ಗುರುವಾರ , ಮೇ 19, 2022
21 °C

Ask ಅಮೆರಿಕ- ಯು.ಎಸ್.ಕಾನ್ಸುಲೇಟ್: ಪ್ರಶ್ನೆ- ಉತ್ತರ

ಯು.ಎಸ್.ಕಾನ್ಸುಲೇಟ್, ಚೆನ್ನೈ Updated:

ಅಕ್ಷರ ಗಾತ್ರ : | |

Ask ಅಮೆರಿಕ- ಯು.ಎಸ್.ಕಾನ್ಸುಲೇಟ್: ಪ್ರಶ್ನೆ- ಉತ್ತರ

1.ಮಹೇಶ್ ಬಿ.ಕೊದ್ದಡ್ಡಿ. ಶಹಾಪೂರ

ಅಮೆರಿಕ ಸಂವಿಧಾನದ ಶಿಲ್ಪಿ ಯಾರು? ಅಮೆರಿಕ ಸಂವಿಧಾನದ ಮೂಲಗಳು ಯಾವುವು? ಅಮೆರಿಕ ಸಂವಿಧಾನದ ಕರಡು ತಯಾರಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದ ಜೇಮ್ಸ ಮ್ಯೋಡಿಸನ್ ಅವರನ್ನು ಅಮೆರಿಕ ಸಂವಿಧಾನದ ಶಿಲ್ಪಿ ಎಂದು ಕರೆಯಲಾಗುತ್ತದೆ. ಸಂವಿಧಾನವನ್ನು ರಚಿಸಿದ್ದು ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ಖಾತರಿ ಪಡಿಸುವ ಅಂಶಗಳನ್ನು ರಚಿಸಿ, ಅವುಗಳನ್ನು ಅಮೆರಿಕ ಸಂವಿಧಾನದ ಮೊದಲ 10 ತಿದ್ದುಪಡಿಗಳ ಮೂಲಕ ಸೇರಿಸಿದ್ದೂ ಅವರೇ.  ಅಧ್ಯಕ್ಷ ಥಾಮಸ್ ಜೆಫರ್ಸನ್ ಅವರ ಅವಧಿಯಲ್ಲಿ (1801-1809) ವಿದೇಶಾಂಗ ಸಚಿವರಾಗಿದ್ದ ಅವರು, ತರುವಾಯ ಅಮೆರಿಕ ರಾಷ್ಟ್ರದ ನಾಲ್ಕನೇ ಅಧ್ಯಕ್ಷರಾಗಿ ಆಯ್ಕೆಯಾದರು.

ಅಮೆರಿಕ ಸಂವಿಧಾನ ರಚನೆ ಹಾಗೂ ಅದನ್ನು ಅಂಗೀಕರಿಸುವುದಕ್ಕೂ ಮುನ್ನ ಅಮೆರಿಕ ಸಂಯುಕ್ತ ಸಂಸ್ಥಾನದ 13 ರಾಜ್ಯಗಳು, ಒಕ್ಕೂಟದ ಅನುಚ್ಛೇದಗಳು (Articles of Confederation) ಎಂಬ ದಾಖಲೆಯಡಿ ಒಂದಾಗಿ ಆಡಳಿತಕ್ಕೊಳಪಟ್ಟಿದ್ದವು.  ಇದು ಮೂಲತಃ ಅಮೆರಿಕ ಕ್ರಾಂತಿಕಾರಿ ಯುದ್ಧದ ಸಂದರ್ಭದಲ್ಲಿ ಒಂದಾಗಿ ಹೋರಾಡಲು ಹಲವು ಸಾರ್ವಭೌಮ ರಾಷ್ಟ್ರಗಳು ಮಾಡಿಕೊಂಡ ಮಿಲಿಟರಿ ಒಪ್ಪಂದ.  ಸಹಜವಾಗಿಯೇ, ಈ ಸಾರ್ವಭೌಮ ರಾಷ್ಟ್ರಗಳು ಒಂದು ಒಕ್ಕೂಟವಾಗಿ ಹೊರಹೊಮ್ಮಿದಾಗ, ಆಳ್ವಿಕೆ ನಡೆಸಲು ಈ ದಾಖಲೆ ಸೂಕ್ತವಾಗಿರಲಿಲ್ಲ.  ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಹಾಗೂ ಒಕ್ಕೂಟದ ಅನುಚ್ಛೇದಗಳ ಬದಲಿಗೆ ಸಂವಿಧಾನದ ಕರಡನ್ನು ರೂಪಿಸಲು 1787ರಲ್ಲಿ  ಜಾರ್ಜ್ ವಾಷಿಂಗ್ಟನ್, ಬೆಂಜಮಿನ್ ಫ್ರಾಂಕ್ಲಿನ್ ಅವರೂ ಸೇರಿದಂತೆ ಮ್ಯೋಡಿಸನ್ ರಾಷ್ಟ್ರೀಯ ಸಮಾವೇಶವೊಂದನ್ನು ಕರೆದರು.  ಸಂವಿಧಾನದ ಕರಡನ್ನು ಅಂಗೀಕರಿಸುವಲ್ಲಿ ರಾಷ್ಟ್ರಾಧ್ಯಕ್ಷರ ಮಹತ್ವದ ಪಾತ್ರವನ್ನು ಅರಿತಿದ್ದ ಮ್ಯೋಡಿಸನ್, ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಅವರನ್ನು ರಾಷ್ಟ್ರೀಯ ಸಮಾವೇಶದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮನವೊಲಿಸಿದರು.  ಸಂವಿಧಾನದ ಅಂತಿಮ ಪ್ರತಿ ರೂಪುಗೊಳ್ಳಲು ಅನೇಕರು ತಮ್ಮ ಒಳನೋಟಗಳನ್ನು, ಹೆಚ್ಚಿನ ಮಾಹಿತಿಯನ್ನು ನೀಡುವ ಮೂಲಕ ನೆರವಾಗಿದ್ದರೂ, ಮೊದಲ ಪ್ರತಿಯನ್ನು ಬರೆದಿದ್ದು ಮ್ಯೋಡಿಸನ್ ಎಂಬುದನ್ನು ಮರೆಯುವಂತಿಲ್ಲ.  ಅಂದಹಾಗೆ, ಅಮೆರಿಕ ಸಂವಿಧಾನ ಬರೆದಾಗ ಮ್ಯೋಡಿಸನ್ ಅವರಿಗೆ ಬರೀ 26 ವರ್ಷ!2.ತೊರಗಲ್ಲ ಉಮೇಶ, ರಾಮದುರ್ಗ

ಅಮೆರಿಕ ದೇಶದ ರಕ್ಷಣಾ ವ್ಯವಸ್ಥೆ ಹಾಗೂ ಪ್ರತಿಯೊಬ್ಬ ಪರರಾಷ್ಟ್ರದ ಪ್ರಜೆಯನ್ನು ಶೋಧಿಸುವುದು ಸಂತಸ ತಂದಿದೆ.  ಪಾಕ್ ಆಕ್ರಮಿತ ಕಾಶ್ಮೀರದ ಕುರಿತು ನಿಮ್ಮ ದೇಶದ ವಿದೇಶಾಂಗ ನೀತಿ ಏನು ಹೇಳುತ್ತದೆ?ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧ ಸುಧಾರಣೆ ಹಾಗೂ ಆ ನಿಟ್ಟಿನಲ್ಲಿ ಮಾತುಕತೆ ನಡೆಸುವುದನ್ನು ಅಮೆರಿಕ ಸ್ವಾಗತಿಸುತ್ತದೆ.  ಇದು ಕಾಶ್ಮೀರ ವಿವಾದಕ್ಕೂ ಅನ್ವಯಿಸುತ್ತದೆ.  ಆದರೆ, ಸಂವಾದದ ಗತಿ, ಹರವು, ವ್ಯಾಪ್ತಿ ಹಾಗೂ ಪಾತ್ರದ ಕುರಿತು ನಿರ್ಧರಿಸಬೇಕಾದವರು ಭಾರತ ಹಾಗೂ ಪಾಕಿಸ್ತಾನಗಳ ನಾಯಕರು.3.ಮಧುರ, ಬೆಂಗಳೂರು

ನಾನು 10 ವರ್ಷಗಳ ಶಾಲಾ ಅಧ್ಯಯನದ ಬಳಿಕ 3 ವರ್ಷಗಳ ಡಿಪ್ಲೊಮಾ ಮಾಡಿದ್ದೇನೆ.  ಆ ಬಳಿಕ ದೂರಶಿಕ್ಷಣದಲ್ಲಿ  ಬಿಕಾಂ ಪದವಿ (2 ವರ್ಷ) ಪಡೆದಿರುವೆ.  ಅಮೆರಿಕದಲ್ಲಿ ನನ್ನ ಅಧ್ಯಯನ ಮುಂದುವರಿಸಲು ಇರುವ ಅವಕಾಶಗಳನ್ನು ಅರಿಯಲು ಇಚ್ಛಿಸುವೆ.  ನಾನು ಅಮೆರಿಕದಲ್ಲಿ ಅಲ್ಪಾವಧಿ ಕೋರ್ಸುಗಳಲ್ಲಿ (6 ರಿಂದ 8 ತಿಂಗಳು) ಅಧ್ಯಯನ ಮಾಡಲು ಸಾಧ್ಯವೇ? ನನ್ನಂಥ ಶೈಕ್ಷಣಿಕ ಹಿನ್ನೆಲೆಯುಳ್ಳವರಿಗೆ ಅರೆಕಾಲಿಕ ಉದ್ಯೋಗ ಗಿಟ್ಟಿಸಲು ಸೂಕ್ತವಾದ ಕೋರ್ಸು ಯಾವುದು?ಈಗ ಅಮೆರಿಕದಲ್ಲಿರುವ ಬಹುತೇಕ ಭಾರತೀಯ ವಿದ್ಯಾರ್ಥಿಗಳು ಸ್ನಾತಕ ಅಥವಾ ಸ್ನಾತಕೋತ್ತರ ಪದವಿಗಳಂಥ ಪೂರ್ಣ ಪದವಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.  ಅಮೆರಿಕದ ಮಾನ್ಯತೆ ಪಡೆದ ಸಂಸ್ಥೆಗಳು ನಡೆಸುವ ಭಾರೀ ಹರವಿನ ಶೈಕ್ಷಣಿಕ ಕಾರ್ಯಕ್ರಮಗಳು ಹಾಗೂ ವಿಶೇಷ ಕೋರ್ಸುಗಳ ಕುರಿತ ಮಾಹಿತಿಯನ್ನು  www.petersons.com ಇಂಥ ವೆಬ್ ಸೈಟ್‌ಗಳಿಂದ ಪಡೆಯಬಹುದು. ಅಮೆರಿಕ ವ್ಯವಸ್ಥೆಯ ಅತಿ ಮಹತ್ವದ ಸಂಗತಿ ಎಂದರೆ, ನಿಮ್ಮ ವೈಯಕ್ತಿಕ ಆಸಕ್ತಿ ಹಾಗೂ ನಿಮ್ಮ ಶೈಕ್ಷಣಿಕ ಗುರಿಯನ್ನು ಆಧರಿಸಿ, ನಿಮಗೆ ಸೂಕ್ತ ಎನಿಸಿದ ಅಧ್ಯಯನದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ.  ನಿಮ್ಮ ಪ್ರವಾಸದ ಮುಖ್ಯ ಉದ್ದೇಶ ವ್ಯಾಸಂಗವಾಗಿರಬೇಕು; ಉದ್ಯೋಗ ಅಲ್ಲ.  ಒಮ್ಮೆ  10-15 ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡ ಮೇಲೆ, ನೀವು ಆ ಕಾಲೇಜುಗಳನ್ನು ಸಂಪರ್ಕಿಸಿ, ನಿಮ್ಮ ವಿವರಗಳನ್ನು ನೀಡಿ.  ಕಾಲೇಜಿನ ಪ್ರವೇಶಕ್ಕೆ ನಿಮ್ಮ ಡಿಪ್ಲೊಮಾ ಪದವಿಯನ್ನು ಪರಿಗಣಿಸಲಾಗುತ್ತದೆಯೇ ಎಂಬುದನ್ನು ತಿಳಿದುಕೊಳ್ಳಿ.ಅಮೆರಿಕದಲ್ಲಿ ಉನ್ನತ ಶಿಕ್ಷಣದ ಕುರಿತ ಅಧಿಕೃತ ಮಾಹಿತಿಗಾಗಿ  ಅಮೆರಿಕ-ಭಾರತ ಶಿಕ್ಷಣ ಪ್ರತಿಷ್ಠಾನದಲ್ಲಿನ  (USIEF) EducationUSA ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ  www.usief.org.in ಹಾಗೂ  www.educationusa.state.gov  ವೆಬ್ ಸೈಟ್‌ಗಳಿಗೆ ಭೇಟಿ ನೀಡಿ.  ಇಲ್ಲವೇ, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 044-28574131/4423 ಮೂಲಕ ಅಥವಾ ಈ ಮೇಲ್ usiefchennai@usief.org.in ಮುಖಾಂತರವೂ ಸಂಪರ್ಕಿಸಬಹುದು.4.ಪ್ರಶಾಂತ್ ಮಾಲಿಪಾಟೀಲ್, 3ನೇ ಬಿಎಸ್ಸಿ(ಅಗ್ರಿ), ಧಾರವಾಡ

ಭಾರತದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ವ್ಯಾಸಂಗ ಮಾಡುವ ಅಭ್ಯರ್ಥಿಗಳು ಅಮೆರಿಕ ಸಾಹಿತ್ಯವನ್ನೂ ಓದುತ್ತಾರೆ.  ಇದೇ ತೆರನಾಗಿ ಅಮೆರಿಕ ವಿದ್ಯಾರ್ಥಿಗಳೂ ಭಾರತೀಯ ಸಾಹಿತ್ಯವನ್ನು ಅಧ್ಯಯನ ಮಾಡುತ್ತಾರೆಯೇ? ಹೌದು ಎಂದಾದಲ್ಲಿ, ಅಂಥವರ ಅಭಿಪ್ರಾಯವೇನು.ಭಾರತವೂ ಸೇರಿದಂತೆ, ಹಲವಾರು ರಾಷ್ಟ್ರಗಳ ಸಾಹಿತ್ಯವನ್ನು ಅನೇಕ ಅಮೆರಿಕದ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ.  ಜಾಗತಿಕ ಸಾಹಿತ್ಯ ಸನ್ನಿವೇಶದಲ್ಲಿ ಭಾರತೀಯ ಲೇಖಕರು ಹೆಚ್ಚಿನ ಮಹತ್ವ ಗಳಿಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ ವಿದ್ಯಾರ್ಥಿಗಳೂ ಭಾರತೀಯ ಲೇಖಕರ ಕೃತಿಗಳನ್ನು ಓದುತ್ತಿದ್ದಾರೆ.  ಅರುಂಧತಿ ರಾಯ್, ಅಮಿತಾವ್ ಘೋಷ್, ಅನಿತಾ ಮತ್ತು ಕಿರಣ್ ದೇಸಾಯ್ ಸೇರಿದಂತೆ ಅನೇಕ ಲೇಖಕರ ಕೃತಿಗಳು ಬಹುತೇಕ ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳಲ್ಲಿ ಸೇರಿವೆ.  ಅಲ್ಲದೇ, ಭಾರತೀಯ ವಲಸಿಗರು ಹಾಗೂ ಅವರ ಮಕ್ಕಳ ಬದುಕಿನ ಕುರಿತು ಕತೆಗಳನ್ನು ಹೆಣೆದ ಭಾರತೀಯ ಸಂಜಾತೆ  ಝುಂಪಾ ಲಾಹಿರಿ ಅವರ ಕೃತಿಗೆ ಅಮೆರಿಕದ ಖ್ಯಾತ ಸಾಹಿತ್ಯ ಪ್ರಶಸ್ತಿಗಳು ಲಭಿಸಿತ್ತು.  ಈ ಕೃತಿಯನ್ನು ಅಮೆರಿಕ ವಿಶ್ವವಿದ್ಯಾಲಯಗಳಲ್ಲಿ ವಿಶೇಷವಾಗಿ ಅಧ್ಯಯನ ಮಾಡಲಾಗುತ್ತದೆ.ಈ ಕೃತಿಗಳನ್ನು ಓದಿದವರ ಅಭಿಪ್ರಾಯವೇನು ಎಂಬುದನ್ನು ಹೇಳುವುದು ತುಂಬಾ ಕಷ್ಟ.  ಹೆಚ್ಚುತ್ತಿರುವ ಭಾರತೀಯ ಲೇಖಕರ ಕೃತಿಗಳ ಮಾರಾಟ ಹಾಗೂ ಹೆಚ್ಚುತ್ತಿರುವ ಭಾರತೀಯ ಸಾಹಿತ್ಯದ ಪ್ರಾಧ್ಯಾಪಕರ ಸಂಖ್ಯೆಗಳು ಅಮೆರಿಕದ ವಿದ್ಯಾರ್ಥಿಗಳು ಭಾರತೀಯ ಸಾಹಿತ್ಯದತ್ತ ವಿಶೇಷ ಒಲವು ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ.

ಪ್ರಿಯ ಓದುಗರೆ,
ಶುಭಾಶಯಗಳು!  ನಮ್ಮ ನೂತನ ರಾಯಭಾರಿ ನ್ಯಾನ್ಸಿ ಪೊವೆಲ್ ಅವರು ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ಕಳೆದ ತಿಂಗಳು ಭೇಟಿ ನೀಡಿದ್ದರು.  ಚೆನ್ನೈನ ಪ್ರಮುಖ ವಾಣಿಜ್ಯೋದ್ಯಮಿಗಳು, ಮಹಿಳಾ ಮುಂದಾಳುಗಳನ್ನು ಭೇಟಿ ಮಾಡಿದ್ದರು. ಅಲ್ಲದೇ, ಅಮೆರಿಕ ಸರ್ಕಾರದ ಹಲವು ಸಂಸ್ಥೆಗಳ ಸಹಭಾಗಿತ್ವದಲ್ಲಿ ಎಚ್‌ಐವಿ ಹಾಗೂ ಏಡ್ಸ್ ತಡೆ, ನಿಯಂತ್ರಣ, ಚಿಕಿತ್ಸೆ ಹಾಗೂ ತಾರತಮ್ಯ ವಿರೋಧಿಸುವ ದಿಸೆೆಯಲ್ಲಿ ದುಡಿಯುತ್ತಿರುವ ತಮಿಳುನಾಡಿನ ಆರೋಗ್ಯ ಕ್ಷೇತ್ರದ ವೃತ್ತಿಪರರನ್ನು ಭೇಟಿ ಮಾಡಿದ್ದರು.  ಉತ್ಸಾಹಿ ಛಾಯಾಗ್ರಾಹಕಿಯೂ ಆಗಿರುವ ರಾಯಭಾರಿ ಪೊವೆಲ್ ಅವರು ಐತಿಹಾಸಿಕ ಸ್ಥಳವಾದ ಪಲ್ಲವರ ಕೇಂದ್ರ ಮಹಾಬಲಿಪುರಕ್ಕೂ ಭೇಟಿ ನೀಡಲು ಸಮಯ ಮಾಡಿಕೊಂಡರು.  ಅವರು ತೆಗೆದ ಕೆಲ ಛಾಯಾಚಿತ್ರಗಳನ್ನು ರಾಯಭಾರ ಕಚೇರಿಯ ವೆಬ್ ಪುಟದಲ್ಲಿ http://chennai.usconsulate.gov ಕಾಣಬಹುದು.ರಾಯಭಾರಿ ಪೊವೆಲ್ ಅವರು ಕರ್ನಾಟಕಕ್ಕೆ ಭೇಟಿ ನೀಡಲು ಕಾತರಿಸುತ್ತಿರುವುದನ್ನು ನಾನು ಬಲ್ಲೆ.ಜೂನ್ ತಿಂಗಳು ಪರಿಸರ ಮಾಸವನ್ನಾಗಿ ಆಚರಿಸಲಾಗುತ್ತದೆ.  ಪರಿಸರ ಕುರಿತು ಜಾಗೃತಿ, ಪರಿಸರ ಸಂರಕ್ಷಣಾ ವಿಧಾನಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ದೂತಾವಾಸ ಆಯೋಜಿಸುತ್ತಿದೆ. ದೂತವಾಸವು  ಭಾರತೀಯ ಉದ್ದಿಮೆಗಳ ಒಕ್ಕೂಟದ (Confederation of Indian Industries -CII) ಯುವ ಭಾರತೀಯ ವಿಭಾಗದ ಸಹಭಾಗಿತ್ವದಲ್ಲಿ ವಿಶೇಷ ಕಾರ್ಯಕ್ರಮವನ್ನು ಜೂನ್ 25ರಂದು ಚೆನ್ನೈನಲ್ಲಿ ಆಯೋಜಿಸುತ್ತಿದೆ.  ಪರಿಸರ ವಿಚಾರಗಳಿಗೆ ಸಂಬಂಧಿಸಿದ ವಿಡಿಯೊಗಳು ಹಾಗೂ ದಕ್ಷಿಣ ಭಾರತದ ವಿದ್ಯಾರ್ಥಿಗಳು ರಚಿಸಿದ ಮಾದರಿಗಳನ್ನು ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುವುದು. ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವೂ ಇದೆ. ದೂತಾವಾಸದಲ್ಲಿ ನಮ್ಮದೇ ಆದ ``ಹಸಿರು ತಂಡ~~ವನ್ನು ರೂಪಿಸಿದ್ದೇವೆ.ದೂತಾವಾಸದ ಕಾರ್ಯಾಲಯವೂ ಸೇರಿದಂತೆ ನಮ್ಮ ನಿವಾಸಗಳಲ್ಲಿ ಪರಿಸರ ಸ್ನೇಹಿ ಪರಿಪಾಠಗಳನ್ನು ಅಳವಡಿಸಿಕೊಂಡಿದ್ದೇವೆ.  ಸ್ಥಳೀಯ ಕಂಪನಿ www.kuppathotti.com  ಸಹಯೋಗದೊಂದಿಗೆ,  ಕಾಗದ, ಪ್ಲಾಸ್ಟಿಕ್, ಲೋಹ, ಬ್ಯಾಟರಿಗಳೂ ಸೇರಿದಂತೆ ಇತರ ವಸ್ತುಗಳನ್ನು ಮರುಬಳಕೆ ಮಾಡುವ ಪ್ರಯತ್ನಕ್ಕೆ ನಾವು ಚಾಲನೆ ನೀಡಿದ್ದೇವೆ.  ವಿಶ್ವದ ಪ್ರಜೆಗಳಾಗಿ, ನಾವೆಲ್ಲರೂ ನಮ್ಮ ಸುತ್ತಲಿನ ಪರಿಸರದ ಕುರಿತು ಕಾಳಜಿ ವಹಿಸುವುದು ಆದ್ಯ ಅಗತ್ಯ.  ಜೂನ್ ತಿಂಗಳಲ್ಲಾದರೂ ಪ್ರತಿಯೊಬ್ಬರೂ ``ಹಸಿರು ಆಲೋಚನೆ~~ಗಳನ್ನು ಮಾಡುವಂತಾಗಲಿ ಎಂದು ಆಶಿಸುತ್ತೇನೆ.

ತಮ್ಮ ವಿಶ್ವಾಸಿ,ಜೆನಿಫೆರ್ ಮ್ಯಾಕ್‌ಇನ್ಟೈರ್

ಕಾನ್ಸುಲ್ ಜನರಲ್, ಅಮೆರಿಕ ದೂತಾವಾಸ, ಚೆನ್ನೈ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.