ಶುಕ್ರವಾರ, ಮೇ 29, 2020
27 °C

ಜನಸಂಪರ್ಕವೇ ಪರಿಹಾರ ಸೂತ್ರ

ಕೆ. ರತ್ನಪ್ರಭಾ Updated:

ಅಕ್ಷರ ಗಾತ್ರ : | |

Deccan Herald

‘ಮಹಿಳೆಯರಿಂದೇನೂ ಆಗದು’ ಎಂಬ ಮನಸ್ಥಿತಿಯ ಜನರು ಇರುವಲ್ಲಿಯೇ ಮಹಿಳೆಗೆ ಸಂಪೂರ್ಣ ಸಹಕಾರ ನೀಡುವವರು ಸಹ ಇರುತ್ತಾರೆ. ಇದು ವಿರೋಧಾಭಾಸ ಎನಿಸಬಹುದು. ಆದರೆ ಇಂದಿರಾಗಾಂಧಿ ಹತ್ಯೆಯ ಸಂದರ್ಭ ಹಾಗೂ ರಾಯಚೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯ ಸಂದರ್ಭಗಳು ಈ ಮಾತಿಗೆ ಸಾಕ್ಷಿಯಾಗಿವೆ.

1984ರ ಅಕ್ಟೋಬರ್‌ 31ರ ಮಧ್ಯಾಹ್ನ ಇಂದಿರಾಗಾಂಧಿ ಹತ್ಯೆಯ ಸುದ್ದಿ ಬಿತ್ತರವಾಯಿತು. ಬೀದರ್‌ನಲ್ಲಿ ಕ್ಷೋಭೆಯ ವಾತಾವರಣ ಸೃಷ್ಟಿಯಾಗುವ ಎಲ್ಲ ಸಾಧ್ಯತೆಗಳೂ ಇದ್ದವು. ಬೀದರ್‌ನಲ್ಲಿರುವ ಗುರುದ್ವಾರಾ, ಗುರುನಾನಕ್‌ ದೇವ್‌ ಝರಾ ಎಂದೇ ಪ್ರಸಿದ್ಧ. ಜೊತೆಗೆ ವಾಯುನೆಲೆಯೂ ಇರುವುದರಿಂದ ಉತ್ತರ ಭಾರತೀಯರ ಸಂಖ್ಯೆ ಹೆಚ್ಚಿತ್ತು. ಅಂದು ಬೀದರ್‌ನಲ್ಲಿದ್ದೆ. ಜಿಲ್ಲಾಧಿಕಾರಿ, ಎಸ್‌ಪಿ ಎಲ್ಲರೂ ಸಭೆ ಸೇರಿದೆವು. ಒಬ್ಬೊಬ್ಬರು ಒಂದೊಂದು ಪ್ರದೇಶವನ್ನು ಗುರುತಿಸಿಕೊಂಡೆವು. ಆಗ ಈಗಿನಷ್ಟು ಸಂವಹನ ಸಾಧನಗಳಿರಲಿಲ್ಲ. ವೈರ್‌ಲೆಸ್‌ ಬಿಟ್ಟರೆ ಲ್ಯಾಂಡ್‌ಲೈನ್‌ ಮಾತ್ರ ಇರುತ್ತಿತ್ತು. ಸೂಕ್ಷ್ಮ ಸಮಯದಲ್ಲಿ ಕೆಲವೊಮ್ಮೆ ಅವೂ ಡೆಡ್‌ ಆಗಿರುತ್ತಿದ್ದವು. ಇದರಿಂದಲೂ ಕೆಲವೊಮ್ಮೆ ಸಹಾಯವಾಗುತ್ತಿತ್ತು. ವದಂತಿಗಳು ಹಬ್ಬುತ್ತಿರಲಿಲ್ಲ. ಇಂದಿರಾ ಹತ್ಯೆಯಾದ ದಿನ ಹೆಚ್ಚಿನ ಗಲಭೆಗಳಿಲ್ಲದೇ ಸರಿದು ಹೋಯಿತು. ಆದರೆ ಸಂಜೆ, ಬೀದರ್‌ನಲ್ಲಿರುವ ಗುರುನಾನಕ್‌ ದೇವ್‌ ಪಾಲಿಟೆಕ್ನಿಕ್‌ನಲ್ಲಿ ಸಿಹಿ ವಿತರಿಸಲಾಗಿದೆ. ವಿಜಯೋತ್ಸವ ಆಚರಿಸಲಾಗುತ್ತಿದೆ ಎಂಬ ಸುದ್ದಿ ಬಂದಿತು.

ಅಂದು ಮಧ್ಯಾಹ್ನವೇ ಗುರುದ್ವಾರ ಕಮಿಟಿಯ ಅಧ್ಯಕ್ಷರಾಗಿದ್ದ ಜೋಗಾಸಿಂಗ್‌ ಅವರ ಜೊತೆಗೆ ಜಿಲ್ಲಾಡಳಿತ ಮಾತುಕತೆ ನಡೆಸಿತ್ತು. ಶಾಂತಿ ಸುವ್ಯವಸ್ಥೆ ಕಾಪಾಡಲು ಸಂಪೂರ್ಣ ಸಹಕಾರ ನೀಡುವುದಾಗಿ ಅವರು ವಾಗ್ದಾನವಿತ್ತಿದ್ದರು. ಸಂಜೆ ವೇಳೆಯಲ್ಲಿ ಈ ಸುದ್ದಿ ಕೇಳಿದಾಗ ಗಾಬರಿಯಾಗಿತ್ತು. ಈ ಸುದ್ದಿಯೇನಾದರೂ ಆಚೆ ಬಂದರೆ ಕೆಲವು ಪ್ರದೇಶಗಳಲ್ಲಿ ಗಲಭೆಯಾಗುವ ಸಾಧ್ಯತೆಗಳಿದ್ದವು. ಬೀದರ್‌ ಪುಟ್ಟ ಜಿಲ್ಲೆ. ಅಷ್ಟೇ ಪುಟ್ಟ ನಗರ. ಪ್ರತಿಯೊಂದಕ್ಕೂ ಬಲುಬೇಗನೆ ಸ್ಪಂದಿಸುತ್ತಿತ್ತು. ಗಲಭೆಯಾದರೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಾಶವಾಗುವ ಅಪಾಯವಿತ್ತು. ಪ್ರಾಣಹಾನಿಯಾದರೆ...? ಇಂಥವೇ ಪ್ರಶ್ನೆಗಳು ನಮ್ಮ ಮುಂದಿದ್ದವು. ಅಂದು ಸಂಜೆ ಎಲ್ಲಾ ಸಮುದಾಯಗಳ ಮುಖಂಡರನ್ನು ಕರೆದು ಚರ್ಚಿಸಿದೆವು. ಏನೇ ಹೆಚ್ಚುಕಮ್ಮಿಯಾದರೂ ನಮ್ಮ ವರ್ಗಾವಣೆ ಖಚಿತ ಎಂಬಂತಿತ್ತು.

ಕೂಡಲೇ ಎಸ್‌ಪಿ ಜೊತೆಗೆ ಪಾಲಿಟೆಕ್ನಿಕ್‌ ವಸತಿಗೃಹಕ್ಕೆ ಭೇಟಿ ಕೊಟ್ಟೆವು. ಅಲ್ಲಿ ಎಲ್ಲವೂ ಶಾಂತವಾಗಿತ್ತು. ಸಿಹಿ ಹಂಚಿದ, ವಿಜಯೋತ್ಸವ ಆಚರಿಸಿದ ಕುರುಹೂ ಇರಲಿಲ್ಲ. ಎಲ್ಲವೂ ಇದ್ದಕ್ಕಿದ್ದಂತೆ ಸ್ತಬ್ಧವಾಗಿದೆ ಎನಿಸುತ್ತಿತ್ತು. ಸದ್ಯ ಅಲ್ಲಿ ಯಾವ ಕ್ಷೋಭೆಯೂ ಉಂಟಾಗಲಿಲ್ಲ. ರಾತ್ರಿ ಅಲ್ಲಿ ಹೋಗುವಾಗ ನಮ್ಮ ಸಹೋದ್ಯೋಗಿಗಳಷ್ಟೇ ಅಲ್ಲ, ಜನರೂ ತುಂಬ ಅಭಿಮಾನದಿಂದ, ಗೌರವದಿಂದ ನಡೆದುಕೊಳ್ಳುತ್ತಿದ್ದರು.

ಹೀಗೆ ನನ್ನ ಕೆಲಸಕಾರ್ಯಗಳನ್ನು ಸನಿಹದಿಂದ ಗಮನಿಸುತ್ತಿದ್ದ ಹೆಣ್ಣುಮಗಳೊಬ್ಬಳು ತನ್ನ ಮಗಳೂ ದೊಡ್ಡ ಅಧಿಕಾರಿಯಾಗಬೇಕು ಎಂದು ಹಂಬಲಿಸಿ, ಮಗಳನ್ನು ಕಾನ್ವೆಂಟ್‌ ಶಾಲೆಗೆ ಸೇರಿಸಿದ್ದಳು. ಅಲ್ಲಿಯವರೆಗೂ, ‘ಹೆಣ್ಣುಮಕ್ಕಳಿಗೇಕೆ ಹೆಚ್ಚು ಖರ್ಚು ಮಾಡಬೇಕು? ಓದಲು– ಬರೆಯಲು ಬಂದರೆ ಸಾಕು’ ಎಂಬ ಭಾವನೆಯೇ ಅಲ್ಲಿ ಬಲವಾಗಿತ್ತು. ಜನರ ಮನಸ್ಥಿತಿ ಬದಲಾಗಲು ಒಂದು ಸಕಾರಾತ್ಮಕ ಪ್ರೇರಣೆ ಸಾಕು ಎಂಬುದು ಇದರಿಂದ ಸ್ಪಷ್ಟವಾಯಿತು.

ಇನ್ನೊಂದು ಉದಾಹರಣೆ ರಾಯಚೂರಿನ ಗಣೇಶ ಹಬ್ಬದಾಚರಣೆಯ ಸಂದರ್ಭದ್ದು. ಈ ಘಟನೆ ಹೇಳುವ ಮುನ್ನ, ಹೈದರಾಬಾದ್‌ ಕರ್ನಾಟಕದ ಕೋಮು ಸೌಹಾರ್ದದ ಬಗ್ಗೆ ಸಣ್ಣ ಟಿಪ್ಪಣಿಯ ಅಗತ್ಯವಿದೆ. ಗಣೇಶ ಚತುರ್ಥಿ ಅಲ್ಲಿ ಎಲ್ಲರ ಹಬ್ಬ. ಕರಾರುವಕ್ಕಾಗಿ ಚೌತಿ ಬಳಿಕದ ಐದನೆಯ ದಿನ ಜನರು ಸಾಮೂಹಿಕವಾಗಿ ಗಣೇಶ ವಿಸರ್ಜನೆಗೆ ಮುಂದಾಗುತ್ತಾರೆ. ಬೀದರ್‌ನ ಮಹಾಗಣೇಶ ಮಂಡಳಿಯಂತೂ ಪ್ರತಿ ವರ್ಷ ನಗರದ ಚೌಬಾರಾ ಬಳಿಯಿಂದ ಮೆರವಣಿಗೆ ಆರಂಭಿಸುತ್ತದೆ. ಚೌಬಾರಾ ಮೇಲೆ ಎಲ್ಲ ಧಾರ್ಮಿಕ ಮುಖಂಡರೂ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ, ಮೆರವಣಿಗೆಯಲ್ಲಿ ಬರುವ ಪ್ರತಿ ಗಣೇಶ ಮೂರ್ತಿಗೂ ಪೂಜೆ ಸಲ್ಲಿಸುತ್ತಾರೆ. ಅಲ್ಲಿಂದಲೇ ಮೆರವಣಿಗೆ ಆರಂಭವಾಗಿ ನಗರದ ಮುಖ್ಯ ಬೀದಿಗಳ ಮೂಲಕ ಜನವಾಡಾ ಬಳಿಯ ಕೆರೆಗೆ ಸಾಗುತ್ತವೆ. ಐದನೆಯ ದಿನದ ಸಂಜೆಯಿಂದ ಆರಂಭವಾಗುವ ಈ ಮೆರವಣಿಗೆ ಪೂಜಾ ಹಂತಕ್ಕೆ ಬರುವುದರಲ್ಲಿ ರಾತ್ರಿ 11 ಆಗಿರುತ್ತದೆ. ಅಲ್ಲಿಂದ ಮುಂದೆ ನಗರ ಸಂಚಾರ ಮುಗಿಸಿ, ಕೊನೆಯ ಗಣೇಶ ಸಾಗುವುದರಲ್ಲಿ ಬೆಳಗಾಗಿರುತ್ತದೆ.

ರಾಯಚೂರಿನಲ್ಲಿಯೂ ಹೀಗೆಯೆ. ಆ ವರ್ಷ ಮೊದಲ ಗಣಪತಿ ಮೆರವಣಿಗೆಯು ಕಿರಿದಾದ ರಸ್ತೆಯನ್ನು ದಾಟಿಹೋಯಿತು. ಎರಡನೆಯ ಗಣೇಶ ದಾಟುವಾಗ ಸಣ್ಣದೊಂದು ಗಲಭೆ. ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ. ಪೊಲೀಸರು ಕ್ಷಮೆ ಕೇಳಬೇಕೆಂದು ಜನರು ಹಟ ಹಿಡಿದರು. ಎಸ್‌ಪಿ ಹಾಗೂ ಗಣೇಶ ಮಂಡಳಿಯ ಅಧ್ಯಕ್ಷರಿಬ್ಬರೂ ನಡುರಾತ್ರಿಯಲ್ಲಿ ನಮ್ಮ ಮನೆಗೆ ಬಂದರು. ನೀವು ಬರಲೇಬೇಕು ಎಂದು ಹೇಳಿದರು.

ಆ ಜಾಗಕ್ಕೆ ಹೋದೆವು. ಮಾತುಕತೆ– ಸಂಧಾನಕ್ಕೆ ಮುಂದಾದೆವು. ಇಡೀ ಜನಜಂಗುಳಿಯದ್ದು ಒಂದೇ ಹಟ. ಸಬ್‌ ಇನ್ಸ್‌ಪೆಕ್ಟರ್‌ನನ್ನು ವಜಾ ಮಾಡಿ, ಇಲ್ಲವೇ ವರ್ಗಾವಣೆ ಮಾಡಿ ಎಂದು. ಅದು ನಮ್ಮ ಅಧಿಕಾರ ವ್ಯಾಪ್ತಿಗೆ ಬರದು ಎಂಬ ಮಾತನ್ನು ಅವರು ಕೇಳಲು ಸಿದ್ಧರಿರಲಿಲ್ಲ. ಈ ಜನರನ್ನು ಹತ್ತಿಕ್ಕಲು ಲಾಠಿ ಚಾರ್ಜ್‌ ಒಂದೇ ಮಾರ್ಗ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದರು. ಹಾಗೇನಾದರೂ ಮಾಡಿದರೆ ಜಂಗುಳಿ ಕೆರಳುವ ಸಾಧ್ಯತೆ ಇತ್ತು. ‘ಲಾಠಿ ಚಾರ್ಜ್‌ ಮಾಡಬೇಡಿ’ ಎಂದು ಪೊಲೀಸರಿಗೆ ಸೂಚಿಸಿದೆ. ಆದರೆ ಜನಜಂಗುಳಿಯನ್ನು ನಿಯಂತ್ರಿಸುವುದು ಕಷ್ಟವಾಗಿತ್ತು. ನಸುಕಿನ ನಾಲ್ಕು ಗಂಟೆಯಾದರೂ ಸಂಧಾನ ಮುಗಿದಿರಲಿಲ್ಲ.

ನಮ್ಮ ಸಹನೆಯ ಕಟ್ಟೆಯೂ ಒಡೆಯತೊಡಗಿತ್ತು. ಈ ಗಲಾಟೆಯಾಗುತ್ತಿದ್ದ ಸ್ಥಳದಲ್ಲಿಯೇ ಅಲ್ಲಿಯ ಪ್ರಮುಖ ಮಸೀದಿಯಿತ್ತು. ಮುಸ್ಲಿಮರು ಅಲ್ಲಿಗೆ ಮುಂಜಾನೆಯ ನಮಾಜಿಗೆ ಬಂದರೆ, ಅವರಿಗೇನಾದರೂ ತೊಂದರೆಯಾದರೆ ಶಾಂತಿ ಕದಡುವ ಅಪಾಯವಿತ್ತು. ಜನರಂತೂ ಏನನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಮುಸ್ಲಿಂ ಮುಖಂಡರನ್ನು ಕರೆದೆವು. ಅವರಿಗೆ ಪರಿಸ್ಥಿತಿಯ ಬಗೆಗೆ ವಿವರಿಸಿದೆವು. ‘ಇಂದು ಎಲ್ಲರೂ ಮನೆಯಲ್ಲಿಯೇ ನಮಾಜು ಓದಬೇಕು’ ಎಂದು ಅವರು ಮಸೀದಿಯಿಂದ ತಮ್ಮ ಸಮುದಾಯದವರಿಗೆ ಮನವಿ ಮಾಡಿಕೊಂಡರು. ಆದ್ದರಿಂದ ಮುಸ್ಲಿಮರು ಅಂದು ಮಸೀದಿಯತ್ತ ಸುಳಿಯಲಿಲ್ಲ.

ಅಷ್ಟು ಹೊತ್ತಿಗೆ ಈ ಜಂಗುಳಿಗೂ ಸಾಕಾಗಿತ್ತು. ಅವರು ಇನ್‌ಸ್ಪೆಕ್ಟರ್‌ ಅವರನ್ನು ವಜಾ ಮಾಡಬೇಕೆಂಬ ಒತ್ತಾಯವನ್ನು ಕೈಬಿಟ್ಟು, ವರ್ಗಾವಣೆ ಮಾಡಿಸಲು ಪಟ್ಟು ಹಿಡಿದಿದ್ದರು. ಅಲ್ಲಿರುವ ಜನರೊಂದಿಗೆ ನಾನು ಮಾತಾಡಲೇ ಬೇಕಿತ್ತು. ‘ನೀವು ಜನಜಂಗುಳಿ ಮಧ್ಯೆ ಹೋಗುವುದು ಸುರಕ್ಷಿತವಲ್ಲ’ ಎಂದು ಪೊಲೀಸರು ಎಚ್ಚರಿಸಿದರು. ಆದರೆ ಗಣೇಶ ಮಂಡಳಿಯವರು, ‘ಮೇಡಂ ಮಾತಾಡಿದರೆ ಎಲ್ಲವೂ ಸರಿಹೋಗುತ್ತದೆ’ ಎಂದರು. ಜೊತೆಗೆ ನನ್ನ ಸುರಕ್ಷತೆಯ ಭರವಸೆಯನ್ನೂ ನೀಡಿದರು. ಇಡೀ ಜಂಗುಳಿಯಲ್ಲಿ ಮಾನವ ಸರಪಳಿ ಮಾಡಿಕೊಂಡು ನನ್ನನ್ನು ಒಂದು ಎತ್ತರದ ಜಾಗದಲ್ಲಿ ನಿಲ್ಲಿಸಿದರು. ಮೈಕ್‌ ಹಿಡಿದರು. ಶಾಂತಿ ಕಾಪಾಡಿಕೊಳ್ಳುವಂತೆ ನಗರದ ಜನರಲ್ಲಿ ಮನವಿ ಮಾಡಿದೆ. ವರ್ಗಾವಣೆಗೆ ಶಿಫಾರಸು ಮಾಡುವುದು ನಮ್ಮ ಅಧಿಕಾರ ವ್ಯಾಪ್ತಿಯಲ್ಲಿದೆ. ಅದನ್ನು ಮಾಡುವುದಾಗಿ ಭರವಸೆ ನೀಡಿದೆ. ಆನಂತರ ಜನರು ಶಾಂತರಾದರು. ಬೆಳಗಿನ 7 ಗಂಟೆಗೆ ಮೆರವಣಿಗೆ ಪುನರಾರಂಭವಾಯಿತು.

ಜನರೊಂದಿಗೆ ಬೆರೆತರೆ ಸಮಸ್ಯೆಗೆ ಪರಿಹಾರ ಸುಲಭ ಎಂಬುದು ಮತ್ತೊಮ್ಮೆ ಮನವರಿಕೆಯಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.