನಮ್ಮ ರಾಜಕಾರಣಿಗಳಿಗೆ ದೇಶ ಮತ್ತು ಜನರ ಹಿತವೇ ಮುಖ್ಯವಾಗಿತ್ತು. ಆನಂತರದ ವರ್ಷಗಳಲ್ಲಿ ದೇಶ ಇರುವುದೇ ನಮಗಾಗಿ ಎಂಬ ಭಾವನೆ ಬೆಳೆದುಬಿಟ್ಟಿದೆ ಎಂದು ಆತ್ಮಾವಲೋಕನ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಇದು ಕೇಳುವುದಕ್ಕೆ ಹಿತವಾದ ಮಾತು. ನಿಜವಾದ ಮಾತು ಕೂಡ. ಆದರೆ ಈ ಪರಿಸ್ಥಿತಿಯನ್ನು ಸುಧಾರಿಸುವವರು ಯಾರು? ಹಣ ಮತ್ತು ಜಾತಿ ಬಲ ಇದ್ದವರಿಗೆ ಮಾತ್ರ ಚುನಾವಣೆಯಲ್ಲಿ ಟಿಕೆಟ್ ನೀಡುವ ಪದ್ಧತಿ ಜಾರಿಗೆ ತಂದಿದ್ದು ಯಾರು? ಹಣ ಇದ್ದವರಿಗೇ ಪಕ್ಷದ ಅಧ್ಯಕ್ಷ ಸ್ಥಾನವನ್ನು ಕೊಡುವ ಸಂಪ್ರದಾಯವನ್ನು ಆರಂಭಿಸಿದ್ದು ಯಾರು?

‘ಮಾತಿನ ಮನೆ’ ಎಂದೇ ಪ್ರಸಿದ್ಧವಾಗಿದ್ದ ಮೇಲ್ಮನೆಗೆ ಮಾತನಾಡಲು ಬಾರದವರನ್ನು ನಾಮಕರಣ ಮಾಡುವ ವ್ಯವಸ್ಥೆ ತಂದಿದ್ದು ಯಾರು? ಉತ್ತಮ ಸಂಸದೀಯ ಪಟುಗಳು ನಿವೃತ್ತರಾದಾಗ ಅವರ ಸ್ಥಾನಕ್ಕೆ ಅವರಷ್ಟೇ ಮೌಲ್ಯವುಳ್ಳ ವ್ಯಕ್ತಿಯನ್ನು ಆಯ್ಕೆ ಮಾಡುವ ಬದಲು ಹಣದ ಚೀಲ ಹೊತ್ತು ತಂದ ಉದ್ಯಮಿಯನ್ನು ಪಟ್ಟಕ್ಕೇರಿಸುವ ಅನಿವಾರ್ಯ ಬಂದಿದ್ದು ಯಾಕೆ? ದನಿ ಇಲ್ಲದ ಜಾತಿಯ ವ್ಯಕ್ತಿಯೊಬ್ಬನ ವಿಧಾನಸಭೆ ಪ್ರವೇಶ ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಯಾರು? ಮತ್ತು ಇದಕ್ಕೆಲ್ಲಾ ಕಾರಣವಾದ ಅಂಶಗಳು ಯಾವುವು ಎನ್ನುವುದನ್ನು ಬಹಿರಂಗವಾಗಿ ಒಪ್ಪಿಕೊಳ್ಳಬೇಕು. ಯಾಕೆಂದರೆ ಇದಕ್ಕೆಲ್ಲಾ ಮೂಲ ಕಾರಣ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಕೆಲವರು ಅದನ್ನು ಬಹಿರಂಗವಾಗಿ ಹೇಳಲು ಹಿಂಜರಿಯುವುದಿಲ್ಲ. ಆದರೆ ಸರಿಪಡಿಸಿಕೊಳ್ಳಲು ಯತ್ನಿಸುವುದಿಲ್ಲ ಅಷ್ಟೆ.

ನಮ್ಮ ತನುವ, ನಮ್ಮ ಮನವ ಸಂತೈಸಿಕೊಳ್ಳಲು ಮುಂದಾಗುವವರೆಗೂ ಈ ಸ್ಥಿತಿ ಹೀಗೆಯೇ ಮುಂದುವರಿಯುತ್ತದೆ ಮತ್ತು ವ್ಯವಸ್ಥೆ ಇನ್ನಷ್ಟು ಕುಸಿಯುತ್ತದೆ. ಮಾತಿನ ಮಂಟಪವಾಗಿದ್ದ ವಿಧಾನ ಮಂಡಲ ಈಗ ಬಂಡವಾಳದ ಮಾಲ್‌ಗಳಾಗಿವೆ ಎಂದು ಹಿರಿಯ ರಾಜಕಾರಣಿ ಎಚ್.ಕೆ. ಪಾಟೀಲ್ ಹೇಳಿದ್ದಾರೆ. ಬಂಡವಾಳ ಹೂಡಿ ಲಾಭವನ್ನು ಕೊಳ್ಳೆಹೊಡೆಯುವ ಉದ್ಯಮವನ್ನಾಗಿ ರಾಜಕಾರಣವನ್ನು ಬದಲಾಯಿಸಿದ್ದು ಯಾರು? ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳೇ ಇದರ ಹೊಣೆಯನ್ನು ಹೊರಬೇಕಾಗುತ್ತದೆ. ಎಲ್ಲ ಕ್ಷೇತ್ರಗಳಲ್ಲಿಯೂ ಮೌಲ್ಯಗಳ ಕುಸಿತವಾಗಿದೆ. ರಾಜಕಾರಣ ಅಥವಾ ರಾಜಕಾರಣಿಗಳನ್ನು ಮಾತ್ರ ಶೂಲಕ್ಕೆ ಏರಿಸಲು ಸಾಧ್ಯವಿಲ್ಲ ಎಂಬ ವಾದ ಇದೆ. ಇದು ಒಪ್ಪಬಹುದಾದ ವಾದವಾದರೂ ರಾಜಕಾರಣ ಮತ್ತು ರಾಜಕಾರಣಿಗಳು ಬದಲಾದರೆ ವ್ಯವಸ್ಥೆ ಸಾಕಷ್ಟು ಸುಧಾರಿಸುತ್ತದೆ ಎನ್ನುವುದೂ ಸುಳ್ಳಲ್ಲ.

ಒಮ್ಮೆ ನೆನಪು ಮಾಡಿಕೊಳ್ಳಿ. ಕರ್ನಾಟಕದಲ್ಲಿ ಎಂತೆಂತಹ ಸಂಸದೀಯಪಟುಗಳಿದ್ದರು. ನಮ್ಮ ಪರಂಪರೆ ಎಷ್ಟು ಉಜ್ವಲವಾಗಿತ್ತು. ಶಾಂತವೇರಿ ಗೋಪಾಲಗೌಡ, ಕೆ.ಎಚ್.ಪಾಟೀಲ್, ಎಸ್.ಶಿವಪ್ಪ, ಡಿ.ದೇವರಾಜ ಅರಸು, ಬಸವಲಿಂಗಪ್ಪ, ಕೆ.ಎಚ್.ರಂಗನಾಥ್, ಅಜೀಜ್ ಸೇಠ್, ಎಚ್.ಎನ್.ನಂಜೇಗೌಡ, ಎ.ಕೆ.ಸುಬ್ಬಯ್ಯ, ಜಗಳೂರು ಮಹಮ್ಮದ್ ಇಮಾಂಸಾಬ್, ಎ.ಲಕ್ಷ್ಮೀಸಾಗರ ಇನ್ನೂ ಮುಂತಾದವರು ವಿಧಾನ ಮಂಡಲಕ್ಕೆ ಘನತೆ ತಂದಿದ್ದರು. ಅಧ್ಯಯನ ಮಾಡಿ ಬಂದು ಸದನದಲ್ಲಿ ಮಾತನಾಡಿ ಸರ್ಕಾರಗಳನ್ನು ಸರಿದಾರಿಗೆ ತಂದಿದ್ದರು. ತಪ್ಪು ಮಾಡಿದ ಸಚಿವರು ರಾಜೀನಾಮೆ ನೀಡುವಂತೆ ಮಾಡಿದ್ದರು. ಮುಖ್ಯಮಂತ್ರಿಯನ್ನೂ ಬಿಟ್ಟಿರಲಿಲ್ಲ. ತಪ್ಪು ಮಾಡಿದಾಗ ಮುಖದ ಮೇಲೆ ಹೇಳುವ ಎದೆಗಾರಿಕೆ ಇತ್ತು.

ಈಗಲೂ ಅಂತಹ ಕೆಲವರಾದರೂ ಇದ್ದಾರೆ ಎಂಬುದು ಸಮಾಧಾನದ ಅಂಶ. ಅಂತಹ ಘನತೆ ದಿನದಿಂದ ದಿನಕ್ಕೆ ಕುಸಿತ ಕಾಣಲು ಮುಖ್ಯ ಕಾರಣ, ಜನಪರ ಹೋರಾಟವೇ ರಾಜಕಾರಣದ ಬಂಡವಾಳ ಎನ್ನುವುದು ಬಂಡವಾಳವೇ ರಾಜಕಾರಣದ ಮೊದಲ ಮೆಟ್ಟಿಲು ಎಂದು ಬದಲಾಗಿದ್ದು. ರಾಸಾಯನಿಕ ಗೊಬ್ಬರವನ್ನು ಮಿತಿಮೀರಿ ಬಳಸಿದ್ದರಿಂದ ಕೃಷಿ ಭೂಮಿ ಬರಡಾದ ಹಾಗೆ ಮಿತಿಮೀರಿದ ಬಂಡವಾಳ ಹೂಡಿಕೆಯಿಂದ ರಾಜಕೀಯ ಭೂಮಿಯೂ ಈಗ ಬರಡಾಗುತ್ತಿದೆ. ಕೃಷಿಯಲ್ಲಿ ಸಾವಯವ ಕೃಷಿ, ನೈಸರ್ಗಿಕ ಕೃಷಿ ಮತ್ತೆ ಮುನ್ನೆಲೆಗೆ ಬಂದ ಹಾಗೆ ಇಲ್ಲಿಯೂ ಅಂತಹ ಒಂದಿಷ್ಟು ಪ್ರಯೋಗಗಳಾಗಬೇಕಿದೆ. ಇಲ್ಲವಾದರೆ ಬರಡು ಭೂಮಿಯಲ್ಲಿ ಬಂಪರ್ ಬೆಳೆ ಬೆಳೆಯಲಾಗದು.

ಮಾಸ್ಟರ್ ಹಿರಣ್ಣಯ್ಯ ಯಾವಾಗಲೂ ಹೇಳುತ್ತಿದ್ದರು. ‘ಜನರಲ್ಲಿ ಎರಡು ವಿಧ. ಸತ್ತೂ ಬದುಕಿದವರು ಕೆಲವರು. ಬದುಕಿದ್ದೂ ಸತ್ತವರು ಹಲವರು. ಕುವೆಂಪು, ಬೇಂದ್ರೆ, ಡಾ. ರಾಜಕುಮಾರ್ ಮುಂತಾದವರು ಸತ್ತ ಮೇಲೂ ನಮ್ಮೊಳಗೆ ಬದುಕಿದ್ದಾರೆ. ಬದುಕಿದ್ದೂ ಸತ್ತವರು ವಿಧಾನ ಸೌಧದಲ್ಲಿ ಇದ್ದಾರೆ. ಲಂಚಕ್ಕೆ ಕೈಒಡ್ಡುವಾಗ ಅವರ ಕೈ ಅಲ್ಲಾಡುತ್ತದೆ. ತಮ್ಮವರ ಪರವಾಗಿ ಓಡಾಡುವಾಗ ಅವರ ಕಾಲು ಚಲಿಸುತ್ತದೆ. ಆಗ ಅವರು ಬದುಕಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಆದರೆ ಅವರು ಯಾರ ಪರವಾಗಿ ಕೆಲಸ ಮಾಡಬೇಕಿತ್ತೋ ಅವರ ಪಾಲಿಗೆ ಸತ್ತಿದ್ದಾರೆ. ಅದಕ್ಕಾಗಿ ಅವರು ಬದುಕಿದ್ದೂ ಸತ್ತವರು’ ಎಂದು ಟೀಕಿಸುತ್ತಿದ್ದರು.

ಸತ್ತಮೇಲೂ ಬದುಕಬೇಕು ಎಂದರೆ, ಬದುಕಿದ್ದಾಗ ನಾಲ್ಕು ಜನಕ್ಕೆ ಒಳ್ಳೆಯದಾಗುವ ಕೆಲಸವನ್ನು ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT